fbpx

ಟೊಮ್ಯಾಟೋ ಹುಳಿ ಇಳಿಸಿದ ನೋಟುರದ್ಧತಿ

ಚಿತ್ರಾಂಗದಾ ಚೌಧರಿ

ಕನ್ನಡಕ್ಕೆ- ರಾಜಾರಾಂ ತಲ್ಲೂರು 

ದೇಶದಲ್ಲಿ ಬಳಸುವ ಪ್ರತೀ ನಾಲ್ಕು ಟೊಮ್ಯಾಟೋ ಗಳಲ್ಲಿ ಒಂದು ನಾಸಿಕ್ ನದು. ಅಲ್ಲಿನ ರೈತರು ಈಗ ತಾವು ಬೆಳೆದಿರುವ ಟೊಮ್ಯಾಟೋಗಳ ಬೆಲೆ ಮೊನ್ನೆ ನವೆಂಬರ್ 8 ರ ನೋಟು ರದ್ಧತಿಯ ಬಳಿಕ ರಸಾತಳ ತಲುಪಿರುವ ಹಿನ್ನೆಲೆಯಲ್ಲಿ ದೊಡ್ಡ ಪ್ರಮಾಣದಲ್ಲಿ ನಾಶ ಮಾಡುತ್ತಿದ್ದಾರೆ

ಕ್ರಿಸ್ಮಸ್ ದಿನ ಬೆಳಗ್ಗೆ, ಪ್ರಧಾನಮಂತ್ರಿ ನರೇಂದ್ರ ಮೋದಿಯವರು  ರೂ.3600 ಕೋಟಿ ರೂಪಾಯಿಗಳ ವೆಚ್ಚದ ಶಿವಾಜಿ ಪ್ರತಿಮೆಗೆ ಕೆಸರುಕಲ್ಲು ಹಾಕಿದ ಕೇವಲ 24ಗಂಟೆಗಳ ಅವಧಿಯೊಳಗೆ, ಅಲ್ಲಿಂದ 200 ಕಿ.ಮೀ. ದೂರದಲ್ಲಿರುವ ನಾಸಿಕ್ ಜಿಲ್ಲೆಯ ಧೋಂಡೆಗಾಂವ್ ಹಳ್ಳಿಯಲ್ಲಿರುವ ತಮ್ಮ ತೋಟದಲ್ಲಿ ಯಶವಂತ್ ಮತ್ತು ಹೀರಾಬಾಯಿ ಬೇಂಡ್ಕುಳೆ ದಂಪತಿ ತಮ್ಮ ಬೆಳೆದುನಿಂತ ಟೊಮ್ಯಾಟೋ ಗಿಡಗಳನ್ನೆಲ್ಲ ಬುಡಸಮೇತ ಕಿತ್ತು ಎಸೆಯುತ್ತಿದ್ದರು.

“ ಒಂದು ತಿಂಗಳಿನಿಂದ ಟೊಮ್ಯಾಟೋ ಬೆಲೆ ಎಷ್ಟು ಕೆಳಬಿದ್ದಿದೆ ಎಂದರೆ, ಅದರ ಗಿಡಗಳು ತೋಟದಲ್ಲಿ ನಿಂತಷ್ಟೂ ದಿನ ನಮ್ಮ ನಷ್ಟದ ಪ್ರಮಾಣ ಹಿಗ್ಗುತ್ತಿರುತ್ತದೆ.” ಎಂದು ತನ್ನ ಈ ಬೆಳೆ ನಾಶದ ಬಗ್ಗೆ ವಿವರಣೆಯನ್ನು ಗೊಣಗುತ್ತಿದ್ದರು ಯಶವಂತ್. ಈ ಆದಿವಾಸಿ ದಂಪತಿ ತಮ್ಮ ಟೊಮ್ಯಾಟೋ ಬೆಳೆಗಾಗಿ ಸುಮಾರು 20,000ರೂ. ಕ್ಕೂ ಮಿಕ್ಕಿ ವೆಚ್ಚ ಮಾಡಿದ್ದು, ಬೆಳೆಯೂ ಚೆನ್ನಾಗಿ ಬಂದಿತ್ತು. ಈಗ ಟೊಮ್ಯಾಟೋ ಕಿತ್ತೆಸೆದ ಖಾಲಿ ಗದ್ದೆಯಲ್ಲಿ ಗೋಧಿ ಬೆಳೆಯುವ ಉದ್ದೇಶ ಅವರದು. “ ಕನಿಷ್ಟ ನಮಗೆ ಈ ಬೇಸಗೆಯಲ್ಲಿ ಊಟಕ್ಕಾದರೂ ಅನುಕೂಲವಾದೀತು.” ಎಂಬ ಆಸೆ ಹೀರಾಬಾಯಿಯವರದು.

500 ಮತ್ತು 1000 ನೋಟು ರದ್ಧತಿಯ ಬಳಿಕ ಮಂಡಿಗೆ ಬಂದು ಬಿಕರಿಯಾಗದೇ ಬಿದ್ದಿರುವ ಟೊಮ್ಯಾಟೋ ರಾಶಿ

ನವೆಂಬರ್ 8ರಂದು ಮೋದಿಯವರು ನೋಟು ರದ್ಧತಿ ತೀರ್ಮಾನವನ್ನು ಪ್ರಕಟಿಸಿದ ಬಳಿಕ ಉಂಟಾದ ಹಣಕಾಸಿನ ಕೊರತೆ, ಆಗಲೇ ತಗ್ಗಿದ್ದ ಟೊಮ್ಯಾಟೋ ಬೆಲೆಗಳನ್ನು ಹೊಸಕಿಹಾಕಿತು. ನಾಸಿಕ್ ನಿಂದ 20 ಕಿಮೀ ದೂರದಲ್ಲಿರುವ ಗಿರ್ನಾರ್ ಮಂಡಿಯಲ್ಲಿ ಟೊಮ್ಯಾಟೋಗೆ ಕಿಲೋ ಒಂದರ ಕೇವಲ 50  ಪೈಸೆಯಿಂದ 2 ರೂಪಾಯಿ ತನಕ ಮಾತ್ರ ಸಿಗುತ್ತಿದೆ. ಆ ದರದಲ್ಲಿ ಟೊಮ್ಯಾಟೋ ರೈತರಿಗೆ ಕಟಾವು ಮತ್ತು ಲಾಗ್ವಾಡು ಕೂಡ ಹುಟ್ಟುವುದಿಲ್ಲ. ರಿಟೇಲ್ ದರ ಕಿಲೋಗ್ರಾಂಗೆ  6-10ರೂ ನಡುವೆ ಇದೆ. ದೇಶದ ಪ್ರಮುಖ ತೋಟಗಾರಿಕಾ ಜಿಲ್ಲೆಗಳಲ್ಲಿ ಒಂದಾದ ನಾಸಿಕ್ ನ ಎಲ್ಲೆಡೆ ರೈತರು ಈ ಮುಂಗಾರಿನಲ್ಲಿ ಎಕರೆಯೊಂದರ 30,000ದಿಂದ ಒಂದೂವರೆ ಲಕ್ಷ ರೂಪಾಯಿಗಳ ತನಕ ಖರ್ಚು ಮಾಡಿ ಬೆಲೆಸಿದ ತಮ್ಮ ಟೊಮ್ಯಾಟೋ ಗಿಡಗಳನ್ನು ಕಿತ್ತೆಸೆಯುತ್ತಿದ್ದಾರೆ, ಕೊಯ್ಲು ಮಾಡಿದ ಟೊಮ್ಯಾಟೋಗಳನ್ನು ರಸ್ತೆಯಲ್ಲಿ ಸುರಿಯುತ್ತಿದ್ದಾರೆ ಇಲ್ಲವೇ ಜಾನುವಾರುಗಳಿಗೆ ತಿನ್ನಲು ಗದ್ದೆಯಲ್ಲೇ ರಾಶಿ ಹಾಕುತ್ತಿದ್ದಾರೆ.

ಕಳೆದ ವರ್ಷ ಒಳ್ಳೆಯ ದರ – 20 ಕಿಲೋಗ್ರಾಂ ಬುಟ್ಟಿಗೆ 300-750 ರೂ – ಸಿಕ್ಕಿದ್ದರಿಂದಾಗಿ ಈ ವರ್ಷ ರೈತರು ಆಶಾದಾಯಕ ನಿರೀಕ್ಷೆಗಳೊಂದಿಗೆ ಹೆಚ್ಚಿನ ಸಂಖ್ಯೆಯಲ್ಲಿ ಟೊಮ್ಯಾಟೋ ಬೆಳೆದಿದ್ದರು. 2016ರ ಅಕ್ಟೋಬರ್ ವೇಳೆಗೇ ಬೆಳೆ ಚೆನ್ನಾಗಿ ಬರುವ ನಿರೀಕ್ಷೆ ಇತ್ತು ಏಕೆಂದರೆ, ಹವಾಮಾನ ಪೂರಕವಾಗಿತ್ತು, ಕೀಟಬಾಧೆ ಇರಲಿಲ್ಲ ಮತ್ತು ಟೊಮ್ಯಾಟೋ ಬೆಳೆಗಾರರ ಸಂಖ್ಯೆಯೂ ಹೆಚ್ಚಿತ್ತು. ಹಾಗಾಗಿ ಕಳೆದ ವರ್ಷದಷ್ಟು ಬೆಲೆ ಸಿಗದೆಂಬ ನಿರೀಕ್ಷೆ ಇತ್ತಾದರೂ ತೀರಾ ಕಡಿಮೆ ಆಗದು ಎಂದುಕೊಂಡಿದ್ದರು. ದಸರೆಯ ತನಕ ರೇಟು ಸಾಧಾರಣವಾಗಿತ್ತು, ದೀಪಾವಳಿಯ ವೇಳೆ ಹೂಡಿಕೆಗೇನೂ ಮೋಸ ಇರಲಿಲ್ಲ ಎಂಬುದು ಹಲವು ರೈತರ ಅಭಿಪ್ರಾಯ.

ಆದರೆ, 1000  ಮತ್ತು 500ರ ನೋಟುಗಳನ್ನು ರದ್ದುಪಡಿಸಿದ ಬಳಿಕ, ಕೈಯಲ್ಲಿ ನಗದಿಲ್ಲದ ಕಾರಣ ಮಾರುಕಟ್ಟೆಗೆ ಬಂದ ಟೊಮ್ಯಾಟೋ ಕೊಯ್ಲನ್ನು ಖರೀದಿಸುವವರ ಕೊರತೆ ಇತ್ತು, ಅದರಿಂದಾಗಿ ಖರೀದಿ ಮತ್ತು ಬೆಲೆ ಎರಡೂ ಇಳಿಯತೊಡಗಿದವು. “ ನವೆಂಬರ್ 11ರ ವೇಳೆಗೆ ಕೆಳಬಿದ್ದ ಬೆಲೆ ಆ ಮೇಲೆ ಮೇಲೇಳಲೇ ಇಲ್ಲ” ಎನ್ನುತ್ತಾರೆ, ಗಿರ್ನಾರ್ ಬಳಿಯ ರೈತ ನಿತಿನ್ ಗಾಯ್ಕರ್. ಅಲ್ಲಿಂದೀಚೆಗೆ ಬುಟ್ಟಿಯ ಬೆಲೆ 10-40ರೂಪಾಯಿಗಳಿಗೆ ಇಳಿದುಬಿಟ್ಟಿದೆ. ಗ್ರಾಮೀಣ ಆರ್ಥಿಕತೆಗೆ ನಗದೇ ಇಂಧನ. ರೈತರು, ವ್ಯಾಪಾರಿಗಳು, ಸಾಗಾಟಗಾರರು, ಚಿಲ್ಲರೆ ಮಾರಾಟಗಾರರು ಮತ್ತು ಕಾರ್ಮಿಕರು ಎಲ್ಲರಿಗೂ ಅದು ಸತ್ಯ ಎನ್ನುತ್ತಾರೆ ನಿತಿನ್.

ಜಿಲ್ಲಾಡಳಿತ ಈ ಬಗ್ಗೆ ತಲೆ ಕೆಡಿಸಿಕೊಂಡಂತಿಲ್ಲ. “ ಮುಕ್ತ ಮಾರುಕಟ್ಟೆಯಲ್ಲಿ ನಾವು ಪ್ರತೀದಿನ ನಿಯಂತ್ರಣಕ್ಕೆ ಕುಳಿತುಕೊಳ್ಳುವುದು ಹೇಗೆ? ಬೆಲೆಗಳು ಮಾರುಕಟ್ಟೆ ಪ್ರೇರಿತ ತೀರ್ಮಾನಗಳಲ್ಲವೇ?” ಎಂದು ಕೈಚೆಲ್ಲುತ್ತಾರೆ ನಾಸಿಕ್ ನ ಜಿಲ್ಲಾಧಿಕಾರಿ ಬಿ. ರಾಧಾಕ್ರಷ್ಣನ್.

ಗ್ರಾಮೀಣ ಜನ ಮಾತ್ರ ಈ ಬೆಳವಣಿಗೆಯಿಂದ ಚಿಂತಿತರಾಗಿದ್ದಾರೆ. “ ನಾನು ಹೂಡಿಕೆ ಮಾಡಿದ ಎರಡು ಲಕ್ಷ ರೂಪಾಯಿಗಳಲ್ಲಿ ಮೂವತ್ತು ಸಾವಿರ ಕೂಡ ನನಗೆ ವಾಪಸ್ ಬಂದಿಲ್ಲ” ಎನ್ನುತ್ತಾರೆ ರೈತ ಗಣೇಶ್ ಬೋಬ್ಡೆ. “ ಖರೀದಿಸುವವರೇ ಇಲ್ಲ. ಹಾಗಾಗಿ ನಾನು ನಮ್ಮ ಜಾನುವಾರುಗಳನ್ನು ಗದ್ದೆಗೆ ಬಿಟ್ಟುಬಿಟ್ಟಿದ್ದೇನೆ” ಎಂದು ತನ್ನ ಸೊಂಪಾದ ಗದ್ದೆಯನ್ನು ಮೇಯುತ್ತಿರುವ ಮೂರು ದನಗಳನ್ನು ತೋರಿಸಿ ನೊಂದು ನುಡಿಯುತ್ತಾರೆ ಸೋಮನಾಥ್ ಥೇಟೆ.

ಸೋಮನಾಥ್ ಥೇಟೆ ಅವರ ಟೊಮ್ಯಾಟೋ ಗದ್ದೆಯಲ್ಲಿ ಅವರದೇ ದನ ಮೇಯುತ್ತಿರುವುದು

“ನಾನು ಈ ತನಕ 2000  ಬುಟ್ಟಿ ಮಾರಿದ್ದೇನೆ, ಅವುಗಳಲ್ಲಿ ಹೆಚ್ಚಿನವನ್ನು ನಷ್ಟದಲ್ಲೇ ಮಾರಿದ್ದು. ಅದಕ್ಕೆ ಕಾರಣ ಈ ನೋಟು ಲಫಡಾ. ನಮಗೆ ಏನೋ ನಾಲ್ಕು ಕಾಸು ಸಿಗುತ್ತದೆಂದುಕೊಂಡಿರುವಾಗ ಅದಕ್ಕೇ ಮೋದಿ ಕಲ್ಲು ಹಾಕಿದರು” ಎಂದು ವ್ಯಗ್ರರಾಗಿ ಹೇಳುತ್ತಾರೆ ಯೋಗೇಶ್ ಗಾಯ್ಕರ್.

ಈ ಖಾರಿಫ್ ಸೀಸನ್ನಿನಲ್ಲಿ ದೇಶದೊಳಗೆ ಮಾರಾಟ ಆದ ಪ್ರತೀ ನಾಲ್ಕು ಟೊಮ್ಯಾಟೋಗಳಲ್ಲಿ ಒಂದು ನಾಸಿಕ್ ನದು. ಭಾರತ ಸರಕಾರದ ಅಂಕಿ ಅಂಶಗಳ ಪ್ರಕಾರ ಸೆಪ್ಟಂಬರ್ 1, 2016ರಿಂದ ಜನವರಿ 2, 2017  ನಡುವೆ ಮಾರಾಟವಾದ ಟೊಮ್ಯಾಟೋಗಳಲ್ಲಿ 24%  ನಾಸಿಕ್ ಜಿಲ್ಲೆಯವು (14.3  ಲಕ್ಷ ಟನ್ ಗಳಲ್ಲಿ 3.4  ಲಕ್ಷ ಟನ್).

ಕಳೆದ ಹಲವಾರು ವರ್ಷಗಳಿಂದ ಸ್ಥಿರವಿಲ್ಲದ ಬೆಲೆ ಮತ್ತು ಅಸುರಕ್ಷಿತ ಆದಾಯಗಳ ಕಾರಣದಿಂದಾಗಿ ಕಂಗೆಟ್ಟು ಕಡಿಮೆ ಬೆಲೆಗೆ ಮಾರುವುದು, ಉತ್ಪನ್ನಗಳನ್ನು ಬೀದಿಗೆ ಸುರಿಯುವುದು ರೈತರಿಗೆ ಹೊಸದೇನಲ್ಲ. ಆದರೆ ಈ ಭಾಗದಲ್ಲಿ ಈ ಪ್ರಮಾಣದಲ್ಲಿ ಬೆಳೆದುನಿಂತ ಬೆಳೆಯನ್ನೇ ನಾಶಮಾಡುವುದು ಈ ತನಕ ನಡೆದದ್ದಿಲ್ಲ ಎನ್ನುತ್ತಾರೆ, ನಾಸಿಕ್ ನ ಮರಾಠಿ ಕ್ರಷಿ ದೈನಿಕ ಅಗ್ರೋವಾನ್ ನ ವರದಿಗಾರ ಜ್ನಾನೇಶ್ವರ  ಉಗಾಳೆ. “ ರೈತರಿಗೆ ಪ್ರತೀ ಬುಟ್ಟಿ ಟೊಮ್ಯಾಟೋ ಬೆಳೆಯಲು ಸರಾಸರಿ 90ರೂ. ವೆಚ್ಚ ತಗಲುತ್ತದೆ. ಈಗವರಿಗೆ ಬುಟ್ಟಿ ಮೇಲೆ ಕೇವಲ 15-40ರೂ. ಸಿಗುತ್ತಿದೆ ಎಂದರೆ, ಅವರಿಗೆ ಎಷ್ಟು ನಷ್ಟ ಆಗಿರಬಹುದೆಂದು ಅಂದಾಜಿಸಿಕೊಳ್ಳಿ” ಎನ್ನುತ್ತಾರೆ ಉಗಾಳೆ.

ಉಗಾಳೆಯವರ ಅಂದಾಜು ಪ್ರಕಾರ ನಾಸಿಕ್ ನ ಐದು ಮಂಡಿಗಳಿಗೆ ಬಂದುಬೀಳುವ ಟೊಮ್ಯಾಟೋ ಬೆಳೆಯಿಂದ ಈ ತನಕ ಆಗಿರುವ ನಷ್ಟ ಸುಮಾರಿಗೆ 100 ಕೋಟಿ ರೂಪಾಯಿ. ಈ ಬಗ್ಗೆ ಸರ್ಕಾರಿ ಅಧಿಕಾರಿಗಳು ಏನನ್ನುತ್ತಾರೆ? ನಾಸಿಕ್ ಜಿಲ್ಲಾ ಕ್ರಷಿ ಸೂಪರಿಂಟೆಂಡೆಂಟರ ಕಚೇರಿಯಲ್ಲಿ ಕ್ರಷಿ ಮೇಲ್ವಿಚಾರಕರಾಗಿರುವ ಭಾಸ್ಕರ್ ರಹಾನೆ ಅವರ ಪ್ರಕಾರ, ಟೊಮ್ಯಾಟೋ ಬೆಳೆಗೆ ಎಕರೆವಾರು ವೆಚ್ಚ ಮತ್ತು ಉತ್ಪಾದನೆಗಳನ್ನು ಈ ಹಿಂದೆ ಲೆಕ್ಕ ಮಾಡಿದ್ದು 2011-12ರಲ್ಲಿ. “ರೈತರ ನಷ್ಟ ಲೆಕ್ಕ ಹಾಕಲು ನಮ್ಮಲ್ಲಿ ವ್ಯವಸ್ಥೆ ಇಲ್ಲ. ರೈತರು ತಮ್ಮ ಇತರ ವೆಚ್ಚಗಳ ಲೆಕ್ಕಾಚಾರ ಇಡುವ ರೀತಿಯಲ್ಲೇ ತಮ್ಮ ಆದಾಯವನ್ನೂ ಲೆಕ್ಕ ಹಾಕಿಕೊಳ್ಳಬೇಕು” ಎನ್ನುತ್ತಾರವರು.

ಟೊಮ್ಯಾಟೋ ವ್ಯವಹಾರದ ಕೇಂದ್ರವಾಗಿರುವ ಗಿರ್ನಾರ್ ಮಂಡಿ ಎಂಬ ಧೂಳು ತುಂಬಿದ ಮೈದಾನ ಸಾಮಾನ್ಯವಾಗಿ ವರ್ಷದ ಈ ಹೊತ್ತಿನಲ್ಲಿ ಗಿಜಿಗುಡುತ್ತಿರಬೇಕು. ಆದರೆ ಪರಿಸ್ಥಿತಿ ಹಾಗಿಲ್ಲ. ಅಲ್ಲಿ ಟೊಮ್ಯಾಟೋ ಹೇರಿಕೊಂಡು ಬಂದಿರುವ ಟ್ರಾಕ್ಟರ್ ಗಳ ಧಾವಂತ ಇಲ್ಲ. ಪ್ರತೀ ವರ್ಷ ಅಕ್ಟೋಬರ್ ಮತ್ತು ಡಿಸೆಂಬರ್ ಗಳ ನಡುವೆ ಇಲ್ಲಿ ಬಂದು ಕ್ಯಾಂಪ್ ಹೂಡಿ, ಖರೀದಿ ನಡೆಸುತ್ತಿದ್ದ ಮಹಾರಾಷ್ಟ್ರದ ಹೊರಗಿನ ಖರೀದಿದಾರರು ಈ ವರ್ಷ ಬೇಗ ಹಿಂದಿರುಗಿ ಹೋಗಿಬಿಟ್ಟಿದ್ದಾರೆ.

ಅವರಲ್ಲೊಬ್ಬರು ರಾಹತ್ ಜಾನ್, ಉತ್ತರ ಪ್ರದೇಶದ ಅಲ್ಮೋರಾದವರು. ಅಲ್ಲಿಂದ ದೂರವಾಣಿ ಮೂಲಕ ನಮ್ಮೊಂದಿಗೆ ಮಾತನಾಡಿದ ಅವರು “ ನನಗೆ ನಾಸಿಕ್ ನಗರದ ಐಸಿಐಸಿಐ ಬ್ಯಾಂಕಿನ ಶಾಖೆಯಲ್ಲಿ ಖಾತೆ ಇದೆ.  ಆದರೆ, ಅವರು ಎಂಟು ದಿನಗಳಲ್ಲಿ ಬರೇ 50,000  ಕೊಟ್ಟರು. ನನಗೆ ಅಲ್ಲಿ ವ್ಯವಹಾರ ಮಾಡಲು ದಿನಕ್ಕೆ 1-3 ಲಕ್ಷ ರೂಪಾಯಿಗಳ ಅಗತ್ಯ ಇತ್ತು. ರೈತರು ಮತ್ತು ಪೆಟ್ರೋಲ್ ಪಂಪ್ ಗಳಲ್ಲಿ ಹಳೆಯ ನೋಟುಗಳನ್ನು ಸ್ವೀಕರಿಸುವ ತನಕ ನಾವು ಹೇಗೋ ನಿಭಾಯಿಸಿದೆವು. ನೋಟುಗಳ ಕೊರತೆ ಇಲ್ಲದಿದ್ದರೆ ತಾನು ಇನ್ನೂ 15ದಿನಗಳ ಕಾಲ ಅಲ್ಲಿದ್ದು ಖರೀದಿ ಮಾಡಬಹುದಿತ್ತು” ಎಂದು ವಿವರಿಸಿದರು.

ದೂರದೂರಿನ ವ್ಯವಹಾರಸ್ಥರು ಹೋಗಿಯಾದ ಮೇಲೆ ಈಗ ಅಲ್ಲಿ ಉಳಿದಿರುವುದು ಸ್ಥಳೀಯ ಮುಂಬಯಿ ಬಳಿಯ ವಾಶಿ, ವಿರಾರ್ ನ ಖರೀದಿದಾರರು. ಅವರಿಗೂ ಬೆಲೆ ಇಳಿಕೆ ಮತ್ತು ನಗದು ಕೊರತೆಯ ಬಿಸಿ ತಟ್ಟಿದೆ. ನಮ್ಮ ಕಣ್ಣೆದುರಿಗೇ ಪಿಂಪಲ್ಗಾಂವ್ ನ ವ್ಯಾಪಾರಿ ಕೈಲಾಸ್ ಸಾಳ್ವೆ 4000ರೂಪಾಯಿಗಳಿಗೆ ನೂರು ಬುಟ್ಟಿ ಟೊಮ್ಯಾಟೋ ಖರೀದಿ ಮಾಡಿದರು. “ ನನ್ನಲ್ಲಿ ಹೆಚ್ಚು ಹಣವಿಲ್ಲ, ಹಾಗಾಗಿ ಇದಕ್ಕಿಂತ ಜಾಸ್ತಿ ಖರೀದಿ ಮಾಡಲಾಗುವುದಿಲ್ಲ” ಎಂದರು. ಅವರು ಇದನ್ನು ಗುಜರಾತ್ ನ ಸೂರತ್ತಿನಲ್ಲಿ ಖರೀದಿ ಮಾಡಬಯಸುವವರಿಗೆ ಕೊಡಲು ಖರೀದಿಸಿಕೊಂಡಿದ್ದರು.

“ಕಳೆದ ವರ್ಷ ಈ ಹೊತ್ತಿಗೆ ನಾವು ಇಲ್ಲಿ 50  ಲಕ್ಷ ರೂಪಾಯಿಗಳ ಟೊಮ್ಯಾಟೋ ವ್ಯವಹಾರ ಮಾಡಿದ್ದೆವು,  ಮೂರು ಲಕ್ಷ ಲಾಭ ಆಗಿತ್ತು.  ಆದರೆ ಈವರ್ಷ ಇನ್ನೂ ಕೇವಲ 10 ಲಕ್ಷದ ಖರೀದಿ ಆಗಿದೆ, ಅದೂ ನಷ್ಟದಲ್ಲೇ” ಎನ್ನುತ್ತಾರೆ ಸಾಳ್ವೆ.

ಕಳೆದ 15 ವರ್ಷಗಳಲ್ಲಿ ಟೊಮ್ಯಾಟೋ ಇಲ್ಲಿ ದ್ರಾಕ್ಷಿ ಬಿಟ್ಟರೆ ಬಹು ನಿರೀಕ್ಷೆಯ ಬೆಳೆ ಆಗಿಬಿಟ್ಟಿದೆ. ಭೂಮಿ ಎಷ್ಟೇ ಸಣ್ಣದಿದ್ದರೂ, ನೀರು ಮತ್ತು ಹೂಡುವ ಹಣ ಲಭ್ಯವಿದ್ದರೆ ಹೆಚ್ಚಿನ ಆದಿವಾಸಿ ಮತ್ತು ಮರಾಠಾ ರೈತ ಕುಟುಂಬಗಳು (ಬೇಂಡ್ಕುಳೆ, ಗಾಯ್ಕರ್ ಅಂತಹವರು) ಟೊಮ್ಯಾಟೋವನ್ನೇ ಬೆಳೆಯುತ್ತಿದ್ದಾರೆ. ಹಾಗಾಗಿ ಟೊಮ್ಯಾಟೋ ಮಾರುಕಟ್ಟೆ ಬಿದ್ದುಹೋದದ್ದು ವಿನಾಶಕವಾಗಿ ಪರಿಣಮಿಸಿದೆ. ಅತಿಯಾಗಿ ಬೆಳೆದದ್ದೂ ಕೂಡ ಬೆಲೆ ಇಳಿಕೆಗೆ ಕಾರಣ ಆಯಿತು ಎಂಬ ವಾದ ಕೂಡ ಜಾನ್ ಅವರಂತಹ ಕೆಲವರದು.  ಆದರೆ, ರೈತರು ಬೇರೆಯೇ ಹೇಳುತ್ತಿದ್ದಾರೆ. ಸರಿ, ಟೊಮ್ಯಾಟೋ ಅತಿಯಾಗಿ ಬೆಳೆದದ್ದರಿಂದ ಬೆಲೆ ಕಡಿಮೆ ಆಯಿತೆಂದಾದರೆ, ಕಡಿಮೆ ಪ್ರಮಾಣದಲ್ಲಿ ಬೆಳೆದ ಬೇರೆ ತರಕಾರಿಗಳ ಬೆಲೆಯೂ ಏಳುಗತಿ ಕಾಣುತ್ತಿಲ್ಲ ಏಕೆ?

ವಿಜಯ್ ಕಸ್ಬೆ ತಂದೆಯ ಹೆಸರಲ್ಲಿರುವ ಚೆಕ್. ಬೇರೆ ದಾರಿ ಇಲ್ಲದೇ ಚೆಕ್ ಸ್ವೀಕರಿಸಿರುವ ಅವರು ಈಗ ಅದು ಬೌನ್ಸ್ ಆದೀತೇ ಎಂಬ ಆತಂಕದಲ್ಲಿದ್ದಾರೆ

“ಕಾಲಿಫ್ಲವರ್, ಬದನೆ, ಕೊತ್ತೊಂಬರಿ ಸೊಪ್ಪು, ಗುಂಬಳ – ಯಾವುದರ ಬೆಲೆ ಇಳಿದಿಲ್ಲ ಹೇಳಿ?” ಎಂದು ಸವಾಲು ಹಾಕುತ್ತಾರೆ ನಾನಾ ಅಚಾರಿ. ಧೋಂಡೆಗಾಂವ್ ನ ಆದಿವಾಸಿ ಸಣ್ಣ ರೈತರಾಗಿರುವ ಅಚಾರಿ,  20  ದಿನಗಳ ಹಿಂದೆ 20  ಬುಟ್ಟಿ ಬದನೆಕಾಯಿಗಳನ್ನು ನಾಸಿಕ್ ಮಂಡಿಗೆ ತಂದಿದ್ದರು.  ಆದರೆ, ಖರೀದಿದಾರರು ಇಲ್ಲದ್ದರಿಂದ ಅವನ್ನು ವಾಪಸ್ ಒಯ್ಯಬೇಕಾಯಿತು. ಮರುದಿನ ವಾಶಿ ಮಂಡಿಯಲ್ಲಿ ಆ ಇಪ್ಪತ್ತೂ ಬುಟ್ಟಿಗಳನ್ನು ಕೇವಲ 500ರೂಪಾಯಿಗಳಿಗೆ ಮಾರಿದ ಬಳಿಕ, ಲಾಗ್ವಾಡು ಕಳೆದು ಅವರ ಕೈಯಲ್ಲಿ ಉಳಿದದ್ದು ಕೇವಲ 30 ರೂಪಾಯಿ. ಇನ್ನೊಬ್ಬ ರೈತ, ವಡಗಾಂವ್ ಹಳ್ಳಿಯ ಕೇರು ಕಸ್ಬೆ ಎಂಟು ದಿನಗಳ ಹಿಂದೆ ತನ್ನ 700  ಕೇಜಿ ಬದನೆಕಾಯಿ ಬೆಳೆ ಮಾರಾಟ ಮಾಡಿದ ಬಳಿಕ ಅವರಿಗೆ ಖರ್ಚು ಕಳೆದು ಉಳಿದದ್ದು 200 ರೂ.

ಕೆಲವರು ಮಂಡಿ ವ್ಯವಹಾರಸ್ಥರು ರೈತರಿಗೆ ಚೆಕ್ ಪಾವತಿ ಮಾಡುತ್ತಿದ್ದಾರೆ. ಆದರೆ ಡೀಸೆಲ್ ಹಾಕಬೇಕು, ಕಾರ್ಮಿಕರಿಗೆ ಪಾವತಿ ಮಾಡಬೇಕು ಮತ್ತು ರಸಗೊಬ್ಬರ ಖರೀದಿಸಬೇಕು. ಚೆಕ್ಕನ್ನು ಬ್ಯಾಂಕಿಗೆ ಕಳುಹಿಸಲು ಮತ್ತು ಆ ಬಳಿಕ ನಗದು ಪಡೆಯಲು ಸರದಿ ಸಾಲಿನಲ್ಲಿ ನಿಲ್ಲುವುದಕ್ಕೆ ರೈತರಿಗಾಗಲೀ ವ್ಯವಹಾರಸ್ಥರಿಗಾಗಲೀ ಸಮಯ ಇಲ್ಲ. ಹಾಗೆ ನಿಂತರೂ ಸಿಗುವುದು 2000ದ ಒಂದು ಹೊಸ ನೋಟು. ಮೇಲಾಗಿ ರೈತರು ಚೆಕ್ಕುಗಳನ್ನು ನಂಬುವುದಿಲ್ಲ. ವಿಜಯ್ ಕಸ್ಬೆ ಅವರಿಗೆ ಒಂದು ಚೆಕ್ಕನ್ನು ಒತ್ತಾಯ ಪೂರ್ವಕವಾಗಿ ತೆಗೆದುಕೊಳ್ಳಬೇಕಾಗಿ ಬಂತು ಯಾಕೆಂದರೆ, ಬೇರೆ ನಗದಿಗೆ ವ್ಯವಸ್ಥೆ ಇರಲಿಲ್ಲ.  ಈಗ ಆ ಚೆಕ್ ಬೌನ್ಸ್ ಆಯಿತೆಂದರೆ, ಅವರಿಗೆ ಅದೂ ನಷ್ಟ.

ಬೆಲೆ ಕುಸಿತ ಹಾಗೂ ನಗದು ಕೊರತೆಗಳು ಒಂದರ ಮೇಲೊಂದು ಹೊಡೆತ ನೀಡುತ್ತಾ ಸಾಗಿವೆ. ಆದಿವಾಸಿ ಕಾರ್ಮಿಕರಿಗೆ ಕೂಲಿ ಕೆಲಸ ಸಿಗುತ್ತಿಲ್ಲ, ಮೇಲಾಗಿ 2000 ನೋಟುಗಳು ಆಗಿರುವ ಗಾಯದ ಮೇಲೆ ಉಪ್ಪು ಸವರುತ್ತಿವೆ. “ ಚಿಲ್ಲರೆ ಪಡೆಯಲು ನಮಗೆ 1100 ರೂಪಾಯಿಗಿಂತ ಹೆಚ್ಚಿನ ಮೊತ್ತದ ಖರೀದಿ ಮಾಡಬೇಕೆಂದು ಅಂಗಡಿ ಮಾಲಕರು ಒತ್ತಾಯಿಸುತ್ತಾರೆ, ಪೆಟ್ರೋಲ್ ಬಂಕಿನಲ್ಲಿ ಕನಿಷ್ಟ 300  ರೂ. ಪೆಟ್ರೋಲ್ ತುಂಬಿಸುವಂತೆ ಒತ್ತಾಯಿಸುತ್ತಾರೆ” ಎನ್ನುತ್ತಾರೆ ರಾಜಾರಾಮ್ ಬೇಂಡ್ಕುಳೆ. ಅವರ ಮನೆಯಲ್ಲಿ “ಆ ಪೆಟ್ರೋಲನ್ನೆಲ್ಲ ತನ್ನಿ ನಾವು ಅದನ್ನೇ ಕುಡಿಯುವ” ಎಂಬ ಮಾತು ಕೇಳಬೇಕಾಗಿದೆಯಂತೆ ಅವರು.

ಕ್ರಷಿ ಮಾರುಕಟ್ಟೆಯ ಚಿಲ್ಲರೆ ವ್ಯಾಪಾರಸ್ಥರೂ ಆತಂಕಿತರಾಗಿದ್ದಾರೆ. “ ನನ್ನ ಇಡಿಯ ವ್ಯವಹಾರ ಇದನ್ನೇ ಅವಲಂಬಿಸಿದೆ.” ಎಂದು ಮಂಡಿ ಕಡೆ ಕೈತೋರಿಸಿ ಹೇಳುವ ಚಿಲ್ಲರೆ ವ್ಯಾಪಾರಿ ಆಬಾ ಕದಂ, “ ನನಗೆ ಎರಡೂ ಬದಿಗಳಲ್ಲಿ ಪೆಟ್ಟು ಬಿದ್ದಿದೆ, ರೈತರು ತಮ್ಮ ಬೆಳೆ ನಾಶ ಮಾಡುತ್ತಿರುವುದರಿಂದ ಅವರು ಬೇರೆ ಖರೀದಿಗೂ ನಮ್ಮಲ್ಲಿಗೆ ಬರುವುದಿಲ್ಲ; ಅವರಿಗೆ ಈಗ ಮಾರಿದ ದುಡ್ಡೂ ಬರುತ್ತಿಲ್ಲವಾದ್ದರಿಂದ ಅವರಿಗೆ ಬೆಳೆಯುವ ಕಾಲದಲ್ಲಿ ನಾನು ನೀಡಿದ ಸಾಲವೂ ನನಗಿನ್ನು ವಾಪಸ್ ಬರುವ ನಿರೀಕ್ಷೆ ಕಾಣುತ್ತಿಲ್ಲ” ಎಂದು ನೊಂದು ಹೇಳಿದರು.

ಎಡ: ನಮಗೆ ಏನೋ ನಾಲ್ಕು ಕಾಸು ಬರುತ್ತದೆ ಎನ್ನುವಾಗ ಅದಕ್ಕೂ ಮೋದಿಯವರು ಮಣ್ಣುಹಾಕಿದರು ಎಂದ ಯೋಗೀಶ್ ಗಾಯ್ಕರ್. ಬಲ: ಯಶವಂತ್ ಬೆಂಡ್ಕುಲೆ ಅಂತಹವರಿಗೆ ಗದ್ದೆಯಲ್ಲಿ ಟೊಮ್ಯಾಟೋ ಬೆಳೆ ಉಳಿದಷ್ಟೂ ದಿನ ನಷ್ಟವೇ

ಡಿಸೆಂಬರ್ 30ರಂದು ಮೋದಿಯವರು ಹೇಳಿದ 50 ದಿನಗಳ ಅವಧಿ ಮುಗಿದಿದೆ. ಹೊಸ ವರ್ಷದ ಮುನ್ನಾದಿನ ನಿರೀಕ್ಷೆಗಳೂ ಕಮರಿ ಹೋದವು. ಮೋದಿಯವರು ನಮ್ಮ ಖಾತೆಗಳಿಗೆ ದುಡ್ಡು ಹಾಕುವ ಮೂಲಕ ನಮಗಾಗಿರುವ ನಷ್ಟವನ್ನು ತುಂಬಿಕೊಡುತ್ತಾರೆ ಎಂದು ಒಬ್ಬ ರೈತರು ಹೇಳಿದರೆ ,ಇನ್ನೊಬ್ಬರು ಸಾಲ ಮನ್ನಾ ಎಂದರು, ಮತ್ತೊಬ್ಬರು ಬೆಳೆ ಸಾಲಕ್ಕೆ ಬಡ್ಡಿ ದರ ಇಳಿಸಿಯಾರು ಎಂದು ನಿರೀಕ್ಷೆ ಹೊಂದಿದ್ದರು. ಆದರೆ, ಮೋದಿಯವರು ತಮ್ಮ ಡಿಸೆಂಬರ್ 31ರ ಭಾಷಣದಲ್ಲಿ ರೈತರ ಈ ಯಾವುದೇ ಸಮಸ್ಯೆಗಳನ್ನು ಪರಿಗಣಿಸಲೂ ಇಲ್ಲ.

ಈಗ ಎಲ್ಲರ ಕಣ್ಣುಗಳು ಜನವರಿ ಅಂತ್ಯದಲ್ಲಿ ಕಟಾವಿಗೆ ಬರಲಿರುವ ದ್ರಾಕ್ಷಿ ಬೆಳೆಯ ಕಡೆ ನೆಟ್ಟಿವೆ. ಒಳ್ಳೆ ಬೆಲೆ ಸಿಕ್ಕರೆ, ದ್ರಾಕ್ಷಿ ಬೆಳೆದವರಿಗೆ ಸ್ವಲ್ಪ ಲಾಭ ಆದೀತು. ಕದಂ ಅವರಂತಹ ಚಿಲ್ಲರೆ ವ್ಯಾಪಾರಿಗಳ ಸಾಲ ಸ್ವಲ್ಪಮಟ್ಟಿಗೆ ವಸೂಲಿ ಆದೀತು. ಆದರೆ ಮಂಡಿ ವ್ಯವಹಾರಸ್ಥರು ದೊಡ್ಡ ನಿರೀಕ್ಷೆ ಹೊಂದಿಲ್ಲ. ನಗದು ಕೊರತೆಯ ಸ್ಥಿತಿ ಸುಧಾರಿಸದಿದ್ದರೆ, ರೈತರಿಂದ ಖರೀದಿ ಮಾಡಲು ಸಾಧ್ಯ ಆಗುವುದಿಲ್ಲ.  ಎನ್ನುತ್ತಾರೆ ಜಾನ್. ಈ ನಡುವೆ ಸಾಳ್ವೆಯವರು ದ್ರಾಕ್ಷಿ ಬೆಳೆಗೂ ಇದೇ ಗತಿ ಆಗಲಿದೆ ಎಂಬ ಚಿಂತೆಯಲ್ಲಿದ್ದಾರೆ.

Leave a Reply