ಅವರು ‘ಖಾದ್ರಿ ಅಚ್ಯುತನ್’

ಜಿ ಎನ್ ಮೋಹನ್ 

 

ಅವರಲ್ಲಿ ಒಂದು ಚುಂಬಕ ಶಕ್ತಿ ಇತ್ತು..

ಅವರ ನಗು?

ಅವರ ಹಿರಿತನ?

ಅವರ ಅನುಭವ?

ಅವರ ಚಟುವಟಿಕೆ?

ಇದೆಲ್ಲವೂ ಹೌದು. ಆದರೆ ಇದಕ್ಕಿಂತ ಮಿಗಿಲಾಗಿ ಅವರಲ್ಲಿದ್ದ ಚುಂಬಕ ಶಕ್ತಿ ಅವರ ಮಾನವೀಯತೆ.

ಅವರಿಗೆ ಜಾತಿ ಧರ್ಮ ಎಲ್ಲವೂ ಇತ್ತು. ಆದರೆ ಅವರು ಅದನ್ನು ಸುತ್ತಿ ತಮ್ಮ ಶಾಲಾ ಕಾಲೇಜು ರೆಕಾರ್ಡುಗಳಿಗಷ್ಟೇ ಸೀಮಿತ ಮಾಡಿಬಿಟ್ಟಿದ್ದರು.

ಅವರು ಖಾದ್ರಿ ಕುಟುಂಬದವರು ಎಂದು ಗೊತ್ತಾದದ್ದು ಅವರ ಒಡನಾಟಕ್ಕೆ ಬಂದ ನಂತರವೇ. ಅವರಿಗೆ ತಮ್ಮದೇ ವ್ಯಕ್ತಿತ್ವವಿತ್ತು. ಹಾಗಾಗಿಯೇ ಅವರು ಖಾದ್ರಿ ಶಾಮಣ್ಣ ಅವರ ತಮ್ಮ ಎನ್ನುವುದನ್ನು ಎಲ್ಲೂ ಬಳಸಿಕೊಳ್ಳಲಿಲ್ಲ.

ಅವರಿಗೂ ನನಗೂ ನಂಟು ಬಂದದ್ದು ‘ಕೃಷಿಕರ ಕೈಗೆ ಲೇಖನಿ’ ಆಂದೋಲನದ ಭಾಗವಾಗಿ. ಬೆಂಗಳೂರಿನ ಕೃಷಿ ವಿಶ್ವವಿದ್ಯಾಲಯದಲ್ಲಿ ನಾವೆಲ್ಲರೂ ಒಂದೇ ವೇದಿಕೆ ಹಂಚಿಕೊಳ್ಳಬೇಕಾಗಿ ಬಂದಾಗ . ಶ್ರೀಪಡ್ರೆ, ಈಶ್ವರ ದೈತೋಟ, ಖಾದ್ರಿ ಅಚ್ಯುತನ್ ಅವರೊಂದಿಗೆ ನಾನೂ ಹೇಗೆ ಅನುಭವಿಸುವವನ ಕೈಗೆ ಲೇಖನಿ ಕೊಡಬೇಕಾದ ಅಗತ್ಯವಿದೆ ಎಂದು ವಿವರಿಸಿದ್ದೆವು. ಒಂದು ರೀತಿಯಲ್ಲಿ ಇದು ‘ಮೂಕನಿಗೆ ಬಾಯಿ ಬಂದಾಗ’ ಚಳುವಳಿ.

ಅಲ್ಲಿ ನಾನು ಎಂದಿನಂತೆ ನನ್ನ ಪ್ರೀತಿಯ ಕವಿ ಸು ರಂ ಎಕ್ಕುಂಡಿ ಅವರು ಆಡಿದ ಮಾತನ್ನು ಬಳಸಿಕೊಂಡಿದ್ದೆ. ‘ಕೆಂಡದ ಮೇಲೆ ನಡೆದವನಿಗೆ ಮಾತ್ರವೇ ಕೆಂಡದ ಬಿಸಿ ಗೊತ್ತಾಗಲು ಸಾಧ್ಯ’ ಎಂದು. ಅಚ್ಯುತನ್ ಅವರಿಗೆ ಅದು ತುಂಬಾ ತುಂಬಾ ಇಷ್ಟ ಆಗಿಬಿಟ್ಟಿತು. ತಮ್ಮ ಎಂದಿನ ದೊಡ್ಡ ನಗು ನಗುತ್ತಾ ಬಂದು ನನ್ನನ್ನು ತಬ್ಬಿಕೊಂಡರು. ಆ ತಬ್ಬುವಿಕೆಯ ಬಿಸುಪನ್ನು ನಾನು ಕೊನೆಯವರೆಗೂ ಉಳಿಸಿಕೊಂಡಿದ್ದೆ ಅಥವಾ ಅವರು ಆ ಬಿಸುಪು ಆರದಂತೆ ನೋಡಿಕೊಂಡಿದ್ದರು.

ಆ ನಂತರ ನಾವು ಮೇಲಿಂದ ಮೇಲೆ ಭೇಟಿಯಾಗುತ್ತಿದ್ದೆವು. ಯಥಾಪ್ರಕಾರ ಮಾಧ್ಯಮ ಗೋಷ್ಠಿಗಳಲ್ಲಿ. ಧಾರವಾಡ, ಉಜಿರೆ, ಬೆಂಗಳೂರು.. ಹೀಗೆ. ಮಾಧ್ಯಮದಲ್ಲಿ ಆ ವೇಳೆಗಾಗಲೇ ಸಾಕಷ್ಟು ಅನುಭವ ಧಕ್ಕಿಸಿಕೊಂಡಿದ್ದ, ಎತ್ತರದ ಹುದ್ದೆಯಲ್ಲಿದ್ದ, ದೂರದರ್ಶನ, ಚಲನಚಿತ್ರ ಪ್ರಮಾಣ ಸಮಿತಿ, ಯೋಜನಾ, ಹೀಗೆ ನಮಗೆಲ್ಲಾ ಆ ಕಾಲಕ್ಕೆ ಮಹತ್ವದ ಜವಾಬ್ದಾರಿಗಳು ಎಂದುಕೊಂಡಿದ್ದ ಎಲ್ಲವೂ ಮುಗಿಸಿ ದೂರದರ್ಶನದ ಸುದ್ದಿ ವಿಭಾಗದ ಚುಕ್ಕಾಣಿ ಹಿಡಿದಿದ್ದ ಖಾದ್ರಿ ಅವರ ಮುಂದೆ ನಮಗೆ ಭಾಷಣ ಮಾಡಲೇ ಭಯ. ಆದರೆ ಅವರ ಒಂದು ದೊಡ್ಡ ನಗು ಹೇಗೆ ನಮ್ಮ ಭಯವನ್ನು ಒದ್ದು ಮೂಲೆಗೆಸೆಯುತ್ತಿತ್ತು ಎಂದರೆ ನಾವು ಭರ್ಜರಿ ಭಾಷಣಕ್ಕೆ ಸಜ್ಜಾಗಿಬಿಡುತ್ತಿದ್ದೆವು. ನಮ್ಮ ಭಾಷಣವನ್ನು ಅವರೂ ಕಣ್ಣು ಬಿಟ್ಟುಕೊಂಡು ತನ್ಮಯತೆಯಿಂದ ಕೇಳಿಸಿಕೊಳ್ಳುತ್ತಿದ್ದರು.

ಪತ್ರಿಕೋದ್ಯಮದಲ್ಲಿ ತೀರಾ ಪರೂಪವಾದ ಬೆನ್ನು ತಟ್ಟುವಿಕೆ ಅವರಲ್ಲಿ ಮಾತ್ರ ಸಮೃದ್ಧವಾಗಿತ್ತು. ತಮ್ಮ ಸಮಕಾಲೀನರ ಜೊತೆ ಓಡಾಡುವುದಕ್ಕಿಂತ ಅವರಿಗೆ ಎಳೆಯರ ಜೊತೆ ಪುಟು ಪುಟು ಹೆಜ್ಜೆ ಹಾಕುವುದೇ ಇಷ್ಟವಾಗಿತ್ತು. ಒಂದು ಖಾದಿ ಜುಬ್ಬಾ, ಪೈಜಾಮ, ಹೆಗಲಿಗೆ ಒಂದು ಚೀಲ ಅಷ್ಟೇ ಅಲ್ಲ ಮುಖಕ್ಕೆ ಚೆಂದನೆಯ ನಗು ಹರಡಿಕೊಂಡು ಇವರು ಎಲ್ಲೇ ಕಾಣಿಸಿಕೊಂಡರೆ ಅವರ ಸುತ್ತಾ ದೊಡ್ಡ ಹಿಂಡು ಸೇರುತ್ತಿತ್ತು.

ಇವರನ್ನು ಹೇಗೆ ಬೇಕಾದರೂ ಕಾಲೆಳೆಯಬಹುದಿತ್ತು. ಇವರೂ ಅಷ್ಟೇ ಕಾಲೆಳಿಸಿಕೊಂಡು ನಮಗಿಂತ ದೊಡ್ಡ ನಗು ನಕ್ಕುಬಿಡುತ್ತಿದ್ದರು. ಪುತಿನ ಟ್ರಸ್ಟ್, ಖಾದ್ರಿ ಶಾಮಣ್ಣ ಟ್ರಸ್ಟ್ ಮೂಲಕ ಇವರು ಗುರುತಿಸಿದ ಪ್ರತಿಭೆಗಳು ನಿಜಕ್ಕೂ ಒರೆಗೆ ಹಚ್ಚಿ ತೆಗೆದ ಪ್ರತಿಭೆಗಳಾಗಿದ್ದರು. ಅವರಲ್ಲಿ ಎಷ್ಟೋ ಜನಕ್ಕೆ ದೊಡ್ಡ ಮೊತ್ತದ, ಭಾರೀ ಆಕರ್ಷಣೆಯ ಪ್ರಶಸ್ತಿಗಳು ಬಂದಿಲ್ಲದಿದ್ದರೂ ಆಶ್ಚರ್ಯಯವಿಲ್ಲ. ಇವರು ಗುಣಗ್ರಾಹಿ.

ಅಚ್ಯುತನ್ ಅವರಂತವರನ್ನು ನೋಡಿಯೇ ಇರಬೇಕು ರಷ್ಯಾದ ಕವಿ ರಸೂಲ್ ಗಂಚತೋವ್ ಅವರು ಹೇಳುತ್ತಾರೆ- ಇಲ್ಲಿ ನಮಸ್ಕರಿಸು ಇವರು ಮಠಾಧೀಶರಾಗಿರಲಿಲ್ಲ, ಚಕ್ರವರ್ತಿಯಾಗಿರಲಿಲ್ಲ, ಕೇವಲ ಮನುಷ್ಯರಾಗಿದ್ದರು..

Leave a Reply