ಸುಲ್ತಾನ್ ಟಿಪ್ಪು ಅಲ್ಲ, ಸಿಟಿಜನ್ ಟಿಪ್ಪು

 

 

 

 

ಜಿ ಎನ್ ನಾಗರಾಜ್ 

 

 

 

 

 

 

ಸುಲ್ತಾನ್ ಟಿಪ್ಪು ಅಲ್ಲ, ಸಿಟಿಜನ್ ಟಿಪ್ಪು -ಫ್ರೆಂಚ್ ಕ್ರಾಂತಿಯ ವಿಚಾರಗಳ ಪ್ರಭಾವ-(ಟಿಪ್ಪು ಮಹತ್ವ 02)

ಭಾರತದ ಮೊದಲ ಸಿಟಿಜನ್ ಟಿಪ್ಪು ಎಂದರೆ ಆಶ್ಚರ್ಯವಾಗಬಹುದಲ್ಲವೇ ?

ಭಾರತ ಎಂದು ಇಂದು ನಾವು ಕರೆಯುತ್ತಿರುವ ಪ್ರದೇಶದ ಯಾರಿಗೂ ಇಂತಹದೊಂದು ಪದ ಮತ್ತು ಪ್ರಜಾಪ್ರಭುತ್ವದ ಈ ಒಂದು ತತ್ವದ ಬಗ್ಗೆ ಕಲ್ಪನೆಯೇ ಇಲ್ಲದಿದ್ದಾಗ ತನ್ನನ್ನು ತಾನು ಸಿಟಿಜನ್ ಎಂದು ಕರೆದುಕೊಂಡ ಏಕಮಾತ್ರ ವ್ಯಕ್ತಿ ಟಿಪ್ಪು.

ಅದೂಕೂಡ ಇಂಡಿಯನ್ ರಿಪಬ್ಲಿಕ್ ನ ಮೊದಲ ಸಿಟಿಜನ್.

ಈ ರಿಪಬ್ಲಿಕ್ ಎಂಬ ಪದವೂ ಕೂಡ ಅಂದಿನ ಭಾರತೀಯರಿಗ್ಯಾರಿಗೂ ಪರಿಚಿತವಲ್ಲದ ಪರಿಕಲ್ಪನೆ. ರಿಪಬ್ಲಿಕ್ ಎಂದರೆ ರಾಜನೇ ಇಲ್ಲದೆ ಜನರೇ ಆಡಳಿತ ಮಾಡುವುದು ಎಂಬ ಅಂದಿನ ವಿಶ್ವದಲ್ಲಿಯೇ ಆಗ ತಾನೇ ಹೊಸದಾಗಿ ಮೂಡಿದ್ದ ಈ ಚಿಂತನೆ ಟಿಪ್ಪುವಿನ ಅರಿವಿಗೆ ಬಂದದ್ದಾದರೂ ಹೇಗೆ ? ಇದೊಂದು ಸೋಜಿಗದ ಸಂಗತಿ.

ಈ ವಿಷಯಗಳು ಟಿಪ್ಪುವಿನ ಬಗೆಗಿನ ಯಾವುದೇ ಚರ್ಚೆಗಳಲ್ಲಿ ಎಲ್ಲೂ ಕಾಣುತ್ತಿಲ್ಲ.ಆದರೆ ಇದು ನಿಜ. ನೆಪೋಲಿಯನ್ ಗೆ ಟಿಪ್ಪು ಬರೆದ ಪತ್ರಗಳಲ್ಲಿ ಈ ರೀತಿ ಕರೆದುಕೊಂಡು ಟಿಪ್ಪು ಸಹಿ ಮಾಡಿದ್ದಾನೆ.ಈ ರೀತಿ ಟಿಪ್ಪು ತನ್ನನ್ನು ಸಿಟಿಜನ್ ಎಂದು ಕರೆದುಕೊಳ್ಳುವುದು ಒಂದು ಮಹತ್ವದ ವಿಷಯವೇ ಸರಿ. ಇಂತಹ ಪ್ರಸಂಗ ಬಂದ್ದದ್ದು ಹೇಗೆ?

ಹೀಗೊಂದು ಘಟನೆ ನಡೆಯಿತೆಂದು ಹೇಳಲಾಗಿದೆ. ಟಿಪ್ಪುವಿನ ಮದುವೆಯ ಸಮಯದಲ್ಲಿ ಅವನ ತಂದೆ ಹೈದರಾಲಿ ಮಗನನ್ನು ಕೇಳಿದರಂತೆ –ಈ ಶುಭ ಸಂದರ್ಭದಲ್ಲಿ ನಿನಗೇನು ಉಡುಗೊರೆ ಬೇಕು ಎಂದು.ಆಗ ಟಿಪ್ಪು ನನಗೆ ಫ್ರಾನ್ಸ್ ನ ಪ್ರಸಿದ್ಧ ತತ್ವಶಾಸ್ತ್ರಜ್ಞರು,ವಿಚಾರವಾದಿಗಳೂ ಆಗಿದ್ದ ವಾಲ್ಟೈರ್,ರೂಸೋ ಮೊದಲಾದವರ ಬರಹಗಳನ್ನು ಪರ್ಶಿಯನ್ ಭಾಷೆಗೆ ಅನುವಾದಿಸಿದ ಒಂದು ಪುಸ್ತಕ ಭಂಡಾರ ಬೇಕು ಎಂದು ಕೇಳಿದನಂತೆ. ಅದನ್ನು ಕಷ್ಟಪಟ್ಟು ಹೈದರಾಲಿ ಒದಗಿಸಿದನಂತೆ.

ಹೈದರಾಲಿಗೆ ಆರಂಭದಲ್ಲಿಯೇ ಬ್ರಿಟಿಷರು ಅಂದಿನ ಮೈಸೂರು ಸಂಸ್ಥಾನದ ವೈರಿಗಳು ಎಂದು ಅರಿವಾಯಿತು. ಆದ್ದರಿಂದ ಅಂದು ಭಾರತದಲ್ಲಿ ಬ್ರಿಟಿಷರಿಗೆ ಪ್ರಬಲ ಪೈಪೋಟಿ ಒಡ್ಡಿದ್ದ ಫ್ರೆಂಚ್ ಆಡಳಿತಗಾರರು ಮತ್ತು ಸೈನ್ಯಾಧಿಕಾರಿಗಳೊಡನೆ ಒಳ್ಳೆಯ ಸಂಬಂಧ ಬೆಳೆಸಿದ್ದ ಹಾಗೂ ಅವರ ಮೂಲಕ ತನ್ನ ಸೈನ್ಯಕ್ಕೆ ತರಬೇತಿಯನ್ನೂ ಕೊಡಿಸಿದ್ದ. ಈ ಫ್ರೆಂಚರಿಂದ ಟಿಪ್ಪು ಫ್ರೆಂಚ್ ಭಾಷೆಯನ್ನೂ ಕಲಿತಿದ್ದ. ಈ ಕಲಿಕೆಯ ಸಂದರ್ಭದಲ್ಲಿಯೇ ಫ್ರೆಂಚ್ ವಿಚಾರವಾದಿಗಳ ಬಗ್ಗೆ ಟಿಪ್ಪುವಿಗೆ ತಿಳಿದುಬಂದಿರಬೇಕು.

ಮುಂದೆ ಫ್ರೆಂಚ್ ಸರ್ಕಾರದೊಂದಿಗೆ ಪತ್ರವ್ಯವಹಾರ ಮಾಡಲು ಕೇವಲ ಭಾಷೆಯ ಕಲಿಕೆ ಮಾತ್ರವಲ್ಲದೆ ವಿಚಾರಗಳ ಓದು ಕೂಡ ನೆರವಿಗೆ ಬಂದಿದೆ.ಮುಂದೆ ಫ್ರೆಂಚ್ ಕ್ರಾಂತಿಯಾದ ನಂತರ ಅದರ ವಿವರಗಳೆಲ್ಲವೂ ಟಿಪ್ಪುವಿನ ಅರಿವಿಗೆ ಬಂದಿದೆ. ಇದರಿಂದ ಉತ್ಸಾಹಿತನಾದ ಟಿಪ್ಪು ಶ್ರೀರಂಗ ಪಟ್ಟಣದಲ್ಲಿದ್ದ ಫ್ರೆಂಚರೊಂದಿಗೆ ಸೇರಿ ಜಾಕೋಬಿನ್ ಕ್ಲಬ್ ಒಂದನ್ನು ಸ್ಥಾಪಿಸಿದ್ದನೆಂದು ಬ್ರಿಟಿಷ್ ಕರ್ನಲ್ ವಿಲ್ಕ್ಸ್ ದಾಖಲಿಸಿದ್ದಾನೆ.

ಪ್ರೆಂಚ್ ಕ್ರಾಂತಿಯ ಇತಿಹಾಸ ಗೊತ್ತಿದ್ದವರಿಗೆ ಈ ಜಾಕೋಬಿನ್ ಗಳು ಎಂದು ಗುರುತಿಸಿಕೊಳ್ಳುವುದರ ಅರ್ಥವೇನು ಎಂಬುದರ ಅರಿವಾಗುತ್ತದೆ.ವಿವಿಧ ಘಟ್ಟಗಳನ್ನು ಹಾದು ಬೆಳೆದ ಫ್ರೆಂಚ್ ಕ್ರಾಂತಿಯಲ್ಲಿ ಜಾಕೋಬಿನ್ ಹಂತ ಒಂದು ತೀವ್ರ ಹಂತ. ಕ್ರಾಂತಿಯನ್ನು ವಿಫಲಗೊಳಿಸಲು ಮೇಲ್ವರ್ಗದವರು,ರಾಜ ಮನೆತನದವರು ಒಳಸಂಚು ನಡೆಸುತ್ತಿದ್ದಾರೆಂದು ತಿಳಿದು ಬಂದ ಮೇಲೆ ಅದನ್ನು ತಪ್ಪಿಸಲು ರಾಜ ಮನೆತನವನ್ನೇ ನಾಶ ಮಾಡಿದ ಹಂತ.

ಜಾಕೋಬಿನ್ ಗಳು ಅದೇ ಹೆಸರಿನ ಗುಂಪುಗಳನ್ನು ರಚಿಸಿಕೊಂಡು ತಮ್ಮನ್ನು ತಾವು ಸಿಟಿಜನ್ ಎಂದು ಕರೆದುಕೊಳ್ಳುತ್ತಿದ್ದರು. ಇದು ನೂರಾರು ವರ್ಷಗಳ ಕಾಲ ಫ್ರೆಂಚ್ ಸಮಾಜದಲ್ಲಿದ್ದ ಸಾಮಂತ, ಪಾಳೆಯಗಾರ, ನೋಬಲ್ –ಅಂದರೆ ಮೇಲ್ವರ್ಗದ ಶ್ರೀಮಂತರು ಎಂಬ ವಿವಿಧ ಪದವಿಗಳನ್ನು ರದ್ದುಪಡಿಸಿ ಎಲ್ಲರೂ ಒಂದೇ ಸಮ ಎಂದು ಸಾರಲು ಈ ಒಂದೇ ಹೆಸರಿನಿಂದ ಕರೆದುಕೊಳ್ಳುತ್ತಿದ್ದರು.

ಹೀಗೆ ಸಿಟಿಜನ್ ಕ್ಲಬ್ ಸ್ಥಾಪನೆಯ ಜೊತೆಗೆ ಸ್ವಾತಂತ್ರ್ಯ(ಲಿಬರ್ಟಿ) ಯ ಸ್ಮಾರಕವಾಗಿ ಒಂದು ಮರವನ್ನೂ ಟಿಪ್ಪು ನೆಡಿಸಿದ್ದನಂತೆ. ಅದರ ನೆನಪಿನಲ್ಲಿ ಸಾವಿರಾರು ತುಪಾಕಿಗಳನ್ನೂ ಹಾರಿಸಿದ್ದನಂತೆ.ಅಮೇರಿಕದ ಸ್ವಾತಂತ್ರ್ಯ ಹೋರಾಟಕ್ಕೆ ತನ್ನ ಬೆಂಬಲ ಸೂಚಿಸಲು ಧನ ಸಹಾಯದ ಜೊತೆಗೆ ಪತ್ರವನ್ನೂ ಬರೆದಿದ್ದನಂತೆ. ಪ್ರತಿವರ್ಷವೂ ಫ್ರೆಂಚ್ ಕ್ರಾಂತಿಯನ್ನು ನೆನಪಾಗಿ 21 ಗನ್ ಗಳ ವಂದನೆ ಸಲ್ಲಿಸಲಾಗುತ್ತಿತ್ತಂತೆ. ಟಿಪ್ಪುವಿನೊಡನೆ ಸಂಭಾಷಿಸಿದ ಇಂಗ್ಲಿಷ್ ಅಧಿಕಾರಿಗಳು ಅವನ ಯೂರೋಪಿನ ಮತ್ತು ಫ್ರೆಂಚ್ ಕ್ರಾಂತಿಯ ಬಗೆಗಿನ ಜ್ಞಾನಕ್ಕೆ ಬೆರಗಾಗಿದ್ದಾರೆ.ಹೀಗೆ ಟಿಪ್ಪು ಭಾರತದ ತನ್ನ ಸಮಕಾಲೀನ ರಾಜರು,ನವಾಬರು,ಸುಲ್ತಾನರುಗಳಿಗಿಂತ ಶತಮಾನ ಕಾಲದಷ್ಟು ಮುಂದಿದ್ದನೆಂಬುದು ಋಜುವಾತಾಗುತ್ತದೆ.

ಹೀಗೆ ಹಲವು ಹಂತಗಳಲ್ಲಿ ಫ್ರೆಂಚ್ ಕ್ರಾಂತಿಯ ವಿಚಾರಗಳು ಟಿಪ್ಪುವನ್ನು ಆಕರ್ಷಿಸಿದ್ದವು. ಈ ವಿಚಾರಗಳೇ ಕೇರಳದ ಮಲಬಾರ್ ಪ್ರದೇಶವನ್ನು ಗೆದ್ದಮೇಲೆ ಅಲ್ಲಿಯ ಕೆಳ ಜಾತಿಗಳ ಹೆಂಗಸರು ಸೊಂಟದ ಮೇಲೆ ಬಟ್ಟೆ ತೊಡಬಾರದು ಮತ್ತು ಮೊಲೆ ತೆರಿಗೆ ಕೊಡಬೇಕು ಎಂಬ ಕಟ್ಟಳೆಗಳನ್ನು ಕಿತ್ತು ಹಾಕುವುದರಲ್ಲಿ ಹಾಗೂ ಜೀತಗಾರಿಕೆ ಮತ್ತು ಖಾಯಂ ಗೇಣಿಗಾರಿಕೆಯನ್ನು ಸಡಲಿಸುವ ಅವನ ಕ್ರಮಗಳಿಗೆ ಕಾರಣವಾಗಿವೆ.

ಫ್ರೆಂಚ್ ಕ್ರಾಂತಿಯ ವಿಚಾರಗಳು ಮತ್ತು ತತ್ವಶಾಸ್ತ್ರಗಳನ್ನು ಓದಿಕೊಂಡಿದ್ದನೆಂಬುದು ಮತ್ತು ಅದರಿಂದ ಪ್ರಭಾವಿತನಾಗಿದ್ದನೆಂಬುದು ಅವುಗಳನ್ನು ಅದರ ಎಲ್ಲ ಆಯಾಮಗಳಲ್ಲಿ ಜಾರಿಗೆ ತಂದಿದ್ದನೆಂದಾಗಲಿ , ತರಲು ಪ್ರಯತ್ನಿಸಿದನೆಂದಾಗಲಿ ಅರ್ಥೈಸುವುದು ತಪ್ಪು. ಅಂದಿನ ಸನ್ನಿವೇಶ, ರಾಜ್ಯವೊಂದರ ಸುಲ್ತಾನನಾಗಿ ಆಳ್ವಿಕೆ ನಡೆಸಬೇಕಾದ ಧಾಳಿಗಳನ್ನು ಎದುರಿಸಬೇಕಾದ ಸಂದರ್ಭಗಳನ್ನು ಹೊರಗಿಟ್ಟು ಈ ವಿಚಾರವನ್ನು ಪ್ರತ್ಯೇಕಿಸಿದರೆ ಅದು ಇತಿಹಾಸದ ಸರಿಯಾದ ಅರ್ಥೈಕೆಯಾಗುವುದಿಲ್ಲ.

Leave a Reply