ಗಾಂಧಿಬಜಾರಿನ ಹುಡುಗಿ

 

 

 

 

ಸಂದೀಪ್ ಈಶಾನ್ಯ

 

 

 

ನೀನು ಪ್ರತಿ ಇರುಳು ಹಾಸಿಗೆಯ ಮೇಲೆ ನಿರಾಳವಾಗಿ ಸುಳ್ಳುಗಳನ್ನು ಕಟ್ಟುವಂತೆ
ಕೇವಲ ಚಹಾವೊಂದಕ್ಕೆ
ಮುದುಕಿಯೊಬ್ಬಳು ನಾನು ಕಾವ್ಯ ಬರೆದು ಪ್ರಕಟಿಸಿದ
ಪತ್ರಿಕೆಯಲ್ಲಿ ಅಷ್ಟೇ ನಿರಾಳವಾಗಿ ಹೂ ಕಟ್ಟಿ ಕೊಡುತ್ತಾಳೆ

ಗಾಂಧಿಬಜಾರಿನ ರಸ್ತೆಗಳಲ್ಲಿ ಭೋರೆಂದು ಸುರಿವ
ಮಳೆಗೆ ಆಗಷ್ಟೇ ಹೆಜ್ಜೆಯೂರುವುದ ಕಲಿತ
ಕೆಂಗರುವಿನಂತೆ ನೀನು ಹೆಜ್ಜೆಗಳನು ಸಲೀಸಾಗಿ
ಮೂಡಿಸುತ್ತ ನಡೆಯುವಾಗ ಬೀದಿ ಕಡೆಯಲಿ ಪಾನಿಪೂರಿ ಮಾರುವ ರಾಜಸ್ಥಾನದ ಹುಡುಗ ತಪ್ಪಿ ತುಳಿದ ನಕಾಶೆಯನ್ನು ನೆನೆಯುತ್ತಾನೆ

ನಿನ್ನ ಖಾಲಿ ಬೆನ್ನಿನ್ನ ಮೇಲೆ ನಾನು ಉಗುರಿನ ಗುರುತುಗಳಿಂದ
ಬರೆದ ಹತ್ತಾರು ಅದೃಶ್ಯ ಪದ್ಯಗಳು ಮುಂದಿನ ನಮ್ಮ ಭೇಟಿಯ ದಿನದಂದೇ ಸಂಕಲನವಾಗಿ ಬಿಡುಗಡೆಗೊಳ್ಳಲಿವೆಯಂತೆ
ಅಣಿಯಾಗು

ನಿನ್ನ ತುಟಿಗಳನು ಮಿತವಾಗಿ ಒದ್ದೆಗೊಳಿಸಲು
ಹವಣಿಸಿದ ಹಿಂದಿನ ಅಷ್ಟೂ ದಿನಗಳನು ಒಬ್ಬನೇ ನೆನೆದು ಸವಿಯುತ್ತಿರುವಾಗ
ಕಳೆದ ರಾತ್ರಿಯ ಮಳೆಗೆ ಅರಳಿದ ಪಾರಿಜಾತದ ಹೂಗಳು
ಕನವರಿಕೆಯಂತೆ ನಾಶವಾಗುತ್ತವೆ

ಗಾಂಧಿಬಜಾರಿನ ಹುಡುಗಿ
ನಿನ್ನ ಸೂಕ್ಷ್ಮ ಕಣ್ಚಲನೆ ಚಲಿಸುವಷ್ಟು ದೂರಕ್ಕೆ
ನಾನು ಕಾಲ್ನಡಿಗೆಯಲ್ಲೂ ಚಲಿಸಲಾಗುವುದಿಲ್ಲ ಎನ್ನುವುದನ್ನು ಅರಿತುಕೊಂಡಿದ್ದೇನೆ

ಗತಕಾಲದ ಕಲಾವಿದನೊಬ್ಬ ಬರೆದ ನಗ್ನ ಚಿತ್ರವೊಂದರ
ಪಳೆಯುಳಿಕೆಯಂತೆ ಆಗಾಗ ಎದುರಾಗುವ ಮೊದಲು
ಒಂದಿಷ್ಟು ಆಲೋಚಿಸು
ನಾನಿಲ್ಲಿ ನಿನಗೆಂದು ಬರೆದ ಪದ್ಯಗಳ ಹಾಳೆಯಲ್ಲೇ
ಇದೇ ಗಾಂಧಿಬಜಾರಿನ ಹೂ ಮಾರುವ ಮುದುಕಿ
ನಿರರ್ಗಳವಾಗಿ ಹೂ ಕಟ್ಟುತ್ತಿದ್ದಾಳೆ

 

4 Responses

 1. kalkesh goravar says:

  super poem sir

 2. Chidambar Nanavate says:

  ಅದ್ಭುತವಾಗಿದೆ

 3. Vasudev nadig says:

  ಮರೆಯಲಾಗದ ಹುಡುಗಿ ಮತ್ತು ಪದ್ಯ

 4. kaligananath Gudadur says:

  ನಿನ್ನ ಖಾಲಿ ಬೆನ್ನಿನ್ನ ಮೇಲೆ ನಾನು ಉಗುರಿನ ಗುರುತುಗಳಿಂದ
  ಬರೆದ ಹತ್ತಾರು ಅದೃಶ್ಯ ಪದ್ಯಗಳು ಮುಂದಿನ ನಮ್ಮ ಭೇಟಿಯ ದಿನದಂದೇ
  ಸಂಕಲನವಾಗಿ ಬಿಡುಗಡೆಗೊಳ್ಳಲಿವೆಯಂತೆ ಅಣಿಯಾಗು
  ………..
  ಅದ್ಭುತ ಪದ್ಯ

Leave a Reply

%d bloggers like this: