ಎಮ್ಮ ಮನೆಯಂಗಳದಿ ಬೆಳದೊಂದು ಹೂವನ್ನು..

ಎಲ್ಲರೂ ಬೆಂಗಳೂರಿನ ಮಳೆ ಗುಡುಗು ಸಿಡಿಲಿನ ಬಗ್ಗೆಯೇ ಗಮನ ನೆಟ್ಟಿದ್ದರು. ಎಲ್ಲರ ಮಾತು ರಸ್ತೆಯಲ್ಲಿ ಬಿದ್ದ ಗುಂಡಿಗಳ ಬಗ್ಗೆ, ಬಿಬಿಎಂಪಿ ಬಗ್ಗೆ, ಸರ್ಕಾರದ ಬಗ್ಗೆ. ಆದರೆ ಅದೇ ವೇಳೆ ಇಡೀ ಜಗತ್ತು ಎರಡೇ ಎರಡು ಪದಗಳ ಸಿಡಿಲಿನ ಹೊಡೆತಕ್ಕೆ ಸಿಕ್ಕಿಹಾಕಿಕೊಂಡಿತ್ತು. ಹೌದು, ಎರಡೇ ಎರಡು ಪದಗಳು. ಅದು ಜಗತ್ತಿನಾದ್ಯಂತ ಸುದ್ದಿ ಮಾಡುತ್ತಿತ್ತು, ನಡುಕ ಹುಟ್ಟಿಸುತ್ತಿತ್ತು, ನಿಟ್ಟುಸಿರು ಹುಟ್ಟುಹಾಕುತ್ತಿತ್ತು, ಕಣ್ಣೀರು ಚಿಮ್ಮಿಸುತ್ತಿತ್ತು, ಆಕ್ರೋಶ ಹುಟ್ಟಿಸುತ್ತಿತ್ತು, ಎಷ್ಟೋ ಜನರ ಎದೆಯಲ್ಲಿ ಅವಲಕ್ಕಿ ಕುಟ್ಟುವಂತೆ ಮಾಡುತ್ತಿತ್ತು, ಅದೇ- me too.

‘ಮಿ ಟೂ’ ಎನ್ನುವ ಎರಡು ಪದಗಳು  ಮೊದಲು ಎರಡು ಪದಗಳೇ ಆಗಿದ್ದವು. ಅದಕ್ಕೂ ಮೊದಲು ಐದು ಅಕ್ಷರಗಳಷ್ಟೇ ಆಗಿದ್ದವು. ಆದರೆ ನೋಡನೋಡುತ್ತಿದ್ದಂತೆಯೇ ಅವು ಎದೆಯ ಭಿಕ್ಕಳಿಕೆಯಾಯಿತು. ಅಷ್ಟೇ ಎಂದುಕೊಂಡಿದ್ದರೇನೋ ಹಲವರು. ಆದರೆ ಅವು ಬೆಂಕಿಯುಂಡೆಯಾಗಿ ಹೋದವು. ಬೆಂಕಿಯ ಮೇಲೆ ಬಿದ್ದ ನೀರು ಅದನ್ನು ತಣಿಸಿ ಹಾಕಿಬಿಡುತ್ತದೆ ಆದರೆ ಇಲ್ಲಿ ಮಾತ್ರ ಪರಿಣಾಮ ವಿರುದ್ಧವಾಗಿತ್ತು. ಈ ಎರಡು ಪದಗಳ ಬೆಂಕಿಯ ಮೇಲೆ ಬಿದ್ದ ಕಣ್ಣೀರು ಆ ಬೆಂಕಿ ಇನ್ನಷ್ಟು ಉರಿಯುವಂತೆ ನೋಡಿಕೊಂಡಿತು. ನೋಡ ನೋಡುತ್ತಿದ್ದಂತೆಯೇ ಇದು ಕಾಳ್ಗಿಚ್ಚಾಯಿತು. ಅಷ್ಟೇ ಅಲ್ಲ ಒಂದು ರಾಜ್ಯದ ಗಡಿ ದಾಟಿ, ದೇಶದ ಗಡಿ ದಾಟಿ ಜಗತ್ತಿನ ಎಲ್ಲೆಡೆ ಸಿಡಿಲಾಗಿ ಅಪ್ಪಳಿಸಿತು.

ಹೌದು, ಅಲಿಸ್ಸಾ ಮಿಲಾನೊ ತನ್ನ ಮೊಬೈಲ್ ಕೈಗೆತ್ತಿಕೊಂಡವಳೇ ನಿಮಗೂ ಇದೇ ಅನುಭವವಾಗಿದ್ದರೆ ನೀವೂ ‘ಮಿ ಟೂ’ ಎಂದು ಬರೆಯಿರಿ ಎಂದು ಯಾವಾಗ ಕರೆ ಕೊಟ್ಟರೋ ಅಲ್ಲಿಂದ ಶುರುವಾಗಿ ಹೋಯಿತು ಒಂದು ಆಂದೋಲನ. ಜಗತ್ತನ್ನು ಅಲ್ಲಾಡಿಸಿದ ಆಂದೋಲನ. ಅದಕ್ಕೆ ಕಾರಣವಿತ್ತು. ಜಗತ್ತಿಗೆ ನಿಜಕ್ಕೂ ಒಂದರ್ಥದಲ್ಲಿ ಹೊಸತು ಅನೇಕನ್ನು ಕೊಟ್ಟಿದ್ದ, ಸಾಹಸಶೀಲನಾಗಿ ಬೆಳೆದು ಬಂದಿದ್ದ, ಅನೇಕ ಒಳ್ಳೆಯ ಸಿನೆಮಾಗಳನ್ನು ಕೊಟ್ಟಿದ್ದ, ಅನೇಕ ಸಾಮಾಜಿಕ ಕಾಳಜಿಯ ಜೊತೆಗಿದ್ದ  ‘ಶೇಕ್ಸ್ ಪಿಯರ್ ಇನ್ ಲವ್’ ಸಿನಿಮಾಗಾಗಿ ಅಕಾಡೆಮಿ ಪ್ರಶಸ್ತಿ ಗೆದ್ದಿದ್ದ ಹಾರ್ವೆ ವೀನ್ಸ್ಟೀನ್ ದಶಕಗಳ ಕಾಲ ತನ್ನ ಸುತ್ತ ಮುತ್ತ ಇದ್ದ ಅನೇಕ ಮಹಿಳೆಯರನ್ನು ಲೈಂಗಿಕವಾಗಿ ಶೋಷಿಸಿದ್ದ.

ಇದನ್ನು ಓದಿದ ಚಿತ್ರನಟಿ, ಸಂಗೀತಗಾರ್ತಿ, ಸಿನೆಮಾ ನಿರ್ಮಾಪಕಿ ಅಲಿಸ್ಸಾ ಮಿಲಾನೊಗೆ ಇನ್ನು ಸುಮ್ಮನಿರಲು ಸಾಧ್ಯವಾಗಲಿಲ್ಲ. ಆಕೆ ಮೊಬೈಲ್ ನಲ್ಲೇ ‘ಹ್ಯಾಷ್ ಟ್ಯಾಗ್ ಚಳವಳಿ’ಗೆ ಮುಂದಾದಳು. ತನ್ನ ಗೆಳತಿ ಕೊಟ್ಟ ಸಲಹೆಯನ್ನು ನಾನು ಕೈಗೆತ್ತುಕೊಂಡೆ ಎಂದು ಘೋಷಿಸಿದ ಆಕೆ ನಿಮಗೂ ಈ ರೀತಿಯ ಕೆಟ್ಟ ಅನುಭವವಾಗಿದ್ದರೆ ‘ಮಿ ಟೂ’ ಎಂದು ಬರೆಯಿರಿ. ಎಲ್ಲರಿಗೂ ಗೊತ್ತಾಗಿ ಹೋಗಲಿ ಜಗತ್ತು, ನಮ್ಮ ಸುತ್ತಣ ಸಮಾಜ ಎಷ್ಟು ನೀಚವಾಗಿದೆ ಎಂದು ಟ್ವೀಟ್ ಮಾಡಿದರು.

ನೋಡನೋಡುತ್ತಿದ್ದಂತೆಯೇ ೫ ಲಕ್ಷ ಮಂದಿ ‘ಮಿ ಟೂ’ ಎಂದು ಟ್ವೀಟ್ ಮಾಡಿದ್ದಾರೆ. ೬ ಲಕ್ಷ ಮಂದಿ ‘ಮಿ ಟೂ’ ಎಂದು ಫೇಸ್ ಬುಕ್ ನಲ್ಲಿ ಘೋಷಿಸಿಕೊಂಡಿದ್ದಾರೆ. ಜಗತ್ತು ನಿಬ್ಬೆರಗಾಗಿ ಕುಳಿತಿದೆ. ಏನಿದೇನಿದು ಎಂದು ಕಂಗಾಲಾಗಿದೆ. ‘ಒಲೆ ಹತ್ತಿ ಉರಿದೊಡೆ ನಿಲಬಹುದಲ್ಲದೆ,  ಧರೆ ಹತ್ತಿ ಉರಿದೊಡೆ ನಿಲಲಾಗದು’ ಎನ್ನುವ ಮಾತು ಮತ್ತೆ ಮತ್ತೆ ಸಾಭೀತಾಗುತ್ತಿದೆ. ಈ ಜಗತ್ತಿನ ಯಾವ ದೇಶವೂ ಹೆಣ್ಣು ಮಕ್ಕಳನ್ನು ತೋಳದಂತೆ ಆಕ್ರಮಿಸದೇ ಬಿಟ್ಟಿಲ್ಲ. ತನ್ನ ಕಣ್ಣುಗಳ ಕಾಮದಿಂದ, ಕೆನ್ನಾಲಿಗೆಯಿಂದ, ಉಗುರುಗಳಿಂದ ಪರಚುತ್ತಲೇ ಇದೆ. ಯಾವಾಗ ‘ಮಿ ಟೂ’ ಹ್ಯಾಷ್ ಟ್ಯಾಗ್ ಆಂದೋಲನ ಆರಂಭವಾಯಿತೋ ಅಲ್ಲಿಂದಲೇ ಒಂದು ಗಾಢ ಮೌನದ ಪರದೆ ಸರಿಸಿದಂತಾಯಿತು. ಒಳಗೆ ಒತ್ತಿಟ್ಟ ವೇದನೆಗೆ ಪದಗಳು ಸಿಕ್ಕವು. ಸಾಮಾಜಿಕ ಜಾಲತಾಣದಲ್ಲಿ  ‘ಮಿ ಟೂ’ ಎಂದವರೇ ಇಷ್ಟು ಜನರಾದರೆ ಹಾಗೆ ಅನ್ನಲಾಗದವರೂ ಲಕ್ಷಾಂತರ ಇದ್ದರು. ಅದಲ್ಲದೆ ಸಾಮಾಜಿಕ ಜಾಲತಾಣವಾಗಲೀ, ಅಂತರ್ಜಾಲ ಲೋಕವಾಗಲೀ ಗೊತ್ತಿಲ್ಲದವರದೆಷ್ಟೋ..

ಒಂದೊಂದೇ ಕಥೆಗಳು ಮೊದಲು ಪಿಸುಗುಟ್ಟುವಿಕೆಯಾಗಿ ನಂತರ ಮಾತಾಗಿ ನಂತರ ಆಕ್ರೋಶವಾಗಿ ಹೊರ ಧುಮ್ಮಿಕ್ಕುತ್ತಲೇ ಇದೆ. ಹಾಗೆ ಒಂದು ಅಂದಾಜಿನ ಪ್ರಕಾರ ಇಂತಹ ರಾಕ್ಷಸೀ ಕ್ರೌರ್ಯದ ಕಥೆಗಳನ್ನು ಬಿಚ್ಚಿಟ್ಟವರ ಸಂಖ್ಯೆಯೇ ೬೦ ಲಕ್ಷ ಜನ. ಒಬ್ಬಾಕೆ ಬರೆದಳು- ‘ಹೌದು ಬೆಳಗಿನ ಜಾವ ೮ ಗಂಟೆಗೆ, ನಡು ಮಧ್ಯಾಹ್ನ ೧೨ ಗಂಟೆಗೆ, ೨ ಗಂಟೆಗೆ, ಸಂಜೆ ೪ ಗಂಟೆಗೆ..’ ಜಗತ್ತು ಓಹ್ ! ಎಂದು ಈ ನಿಟ್ಟುಸಿರು ಕೇಳಿಸಿಕೊಂಡಿತು. ಆ ವೇಳೆಗೆ ಇನ್ನೊಬ್ಬಾಕೆ ಬರೆದಳು- ‘ಹೌದು ಮಿ ಟೂ.. ನಾನೂ ಸಹಾ, ನನ್ನ ತಾಯಿ ಸಹಾ, ನನ್ನ ಸೋದರಿ ಸಹಾ, ನನ್ನ ಅಜ್ಜಿ ಸಹಾ…ನನ್ನ ಆಪ್ತ ಗೆಳತಿಯರೂ ಸಹಾ..’ ಜಗತ್ತು ಕಣ್ಣೀರು ಒರೆಸಿಕೊಂಡಿತು. ಎಷ್ಟೋ ಜನ ಟ್ವೀಟ್ ಮಾಡಿದರು- ‘ಈ ಹ್ಯಾಷ್ ಟ್ಯಾಗ್ ಆಂದೋಲನದ ಒಂದು ಒಳ್ಳೆಯ ಅಂಶವೆಂದರೆ ಈ ಜಗತ್ತಿನಲ್ಲಿ ಈ ರೀತಿಯ ಕ್ರೌರ್ಯಕೆ ಒಳಗಾದವರು ನಾವೊಬ್ಬರೇ ಅಲ್ಲ ಎನ್ನುವುದು ಗೊತ್ತಾದದ್ದು, ಅದೇ ವೇಳೆ ಗೊತ್ತಾದ ಕೆಡುಕಿನ ಅಂಶವೆಂದರೆ ನಾವೊಬ್ಬರೇ ಅಲ್ಲ, ಎಷ್ಟೊಂದು ಜನ ಈ ಕ್ರೌರ್ಯಕ್ಕೆ ಒಳಗಾಗಿದ್ದೇವೆ ಎನ್ನುವುದು’.

ನನ್ನ ತಾಯಿಯ ಸ್ನೇಹಿತನಿಂದ, ನನ್ನ ಮನೆಗೆಲಸದವನಿಂದ, ನನ್ನ ಚಿಕ್ಕಪ್ಪನಿಂದ, ನನ್ನ ಬಾಸ್ ನಿಂದ, ಲಿಫ್ಟ್ ನಲ್ಲಿ ಕಾಣದ ಕೈನಿಂದ, ಬಸ್ ನಲ್ಲಿ ಇದ್ದ ಆ ಸೂಟುಧಾರಿಗಳಿಂದ, ಶಾಲೆಯ ಕೋಣೆಯ ಮೂಲೆಯಲ್ಲಿ ಆ ದುಷ್ಟ ಮಾಸ್ಟರ್ ನಿಂದ, ನೆರೆಮನೆಯಾತನಿಂದ, ನನ್ನ ಅಣ್ಣನಿಂದ ಹೀಗೆ ಒಬ್ಬೊಬ್ಬರೂ ಒಂದೊಂದೇ ಮುಖಗಳ ಮೇಲಿದ್ದ ಮುಖವಾಡಗಳು ಉರುಳಿಸಲು ಶುರು ಮಾಡಿದರು.

ಹೀಗೆ ಆಗುವ ಮೊದಲು ಆ ಇನ್ನೊಬ್ಬಳಿದ್ದಳು -ಆನ್ ಡೊನಹ್ಯೂ ಆಕೆ ಯಾವಾಗ ಈ ಸಿನೆಮಾ ನಿರ್ದೇಶಕ ಲೈಂಗಿಕವಾಗಿ ಶೋಷಿಸುತ್ತಿದ್ದಾನೆ ಎಂದು ಗೊತ್ತಾಯಿತೋ.. ‘ಯಾವತ್ತೂ ನಾನು ಮಾಡುವ ಹಾಗೆ ನನ್ನ ಮೊದಲ ಅಸ್ತ್ರವನ್ನು ಕೈಗೆತ್ತಿಕೊಂಡೆ ಅದೇ ಟ್ವಿಟರ್’ ಎಂದಳು. ಎಲ್ಲರ ಬದುಕಿನಲ್ಲೂ ಇಂತಹ ಒಬ್ಬ ಕಾಮುಕ ಇಣುಕಿಹಾಕಿರುತ್ತಾನೆ. ಎಲ್ಲರ ಬದುಕಿನಲ್ಲೂ ಒಬ್ಬ ಇಂತಹ ಹಾರ್ವೆ ವೀನ್ಸ್ಟನ್ ಇಣುಕಿಹಾಕಿರುತ್ತಾನೆ. ಹಾಗಾಗಿಯೇ ‘ನನ್ನ ಹಾರ್ವೆ ವೀನ್ಸ್ಟನ್’ ಎನ್ನುವ ಹ್ಯಾಷ್ ಟ್ಯಾಗ್ ನಲ್ಲಿ ಇಂತಹ ದುಷ್ಟರ ಮುಖವಾಡ ಬಯಲಿಗೆಳೆಯಲು ಆರಂಭಿಸಿದಳು. ಆದರೆ ಟ್ವಿಟರ್ ಆಕೆಯ ಖಾತೆಯನ್ನೇ ಬಂದ್ ಮಾಡಿತು ಆಗ ಉಕ್ಕಿತು ನೋಡಿ ಮಹಿಳೆಯರ ಆಕ್ರೋಶ. ಹ್ಯಾಷ್ ಟ್ಯಾಗ್ ಚಳವಳಿ ಎನ್ನುವ ಕಲ್ಪನೆ ಆರಂಭವಾಗಿದ್ದೇ ಎಲ್ಲೆಲ್ಲಿಯೋ ಒಂದೇ ವಿಷಯದ ಬಗ್ಗೆ ಆಲೋಚಿಸುತ್ತಿರುವವರನ್ನು ಬೆಸುಗೆ ಹಾಕಲು. ಅಂತಹದ್ದರಲ್ಲಿ ಟ್ವಿಟರ್ ಇಂತಹ ಬೆಸುಗೆಯನ್ನೇ ಮುರಿಯಲು ಹೊರಟರೆ ಸುಮ್ಮನಿದ್ದಾರೆಯೇ.. ಜಗತ್ತಿನ ಎಲ್ಲಾ ಮಹಿಳೆಯರೂ ಟ್ವಿಟರ್ ನಿಂದ ಹೊರಗೆ ಹೋಗುತ್ತೇವೆ ಎಂದು ಎಚ್ಚರಿಕೆ ಕೊಟ್ಟರು. ಟ್ವಿಟರ್ ಸಹಾ ಪಾಠ ಕಲಿಯಿತು.

ಇದೆಲ್ಲ ಆಗುವಾಗಲೇ ನನಗೆ ಅಮೀರ್ ಖಾನ್ ನೆನಪಾದದ್ದು. ‘ಸತ್ಯಮೇವ ಜಯತೆ’ ನಡೆಸಿಕೊಡುತ್ತಿದ್ದ ಆತ ಕಣ್ಣು ತುಂಬಿ ಹೇಳಿದ್ದ- ‘ನಮ್ಮ ಮನೆಯೊಳಗೇ, ನಮ್ಮ ಬಗಲಲ್ಲಿ, ನಮ್ಮ ನೆರೆಯಲ್ಲಿ, ನಮ್ಮ ಬಂಧುವಿನಲ್ಲಿಯೇ ಒಬ್ಬ ಅತ್ಯಾಚಾರಿಯಿದ್ದಾನೆ. ಎಚ್ಚರ’. ಅದು ಹೌದು ಎನ್ನುವಂತೆ ಈಗ ಜಗತ್ತು ತಮ್ಮ ಕಥೆಗಳನ್ನು ಹೊರಗಿಕ್ಕುತ್ತಾ ಸಾಗಿತ್ತು.  ಅದು ಮುಂಬೈನ ಚಲನಚಿತ್ರೋತ್ಸವ. ಮಧುಶ್ರೀ ದತ್ತಾ ಅವರ `Memories of fear’  ಎನ್ನುವ ಸಾಕ್ಷ್ಯ ಚಿತ್ರ ನನ್ನ ಕಣ್ಣ ಮುಂದೆ ಬಿಚ್ಚಿಕೊಳ್ಳುತ್ತಾ ಹೋಯಿತು. ನಾನು ಉಸಿರುಗಟ್ಟಿದವನಂತಾಗಿದ್ದೆ. ಲೈಂಗಿಕ ದೌರ್ಜನ್ಯ ಎನ್ನುವುದು ಬದುಕಿನುದ್ದಕ್ಕೂ ಭಯವಾಗಿ ಬೆನ್ನು ಬೀಳುವ ಬಗೆಗಿನ ಚಿತ್ರ ಅದು. ಸದಾ ಕಣ್ಣೆದುರು ಆ ಭಯದ ಚಿತ್ರಗಳನ್ನೇ ಇಟ್ಟುಕೊಂಡ ಹೆಣ್ಣು ಮಕ್ಕಳು ತಮ್ಮ ದೇಹವನ್ನೇ ಕೊರಡಾಗಿಸಿಕೊಂಡು ಉಳಿದುಬಿಡುವ ಕಥಾನಕ. ಅತ್ಯಾಚಾರಿ ಹೊರಗಡೆ ಎಲ್ಲೋ ಇರಬೇಕಿಲ್ಲ ನಮ್ಮ ಸುತ್ತ ಮುತ್ತವೆ..ನಮ್ಮೊಳಗೇ.. ಎನ್ನುವ ಪಾಠವನ್ನು ಅದು ಕಲಿಸುತ್ತಿತ್ತು. ಹೌದು ಆ ಸಾಕ್ಷ್ಯ ಚಿತ್ರ ಸಹಾ ‘ಮಿ ಟೂ’ ಎನ್ನುವುದಕ್ಕೆ ಸಾಕ್ಷ್ಯ ನುಡಿಯುತ್ತಿತ್ತು.

ಯಾಕೋ ಇಂತಹದ್ದು ಗೊತ್ತಾದಾಗಲೆಲ್ಲಾ ಜಾನಪದ ಜಂಗಮ ಎಸ್ ಕೆ ಕರೀಂ ಖಾನ್ ನೆನಪಾಗಿ ಬಿಡುತ್ತಾರೆ. ಕಾಡುತ್ತಾರೆ. ಅವರು ಆಗೀಗ ತಮ್ಮೊಳಗಿದ್ದ ನೋವನ್ನೇ ಹೊರಚೆಲ್ಲಿಬಿಡುವಂತೆ ಎತ್ತರದ ಕಂಠದಲ್ಲಿ ಜಾನಪದ ತ್ರಿಪದಿಗಳಿಗೆ ದನಿಯಾಗಿಬಿಡುತ್ತಿದ್ದರು. ಒಂದು ಸಂಜೆ ಹೇಗೆ ಹೆಣ್ಣೊಬ್ಬಳು ತನ್ನ ದೇಹ ಸೌಂದರ್ಯವನ್ನೇ ದ್ವೇಷಿಸುವ ಹಂತಕ್ಕೆ ಬಂದುಬಿಡುತ್ತಾಳೆ ಎನ್ನುವ ನೋವಿನ ರಾಗಕ್ಕೆ ದನಿಕೊಟ್ಟರು. ಎಮ್ಮೇಯ ಮೇಯ್ಸ್ಕೊಂಡು ಸುಮ್ಮಾನೆ ನಾನಿದ್ದೆ/ ಹಾಳಾದೊವೆರಡು ಮೊಲೆ ಬಂದು/ ನಮ್ಮಪ್ಪ ಕಂಡೋರ್ಗೆ ನನ್ನ ಕೊಡುತಾನೆ. ಆ ಹಾಡಿನಲ್ಲಿದ್ದ ಹೆಣ್ಣು ಮಕ್ಕಳೂ ಸಹಾ ‘ಮಿ ಟೂ’ ಎಂದು ನುಡಿದಿದ್ದರು. ನಿರ್ಭಯಾ ಮೇಲೆ ಘೋರ ಅತ್ಯಾಚಾರ ನಡೆದಾಗ ಇದು ಮತ್ತೆ ಮತ್ತೆ ನನ್ನೊಳಗೆ ತೇಲಾಡಿತು. ಇಂತಹದ್ದೇ ಆಕ್ರೋಶ ಚಿಮ್ಮಿಯೇ ನಾವು ‘ಹೇಳತೇವ ಕೇಳ’ ಎನ್ನುವ ನೋವಿನ ಕಥನವನ್ನು ಸಂಕಲಿಸಲು ಕೈ ಹಾಕಿದ್ದು

ಮಗಳು ಶಾಲೆಗೆ ಹೋಗುವಾಗ ಅಮ್ಮ ಬುತ್ತಿ ಕಟ್ಟಿ ಕೊಡುವಷ್ಟೇ ಮುತುವರ್ಜಿಯಿಂದ ಬ್ಯಾಗ್ ನಲ್ಲಿ ಒಂದು ಚಾಕುವನ್ನೂ ಇಡುತ್ತಿದ್ದಳು, ‘ಇದನ್ನು ಜೋಪಾನವಾಗಿಟ್ಟುಕೊ, ಬ್ಯಾಗಿಗೆ ಕೈ ಹಾಕಿದ ತಕ್ಷಣ ಇದು ಸಿಗುವಂತಿರಬೇಕು’ ಎಂದು ಅಮ್ಮ ಪಿಸುಮಾತಿನಲ್ಲಿ ಹೇಳುತ್ತಿದ್ದಳು ಪ್ರತೀ ದಿನ. ಅವರು ಆ ನಾಲ್ಕನೆಯ ತರಗತಿಯ ಹುಡುಗಿ ‘ಮಿ ಟೂ’ ಎಂದು ಬರೆದುಕೊಳ್ಳುವುದನ್ನು ತಪ್ಪಿಸುತ್ತಿದ್ದರು. ಭಾರತ ಪ್ರತೀ ಬಾರಿ ಕ್ರಿಕೆಟ್ ನಲ್ಲಿ ಗೆದ್ದಾಗಲೂ ಇನ್ನಿಲ್ಲದ ಭಯದಿಂದ ಕಂಪಿಸಿಬಿಡುವ ಹೆಣ್ಣೊಬ್ಬಳಿದ್ದಾಳೆ. ಭಾರತ ಅತ್ಯಂತ ಸಂಭ್ರಮದಿಂದ ವಿಶ್ವ ಕಪ್ ಎತ್ತಿ ಹಿಡಿದ ದಿನವೇ ಅಪ್ಪನ ಸ್ನೇಹಿತ ಅವಳ ದೇಹವನ್ನು ಹೊಸಕಿ ಹಾಕಿದ್ದ. ಕಾರ್ ಕಲಿಯಲು ಹೋದಾಗ ಬದುಕಿನ ಸ್ಟಿಯರಿಂಗ್ ಆನ್ ತಿರುವಿಬಿಟ್ಟವರಿದ್ದರು. ಪಾರ್ಕ್ ನಲ್ಲಿ ಎದುರೆದುರಿಗೇ ಬಂದು ಬಲಾತ್ಕಾರ ಮಾಡಿ ಮುತ್ತಿಟ್ಟವರಿದ್ದರು. ಅವರೆಲ್ಲರೂ ‘ಮಿ ಟೂ’ ಬರೆದವರೇ.. ನಮ್ಮ ಸ್ಕೂಲ್ ಬ್ಯಾಗ್ ನಲ್ಲಿ ಈಗಲೂ ಪಿನ್ನು, ಬ್ಲೇಡು, ಹೇರ್ ಪಿನ್ನೂ, ಶಾರ್ಪ್ ಮಾಡಿದ ಪೆನ್ಸಿಲ್ ಇರುತ್ತೆ ಎಂದು ತೋರಿಸಿದ ಹುಡುಗಿಗೆ ಇನ್ನೂ ೯ ವರ್ಷ.

ಹೀಗೆಲ್ಲ ಆಗುವಾಗಲೇ ದೆಹಲಿಯಲ್ಲಿ ಆ ಪ್ರತಿಭಟನಾಕಾರರು ಹಿಡಿದಿದ್ದ ಆ ಫಲಕ ನೆನಪಿಗೆ ಬರುತ್ತಿದೆ.  `Dont teach me what to wear, Teach ur son not to rape’ ಈ ರಾತ್ರಿ, ಈ ಹಗಲು, ಪ್ರತಿ ರಾತ್ರಿ, ಪ್ರತಿ ಹಗಲೂ Don’t Rape  ಎನ್ನುವುದನ್ನು ಕಲಿಸುತ್ತಲೇ ಇರೋಣ..

ಈ ಬರಹಕ್ಕೆ ಉಪಸಂಹಾರವಿಲ್ಲ ಎಂಬ ನಿಟ್ಟುಸಿರಿನೊಂದಿಗೆ ಕಿವಿಮಾತು ಹೇಳಿದವರೊಬ್ಬರಿದ್ದರು. ಏಕೆಂದರೆ ಈ ಘಟನೆಗಳು ನಿತ್ಯ ನಡೆಯುತ್ತಲೇ ಇರುತ್ತವೆ ಇವರೂ ಸಹಾ ‘ಮಿ ಟೂ’ಎಂಬ ಸಂದೇಶದ ಜೊತೆಗಿದ್ದವರೇ..

ಆ ಅಮೆರಿಕಾ, ಇಂಗ್ಲೆಂಡ್ ದಾಟಿ ದೇಶದೊಳಗೆ ನಡೆಯುತ್ತಿರುವ ಹ್ಯಾಷ್ ಟ್ಯಾಗ್ ಚಳವಳಿ ನೋಡುತ್ತಾ ಹೋದೆ. ಅದು ದೇಶದಿಂದ ರಾಜ್ಯಕ್ಕೂ, ರಾಜ್ಯದಿಂದ ನಗರಕ್ಕೂ, ನಗರದಿಂದ ನಮ್ಮದೇ ಮನೆಯೊಳಕ್ಕೂ ಬಂದಿದೆ. ನಮ್ಮ ಜೊತೆಗಿದ್ದವರು, ನಮ್ಮೊಡನೆಯೇ ಇದ್ದವರೂ, ನಮ್ಮ ಮನೆಯಂಗಳದಲ್ಲಿದ್ದವರು.. ಎಮ್ಮ ಮನೆಯಂಗಳದಿ ಬೆಳದೊಂದು ಹೂವನ್ನು.. ಹಾಡಿಗೆ ಯಾಕೆ ಈಗ ಇಷ್ಟು ಕ್ರೂರ ಅರ್ಥ??

5 Responses

 1. Satyanarayana says:

  Hridaysparshi, kanteresuva lekhana

 2. Ashwini anish says:

  Very well conveyed sir..

 3. ಪ್ರಶಾಂತ್ says:

  ನಮ್ಮೊಳಗಿನ ನಮ್ಮನ್ನ ಕಲಕಿಸಿದ ಬರಹ ಸರ್.

 4. Kumaraswamy. D says:

  ಸೂಪರ್ ಸರ್ ಮಿಟೂ

 5. Radha says:

  Mony only half i could understand but liked it.(ver hig level kanada)

Leave a Reply

%d bloggers like this: