ತೂಗು ಹಾಕಿದ ದುಃಖ

ರೇಣುಕಾ ರಮಾನಂದ್ 

ತಮ್ಮ ‘ವೈಶಾಖದ ಕೊನೆಯ ರಾತ್ರಿ’ ಕಥಾಸಂಕಲನದ ಮೂಲಕ ಉತ್ತರಕನ್ನಡ ಜಿಲ್ಲೆಯ ಕಥಾಪ್ರಿಯರಿಗೆ ಹತ್ತಿರವಾದ ನರೇಶ ನಾಯ್ಕರು ಕವಿತೆಗಳನ್ನೂ ಸೊಗಸಾಗಿ ಬರೆಯಬಲ್ಲರೆಂಬುದು ಆಗೊಮ್ಮೆ ಈಗೊಮ್ಮೆ ಅವರ ಕವಿತೆಗಳನ್ನು ಪತ್ರಿಕೆಗಳಲ್ಲಿ ಓದಿ ನನಗೆ ಗೊತ್ತಾಗಿತ್ತು. ಅವೆಲ್ಲವನ್ನೂ ಕಲೆಹಾಕಿ  ಇದೀಗ ‘ತೂಗು ಹಾಕಿದ ದುಃಖ’ ಎಂಬ ಹೆಸರಿನಲ್ಲಿ ಕವನ ಸಂಕಲನ ಪ್ರಕಟಿಸಿ ವೈವಿಧ್ಯಮಯ ಕವನಗಳ ಮೂಲಕ ಅವರು ನಮ್ಮೆದುರಿಗಿದ್ದಾರೆ.

ಸ್ವಭಾವತ ತೀರ ಶಾಂತವಾದ, ಜಗತ್ತನ್ನು ಮಗುವಿನ ತೆರದಲ್ಲಿ ಕುತೂಹಲದಿಂದ ನೋಡುವ ಸರಳ ಸಜ್ಜನ ನರೇಶರು ‘ಬದುಕಿನ ಸೂಕ್ಷ್ಮ ಸಂವೇದನೆಗಳ ಅರಿವನ್ನು ನಮಗೆ ತರುವ ಸರಳ ಸಹಜ ಮಾತು ಕವಿತೆ’ ಎನ್ನುವ ಮಾತನ್ನು ತಮ್ಮ ಕವಿತೆಗಳ ಮೂಲಕ ನಿಜ ಮಾಡಿದ್ದಾರೆ.

ಅವರ ಕವಿತೆಗಳು ಹೃದಯಸ್ಪರ್ಶಿ ಯಾಗಿ ನಮ್ಮೊಂದಿಗೆ ಮಾತನಾಡುತ್ತವೆ.. ಬಹುತೇಕ ತಮ್ಮ ಎಲ್ಲ ಕವಿತೆಗಳಲ್ಲಿ ಲೋಕ ವೈಪರೀತ್ಯಗಳ ಕುರಿತಾಗಿ ಯಾಕೆ ಹೀಗೆ ಎಂಬ ಪ್ರಶ್ನೆಯನ್ನು ಅವರು ಮೂಡಿಸುತ್ತ ಅದೇ ಭಾವವನ್ನು ನಮ್ಮಲ್ಲೂ ಕೆಣಕಿ ಕಾಡುವಂತೆ ಮಾಡುತ್ತಾರೆ. ಹಾಗಾಗಿ ‘ಮರ ಚಿಗುರಿದ ಹಾಗೆ ಕವಿತೆ ಬಾರದಿದ್ದರೆ ಅದು ಬರುವುದೇ ಬೇಡ’ ಎಂಬ ಕೀಟ್ಸನ ಮಾತು ಇಲ್ಲಿಯ ಸೋಗಿಲ್ಲದ ಸಹಜ ಕವಿತೆಗಳ ಓದಿಗೆ ಬಾರಿ ಬಾರಿ ನೆನಪಾಗುವದು ಅತಿಶಯೋಕ್ತಿಯೇನಲ್ಲ.

ಹೊಸತನಕ್ಕಾಗಿ ಕಾಯುತ್ತ ಕೂಡುವ ಪರಿ ಮನುಜನಿಗೆ ಜನ್ಮಜಾತವಾದದ್ದು. ನಿರೀಕ್ಷೆಗಳಿಲ್ಲದೇ ಬದುಕಿಲ್ಲ. ಸುಖ ದುಃಖಗಳ ಮೊತ್ತವನ್ನು ಕಟ್ಟಿಕೊಡುತ್ತಲೇ ಇರುವ ಈ ಕಾಯುವಿಕೆಯ ಪರಿಣಾಮ ಹೆಚ್ಚಿನ ಬಾರಿ ನಿರಾಶೆಯನ್ನೇ ಮೊಗೆಮೊಗೆದು ಮುಂದಿಟ್ಟುಬಿಡ್ತದೆ ಹಾಗಾಗಿಯೇ ಕವಿ ‘ಹಣತೆ ಹಚ್ಚಿಟ್ಟ ರಾತ್ರಿ’ಯಲ್ಲಿ ಹಾಗೂ ಅದೇ ರೀತಿಯ ಇನ್ನೊಂದು ಕವಿತೆ ‘ತೂಗು ಹಾಕಿದ ದುಃಖ’ದಲ್ಲಿ ಬಾರದವರ ನಿರೀಕ್ಷೆಯಲ್ಲಿ ತನ್ನ ಎಲ್ಲ ಮಣ್ಣಾಗಿ ಹೋದ ಕನಸುಗಳ, ಸಿಗದ ಮುತ್ತುಗಳ ಫಲ ಕೊಡದ ಪ್ರಾರ್ಥನೆಗಳ ಕುರಿತಾಗಿ ಅರುಹುಗಳನ್ನು ಓದುಗರ ಮುಂದೆ ತೆರೆದಿಟ್ಟಿದ್ದಾರೆ.. ನಶಿಸಿದ ನಂಬಿಕೆಗಳ ಮುಂದೆ ಯಾವ ಸತ್ಯವೂ ಕಾಣಲಿಲ್ಲ ಎನ್ನುತ್ತಲೇ ನಿಜದ ಅರಿವನ್ನು ತೆರೆದಿಡುತ್ತಾರೆ.

ರಾಜಕೀಯವನ್ನು ಜಾತಿ ಧರ್ಮಗಳೊಟ್ಟಿಗೆ ಬೆರೆಸುತ್ತ, ಪಂಥಗಳ ಹೆಸರಿನಲ್ಲಿ ಕಲಸುತ್ತ  ಬೇಳೆ ಬೇಯಿಸಿಕೊಳ್ಳುತ್ತಿರುವ ಪ್ರಸ್ತುತ ವಿದ್ಯಮಾನದಲ್ಲಿ ದೇಶ ನಲುಗುತ್ತಿರುವ ಹೊತ್ತು ಇದು. ಇವೆಲ್ಲವುಗಳ ಎದುರಲ್ಲಿ ಪ್ರೀತಿ ಕರುಣೆ ಸ್ನೇಹ ಮುಂತಾದ ಭಾವಗಳೆಲ್ಲ ಹೇಗೆ ಮೂಲೆಗುಂಪಾಗುತ್ತಿವೆ ಎಂಬುದನ್ನು ‘ಅಗ್ನಿಪರೀಕ್ಷೆ’ ಕವಿತೆಯಲ್ಲಿ ಹೇಳುತ್ತ ತಾಯಿ ಭಾರತಿಯ ದುಃಖದ ಭಾಷೆಯನ್ನು ಕರುಳರಿಸುವ ಪ್ರಯತ್ನ ಮಾಡುತ್ತಾರೆ

‘ಸತ್ಯದ ಕಾಲವು ಸತ್ತೇ ಹೋಯಿತೇ ದಿನವಿಡೀ ಉರಿದಿದೆ ಕ್ರೌರ್ಯದ ಜ್ವಾಲೆ’ ಎನ್ನುತ್ತ ತನ್ನ ಒಡಲುರಿಯನ್ನು ಬಿಚ್ಚಿಡುತ್ತಾರೆ. ಈ ಕವಿತೆಯನ್ನು ಮತ್ತು ಇದೇ ರೀತಿಯ ಭಾವವುಳ್ಳ ‘ಗಾಂಧಿ ನಕ್ಕ’ ಹಾಗೂ ‘ನಿನ್ನೆಯ ನೆನಪುಗಳ ಸುತ್ತ’ ‘ಪಂಜರದ ಗಿಳಿ’ ಓದುವಾಗ ಓದುಗನಿಗೆ ಒಂದು ರೀತಿಯ ವಿಷಾಧ ಕಾಡುತ್ತ ಅರೆ ನಿಮಿಷ ಮಂಕಾಗುವ ಹಾಗೆ ಮಾಡುತ್ತದೆ.

ಮುಂಬರಿದು ‘ಮೌನವೇ ನೀ ಮಾತಾಗಿ ಬಾ’ ಎಂಬ ಕವಿತೆಯಲ್ಲಿ ಮೌನವನ್ನು ತನ್ನ ತೆಕ್ಕೆಗೆಳೆದುಕೊಳ್ಳುತ್ತ ಮನೆ ಮನೆತನ ಎಂಬ ಬಾಂಧವ್ಯಗಳು ಕೂಡು ಕುಟುಂಬಗಳು ಸುಖವಾಗಿರಲು ಈ ಮೌನವೆಂಬ ಮಹಾ ಶಕ್ತಿಶಾಲಿ ಎಷ್ಟು ಪರಿಣಾಮಕಾರಿ ಎಂಬುದನ್ನು ಮನಗಾಣಿಸುತ್ತಾರೆ

ಅಪ್ಪ ಅವ್ವಂದಿರು
ಗಳಿಸಿ ಉಳಿಸಿ ತಂದ
ತಲೆಮಾರಿನ ಬಾಂಧವ್ಯ
ಒಡೆದು ಚೂರಾಗದಂತೆ

ಎಂಬಲ್ಲಿ ‘ಮಾತು ಆಡಿದರೆ ಹೋಯ್ತು ಮುತ್ತು ಒಡೆದರೆ ಹೋಯ್ತು’ ಎಂಬ ಗಾದೆ ಮಾತನ್ನು ನೆನಪಿಸಿ.. ಮೌನದ ಮಹತ್ವದ ಜೊತೆ ಅಗತ್ಯತೆಯ ಕುರಿತಾಗಿ ಮತ್ತೊಮ್ಮೆ ಮಗದೊಮ್ಮೆ ಚಿಂತಿಸುವಂತೆ ಮಾಡುತ್ತಾರೆ.

ಹಳೆಯ ಬೆತ್ತದ ಪೆಟಾರೆಯ ಜೀರ್ಣ ಬಟ್ಟೆಯ ಗಂಟೊಂದರಲ್ಲಿ ಸಿಕ್ಕ ಏಳೆಂಟು ‘ಹಳೆಯ ನಾಣ್ಯಗಳು’ ಕವಿಗೆ ನೂರಾರು ವರ್ಷಗಳ ಹಿಂದಿನ ದಿವಂಗತ ಅಜ್ಜಿಯ ಸುಕ್ಕು ರೂಪವನ್ನು ಕಣ್ಣೆದುರಿಗೆ ತಂದಿಡುತ್ತವೆ. ಸಾಹೇಬರ ದಬ್ಬಾಳಿಕೆಯಲ್ಲಿ ಹಗಲೂ ರಾತ್ರಿ ಅವಳ ದುಡಿತ, ಸುರಿಸಿದ ಬೆವರು, ಕಾಡುಮೇಡಿನಲ್ಲಿ ಕಟ್ಟಿಗೆ ಸಂಗ್ರಹಿಸಿ ಮನೆ ಮನೆಗೆ ಮಾರಲು ಹೊರಟ ದೃಶ್ಯ  ಕಣ್ಮುಂದೆ ಕುಣಿಯುತ್ತ ಕವಿ ಅದನ್ನು ಮೊದಲಿನಂತೆಯೇ ಕಟ್ಟಿಟ್ಟು ಪೆಟಾರಿಯಲ್ಲಿಟ್ಟು ಅಂದುಕೊಳ್ಳುತ್ತಾನೆ

ಮುಂದೊಮ್ಮೆ ಈ ಮೂಟೆ
ನನ್ನ ಮಕ್ಕಳ ಕೈಗೂ ಸಿಗಲಿ
ಅಜ್ಜಿಯ ಬದುಕಿನ ದಿನಗಳು
ಮತ್ತೊಮ್ಮೆ ಕವಿತೆಯಾಗಿ ಹುಟ್ಟಲಿ

ಇದಿಷ್ಟೇ ಅಲ್ಲದೇ ಕವಿ ಇಲ್ಲಿರುವ ತಮ್ಮ ಇನ್ನೂ ಹಲವಾರು ಕವಿತೆಗಳ ಮೂಲಕ ನಮ್ಮೊಳಗನ್ನು ಸೆಳೆಯುತ್ತಾರೆ.. ವಿಡಂಬನಾತ್ಮಕ ಸಾಲುಗಳ ಮೂಲಕ ಚಿಂತನೆಗೆ ಹಚ್ಚುತ್ತಾರೆ.. ಜಾನಪದ ಧಾಟಿಯ ‘ಕಾಡ ಚಿರತಿ ಒಂದ ಊರ ಬಾವ್ಯಾಗ ಬಿತ್ತ’ ಎಂಬ ಕವಿತೆಯಲ್ಲಿ ಕವಿ ‘ಊರ ಕೋಳಿಗಳು ನಾಯಿಗಳು ನಾಪತ್ತೆಯಾಗ್ತಿದ್ವು ಹಾಳಾದ ಚಿರತೆ ಸತ್ತು ಒಳ್ಳೇದಾಯ್ತು’ ಎಂಬ ಜನರ ಶಾಪಕ್ಕೆ ಒಳಗೊಳಗೇ ದುಃಖಿಸುತ್ತಾರೆ. ಕಾಡು ಕಡಿದು ನಾಡು ಮಾಡಿದ, ಕಾಡು ಪ್ರಾಣಿಗಳೆಲ್ಲ ಆಹಾರವಿಲ್ಲದೇ ಅಲೆದಾಡುತ್ತ ನಾಡಿಗೆ ಬರುವ ಪ್ರಸಂಗ ತಂದ ಈ ಮನುಜನಿಗೆ ತಾನೇ ಎಲ್ಲದಕ್ಕೂ ಕಾರಣ ಎಂಬ ಪಶ್ಚಾತ್ತಾಪ ಮೂಡುವುದೇ ಇಲ್ಲವೇ.? ಬುದ್ದಿ ಬರೋದೇ ಇಲ್ಲವೇ..? ಎಂಬ ದುಃಖಿತ ಕಳವಳದ ಪ್ರಶ್ನೆಗಳು ಕವಿಯ ಜೊತೆ ನಮ್ಮಲ್ಲೂ ಮೂಡಿ ಪರಿಹಾರಕ್ಕಾಗಿ ತಡಕಾಡುತ್ತವೆ.

‘ರಮೇಶಣ್ಣ ಗಂಡಲ್ಲವಂತೆ’ ಕವಿತೆಯಲ್ಲಿ ‘ಗೇ’ ಹಾಗೂ ‘ಲೆಸ್ಬಿಯನ್ನರ’ ಜೀವನದಲ್ಲಿ ಹೆಜ್ಜೆಹೆಜ್ಜೆಗೂ ಕಾಡುವ ಸಮಾಜಮುಖೀ ಮಾನಸಿಕ ತುಮುಲವನ್ನು ತೆರೆದಿಡುವ ಕವಿ ತನ್ನದಲ್ಲದ ಭಾವನೆಯನ್ನು ತನ್ನದಾಗಿಸಿಕೊಂಡು ಅನುಭೂತಿಯಿಂದ  ನಮ್ಮೊಂದಿಗೆ ಸಂವಹಿಸುತ್ತಾರೆ. ಹೀಗೆ ತನ್ನ ಸ್ವಾನುಭವವನ್ನು ಅಂದರೆ ಕಂಡಿದ್ದು ಕೇಳಿದ್ದು ಓದಿದ್ದು ಕಲ್ಪಿಸಿದ್ದು ಎಲ್ಲವನ್ನೂ ಕವಿ ನರೇಶ ನಾಯ್ಕರು ಲೋಕಾನುಭವವಾಗಿ ಬದಲಿಸುವತ್ತ ತಮ್ಮ “ತೂಗು ಹಾಕಿದ ದುಃಖ” ಸಂಕಲನದ ಮೂಲಕ ಪ್ರಯತ್ನಿಸಿದ್ದಾರೆ

‘ಸಾರ್ವತ್ರಿಕ ಸತ್ಯ ಕವಿಯ ವಸ್ತು’ ಎಂದ ಅರಿಸ್ಟಾಟಲ್ ಅವರ ಮಾತನ್ನು ಈ ಸಂಕಲನದ ಎಲ್ಲ ಕವಿತೆಗಳು ವಿಶೇಷ ಆಡಂಬರವಿಲ್ಲದೇ ನಿಜ ಮಾಡಿವೆ. ತಮ್ಮ ಕವಿತೆಗಳ ಕುರಿತಾಗಿ ತಿಳಿದವರಲ್ಲಿ ಅಭಿಪ್ರಾಯ ಕೇಳುತ್ತ, ಸರಿ ತಪ್ಪುಗಳ ಕುರಿತಾಗಿ ಚರ್ಚಿಸುತ್ತ, ತನ್ನನ್ನು ತಾನು ಯಾವೆಲ್ಲ ವಿಧಾನದಲ್ಲಿ ತಿದ್ದಿಕೊಂಡು ಹೆಚ್ಚಿನ ಜ್ಞಾನವನ್ನು ಯಾವೆಲ್ಲ ಮೂಲಗಳಿಂದ ಪಡೆಯಬಲ್ಲೆ ಎಂದು ಸದಾ ಕೂತೂಹಲಕಾರಿಯಾಗಿರುವ ಸಹೋದರ ನರೇಶ ನಾಯ್ಕರಿಗೆ ಕತೆಯಂತೆಯೇ ಕವಿತೆಯಲ್ಲೂ ಅತ್ಯುತ್ತಮ ಭವಿಷ್ಯವಿದೆ ಅಂತ ಇಲ್ಲಿನ ಎಲ್ಲ ಕವಿತೆಗಳನ್ನು ಓದುವಾಗ ಅನ್ನಿಸಿದ್ದು ಸುಳ್ಳಲ್ಲ.

Leave a Reply