ಶ್.. ಸುಮ್ಮನಿರಿ

ಭವ್ಯ ಗೌಡ 

ಶ್.. ಸುಮ್ಮನಿರಿ
ಸರಿ ಹೊತ್ತು ರಾತ್ರಿಯಲ್ಲಿ
ದೂರದಲ್ಲೆಲ್ಲೊ
ಅಪರಿಚಿತ ಬೆಳಕು
ಎಷ್ಟು ದೂರದ್ದು? ಗೊತ್ತಿಲ್ಲ
ನೋಡು ನೋಡುತ್ತ
ಭಯವೇರುತ್ತಾ ಹೋಯಿತು
ಅದು ಬರಿ ಬೆಳಕಾದರೆ ಸರಿ?
ಸುಡುಬೆಂಕಿಯ ಉಂಡೆಯಾದರೆ?!
ಅದೆಷ್ಟು ಚಿಂತೆಗಳ ಸರಮಾಲೆ

ಏನಾದರಾಗಲಿ
ಮೊದಲು ಗೂಡು
ಸೇರಿಬಿಡೋಣವೆಂದವರು
ಒಳಗೆ ಬಂದು ಚಿಲಕ ಹಾಕಿದರು
ಸಾಲದು ಎಂದು ಇನ್ನಷ್ಟು
ಬುದ್ದಿಯನ್ನು ಧಾರೆಯೆರೆದು
ಬೀಗ ಹಾಕಿದರು

ಇನ್ನು ಕೆಲವರು
ಬೀಗಗಳೆಲ್ಲ ಬೇಕೆ?
ಕೊಂಡಿ ಚಿಲಕಗಳು ಸಾಲದೆ?
ದೂರದ ಅಪರಿಚಿತ ಹತ್ತಿರವಾಗಲಿ
ಬೆಳಕಾದರೆ ಕೂಡಲೆ ಬಾಗಿಲು ತೆರೆದು ಒಳಕರೆಯೋಣ
ಬೆಂಕಿಯಾದರೆ?
ಇದೆಯಲ್ಲ, ಬೀಗ

ಈಚೆ ಬದಿಯ ಕಿಟಕಿಯಲ್ಲಿ ನಿಂತ
ಮತ್ತದೇ ಬುದ್ದಿವಂತರು
ಒಳಗೆ ಜೋಕಾಲಿಯಲ್ಲಿ
ಜೀಕುತಿರುವವರಿಗೆ
ಶ್.. ಸುಮ್ಮನಿರಿ
ಎಂದು ಸನ್ನೆ ಮಾಡುತ್ತಾ
ರಾಶಿ ಲೆಕ್ಕಗಳನ್ನು
ಕಿಟಕಿಯ ಸರಳುಗಳ ಜೊತೆ
ಎಣಿಸಿ ಗುಣಿಸಿ ಕಳೆದು ಕೂಡಿ
ಅಪರಿಚಿತದಾಚೆಗೂ ದೃಷ್ಟಿನೆಟ್ಟಿದ್ದಾರೆ

ಆಟ ಬಿಟ್ಟು
ಸದ್ದು ಮಾಡದೆ
ಆಚೆ ಬದಿಯ ಕಿಟಕಿ ಬಳಿ
ಬಂದು ನಿಂತವರು
ಬೀಗ ಸರಪಳಿ ಚಿಲಕಗಳ ಅರಿವಿಲ್ಲದೆ,
ಅಪರಿಚಿತ ಬೆಳಕನ್ನು ಕೈಚಾಚಿ
ಬಾಚಿ ತಬ್ಬುವಂತೆ ಕರೆಯುತ್ತಿದ್ದಾರೆ

ಬೆಳಕೊ? ಬೆಂಕಿಯುಂಡೆಯೋ?
ಎಷ್ಟು ದೂರದ್ದೋ?
ಹೊತ್ತು ಸರಿದಂತೆಲ್ಲ
ಬುದ್ದಿವಂತರದು
ಶ್.. ಈಚೆ ಕಿಟಕಿಗೆ ಬನ್ನಿರಿ
ಎಂದು ಮತ್ತದೇ ಸನ್ನೆ

ಸರಳುಗಳ ನಡುವೆ
ಕೊನೆಯಿರದ ದೃಷ್ಟಿ ,
ಒಳಗಿನ ಬೆಳಕೊಂದು
ಮಂದವಾದಂತೆ
ಜೋಗುಳದೊಳಗೆ
ಬೆಳಕೊಂದು ಬೆಳಕ ತಬ್ಬಿದೆ
ಕಿಟಕಿಗಳ ಅರಿವಿಲ್ಲದಂತೆ

2 Responses

  1. Vasudev nadig says:

    ಅದು ಬೆಳಕೋ ಬೆಂಕಿಯೋ ಏನನೂ ಹೇಳದೆ ಕವಿತೆಯೊಂದು ಗಾಢವಾದ ಭಾವ ಸತ್ಯ ಉಳಿಸಿ ಹೋಯಿತು..ಗಹನವಾದ ರೂಪಕ ಭವ್ಯ.

Leave a Reply

%d bloggers like this: