ರಾಜ್ಯೋತ್ಸವ ಸಂದರ್ಭದಲ್ಲಿ ಕೆ ವಿ ತಿರುಮಲೇಶ್ ಪ್ರಶ್ನೆಗಳು

ಕೆ.ವಿ. ತಿರುಮಲೇಶ್

ಎಲ್ಲರಿಗೂ ಕನ್ನಡ ರಾಜ್ಯೋತ್ಸವದ ಶುಭಾಶಯಗಳು!

ಈ ಸಂದರ್ಭದಲ್ಲಿ ನನ್ನ ಇಳಿವಯಸ್ಸಿನ ರಿಯಾಯಿತಿಯನ್ನು ಕೋರಿ ಒಂದೆರಡು ಮನದಾಳದ ಮಾತುಗಳನ್ನು ನಿಮ್ಮೊಡನೆ ಹಂಚಿಕೊಳ್ಳಲು ಬಯಸುತ್ತೇನೆ:

1.      ಕನ್ನಡ ಕನ್ನಡ ಎಂದು ಕನ್ನಡದ ಮೇಲಿನ ಆಸಕ್ತಿ ಪ್ರದರ್ಶಿಸುವ ಜನ, ಮುಖ್ಯವಾಗಿ ಮಾಧ್ಯಮದವರು, ನಿಜಕ್ಕೂ ಕನ್ನಡದಲ್ಲಿ ಆಸಕ್ತರಾಗಿದ್ದಾರೆಯೇ? ಕನ್ನಡ ಭಾಷೆಯ ಬಗ್ಗೆ (ಲಿಪಿ, ಧ್ವನಿ, ಪದ, ವಾಕ್ಯ, ವ್ಯುತ್ಪತ್ತಿ, ಇತ್ಯಾದಿ) ಲೇಖನ ಬರೆದರೆ—ಹಾಗೆ ಬರೆಯುವವರೇ ಕಡಿಮೆ, ಒಂದು ವೇಳೆ ಬರೆದರೆ–ಅದನ್ನು ಪ್ರಕಟಿಸುವ ಮಾಧ್ಯಮಗಳೇ ಇಲ್ಲ ಎನ್ನುವುದು ನಿಮಗೆ ಗೊತ್ತಿದೆಯೇ?

2.     ಲೇಖಕರ ಕುರಿತಾಗಿ ಕನ್ನಡಿಗರಲ್ಲಿ ಎಷ್ಟೊಂದು ತಾರತಮ್ಯ ಭಾವನೆಗಳು! ಕತೆಗಾರರೆಂದರೆ ಇಂತಿಂಥವರು, ಕವಿಗಳೆಂದರೆ ಇಂತಿಂಥವರು ಎಂದು ಯಾದಿಯೊಂದನ್ನು ಸೃಷ್ಟಿಸಿ ಆಗಿದೆ; ಅದರ ಹೊರಗಿನವರು ಕಣ್ಣಿಗೆ ಬೀಳುವುದೇ ಇಲ್ಲ.

3.     ಕೆಲವು ಘನವಂತ ಲೇಖಕರ ಪುಸ್ತಕಗಳು ಪ್ರಕಟವಾಗುವ ವೇಳೆಗೆ (ಅಥವಾ ಅವು ‘ಬಿಡುಗಡೆ’ಯಾಗುವ ದಿನ) ಅವುಗಳ ಕುರಿತು ಕನ್ನಡದ ಪ್ರಮುಖ ಪತ್ರಿಕೆಗಳಲ್ಲಿ ಪ್ರಶಂಸೆಯ ಲೇಖನಗಳು—ಅವೂ ಪ್ರಮುಖ ಲೇಖಕರಿಂದ–ಬರುತ್ತವಲ್ಲ! ಇದು ಹೇಗೆ ಸಾಧ್ಯ? ಇದಕ್ಕೆ ವ್ಯತಿರಿಕ್ತವಾಗಿ ಇನ್ನಿತರರ ಕೃತಿಗಳ ಬಗ್ಗೆಸುದ್ದಿಯೇ ಕಾಣಿಸುವುದಿಲ್ಲ. ಯಾಕೆ ಹೀಗೆ?

4.    ಲೇಖಕ ತನ್ನ ಪುಸ್ತಕಗಳ ಪ್ರಚಾರಕನೂ ಆಗಬೇಕೇ?! ಅಥವಾ ಜನಪ್ರಿಯತೆಯ ಗುಂಪು ಕಟ್ಟಿಕೊಳ್ಳಬೇಕೇ? ಅಭಿಮಾನಿ ಸಂಘ?

5.     ‘ಬಿಡುಗಡೆ’ (‘ಲೋಕಾರ್ಪಣೆ’—ನಿಮ್ಮ ಉಪಹಾರ ನಮ್ಮಲ್ಲಿ) ಇಲ್ಲದೆ ಪುಸ್ತಕವೊಂದು ಮಾರುಕಟ್ಟೆಗೆ ಬರುವುದು ಸಾಧ್ಯವಿಲ್ಲವೇ?

6.    ಪುಸ್ತಕವೊಂದು ಸಹಜವಾಗಿ ಎಂಬಂತೆ ಓದುಗರ/ ವಿಮರ್ಶಕರ ಕಣ್ಣಿಗೆ ಬಿದ್ದು ಅವರು ಅದನ್ನು ಓದುವ, ಇತರರಿಗೆ ಹೇಳುವ ಒಂದು ವಾತಾವರಣ ಇದ್ದರೆ ಒಳ್ಳೆಯದಲ್ಲವೇ? ಓದುವವರೇ ಇಲ್ಲ!

7.     ಇನ್ನು ಪುಸ್ತಕಪ್ರಕಟಣೆ ಎಂಬ ಚಕ್ರವ್ಯೂಹದ ಬಗ್ಗೆ ಏನು ಹೇಳಲಿ? ಅದರ ಘೋರ ಅನುಭವಗಳನ್ನು (ನಿಜಕ್ಕೂ ಅವಮಾನಗಳನ್ನು) ಅನುಭವಿಸಿದವರೇ ಬಲ್ಲರು.

***

ನಿಮಗೆ ಇಷ್ಟವಿದ್ದರೆ ನಿಮ್ಮಲ್ಲಿ ಹಂಚಿಕೊಳ್ಳುವುದಕ್ಕೆ ನನ್ನಲ್ಲಿ ಅನೇಕ ವಿಷಯಗಳಿವೆ. ಆದರೆ ಸತ್ಯವನ್ನು ಮರೆಮಾಚುವ ಶಿಷ್ಟಾಚಾರ (ಫ್ರಾಯ್ಡಿಯನ್ ಈಗೋ ಮತ್ತು ಸೂಪರ್ ಈಗೋ) ಎನ್ನುವುದೊಂದು

ಇದೆಯಲ್ಲ; ಅದರಿಂದ ಬಾಯಿ ಮುಚ್ಚಿ ಕುಳಿತಿದ್ದೇನೆ. ಇಷ್ಟು ಹೇಳಿದ್ದೇ ಹೆಚ್ಚಾಯಿತೇನೊ. ಅದೂ ಅಲ್ಲದೆ, ನಾನು ಎಷ್ಟಾದರೂ ಅನ್ಯ ಎನ್ನುವುದು ನನಗೆ ಗೊತ್ತಿದೆ. ನನ್ನನ್ನು ‘ನಮ್ಮವ’ನೆಂದು ನೋಡಿಕೊಂಡವರು ಕಡಿಮೆ. ‘ಯಾರೋ ನೀನು?’ ಎಂದರೆ ನನ್ನಲ್ಲಿ ಉತ್ತರವಿಲ್ಲ.

ಕನ್ನಡ ನಿಮ್ಮದು (ನನ್ನದೊಂದು ಪುಸ್ತಕಕ್ಕೆ ಪ್ರೀತಿಯಿಂದ “ನಮ್ಮ ಕನ್ನಡ” ಎಂದು ಹೆಸರಿಟ್ಟಿದ್ದೆ, ಅದಕ್ಕೆ ಕ್ಷಮೆಯಿರಲಿ!), ಕರ್ನಾಟಕ ನಿಮ್ಮದು, ರಾಜ್ಯೋತ್ಸವ ನಿಮ್ಮದು. ನೀವು ಹೇಗಿರಬೇಕೆನ್ನುವುದು ನಿಮಗೆ

ಬಿಟ್ಟದ್ದು –ಎಂದು ನನಗೆ ಅನಿಸುವ ಹಾಗಾಗದಿರಲಿ.

 

8 Responses

 1. Girijashastry says:

  ಎಲ್ಲಾ ಹೊರನಾಡ ಕನ್ನಡಿಗರ ಸ್ಥಿತಿಯಲ್ಲಿ ವತ್ಯಾಸವೇನೂ ಇಲ್ಲ. ಮುಂಬೈ ಗೆ ಬರುವ ಒಳನಾಡಿನ ಪ್ರಮುಖ ಲೇಖಕರು ಇವರ ಆತಿಥ್ಯವನ್ನು ಇನ್ನಿಲ್ಲದಂತೆ ಹೊಗಳಿ, ಇಲ್ಲಿಯ ಶ್ರೀಮಂತರ ವಾಹನಗಳಲ್ಲಿ ‘ಮುಂಬೈ ದೇಖೋ’ ಮಾಡಿ, ಇಲ್ಲಿನ ಸಾಹಿತಿಗಳಿಗೆ,
  ಸಂಘ ಸಂಸ್ಥೆಗಳಿಗೆ ಅನೇಕ ಆಶ್ವಾಸನೆಗಳನ್ನು ನೀಡಿ, ಕಲ್ಯಾಣ್ (ಮುಂಬೈ ಹೊರಗಡಿಯ ರೈಲು ನಿಲ್ದಾಣ) ದಾಟಿದ ಆನಂತರ ಮರೆತೇ ಬಿಡುತ್ತಾರೆ. ಬೆಂಗಳೂರಿನಲ್ಲಿ ಅಕಸ್ಮಾತ್ ಸಿಕ್ಕಿದರೆ ಅಪರಿಚಿತರಂತೆ ಮಿಕಿ ಮಿಕಿ ಕಣ್ಣು ಬಿಡುತ್ತಾರೆ.
  ಕನ್ನಡವನ್ನು ನಾವು ಎಷ್ಟು ಚೆನ್ನಾಗಿ ಬಳಸಿಕೊಳ್ಳುತ್ತಿದ್ದೇವೆ!!!!!!!
  ಜೈಕನ್ನಡಾಂಬೆ
  ಸಿರಿಗನ್ನಡಂ ಗೆಲ್ಗೆ ಸಿರಿಗನ್ನಡಂ ಬಾಳ್ಗೆ

 2. C P Nagaraja says:

  ಮಾನ್ಯಶ್ರೀ ಕೆ.ವಿ.ತಿರುಮಲೇಶ್ ಅವರಿಗೆ ನಮಸ್ಕಾರಗಳು.
  ” ನಾನು ಎಷ್ಟಾದರೂ ಅನ್ಯ ಎನ್ನುವುದು ನನಗೆ ಗೊತ್ತಿದೆ. ನನ್ನನ್ನು ‘ನಮ್ಮವ’ನೆಂದು ನೋಡಿಕೊಂಡವರು ಕಡಿಮೆ. ‘ಯಾರೋ ನೀನು?’ ಎಂದರೆ ನನ್ನಲ್ಲಿ ಉತ್ತರವಿಲ್ಲ.” ಎಂಬ ನಿಮ್ಮ ಈ ನುಡಿಗಳನ್ನು ಹೊರತುಪಡಿಸಿ , ನೀವು ಹೇಳಿರುವ ಸಂಗತಿಗಳೆಲ್ಲವೂ ಸರಿಯಾಗಿದೆ.
  ನಾನು ಎಪ್ಪತ್ತು ವರ್ಷ ದಾಟಿದ್ದೇನೆ. ಈ ಇಳಿವಯಸ್ಸಿನಲ್ಲಿ ಇಂತಹ ಮಾತುಗಳನ್ನು ನಮಗೆ ನಾವೇ ಹೇಳಿಕೊಳ್ಳುವುದರಿಂದ ಮತ್ತಷ್ಟು ಕುಗ್ಗಿಹೋಗುತ್ತೇವೆ.
  ಯಾರೋ ನೀನು ಎಂದರೆ ನನ್ನಲ್ಲಿ ಉತ್ತರವಿಲ್ಲ ಎಂದಿದ್ದೀರಿ . ಆದರೆ ಜನಸಾಮಾನ್ಯರಾದ ನಮಗೆ ಉತ್ತರ ತಿಳಿದಿದೆ ” ಕೆ.ವಿ.ತಿರುಮಲೇಶ್ ಎಂಬುವರು ಸದಾಕಾಲ ಕನ್ನಡ ನುಡಿ, ಕನ್ನಡ ಸಾಹಿತ್ಯ ಮತ್ತು ಕನ್ನಡ ಜನಮನದ ಬಗ್ಗೆ ಚಿಂತಿಸುವ ಒಬ್ಬ ವ್ಯಕ್ತಿಯೆಂದು ” . ಜನಸಾಮಾನ್ಯರ ಮನದಲ್ಲಿ ಪಡೆದಿರುವ ಈ ಬಗೆಯ ಪ್ರೀತಿಗಿಂತಲೂ ದೊಡ್ಡದು ಯಾವುದು?
  ಸಿ ಪಿ ನಾಗರಾಜ

 3. sumithra l c says:

  neevu helhiddu nija sir

 4. Harsha says:

  Very true. Kannada literature is dominated by few people in Bangalore. Shopes like Ankitha who is known for their arrogance hardly sell books if the authore or publisher is from costal.

 5. Sathyakama Sharma K says:

  ನಿಮ್ಮ ಬರಹ ಕಾಣಿಸಿದರೆ ಅದನ್ನು ನಾನು ತಕ್ಷಣ ಓದಿ ಮುಗಿಸುತ್ತೇನೆ. ನಿಮ್ಮ ಅಂಕಣ ಪ್ರತಿ ಶುಕ್ರವಾರ ‘ವಿಜಯ ಕರ್ನಾಟಕ’ ದಲ್ಲಿ ಮೂಡಿ ಬರುತ್ತಿದ್ದಾಗ, ನಾನು ‘ನಾಚಿಕೆ ಬಿಟ್ಟು’ ಮನೆ ಮಾಲೀಕನ ಕೈಯಿಂದ ‘ವಿ ಕೆ’ ಯ ಪ್ರತಿಯನ್ನು ಕೇಳಿ ಪಡೆದು ಓದುತ್ತಿದ್ದೆ ( ಅವರು ಸಿನಿಮಾ ಪುರವಣಿ ಗಾಗಿ ಇವನು ಇದನ್ನು ಕೇಳುತ್ತಿದ್ದಾನೆ ಅಂದು ಕೊಳ್ಳುತ್ತಾರೆ ಎಂಬ ಮುಜುಗರ ನನಗೆ!). ನಿಮ್ಮ ಫಾನ್ಸ್ ( ನಾನು ಅಭಿಮಾನಿ ಎಂಬ ಪದವನ್ನು ತಾತ್ವಿಕವಾಗಿ ವಿರೋಧಿಸುತ್ತೇನೆ) ನಿಮ್ಮ ಹಾಗೆ ‘ಗುಪ್ತ ಗಾಮಿನಿ’ಯಾಗಿ ಇರುತ್ತಾರೆ, ನೆನಪಿಡಿ! ನೀವು ಎತ್ತಿರುವ ಪ್ರಶ್ನೆಗಳಿಗೆ ಸಾವಕಾಶವಾಗಿ ಉತ್ತರಿಸುತ್ತೇನೆ-ಇವು ‘ನಿಮ್ಮೊಡನಿದ್ದೂ ನಿಮ್ಮಂತಾಗದ ನನ್ನಂತವನನ್ನು’ ಕೂಡಾ ಕಾಡಿವೆ – ಆದುದರಿಂದ. ಈಗಲೇ ಉತ್ತರಿಸಿದರೆ ‘ಇಂಪಲ್ಸಿವ್’ ಆಗಿ ಬಿಡುವ ಅಪಾಯವಿದೆ. ಸದ್ಯಕ್ಕೆ ಈ ಒಂದು ಪ್ರಶ್ನೆ ಸಾಕು- ಕಳಪೆ ಮೂರನೇ ದರ್ಜೆ ಚಲನಚಿತ್ರಗಳನ್ನು ತಯಾರಿಸಿ ಕನ್ನಡದ ಮಾನ ಹರಾಜು ಹಾಕುವವರಿಗೆ ನೀಡುವ ಸಬ್ಸಿಡಿ, ಕನ್ನಡ ಬರಹಗಾರರಿಗೆ, ಸುಗಮ ಸಂಗೀತಗಾರರಿಗೆ, ಯಕ್ಷಗಾನ ಕಲಾವಿದರಿಗೆ ಯಾಕಿಲ್ಲ?

 6. kvtirumalesh says:

  ಇಲ್ಲಿ ಸ್ಪಂದಿಸಿದ ಎಲ್ಲರಿಗೂ ಕೃತಜ್ಞತೆಗಳು!
  ನಾನು ಭಾವುಕನಾಗಿ ಆಡಿದ ಮಾತುಗಳು ಅತಿಯೆನಿಸಿದರೆ ನನ್ನನ್ನು ಕ್ಷಮಿಸಿ.
  ಯಾರನ್ನೂ ಆಕ್ರಮಿಸುವುದು ನನ್ನ ಉದ್ದೇಶವಲ್ಲ. ಕನ್ನಡ ನಡೆನುಡಿಯ ಸಂಸ್ಕೃತಿ
  ಸ್ವಚ್ಛವಾಗಿರಲಿ ಎನ್ನುವುದೇ ನನ್ನ ಹಾರೈಕೆ. ಅದೀಗ ಅಸಹ್ಯಕರವಾಗಿ ನನಗೆ
  ಕಾಣಿಸುತ್ತಿರುವುದರಿಂದ ಹೀಗೆ ಬರೆದೆ. ಗುಂಪುಗಾರಿಕೆ, ವಶೀಲಿ, ಶಕ್ತಿಕೇಂದ್ರಗಳು,
  ಅವ್ಯಕ್ತ ಭಯ, ಯಾವ ಯಾವುದೋ ಅನಪೇಕ್ಷಿತ ಒತ್ತಡ ಇರುವಲ್ಲಿ ಸಾಹಿತ್ಯ
  ಹುಟ್ಟುವುದು ಹೇಗೆ? ಇದೆಲ್ಲವನ್ನೂ ಧಿಕ್ಕರಿಸಿದರೆ ಅದಕ್ಕೆ ಬೆಲೆ ತೆರಬೇಕಾಗುತ್ತದಲ್ಲ
  ಎನ್ನುವುದು ನನ್ನ ನೋವು. ನನ್ನೊಬ್ಬನದೇ ಅಲ್ಲ, ನಿಮ್ಮೆಲ್ಲರದೂ ಹೌದು. ಇಂಥ
  ಯೋಚನೆ ನಮ್ಮನ್ನು ಕುಗ್ಗಿಸುತ್ತದೆ ಎನ್ನುವುದೂ ನಿಜ.
  ಸತ್ಯಕಾಮ ಹೇಳಿದ ‘ಗುಪ್ತಗಾಮಿನಿ’ ಎಂಬ ಮಾತು ಚಲೋದಾಗಿದೆ. ನಾನು ಹಾಗಿರಲು
  ಪ್ರಯತ್ನಿಸುವೆ.
  ಕೆ.ವಿ. ತಿರುಮಲೇಶ್

 7. BELURU RAMAMURTHY says:

  ನೀವು ಬರೆದಿರುವುದು ಎಲ್ಲ ಸತ್ಯವಾಗಿದೆ. ನಮ್ಮ ಪ್ರಕಾಶನ ಪ್ರಪಂಚದ ಆಗುಹೋಗುಗಳನ್ನು ಗಮನಿಸುತ್ತಾ ಬಂದರೆ ಕೆಲವೇ ಕೆಲವು ಲೇಖಕರು ಮಾತ್ರ ಪುಸ್ತಕ ಪ್ರಕಟಣೆ, ರಾಯಧನ, ಬಿಡುಗಡೆ ಸಮಾರಂಭ, ಪುಸ್ತಕ ಪರಿಚಯ, ಇವುಗಳ ಭಾಗ್ಯ ಕಾಣುತ್ತಿದ್ದಾರೆ. ಅಂಥವರ ಪುಸ್ತಕ ಬಿಡುಗಡೆಗೆ ಅವರವರನ್ನೇ ಹೊಗಳುವ ಮಂದಿಯೂ ಇರುತ್ತಾರೆ. ಇನ್ನು ಆಂಥವರ ಪುಸ್ತಕಗಳನ್ನು ಪ್ರಕಟಿಸುವ ಪ್ರಕಾಶಕರನ್ನು ಕೇಳಿದರೆ ಇವರ ಪುಸ್ತಕ ಬಹುಬೇಕ ಖರ್ಚಾಗುತ್ತದೆ ಎನ್ನುತ್ತಾರೆ. ಇಲ್ಲಿ ಪ್ರಕಾಶಕರು ಮತ್ತು ಲೇಖಕರ ನಡುವೆ ಏನೋ ಇರಬಹುದೇ ಎನ್ನುವ ಅನುಮಾನ ನಮ್ಮ ಅನೇಕ ಲೇಖಕರನ್ನು ಕಾಡಿದೆ. ಅವರುಗಳು ಅನೇಕ ಕಡೆ ಇವುಗಳನ್ನು ಹಂಚಿಕೊಂಡಿದ್ದಾರೆ. ಪುಸ್ತಕೋದ್ಯಮ ಇಂದು ಮೊದಲಿನಂತಿಲ್ಲ, ಪುಸ್ತಕಗಳನ್ನು ಕೊಂಡು ಓದುವವರು ಕಡಿಮೆ, ಗ್ರಂಥಾಲಯಗಳು ನಿಷ್ಕ್ರಿಯವಾಗಿವೆಯೇನೋ ಎನ್ನುವಷ್ಟು ಅನುಮಾನ ತರುತ್ತಿದೆ. ಹೀಗಿರುವಾಗ ಪ್ರಕಾಶಕರು ಹೊಟ್ಟೆ ಪಾಡಿಗಾಗಿ ತಮ್ಮ ದಾರಿಯನ್ನು ತಾವೇ ಕಂಡುಕೊಂಡರೆ ಅದರಲ್ಲಿ ತಪ್ಪಿಲ್ಲ ಎನಿಸುತ್ತದೆ.

 8. N. Ramanath says:

  ಕನ್ನಡದ ಯಾವುದೇ ಪುಸ್ತಕವನ್ನು, ಯಾವುದೇ ಮೂಲೆಯಲ್ಲಿರುವವರು ಬರೆದರೂ ಕೊಂಡು ಓದಲು, ಪ್ರಕಟಿಸಲು ನಾನು ತಯಾರಿದ್ದೇನೆ..ಲೇಖಕರೇ ಬರೆದುದಾರೂ ಸರಿ, ಅವರ ಹಿಂದಿನ ತಲೆಮಾರಿನವರು ಬರೆದು ಪ್ರಕಟವಾಗದುದು ಅಥವಾ ಪ್ರಕಟವಾಗಿ ನಂತರ ಮೂಲೆ ಸೇರಿದುದು ಆದರೂ ಸರಿ. ಯುವ ಬರಹಗಾರರನ್ನು (ಬರಹದಲ್ಲಿ ಯೌನವದಲ್ಲಿರುವವರು, ವಯಸ್ಸಿನಿಂದ ತೊಂಬತ್ತೂ ಆಗಿರಬಹುದು) ಪರಿಚಯಿಸುವುದು ನಮ್ಮ ಪ್ರಕಾಶನದ ಧ್ಯೇಯ.

Leave a Reply

%d bloggers like this: