ಯಶೋಧಾ ದೀದಿಯ 500 ರೂ ನೋಟು!

ಸುಮಂಗಲಾ 

ನವೆಂಬರ್ 8, 2016

ಯಶೋಧಾ ದೀದಿಗೆ ಇದೇನಪ್ಪಾ ಒಂದು ರಾತ್ರಿ ಕಳೆದು ಬೆಳಗಾಗುವಷ್ಟರಲ್ಲಿ ಹಿಂಗೆ ಅಸ್ತಿತ್ವದಲ್ಲಿದ್ದ ಸಂಗತಿಯೊಂದು ಬೆಳಗಾಗುವಷ್ಟರಲ್ಲಿ ಅಸ್ತಿತ್ವರಹಿತವಾಗುವದು ಎಂದರೆಎಂದು ಭಯಂಕರ ಗಾಬರಿಯೆನ್ನಿಸಿತು. ಮೊನ್ನೆಯೇ ಪಿಂಚಣಿ ತರಬೇಕಿತ್ತು, ಹಾಳು ವಯಸ್ಸು ಬೇರೆ… ಸುಮ್ಮನೇ ಇರುತ್ತದೆಯೇ… ಕೈಕಾಲು, ಸೊಂಟಗಳಲ್ಲಿ ಕೂತು, ಇದ್ದಬದ್ದಮೂಳೆಗಳನ್ನು ಕಟಿಪಿಟಿ ಮಾಡಿ, ಎಟಿಎಂಗೆ ನಾಳೆ ಹೋದರಾಯ್ತು ಎಂದುಕೊಂಡಿದ್ದು.. ಈಗ ನೋಡಿದರೆ…. “ನೋಟು ರದ್ದತಿ” ಹೆಡ್ ಲೈನಿನಲ್ಲಿ ಕಪ್ಪಕ್ಷರದಲ್ಲಿ ದೊಡ್ಡಕ್ಷರದಲ್ಲಿ ಫಳಫಳಿಸುತ್ತಿದೆ…

“ಅರೆ ನಾನೇನು ಕನ್ನಡಕ ಹಾಕಿಕೊಂಡು ಪೇಪರ್ ಓದತಿದ್ದೀನಾ ಇಲ್ಲವಾ” ಎಂದು ಯಶೋಧಾ ದೀದಿ ಗಾಬರಿಗೊಂಡು, ಕಣ್ಣಿಗೆ ಒಮ್ಮೆ ಕೈಒತ್ತಿಕೊಂಡರು. ಇಲ್ಲ ಕನ್ನಡಕ ಮೂಗಿನ ಮೇಲೆ ಇದೆ… ಅಂದರೆ ಓದುತ್ತಿರುವುದು ನಿಜ…ಇಲ್ಲಿರುವುದು ನಿಜ…  ಈ ಸಲ ಇನ್ನೂ ಕೆಲಸದವಳಿಗೆ ಸಂಬಳ ಕೊಟ್ಟಿಲ್ಲ,  ಹಾಲಿನವನು,ಪೇಪರ್ನವನು… ಕಿರಾಣಿ… ಬ್ಯಾಂಕಿನಿಂದ ದಿನಕ್ಕೆ ಎರಡು ಸಾವಿರ ಮಾತ್ರವಂತೆ… ಎಲ್ಲೋ ಕಪಾಟಿನ ಮೂಲೆಯಲ್ಲಿ ಸೀರೆಯ ಮಡಿಕೆಯಲ್ಲಿ ಆಗೀಗ ಉಳಿಸಿದ್ದ ಐದು ನೂರರ ನೋಟುಗಳು ಎಂಟು ಹತ್ತು ಇದ್ದೀತು, ನಿಜ.. ಆದರೆ ಅದನ್ನು ಮೂಸುವವರು ಯಾರೀಗ….

ಪಾತ್ರೆ ತೊಳೆಯುತ್ತಿದ್ದ ಕೆಲಸದವಳು “ಅವ್ರಿಗೇನು ಹೆಂಡತಿ ಮಕ್ಳುಮರಿ ಇಲ್ಲ, ಕಾಸುಕೊಟ್ಟು ಏನಾರ ಖರೀದಿ ಮಾಡೋ ಚಿಂತಿ ಇಲ್ಲ” ಎಂದೇನೋ  ಗೊಣಗುತ್ತ ಪಾತ್ರೆಯನ್ನು ಕುಕ್ಕಿದಳು.  ಹೋಗುವ ಮೊದಲು ಸೆರಗಿನ ಗಂಟಿನಲ್ಲಿದ್ದ ಇದೀಗ ಒಲೆಗೆ ಎಸೆಯಬಹುದು ಎಂಬ ಚಹರೆಯನ್ನು  ಅಂಟಿಸಿಕೊಂಡಿದ್ದ, ಮುಟ್ಟಿದರೆ ಇನ್ನೇನು ಹರಿದೇ ಹೋಗುವಂತಿದ್ದ ಮಡಿಕೆಯಾಗಿದ್ದ ಹಳೆಯ ಎರಡು ಐದು ನೂರರ ನೋಟನ್ನು ಯಶೋಧಾ ಬೆಹನ್  ಮುಂದೆ ಹಿಡಿದು, ‘ಸಂಬಳ ಆಮೇಲೆ ಕೊಡ್ರಿ, ಈಗ ಇದನ್ನಿಟ್ಟುಕೊಂಡು ನೂರರ ನೋಟಾದ್ರೂ ಕೊಡ್ರಿ…  ಮನಿಗಿ ಅಕ್ಕಿ, ಬ್ಯಾಳಿ   ಆದರೂ  ತಗಂಡುಹೋಗತೀನಿ”  ಎಂದಳು. ಯಶೋಧಾ ದೀದಿ ಮೂರ್ಚೆ ಹೋಗುವುದೊಂದು ಬಾಕಿ!  ಸಂಬಂಧಗಳೇ ರಾತ್ರಿ ಕಳೆದು ಬೆಳಗಾಗುವಷ್ಟರಲ್ಲಿ ಅಸ್ತಿತ್ವ  ಕಳೆದುಕೊಂಡು…. ವರ್ಷಗಟ್ಟಲೆ ಚುನಾವಣಾ ಅಭ್ಯರ್ಥಿ ದಾಖಲೆಗಳಲ್ಲಿಯೂ ಅವಿವಾಹಿತ ಎಂದು ಉಳಿಯುವಾಗ…  ಇನ್ನು ನೋಟೆಂಬ ನೋಟು ಅಸ್ತಿತ್ವ  ಕಳೆದುಕೊಂಡು, ನೋಟು ಅಮಾನ್ಯೀಕರಣ ಎಂಬಒಂದು ಚಂದದ ಹೆಸರಿಟ್ಟುಕೊಳ್ಳುವುದು ಏನು ಅಸಂಭವವವೇನಲ್ಲ….

ನವೆಂಬರ್ 8, 2017

ಯಶೋಧಾ ದೀದಿ ಬೆಳಗ್ಗೆ ಏನೋ ಹುಡುಕುತ್ತ ನೋಡಿದರೆ ಯಾವುದೋ ಹಳೆಯ ಕಾಗದ ಪತ್ರದ ಅಡಿಯಲ್ಲಿ ಏನೋ ಬಹಳ ತುರ್ತಿಗೆ ಇರಲಿ  ಎಂದು ಇಟ್ಟುಕೊಂಡಿದ್ದ ಒಂದು ಐದು ನೂರರ ಹಳೆಯ ನೋಟು ಕಂಡುಬಿಡುವುದೇ? ಛೇ… ಏನು ಮಾಡುವುದೀಗ ಇದನ್ನು ಇಟ್ಟುಕೊಂಡು…  ಹಳೆಯ ಸೀರೆಯ ಮಡಿಕೆಗಳಲ್ಲಿ ಇಟ್ಟುಕೊಂಡಿದ್ದ ಎಂಟು ಹತ್ತು ನೋಟುಗಳನ್ನು ನಿಧಾನಕ್ಕೆ ಬ್ಯಾಂಕಿನಲ್ಲಿ ಬದಲಿಸಿಕೊಂಡಿದ್ದಾಗಿತ್ತು…  ಈ ನೋಟು  ಹಂಗೇ ಉಳಿದುಬಿಟ್ಟಿತಲ್ಲ… ಆಗಲೇ ಸರಿಯಾಗಿ ನೋಡಬೇಕಿತ್ತು…. ಅರೆ…500 ರೂ, ಎಂದು ಗಾಂಧೀಜಿ ಚಿತ್ರದ ಮೊಹರು ಹೊತ್ತ ಇದು  ಬರಿಯ ಕಾಗದದ ತುಣಕು ಮಾತ್ರವೇ? ಈ 500 ನೋಟಿನಿಂದ ಏನೆಲ್ಲ ಕೊಳ್ಳಬಹುದಿತ್ತು ಎಂಬ ಸಣ್ಣ ಪಟ್ಟಿಯೂ ಯಶೋಧಾ ದೀದಿ ಮನದಲ್ಲಿ ತೂಗುತ್ತ “ಅಲ್ಲ… ರಿಸರ್ವ್ ಬ್ಯಾಂಕಿನವರೂ ಇದನ್ನು ತಗಳ್ಳಲ್ಲ… ಹಂಗಾರೆ ಈ ನೋಟನ್ನು ನಂಬರ್ 7 ಲೋಕ ಕಲ್ಯಾಣ ರಸ್ತೆಯ  ವಿಳಾಸಕ್ಕೆ (“ಇಂದ” ಎಂದು ನನ್ನವಿಳಾಸವನ್ನೂ ಬರೆದು!!) ಕಳಿಸಿಬಿಡಲೇ” ಎಂದುಕೊಳ್ಳುತ್ತ ಕೂತರು ಎಂಬಲ್ಲಿಗೆ……

ಬಂದು ನಿಂತಿದ್ದೇವೆ!

Leave a Reply