ವನಮಾಲಾ ಕವಿತೆಗಳು

 

 

 

 

 

 

ವನಮಾಲಾ ಶೆಟ್ಟಿ 

 

 

 

ಆಕಾಶಕ್ಕೆ ಏಣಿಯಿಡುವಾಗ..

ಇನ್ನೊಬ್ಬರ ಖುಷಿ ಕಡೆಗಣಿಸಿ
ನೋವಿಗೂ ತೆರೆಯದಂತೆ
ಸೊಕ್ಕಿನ ಮುಷ್ಟಿಯಲಿ
ಬಾಯಿ ಮುಚ್ಚಿಸಿ
ಅನುಗಾಲವೂ ಅಧಿಕಾರದ
ಕತ್ತಿ ಝಳಪಿಸಿ
ಬೆಟ್ಟಕ್ಕೂ ಮೇಲೆ ಬಡಿವಾರದ
ಭವನ ನಿರ್ಮಿಸಿ
ಉನ್ಮತ್ತರಾಗಿ ತೂಗಿಕೊಂಡವರು
ಥಟ್ಟನೆ ನೆಲಕ್ಕುರುಳಿ ಛಿದ್ರವಾದ
ಕಥೆ ಇತಿಹಾಸದಲ್ಲಿದೆ

ಕಂಡವರ ಎದೆಮೇಲೆ ಕಾಲಿರಿಸಿ
ಉಂಡ ಮನೆ ಜಂತಿ ಎಣಿಸಿ
ಮೇಲೆ ಮೇಲೆ ಹೋದವರು
ಬಿದ್ದರೆ ಬದುಕುವುದು ಕಷ್ಟ

ಆಕಾಶಕ್ಕೆ ಏಣಿಯಿಡುವಾಗ
ಎತ್ತರದ ಲೆಕ್ಕಾಚಾರ
ಗಮನದಲ್ಲಿರಲಿ.

**

ಆ ಹೃದಯವಿರುವುದು ನಿಮ್ಮಲ್ಲೇ..

ಹುಡುಕಬೇಡಿ
ಮಂದಿರ ಮಹಲುಗಳಲ್ಲಿ
ಚೆಂದಿರನ ಬೆಳಕಲ್ಲಿ
ಚೆಂದದ ಈ ಭುವಿಯ
ಯಾವ ಶ್ರೇಷ್ಠತೆಯಲ್ಲೂ
ಪ್ರೀತಿಯನ್ನೂಹಿಸಬೇಡಿ

ಪ್ರೇಮದೊಳು ಕಾಮವನು
ಕರೆಯದಿರಿ ಅರಸದಿರಿ
ಪರಿಶುದ್ಧ ಒಲವಿನಲಿ
ವಾಂಛೆ ಬೆರೆಸದಿರಿ

ಅಮೃತವದು ಅನುರಾಗ
ಅನುನಯದಿ ಹುಟ್ಟದದು
ಕೊಟ್ಟು ಪಡೆಯುವ
ಸ್ವರ್ಗ ಸದೃಶ ಸುಖದನುಭವ
ಹೃದಯಸಂಬಂಧಿಯದು ದೇಹಕ್ಕಲ್ಲ

ಪಡೆವ ಹಠ
ತೀರದ ಚಟ
ಮನಸಿನ ತಹತಹಕ್ಕೆ
ಪ್ರೇಮದ ಹೆಸರಿಟ್ಟು
ಹಾದಿಬೀದಿಯ ಮಾತಾಗಿಸಬೇಡಿ
ಮೋಸ ಮಾಡದೆ ಮೋಸ ಹೋಗದೆ
ಎಲ್ಲೆಲ್ಲೋ ಹುಡುಕಾಡದೆ
ನಿಮ್ಮಲ್ಲೇ ಕಂಡುಕೊಳ್ಳಿ

ಪ್ರೀತಿಯಿರುವುದು ಹೃದಯದಲ್ಲೇ
ಆ ಹೃದಯವಿರುವುದು ನಿಮ್ಮಲ್ಲೇ.

**

ಉಳಿಗಾಲವಿಲ್ಲ..

ಹೂಗಳಲ್ಲಿ
ಎಲೆಗಳಲ್ಲಿ
ಪ್ರಕೃತಿಯ ನಾಜೂಕಿನ
ನೆಯ್ಗೆಗಳಲ್ಲಿ
ಹೆಣ್ಣಿನ ತುಟಿ ಕಟಿಗಳನ್ನೇ
ಅರಸುವ ಕಣ್ಣಿರುವತನಕ
ಮೈಮುಚ್ಚಿಕೊಂಡರೂ
ಹೆಣ್ಣಿಗೆ ಉಳಿಗಾಲವಿಲ್ಲ.

3 Responses

 1. hema says:

  ತುಂಬಾ ಇಷ್ಟವಾದವು ನಿಮ್ಮ ಕವಿತೆಗಳು

 2. Lalitha siddabasavayya says:

  ವನಮಾಲಾ, ಕವಿತೆಗಳು ಚೆನ್ನಾಗಿವೆ, ಇದ್ದಕ್ಕಿದ್ದಂತೆ ಬರೆಯುವುದನ್ನು ನಿಲ್ಲಿಸಿಬಿಡುತ್ತೀರಲ್ಲ, ಏಕೆ

 3. kaligananath Gudadur says:

  ಪ್ರೀತಿಯಿರುವುದು ಹೃದಯದಲ್ಲೇ
  ಆ ಹೃದಯವಿರುವುದು ನಿಮ್ಮಲ್ಲೇ.

  ತುಂಬಾ ಇಷ್ಟವಾದವು.

Leave a Reply

%d bloggers like this: