ಹೇ ಇಂಡಿಯಾನು..ಇಂಡಿಯಾನು..!!

9

ಅಂಗೋಲಾದ ಆನೆಗಳೂ, `ದಂತ’ಕಥೆಗಳೂ…

ರಸ್ತೆಯುದ್ದಕ್ಕೂ ಅಂದು ನಾನು ನೋಡುತ್ತಿದ್ದಿದ್ದು ಅಂಗೋಲಾದ ಬುಷ್ ಮೀಟ್ ಟ್ರೇಡ್ ನ ಒಂದು ಮೇಲ್ನೋಟ ಮಾತ್ರ. ಆಂಗ್ಲಭಾಷೆಯಲ್ಲಿ `Tip of the iceberg’ ಅಂತಾರಲ್ಲಾ, ಹಾಗೆ! ಆದರೆ ಇದರ ಮತ್ತಷ್ಟು ಆಳಕ್ಕೆ ಹೋದಂತೆ ಇವೆಲ್ಲವೂ ನಾನು ಅಂದುಕೊಂಡಿದ್ದಕ್ಕಿಂತಲೂ ಸ್ವಾರಸ್ಯಕರವಾಗಿದ್ದಂತೂ ಹೌದು.

ಹೀಗೆ ರಸ್ತೆಯಲ್ಲಿ ಕಂಡಿದ್ದ ಕೆಲವೇ ಕೆಲವು ಪ್ರಾಣಿಗಳ ವ್ಯಾಪಾರ ವ್ಯವಸ್ಥೆಯನ್ನು ಬೆನ್ನಟ್ಟಿದ್ದ ನನಗೆ ಮತ್ತಷ್ಟು ದ್ವಾರಗಳು ತೆರೆದುಕೊಂಡಿದ್ದವು. ಲುವಾಂಡಾದಲ್ಲಿ ನಾನು ಬೀಡುಬಿಟ್ಟಿದ್ದ ಮುಹುಬೆಂತು ಪ್ರದೇಶದಿಂದ ಬೆರಳೆಣಿಕೆಯ ಕಿಲೋಮೀಟರುಗಳಷ್ಟು ದೂರದಲ್ಲಿದ್ದ ಬೆಂಫಿಕಾ ಮಾರುಕಟ್ಟೆಗೆ ಭೇಟಿ ಕೊಟ್ಟಿದ್ದ ನಾನು ಅಲ್ಲಿಯ ಸೌಂದರ್ಯವೇ ಮೈವೆತ್ತಂತಿದ್ದ ಕುಸುರಿಕಲೆಗಳನ್ನು ನೋಡಿ ಕಣ್ಣರಳಿಸಿದ್ದೆ. ಅದೆಷ್ಟು ವೈವಿಧ್ಯ, ಅದೆಂಥಾ ಸೌಂದರ್ಯ. ಮೂರ್ತಿಗಳು, ದೀಪಗಳು, ಕುಸುರಿ ಕಲೆಗಾರಿಕೆ, ಆಲಂಕಾರಿಕ ವಸ್ತುಗಳು, ಕಲಾಕೃತಿಗಳು, ಗೊಂಬೆಗಳು… ಹೀಗೆ ತರಹೇವಾರಿ ಕರಕುಶಲ ಸಂಗ್ರಹಯೋಗ್ಯ ವಸ್ತುಗಳು. ಅಂಗೋಲಾದ ಸಾಂಸ್ಕøತಿಕ ಲೋಕವೇ ಇಲ್ಲಿ ಚಾಪೆ ಹಾಸಿ ಕೂತಿದೆಯೇನೋ ಎಂಬಂತೆ.

ವಿದೇಶಿ ಪ್ರವಾಸಿಗರನ್ನೇ ಗುರಿಯಾಗಿಸಿಕೊಂಡಿದ್ದ ಈ ಬೃಹತ್ ಮಳಿಗೆಯಲ್ಲಿ ಬೆಲೆಗಳು ಆಕಾಶ ಮುಟ್ಟುತ್ತಿದ್ದರೂ ರಚ್ಚೆ ಹಿಡಿದು ಚೌಕಾಶಿ ಮಾಡಿದಲ್ಲಿ ಬೆಲೆಯು ಅರ್ಧಕ್ಕಿಳಿಯುವುದೂ ಸಾಮಾನ್ಯವಾಗಿತ್ತು. ಸುಮಾರು ಮೂವತ್ತರಿಂದ ಐವತ್ತು ಪುಟ್ಟ ಮಳಿಗೆಗಳನ್ನು ಒಂದಕ್ಕೊಂದು ತಾಗುವಂತೆ ಅಕ್ಕಪಕ್ಕದಲ್ಲಿ ಹಾಕಿದ್ದರಿಂದ ಭಯಂಕರ ಸ್ಪರ್ಧೆ ಬೇರೆ. ಎಲ್ಲಾ ವ್ಯಾಪಾರಿಗಳಿಗೂ ಗ್ರಾಹಕರನ್ನು ತಮ್ಮತ್ತ ಸೆಳೆಯುವ ತವಕ. ವ್ಯಾಪಾರೀ ಚಾಕಚಕ್ಯತೆಯಲ್ಲಿ ಇವರುಗಳು ದೆಹಲಿಯ ಖ್ಯಾತ ಮಾರುಕಟ್ಟೆಗಳ ವ್ಯಾಪಾರಿಗಳಷ್ಟು ಚಾಣಾಕ್ಷರಲ್ಲದಿದ್ದರೂ ತಮ್ಮ ಪ್ರಯತ್ನವನ್ನಂತೂ ಚೆನ್ನಾಗಿಯೇ ಮಾಡುತ್ತಿದ್ದರು.

ಬಹಳಷ್ಟು ವ್ಯಾಪಾರಿಗಳು ನನಗೆ ಪೋರ್ಚುಗೀಸ್ ಮತ್ತು ಫ್ರೆಂಚ್ ಬರದ ಪರಿಣಾಮವಾಗಿ ಹೇಗೆ ಬಲೆ ಬೀಸುವುದು ಎಂದು ಗೊಂದಲಕ್ಕೀಡಾದರೆ ಉಳಿದವರು ಆದದ್ದಾಗಲಿ ಎಂದು ನಾನು ಮಹಾ VVIPಯೇನೋ ಎಂಬಂತೆ ನನ್ನನ್ನು ಸ್ವಾಗತಿಸುತ್ತಿದ್ದರು. ಅಲ್ಪ ಸ್ವಲ್ಪ ಇಂಗ್ಲಿಷ್ ಮಾತಾಡುತ್ತಿದ್ದ ಒಬ್ಬನಂತೂ, “ಓ ನೀವು ಭಾರತೀಯ ಅಲ್ಲವೇ? ಭಾರತೀಯರ ಪೂರ್ವಜರೆಲ್ಲಾ ಆಫ್ರಿಕನ್ನರು ಗೊತ್ತಾ? ಅಂಗೋಲನ್ನರೂ ಕೂಡ ಒಂದು ರೀತಿಯಲ್ಲಿ ನಿಮ್ಮ ಪೂರ್ವಜರೇ” ಎಂದು ಹೇಳಿ ನಮ್ಮಿಬ್ಬರದ್ದು `ಜನುಮ ಜನುಮದ ಅನುಬಂಧ’ ಎಂಬ ಭಾವವನ್ನು ಮೂಡಿಸಲು ಪ್ರಯತ್ನಿಸಿದ. ಅವನ ಸೃಜನಶೀಲ ಪ್ರಯತ್ನವನ್ನು ಕಂಡ ನಾನು ಹೂಂ ಹೂಂ ಎಂದು ತಲೆಯಾಡಿಸುತ್ತಾ ಮುಗುಳ್ನಕ್ಕೆ.

ಬೆಂಫಿಕಾ ಮಾರುಕಟ್ಟೆಯಲ್ಲಿ ಮಾರಾಟಕ್ಕಿಟ್ಟಿದ್ದ ವಸ್ತುಗಳು ನಿಜಕ್ಕೂ ಬಹಳ ವಿಭಿನ್ನ ಮತ್ತು ಆಕರ್ಷಕವಾಗಿದ್ದವು. ಮರ, ಆನೆಯ ದಂತ, ಚರ್ಮ ಇತ್ಯಾದಿಗಳಿಂದ ಮಾಡಲಾಗಿದ್ದ ಹಲವು ವಸ್ತುಗಳು, ನೋಡಲು ಭಯಾನಕವಾಗಿದ್ದ ಮುಖವಾಡಗಳು, ಸ್ಥಳೀಯ ಜನಪದ ಕಳೆಯನ್ನು ಹೊತ್ತ ಮುಖವಾಡಗಳು, ಆಲಂಕಾರಿಕ ವಸ್ತುಗಳು, ಎರಡರಿಂದ ಐದಡಿ ಎತ್ತರದ ವಿಚಿತ್ರ ಪ್ರತಿಮೆಗಳು… ಹೀಗೆ ಇನ್ನೂ ಏನೇನೋ. ನೋಡಲು ವಿಚಿತ್ರವಾಗಿರುವ ವುಡೂ (ವಾಮಾಚಾರದ ಒಂದು ಬಗೆ) ಬೊಂಬೆಗಳನ್ನು ದೊಡ್ಡದಾಗಿ ನಿರ್ಮಿಸಿ ನಿಲ್ಲಿಸಿದರೆ ಹೇಗಿರುತ್ತದೆ ಎಂದು ಯೋಚಿಸಿ, ಅಂಥಾ ಬೊಂಬೆಗಳವು. ಚಿತ್ರವಿಚಿತ್ರ ಆಕಾರಗಳುಳ್ಳ, ಮನುಷ್ಯ-ಭೂತ-ಪ್ರಾಣಿಗಳನ್ನು ಒಂದೇ ದೇಹದಲ್ಲಿ ಹೊಂದಿರುವ, ಮೈತುಂಬಾ ಸಾವಿರಾರು ಮೊಳೆಗಳನ್ನು ಚುಚ್ಚಿಸಿಕೊಂಡ ವಿಲಕ್ಷಣ ಪ್ರತಿಮೆಗಳು. ಹಾರರ್ ಸಿನೆಮಾಗಳನ್ನು ನಿರ್ಮಿಸುವವರಿಗೆ ಈ ಗೊಂಬೆಗಳನ್ನು ನೋಡಿದರೆ ಕೊಂಚ ಸ್ಫೂರ್ತಿ ಸಿಗಬಹುದೇನೋ!

ಇನ್ನು ತರಹೇವಾರಿ ವಸ್ತುಗಳಾದ ಪಕ್ಷಿಗಳ ಕೊಕ್ಕು, ಉಗುರುಗಳು, ಕೊಂಬು, ಹಲ್ಲು, ಕಾಲು, ಪುಟ್ಟ ತಲೆಬುರುಡೆಗಳು, ಪಾಲಿಷ್ ಮಾಡಿದ ಪ್ಯಾಂಗೋಲಿನ್ ಗಳ ಚಿಪ್ಪು ಇತ್ಯಾದಿಗಳನ್ನೂ ಕೂಡ ಇಲ್ಲಿ ಮಾರಾಟಕ್ಕಿಡಲಾಗಿತ್ತು. ಮೊದಲೇ ಹೇಳಿದಂತೆ ಸ್ಥಳೀಯ ಮಾರುಕಟ್ಟೆಗಳಲ್ಲಿ ಸಿಗುವ ಇಂಥವುಗಳಲ್ಲಿ ಹೆಚ್ಚಿನವು ವಾಮಾಚಾರ ಮತ್ತು ಸಾಂಪ್ರದಾಯಿಕ ಔಷಧಗಳಾಗಿ ಬಳಕೆಯಾಗುವುದಾದರೆ ಇಲ್ಲಿ ಅವುಗಳನ್ನು ಆಲಂಕಾರಿಕ ವಸ್ತುಗಳಾಗಿ ಮಾರಲಾಗುತ್ತಿತ್ತು. ಇನ್ನು ಪ್ಯಾಂಗೋಲಿನ್ ಚಿಪ್ಪುಗಳಂತೆಯೇ ಆಲಂಕಾರಿಕ ವಸ್ತುಗಳಾಗಿ ಮಾರಾಟವಾಗುವಂಥವುಗಳೆಂದರೆ ಆಮೆಯ ಬೆನ್ನಕವಚ. “ಅಲ್ಲಪ್ಪಾ, ಅದ್ಯಾವುದೋ ಪ್ರಾಣಿಯ ಈ ಒಂದು ಹಲ್ಲನ್ನು ಹಿಡಿದುಕೊಂಡು ನಾನೇನು ಮಾಡಲಿ?” ಎಂದು ನಾನು ಒಬ್ಬ ವ್ಯಾಪಾರಿಯಲ್ಲಿ ಕೇಳಿದೆ. “ಕೊರಳಿಗೊಂದು ಸರ ಮಾಡಿಸಿ ಅದಕ್ಕೆ ಪೆಂಡೆಂಟಿನಂತೆ ಹಾಕಿ”, ಎಂದ ಆತ. ಈ ಮಾತಿನ ನಂತರ ಚರ್ಚೆಯನ್ನು ಮುಂದುವರಿಸುವ ಮತ್ಯಾವುದೇ ಅವಶ್ಯಕತೆಯು ನನಗೆ ಕಾಣಲಿಲ್ಲ.

ಇನ್ನು ಸಹಜವಾಗಿಯೇ ಈ ಮಳಿಗೆಯಲ್ಲಿ ವಿದೇಶೀಯರ ಪ್ರಮುಖ ಆಕರ್ಷಣೆಯಾಗಿದ್ದಿದ್ದು ಆನೆಯ ದಂತದಿಂದ ಮಾಡಿದ ವಿವಿಧ ವಸ್ತುಗಳು. ಉಂಗುರ, ಬಾಚಣಿಕೆ, ಆಟಿಕೆಗಳು, ಚಾಪ್ ಸ್ಟಿಕ್, ಸರಗಳು, ಬಳೆಗಳು, ಪುಟ್ಟ ಫಲಕಗಳು, ಚಾಕುಗಳು, ಕಿವಿಯೋಲೆಗಳು… ಹೀಗೆ ಎಲ್ಲವೂ ಆನೆಯ ದಂತಗಳದ್ದೇ. ಮತ್ತೊಬ್ಬ ವ್ಯಾಪಾರಿ ನನ್ನನ್ನು ಒಂದು ಮೂಲೆಗೆ ಕರೆದುಕೊಂಡು ಹೋಗಿ ದೊಡ್ಡ ಟ್ರಂಕ್ ಒಂದನ್ನು ಬಿಚ್ಚಲಾರಂಭಿಸಿದ್ದ. ನನಗೂ ಇದರಲ್ಲೇನು ನಿಧಿ ಇದೆಯಪ್ಪಾ ಎಂಬ ಭಾರೀ ಕುತೂಹಲ. ಹೀಗೆ ಭದ್ರವಾಗಿದ್ದ ಟ್ರಂಕ್ ಅನ್ನು ಬಿಚ್ಚಿದ್ದ ಆತ ಹೊರತೆಗೆದದ್ದು ಚಿರತೆಯೊಂದರ ಚರ್ಮವನ್ನು. ಆ ಚರ್ಮ ಅದೆಷ್ಟು ಚೆನ್ನಾಗಿತ್ತೆಂದರೆ ಈಗಷ್ಟೇ ಸುಲಿದು ತಂದಿರುವಷ್ಟು ತಾಜಾ ಆಗಿತ್ತು.

“ಎಲ್ಲರೂ ಬಂದು ಇಂಥದ್ದೇ ತೆಗೆದುಕೊಳ್ಳುವುದು. ನೀವೂ ತೆಗೆದುಕೊಳ್ಳಿ. ಒಳ್ಳೆಯ ಬೆಲೆಯಲ್ಲಿ ನಿಮಗೆ ಕೊಡೋಣ”, ಎಂದು ಪುಸಲಾಯಿಸಿದ ಆತ. “ಇದೆಲ್ಲಾ ನಮ್ಮಲ್ಲಿ ನಡೆಯೋದಿಲ್ಲ ಮಾರಾಯ”, ಎಂದೆ ನಾನು. ತಕ್ಷಣ ತನ್ನ ಧಾಟಿಯನ್ನು ಬದಲಿಸಿದ ಆತ ಮತ್ತೆ ನನ್ನ ಮುಂದೆ ತಂದಿಟ್ಟಿದ್ದು ಚಿರತೆ ಮರಿ ಮತ್ತು ಹಯೆನಾ (ನೋಡಲು ಕತ್ತೆ ಕಿರುಬದಂತಿರುವ ಪ್ರಾಣಿ) ಒಂದರ ಚರ್ಮವನ್ನು. ಅಂದಹಾಗೆ ಮೊಸಳೆಗಳ ಚರ್ಮದಿಂದ ಮಾಡಲಾಗಿದೆ ಎಂದು ಹೇಳಲಾಗುವ ಪರ್ಸುಗಳನ್ನೂ ಕೂಡ ಆತ ತನ್ನ ಸಂಗ್ರಹದಲ್ಲಿಟ್ಟಿದ್ದ. ಅಂತೂ ನಾನು ಪ್ರಾಣಿಗಳ ಚರ್ಮವನ್ನು ಭಾರತದವರೆಗೆ ತೆಗೆದುಕೊಂಡು ಹೋಗುವವನಲ್ಲ ಎಂಬುದನ್ನು ಆತನಿಗೆ ಮನದಟ್ಟುಮಾಡಿಸುವಲ್ಲಿ ನನಗೆ ಸಾಕುಸಾಕಾಗಿತ್ತು.

ಕೈಯಲ್ಲಿ ಹೆಚ್ಚು ಕಾಸಿಲ್ಲ ಎಂದು ಅಂದು ಬೆಂಫಿಕಾ ಮಾರುಕಟ್ಟೆಯಿಂದ ಹೊರಬಂದ ನನಗೆ, ನಾನು ಮಾಡಿದ್ದು ಅದೆಷ್ಟು ದೊಡ್ಡ ತಪ್ಪು ಎಂದು ತಿಳಿದುಕೊಳ್ಳಲು ಹೆಚ್ಚಿನ ಸಮಯವೇನೂ ತಗುಲಲಿಲ್ಲ. ಮುಂದಿನ ತಿಂಗಳು ಅದೇ ಜಾಗಕ್ಕೆ ನಾನು ಖರೀದಿಗೆಂದು ಬಂದಿಳಿದರೆ ಅಲ್ಲಿ ಏನೆಂದರೆ ಏನೂ ಇರಲಿಲ್ಲ. ಮಾರುಕಟ್ಟೆಯು ಎಲ್ಲಾದರೂ ಸ್ಥಳಾಂತರಗೊಂಡಿದೆಯೇ ಎಂದು ತಿಳಿಯಲು ಅಕ್ಕಪಕ್ಕದಲ್ಲಿ ಕೇಳಿದರೂ ಯಾರೊಬ್ಬರೂ ನನಗೆ ಖಚಿತ ಮಾಹಿತಿಯನ್ನು ಕೊಡುವವರಿರಲಿಲ್ಲ. ಸಹಜವಾಗಿಯೇ ನಾನು ಭಾರೀ ನಿರಾಶನಾಗಿದ್ದೆ. ಇಷ್ಟು ವೈವಿಧ್ಯತೆಯುಳ್ಳ ಮತ್ತೊಂದು ಮಾರುಕಟ್ಟೆಯು ರಾಜಧಾನಿಯಲ್ಲಿ ಸಿಗುವುದು ಸಾಧ್ಯವೇ ಇಲ್ಲ ಎಂದು ಹಳಹಳಿಸಿಕೊಂಡಿದ್ದೆ.

ಆದರೆ ಬೆಂಫಿಕಾ ಮಾರುಕಟ್ಟೆಯನ್ನು ನಾನು ಇತರ ಮಾರುಕಟ್ಟೆಯಂತೆಯೇ ಸಾಮಾನ್ಯ ಮಾರುಕಟ್ಟೆಯೆಂದು ಲೆಕ್ಕಹಾಕಿ ದಾರಿತಪ್ಪಿದ್ದೆ ಎಂದು ತಿಳಿದುಕೊಳ್ಳುವಷ್ಟರಲ್ಲಿ ಹಲವು ತಿಂಗಳುಗಳೇ ಕಳೆದಿದ್ದವು. ಅಸಲಿಗೆ ಬೆಂಫಿಕಾ ಮಾರುಕಟ್ಟೆಯು ತನ್ನ ವೈವಿಧ್ಯಮಯ ಸರಕುಗಳಿಂದ ಅದೆಷ್ಟು ಪ್ರಖ್ಯಾತಿಯನ್ನು ಪಡೆದುಕೊಂಡಿತ್ತೋ, ಆನೆಯ ದಂತಗಳಿಂದ ಮಾಡಿದ ಸರಕುಗಳಿಂದ ಅಷ್ಟೇ ಕುಖ್ಯಾತಿಯನ್ನೂ ಪಡೆದಿತ್ತು. ವಿಶೇಷವಾಗಿ ಕೆಲ ಸಂಶೋಧಕರು, ಪತ್ರಕರ್ತರು ಮತ್ತು ಪರಿಸರ ತಜ್ಞರು ಆನೆದಂತಗಳ ಸಂಬಂಧ ಈ ಮಾರುಕಟ್ಟೆಯನ್ನು ಬಹುಗಂಭೀರವಾಗಿ ಪರಿಗಣಿಸಿದ್ದಲ್ಲದೆ ಈ ಬಗ್ಗೆ ದೊಡ್ಡ ದನಿಯನ್ನೇ ಎತ್ತಿದ್ದರು.

ಆನೆಗಳ ದಂತಗಳಿಂದ ಮಾಡಲಾಗುವ ಸರಕನ್ನು ದೊಡ್ಡ ಪ್ರಮಾಣದಲ್ಲಿ, ಇಷ್ಟು ಖುಲ್ಲಂಖುಲ್ಲಾ ಮಾರಾಟಕ್ಕಿಟ್ಟಿರುವುದನ್ನು ಕಂಡ ಈ ಆಸಕ್ತರು ಅಚ್ಚರಿಗೊಳಗಾಗಿದ್ದರೋ ಏನೋ! ಕೆಲ ವರ್ಷಗಳ ಹಿಂದೆ ರಾಶಿ ರಾಶಿ ಆನೆಯ ದಂತಗಳ ಸರಕುಗಳನ್ನು ಇಲ್ಲಿ ಪ್ರದರ್ಶನ ಮತ್ತು ಮಾರಾಟಕ್ಕಿಡಲಾಗುತ್ತಿತ್ತಂತೆ. ಹಾಗೆ ನೋಡಿದರೆ ನಾನು ನೋಡಿದ ದಂತಗಳ ಸರಕುಗಳು ಏನೇನೂ ಅಲ್ಲವೆಂದು ನನಗೆ ತಿಳಿದದ್ದೇ ಆವಾಗ.

ಅಂಗೋಲಾ ಸೇರಿದಂತೆ ಆಫ್ರಿಕಾದ ಆನೆದಂತಗಳ ಸರಕುಗಳು ದೊಡ್ಡ ಪ್ರಮಾಣದಲ್ಲಿ ಸಾಗಾಟವಾಗುವುದು ಬ್ಯಾಂಕಾಕ್, ಕಾಂಬೋಡಿಯಾದಂತಹ ದೇಶಗಳಿಗೆ. ಪ್ರಯಾಣಿಕರು ಹಲವು ಬಾರಿ ಈ ಸರಕುಗಳನ್ನು ಅಕ್ರಮವಾಗಿ ತೆಗೆದುಕೊಂಡು ಹೋಗಲು ಪ್ರಯತ್ನಿಸಿ, ನಂತರ ಸಿಕ್ಕಿಬಿದ್ದು ನ್ಯಾಯಾಲಯದ ಮೆಟ್ಟಿಲೇರಿದ ಪ್ರಕರಣಗಳೂ ಇವೆ. ಸೆಪ್ಟೆಂಬರ್ 2013 ರಲ್ಲಿ ನಡೆದ ಪ್ರಕರಣವೊಂದರಲ್ಲಿ ಬ್ಯಾಂಕಾಕ್ ಏರ್-ಪೋರ್ಟಿನಲ್ಲಿ ನೂರು ಕಿಲೋಗ್ರಾಮ್ ಗೂ ಹೆಚ್ಚು ತೂಕವಿದ್ದ ಆನೆದಂತಗಳ ಸರಕನ್ನು ವಶಪಡಿಸಿಕೊಳ್ಳಲಾಗಿತ್ತು. ವಿಯೆಟ್ನಾಮ್ ದೇಶದ ದಂಪತಿಗಳೊಬ್ಬರಿಗೆ ಸೇರಿದ ಈ ಭಾರೀ ಡಬ್ಬಿಗಳು ಅಂಗೋಲಾದಿಂದ ಹೊರಟು ಇಥಿಯೋಪಿಯಾವನ್ನೂ ಮಾರ್ಗವಾಗಿ ಥಾಯ್ಲೆಂಡ್ ವರೆಗೆ ಬಂದಿದ್ದವು. ಇದರ ಹಿಂದೆ ನಡೆದಿದ್ದ ಜುಲೈ 2012 ರ ಪ್ರಕರಣವೊಂದರಲ್ಲಿ ಅರ್ಧ ಟನ್ನಿಗೂ ಹೆಚ್ಚಿದ್ದ ಆನೆದಂತಗಳನ್ನು ಥಾಯ್ಲೆಂಡ್ ನಲ್ಲಿ ವಶಪಡಿಸಿಕೊಳ್ಳಲಾಗಿತ್ತು. ಕೀನ್ಯಾದಿಂದ ಬಂದಿದ್ದ ಈ ಡಬ್ಬಿಗಳ ಮೇಲೆ `ಕರಕುಶಲ ವಸ್ತುಗಳು’ ಎಂಬ ಲೇಬಲ್ ಹಚ್ಚಿ ಅಧಿಕಾರಿಗಳ ಕಣ್ಣಿಗೆ ಮಣ್ಣೆರಚುವ ತಂತ್ರವನ್ನು ಇಲ್ಲಿ ಖದೀಮರು ಬಳಸಿಕೊಂಡಿದ್ದರು.

ಆನೆಗಳ ಸಂರಕ್ಷಣೆಯ ನಿಟ್ಟಿನಲ್ಲಿ ಹೊರಗಿನಿಂದ ಬಂದ ಜನರು ದೊಡ್ಡ ಮಟ್ಟದಲ್ಲಿ ಚರ್ಚೆಯನ್ನು ಹುಟ್ಟು ಹಾಕಿ, ಅಂಗೋಲಾ ಸರಕಾರವನ್ನು ತರಾಟೆಗೆ ತೆಗೆದುಕೊಂಡು ಕೊನೆಗೆ ತಲೆಬಾಗುವಂತೆ ಮಾಡಿದ ಘಟನೆಯು ನಿಜಕ್ಕೂ ವಿಪರ್ಯಾಸವೇ. ಹಲವು ವರದಿಗಳು ಮತ್ತು ಅಭಿಪ್ರಾಯಗಳು ದಾಖಲಿಸಿರುವಂತೆ ಇವುಗಳು ದಂಡಿಯಾಗಿ ಹರಿದುಬರುವುದು ಪಕ್ಕದಲ್ಲೇ ಇರುವ ಡೆಮೋಕ್ರಟಿಕ್ ರಿಪಬ್ಲಿಕ್ ಆಫ್ ಕಾಂಗೋ (ಡಿ.ಆರ್.ಸಿ) ದೇಶದಿಂದ. ಮಧ್ಯ ಆಫ್ರಿಕಾವನ್ನು ಪರಿಗಣಿಸಿದರೆ ಅರಣ್ಯಗಳನ್ನು ಮತ್ತು ವನ್ಯಜೀವಿ ಸಂಕುಲವನ್ನು ದೊಡ್ಡ ಪ್ರಮಾಣದಲ್ಲಿ ಹೊಂದಿರುವ ಮುಖ್ಯ ದೇಶವೆಂದರೆ ಡಿ.ಆರ್.ಸಿ. ಹೀಗೆ ಆನೆಗಳ ದಂತವನ್ನು ದಂಡಿಯಾಗಿ ಇಲ್ಲಿನ ಸರಹದ್ದುಗಳ ಮಾರ್ಗವಾಗಿ ತರಿಸಿಕೊಳ್ಳುತ್ತಾ ಅಕ್ರಮ ಸಾಗಾಣಿಕೆಗೆ ಅಂಗೋಲಾವು ಪ್ರೋತ್ಸಾಹವನ್ನು ನೀಡುತ್ತಿದ್ದುದಲ್ಲದೆ ಡಿ.ಆರ್.ಸಿ ಯಲ್ಲಿ ಕಾಡುಗಳ ಮತ್ತು ಆನೆಗಳ ನಾಶದಲ್ಲೂ ಪ್ರಮುಖ ಪಾತ್ರವನ್ನು ವಹಿಸಿತ್ತು.

ಆಮದು, ರಫ್ತುಗಳು ಸೇರಿದಂತೆ ಅಳಿವಿನಂಚಿನಲ್ಲಿರುವ ಜೀವಸಂಕುಲಗಳಿಗೆ ಸಂಬಂಧಿಸಿದ ಎಲ್ಲಾ ವಿಧದ ವ್ಯಾಪಾರ-ವಹಿವಾಟುಗಳನ್ನು ಅಂತಾರಾಷ್ಟ್ರೀಯ ಮಟ್ಟದಲ್ಲಿ ನಿಯಂತ್ರಿಸಲು ಮಾಡಿಕೊಳ್ಳುವ ಕರಾರಾದ ಸೈಟ್ಸ್ (CITES – Convention on International Trade in Endangered Species of Wild Fauna and Flora) ಗೆ ಕೂಡ ಅಂಗೋಲಾ ಸೇರಿಕೊಂಡಿದ್ದು ಇತ್ತೀಚೆಗಷ್ಟೇ. ಆ ಹೊತ್ತಿಗೆ ತನ್ನ ನೆಲದಲ್ಲಿ ಆನೆಗಳ ಸಂತತಿಯಿದ್ದ ಹೊರತಾಗಿಯೂ ಸೈಟ್ಸ್ ಕರಾರಿಗೆ ಒಳಪಡದೆ ಉಳಿದಿದ್ದ ರಾಷ್ಟ್ರವೆಂದರೆ ಅಂಗೋಲಾ ಒಂದೇ. ಅಂತೂ ಅಕ್ಟೋಬರ್ 2013 ರಲ್ಲಿ ಅಂಗೋಲಾ ಸೈಟ್ಸ್ ಕರಾರಿಗೆ ಅಧಿಕೃತವಾಗಿ ಸೇರಿಕೊಂಡಾಗ ಅದು ಸೈಟ್ಸ್ ಅಧೀನಕ್ಕೆ ಬಂದ 179 ನೇ ರಾಷ್ಟ್ರ. ಮುಂದೆ ಡಿಸೆಂಬರ್ 31, 2013 ರಲ್ಲಿ ಈ ಕರಾರು ಪೂರ್ಣರೂಪದಲ್ಲಿ ಕಾರ್ಯರೂಪಕ್ಕೆ ಬರುವಂತಾಯಿತು. ಸದ್ಯ 183 ರಾಷ್ಟ್ರಗಳು ಸೈಟ್ಸ್ ಕರಾರಿನ ಅಧೀನದಲ್ಲಿವೆ ಎಂಬುದಾಗಿ ಸೈಟ್ಸ್ ನ ಅಂತರ್ಜಾಲ ತಾಣವು ಹೇಳುತ್ತದೆ.

ಬೆಂಫಿಕಾದಿಂದ ಸ್ಥಳಾಂತರಗೊಂಡ ಮಾರುಕಟ್ಟೆ ಮುಂದೆ ಎಲ್ಲಿ ನೆಲೆಯೂರಿತೆಂದು ನನಗೆ ಕೊನೆಗೂ ತಿಳಿಯಲಿಲ್ಲ. ಇದಾದ ಸುಮಾರು ಒಂದು ವರ್ಷದ ನಂತರ ನಾನು ಅಂಗೋಲಾದ ಗುಲಾಮಗಿರಿಯ ಇತಿಹಾಸವನ್ನು ಹೇಳುವ ವಸ್ತುಸಂಗ್ರಹಾಲಯವೊಂದಕ್ಕೆ ಹೋಗಿದ್ದಾಗ ಅಲ್ಲಿಯ ಆವರಣದಲ್ಲಿ ಇಂಥದ್ದೇ ವ್ಯವಸ್ಥಿತ ಮಾರುಕಟ್ಟೆಯೊಂದನ್ನು ನೋಡಿದ್ದೆ. ನೀವು ಕಲೆಯನ್ನು ಇಷ್ಟಪಡುವವರಾಗಿದ್ದರೆ ಇಂಥಾ ಮಾರುಕಟ್ಟೆಗಳಿಗೆ ಹೋಗುವುದೆಂದರೆ ಮಕ್ಕಳನ್ನು ಚಾಕ್ಲೇಟುಗಳ ಅಂಗಡಿಯೊಳಕ್ಕೆ ತಂದು ಬಿಟ್ಟಂತೆ. ಪುಸ್ತಕಪ್ರಿಯರನ್ನು ಪುಸ್ತಕದಂಗಡಿಯೊಳಕ್ಕೆ ಬಿಟ್ಟುಬಂದಂತೆ. ಮನಸ್ಸು ಎಲ್ಲವನ್ನೂ ಖರೀದಿಸಬೇಕೆಂಬ ದುರಾಸೆಗೆ ಬೀಳುವುದು ಸಹಜ.

“ಹೇ ಇಂಡಿಯಾನು… ಇಂಡಿಯಾನು…”, ಎನ್ನುತ್ತಾ ಅವರು ಕರೆಯುತ್ತಲೇ ಇದ್ದರು. ನಾನು ನನ್ನ ಖಾಲಿ ಜೇಬನ್ನು ಗುಟ್ಟಾಗಿ ಮುಟ್ಟಿಕೊಳ್ಳುತ್ತಾ ಮತ್ತೊಮ್ಮೆ ಬರುತ್ತೇನೆ ಎಂಬ ಭರವಸೆಯನ್ನು ಕೊಟ್ಟು ಮುಗುಳ್ನಗುತ್ತಾ ಮುನ್ನಡೆದಿದ್ದೆ.

Leave a Reply