RBI ಲೆಕ್ಕ ಮಾಡ್ತಿರೋದು ಕರೆನ್ಸಿ ಚೂರುಗಳನ್ನೋ?

ಇನ್ನು ಅಂದಾಜು 48ಗಂಟೆಗಳಲ್ಲಿ, ದೇಶದ ಐನೂರು ಮತ್ತು ಒಂದು ಸಾವಿರ ರೂಪಾಯಿ ಕರೆನ್ಸಿಗಳು ಬರೀ ಕಾಗದದ ತುಂಡುಗಳಾಗಿ ಒಂದು ವರ್ಷ ಪೂರೈಸುತ್ತದೆ. ನೋಟು ರದ್ಧತಿ ಎಂಬ ಸರ್ಕಾರಿ ಅವಿವೇಕದ ಪರಿಣಾಮಗಳು ಎಲ್ಲೆಡೆ ಎದ್ದು ಕಾಣಲಾರಂಭಿಸಿದ್ದು, ದೇಶದ ಕಟ್ಟಕಡೆಯ ವ್ಯಕ್ತಿಯ ತನಕವೂ ಈ “ಸುಧಾರಣೆ” ತಲುಪಿರುವುದು ಹಳ್ಳಿಹಳ್ಳಿಗಳಲ್ಲೂ ಬೆಳಕಿಗೆ ಬರತೊಡಗಿದೆ. ಇರಲಿ ಬಿಡಿ. ಈ ವಾರವಿಡೀ ಈ ಬಗ್ಗೆ ಪತ್ರಿಕೆಗಳು ರೀಮುಗಟ್ಟಲೆ ಬರೆಯಲಿವೆ. ಓದಿ ಆನಂದಿಸಿ.

ನಾನು ಹೇಳಹೊರಟಿರುವುದು ಈಗ ಬೇರೆಯದೇ ಸಂಗತಿ.

ಕೇರಳದ ಕಣ್ಣೂರು ಜಿಲ್ಲೆಯಲ್ಲಿ ವಾಳಪಟ್ಟಣಂ ಎಂಬ ಊರಿದೆ. ಅಲ್ಲಿ ದಿ ವೆಸ್ಟರ್ನ್ ಇಂಡಿಯಾ ಪ್ಲೈವುಡ್ ಲಿಮಿಟೆಡ್ ಎಂಬ ಒಂದು ಖಾಸಗೀ ಸಂಸ್ಥೆ ಪೇಪರ್ ಪಲ್ಪ್ ಬೋರ್ಡ್ ಗಳನ್ನು, ಪ್ಲೈ ಉಡ್ ಗಳನ್ನು ತಯಾರಿಸಿ ಮಾರುತ್ತದೆ. ಆ ಸಂಸ್ಥೆ ಕಳೆದ ವರ್ಷ ಡಿಸೆಂಬರಿನಲ್ಲಿ ದೇಶವ್ಯಾಪಿ ಸುದ್ದಿ ಮಾಡಿತ್ತು. ಟೆಲಿವಿಷನ್ ಚಾನೆಲ್ಲುಗಳು ಆ ಫ್ಯಾಕ್ಟರಿಯನ್ನು ತೋರಿಸಿದ್ದೇ ತೋರಿಸಿದ್ದು! ಅದು ಯಾಕಾಗಿ ಎಂಬುದು ನೆನಪಿದೆಯೇ?

ಕೇರಳದ ತಿರುವನಂತಪುರಂನಲ್ಲಿ ಭಾರತೀಯ ರಿಸರ್ವ್ ಬ್ಯಾಂಕಿನ ಪ್ರಾದೇಶಿಕ ಶಾಖೆ ಇದೆ. ಅವರು ನೋಟುರದ್ಧತಿ ಆಗಿ ಬಂದ ಹಳೆಯ 1000 ಮತ್ತು 500ರೂಪಾಯಿ ನೋಟುಗಳನ್ನು ಏನು ಮಾಡುವುದಪ್ಪ ಎಂದು ತಲೆಕೆಡಿಸಿಕೊಂಡಿದ್ದರು. ಆಗ ಅವರಿಗೆ ಹಠಾತ್ ಹೊಳೆದದ್ದು – ದಿ ವೆಸ್ಟರ್ನ್ ಇಂಡಿಯಾ ಪ್ಲೈವುಡ್ ಲಿಮಿಟೆಡ್.  ಈ ಸಂಸ್ಥೆ ಕಾಗದ, ರಟ್ಟುಗಳನ್ನು ಪಲ್ಪ್ ಬೋರ್ಡ್ ಆಗಿ ಪರಿವರ್ತಿಸುವ ತಂತ್ರಜ್ನಾನ ಹೊಂದಿದ್ದು, ಕೇರಳದ ರಿಸರ್ವ್ ಬ್ಯಾಂಕ್ ಕಚೇರಿಯ ವ್ಯಾಪ್ತಿಯಲ್ಲಿ ಸಂಗ್ರಹವಾದ ಎಲ್ಲ ಕರೆನ್ಸಿಗಳನ್ನು ಆ ಸಂಸ್ಥೆಗೆ ಒದಗಿಸಲಾಗಿತ್ತು. ಅಲ್ಲಿ ಒಳ್ಳೆಯ ನಾರಿನಂಶ ಹೊಂದಿರುವ ಗುಣಮಟ್ಟದ ನೋಟು ಚೂರುಗಳನ್ನು ಸಣ್ಣಗೆ ಕತ್ತರಿಸಿ ತುಂಡುಮಾಡಿ ಪಲ್ಪ್ ಬೋರ್ಡ್ ತಯಾರಿ ಮಾಡಲಾಗಿತ್ತು.

ಈ ಸುದ್ದಿ, ಮಾಧ್ಯಮಗಳ ಕೈಗೆ ಸಿಕ್ಕಿದ್ದು ಸುಮಾರಿಗೆ ಡಿಸೆಂಬರ್ ಮೊದಲ ವಾರದಲ್ಲಿ. ಆ ವೇಳೆಗೆ ತಿರುವನಂತಪುರಂ ರಿಸರ್ವ್ ಬ್ಯಾಂಕಿನ ಶಾಖೆಯಿಂದ ಮೂರು ವಾರಗಳಲ್ಲಿ ಅಂದಾಜು 80 ಮೆಟ್ರಿಕ್ ಟನ್ ರೂಪಾಯಿ ನೋಟು ಚೂರುಗಳು 466ಕಿಮೀ ದೂರದ ವಾಳಪಟ್ಟಣಂ ತಲುಪಿ, ಅಲ್ಲಿ ಪುಡಿಪುಡಿಯಾಗಿ ಪಲ್ಪ್ ಬೋರ್ಡ್ ಉತ್ಪಾದನೆ ಆರಂಭವಾಗಿತ್ತು. ಆ ಹೊತ್ತಿಗೆ ದೇಶದಾದ್ಯಂತ ಅಂದಾಜು ಎಂಟು ಲಕ್ಷ ಕೋಟಿ ರದ್ದಾದ ಕರೆನ್ಸಿ ನೋಟುಗಳು ರಿಸರ್ವ್ ಬ್ಯಾಂಕನ್ನು ತಲುಪಿದ್ದವು ಎನ್ನುತ್ತದೆ ವರದಿ.

ಮಾಧ್ಯಮಗಳು ದಿ ವೆಸ್ಟರ್ನ್ ಇಂಡಿಯಾ ಪ್ಲೈವುಡ್ ಲಿಮಿಟೆಡ್ ಸಂಸ್ಥೆಯ ಆಡಳಿತ ನಿರ್ದೇಶಕರನ್ನು ಮಾತನಾಡಿಸಿದಾಗ, ಅವರು “ಕರೆನ್ಸಿ ನೋಟಿನ ಕಾಗದ ಸುಲಭದಲ್ಲಿ ರಿಸೈಕಲಿಂಗ್ ಆಗುವಂತಹದಲ್ಲ. ಆದರೆ ನಮ್ಮ ಇಂಜಿನಿಯರ್ ಗಳು ಅದನ್ನು ಸಾಧಿಸಿದರು. ಇದರಿಂದ ನಮಗೆ ವೆಚ್ಚ ಉಳಿತಾಯವೂ ಆಗಿದೆ ಜೊತೆಗೆ ಇದು ಪರಿಸರ ಸ್ನೇಹಿ”ಎಂದಿದ್ದರು. ಸಂಸ್ಥೆಯ ಜನರಲ್ ಮ್ಯಾನೇಜರ್ ಪಿ ಎಂ ಸುಧಾಕರನ್ ನಾಯರ್ ಅವರು ಮಾಧ್ಯಮಗಳ ಜೊತೆ ಮಾತನಾಡಿ, “ಹಿಂದೆಲ್ಲ ರಿಸರ್ವ್ ಬ್ಯಾಂಕ್ ಈ ಹಳೆಯ ನೋಟುಗಳನ್ನು ಸುಟ್ಟುಹಾಕುತ್ತಿತ್ತು. ಈಗ ಪರ್ಯಾಯ ಸಾಧ್ಯವಾಗಿದೆ. ಆದರೆ, ನಾವು ಪಲ್ಪ್ ಬೋರ್ಡಿನಲ್ಲಿ ಕರೆನ್ಸಿ ಪುಡಿಯ ಪ್ರಮಾಣವನ್ನು ನಿಗದಿತ ಮಟ್ಟದಲ್ಲಿ ಇರಿಸದಿದ್ದರೆ ಅದು ನಿರುಪಯುಕ್ತವಾದೀತು”ಎಂದಿದ್ದರು.

ಫ್ಯಾಕ್ಟರಿ ಮೆಟ್ರಿಕ್ ಟನ್ನಿಗೆ 250 ರೂಪಾಯಿ ನೀಡಿ ನೋಟಿನ ಚೂರುಗಳನ್ನು ಖರೀದಿಸುತ್ತಿದ್ದು, ಅದು ತಿರುವನಂತಪುರದಿಂದ ಫ್ಯಾಕ್ಟರಿ ಅವರಣಕ್ಕೆ ತಲುಪು ವೇಳೆಗೆ ಟನ್ನೊಂದರ 2000ರೂಪಾಯಿ ವೆಚ್ಚ ತಗಲುತ್ತದೆ ಎಂದು ಮಾಧ್ಯಮಗಳಿಗೆ ಹೇಳಲಾಗಿತ್ತು.

ತಿಂಗಳಿಗೆ ಅಂದಾಜು 80  ಮೆಟ್ರಿಕ್ ಟನ್ ನೋಟು ಚೂರುಗಳು ಪಲ್ಪ್ ಬೋರ್ಡಿಗೆ ಬಳಕೆಯಾಗುತ್ತಿವೆಯಾದರೆ, ಈಗ 12ತಿಂಗಳುಗಳಲ್ಲಿ 960 ಮೆಟ್ರಿಕ್ ಟನ್ ಕರೆನ್ಸಿ ನೋಟು ಚೂರುಗಳು ಪುಡಿಯಾಗಿ ನಾಶವಾಗಿರಬೇಕು!

ಆದರೆ ದಿಲ್ಲಿಯಲ್ಲಿ ಬೇರೆಯೇ ಸುದ್ದಿ ಕೇಳಿಬರುತ್ತಿದೆ. ದಿಲ್ಲಿಯ ಸುದ್ದಿಗೂ ವಾಳಪಟ್ಟಣಂ ಸುದ್ದಿಗೂ ತಾಳೆಯಾಗುತ್ತಿಲ್ಲ. ರಿಸರ್ವ್ ಬ್ಯಾಂಕ್ ಈ ವರ್ಷ ಆಗಸ್ಟ್ ಅಂತ್ಯಕ್ಕೆ ಬಿಡುಗಡೆ ಮಾಡಿದ ವಾರ್ಷಿಕ ವರದಿಯಲ್ಲಿ, ಮಾರುಕಟ್ಟೆಯಲ್ಲಿರುವ 1000ಮತ್ತು 500ರೂ ಕರೆನ್ಸಿಗಳಲ್ಲಿ 98.96% ಕರೆನ್ಸಿ ಡಿಮಾನೆಟೈಸೇಷನ್ ಫಲವಾಗಿ ರಿಸರ್ವ್ ಬ್ಯಾಂಕಿಗೆ ವಾಪಸ್ ಬಂದಿದೆ.2016 ನವೆಂಬರ್ 8ರಂದು ಮಾರುಕಟ್ಟೆಯಲ್ಲಿದ್ದ 15.44 ಲಕ್ಷ ರದ್ದಾದ ನೋಟುಗಳಲ್ಲಿ 15.28ಲಕ್ಷ ಕೋಟಿ ರದ್ದಾದ ನೋಟುಗಳು ರಿಸರ್ವ್ ಬ್ಯಾಂಕಿಗೆ ವಾಪಸ್ ಬಂದಿವೆ ಎಂದು ಹೇಳಿದೆ. ಇದಲ್ಲದೇ ಈ ನೋಟುಗಳ ಎಣಿಕೆ ಇನ್ನೂ ಮುಗಿದಿಲ್ಲ ಎಂದೂ ಹೇಳಲಾಗಿದೆ.

ಮಾಹಿತಿ ಹಕ್ಕು ಕಾಯಿದೆಯನ್ವಯ ಕೇಳಿದಾಗ ರಿಸರ್ವ್ ಬ್ಯಾಂಕು, ನವೆಂಬರ್ 8ರಂದು ದೇಶದಲ್ಲಿ 1716.5 ಕೋಟಿ 500ರೂಪಾಯಿ ನೋಟುಗಳು ಮತ್ತು 685.8 ಕೋಟಿ 1000 ರೂಪಾಯಿ ನೋಟುಗಳು ಚಲಾವಣೆಯಲ್ಲಿದ್ದವು. ಅವುಗಳಲ್ಲಿ ಸೆಪ್ಟಂಬರ್ ಅಂತ್ಯಕ್ಕೆ 1134 ಕೋಟಿ 500 ರೂಪಾಯಿ ನೋಟುಗಳು ಮತ್ತು 524.90 ಕೋಟಿ 1000ರೂಪಾಯಿ ನೋಟುಗಳ ಎಣಿಕೆ ಮುಗಿದಿದೆ ಅವುಗಳ ಮೌಲ್ಯ ಕ್ರಮವಾಗಿ 5.67ಲಕ್ಷ ಕೋಟಿ ರೂಪಾಯಿ ಮತ್ತು 5.24 ಲಕ್ಷ ಕೋಟಿ ರೂಪಾಯಿ ಅಂದರೆ ಒಟ್ಟು 10.91 ಲಕ್ಷ ಕೋಟಿ ರೂಪಾಯಿಗಳು ಎಂದು ವಿವರ ನೀಡಿದೆ.

ನೋಟುಗಳ ಲೆಕ್ಕವೇ ಒಂದು ವರ್ಷವಾದರೂ ಇನ್ನೂ ಪೂರ್ಣವಾಗಿಲ್ಲ. ಆದರೆ, ಕಳೆದ ನವೆಂಬರ್ ತಿಂಗಳಿನಿಂದಲೇ ಕರೆನ್ಸಿಗಳನ್ನು ನಾಶಪಡಿಸಿ ದಿ ವೆಸ್ಟರ್ನ್ ಇಂಡಿಯಾ ಪ್ಲೈವುಡ್ ಲಿಮಿಟೆಡ್ ಗೆ ಮಾರಲಾಗುತ್ತಿದೆ ಎಂಬ ಸುದ್ದಿಗಳು ಪರಸ್ಪರ ತಾಳೆ ಆಗುತ್ತಿಲ್ಲ. ಒಂದು ವೇಳೆ ಪ್ರಕ್ರಿಯೆ ಪೂರ್ಣವಾಗಿರುವ ಕರೆನ್ಸಿಗಳನ್ನು ಮಾತ್ರ ಚೂರುಮಾಡಿ ಫ್ಯಾಕ್ಟರಿಗೆ ಕಳುಹಿಸಲಾಗುತ್ತಿದೆ ಎಂದಿಟ್ಟುಕೊಂಡರೂ, ಈ ಲಾಜಿಕ್ ಅರಗಿಸಿಕೊಳ್ಳುವುದು ಕಷ್ಟ. ಯಾಕೆಂದರೆ ಕರೆನ್ಸಿಯನ್ನು ಕೇಜಿ ಲೆಕ್ಕದಲ್ಲಿ ತೂಗಿದರೆ ಅದು ಸಣ್ಣಗಾತ್ರವೇನಲ್ಲ. ಒಂದು ತಿಂಗಳಿನಲ್ಲಿ 80,000 ಕಿಲೋಗ್ರಾಂ ಕರೆನ್ಸಿ ಚೂರಾಗಿ ಫ್ಯಾಕ್ಟರಿ ತಲುಪಿದೆ. ಹೆಚ್ಚಿನಂಶ ಒಂದು ಕಿಲೋಗ್ರಾಂನಲ್ಲಿ 1000/500  ಕರೆನ್ಸಿಗಳು ಎಷ್ಟು ಹಿಡಿದಾವೆಂಬ ಲೆಕ್ಕ ಸಿಕ್ಕರೆ, ಈ ಒಗಟು ಒಡೆದೀತು.

ಹೆಚ್ಚಿನ ಓದಿಗಾಗಿ: ಫ್ಯಾಕ್ಟರಿಯಲ್ಲಿ ನೋಟುಚೂರುಗಳನ್ನು ಪಲ್ಪ್ ಬೋರ್ಡ್ ಮಾಡುತ್ತಿರುವ ಬಗ್ಗೆ ಎನ್ ಡಿ ಟಿ ವಿ ಮಾಡಿದ ವರದಿ: https://www.ndtv.com/kerala- news/from-hard-cash-to- hardboard-how-old-rs-500-1- 000-notes-are-being-recycled- 1632919

1 Response

 1. D S PRAKASH says:

  ದೇಶದ ಆರ್ಥಿಕತೆಯನ್ನು ಬುಡಮೇಲು ಮಾಡಿ ತನ್ಮೂಲಕ ದೇಶದಲ್ಲಿ ಅಲ್ಲೋಲ ಕಲ್ಲೋಲವನ್ನುಂಟು ಮಾಡಲು ನಮ್ಮ ಪಕ್ಕದ ದೇಶ ಸಂಚನ್ನು ರೂಪಿಸಿದೆಯಲ್ಲದೇ ಸದ್ಯದಲ್ಲಿಯೇ ಅದನ್ನು ಕಾರ್ಯ ರೂಪಕ್ಕೆ ತರಲು ಶತಾಯ ಗತಾಯ ತನ್ನ ಪ್ರಯತ್ನ ಮಾಡುತ್ತಿದೆ ಎಂದು ನಮ್ಮ ಪ್ರಧಾನ ಮಂತ್ರಿಗಳಿಗೆ ಸ್ಪಷ್ಟವಾದಾಗ ಒಂದು ದೃಢ ನಿರ್ಧಾರ ಕೈಗೊಳ್ಳಲೇ ಬೇಕಾದ ಸಂದರ್ಭ. ಆಗ ತಮ್ಮ ದೃಢವಾದ ಮತ್ತು ಅಚಲವಾದ ನಿರ್ಧಾರದಿಂದ ದೇಶದಲ್ಲಿ 1000/- ಹಾಗೂ 500/- ರೂಗಳ ಚಲಾವಣೆಯನ್ನು ಸ್ಥಗಿತಗೊಳಿಸಿ ಅವುಗಳನ್ನು ಅಮಾನ್ಯಕರಣಗೊಳಿಸಿದರು.
  ಇದರಿಂದ ನಮ್ಮ ದೇಶದಲ್ಲಿ ಅಲ್ಲೋಲ ಕಲ್ಲೋಲ ಉಂಟು ಮಾಡಬಹುದು ಎಂದು ಕನಸುಕಂಡಿದ್ದ ಪಾಕಿಸ್ತಾನಕ್ಕೆ ಸರಿಯಾಗಿ ಮುಖಭಂಗವಾಗಿ ಸಖತ್ ನಿರಾಸೆಯಾಗಿದ್ದು ಸುಳ್ಳೇ ?
  ಕೋಟಿಗಟ್ಟಲೆ ಹಣವನ್ನು ಗೋಣಿ ಚೀಲಗಳಲ್ಲಿ ತುಂಬಿ ಇಟ್ಟದ್ದು, ಅಲ್ಮೇರಗಳಲ್ಲಿ ಜೋಡಿಸಿಟ್ಟಿದ್ದ ಕಾಳಧನಿಕರಿಗೆ ಸರಿಯಾಗಿ ಚಾಟಿ ಬಿಸಿದಂತಾಗಿದ್ದು ಸಣ್ಣ ಕೆಲಸವೇ ? ಈ ನೋಟು ಅಮಾನ್ಯಕರಣದಿಂದಾಗಿ ಕಪ್ಪು ಹಣಕ್ಕೆ ಬೆಲೆಯೇ ಇಲ್ಲದಂತಾಗಿ ಚರಂಡಿ ಸೇರಿದ್ದು, ನದಿಗೆ ಎಸೆಯಲ್ಪಟ್ಟಿದ್ದು ಸುಳ್ಳೇ ?
  ದೇಶದ ಭದ್ರತೆಯ ಮುಂದೆ ಉಳಿದೆಲ್ಲ ವಿಷಯಗಳು ನಗಣ್ಯ ಎಂದು ನಿಮಗಣಿಸುವುದಿಲ್ಲವೇ ?
  ಶ್ರೀಸಾಮಾನ್ಯ ಜನರಿಗೆ ಈ ಅಮಾನ್ಯಕರಣದಿಂದ ತೊಂದರೆಯಾಹಿದೆ ಎಂದು ಬಿಂಬಿಸಲ್ಪಡುತ್ಗಿದೆ ಅಷ್ಟೇ ಹೊರತು ಶ್ರೀಸಾಮಾನ್ಯ ತನ್ನಲ್ಲಿದ್ದ ಹನವನ್ನೇನು ಕಳೆದುಕೊಂಡಿಲ್ಲ ಅಲ್ಲವೇ ?
  ದೇಶದಲ್ಲಿ ಆರ್ಥಿಕತೆಯ ಪರ್ವ ಶುರುವಾಗಿದೆ ಅನಿಸುವುದಿಲ್ಲವೇ ?
  ಸಶಕ್ತ ಭಾರತಕ್ಕೆ ಒಬ್ಬರು ಮುನ್ನುಡಿ ಬರೆಯಲೇ ಬೇಕು ಅಲ್ಲವೇ ?

  ಡಿ ಎಸ್ ಪ್ರಕಾಶ್

Leave a Reply

%d bloggers like this: