CRZ ಎಂದರೆ ಕರಾವಳಿಗೆ Trick or Treat?!!

ಒಂದು ಕಾನೂನು ಅನುಷ್ಠಾನಕ್ಕೆ ಬರಲು ಎಷ್ಟು ಕಾಲ ಬೇಕು ಎಂಬುದಕ್ಕೆ ಗಿನ್ನೆಸ್ ದಾಖಲೆ ಏನಾದರೂ ಆಗುವುದಿದ್ದರೆ ಅದಕ್ಕೆ ಬಲವಾದ ಉಮೇದುವಾರಿಕೆ ಇರುವುದು, 1986ರಲ್ಲಿ (ಮೇ 23) ದಿ. ರಾಜೀವ್ ಗಾಂಧಿ ಅವರ ಸರ್ಕಾರ ಪಾಸು ಮಾಡಿದ ಪರಿಸರ ಸಂರಕ್ಷಣಾ ಕಾಯಿದೆಯದು. ಇದಕ್ಕೆ ಬುನಾದಿ ಬಿದ್ದದ್ದು 1981ರಲ್ಲಿ ಇಂದಿರಾಗಾಂಧಿ ಅವರಿಂದಲಂತೆ!

ರಾಷ್ಟ್ರಪತಿಗಳು ಈ ಕಾಯಿದೆಗೆ ಅಂಕಿತ ಹಾಕಿದ  30  ವರ್ಷಗಳ ಬಳಿಕವೂ ಈ ಕಾಯಿದೆ ಅನುಷ್ಠಾನ ಮಾಡುವುದು ಹೇಗೆಂದು ಕಾರ್ಯಾಂಗಕ್ಕೆ ಇನ್ನೂ ಗೊತ್ತಿಲ್ಲ! ಸರಳವಾಗಿ ಹೇಳಬೇಕೆಂದರೆ ಕಸ್ತೂರಿ ರಂಗನ್ ವರದಿ ಮತ್ತು ಸ್ವಾಮಿನಾಥನ್ ವರದಿಗಳೆಂಬ ಹೆಸರುಗಳಲ್ಲಿ ಈವತ್ತು ಅಂತರ್ಪಿಶಾಚಿಗಳಾಗಿ ಅಲೆಯುತ್ತಿರುವ ಈ ಕಾಯಿದೆಗೆ ಮುಕ್ತಿ ಸಿಗಲು ಆದಷ್ಟು ಬೇಗ “ನಾರಾಯಣ ಬಲಿ ಹೋಮ” ನಡೆಯುವ ಅಗತ್ಯ ಇದೆ! ಸ್ವತಃ ನ್ಯಾಯಾಂಗ ಈ ಕುರಿತು ತಲೆ ಕೆಡಿಸಿಕೊಂಡಿದ್ದರೂ, ಕಾರ್ಯಾಂಗ ಮಾತ್ರ ಮೈತುಂಬ ಎಣ್ಣೆ ಹಚ್ಚಿಕೊಂಡು, ಕೈಗೆ ಸಿಗದೇ ನುಣುಚಿಕೊಂಡು ಓಡಾಡುತ್ತಿದೆ.

ಈ ಬರಹದ ವ್ಯಾಪ್ತಿಯು CRZ  ನೊಟಿಫಿಕೇಷನ್ ಆಗಿರುವ ಹಿನ್ನೆಲೆಯಲ್ಲಿ ಇಡಿಯ ಪ್ರಕರಣವನ್ನು ಗಮನಿಸೋಣ. ದೇಶದ ಕರಾವಳಿಗಳಲ್ಲಿ ಪರಿಸರ ಸಂರಕ್ಷಣೆಗಾಗಿ ಕೇಂದ್ರ ಸರಕಾರವು 1991ರ ಫೆಬ್ರವರಿಯಲ್ಲಿ ಕೋಸ್ಟಲ್ ರೆಗ್ಯುಲೇಷನ್ ಝೋನ್ (CRZ)  ಪ್ರಕಟಣೆಯನ್ನು ಹೊರಡಿಸಿತ್ತು. ಅದರ ಅನ್ವಯ, ಭರತದ ಗೆರೆಯಿಂದ (High Tide Line) 500  ಮೀಟರ್ ಗಳ ವ್ಯಾಪ್ತಿಯೊಳಗೆ ಮತ್ತು ಒಳನಾಡಿನ ನದಿಗಳಲ್ಲಿ 150 ಮೀಟರ್ ವ್ಯಾಪ್ತಿಯೊಳಗೆ ಮಾನವ ಹಸ್ತಕ್ಷೇಪಗಳಿಗೆ ವಿವಿಧ ದರ್ಜೆಯ ಮಿತಿಗಳನ್ನು ವಿಧಿಸಲಾಗಿತ್ತು.

ಅಲ್ಲಿಂದ 18 ವರ್ಷಗಳಲ್ಲಿ ಈ ನೊಟಿಫಿಕೇಷನ್ನಿಗೆ 25 ತಿದ್ದುಪಡಿಗಳಾದವು, ಹಲವು ಕಾನೂನು ಜಂಜಾಟಗಳನ್ನು ಎದುರಿಸಬೇಕಾಯಿತು. 1996 ಎಪ್ರಿಲ್ ನಲ್ಲಿ ಸುಪ್ರೀಂ ಕೋರ್ಟು ಆದೇಶದ ಮೇರೆಗೆ ಕೋಸ್ಟಲ್ ಝೋನ್ ನಿರ್ವಹಣಾ ಪ್ರಾಧಿಕಾರಗಳನ್ನು ಸ್ಥಾಪಿಸಲಾಯಿತು. ಕೊನೆಗೆ, CRZ ಪ್ರಕಟಣೆ ಅನುಷ್ಠಾನ ಕಷ್ಟ ಎಂಬ ಪರಿಸ್ಥಿತಿ ಬಂದ ಹಿನ್ನೆಲೆಯಲ್ಲಿ ಸರ್ಕಾರ 2004ರಲ್ಲಿ ಪ್ರೊ| ಎಂ ಎಸ್ ಸ್ವಾಮಿನಾಥನ್ ಸಮಿತಿಯನ್ನು ನೇಮಿಸಿತ್ತು. ಅದು 2005ರಲ್ಲಿ ಸಲ್ಲಿಸಿದ ವರದಿಯ ಬಳಿಕ ಪರಿಸ್ಥಿತಿ ಮತ್ತಿಷ್ಟು ಕಲಸು ಮೇಲೋಗರವಾಗಿ 2011 ಜನವರಿಯಲ್ಲಿ ಸರ್ಕಾರ ಪರಿಷ್ಕ್ರತ   CRZ ನೊಟಿಫಿಕೇಷನ್ ನೀಡಿತು. ಆದರೆ ಈವತ್ತಿಗೂ ನೊಟಿಫಿಕೇಷನ್ ಅಲ್ಲಿಗೇ ಅಟಕಾಯಿಸಿಕೊಂಡಿದೆ, ಅದಕ್ಕೆ ತಿದ್ದುಪಡಿಗಳ ಮೇಲೆ ತಿದ್ದುಪಡಿಗಳ ಪ್ರಯತ್ನ ನಡೆದಿದೆ. ಇದೇ ವೇಗದಲ್ಲಿ ಇನ್ನು 50 ವರ್ಷಗಳಲ್ಲೂ ಈ ಕಾಯಿದೆ ಅನುಷ್ಠಾನಕ್ಕೆ ಬರಲು ಕಷ್ಟವಿದೆ.

ಈ ಇಡಿಯ ಪ್ರಕ್ರಿಯೆ ಯಾಕೆ ಹೀಗೆ ಹಿಂಜಿಕೊಳ್ಳುತ್ತಿದೆ ಎಂದು ಕೇಳಿದರೆ ಅದಕ್ಕೆ ಸರಳ ಉತ್ತರ ಒಂದು ಸಣ್ಣ ಪ್ರಶ್ನೆಯಲ್ಲಿದೆ.

“ಕರ್ನಾಟಕ ರಾಜ್ಯ ಕೋಸ್ಟಲ್ ಜೋನ್ ಮ್ಯಾನೇಜ್ ಮೆಂಟ್ ಅಥಾರಿಟಿಯ ಕಚೇರಿ ಬೆಂಗಳೂರಿನಲ್ಲಿ ಯಾಕಿದೆ?”

ಈ ಪ್ರಶ್ನೆಗೆ ಉತ್ತರದಲ್ಲೇ ಈ ವಿಳಂಬದಾಟದ ಎಲ್ಲ ಗುಟ್ಟುಗಳೂ ಅಡಗಿವೆ. ಕರ್ನಾಟಕದಲ್ಲಿ ಸಮುದ್ರ ತೀರಗಳಿರುವುದು ಉತ್ತರ ಕನ್ನಡ, ಉಡುಪಿ ಮತ್ತು ಮಂಗಳೂರು ಜಿಲ್ಲೆಗಳಲ್ಲಿ. ಆದರೆ, ಸಮುದ್ರ ತೀರದಿಂದ ಬಹುದೂರದ ಬೆಂಗಳೂರಿನಲ್ಲಿ KSCZMA ಕೇಂದ್ರ ಕಛೇರಿ ಇದೆಯೆಂದರೆ ಅದರ ಅರ್ಥ – ಸರ್ಕಾರಗಳಿಗೆ ಈ ಕಾನೂನು ಅನುಷ್ಠಾನಕ್ಕೆ ಬರುವುದು ಮನಸ್ಸಿಲ್ಲ ಎಂದೇ. ಇದು CRZಗೂ ಸತ್ಯ, ಕಸ್ತೂರಿ ರಂಗನ್ ವರದಿಗೂ ಸತ್ಯ.

ವಾಸ್ತವದಲ್ಲಿ, ನಿಜವಾದ ಬಳಕೆದಾರರಿಗೆ CRZ ನೊಟಿಫಿಕೇಷನ್ನಿನಿಂದ ಯಾವುದೇ ಸಮಸ್ಯೆ ಬರಬಾರದು. ಇದು ನಿಜಕ್ಕೆಂದರೆ, ಅವರದೇ ಹಿತಾಸಕ್ತಿಗಳ ರಕ್ಷಣೆಗೆ ರೂಪುಗೊಂಡ ನಿಯಮಗಳು. ಆದರೆ, ಕೈಗಾರಿಕೆಗಳು, ಪ್ರವಾಸೋದ್ಯಮದ ಹೆಸರಿನಲ್ಲಿ ನೆಲ ಕಬಳಿಸುತ್ತಿರುವವರು, ಮರಳು ಗುತ್ತಿಗೆದಾರರು, ಇಲ್ಲಿ ತಮ್ಮ ಕಮಾಯಿಗೆ ಆಯಕಟ್ಟಿನ ಜಾಗಗಳನ್ನು ಹುಡುಕಿಕೊಂಡಿರುವ ಅಧಿಕಾರಿಗಳು ಮತ್ತು ಇವರನ್ನೆಲ್ಲ ತಮ್ಮ ಕ್ರಪಾಛತ್ರದಡಿ ಇರಿಸಿಕೊಂಡಿರುವ ರಾಜಕಾರಣಿಗಳಿಗೆ ಈಗ ಬೆಂಕಿ ಉರಿಸಿ ಆ ಬೆಂಕಿಯಲ್ಲೇ ಸಾಧ್ಯವಾದಷ್ಟೂ ಚಳಿ ಕಾಯಿಸಿಕೊಳ್ಳುವ ಬಯಕೆ ಇದೆ. ಅದರ ಫಲವೇ ಈವತ್ತು CRZ ಹೆಸರಿನಲ್ಲಿ ನಡೆದಿರುವ ನಾಟಕ.

ಸಮುದ್ರ ತೀರದಲ್ಲಿ, ನದಿ ತೀರದಲ್ಲಿ ಯಾವುದೇ ನಾಗರಿಕ ಚಟುವಟಿಕೆ ನಡೆಯಬೇಕಿದ್ದರೆ, ಅದಕ್ಕೆ KSCZMA ಅನುಮತಿ ಬೇಕಿದೆ. ಈ ಅನುಮತಿ ಉಡುಪಿ, ಮಂಗಳೂರು, ಕಾರವಾರಗಳಲ್ಲೇ ಸಿಕ್ಕಿದರೆ ಸುಲಭವಾಯಿತಲ್ಲ- ನಾಲ್ಕು ಸಾರಿ ಬೆಂಗಳೂರಿಗೆ ಅಲೆದಾಡಿದರೆ ಕಷ್ಟ ಗೊತ್ತಾಗುತ್ತದೆ. ಜೊತೆಗೆ ಸಮುದ್ರ ತೀರದ ಜನರಿಗೆ CRZ ಹೆಸರಲ್ಲಿ ಎಷ್ಟು ಸಾಧ್ಯವೋ ಅಷ್ಟು ಕಿರಿಕಿರಿ ಮಾಡಬೇಕು. ಆಗ ಜನ ತಾವಾಗಿಯೇ CRZ ವಿರುದ್ಧ ಉರಿದೇಳುತ್ತಾರೆ ಎಂಬ ಲಾಜಿಕ್ ಇಲ್ಲಿ ಕೆಲಸ ಮಾಡುತ್ತಿದೆ. ಸಮುದ್ರ ತೀರ ಸಂರಕ್ಷಣೆ ಎಂಬುದು ಜನ ವಿರೋಧಿ ಎಂದು ಬಿಂಬಿಸಿದರೆ, ಜನ ಅದರ ವಿರುದ್ಧ ಮಾತನಾಡತೊಡಗಿದರೆ, ಅದರ ಲಾಭ ಪಡೆಯುವವರು ವ್ಯವಹಾರಸ್ಥರು ಮತ್ತು ರಾಜಕಾರಣಿಗಳು. ಇದು ಈಗಾಗಲೇ ಕರಾವಳಿಯಲ್ಲಿ ಮರಳು ವ್ಯವಹಾರದಲ್ಲಿ ಕಳೆದೊಂದು ದಶಕದಲ್ಲಿ ಉಂಟಾಗಿರುವ ಬದಲಾವಣೆಗಳಿಂದ ಸಾಬೀತಾಗಿದೆ.

ಅತ್ತ ಸಮುದ್ರವು ಕೊರೆಯುತ್ತಾ ನಾಡನ್ನು ನುಂಗುತ್ತಿದ್ದರೆ ಅಲ್ಲೂ ಸಮುದ್ರಕ್ಕೆ ಕಲ್ಲು ಹಾಕಿ ಕಾಸು ಮಾಡುವ ಬುದ್ಧಿವಂತಿಕೆ, ಅಲ್ಲಿ ನೆಲ-ಮನೆ ಕಳೆದುಕೊಂಡವರಿಗೆ ಕೊಡುವ ಪರಿಹಾರದಲ್ಲಿ ಕೂಡ ಎಂಜಲು ಪಾಲು, ಅಕ್ರಮವಾಗಿ ಬೀಚ್ ಹೌಸ್ ಗಳನ್ನು, ಕೈಗಾರಿಕೆಗಳನ್ನು ಕಟ್ಟಿಕೊಳ್ಳುತ್ತಿರುವ ಕಾಸಿದ್ದವರಿಂದ ಲಂಚದ ಪಾಲು – ಹೀಗೆ ಕರಾವಳಿಯಲ್ಲಿ ಸಮ್ರದ್ಧವಾಗಿ ಕಾಸು ಕಾಣಿಸತೊಡಗಿರುವುದು CRZ ವಿರೋಧದ ಹಿಂದಿರುವ ಹುನ್ನಾರ. ಸಮುದ್ರ ತೀರದ ವಾಸಿಗಳನ್ನು ಎರೆಯಾಗಿ ಬಳಸಿಕೊಂಡು ಮೀನು ಹಿಡಿಯುತ್ತಿರುವವರ ಈ “ಟ್ರಿಕ್”, ಈವತ್ತಿಗೆ ಮೇಲ್ನೋಟಕ್ಕೆ “ಟ್ರೀಟ್” ಆಗಿ ಕಾಣುತ್ತಿದೆ. ಆದರೆ ಟ್ರಿಕ್ಕು ಟ್ರಿಕ್ಕೇ!

Leave a Reply