ಇರುಳ ಕುಲುಮೆಯಲಿ ಬೆಂದು ಅರಳಿದ ಹಗಲಿನ ಹಾಡು..

ಇರುಳ ಕುಲುಮೆಯಲಿ ಬೆಂದು ಅರಳಿದ ಹಗಲಿನ ಹಾಡು
• ಗಿರಿಜಾಶಾಸ್ತ್ರಿ

ಮೂರು ನಾಲ್ಕು ತಿಂಗಳುಗಳ ಹಿಂದಯೇ ಡಾ. ವಿಜಯಾ ಅವರ “ಕುದಿ ಎಸರು” ಓದಿ ನನಗೆ ಎನಿಸಿದ್ದನ್ನು ಒಂದು ಪುಟ ಬರೆದು ಹಾಗೆಯೇ ಇರಿಸಿ ಬಿಟ್ಟಿದ್ದೆ.

ಆದರೆ ನಿನ್ನೆ “ಸೀಕ್ರೆಟ್ ಸೂಪರ್ ಸ್ಟಾರ್” ಚಿತ್ರವನ್ನು ನೋಡಿಕೊಂಡು ಮನೆಗೆ ಬಂದ ಮೇಲೆ ಧುತ್ತೆಂದು ಎದುರಾದದ್ದು ಡಾ. ವಿಜಯಾ ಅವರ “ಕುದಿ ಎಸರು”. ಕಾರಣ ಪಿತೃಪ್ರಧಾನ ಸುಭದ್ರ ಕೋಟೆಗಳನ್ನು ಸೀಳಿಕೊಂಡು ಹೊರಬರುವ ಈ ಚಿತ್ರದ ನಾಯಕಿ ಹಾಗೂ ಅವಳ ತಾಯಿ ಅನುಭವಿಸುವ ಹಿಂಸೆಗೂ ‘ಕುದಿ ಎಸರಿ’ನ ನಾಯಕಿ ಅನುಭವಿಸುವ ಹಿಂಸೆಗೂ ಮೂಲಭೂತವಾಗಿ ಯಾವುದೇ ವ್ಯತ್ಯಾಸವಿಲ್ಲ.

ಜಗತ್ತಿನಲ್ಲೆಲ್ಲೆಡೆ ಎಲ್ಲಾ ಕಾಲದಲ್ಲಿಯೂ ಮಹಿಳೆಯರು ಎದುರಿಸುವ ಹಿಂಸೆಯ ಸ್ವರೂಪ ಒಂದೇ ಆಗಿದೆಯೇನೋ,ಅದನ್ನು ಎದುರಿಸುವಲ್ಲಿ ಬಳಸಲಾಗುವ ಉಪಾಯಗಳು ಬೇರೆಯಾಗಿರಬಹುದು ಎಂಬುದನ್ನು ಈಚಿನ ವಿದ್ಯಾಮಾನಗಳೂ ಸೇರಿದಂತೆ ಅನೇಕ ಘಟನೆಗಳು ಸಾಬೀತು ಪಡಿಸುತ್ತಿವೆ.

“ಕುದಿ ಎಸರು” ಓದಿದ ತಕ್ಷಣ ಕಣ್ಣಮುಂದೆ ಸುಳಿದದ್ದು ಲಲ್ಲಾಳ “ಕಾಟನ್ ಫ್ಲವರ್“ ಕವಿತೆ. ಅದರ ಕನ್ನಡ ಅನುವಾದ ಹೀಗಿದೆ:

ಲಲ್ಲಾಳ ಹಾಡು

ಅರಳೆಯ ಹೂವಾಗಿ ಅರಳಲೆಂದೇ
ನಾನು, ಲಲ್ಲಾ
ಈ ಬಣ್ಣದ ಲೋಕದೊಳಗೆ ಬಂದೆ…

ಆದರೆ ಅಷ್ಟರಲ್ಲೇ ಮಾಲಿ ಬಂದ
ಹಿಂಜಿ ಹರಿದು ಕೊಳೆ ತೆಗೆದ
ನೂಲುವವ ಬಂದ
ಬಿಲ್ಲು ಹೆದೆಕಟ್ಟಿ ಎಡೆಬಿಡದೆ ಬಡಿದ

ತಕಲಿ ಹಿಡಿದ ಹೆಂಗುಸು
ಗರಗರ ತಿರುಗಿಸಿದಳು
ನಾರು ನಾರು ಎಳೆದಳು

ಅಸಹಾಯಕ ಬಿದ್ದು ನೇತಾಡಿದೆ ಮಗ್ಗದ ಮೇಲೆ
ಪೊರಕೆ ಝಾಡಿಸಿದ ನೇಕಾರ ನನ್ನ ಮೇಲೆ

ಇದೀಗ ಅರಿವೆಯಾದೆ
ಅಗಸ ಎತ್ತಿ ಬಡಿದ
ಬಂಡೆಕಲ್ಲಿಗೆ ಬೀಸಿ ಒಗೆದ
ಸಾಬೂನು ಗಸ ಗಸತಿಕ್ಕಿ
ಕಾಲ ಕೆಳಗೆ ನಿರ್ದಯ ಹೊಸಕಿದ
ಬಲವೆಲ್ಲ ಬಿಟ್ಟುಕುಕ್ಕಿದ ಮುಕ್ಕರಿದು ಹಿಂಡಿದ

ಈಗ ನನ್ನ ಮೈತುಂಬಾ ಓಡಾಡಿದೆ
ಸಿಂಪಿಗನ ಕತ್ತರಿ
ಹರಿದು ತುಂಡಾಗಿದ್ದೇನೆ
ತರಾವರಿ
ನಾನು, ಲಲ್ಲಾ
ಕೊನೆಗೂ ಹೀಗೆ
ನನ್ನ ಅಭೀಷ್ಟ ಪದ ಸೇರಿದ್ದೇನೆ

(ಅನುವಾದ : ಗಿರಿಜಾಶಾಸ್ತ್ರಿ)

ಲಲ್ಲಾಳ ಜೊತೆಗೆ ಸಂತ ಸಕ್ಕೂಬಾಯಿ ಮತ್ತು ಮಹಾರಾಷ್ಟ್ರದ ಸಂತಕವಿಯೆಂದೇ ಪ್ರಸಿದ್ಧಳಾದ ಬಹಿಣಾಬಾಯಿ ಎದುರಾದರು. ಇವರೆಲ್ಲಾ ಮುಳ್ಳಿನ ಮಧ್ಯೆ ಅರಳಿದ ಗುಲಾಬಿ ಹೂಗಳು.

ಹೂವಾಗಿ ಅರಳುವ ಕನಸು ಲಲ್ಲಾಳಿಗೆ. ಆದರೆ ಅವಳಿಗೆ ಗಂಡನ ಮನೆಯಲ್ಲಿಸಿಗುವುದು ಬಗೆಬಗೆಯಾದ ಚಿತ್ರ ವಿಚಿತ್ರ ಹಿಂಸೆ. ಅದುವೇ ಅವಳ ಬಿಡುಗಡೆಯ ಹೋರಾಟಕ್ಕೆ ನಾಂದಿ ಹಾಡುತ್ತದೆ. ಹೋರಾಟದ ಕಸುವನ್ನೂ ತುಂಬುತ್ತದೆ. ಸಕ್ಕೂಬಾಯಿಯ ಲಲ್ಲಾಳಿಗಿಂತ ಸ್ವಲ್ಪ ಪುಣ್ಯವಂತೆ ಅವಳ ಕತ್ತೆ ದುಡಿಮೆಗೆ ಮರುಗಿ ಕರಗಿ ಕೃಷ್ಣನೇ ಅವಳ ವೇಷದಲ್ಲಿ ಬಂದು ರಾಗಿ (ಜೋಳ) ಬೀಸುತ್ತಾನೆ. ಗಂಡನನ್ನು ಕಳೆದು ಕೊಂಡ ಕೃಷಿಕಳಾದ ಬಹಿಣಾಬಾಯಿಗೆ ಹತ್ತಿ ಹೊಲಗಳಲ್ಲಿ ‘ಓವಿ’ಗಳು (ದ್ವಿಪದಿಗಳು) ಬಂದು ಕೈಹಿಡಿದಿವೆ. ಅದುವೇ ಅವಳ ಬಿಡುಗಡೆಗೆ ನಾಂದಿಯನ್ನೂ ಹಾಡಿವೆ. ಇವರೆಲ್ಲರ ದಾಂಪತ್ಯದ ಬದುಕಿನಲ್ಲಿ ಹಿಂಸೆ ಹಾಸುಹೊಕ್ಕಾಗಿದೆ. ಇಂತಹ ಹಿಂಸೆಯ ನಡುವೆಯೂ ಅವರಲ್ಲಿ ಬದುಕಬೇಕೆಂಬ ಉತ್ಸಾಹವನ್ನು, ಎಣೆಯಿಲ್ಲದ ಛಲವನ್ನು ತುಂಬುವ ಆ ಜೀವ ಚೈತನ್ಯದ ಬಗೆಗೆ ಬೆರಗಾಗುತ್ತದೆ.

‘ಕುದಿ ಎಸರು’ ಪ್ರಾರಂಭವಾಗುವುದೂ ಹಿಂಸೆಯಿಂದಲೇ, ಬಿಡುಗಡೆಯ ಕೊನೆಯವರೆಗೂ ಸಾಗುವುದು ಹಿಂಸೆಯ ಮೂಲಕವೇ. ಹೆಂಡತಿಯನ್ನು ನಡುಬೀದಿಯಲ್ಲಿ ಬೂಟುಗಲಿನಲ್ಲಿ ಒದೆಯುತ್ತಾ ಉರುಳಿಸಿಕೊಂಡು ಹೋಗುವುದಾಗಲೀ, ಚಿತ್ರವಿಚಿತ್ರವಾದ ಲೈಂಗಿಕ ದೌರ್ಜನ್ಯವಾಗಲೀ, ಮನೆಯೊಳಗಿನ ಕತ್ತೆದುಡಿಮೆಯಾಗಲೀ, ದೈಹಿಕ, ಮಾನಸಿಕ ನೋವು ಸಂಕಟಗಳಾಗಲೀ, ಕೌಟುಂಬಿಕ ಹಿಂಸೆಯ ಪರಮಾವಧಿಯ ವಿಕೃತ ಸ್ವರೂಪವನ್ನು ಬಿಂಬಿಸುತ್ತವೆ.

ಇಂತಹ ಹಿಂಸೆಯ ಒಡಲಿನಲ್ಲಿಯೇ ಸೌಹಾರ್ದವೂ ಅರಳುತ್ತದೆ. ತನ್ನ ಬದುಕನ್ನು ಒತ್ತೆಯಿಟ್ಟು ಮನೆ ಮಕ್ಕಳು, ಅತಿಥಿ ಸೇವೆ ಮುಂತಾದವುಗಳ ಮೂಲಕ ಒಟ್ಟು ಸಂಸಾರದ ಸೌಹಾರ್ದವನ್ನು ಕಾಪಾಡುತ್ತಾಳೆ ಇಲ್ಲಿಯ ನಾಯಕಿ. ಹೆಣ್ಣುಬಾಕನಾದ ಅಪ್ಪನ ಬಗೆಗೂ ನಾಯಕಿ ತಳೆಯುವ ದೃಷ್ಟಿಕೋನವಂತೂ ಅಪರೂಪವಾದುದು. ಅಂತಹವನೊಳಗೂ ಒಬ್ಬ ಮನುಷ್ಯನನ್ನು ಅವನ ಕಕ್ಕುಲಾತಿಯನ್ನು ಅನವರಣಗೊಳಿಸುವ ಅವಳು ಅವನ ಹೆಣ್ಣುಬಾಕತನವನ್ನು ಒಂದು ಮನುಷ್ಯ ಸಹಜವಾದ ದೌರ್ಬಲ್ಯವನ್ನಾಗಿ ಕಾಣುತ್ತಾಳೆ.

ಆದುದರಿಂದಲೇ ಅವನ ಬಗೆಗೆ ಜಿಗುಪ್ಸೆ ಉಂಟಾಗುವುದಿಲ್ಲ. ತನ್ನ ತಂದೆಯ ಕೊನೆಗಾಲದ ಆಸ್ಪತ್ರೆಯ ದೃಶ್ಯ ಇದನ್ನುಅನನ್ಯವಾಗಿ ಚಿತ್ರಿಸುತ್ತದೆ. ಅಲ್ಲಿ ಅಪ್ಪನ ಬೇಜವಾಬ್ದಾರಿತನದ ಬಗ್ಗೆ ದ್ವೇಷವಿಲ್ಲ ಕೇವಲ ಅನುಕಂಪ ಪ್ರೀತಿ ಮಾತ್ರಇದೆ. ಹಾಗೆಯೇ ತನ್ನನ್ನು ನಾನಾ ಚಿತ್ರಹಿಂಸೆಗಳಿಗೆ ಗುರಿಮಾಡಿದ ಗಂಡನ ಬಗೆಗೂ ದ್ವೇಷವಿಲ್ಲದೇ, ಪ್ರತೀಕಾರದ ಭಾವನೆಯಿಲ್ಲದೇ ಒಂದು ರೀತಿಯ ಅನುಕಂಪವನ್ನೇ ಹೊಂದಿರುವುದು, ಅದನ್ನು ವ್ಯಕ್ತಪಡಿಸುವಲ್ಲಿ ತೋರಿಸುವ ಪ್ರೌಢತೆ, ವಸ್ತುನಿಷ್ಠತೆ ‘ಇದು ಸಾಧ್ಯವೇ’ ಎಂದು ಓದುಗರನ್ನು ಬೆರಗುಗೊಳಿಸುತ್ತದೆÉ.

ಬಂಧನ ಮತ್ತು ಬಿಡುಗಡೆಗಳ ನಡುವಿನ ಹೋರಾಟಗಳನ್ನು ‘ಕುದಿ ಎಸರು’ ಅನನ್ಯವಾಗಿ ಚಿತ್ರಿಸುತ್ತದೆ.

ಮೂಲಭೂತವಾಗಿ ಮೇಲೆ ಹೇಳಿದ ಎಲ್ಲಾ ಮಹಿಳೆಯರ ಬದುಕೂ ಒಂದು ರೀತಿಯ ಬಂಧನ ಮತ್ತು ಬಿಡುಗಡೆಯ ನಡುವಿನ ಹೋರಾಟಗಳೇ ಅಗಿವೆ. ಲಲ್ಲಾಳಿಗೆ ವಾಕ್, ಬಹಿಣಾಳಿಗೆ ಓವಿ, ಸಕ್ಕೂ ಬಾಯಿಗೆ ವಿಟ್ಠಲಭಕ್ತಿ ಬಿಡುಗಡೆಯ ಸಾಧನಗಳಾಗಿ ಒದಗಿ ಬರುತ್ತವೆ. ವಿಜಯಮ್ಮನವರಿಗೆ ನಾಟಕ, ಸಾಹಿತ್ಯ ರಚನೆ, ಸೀಕ್ರೆಟ್ ಸೂಪರ್ ಸ್ಟಾರ್‍ನ ಇನಸಿಯಾಳಿಗೆ ಹಾಡು ಬಿಡುಗಡೆಯ ಸಾಧನವಾಗಿದೆ.

ಈ ಎಲ್ಲಾ ನಾಯುಕಿಯರು ಪಿತೃಪ್ರಧಾನ ಸಮಾಜದ ನಿಷ್ಠುರ ನಿಯಮಗಳಿಗೆ ಒಳಗಾಗಿದ್ದಾರೆ. ಅವರೆಲ್ಲಾ ಅನುಭವಿಸುವ ಕೌಟುಂಬಿಕ ಹಿಂಸೆಯ ಸ್ವರೂಪ ಒಂದೇ. ಆದರೂ ಅವರೆಲ್ಲೂ ಅದರ ಬಲಿಪಶುಗಳಾಗಿಲ್ಲ. ಬದಲಾಗಿ ಪಿತೃಪ್ರಧಾನ ವ್ಯವಸ್ಥೆಯ ಕಬ್ಬಿಣದ ಗೋಡೆಗಳನ್ನು ಸೀಳಿಕೊಂಡು ಹೊರಬಂದಿದ್ದಾರೆ. ಅವರ್ಯಾರೂ ತಮ್ಮ ಎದುರಾಳಿಯನ್ನು ಹಣಿಯುವುದಿಲ್ಲ. ನಾಶಮಾಡುವುದಿಲ್ಲ. ತಮ್ಮತಮ್ಮ ಅರಿವಿನ ಜಾಡನ್ನು ಕಂಡಕೊಳ್ಳುವ ಮತ್ತು ಅದನ್ನು ಅರಳಿಸಿಕೊಳ್ಳುವುದರ ಮೇಲೆ ಮಾತ್ರ ತಮ್ಮ ಶಕ್ತಿಯನ್ನು ವ್ಯಯಿಸುತ್ತಾರೆ.

ಲಲ್ಲಾಳಿಂದ ಹಿಡಿದು ಇನ್ಸಿಯಾಳವರೆಗೆ ಹೆಣ್ಣಿನ ಮೇಲಿನ ಜರಗುತ್ತಿರುವ ಹಿಂಸೆಯ ಮೂಲಭೂತ ಸ್ವರೂಪದಲ್ಲಿ ಯಾವ ಬದಲಾವಣೆಗಳೂ ಅಗಿಲ್ಲ ಎನ್ನುವುದು ದುರಂತ. ಆದರೆ ಹಿಂಸೆಯನ್ನು ಎದುರಿಸುವ ಅನೇಕ ಉಪಾಯಗಳನ್ನು ನಮ್ಮ ಚರಿತ್ರೆಯಲ್ಲಿ ಇಂತಹ ಅನೇಕ ಮಹಿಳೆಯರು ಸೃಜಿಸಿ ಹೋಗಿದ್ದಾರೆ ಎನ್ನುವುದು ಸಮಾಧಾನಕರ ಸಂಗತಿಯಾಗಿದೆ.

‘ಕುದಿ ಎಸರು’ ಓದಿ ಮುಗಿಸಿದ ಮೇಲೆ ಸದಾ ಸ್ತ್ರೀವಾದದ ವಕಾಲತ್ತನ್ನು ವಹಿಸುತ್ತಲೇ ಬಂದ ನನಗೆ ಈ ಲೇಖಕಿ ಒಮ್ಮೆಯೂ ಗಂಡನ ವಿರುದ್ಧ ಪ್ರತಿಭಟಿಸುವುದಿಲ್ಲವೇಕೆ ಎಂದು ಕೋಪ ಉಕ್ಕಿ ಬಂದಿತು. ಬಹುಶಃ ಅಂದು ಅವರು ಕೋಪಗೊಂಡು ಹೊಡೆದು ಬಡಿದಾಡಿಬಿಟ್ಟಿದ್ದರೆ, ಇಂದು ಈ ಕೃತಿಗೆ ಕಾರಣವಾದ ಸೃಜನಶೀಲತೆಯಲ್ಲಾ ಆರಿಹೋಗುತ್ತಿತ್ತೋ ಏನೋ. ಹೊಡೆದು ಬಡಿದಾಡಲೂ ಒಂದು ತಾತ್ವಿಕ ಒತ್ತಾಸೆ ಬೇಕಲ್ಲಾ? ಇದನ್ನು ಓದಿದ ಮೇಲೆ ಮೇಲಿನ ಸಂತ ಕವಿಗಳು ನೆನಪಿಗೆ ಮುತ್ತಿಗೆ ಹಾಕಿದ ಕ್ಷಣದಲ್ಲಿ, ‘ತಾಳ್ಮೆ’ ಎನ್ನುವುದನ್ನು ನಾವು ಬೇರೆಯೇ ಆದ ರೀತಿಯಲ್ಲಿ ವ್ಯಾಖ್ಯಾನಿಸಬೇಕು ಎಂದು ಎನಿಸಿತು.

ಈ ತಾಳ್ಮೆಯಲ್ಲಿ ಅಸಹಾಯಕತೆ ಇರುವುದಾದರೂ, ಅದರ ಒಳಗಡೆಯೇ, ಸಾಮಾಜಿಕ ವರ್ಚಸ್ಸಿನಿಂದ ಬಲವಾಗಿರುವ ವ್ಯಕ್ತಿಯ ಎದುರಿಗೆ ಕೈ ಎತ್ತಿದರೆ ಸೋಲು ಖಂಡಿತ ಎನ್ನುವ ಸ್ಪಷ್ಟ ಎಚ್ಚರ, ಧೃಡವಾದ ತಿಳುವಳಿಕೆ ಇದೆ. ದೈಹಿಕವಾಗಿ ಎದುರಿಸಲು ಸಾಧ್ಯವಿಲ್ಲದೇ ಹೋದಾಗ ಉಳಿಯಲು ಬೇರೆ ಉಪಾಯಗಳನ್ನು ಕಂಡುಕೊಳ್ಳುವುದು ಅನಿವಾರ್ಯವಾಗುತ್ತದೆ. ಹೀಗೆ ಮರೆಯಿಂದ ಯುದ್ಧಮಾಡುವ ಕೌಶಲಗಳನ್ನು ಬೆಳೆಸಿಕೊಳ್ಳುವ ಹಾದಿಯಲ್ಲಿ ತಾಳ್ಮೆ ಪ್ರಮುಖ ಪಾತ್ರ ವಹಿಸುತ್ತದೆ. ಆದುದರಿಂದ ಮಹಿಳೆಯರ ಬರಹಗಳೆಲ್ಲಾ ಹೀಗೆ ಒಂದು ಅಡಗುತಾಣಗಳಾಗಿಯೇ ನನಗೆ ಕಾಣಿಸುತ್ತದೆ.

ನಾವು ಚಳವಳಿಯ ಭರದಲ್ಲಿ ಈ ‘ತಾಳ್ಮೆ’ ಎನ್ನುವುದನ್ನು ನೇತ್ಯಾತ್ಮಕ ನೆಲೆಯಲ್ಲಿ ನಿಲ್ಲಿಸಿ ಸವಕಲಾಗಿಸಿ ಬಿಟ್ಟಿದ್ದೇವೆ ಎಂದೆನಿಸುತ್ತದೆ. ಈ ತಾಳ್ಮೆಯ ಕೊನೆಗೆ ಪ್ರತಿಭಟನೆ ಇಲ್ಲದೇಇಲ್ಲ.

ಮೇಲೆ ಹೇಳಿದಂತೆ ಅದರ ಪ್ರತಿಭಟನೆಯ ಸ್ವರೂಪ ಬೇರೆ. ಇದು ಆಮೂಲಾಗ್ರ ಪರಿಶೋಧಿಸುವ ಆತ್ಮ ಪರಿವರ್ತಿಸುವ ತಾಳ್ಮೆ. ತಾಳುವುದನ್ನು, ಬಾಗುವುದನ್ನು ನಮ್ಮ ‘ಬಂಡಾಯ’ ದ ಪರಿಕಲ್ಪನೆ ಎಂದಿಗೂ ಪೋಷಿಸುವುದಿಲ್ಲ. ಅವು ಜೇನುಹುಟ್ಟಿಗೆ ಕಲ್ಲೆಸೆಯುವ ಕೆಲಸವನ್ನು ಮಾಡುತ್ತವೆ. ಪ್ರಬಲವಾದ ಶತ್ರುವಿನ ಮೇಲೆ ಎಸೆಯಲು ಕಲ್ಲನ್ನು ಕೈಗೆತ್ತಿಕೊಳ್ಳಬೇಕು ಎಂಬ ಅರಿವು ಮೂಡುವುದು ಸಾಮಾನ್ಯವೇನಲ್ಲ. ಆದರೆ ಕಲ್ಲೆಸೆದು ಜೇನುಮುತ್ತಿ ಕಡಿಯಲಾರಂಬಿಸಿದರೆ ಏನು ಮಾಡಬೇಕು ಎಂದು ಅದು ಹೇಳುವುದಿಲ್ಲ.

ಏನನ್ನಾದರೂ ನಾಶಮಾಡುವುದು ಸುಲಭ ಆದರೆ ಅದಕ್ಕೆ ಪರ್ಯಾಯವನ್ನು ಸೃಷ್ಟಿಸುವುದು ಕಷ್ಟದ ಕೆಲಸ. ಪರ್ಯಾಯ ವ್ಯವಸ್ಥೆಯಿಲ್ಲದಾಗ ಇದು ಬಾಣಲೆಯಿಂದ ಬೆಂಕಿಗೆ ಬೀಳುವ ಸ್ಥಿತಿಯೇ ಆಗಬಹುದು. ಆದುದರಿಂದಲೇ ಮೇಲ್ಪದರದ ಪ್ರತಿಭಟನೆಗಳು ವಿಫಲವಾಗಿಬಿಡುತ್ತದೆ ಎನಿಸುತ್ತದೆ. ಪ್ರತಿ ಪ್ರತಿಭಟನೆಯ ಹಿಂದೆ ಆತ್ಮ ಪರಿಶೋಧನೆ, ತನಗೆ ಬೇಕಾಗಿರುವುದೇನು ಎಂಬ ಸ್ಪಷ್ಟ ಅರಿವಿಲ್ಲದಿದ್ದರೆ ಆಗುವುದು ಹೀಗೆಯೇ ಏನೋ. ಈ ಸ್ಪಷ್ಟತೆ ಮೂಡಿದ್ದೇ ಆದರೆ ಒಬ್ಬ ಹೆಣ್ಣು ಯಾವ ಚಳವಳಿಯ ಸಹಾಯವಿಲ್ಲದೆಯೂ ತನ್ನ ದಾರಿಯಲ್ಲಿ ನಡೆಯಬಲ್ಲಳು. ಬಾಹ್ಯ ಸಂಘಟನೆಗೆ ಆಂತರಿಕ ಅರಿವೂ ಸೇರಿದಲ್ಲಿ ಚಳವಳಿಗಳು ಫಲಕಾರಿಯಾಗಬಲ್ಲುದು.

ಕೇವಲ ಕಂಡ ಕಡೆಗೆ ಕಲ್ಲುಹೊಡೆಯುವುದರಿಂದ, ಬಂದೂಕದ ನಳಿಗೆಯಿಂದ ಮಾತ್ರ ಸಾಧ್ಯವಿಲ್ಲ. ಇದು ಕಷ್ಟದ ದಾರಿಯಿರಬಹುದು ಆದರೆ ಅಸಾಧ್ಯದ ದಾರಿಯೇನಲ್ಲ. ಇದಕ್ಕೆ ಅಕ್ಕ ಮಹಾದೇವಿಯನ್ನೂ ಸೇರಿಸಿಕೊಂಡು ಮೇಲೆ ಹೇಳಿದ ಅನೇಕ ಮಹಿಳಾ ಸಂತರ ಬದುಕೇ ಸಾಕ್ಷಿ. ಈ ಸ್ಪಷ್ಟತೆಯನ್ನು ಮೂಡಿಸುವುದು, ತಾತ್ವಿಕ ತಳಹದಿಯನ್ನು ಹಾಕಿಕೊಡುವುದು ಚಳವಳಿಗಳ ಕೆಲಸ.

ಆತ್ಮಚರಿತ್ರೆಯನ್ನು ಪ್ರಾಮಾಣಿಕವಾಗಿ ಬರೆಯುವುದೆಂದರೆ ನಡುಬೀದಿಯಲ್ಲಿ ಬೆತ್ತಲೆಯಾದ ಹಾಗೆ. ಗಂಡು ಬೆತ್ತಲೆ ನಡೆದರೆ ಸಮಾಜ ಸಹಿಸೀತು, ‘ಯಾವುದೋ ಪುಣ್ಯಾತ್ಮ, ಸಂತ’ ನೆಂದು ಕೈಮುಗಿದೀತು. ಆದರೆ ಹೆಣ್ಣು ಬೆತ್ತಲಾದರೆ ಅವಳಿಗೆ ಸಿಗುವ ‘ಪಾರಿತೋಷಕ’ವೇ ಬೇರೆ. ಆದುದರಿಂದ ಹೆಣ್ಣು ಆತ್ಮಚರಿತ್ರೆ ಬgಯಲು ಅವಳಿಗೆ ಎಂಟೆದೆ ಇರಬೇಕು.

ಇಲ್ಲಿಯ ಪ್ರತಿಭಟನೆ ಕೋಪಾಗ್ನಿಯಾಗಿ ಲೋಕವನ್ನು ಸುಡುವುದಿಲ್ಲ. ಬದಲಾಗಿ ಮಂಜು ಮುಸುಕಿದ ಹಾದಿಯಲ್ಲಿ ಬದುಕನ್ನು ಕಂಡುಕೊಳ್ಳುವ ಬೆಳಕಾಗುತ್ತದೆ. ಬದುಕನ್ನು ಹಸನು ಮಾಡಿಕೊಳ್ಳುವ ಸಾಧನವಾಗುತ್ತದೆ. ಬೆಳಕಿಗೆ ಸುಡುವ ತಾಖತ್ತೂ ಇದೆ. ಸುಟ್ಟುಕೊಳ್ಳುವ ಇಲ್ಲವೇ ಬೆಳಗಿಸಿಕೊಳ್ಳುವುದರ ನಡುವಿನ ಆಯ್ಕೆ ನಮ್ಮದೇ ಆಗಿರುತ್ತದೆ. ಅದು ವೈಯಕ್ತಿವಾದುದು. ಸಾಮಾಜಿಕವಾದುದರಿಂದ ವೈಯಕ್ತಿಕವಾದುದು ಪುಷ್ಠಗೊಂಡರೆ, ವೈಯಕ್ತಿವಾದುದರಿಂದ ಸಾಮಾಜಿಕವಾದುದು ಬಲಗೊಳ್ಳುತ್ತದೆ.

“ಕೌಟುಂಬಿಕ ಜಗಳಗಳಲ್ಲಿ ಎಂದೂ ಹೆಣ್ಣು ಅವೇಶದಿಂದ ಮನೆ ಬಿಡಬಾರದು. ತನ್ನ ಹಕ್ಕನ್ನು ಗಳಿಸಿಕೊಂಡನಂತರವೇ ಆಸ್ತಿಪಾಸ್ತಿ, ಚಿನ್ನ ಮುಂತಾದವುಗಳನ್ನು ಭದ್ರಪಡಿಸಿಕೊಂಡೇ” ಬಹಳ ಸ್ಟ್ರಾಟಜಿಕ್ ಆಗಿ ಮನೆಯಿಂದ ಹೊರಬರಬೇಕು, ಎಂದು ಪ್ರಸಿದ್ಧ ವಕೀಲೆ, ಮಹಿಳಾಪರ ಹೋರಾಟದ ನೇತಾರೆ ಫ್ಲೇವಿಯಾ ಅಭಿಪ್ರಾಯಪಡುತ್ತಾರೆ.

ಎಲ್ಲಾ ಚಳವಳಿಗಳೂ ಆಯಾಕಾಲದ ಸಾಮಾಜಿಕ ಸಂದರ್ಭಕ್ಕೆ ತಕ್ಕಂತೆ ಹುಟ್ಟಿ ಅಳಿದು ಹೋಗುತ್ತವೆ. ಅವುಗಳ ಅಂತಃಸತ್ವವನ್ನುಚರಿತ್ರೆ ಹೀರಿಕೊಂಡು ಕಾಲದಗತಿಗೆ ಅನುಗುಣವಾಗಿ ಮುನ್ನಡೆಯಬೇಕು. ಕಾಲದಿಂದ ಕಾಲಕ್ಕೆ ಚಳವಳಿಯ ಸ್ವರೂಪಗಳು, ಹೋರಾಟದ ಉಪಾಯಗಳು ನವೀಕರಣಗೊಳ್ಳುತ್ತ ಹೋದಾಗ ಮಾತ್ರ ಎಲ್ಲ ಕಾಲದ ಚಳವಳಿಗಳಿಗೂ ಅರ್ಥ ಬರುತ್ತದೆ.

ಪಿತೃಪ್ರಾಧಾನ್ಯತೆಗೆ ಮಾತೃಪ್ರಾಧಾನ್ಯತೆ ಉತ್ತರವಲ್ಲ. ಇವು ಎರಡೂ ಅತಿರೇಕದ ಪರಿಕಲ್ಪನೆಗಳೇ. ಎರಡೂ ಹೊರಡಿಸುವ ಅಪಸ್ವರಗಳು, ವಿಕಾರಗಳು ಒಂದೇ ಅಗಿರುತ್ತವೆ. ಈ ಎರಡೂ ಅತಿಗಳ ನಡುವಿನ ಸುವರ್ಣ ಮಧ್ಯಮ ನಮ್ಮ ದಾರಿಯಾಗಬೇಕು. ನಮ್ಮ ಕಾನೂನು, ಪ್ರಜಾಪ್ರಭುತ್ವ ಈ ಹಾದಿಯ ಮೇಲೆ ರೂಪಿತವಾಗಬೇಕು. ಪಿತೃಪ್ರಧಾನ್ಯತೆಯ ವಿರುದ್ಧ ಹೋರಾಡುವುದೆಂದರೆ ತಾಯಿತನ್ನ ಕರುಳಿನ ವಿರುದ್ಧವೇ ಹೋರಾಡಿದಂತೆ.

ಯುದ್ಧಗಳಿಂದ ಕಾನೂನುಗಳು ಬದಲಾಗಬಹುದು ಆದರೆ ಸಮಾಜದ ಮನಸ್ಸು ಬದಲಾಗಲು ಸಾಧ್ಯವಿಲ್ಲ. ಕಾನೂನು ಕಾಗದದ ಮೇಲೆ ಮಾತ್ರ ಇರುತ್ತದೆ ಆದರೆ ಅದನ್ನು ತನ್ನ ಹೃದಯದೊಳಗೆ ಇರಿಸಿಕೊಂಡಾಗ ಮಾತ್ರ ಸಂಪೂರ್ಣ ಬದಲಾವಣೆ ಸಾಧ್ಯವಾಗಬಹುದು. ಇಂದಿಗೆ ಬೇಕಾಗಿರುವುದು ಪರಿವರ್ತನೆಯೆ ಹೊರತು, ಸೇಡಿಗೆ ಸೇಡಲ್ಲ. ಏಟಿಗೆಎದುರೇಟಲ್ಲ. ಹೊಡೆಯಲು ಸಿದ್ಧರಾದವರು ಹೊಡೆತ ತಿನ್ನಲೂ ಸಿದ್ಧರಾಗಿರಬೇಕು.

ಕೇವಲ ಪರಸ್ಪರ ಹೊಡೆದಾಟಗಳಿಂದ ಯಾವ ತೀರ್ಮಾನವೂ ಸಾಧ್ಯವಾಗುವುದಿಲ್ಲ. ಆದುದರಿಂದಲೇ ವಿಜಯಮ್ಮ ಗೆದ್ದರೇನೋ, ಲಲ್ಲಾಳ ಹಾಗೆ ಅಭೀಷ್ಟಪದವನ್ನು ಪಡೆದರೇನೋ ಎಂದು ಎನಿಸುತ್ತದೆ. ಪ್ರತಿಯೊಬ್ಬರ ಪ್ರಯಾಣವೂ ಏಕಾಂಗಿಯಾದುದೇ. ಎದುರಿಸಬೇಕಾದ ಸವಾಲುಗಳೂ ವಿಭಿನ್ನವಾದುದೇ. ಅವುಗಳ ಪರಿಹಾರಕ್ಕೆ ಇನ್ನು ಏಕ ಸೂತ್ರ ಇರಲು ಹೇಗೆ ಸಾಧ್ಯ?

4 Responses

 1. ಅನುಪಮಾ ಪ್ರಸಾದ್ says:

  ಚಿಂತನೆಗೆ ಪ್ರೇರೇಪಿಸುವ ವಿಶ್ಲೇಷಣೆ. ಸೀಕ್ರೇಟ್ ಸುಪರ್ ಸ್ಟಾರ್ ನೋಡಬೇಕು ಹಾಗಾದರೆ.

 2. Girijashastry says:

  ಧನ್ಯವಾದಗಳು ಅನುಪಮಾ

 3. Lalitha siddabasavayya says:

  ಕುದಿ ಎಸರು – ಕೃತಿ ವಿಮರ್ಶಿಸಿದ ಅನೇಕರಿಗೆ ಅದು ಇನ್ನೊಂದು ಸಾಹಿತ್ಯ ಕೃತಿ,,, ಜೀವನ ಚರಿತ್ರೆ ಎಂಬ ಪ್ರಕಾರಕ್ಕೆ ಒಂದು ಸೇರ್ಪಡೆ. ಸಾಹಿತ್ಯ ಮೀಮಾಂಸೆಯ ಸ್ಕೇಲಿನಲ್ಲಿಯೇ ಅದಕ್ಕೊಂದು ಗತಿ ಕಾಣಿಸುವ ಉಮೇದು. ಓದಿದ ಹೆಂಗಸರಿಗೆ ಕುದಿಎಸರು ಅಂದರೆ ಕುದಿಯುತ್ತಿರುವ ಎಸರೊಳಗೆ ಬಿದ್ದ ಒಂದೊಂದು ಕಾಳಿನ ಅಂತರಂಗ. ಎಸರೊಳಗೆ ಇರಲಾರದ , ಅದರಿಂದಾಚೆಗೆ ಎಗರಲಾರದ ಬಡಪಾಯಿ ಬೇಳೆಯ ಸಂಕಟ.ಸಂಕಟಕೆ ಬಾಯಿಲ್ಲವಯ್ಯ,,,,,

 4. Girijashastry says:

  Thanks Lalita

Leave a Reply

%d bloggers like this: