ಸೂಜಿ ನುಂಗುವುದ ಕಲಿತೆ..

ಬಹಳ ತಡವಾಗಿಯಾದರೂ

ವಾಸುದೇವ ನಾಡಿಗ್

ಸೂಜಿ ನುಂಗುವುದ ಕಲಿತೆ
ಬಿಸಿಲ ಕುಡಿಯುವುದನೂ
ಮರಭೂಮಿಯನು
ಸುರಿದುಕೊಂಡೆ
ಜ್ವಾಲೆಯ ನೆಕ್ಕುವುದನೂ
ಬೆಣಚುಕಲ್ಲುಗಳ
ಕಟ ಕಟ ಕಡಿದೆ
ಕಾಡ ಮುಳ್ಳುಗಳ ಜಗಿಯುವುದನೂ
ನೆತ್ತಿಯಲಿ
ಕಾದ ಎಣ್ಣೆ ಬಳಿದುಕೊಂಡೆ
ಹಾದಿಬದಿಯ
ರಕ್ಕಸ ಬೇಲಿಗಳ
ತಾಕಿ ನಡೆದೆ
ಎದೆಯಲ್ಲಿ ಚೇಳುಗಳ
ಸಾಕಿಕೊಂಡೆ
ಕಾಳೊರಗಗಳ
ಕರುಳಲ್ಲಿ ಬೆರೆಸಿದೆ
ತೆರೆದ ಕೂರಲಗ
ಶಯ್ಯೆಯ ಹಾಸಿಕೊಂಡೆ
ಗಾಯಗಳಿಗೆ
ಕಡುಖಾರವ ಬಳಿದೆ
ಹೊರಬರಲಾಗದ ಸುಳಿಗಳ
ತಬ್ಬಿದೆ
ಹಬ್ಬಿದ ಕ್ರೂರ
ಮೆಳೆಗಳಲಿ ಹೊರಳಿದೆ
ಜಗದ ಕಾರ್ಕೋಟಕಗಳ ಎಡೆತಾಕಿದೆ
ಎಡೆಬಿಡದೆ.

ನುಂಗಿದ ಸೂಜಿ
ದಾರವ ಸೇರಿತು
ಕುಡಿದ ಬಿಸಿಲು
ಹಿಮವ ಪ್ರೀತಿಸಿತು
ಸುರಿದುಕೊಂಡ ಉರಿ ಮರಳು
ಚಿಗುರ ಪರಿಚಯಿಸಿತು
ನೆಕ್ಕಿದ ಜ್ವಾಲೆ
ತಣ್ಣೀರ ಅಪ್ಪಿತು
ಬೆಣಚುಕಲ್ಲು
ಬೆಣ್ಣೆ ಬೀದಿಯಾಯಿತು
ಕಾಡ ಮುಳ್ಳು
ಜೀವಕೆ ಹಾಡ ಸೂಸಿತು
ನೆತ್ತಿಯ ಕಾದೆಣ್ಣೆ
ಕಾರುಣ್ಯವ ಸ್ಖಲಿಸಿತು
ರಕ್ಕಸ ಬೇಲಿ
ಹೂಗಳ ಮುಡಿಸಿತು
ಎದೆಯ ಚೇಳು
ಮೀಟು ತಂತಿಯಾಯಿತು
ಕೂರಲಗು
ಕೊರಳ ದನಿಯಾಯಿತು
ಕರುಳ ಖಾರ
ಸಿಹಿಯ ಕರುಣಿಸಿತು
ಜಗದ ಕಾರ್ಕೋಟಕಗಳು
ಬೆಳಕ ಕಿಟಕಿಯಾಯಿತು

ಅರೆ!
ನುಂಗಿದ್ದ ಸೂಜಿಗೆ ದಾರವೊಂದು ದಕ್ಕಿಬಿಟ್ಟಿದೆ
ಹೊಲಿದ ಬಟ್ಟೆ ಇನ್ನು ಹರಿಯಲಾರದು

2 Responses

  1. Pravara says:

    ಎಷ್ಟೊಳ್ಳೆ ಪದ್ಯ ಓದಿಸಿದ್ರಿ ನಾಡಿಗ್ ಸರ್…

  2. Bhavya says:

    ಬ್ಯೂಟಿಫುಲ್ ಸರ್ …

Leave a Reply

%d bloggers like this: