ಧಾರವಾಡದಲ್ಲೊಂದು ಕೂಡಲಸಂಗಮ..

 

 

 

ರಾಜಕುಮಾರ ಮಡಿವಾಳರ 

 

 

 

 

ಧಾರವಾಡವೆಂಬ ಚೆಲುವೆಯ ನಡು ನೆತ್ತಿಯ ಬೈತಲೆಯಂತೆ ಇರುವುದು ರಾಷ್ಟ್ರೀಯ ಹೆದ್ದಾರಿ-೪ (NH-4).

ಉತ್ತರ ಕರ್ನಾಟಕದ ಕನ್ನಡ ಜವಾರಿ ಕನ್ನಡ, ಜನಪದ ಕನ್ನಡ, ಗಟ್ಟಿ ಕನ್ನಡ, ಗಡಸು ಕನ್ನಡ, ಒರಟು ಕನ್ನಡ ಇತ್ಯಾದಿಯಾಗಿ ಗುರುತಿಸಿಕೊಂಡಿದೆಯಾದರೂ ಧಾರವಾಡ ಕನ್ನಡವೇ ವಿಶಿಷ್ಟ ಮತ್ತು ಧಾರವಾಡದಲ್ಲೇ ಎರಡು ರೀತಿಯ ಕನ್ನಡ ಇರುವುದು ಇನ್ನೊಂದು ವೈಶಿಷ್ಟ್ಯ.

ಹೊಕ್ಕೇತಿ
ಬರತೈತಿ
ಅದಾನ
ಬರತಾನ
ಇದು ಈ ಕಡೆ ಹಳಿಯಾಳ, ದಾಂಡೇಲಿ ರಸ್ತೆಯ ಅಂದ್ರೆ ಹೆದ್ದಾರಿಯ ಈ ಕಡೆ ಭಾಗದ ಮಾತಾದರೆ,

ಹೋಗಲಿಕತ್ಹೇದ
ಬರಲಿಕ್ಕತ್ಹೇದ
ಹಾನ
ಬರಲಿಕ್ಕತ್ಹ್ಯಾನ

ಆ ಕಡೆಯ ಧಾರವಾಡವನ್ನ ಪೂರ್ಣ ಪ್ರಮಾಣದಲ್ಲಿ ಅರ್ಧದಷ್ಟು ಚಾಚಿಕೊಂಡಿರುವ ದೊಡ್ಡ ಮತ್ತು ಅಖಂಡವಾಗಿ ಈ ಕಡೆ ಗಾಂಧೀಚೌಕದಿಂದ ಆಕಡೆ ಜೆಎಸ್ಸೆಸ್ ಕಾಲೇಜಿನವರೆಗೆ ಬೃಹತ್ತಾಗಿರುವ ಹೊಸಯಲ್ಲಾಪೂರ ಓಣಿ.

ಈ ಓಣಿಯ ದಾರಿಗುಂಟಲೆ ಬೇಂದ್ರೆ ಹುಟ್ಟಿದ ಕಾಮನಕಟ್ಟಿ, ಗಂಗವ್ವಜ್ಜಿಯ ಮನೆ, ಲಕ್ಷ್ಮೀ ನರಸಿಂಹ ದೇವಸ್ಥಾನ.

ಧಾರವಾಡದ ಈ ಓಣಿಯ “ಉಪ ಓಣಿಗಳು”! ಅನ್ನಬಹುದಾದ ಓಣಿಗಳ ನಾಮ ಫಲಕ ಈ ಕೆಳಗಿನ ಚಿತ್ರಗಳು.

ಕುಲ ಕಸುಬಿಗನುಸಾರವಾಗಿ ಓಣಿಗಳ ಹೆಸರು,
ಇಂತಹ ಇನ್ನೂ ಹತ್ತಾರು ಓಣಿಗಳಿಂದ ಕೂಡಿ ಏಕವಾಗಿ ಬೆಳೆದಿರುವ ಹೊಸಯಲ್ಲಾಪೂರದ ಹಬ್ಬದಾಚರಣೆಗಳು ಕೂಡ ಉಳಿದ ಧಾರವಾಡಕ್ಕಿಂತ ವಿಭಿನ್ನ.
ಇವಲ್ಲದೆ “#ರೈಟರ್_ಗಲ್ಲಿ” ಅನ್ನುವ ವಿಶಿಷ್ಟ ಹೆಸರಿನ ಓಣಿ ಬರೆಯುವವರೆ ತುಂಬಿದ ಓಣಿಯ ಹೆಸರಿದು!

ಈಗ ಸಾಕಷ್ಟು ಜನ ನೌಕರಿಗೆ ತೊಡಗಿದ್ದರೂ ಸಹ ಈ ಕುಲಕಸುಬಿಗನುಸಾರವಾಗಿ ಆ ಕಸುಬಿನವರು ಸಾಲುಸಾಲು ಮನೆ ಇಲ್ಲಿ ಕಾಣಬಹುದು. ಬಸ್ತಿ ಓಣಿ(ಬಸದಿ ಓಣಿ) ಪ್ರಾಯಶಃ ಇತ್ತಿಚಿನದಿರಬೇಕು? ಜೈನ ಸಮುದಾಯದವರ ಓಣಿ ಇದು.

ಈ ಎಲ್ಲ ಓಣಿಗಳು ಒಟ್ಟಾಗಿ ಒಂದಾಗಿ ಕಂಗೊಳಿಸುವ ಹೊಸಯಲ್ಲಪೂರದಲ್ಲಿ ನಾನು ಸುತ್ತಾಡುವಾಗೆಲ್ಲ ಕೂಡಲಸಂಗಮದಲ್ಲಿ ಸುತ್ತಿ ಅನುಭವ. ಕಾಯಕ ನಮ್ಮ ಗುರುತಾದಾಗ ಆ ಸಡಗರ ಅದು ಕಟ್ಟಿಕೊಡುವ ಅನುಭವ ಮಂಟಪ ಸೌಂದರ್ಯವೇ ಬೇರೆ. ಎಲ್ಲರೂ ಕೂಡಿರುವ ಈ ಧಾರವಾಡ ನನ್ನದು, ನನ್ನ ಸೌಭಾಗ್ಯ.

Leave a Reply