ಒಂದು ವರ್ಷದ ಭ್ರಮೆ-ಹಲವು ವರ್ಷಗಳ ನಿಷ್ಕ್ರಿಯತೆ

ನಾ ದಿವಾಕರ

ಸ್ವತಂತ್ರ ಭಾರತದ ಇತಿಹಾಸದಲ್ಲಿ ಮೂರು ಘಟನೆಗಳು ಅಥವಾ ಅಧಿಕಾರ ರಾಜಕಾರಣದ ಮೂರು ಪ್ರಮುಖ ನಿರ್ಧಾರಗಳು ದೇಶದ ದಿಕ್ಕನ್ನೇ ಬದಲಿಸಿವೆ.

ಮೊದಲನೆಯದು 1975ರ ತುರ್ತುಪರಿಸ್ಥಿತಿ, ಎರಡನೆಯದು 1991ರ ನವ ಉದಾರವಾದ-ಜಾಗತೀಕರಣದ ಅನಾವರಣ ಮತ್ತು ಮೂರನೆಯದು ನರೇಂದ್ರ ಮೋದಿ ಸರ್ಕಾರದ ಅಮಾನ್ಯೀಕರಣ ಮತ್ತು ಡಿಜಿಟಲೀಕರಣ ನೀತಿ.

ನವ ಉದಾರವಾದ ತನ್ನ ಉನ್ನತ ಹಂತ ತಲುಪುತ್ತಿದ್ದಂತೆಲ್ಲಾ ಬಂಡವಾಳ ವ್ಯವಸ್ಥೆಯನ್ನು ಪೋಷಿಸುವ ದೇಶಗಳ ಆಳುವ ವರ್ಗಗಳ ಎದೆಬಡಿತ ಹೆಚ್ಚಾಗುತ್ತಲೇ ಹೋಗುತ್ತದೆ. ಇತ್ತ ದೇಶದ ಶ್ರಮಜೀವಿಗಳ ಮತ್ತು ಜನಸಾಮಾನ್ಯರ ನಾಡಿ ಮಿಡಿತ ಕ್ಷೀಣಿಸುತ್ತಿರುತ್ತದೆ. ಈ ಸಂದರ್ಭದಲ್ಲಿ ಆಳುವ ವರ್ಗಗಳು ಕೈಗೊಳ್ಳುವ ಹಲವಾರು ನಿರ್ಧಾರಗಳು “ ಜನತೆಯ ಮತ್ತು ದೇಶದ ಉಜ್ವಲ ಭವಿಷ್ಯಕ್ಕಾಗಿ ” ಕೈಗೊಳ್ಳುವ ಕ್ರಾಂತಿಕಾರಿ (?) ನಿರ್ಧಾರಗಳಾಗುತ್ತವೆ. ತಮ್ಮ ದೇಶದ ಏಳಿಗೆಗಾಗಿ, ಪ್ರಗತಿಗಾಗಿ ಸೊಂಟಪಟ್ಟಿಗಳನ್ನು ಬಿಗಿ ಮಾಡಿಕೊಳ್ಳಲು ಸದಾ ಸಿದ್ಧರಾಗಿಯೇ ಇರುವ ಶ್ರಮಜೀವಿಗಳು ಈ ಕ್ರಾಂತಿಕಾರಿ ನಿರ್ಧಾರಗಳ ಫಲಾನುಭವಿಗಳಾಗಿ ಬಿಂಬಿಸಲ್ಪಟ್ಟರೂ ಅಂತಿಮವಾಗಿ ಹರಕೆಯ ಕುರಿಗಳಾಗಿ ತಮ್ಮ ನೆಲೆ ಕಳೆದುಕೊಳ್ಳುತ್ತಾರೆ. ಇದು ಇತಿಹಾಸ ಕಂಡಿರುವ ಸತ್ಯ , ಸಮಕಾಲೀನ ವಾಸ್ತವ.

ಇಂತಹ ಒಂದು ವಿಷಮ ಸನ್ನಿವೇಶವನ್ನು ಕಳೆದ ವರ್ಷ ನವಂಬರ್ 8ರಂದು ಭಾರತದ ಶ್ರಮಜೀವಿಗಳು ಎದುರಿಸಿದ್ದರು. ಈ ಆರ್ಥಿಕ ತುರ್ತುಪರಿಸ್ಥಿತಿ ಅಥವಾ ಅನರ್ಥಕ್ರಾಂತಿಗೆ ಇದೇ ನವಂಬರ್ 8ರಂದು ಒಂದು ವರ್ಷ ಪೂರೈಸುತ್ತಿದೆ. ನವ ಉದಾರವಾದದ ಪೋಷಕರಿಗೆ, ಕಾರ್ಪೋರೇಟ್ ಆಡಳಿತ ವ್ಯವಸ್ಥೆಯ ವಂದಿಮಾಗಧರಿಗೆ ಈ ದಿನ ಸಂಭ್ರಮದ ವರ್ಷಾಚರಣೆಯಾಗಿ ಕಾಣುತ್ತದೆ. ಆದರೆ ತಮ್ಮ ಬಳಿ ಇದ್ದ ಹಣವನ್ನೆಲ್ಲವನ್ನೂ ಸರ್ಕಾರದ ಖಜಾನೆಗೆ ತುಂಬಿದ್ದೇ ಅಲ್ಲದೆ, ತಮ್ಮ ಪ್ರತಿಯೊಂದು ಹೆಜ್ಜೆ ಗುರುತನ್ನೂ ಪ್ರಭುತ್ವದ ಕಣ್ಣೋಟಕ್ಕೆ ಒಳಪಡಿಸಲು ಸುಖಾ ಸುಮ್ಮನೆ ಅನುಮತಿ ನೀಡಿದ ಜನತೆಗೆ ಇದು ಕರಾಳ ದಿನವಾಗಿಯೇ ಕಾಣುತ್ತದೆ. ಈ ಗಂಭೀರ ಸನ್ನಿವೇಶ ಎದುರಾಗಿದೆ, ಭವಿಷ್ಯ ಮಸುಕಾಗಿದೆ, ಮುಂದಿನ ಹೆಜ್ಜೆ ಯಾವ ದಿಕ್ಕಿನಲ್ಲಿಡುವುದು ಎನ್ನುವ ಚಿಂತೆಯಲ್ಲಿ ಮುಳುಗಿರುವ ಶ್ರಮಜೀವಿಗಳಿಗೆ ಏಕೆ ಹೀಗಾಯಿತು ಎಂದು ಯೋಚಿಸುವ ವ್ಯವಧಾನವೂ ಇಲ್ಲದಂತೆ ಸಮೂಹ ಸನ್ನಿಯನ್ನು ಸೃಷ್ಟಿಸಲಾಗಿದೆ.

ನಿಜ, ಆಳುವ ವರ್ಗಗಳು ಕೈಗೊಳ್ಳುವ ನಿರ್ಧಾರಕ್ಕೆ ಪ್ರತಿಯೊಬ್ಬ ಪ್ರಜೆಯ ಸಮ್ಮತಿಯ ಮೊಹರು ಅಗತ್ಯವಿಲ್ಲ. ಚುನಾವಣೆಗಳಲ್ಲಿ ಬಹುಸಂಖ್ಯೆಯ ಜನರು ನೀಡುವ ಮತದಾನವೇ ಈ ನಿರ್ಧಾರಗಳಿಗೆ ಅಧಿಕೃತ ಅನುಮತಿಯಾಗಿಬಿಡುತ್ತದೆ. ಈ ವಿಪರ್ಯಾಸವೇ ಆಳುವ ವರ್ಗಗಳ ಪ್ರಬಲ ಶಕ್ತಿಯೂ ಆಗಿರುವುದನ್ನು ತುರ್ತುಪರಿಸ್ಥಿತಿಯಲ್ಲಿ ಕಂಡಿದ್ದೇವೆ, ಜಾಗತೀಕರಣದಲ್ಲಿ ಕಂಡಿದ್ದೇವೆ, ಅಮಾನ್ಯೀಕರಣದಲ್ಲೂ ಕಾಣುತ್ತಿದ್ದೇವೆ. “ ನನಗೆ ಐವತ್ತು ದಿನ ಸಮಯಾವಕಾಶ ಕೊಡಿ, ನನ್ನ ನಿರ್ಧಾರ ವಿಫಲವಾದರೆ ನನ್ನನ್ನು ಸುಟ್ಟುಬಿಡಿ” ಎಂದು ಹೇಳಿದ ಯಾವುದೇ ನಾಯಕರನ್ನೂ ಸಮಕಾಲೀನ ಭಾರತ ಕಂಡಿಲ್ಲ. ಅದೇ ವೇಳೆ ಎಂತಹ ದುರಂತ ಸನ್ನಿವೇಶವನ್ನು ಎದುರಿಸಿದರೂ ಆಳುವ ವರ್ಗಗಳ ಅಥವಾ ಪ್ರಭುತ್ವದ ಪ್ರತಿನಿಧಿಗಳನ್ನು ಸುಟ್ಟುಹಾಕುವ ಪ್ರವೃತ್ತಿಯನ್ನೂ ಭಾರತೀಯರು ತೋರಿಲ್ಲ, ತೋರುವುದೂ ಇಲ್ಲ.

ಹಾಗಾಗಿಯೇ ದೇಶದ ಅಮಾಯಕ ಜನಸಮುದಾಯ ಐವತ್ತು ದಿನಗಳಲ್ಲ 365 ದಿನಗಳನ್ನು ಭ್ರಮಾಲೋಕದಲ್ಲೇ ಕಳೆದಿದ್ದಾರೆ. ಮುಂದೊಂದು ದಿನ ಒಳ್ಳೆಯದಾಗುತ್ತದೆ ಎಂಬ ಗಿಣಿ ಶಾಸ್ತ್ರವನ್ನು ನಂಬಿ ಕೈಕಟ್ಟಿ ಕುಳಿತಿದ್ದಾರೆ. ಪ್ರತಿರೋಧದ ದನಿಗಳು ಬದುಕುವುದೇ ದುಸ್ತರವಾಗಿರುವ ದುರಂತ ಸನ್ನಿವೇಶವನ್ನು ನಾಗರಿಕ ಸಮಾಜ ಎದುರಿಸುತ್ತಿರುವ ಸಂದರ್ಭದಲ್ಲಿ ಅಮಾನ್ಯೀಕರಣ ಮತ್ತು ಡಿಜಿಟಲೀಕರಣದ ರಥಯಾತ್ರೆ, ಗುಡಿಸಲುಗಳನ್ನು ನೆಲಸಮ ಮಾಡುವ ಜೆಸಿಬಿಯಂತೆ ದಾಪುಗಾಲು ಹಾಕುತ್ತಿದೆ. ಇದು ಸಾಮಾನ್ಯ ಜನತೆಯ ನಿಷ್ಕ್ರಿಯತೆಯೋ ಅಥವಾ ಪ್ರಜ್ಞಾವಂತ ನಾಗರಿಕರ ನಿರ್ಲಿಪ್ತತೆಯೋ ಇತಿಹಾಸವೇ ಹೇಳುತ್ತದೆ. ಆದರೆ ಇದು ಆಳುವ ವರ್ಗಗಳ ಅಟ್ಟಹಾಸದ ತಾತ್ಕಾಲಿಕ ಗೆಲುವು ಎನ್ನುವುದು ಪ್ರಸ್ತುತ ಸಂದರ್ಭದಲ್ಲಿ ಸ್ಪಷ್ಟವಾಗುತ್ತಿದೆ. ಆದರೆ ಈ ಗೆಲುವು ವಿಜಯೋತ್ಸವವಾಗುವ ಮುನ್ನ, ದಿಗ್ವಿಜಯ ಸಾಗುವ ಮುನ್ನ ಅಶ್ವಮೇಧದ ಕುದುರೆಯನ್ನು ಕಟ್ಟಿಹಾಕಲು ಪ್ರಜೆಗಳು ಸಿದ್ಧತೆ ನಡೆಸಬೇಕಿದೆ.

ಸಮಾಜವಾದ, ಸಮತಾವಾದದ ಬೆನ್ನೇರಿ ಶ್ರಮಜೀವಿಗಳನ್ನು ರೇಸ್ ಕುದುರೆಗಳಂತೆ ಬಳಸುತ್ತಿರುವ ಆಳುವ ವರ್ಗಗಳಿಗೆ ಹುಲ್ಲು ತಿನ್ನುವ ಕುದುರೆಗಳು ಹುಲ್ಲು ತಿನ್ನಿಸಲೂ ಶಕ್ತವಾಗಿವೆ ಎಂದು ನಿರೂಪಿಸುವ ಸಂದರ್ಭ ಎದುರಾಗಿದೆ. ಇದು ಕೇವಲ ಚುನಾವಣೆ, ಮತದಾನ ಮತ್ತು ಜನಾಭಿಪ್ರಾಯದಿಂದ ಸಾಧ್ಯವಾಗುವುದಲ್ಲ. ಯಾರು ಹೀಗೆ ಮಾಡುತ್ತಿದ್ದಾರೆ ಎಂದು ಯೋಚಿಸುವುದಕ್ಕಿಂತಲೂ ಏಕೆ ಹೀಗಾಗುತ್ತಿದೆ ಎಂದು ನಾಗರಿಕ ಸಮಾಜ ಯೋಚಿಸಬೇಕಿದೆ. ಇದು ಕೇವಲ ನರೇಂದ್ರ ಮೋದಿ ಅಥವಾ ಬಿಜೆಪಿ ಸರ್ಕಾರದ ನಿರ್ಧಾರವಲ್ಲ. ನರಸಿಂಹರಾವ್, ದೇವೇಗೌಡ, ಐ ಕೆ ಗುಜ್ರಾಲ್, ವಾಜಪೇಯಿ, ಮನಮೋಹನ್ ಸಿಂಗ್ ಮತ್ತು ನರೇಂದ್ರ ಮೋದಿ ಈ ಅಶ್ವಮೇಧ ಯಾಗದ ಕಟ್ಟಾಳುಗಳು. ವಿಭಿನ್ನ ದಿಕ್ಕಿನಿಂದ ಹರಿಯುವ ತೊರೆಗಳು ಸಾಗರ ಸೇರುವಂತೆ ಆಳುವ ವರ್ಗದ, ಪ್ರಭುತ್ವದ ವಿಭಿನ್ನ ರಂಗಿನ ತೊರೆಗಳು ನವ ಉದಾರವಾದದ ಸಾಗರಕ್ಕೆ ಸೇರುತ್ತಿವೆ. ಈ ಕಡಲಾಳದ ಅಲೆಗಳು ಸುನಾಮಿಯಂತೆ ಅಪ್ಪಳಿಸಿ ಜಗತ್ತಿನ ವಿನಾಶಕ್ಕೆ ಕಾರಣವಾಗುವ ಮುನ್ನ ಹೋರಾಟದ ಸಾಗರಕ್ಕೆ ಸೇರಬೇಕಾದ ನದಿಗಳು ತಮ್ಮ ನೆಲೆಯನ್ನು ಕಂಡುಕೊಳ್ಳಬೇಕಿದೆ.

ದುರಂತ ಎಂದರೆ ಈ ಸುನಾಮಿಯನ್ನು ತಡೆಗಟ್ಟಬೇಕಾದ ಹೋರಾಟದ ನದಿಗಳು, ತೊರೆಗಳು ವರ್ಣಮಯವಾಗಿ ಕಂಡರೂ ಸಾಗರ ಸೇರುವ ಮುನ್ನವೇ ತಮ್ಮ ನೆಲೆಯನ್ನು ಕಳೆದುಕೊಂಡು ಪ್ರಭುತ್ವದ ಸಮಷ್ಟಿಯಲ್ಲಿ ಲೀನವಾಗುತ್ತಿವೆ. ಗತಕಾಲದ ಇತಿಹಾಸವನ್ನು ಅಗೆದು ಅಗೆದು ಸತ್ಯಶೋಧನೆ ಮಾಡಲು ಹೊರಟಿರುವ ನಾಗರಿಕ ಸಮಾಜ ಕಣ್ಣೆದುರಿನಲ್ಲೇ ಅನಾವರಣಗೊಳ್ಳುತ್ತಿರುವ ದುರಂತವನ್ನು ಕಾಣಲಾಗದೆ ನಿಷ್ಕ್ರಿಯವಾಗುತ್ತಿದೆ. ಇದು ಇತಿಹಾಸದ ದುರಂತವೋ, ನವ ಇತಿಹಾಸ ಬರೆಯಲಾಗದ ನಾಗರಿಕ ಪ್ರಜ್ಞೆಯ ದುರಂತವೋ ಎನ್ನುವುದನ್ನು ಕಾಲವೇ ನಿರ್ಧರಿಸುತ್ತದೆ. ಆದರೆ ಜಾಗೃತರಾಗುವುದಂತೂ ಅತ್ಯವಶ್ಯ. ಈ ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ದೇಶದ ಹಲವಾರು ಅರ್ಥಶಾಸ್ತ್ರಜ್ಞರು, ವಿದ್ವಾಂಸರು, ಸಮಾಜಶಾಸ್ತ್ರಜ್ಞರು, ಬುದ್ಧಿಜೀವಿಗಳು ಮತ್ತು ಪ್ರಜ್ಞಾವಂತ ಪ್ರಜೆಗಳು ಪ್ರಯತ್ನ ನಡೆಸಿದ್ದಾರೆ. ಆದರೆ ನವ ಉದಾರವಾದದ ನಾಡಿಮಿಡಿತವನ್ನು ಗ್ರಹಿಸುವಲ್ಲಿ ದೇಶದ ಪ್ರಜ್ಞಾವಂತ ಜನತೆ ವಿಫಲವಾಗಿದೆ. ಹಾಗಾಗಿಯೇ ಯುವ ಸಮುದಾಯದ ಖಾಲಿ ಬುರುಡೆಗಳಲ್ಲಿ ಅಧಿಪತ್ಯ ರಾಜಕಾರಣ, ಸರ್ವಾಧಿಕಾರ, ಮತಾಂಧತೆ ಮತ್ತು ನವ ಉದಾರವಾದದ ವಿಕೃತ ಭಾವನೆಗಳನ್ನು ಬಿತ್ತುವುದು ಸುಲಭವಾಗಿದೆ.

ಇತಿಹಾಸದ ಹೆಜ್ಜೆ ಗುರುತುಗಳನ್ನೇ ಅರಿಯದ ಯುವ ಜನಾಂಗಕ್ಕೆ ಸಮಕಾಲೀನ ಇತಿಹಾಸದ ಪ್ರಮುಖ ಘಟ್ಟಗಳನ್ನು ಪರಿಚಯಿಸುವುದು ಇಂದಿನ ತುರ್ತು ಅಗತ್ಯತೆಯಾಗಿದೆ. ಅಮಾನ್ಯೀಕರಣ ಮತ್ತು ತತ್ಸಂಬಂಧಿ ಡಿಜಿಟಲೀಕರಣ ಕೇವಲ ಆರ್ಥಿಕ ನೆಲೆಯಲ್ಲಿ ಅನಾವರಣಗೊಂಡ ನೀತಿಗಳಲ್ಲ. ಈ ವಿಕೃತ ಆಡಳಿತ ಚಿಂತನೆಯ ಹಿಂದೆ ಸಾಮಾಜಿಕ ಅಧಿಪತ್ಯ ಮತ್ತು ಸಾಂಸ್ಕøತಿಕ ಸರ್ವಾಧಿಕಾರದ ಧೋರಣೆಯೂ ಇರುವುದನ್ನು ಗ್ರಹಿಸಬೇಕಿದೆ. ನವ ಹಣಕಾಸು ಬಂಡವಾಳ ಊರ್ಜಿತವಾಗಲು ಅಗತ್ಯವಾದ ಪರಿಕರಗಳಲ್ಲಿ ಮತಾಂಧತೆ, ಭ್ರಷ್ಟಾಚಾರ ಮತ್ತು ಭಯೋತ್ಪಾದನೆಯೂ ಒಂದು ಎನ್ನುವ ಸತ್ಯವನ್ನು ಮನಗಾಣಬೇಕಿದೆ.

ಹಾಗೆಯೇ ಈ ಕರಾಳ ಪ್ರವೃತ್ತಿಗಳು ನೆಲೆಯೂರಲು ಬಂಡವಾಳ ವ್ಯವಸ್ಥೆಯೂ ಅಗತ್ಯ ಎನ್ನುವುದನ್ನೂ ಮನಗಾಣಬೇಕಿದೆ. ಈ ಪರಸ್ಪರ ಪೂರಕ ವಿಕೃತಿಗಳ ನಡುವೆ ಒಂದು ನಿಷ್ಕ್ರಿಯ ಸಮಾಜ ಸೊಂಟದ ಪಟ್ಟಿಯನ್ನು ಬಿಗಿ ಮಾಡಿಕೊಂಡು ಮೌನ ತಪಸ್ವಿಗಳಾಗುವುದು ತರವಲ್ಲ. ಸಾಂವಿಧಾನಿಕ ಸವಲತ್ತುಗಳು ಮತ್ತು ಸೌಲಭ್ಯಗಳ ಮೂಲಕ ಸುಭದ್ರ ನೆಲೆ ಕಂಡುಕೊಂಡಿರುವ ದೇಶದ ಮಧ್ಯಮ ವರ್ಗಗಳು ತಮ್ಮ ಶ್ರೇಣೀಕೃತ ಶ್ರೇಷ್ಠತೆಯ ಮನೋಭಾವವನ್ನು ಕಿತ್ತೊಗೆದು ದೇಶದ ದಮನಿತ, ಶೋಷಿತ ಶ್ರಮಜೀವಿಗಳ ನೋವಿಗೆ ಸ್ಪಂದಿಸುವುದೇ ನವಂಬರ್ 8ರ ಘೋಷವಾಕ್ಯವಾಗಬೇಕು. ಆಗ ಮಾತ್ರ ಅಧಿಪತ್ಯ ರಾಜಕಾರಣದ ಮತ್ತೊಂದು ಆಯಾಮವನ್ನು ಜಗತ್ತಿಗೆ ಪರಿಚಯಿಸಲು ಸಾಧ್ಯ, ದೇಶವನ್ನು ನೈಜ ಪ್ರಗತಿಯೆಡೆಗೆ ಕೊಂಡೊಯ್ಯಲು ಸಾಧ್ಯ.

Leave a Reply