ಬೆಂಗಳೂರು ಲಿಟ್ ಫೆಸ್ಟ್– ಕಡಿಮೆ ಲಿಟ್; ಜಾಸ್ತಿ ಫೆಸ್ಟ್

 

 

 

 

ಪೃಥ್ವಿ ದತ್ತ ಚಂದ್ರ ಶೋಭಿ

ಕನ್ನಡಕ್ಕೆ-ರಾಜಾರಾಂ ತಲ್ಲೂರು

ಚಿತ್ರಗಳು: ಪ್ರವರ ಕೊಟ್ಟೂರು

 

 

 

ಬೆಂಗಳೂರು ಲಿಟರರಿ ಫೆಸ್ಟಿವಲ್ನಲ್ಲಿ ಒಂದು ಕಟ್ಟಿನಲ್ಲಿ ಬಂಧಿಸಬಹುದಾದಂತಹ ಸಂವಾದಗಳಾಗಲೀ ಸಾಹಿತ್ಯಕ ಅಜೆಂಡಾಗಳಾಗಲೀ ಇದ್ದಂತಿಲ್ಲ. ಅದು ಸಂರಚನೆಯಲ್ಲಿ ಸಾಹಿತ್ಯದ ಅಥವಾ ಬುದ್ಧಿಜೀವಿಗಳ ಸಮಾವೇಶವೇ ಆಗಿದ್ದರೂ ಅದರ ಚಾಲಕ ಶಕ್ತಿ ಪ್ರಕಾಶಕರದೇ ಆಗಿದೆ.

ಬೆಂಗಳೂರು ಸಾಹಿತ್ಯ ಹಬ್ಬದ (Bangalore Literature Festival – BLF) ಆರನೇ ಆವ್ರತ್ತಿ ಬೆಂಗಳೂರಿನ ಹೊಟೇಲ್ ಅಶೋಕಾದಲ್ಲಿ ವಾರಾಂತ್ಯಕ್ಕೆ ನಡೆಯಲಿದೆ. ಮುಖ್ಯಮಂತ್ರಿಗಳ ಮನೆಕಛೇರಿಯ ಜೊತೆ ಕಂಪೌಂಡ್ ಗೋಡೆ ಹಂಚಿಕೊಂಡಿರುವ ಹೊಟೇಲಿದು. ಅಲ್ಲೇ ರಸ್ತೆಯಾಚೆ ಹಚ್ಚ ಹಸಿರಿನ ಬೆಂಗಳೂರು ಗೋಲ್ಫ್ ಕ್ಲಬ್ ಹುಲ್ಲು ಹಾಸು.

ಎರಡು ವೇದಿಕೆಗಳು – ’ಧ್ವನಿಯೆತ್ತಿ’ (Speak Up) ’ಮಾತಾಡಿ’ (Speak Out) – ಅವೆರಡೂ ದೇಶದ ಸಮಕಾಲೀನ ಮನಸ್ಥಿತಿಯನ್ನು ಬಿಂಬಿಸುವಂತಹವೇ. ಅಲ್ಲಿ ನಡೆಯಲಿರುವ ಸುಮಾರು 47ವೈವಿಧ್ಯಮಯ ಪ್ಯಾನಲ್ ಚರ್ಚೆಗಳಲ್ಲಿ 120ಕ್ಕೂ ಹೆಚ್ಚು ಮಂದಿ ಮಾತನಾಡಲಿದ್ದಾರೆ. 15,000-20,000 ಮಂದಿ ಬೆಂಗಳೂರಿಗರು ಈ ಹಬ್ಬದಲ್ಲಿ ಪಾಲ್ಗೊಳ್ಳುವ ನಿರೀಕ್ಷೆ ಇದೆ. ನಿರೀಕ್ಷೆಯಂತೆಯೇ ಗೌರಿ ಲಂಕೇಶ್ ಅವರ ನೆನಪು ಈ ಹಬ್ಬದಲ್ಲಿ ಎದ್ದು ಕಾಣಲಿದ್ದು, ಆರಂಭಿಕ ಪ್ಯಾನಲ್ ಚರ್ಚೆಯೇ ಗೌರಿ ನೆನಪು ಮಾಡಿಕೊಡಲಿದೆ. ಭಾನುವಾರ, ಚಂದನ್ ಗೌಡ ಅವರು ಸಂಪಾದಿಸಿರುವ ಗೌರಿ ಲಂಕೇಶ್ ಅವರ ಬರಹಗಳ ಸಂಕಲನ – The Way I See It – A Gauri Lankesh Reader ಬಿಡುಗಡೆಯಾಗಲಿದೆ.

BLF ಹಿಂದಿನ ವರ್ಷಗಳಲ್ಲೂ ವಿವಾದಕ್ಕೆ ಗುರಿಯಾದದ್ದಿದೆ. ವಿಶೇಷವಾಗಿ 2015ರಲ್ಲಿ ಅಸಹನೆಯ ಕುರಿತಾಗಿ ಚರ್ಚೆ ನಡೆಯುತ್ತಿದ್ದಾಗ, BLFನ ಮೂಲ ಸ್ಥಾಪಕ ಸದಸ್ಯರಲ್ಲೊಬ್ಬರಾದ ವಿಕ್ರಮ್ ಸಂಪತ್ ಅವರ ಕೆಲವು ಮಾತುಗಳು ವಿವಾದವನ್ನು ಹುಟ್ಟಿಹಾಕಿದ್ದವು, ಸಂಪತ್ ಅವರು ಸಾಹಿತ್ಯ ಅಕಾಡೆಮಿ ಅಥವಾ ಭಾರತ ಸರ್ಕಾರ ನೀಡಿದ  ಅವಾರ್ಡ್ ಗಳನ್ನು ಹಿಂದಿರುಗಿಸಿದ ಭಾರತೀಯ ಲೇಖಕರನ್ನು ಟೀಕಿಸಿ ಮಾತನಾಡಿದ್ದರು.

ಆಗ ಮೂವರು ಕನ್ನಡ ಲೇಖಕರು ಆ ವರ್ಷದ BLF ನಾಲ್ಕನೇ ಆವ್ರತ್ತಿಯಲ್ಲಿ ಪಾಲ್ಗೊಳ್ಳುವುದರಿಂದ ಹಿಂದೆ ಸರಿದಿದ್ದರು. ವಿವಾದ ಬುಗಿಲೆದ್ದಾಗ, ಸ್ವತಃ ಸಂಪತ್ BLF ನಿರ್ದೇಶಕ ಹುದ್ದೆಗೆ ರಾಜೀನಾಮೆ ನೀಡಿದ್ದರು ಮತ್ತು ಆ ಬಳಿಕ BLFನ ಯಾವುದೇ ಚಟುವಟಿಕೆಗಳಲ್ಲಿ ಪಾಲ್ಗೊಂಡಿಲ್ಲ.

2015ರ ವಿವಾದ ಮೂಲಭೂತವಾಗಿ ಅಸಹನೆಯ ಬಗೆಗಿನ ಚರ್ಚೆಯದಾಗಿತ್ತಾದರೂ, ಅದರೊಂದಿಗೆ BLF ಆರಂಭದಿಂದಲೂ ಎದುರಿಸುತ್ತಿರುವ ಒಂದು  ಟೀಕೆ ಕೂಡ ಚರ್ಚೆಗೊಳಗಾಗುತ್ತಲೇ ಬಂದಿದೆ: BLFಪ್ರಾಥಮಿಕವಾಗಿ ಇಂಗ್ಲಿಷ್ ಭಾಷೆಯಲ್ಲಿ ನಡೆಯುತ್ತಿದ್ದು, BLF ಪ್ಯಾನಲ್ಲಿನಲ್ಲಿ  ಕನ್ನಡ ಭಾಷೆ ಮತ್ತು ಕನ್ನಡ ಲೇಖಕರನ್ನು ಒಳಗೊಳ್ಳುವುದು ಹೇಗೆ? ಎಂಬ ಬಗ್ಗೆ. ಅಲ್ಲಿ ಕನ್ನಡ ಸಾಹಿತ್ಯ ಸಂಸ್ಕ್ರತಿಯ ಅಥವಾ ಭಾಷಾ ಚಳವಳಿಯ ಮೂಲಭೂತ ಕಾಳಜಿಗಳನ್ನು BLF ಆಯೋಜಕರು ಮರೆತಿದ್ದಾರೆ ಎಂಬ ಬಗ್ಗೆ ಕನ್ನಡ ಲೇಖಕರು ಧ್ವನಿಯೆತ್ತಿದ್ದರು.

ಈತನಕದ ಎಲ್ಲ BLF ಆವ್ರತ್ತಿಗಳಲ್ಲೂ ಕನ್ನಡದ ಕುರಿತಾದ ಪ್ಯಾನಲ್ ಗಳು ಇದ್ದವಾದರೂ, ಅಲ್ಲಿ ಕನ್ನಡ ಲೇಖಕರ ಪಾಲ್ಗೊಳ್ಳುವಿಕೆ ಕೇವಲ ಸಾಂಕೇತಿಕವಾಗಿತ್ತು ಮತ್ತು ಕನ್ನಡ ಸಾಹಿತ್ಯದ ಸೂಕ್ಷ್ಮತೆಗಳ ಸಾವಯವ ಒಳಗೊಳ್ಳುವಿಕೆ ಇರಲಿಲ್ಲ. BLFಗೆ ಆಹ್ವಾನ ಪಡೆದ ಹೆಚ್ಚಿನ ಕನ್ನಡ ಲೇಖಕರು ಒಂದೋ ಅವರ ಕ್ರತಿಗಳು ಇಂಗ್ಲೀಷಿಗೆ ಭಾಷಾಂತರಗೊಂಡವರು ಇಲ್ಲವೇ ದ್ವಿಭಾಷಾ ಲೇಖಕರು. ತಕ್ಷಣ ಹೊಳೆಯುವ ಹೆಸರುಗಳೆಂದರೆ, ಚಂದ್ರಶೇಖರ ಕಂಬಾರರು, ವಿವೇಕ್ ಶಾನುಭಾಗ್ ಮತ್ತು ವಸುದೇಂದ್ರ. ಗಮನಿಸಬೇಕಾದ ಸಂಗತಿಯೆಂದರೆ, BLF ಒಳಸುತ್ತಿನ ತಂಡದಲ್ಲಿ ಕೂಡ ಕನ್ನಡ ಸಾಹಿತ್ಯ ಸಂಸ್ಕ್ರತಿಯ ಒಳಸುಳಿಗಳನ್ನು ಅರ್ಥಮಾಡಿಸಬಲ್ಲ ಯಾವುದೇ ಪ್ರಮುಖ ಕನ್ನಡ ಲೇಖಕರು ಇಲ್ಲ.

ಕನ್ನಡ ಸಾಹಿತ್ಯಲೋಕದಿಂದ ಈ ರೀತಿಯ ವಿಮರ್ಶೆಗಳು ಬಂದಾಗ, ಅದು BLF ಮತ್ತು ಅದೇ ರೀತಿ ಈಗೀಗ ದೇಶದ ಎಲ್ಲ ಪ್ರಮುಖ ಪಟ್ಟಣಗಳಲ್ಲಿ ನಡೆಯುತ್ತಿರುವ ಸಾಹಿತ್ಯದ ಹಬ್ಬಗಳಲ್ಲಿ ಸಾಹಿತ್ಯದ ಸ್ಥಾನ ಏನೆಂಬಂತಹ ಮತ್ತಿತರ ಹಲವು ಗಮನಾರ್ಹ ಪ್ರಶ್ನೆಗಳನ್ನು ಎತ್ತುತ್ತವೆ. BLF ಪ್ಯಾನಲ್ ಗಳಲ್ಲಿ ಹೇಗೆ ಸಾಹಿತ್ಯದ ಬದಲು  ರಾಜಕೀಯ, ಪತ್ರಿಕೋದ್ಯಮ, ಕ್ರೀಡೆ ಮತ್ತು ಸಿನಿಮಾರಂಗದ ಸೆಲೆಬ್ರಿಟಿಗಳು ದೊಡ್ಡ ಪ್ರಮಾಣದಲ್ಲಿ ಇರುತ್ತಾರೆ ಎಂಬ ಪ್ರಶ್ನೆ ಕನ್ನಡದಲ್ಲಿ ಮಾತ್ರವಲ್ಲದೆ ದೇಶದ ಎಲ್ಲೆಡೆಗಳಲ್ಲೂ ಎದ್ದಿದೆ.

ಇನ್ನೊಂದೆಡೆಯಲ್ಲಿ ಸಾಹಿತ್ಯವಲಯಕ್ಕೆ ಸೇರದವರೆಂದು ಆಪಾದಿಸಲಾಗುವವರು ಕೂಡ, ಈ ರೀತಿಯ ಹಬ್ಬಗಳಲ್ಲಿ ತಮ್ಮ ಪಾಲ್ಗೊಳ್ಳುವಿಕೆಯನ್ನು ಸಮರ್ಥಿಸಿಕೊಳ್ಳುತ್ತಿದ್ದಾರೆ. ಅಲ್ಲಿ ‘Jingoism vs Patriotism’ಬಗ್ಗೆ ಮಾತನಾಡಲಿರುವ ರಾಮಚಂದ್ರ ಗುಹಾ ಅವರು, ಎಕನಾಮಿಕ್ಸ್ ಟೈಮ್ಸ್ ಜೊತೆ ಮಾತನಾಡುತ್ತಾ “ ಸಾಹಿತ್ಯವನ್ನು ಬದುಕಿನಿಂದ ಬೇರ್ಪಡಿಸಿ ನೋಡಲಾಗುವುದಿಲ್ಲ. BLF ವೈವಿದ್ಯಮಯ ವಿಚಾರಗಳು ಮತ್ತು ಲೇಖಕರನ್ನು ಕರೆಸುತ್ತದೆ, ಅವುಗಳಲ್ಲಿ ಕೆಲವು ಸಂಗತಿಗಳಲ್ಲಿ ’ಸಾಹಿತ್ಯದ ಅಂಶ’ ಕಡಿಮೆ ಇರಬಹುದು, ಉಳಿದಂತೆ ಸಮಾಜ ಮತ್ತು ರಾಜಕೀಯದಲ್ಲಿ ಅಭಿಪ್ರಾಯಗಳ ವಿಸ್ತ್ರತ ಪಾತ್ರದ ಹುಡುಕಾಟದ ಕುರಿತು ಚರ್ಚೆ ನಡೆಯಬಹುದು.” ಎಂದಿದ್ದಾರೆ.

ಗುಹಾ ಅವರ ಹೇಳಿಕೆಗೆ ಸಹಮತ ಹೊಂದಿರುವವರು  ಕೂಡ BLF ಒಂದು ಘಟನೆಯಾಗಿ ಹೇಗೆ ಒಟ್ಟುನಿಲ್ಲುತ್ತದೆ ಎಂಬ ಬಗ್ಗೆ ಯೋಚಿಸಬೇಕಾಗುತ್ತದೆ. ಈ ವಾರಾಂತ್ಯಕ್ಕೆ, ಆಸಕ್ತರೊಬ್ಬರು ಪಾಲ್ಗೊಳ್ಳಬಹುದಾದ ಪ್ಯಾನಲ್ ಚರ್ಚೆಗಳ ವ್ಯಾಪ್ತಿಯನ್ನು ಗಮನಿಸಿ. ಗುಹಾ ಅವರು ಹೇಳಿದಂತೆ, ಕೆಲವು ಕಡಿಮೆ ಸಾಹಿತ್ಯದ ಅಂಶ ಹೊಂದಿರಬಹುದು. ಉದಾಹರಣೆಗೆ, ‘The World of A.K. Ramanujan’ ಅಥವಾ ‘Literary Fiction: An endangered species.’

ಸಾಹಿತ್ಯಾಸಕ್ತರಿಗೆ ಇನ್ನೂ ಕೆಲವು ಸಾಹಿತ್ಯೇತರ ಪುಸ್ತಕಗಳ ಬಗೆಗಿನ ಪ್ಯಾನಲ್ ತೋರಬಹುದು. ಆದರೆ ದೊಡ್ಡ ಸಂಖ್ಯೆಯಲ್ಲಿ ಸಮಕಾಲೀನ ಸಂಗತಿಗಳನ್ನು ಬಿಂಬಿಸುವ ಪ್ಯಾನಲ್ ಗಳನ್ನು ಆಯೋಜಿಸಲಾಗಿದೆ. ಉದಾಹರಣೆಗೆ, ‘Aadhaar: Dystopia or Utopia’, ‘Death by Litigation – The Perils of Business Reporting’ ಮತ್ತು ‘How India’s T20 World Cup Win changed Indian and World Cricket’.

ಇಂತಹ ಪ್ಯಾನಲ್ ಗಳಲ್ಲಿ ಪಾಲ್ಗೊಳ್ಳುತ್ತಿರುವ ಹಲವರು ಅವಕ್ಕೆ ಸಂಬಂಧ ಪಟ್ಟ ವಿಚಾರಗಳಲ್ಲಿ ಪುಸ್ತಕಗಳನ್ನು ಬರೆದವರಿದ್ದಾರೆ. ಉದಾಹರಣೆಗೆ, ಕ್ರಿಕೆಟ್ ಚರಿತ್ರಕಾರ ಗಿಡೆಯಾನ್ ಹೇಯ್ ಮತ್ತು ಟಿವಿ ಆಂಕರ್ ರಾಜದೀಪ್ ಸರ್ದೇಸಾಯಿ ಇತ್ತೀಚೆಗೆ ಕ್ರಿಕೆಟ್ ಕುರಿತು ಪುಸ್ತಕಗಳನ್ನು ಪ್ರಕಟಿಸಿದ್ದಾರೆ. ಕ್ರಿಕೆಟ್ ಪ್ಯಾನಲ್ ಗಳು ಅವರಾ ಪುಸ್ತಕಗಳನ್ನು ಚರ್ಚಿಸುವುದು ಸಹಜ. ಜೊತೆಗೆ ಅಲ್ಲಿ ಅನಿಲ್ ಕುಂಬ್ಲೆ ಮತ್ತು ರಾಹುಲ್ ದ್ರಾವಿಡ್ ಅವರಂತಹ ಸ್ಟಾರ್ ಆಕರ್ಷಣೆಯೂ ಇರುತ್ತದೆ. ಹೀಗೆ ಸಾಹಿತ್ಯೇತರ ಬರಹಗಳ ವ್ಯಾಪ್ತಿ ಎಷ್ಟು ಹಿಗ್ಗಿದಿದೆಂಬುದಕ್ಕೆ ಅಲ್ಲಿ ಪಾಲ್ಗೊಳ್ಳುತ್ತಿರುವ ಪ್ಯಾನಲಿಸ್ಟರ ವೈವಿದ್ಯತೆಯೇ ಸೂಚಕ. ಈ ವಾರಾಂತ್ಯಕ್ಕೆ ಅಲ್ಲಿ  ಮಾತುಗಾರರಾಗಿ ಪಾಲ್ಗೊಳ್ಳುತ್ತಿರುವವರಲ್ಲಿ ಜೈರಾಮ್ ರಮೇಶ್, ಅರುಣ್ ಮೈರ, ಹರದೀಪ್ ಸಿಂಗ್ ಪುರಿ, ನಿಧಿ ರಾಜ್ದಾನ್, ಸುಕೇತು ಮೆಹತಾ, ಟ್ವಿಂಕಲ್ ಖನ್ನಾ ಸೇರಿದ್ದಾರೆ.

ಹಾಗಿದ್ದರೆ, ಈ ಎಲ್ಲ ವೈವಿದ್ಯತೆಗಳು BLFನಲ್ಲಿ ಒಂದಾಗಿ ಕಾಣಿಸುವುದು ಹೇಗೆ? ಅದು ಕೇವಲ ಆ ಕ್ಯಾಲೆಂಡರ್ ವರ್ಷದಲ್ಲಿ ಪ್ರಮುಖ ಇಂಗ್ಲಿಷ್ ಪ್ರಕಾಶಕರು ಪ್ರಕಟಿಸಿದ ಪುಸ್ತಕಗಳಿಗೆ ಸಂಬಂಧಿಸಿದ್ದೆ? ನಾನುBLF ನ ಐದನೇ ಆವ್ರತ್ತಿಯಲ್ಲಿ ಪ್ಯಾನಲ್ ಚರ್ಚೆಯಲ್ಲಿ ಭಾಗವಹಿಸಿದ್ದೆ. ಅಲ್ಲಿ ಪಾಲ್ಗೊಳ್ಳುವವರ ಆಸಕ್ತಿ ಪ್ರಮಾಣಿಕವಾದದ್ದು ಮತ್ತು ಉತ್ಸಾಹ ಸ್ಪೂರ್ತಿಯುತವಾದದ್ದು ಎಂದು ನನಗನ್ನಿಸಿದೆ. ಆದರೆ ಇಡಿಯ ಹಬ್ಬ ಒಂದು ಕಟ್ಟಿನೊಳಗೆ ನಿಲ್ಲುವಲ್ಲಿ ಸೋತಿರುವುದು ಕೂಡ ಸಾಹಿತ್ಯಾಸಕ್ತರಿಗೆ ಎದ್ದು ಕಾಣುವಂತಿತ್ತು.

ಈ ರೀತಿ ದೂರ ನಿಲ್ಲುವುದಕ್ಕೆ ಕಾರಣಗಳು ಎರಡು. ಮೊದಲನೆಯದು, BLFನಲ್ಲಿ ಸಾಹಿತ್ಯಕ ಅಜೆಂಡಾಗಳು ಇದ್ದಂತೆ ಕಾಣುವುದಿಲ್ಲವಾದ್ದರಿಮ್ದ, ಅಲ್ಲಿ ಬೇರೆ ಪ್ರಾದೇಶಿಕ ಭಾಷಾ ಸಾಹಿತ್ಯ ಸಮ್ಮೇಳನಗಳಂತೆ ಸಾವಿರಗಟ್ಟಲೆ ಸಂಖ್ಯೆಯಲ್ಲಿ ಜನ ಪಾಲ್ಗೊಳ್ಳುವುದಿಲ್ಲ. ಎರಡನೆಯದು, BLF ಸಂರಚನೆಯಲ್ಲಿ ಸಾಹಿತ್ಯದ ಅಥವಾ ಬುದ್ಧಿಜೀವಿಗಳ ಸಮಾವೇಶವೇ ಆಗಿದ್ದರೂ ಅದರ ಚಾಲಕ ಶಕ್ತಿ ಪ್ರಕಾಶಕರದೇ ಆಗಿದೆ. ಈಗಾಗಲೇ ಹೆಸರು ಮಾಡಿರುವ ಮತ್ತು ಹೊಸ ಲೇಖಕರು ತಮ್ಮ ಪುಸ್ತಕಗಳ ಬಗ್ಗೆ ಪ್ರಚಾರ ನೀಡಲು ಈ ರೀತಿಯ ಹಬ್ಬಗಳಲ್ಲಿ ಪಾಲ್ಗೊಳ್ಳುತ್ತಾರೆ. ನಾನಿದನ್ನು BLFನಂತಹ ಸಾಹಿತ್ಯದ ಹಬ್ಬಗಳ ಸಾಮಾಜಿಕ ಗುಣಮಟ್ಟದ ದ್ರಷ್ಟಿಯಿಂದ ಹೇಳುತ್ತಿದ್ದೇನೆಯೇ ಹೊರತು, ಸೈದ್ಧಾಂತಿಕ ವಿಮರ್ಶೆಯ ದ್ರಷ್ಟಿಕೋನದಿಂದಲ್ಲ.

Leave a Reply