ನುಡಿದರೆ ಮುತ್ತಿನ ಹಾರದಂತಿರಬೇಕು..

ಕೆ. ವಿ. ತಿರುಮಲೇಶ್

ನುಡಿದರೆ ಮುತ್ತಿನ ಹಾರದಂತಿರಬೇಕು

ನುಡಿದರೆ ಮಾಣಿಕ್ಯದ ದೀಪ್ತಿಯಂತಿರಬೇಕು

ನುಡಿದರೆ ಸ್ಫಟಿಕದ ಶಲಾಕೆಯಂತಿರಬೇಕು

ನುಡಿದರೆ ಲಿಂಗ ಮೆಚ್ಚಿ ಅಹುದಹುದೆನಬೇಕು

ನುಡಿಯೊಳಗಾಗಿ ನಡೆಯದಿದ್ದರೆ ಕೂಡಲಸಂಗಮನೆಂತೊಲಿವನಯ್ಯ?

(ಬಸವಣ್ಣ)

 

ಇದು ಬಸವಣ್ಣನವರ ಸುಪ್ರಸಿದ್ಧ ವಚನಗಳಲ್ಲಿ ಒಂದು. ನಮ್ಮ ನುಡಿ (ಮಾತು) ಹೇಗಿರಬೇಕು ಎನ್ನುವುದರ ಜತೆಗೇ ನಾವು ಹೇಗಿರಬೇಕು ಎನ್ನುವುದನ್ನು ಸೂಚಿಸುತ್ತದೆ. ಈ ವಚನ ಎಷ್ಟು ಸರಳವೂ ಸುಭಗವೂ ಆಗಿದೆಯೆಂದರೆ ಇದನ್ನು ವಿವರಿಸುವ ಅಗತ್ಯವೇ ಇಲ್ಲ. ಆದರೂ ಸಂಪ್ರದಾಯದಂತೆ ಇದರ ರೂಪಕಗಳನ್ನೊಮ್ಮೆ ನೋಡೋಣ.

ನುಡಿ 1. ಮುತ್ತಿನ ಹಾರ ಪೋಣಿಸಿದಂತೆ ಇರಬೇಕು; ಎಂದರೆ ಬಿಡಿಬಿಡಿ ಪದಗಳನ್ನು ಜೋಡಿಸಿದ ವಾಕ್ಯದಂತೆ, ಹಾಗೆ ಜೋಡಿಸಿದಾಗ ಅದಕ್ಕೊಂದು ಓರಣ ಬರಬೇಕು, ಅದುವೇ ಮಾಲೆ. 2. ಅದು ಮಾಣಿಕ್ಯದಂತೆ ಬೆಳಕು ಚೆಲ್ಲಬೇಕು, ಎಂದರೆ ಅದಕ್ಕೊಂದು ಅರ್ಥ ಬರಬೇಕು, ಇದುವರೆಗೆ ಗೊತ್ತಿಲ್ಲದುದನ್ನು ಗೊತ್ತುಮಾಡಿಕೊಡಬೇಕು (ದರ್ಶನ). 3. ಮಾತು ಸ್ಫಟಿಕದ ಎಲೆಯಂತೆ (ಶಲಾಕೆಯಂತೆ) ನೇರವಾಗಿರಬೇಕು, ಹೊಳೆಯಬೇಕು, ಪಾರದರ್ಶಕವಿರಬೇಕು. 4. ಶಿವ ಮೆಚ್ಚಿ ತಲೆದೂಗಬೇಕು. 5. ಇಷ್ಟಾದರೂ ಸಾಲದು, ನುಡಿದವನು ತಾನು ನುಡಿದಂತೆ ನಡೆಯಬೇಕು; ಅದಲ್ಲದಿದ್ದರೆ, ಅರ್ಥಾತ್ ನುಡಿ ಮತ್ತು ನಡೆಯಲ್ಲಿ ಅಂತರವಿದ್ದರೆ, ಕೂಡಲಸಂಗಮ ಒಲಿಯುವುದು ಹೇಗೆ?

‘ನುಡಿಯೊಳಗಾಗಿ ನಡೆ’ ಎನ್ನುವುದು ಇಲ್ಲಿ ತಿರುಳಿನ ಮಾತು. ನುಡಿಯೊಳಗಾಗು ಎಷ್ಟು ಚಂದದ ಪದ! ಇದು ಮನುಷ್ಯನ ಋಜುತ್ವ. ಅಸ್ತಿತ್ವವಾದಿ ಪರಿಭಾಷೆಯಲ್ಲಿ, ಅವನು ತನ್ನ ಅಸ್ತಿತ್ವವನ್ನು ರೂಪಿಸಕೊಳ್ಳುವ ಬಗೆ. ಬಸವಣ್ಣ ಇಲ್ಲಿ ನುಡಿಯುವ ಬಗೆಯೇ ತನಗೆ ತಾನೇ ಒಂದು ಸಾದೃಶ್ಯ. ಯಾಕೆಂದರೆ ಇದಕ್ಕಿಂತ ಚೆನ್ನಾಗಿ ಇದೇ ಅರ್ಥವನ್ನು ಹೊಮ್ಮಿಸುವುದು ಅಸಾಧ್ಯ. ನುಡಿ ಇಲ್ಲಿ ಪರಿಪೂರ್ಣತೆಯನ್ನು ಪಡೆದಿದೆ.

ಕ್ಷಮಿಸಿ, ನಾನಿಲ್ಲಿ ಬಸವಣ್ಣನವರ ಈ ದಾರ್ಶನಿಕ ವಚನವನ್ನು ಉದ್ಧರಿಸಿದುದಕ್ಕೆ ಅಷ್ಟೇನೂ ದಾರ್ಶನಿಕವಲ್ಲದ, ಒಂದು ‘ಪ್ರಾಪಂಚಿಕ’ ಕಾರಣವಿದೆ. ಬಸವಣ್ಣನವರ ವಚನ ತರಗತಿಯಲ್ಲಿ ಒಬ್ಬ ಮೇಷ್ಟ್ರು ತಮ್ಮ ವಿದ್ಯಾರ್ಥಿಗಳಿಗೆ ನೀಡಬಹುದಾದಂಥ ಸಲಹೆ. ಒಂದು ರೀತಿಯಲ್ಲಿ ನಾನೂ ಇಲ್ಲಿ ಅದಕ್ಕೇ ಹೊರಟಿರುವುದು—ಸ್ವಲ್ಪ ಸ್ವಾನುಭವದಿಂದ, ಸ್ವಲ್ಪ ಪರಿವೀಕ್ಷಣೆಯಿಂದ. ಪ್ರಶ್ನೆ:

ಕನ್ನಡಿಗರಾದ ನಾವು ನಾಲ್ಕು ಜನರ ಮುಂದೆ ಕನ್ನಡದಲ್ಲೇ ಕೆಲವು ಮಾತುಗಳನ್ನು ಸ್ಪಷ್ಟವಾಗಿಯೂ, ಅರ್ಥಪೂರ್ಣವಾಗಿಯೂ, ಮನದಟ್ಟಾಗುವಂತೆಯೂ ಹೇಳಬಲ್ಲೆವೇ? ಉತ್ತರ: ಕೆಲವು ಮಂದಿ ಹೇಳಬಲ್ಲರು, ಆದರೆ ಬಹುತೇಕ ಮಂದಿ ಹೇಳಲಾರರು. ಒಂದೋ ಅವರು ಮೌನವಾಗಿರುತ್ತಾರೆ, ಇಲ್ಲವೇ ತಡವರಿಸುತ್ತಾರೆ. ನಿರರ್ಗಳವಾಗಿ, ಅಸ್ಖಲಿತವಾಗಿ, ತಡವರಿಸದೆ ನುಡಿಯಬಲ್ಲವರು ಅಪರೂಪ. ಭಾಷೆ ನಮ್ಮದೇ, ನಾವು ಕಲಿತುದೇ; ಆದರೂ ಯಾಕೆ ಹೀಗೆ? ನಮಗೆ ಅಭ್ಯಾಸವಿಲ್ಲ ಎನ್ನುತ್ತಾರೆ. ಅದು ನಿಜವಿರಬಹುದು. (ಹೇಳುವುದಕ್ಕೇನೂ ಇಲ್ಲದೆ ಇರಬಹುದು ಕೂಡ! ಅದು ಬೇರೊಂದು ಸಮಸ್ಯೆ.) ಹಾಗಿದ್ದರೆ ಅಭ್ಯಾಸ ಮಾಡುವುದು ಹೇಗೆ? ನನ್ನ ಬಳಿ ಒಂದು ಸಲಹೆಯಿದೆ; ಇದು ಉಚ್ಚಾರಣೆಗೆ ಸಂಬಂಧಿಸಿಯಲ್ಲದೆ ಇಡೀ ಭಾಷಣಕಲೆಗೆ ಸಂಬಂಧಿಸಿ ಅಲ್ಲ. ಭಾಷಣಕಲೆಯ ಬಗ್ಗೆ ಇಷ್ಟು ಪುಟ್ಟ ಲೇಖನದಲ್ಲಿ ಹೇಳುವಂತಿಲ್ಲ, ಅದು ನನ್ನ ಉುದ್ದೇಶವೂ ಅಲ್ಲ. ಒಬ್ಬ ಇಂಗ್ಲಿಷ್ ಅಧ್ಯಾಪಕನಾಗಿ ನಾನು ನನ್ನ ಇಂಗ್ಲಿಷ್ ವಿದ್ಯಾರ್ಥಿಗಳಿಗೆ ನೀಡುತ್ತಿದ್ದ ಸಲಹೆ ಇದು; ಕನ್ನಡದ ಸಂದರ್ಭದಲ್ಲೂ ಸರಿಯೆಂದು ನನಗೆ ಅನಿಸುತ್ತದೆ.

ಪ್ರತಿದಿನ, ಸಾಧ್ಯವಿದ್ದರೆ ಬೆಳಿಗ್ಗೆಯೇ, ಒಂದು ಗದ್ಯ ಪಠ್ಯಭಾಗವನ್ನು ಎತ್ತಿಕೊಂಡು (ಕತೆ, ಕಾದಂಬರಿ, ಪ್ರಬಂಧ, ಪತ್ರಿಕೆ ಯಾವುದೇ ಆದರೂ) ಅದನ್ನು ಒಂದೈದು ಮಿನಿಟುಗಳ ಕಾಲ ಓದಿ. ಓದುವ ಪಠ್ಯಭಾಗವನ್ನು ದಿನವೂ ಬದಲಿಸಬೇಕು. ಓದುವಾಗ ಈ ಕೆಳಗಿನ ತತ್ವಗಳನ್ನು ಅಕ್ಷರಶಃ ಅನುಸರಿಸುವುದು ಮುಖ್ಯ:

1.      ಗಟ್ಟಿಯಾಗಿ (ದೊಡ್ಡಕೆ)

2.     ಸ್ಪಷ್ಟವಾಗಿ (ವಿರಳವಾಗಿ)

3.     ನಿಧಾನವಾಗಿ (ಹದವಾದ ಲಯದಲ್ಲಿ)

ಏಕಾಂತದಲ್ಲಿ ಇದನ್ನು ಮಾಡಿದರೆ ಒಳ್ಳೆಯದು; ಇಲ್ಲದಿದ್ದರೆ, ನಿಮ್ಮ ಮನೆಯವರಿಗೆ ಹೇಳಿ: ನಿಮಗೆ ಹುಚ್ಚುಗಿಚ್ಚು ಏನೂ ಹಿಡಿದಿಲ್ಲ, ಮಾತಾಡುವ ಅಭ್ಯಾಸಕ್ಕಾಗಿ ಹೀಗೆ ದೊಡ್ಡಕೆ ಓದುತ್ತಿದ್ದೇನೆ ಎಂಬುದಾಗಿ. ಎಷ್ಟು ದಿವಸ ಹೀಗೆ ಮಾಡಬೇಕು? ಜೀವಮಾನವಿಡೀ ಮಾಡಬೇಕೆಂದಿಲ್ಲ! ಎಲ್ಲೀ ವರೆಗೆ ನಿಮಗೆ ಆತ್ಮವಿಶ್ವಾಸ ಬರುತ್ತದೋ ಅಲ್ಲೀ ವರೆಗೆ ಮಾಡಿದರೆ ಸಾಕು.

ಇನ್ನು ಸ್ಪಷ್ಟವಾಗಿ ಎಂದರೆ ಯಾವುದೇ ಅಕ್ಷರವನ್ನು ನುಂಗದೆ, ಮೊಟಕುಗೊಳಿಸದೆ, ಹಾರಿಸದೆ ಎಂದು ಅರ್ಥ; ಎಂದರೆ, ವಿರಳವಾಗಿ ಓದಬೇಕು.

ನಿಧಾನವಾಗಿ ಎಂದರೆ, ವೇಗವಾಗಿ ಬಡಬಡನೆ ಓದಬಾರದು ಎಂದು ಅರ್ಥ. ಯಾವ ತರಾತುರಿಯೂ ಬೇಡ. ನಿಧಾನವಾಗಿರಲಿ, ಆದರೆ ತೀರಾ ನಿಧಾನವಾಗಿಯೂ (ಹಾಳಾದ ಗ್ರಾಮಾಫೋನಿನಂತೆ!) ಬೇಡ.

ಓದುವಾಗ ಎಲ್ಲಿ, ಯಾವ ಪದ ಕಷ್ಟವೆನಿಸುತ್ತದೋ ಅದನ್ನು ಒಂದೆರಡು ಸಲ ಪುನರುಚ್ಚರಿಸಿ ಸರಿಯಾಗಿ ಬರುವಂತೆ ಮಾಡಿಕೊಳ್ಳುವುದು ಅಗತ್ಯ.

ಹೀಗೆ ಓದುವುದೊಂದು ಕೃತಕ ವಿಧಾನವಲ್ಲವೇ ಎಂದು ಕೇಳಬಹುದು. ಖಂಡಿತವಾಗಿಯೂ ಕೃತಕವೇ. ಯಾರೂ ನಿಜದಲ್ಲಿ ಹೀಗೆ ಓದುವುದಿಲ್ಲ, ಮಾತಾಡುವುದೂ ಇಲ್ಲ. ಆದರೆ ನಾನಿಲ್ಲಿ ಹೇಳುತ್ತಿರುವುದು ಅಭ್ಯಾಸದ ಬಗ್ಗೆ. ಒಬ್ಬ ಕ್ರಿಕೆಟ್ ಆಟಗಾರ ಅಥವಾ ಇನ್ನಿತರ ಯಾವುದೇ ಆಟೋಟಕ್ಕೆ ತಯಾರಾಗುವ ವ್ಯಕ್ತಿಯನ್ನು ಗಮನಿಸಿ ನೋಡಿ. ಅವನ ತರಬೇತಿಯ ರೀತಿ ನಿಜವಾದ ಆಟವನ್ನಾಗಲಿ ಓಟವನ್ನಾಗಲಿ ಸೂಚಿಸುವುದಿಲ್ಲ. ಅಭ್ಯಾಸದಲ್ಲಿ ಯಾವತ್ತೂ ಕೃತಕತೆ ಮತ್ತು ಉತ್ಪ್ರೇಕ್ಷೆ ಇದ್ದೇ ಇರುತ್ತವೆ. ಆದರೆ ಈ ಅಭ್ಯಾಸ ನಂತರ ಸಹಜವಾಗಿ ಮಾತಾಡಲು ನಮಗೆ ತುಂಬಾ ಸಹಾಯ ಮಾಡುತ್ತದೆ. (ಅಲ್ಲದೆ ಗಟ್ಟಿಯಾಗಿ ಓದುವುದು ಕೆಲವೊಮ್ಮೆ ಅಗತ್ಯವೆಂದು ನನಗೆ ಅನಿಸುತ್ತದೆ: ಇತರರಿಗೆ ಓದಿ ಹೇಳುವುದು, ಅಥವಾ ನಮ್ಮಷ್ಟಕ್ಕೇ ಓದುವುದು. ಓದುವಾಗಿನ ಧ್ವನಿ ಕೇಳಲು ಸೊಗಸು, ಅದೊಂದು ಪ್ರತ್ಯೇಕ ತರದ ಅನುಭವವನ್ನು ಕೊಡುತ್ತದೆ. ಹಿಂದೆ ಕೆಲವು ಮನೆಗಳಲ್ಲಿ ದೇವಾಲಯಗಳಲ್ಲಿ ಪುರಾಣ ಪ್ರವಚನ ನಡೆಯುತ್ತಿತ್ತು. ಹಳ್ಳಿಯ ಹೋಟೆಲುಗಳಲ್ಲಿ ಯಾರಾದರೊಬ್ಬರು ಕೆಲವು ಸಲ ಪತ್ರಿಕೆಗಳಲ್ಲಿನ ಸುದ್ದಿಗಳನ್ನು ಅಲ್ಲಿ ಸೇರಿದ ಇತರರಿಗೆ ಓದಿ ಹೇಳುವುದಿತ್ತು. ಆದರೆ ಇಂದಿನ ನಾಗರಿಕರು ಗಟ್ಟಿಯಾಗಿ ಓದಿ ಹೇಳುವ/ ಕೇಳುವ ಈ ಅನುಭವದಿಂದ ಯಾಕೋ ದೂರವಾಗಿದ್ದಾರೆ.)

ಈ ಮೂರು ತತ್ವಗಳನ್ನು ಅನುಸರಿಸಿ ಪ್ರತಿದಿನದಂತೆ ಕೆಲವು ದಿನ ಅಭ್ಯಾಸ ಮಾಡಿದರೆ ಖಂಡಿತವಾಗಿಯೂ ಅಭ್ಯಾಸಿಯ ಉಚ್ಚಾರಣೆ ಮತ್ತು ನಾಲ್ಕು ಜನರ ಮುಂದೆ ಮಾತಾಡುವ ಆತ್ಮವಿಶ್ವಾಸ ಹೆಚ್ಚುತ್ತದೆ. ಒಳ್ಳೆಯ ವಾಗ್ಮಿಯಾಗಲು ಇಷ್ಟೇ ಸಾಕು ಎಂದು ಅರ್ಥವಲ್ಲ. ಆದರೆ ಸರಿಯಾದ ಉಚ್ಚಾರಣೆ ಮೊದಲ ಪಡಿ. ಗಟ್ಟಿಯಾಗಿ ಓದುವ  ಈ ‘ವ್ಯಾಯಾಮ’ ಯಾಕೆಂದರೆ ಓದುವ ಕ್ರಿಯೆ ಬಾಯಿಯ ಮಾಂಸಪೇಶಿಗಳ ಪರಸ್ಪರ ಸಂಯೋಗದ ಚಟುವಟಿಕೆಯೂ ಹೌದು. ಅವುಗಳಿಗೆ ಸರಿಯಾದ ಕೆಲಸ ಕೊಡದಿದ್ದರೆ ಅವು ಆಲಸಿಗಳಾಗುತ್ತವೆ, ಕೆಲಸ ಕೊಟ್ಟರೆ ಚುರುಕಾಗುತ್ತವೆ.

ಓದುವಾಗ ಪದಸಮುಚ್ಚಯಗಳನ್ನು ಒಂದಾಗಿ ಓದುವುದು, ಯತಿಯನ್ನು (ಯತಿ ಎಂದರೆ ತಡೆ ಅಥವಾ ಅಲ್ಪ ವಿಶ್ರಾಂತಿ) ಮನ್ನಿಸುವುದು ಅಗತ್ಯ. ಎಲ್ಲಕ್ಕಿಂತ ಮುಖ್ಯ, ಓದಿದುದನ್ನು ಅರ್ಥಮಾಡಿಕೊಳ್ಳುವುದು. ಚೆನ್ನಾಗಿ ಆಲಿಸುವವನಿಗೆ ಪದ ಚೆನ್ನಾದ ಸಂಪತ್ತು ಬೇಕಾಗುತ್ತದೆ, ಚೆನ್ನಾಗಿ ಮಾತಾಡಲು ಇನ್ನಷ್ಟು ಚೆನ್ನಾದ ಪದಸಂಪತ್ತು ಬೇಕು. ಎಂದರೆ ನಮ್ಮ ಜ್ಞಾನ ಭಂಡಾರ ಸಾಕಷ್ಟು ವಿಸ್ತಾರವಿರಬೇಕು. ಅದೇನೂ ಒಂದು ದಿನದಲ್ಲಿ ಆಗುವ ಕ್ರಿಯೆಯಲ್ಲ, ಹಾಗೂ ಅದಕ್ಕೊಂದು ಅಂತ್ಯವೆನ್ನುವುದೂ ಇಲ್ಲ. ಕುಮಾರವ್ಯಾಸ ಕೂಡ ಬರೆಯುತ್ತ ಹೋದ ಹಾಗೆ ಬೆಳೆಯುತ್ತಲೂ ಹೋಗಿರಬಹುದು. ನಮ್ಮ ಪದಸಂಪತ್ತು, ಜ್ಞಾನಸಂಪತ್ತು ಹೇಗೆ ವೃದ್ಧಿಸುತ್ತದೆ ಎನ್ನುವುದಕ್ಕೆ ಸುಲಭದ ದಾರಿಯಿಲ್ಲ. There is no royal road to learning! ರಾಜಕುಮಾರನಾದರೂ ಕಲಿಯಲು ಅಧ್ವಾನಪಡಬೇಕಾಗುತ್ತದೆ. ಸವಲತ್ತುಗಳು ಇರಬಹುದು, ಸಹಾಯ ಇರಬಹುದು; ಆದರೆ ಕಲಿಯುವುದು ವೈಯಕ್ತಿಕವಾದ ಶ್ರಮ. ಸೋಮೇಶ್ವರ ಶತಕದಲ್ಲಿ ಒಂದು ಸುಂದರವಾದ ವೃತ್ತವಿದೆ—ಹೆಚ್ಚಿನ ವಿದ್ಯಾವಂತ ಕನ್ನಡಿಗರಿಗೂ ಗೊತ್ತಿರುವಂಥದು:

ಕೆಲವಂ ಬಲ್ಲವರಿಂದ ಕಲ್ತು ಕೆಲವಂ ಶಾಸ್ತ್ರಂಗಳಿಂ ಕೇಳುತಂ

ಕೆಲವಂ ಮಾಳ್ಪವರಿಂದ ಕಂಡು ಕೆಲವಂ ಸುಜ್ಞಾನದಿಂ ನೋಡುತಂ

ಕೆಲವಂ ಸಜ್ಜನ ಸಂಗದಿಂದಲರಿಯಲ್ ಸರ್ವಜ್ಞನಪ್ಪಂ ನರಂ

ಪಲವುಂ ಪಳ್ಳ ಸಮುದ್ರವೈ ಹರ ಹರಾ ಶ್ರೀ ಚೆನ್ನ ಸೋಮೇಶ್ವರಾ

(ಪಾಲ್ಕುರಿಕೆ ಸೋಮನಾಥ)

‘ಪಲವುಂ ಪಳ್ಳ ಸಮುದ್ರವೈ’—ಇದಕ್ಕಿಂತ ಚೆನ್ನಾಗಿ ಸರ್ವಜ್ಞತೆಯನ್ನು ಹೇಳಲು ಸಾಧ್ಯವೇ? ಜ್ಞಾನದ ಮೂಲಗಳು ನೂರಾರು. ಅವುಗಳಲ್ಲಿ ಪುಸ್ತಕಗಳ ಓದು ಕೂಡ ಒಂದು, ಹಾಗೂ ಬಹಳ ಮಹತ್ವದ್ದು. ಈಗ ಉದ್ದೇಶಿಸುವ ಓದು ಬೇರೆ ರೀತಿಯದು. ನಾವು ಏಕಾಂತದಲ್ಲಿ ಮನಸ್ಸಿನಲ್ಲಿ ನಡೆಸುವ ಓದು. ನಿಮಗೆ ಪದಸಂಪತ್ತು, ಜ್ಞಾನಸಂಪತ್ತು ಸಿಗಬೇಕಾದರೆ ಇಂಥ ಓದು ಒಂದು ಬಹು ದೊಡ್ಡ ಮೂಲ. ಸರಿಯಾಗಿ ಮಾತಾಡಲು ಇದು ಅತ್ಯಗತ್ಯವಾಗುತ್ತದೆ. ಹೀಗೆ ಓದುವಾಗ ಅದರಲ್ಲಿ ಸಾಕಷ್ಟು ವೈವಿಧ್ಯತೆ ಇರಲಿ. ನನ್ನ ಆಸಕ್ತಿ ಬಹಳ ಸೀಮಿತ, ಉದಾಹರಣೆಗೆ ನೀರಾವರಿ, ನಾನು ಅದನ್ನಷ್ಡೆ ಓದುತ್ತೇನೆ ಎನ್ನುವ ನಿರ್ಬಂಧ ಬೇಡ. ಸಾಕಷ್ಟು ವಿಸ್ತಾರವಾಗಿಯೂ ಆಳವಾಗಿಯೂ ಓದುವುದು ಒಳ್ಳೆಯದು—ಸಾಧ್ಯವಿರುವಷ್ಟು ಮಟ್ಟಿಗೆ. ಯಾಕೆಂದರೆ ನಾವು ಇತರರ ಮಾತುಗಳನ್ನು ಆಲಿಸುವಾಗ ನಮಗೆ ಅರ್ಥವಾಗಬೇಕಾದರೆ ಅವರು ಹೇಳುವ ವಿಷಯದಲ್ಲಿ ಕನಿಷ್ಠ ಅರಿವಾದರೂ ಬೇಕಾಗುತ್ತದೆ. ನಮ್ಮ ಓದನ್ನು ಮತ್ತು ಕಿವಿಯನ್ನು ಮುಕ್ತವಾಗಿ ಇರಿಸಿಕೊಂಡರೆ ಇದು ಸಾಧ್ಯ.

ಆದರೆ ನಿರರ್ಗಳವಾಗಿ ಮಾತಾಡುವುದೇ ಒಂದು ದೊಡ್ಡ ಸಾಧನೆ ಎಂದು ತಿಳಿದುಕೊಳ್ಳಬಾರದು. ಬಡ ಬಡ ಎಂದು ಮಾತಾಡಬಹುದು, ಆದರೆ ಅದರಲ್ಲಿ ಹುರಳಿಲ್ಲದಿದ್ದರೆ ಏನು ಉಪಯೋಗ? ಹ್ಯಾಮ್ಲೆಟ್ ಹೇಳಿದಂತೆ ಮಾತು ಕೇವಲ ಮಾತು ಮಾತು ಮಾತು ಆದೀತು. ಮಾತು ಮನರಂಜನೆಯೂ ಅಲ್ಲ. ಅದು ಹಾಸ್ಯಭರಿತವಾಗಿರಬಹುದು, ಆದರೆ ಹಾಸ್ಯವೇ ಅಲ್ಲ. ಎಸ್. ದಿವಾಕರ್ ಅವರು ಈ ದಿನ ಕನ್ನಡದ ಸಣ್ಣ ಕತೆಗಳ ಹೊಸ ಒಲವುಗಳ ಬಗ್ಗೆ ಚೆನ್ನಾಗಿ ಮಾತಾಡಿದರು ಎಂದು ಯಾರಾದರೂ ಹೇಳಿದರೆ ಅದರ ಅರ್ಥ ಅವರು (ದಿವಾಕರ್) ಕೇಳುಗರನ್ನು ರಂಜಿಸಿದರು ಎಂದಲ್ಲ; ಕೇಳುಗರನ್ನು ತಮ್ಮ ಮಾತಿನ ವೈಖರಿಯಿಂದ ಯಕ್ಷಿಣಿಗೆ ಒಳಪಡಿಸಿದರು, ವಶೀಕರಣಗೊಳಿಸಿದರು, ಸಮ್ಮೋಹನಗೊಳಿಸಿದರು, ಮೋಡಿಮಾಡಿದರು ಎಂದಲ್ಲ, ಅಥವಾ ನಿರರ್ಗಳವಾಗಿ, ಅಸ್ಖಲಿತವಾಗಿ ವಾಗ್ಝರಿ ಸುರಿಸಿದರು, ಆವೇಶಭರಿತರಾಗಿ ಮಾತಾಡಿದರು, ಭಾವಪರವಶರಾದರು ಎಂದೂ ಅಲ್ಲ.

ವಾಸ್ತವದಲ್ಲಿ ಇಂಥ ವಿಧಾನಗಳೆಲ್ಲವೂ ಸರಿಯಾದ ಮಾತಿನ ವಿರೋಧಿಗಳೇ ಆಗುತ್ತವೆ. ಚೆನ್ನಾಗಿ ಮಾತಾಡಿದರು ಎಂದರೆ, ಕೇಳುಗರನ್ನು ಹೊಸ ಚಿಂತನೆಗೆ ಹಚ್ಚಿದರು ಎಂದೇ ಅರ್ಥ. ಹೀಗೆ ಮಾಡುವುದಕ್ಕೆ ಮಾತು ನಿರರ್ಗಳವಾಗಿರಬೇಕೆಂದೇನೂ ಇಲ್ಲ. ಹಾಗಿದ್ದರೆ ನನ್ನೀ ಕಥನದ ಉದ್ದೇಶವೇನು ಎಂದು ಕೇಳಬಹುದು. ವೈಚಾರಿಕತೆಯ ‘ಆನ್ ಲೈನ್’ ಕ್ರಿಯೆಯಲ್ಲಿ ಮಾತು ತಡೆಯುವುದು ಅಥವಾ ತಡವರಿಸುವುದು ಬೇರೆ, ಮಾತಾಡಲು ಗೊತ್ತಿಲ್ಲದೆ, ಆತ್ಮ ವಿಶ್ವಾಸದ ಕೊರತೆಯಿಂದ ತಡವರಿಸುವುದು ಬೇರೆ. ವೈಚಾರಿಕವಾಗಿ ಸರಿಯಾದ ಪದಕ್ಕಾಗಿ ದಿವಾಕರ್ ತಡವರಿಸಿರಬಹುದು, ತಮ್ಮ ಮಾತನ್ನು ತಾವೇ ತಿದ್ದಿಕೊಂಡಿರಬಹುದು. ಆದರೆ ಮಾತು ಬರದೆ ಅಲ್ಲ, ಯೋಚನೆಗಳು ಇರದೆಯೂ ಅಲ್ಲ. ಸಾರ್ವಜನಿಕ ಮಾತಿನ ಪ್ರಾಥಮಿಕ ಎಡೆತಡೆಗಳನ್ನು ಹೇಗೆ ನಿವಾರಿಸಿಕೊಳ್ಳಬಹುದು ಎಂದು ಸೂಚಿಸುವುದೇ ನನ್ನೀ ಲೇಖನದ ಉದ್ದೇಶ.

ಇಲ್ಲೊಂದು ವಿರೋಧಾಭಾಸವಿರುವುದನ್ನೂ ಉಲ್ಲೇಖಿಸಬೇಕಾಗುತ್ತದೆ. ಹೆಚ್ಚೆಚ್ಚು ಓದಿದಂತೆ, ಹೆಚ್ಚೆಚ್ಚು ತಿಳಿದಂತೆ ಮಾತು ಕಡಿಮೆಯಾಗುವುದು. ಈ ಮೌನವನ್ನು ಕೆಲವರು ಜಾಣ ಮೌನ, ಗೋಡೆ ಮೇಲಿಟ್ಟ ದೀಪ ಎಂದುಮುಂತಾಗಿ ತಪ್ಪಾಗಿ ಆರೋಪಿಸುವುದಿದೆ. ಅದು ಆರೋಪಿಸುವವರ ಸಮಸ್ಯೆ. ‘ನುಡಿಯೊಳಗಾಗಿ ನಡೆ’ಯುವ ಮಂದಿ ನುಡಿಯ ಮೂಲಕ ಹೇಳುವುದಕ್ಕಿಂತ ತಮ್ಮ ನಡೆಯ ಮೂಲಕ ಹೇಳುವುದೇ ಹೆಚ್ಚು.

1 Response

  1. Deepak says:

    Very nice writing. Indeed you have shown the way how to read.

Leave a Reply

%d bloggers like this: