ಯಾರು ಈ ‘ರಾಮು’?

 

 

 

ಆರ್ ಸುಧೀಂದ್ರ ಕುಮಾರ್ 

 

 

 

 

“ರಾಮು”
“ರಾಮು ಕಾಕಾ”
“ರಾಮಣ್ಣ”

ಹೀಗೆ ಮಕ್ಕಳಿಂದ ದೊಡ್ಡವರವರೆಗೂ ಅವರನ್ನು ಪ್ರೀತಿಯಿಂದ ಕರೆಯುವುದುಂಟು; ಅವರನ್ನು ಪ್ರೀತಿಯಿಂದ ನೆನೆಯುವುದುಂಟು.

ಅವರ ಪೂರ್ಣ ಹೆಸರು ಟಿ ಎಸ್ ರಾಮಸ್ವಾಮಿ ಐಯ್ಯಂಗಾರ್.

ಮೈಸೂರಿನ ಸರಸ್ವತಿಪುರಂ ಏಳನೇ ಮೇನು , ಅಲ್ಲೇ ಅವರಿದ್ದಾರೆ.

2007 ರಲ್ಲಿ ಡಿ ವಿ ಪ್ರಹ್ಲಾದ್ ಅವರು “ಸಂಚಯ” ದಲ್ಲಿ “ಕಾವ್ಯ ಸಂಭ್ರಮ” ಸಂಚಿಕೆಯನ್ನು ಪ್ರಕಟಿಸಿದ್ದರು. 75 ರಚನೆಗಳ ಆ ಸಂಚಿಕೆಯಲ್ಲಿ “ಅಗ್ನಿಸೂಕ್ತ’ ಎಂಬ ರಚನೆಯನ್ನು ಆಗ ಓದಿಕೊಂಡಿದ್ದೆ. ಮುಂದೆ ಒಂದು ದಿನ ಲೈಬ್ರರಿಯಲ್ಲಿ ರಾಮಸ್ವಾಮಿ ಅವರ ಪುಸ್ತಕ : “ಅಗ್ನಿಸೂಕ್ತ” ಸಿಕ್ಕಿತು.ಓದಿದೆ. ಇದಾಗಿ ವರುಷಗಳು ಉರುಳಿದ ಮೇಲೆ ಈಗ “ರಾಮು ಕವಿತೆಗಳು” ಓದುವುದಕ್ಕೆ ಸಂತೋಷದಿಂದ ಪುಸ್ತಕವನ್ನು ಕೈಗೆತ್ತಿಕೊಂಡಿದ್ದೇನೆ.

ರಾಮು ಅವರೆಂದರೆ: ನಿತ್ಯ ಕವಿತೆಯ ಸಂಗಾತಿಯಾಗಿ, ತನ್ನ ಪರಿಮಿತಿಯಲ್ಲೇ ಸಮಾಜಮುಖಿ ಆಶಯದಿಂದ ತನ್ನ ಪರಿಸರಕ್ಕೆ, ಅಲ್ಲಿನ ಜನತೆಗೆ ಒಳಿತನ್ನು ಆಗು ಮಾಡುವ ಹಾಗು ಬಯಸುವ ಜೀವಿ ಎಂದು ಅವರೊಡನೆ ಒಂದು ಗಳಿಗೆ ಇದ್ದವರಿಗೂ ತಿಳಿಯುತ್ತದೆ. ಅವರು ಮಾತನಾಡುತ್ತಿದ್ದರೆ ಸುಮ್ಮನೆ ಕೇಳಿಸಿಕೊಳ್ಳಬೇಕು ಎನ್ನಿಸುತ್ತದೆ; ನಮ್ಮೊಳಗೆ ಝರಿಯೊಂದು ಹರಿದ ಹಾಗೆ ಆಗುತ್ತದೆ. ಅವರನ್ನು ಕಂಡು ಮಾತನಾಡಿಸಲು ಬಂದವರಿಗೆಲ್ಲ ಹಾಲು ಕುಡಿಸಿ ಕಳಿಸುವುದು ಅವರಿಗೆ ಇಷ್ಟ. ನನಗೆ ಟೀ ಇಷ್ಟವಾದರೂ ಅವರು ಕೊಡುವ ಹಾಲನ್ನು ಕುಡಿಯುವಷ್ಟು ಮಾತ್ರ ಅವರಿಗೆ ಒಳ್ಳೆಯವನಾಗಿದ್ದೇನೆ!

ಸಾರ್, ನಿಮ್ಮ ‘ಅಗ್ನಿಸೂಕ್ತ’ ಕೊಡಿ ರಿಪ್ರಿಂಟ್ ಮಾಡಿಸೋಣ ಎಂದರೆ ಅವರು: ಅದು ಅಗ್ನಿಗೆ ಸೂಕ್ತ! ಎಂದು ಹೇಳಿ ಮಾತಿನ ದಿಕ್ಕನೇ ಬದಲಾಯಿಸುತ್ತಾರೆ. ಇವೆಲ್ಲವೂ ಅವರ ಹೊಸ ಸಂಕಲನ “ರಾಮು ಕವಿತೆಗಳು” ಓದುವ ಮುನ್ನ ನೆನಪಾಯಿತು. ಆದರೆ ಈ ಸಂಗತಿಗಳೇ ಅವರ ಕವಿತೆಯನ್ನು ಓದಲು ಆಧಾರವಾಗಲಿ, ಕವಿತೆಯನ್ನು ನಿರ್ಧರಿಸುವ ಪ್ರಮಾಣವಾಗಲಿ ಅಥವಾ ಕವಿತೆಯನ್ನು ಓದುವಾಗ ಕವಿತೆಗಿಂತಲೂ ಮುನ್ನಲೆಗೆ ಬಂದುಬಿಡುವ ಗುಣವಾಗಲಿ ಆಗಬೇಕಿಲ್ಲ ಎನ್ನಿಸುತ್ತದೆ.

ಆಸಕ್ತರು ಮೊ:9632233227 ಇಲ್ಲಿಗೆ ಕರೆ ಮಾಡಿದರೆ ಪುಸ್ತಕವನ್ನು ಪಡೆಯಬಹುದು.

Leave a Reply