ಹನ್ನೆರಡು ವರ್ಷಗಳ ಬಳಿಕ ಬೆಟ್ಟ ಹತ್ತಿದ್ದೆ…

 

 

 

 

ಶಿವಾನಂದ ತಗಡೂರು

 

 

 

ನಮ್ಮೂರಿನ ಗೊಮ್ಮಟನ ಮಹಾಮಜ್ಜನಕ್ಕೆ ದಿನಗಣನೆ ಶುರುವಾಗಿದೆ.

ಅಹಿಂಸೆ, ತ್ಯಾಗದ ನೆಲೆವೀಡು ಶ್ರವಣಬೆಳಗೊಳಕ್ಕೆ ವರ್ಷದಲ್ಲಿ ಹತ್ತಾರು ಬಾರಿ ಹೋಗುತ್ತಿದ್ದರೂ ಅದು ಸ್ವಾಮೀಜಿ ಭೇಟಿ ಅಥವಾ ಕಾರ್ಯಕ್ರಮಕ್ಕೆ ಮಾತ್ರ ಸೀಮಿತ ಆಗುತ್ತಿತ್ತು. ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ನಡೆದಾಗ ನಾಲ್ಕೈದು ದಿನ ಬೆಳಗೊಳದಲ್ಲಿದ್ದರೂ, ಆಗಸದೆತ್ತರಕ್ಕೆ ಮೈದಳೆದು ನಿಂತ ಆ ಗೊಮ್ಮಟನ ಬೆಟ್ಟಕ್ಕೆ ಹೋಗಲು ಆಗಿರಲಿಲ್ಲ. ಐವತ್ತೆಂಟು ಅಡಿ ಎತ್ತರದ ಮಂದಸ್ಮಿತ ಬಾಹುಬಲಿ ನೋಡುವುದೆಂದರೆ ಅದೇನೋ ಪುನೀತ ಭಾವ ಮನ ತುಂಬಿಕೊಳ್ಳುತ್ತದೆ.

ಇಂದ್ರಗಿರಿಯಲ್ಲಿ ನೆಲೆ ನಿಂತ ಏಕಶಿಲೆಯಲ್ಲಿ ಈ ಮೂರ್ತಿ ಕೆತ್ತಿದ ಶಿಲ್ಪಿ, ಕೆತ್ತಿಸಿದ ಚಾವುಂಡರಾಯನನ್ನು ಇತಿಹಾಸ ಎಂದೂ ಮರೆಯದು. ಅದೆಷ್ಟು ದಿನ ತಪಸ್ಸು ಮಾಡಿ ಆ ಶಿಲ್ಪಿ ಗೊಮ್ಮಟನ ಕಡೆದನೋ? ಸ್ವಲ್ಪವೂ ಭಗ್ನವಾಗದಂತೆ ಈ ಶಿಲೆ ಕಡೆದ ಶಿಲ್ಪಿಗೆ ಕೋಟಿ ನಮನ ಸಲ್ಲಿಸಿದರೂ ಸಾಲದು.

ನಮ್ಮೂರಿಗೆ ಹತ್ತಿರದಲ್ಲಿರುವ ಬೆಳಗೊಳಕ್ಕೆ ಚಿಕ್ಕಂದಿನಿಂದ ಅದೆಷ್ಟು ಬಾರಿ ಪಾದ ಸವೆಸಿದೆವೋ ಲೆಕ್ಕವಿಲ್ಲ. ಇದು ನಾಲ್ಕು ದಶಕಗಳ ಹಿಂದಿನ ಮಾತು.

ಶ್ರವಣಪ್ಪನಿಗೆ ಮಸ್ತಕಾಭಿಷೇಕವಂತೆ ಅಂತ ಮನೆಯಲ್ಲಿ, ಊರಿನಲ್ಲಿ ಬರೋಬ್ಬರಿ ಮಾತು. ಬಾಹುಬಲಿ ಅನ್ನೋದಿಕಿಂತ ನಮ್ಮ ಕಡೆಯಲ್ಲಿ ಶ್ರವಣಪ್ಪ, ಗೊಮ್ಮಟ ಅನ್ನೋದೆ ಹೆಚ್ಚು ಪ್ರಚಲಿತ.

ಬೆಟ್ಟದಲ್ಲಿರುವ ಗೊಮ್ಮಟನನ್ನು ನೊಡಲೇಬೇಕೆಂಬ ಕುತೂಹಲ ಹೆಚ್ಚಿತು. ಮಿಡ್ಲಿಸ್ಕೂಲ್ ನಲ್ಲಿ ಕಲಿಯುತ್ತಿದ್ದ ನಮಗೆ ಸ್ಕೂಲ್ ನಿಂದ ಬೆಳಗೊಳಕ್ಕೆ ಪ್ರವಾಸ ಏರ್ಪಟ್ಟಾಗ ಆದ ಸಂತಸ ಅಷ್ಟಿಷ್ಟಲ್ಲ. ಕೆಂಪು ಬಸ್ ನಲ್ಲಿ ಚನ್ನರಾಯಪಟ್ಟಣ ತಲುಪಿ ಬೆಳಗೊಳಕ್ಕೆ ಬಂದಾಗ ಅದ್ಯಾವುದೋ ಹೊಸ ಊರಿಗೆ ಬಂದ ಅನುಭವ.

ಮಸ್ತಕಾಭಿಷೇಕ ಸಮೀಪಿಸುತ್ತಿದ್ದ ಸಮಯ. ಅಲ್ಲಿ ಶ್ರವಣಪ್ಪ (ನಿರ್ವಾಣ ಸ್ಥಿತಿ) ಅಂದರೆ ಜೈನ ಮುನಿಗಳ ದಂಡೇ ಇತ್ತು. ಮುನಿಗಳನ್ನ ನೋಡಿ ನಗುವಂತಿಲ್ಲ, ನಮಸ್ಕರಿಸಬೇಕು. ಅವರು ದೇವರ ಸಮಾನ ಎಂದು ಮೇಷ್ಟ್ರು ಹೇಳಿದ್ದಕ್ಕೆ ನಾವೆಲ್ಲ ಗಪ್ ಚಿಪ್ ಆಗಿಬಿಟ್ಟಿದ್ದೆವು. ಮುನಿಗಳ ಪಾದಕ್ಕೆ ನಮಸ್ಕರಿಸಿದಾಗ ನವಿಲು ಗರಿ ಕುಂಚದಲ್ಲಿ ಆರ್ಶೀವಾದ ಸಿಕ್ಕಿತು. ಬೆಟ್ಟವನ್ನು ಒಂದೇ ಉಸಿರಿಗೆ ನಾ ಮುಂದು, ತಾ ಮುಂದೆ ಎಂದು ನಾವೆಲ್ಲ ಹತ್ತಿಬಿಟ್ಟಿದ್ದೆವು. ಅಲ್ಲಿ ಕತ್ತೆತ್ತಿ ನೋಡಿದರೆ ಬೃಹತ್ ಮೂರ್ತಿ. ಕತ್ತು ನೋವಾಗುವ ತನಕ ನೋಡಿ, ಭಕ್ತಿ ನಮನ ಸಲ್ಲಿಸಿ ಕೆಳಗಿಳಿದು ಬಂದಿದ್ದೆವು.

ಬಾಹುಬಲಿ ಮೂರ್ತಿ ಕೆತ್ತನೆಯಾಗಿ ಸಾವಿರ ವರ್ಷ ತುಂಬಿದ ಮಹಾಮಸ್ತಕಾಭಿಷೇಕಕ್ಕೆ ಆಗಿನ ಪ್ರಧಾನಿ ಇಂದಿರಾ ಗಾಂಧಿ ಬರುವುದಿತ್ತು. ಆಗ ಗುಂಡೂರಾವ್ ಸಿ ಎಂ. ಚನ್ನರಾಯಪಟ್ಟಣದಲ್ಲಿ ಎಚ್.ಸಿ.ಶ್ರೀಕಂಠಯ್ಯ (ಅಣ್ಣಯ್ಯ) ಅವರದ್ದೇ ದರ್ಬಾರು. ನಮಗೆ ಇಂದಿರಾಗಾಂಧಿ ನೋಡುವ ತವಕ. ಮನೆಯಲ್ಲಿ ಯಾರಿಗೂ ಹೇಳದೆ, ಊರಿಗೆ ಬಂದ ಲಾರಿ ಹತ್ತಿ ಬೆಳಗೊಳಕ್ಕೆ ಹೋಗಿದ್ದೆ.

ಲಕ್ಷ ಜನರ ನಡುವೆ ನಾನೊಬ್ಬ ಬಾಲಕನಾಗಿ ಭಕ್ತಿವಿನೀತ ಭಾವದಿಂದ ಬೆಟ್ಟದ ಹಿಂಭಾಗ ಸಮಾರಂಭದ ಜಾಗದಲ್ಲಿ ನಿಂತು ಗೊಮ್ಮಟನ ದೃಷ್ಟಿಸಿದ್ದೆ. ನೋಡ ನೋಡುತ್ತಿದ್ದಂತೆ ಆಗಸದಲ್ಲಿ ಮಿಲಿಟರಿ ಹೆಲಿಕಾಪ್ಟರ್ ಬಂತು. ಅಲ್ಲಿದ್ದ ಜನರ ಮನದಲ್ಲಿ ಏನೋ ಒಂಥರ ಮಿಂಚಿನ ಸಂಚಾರ. ಹೋ… ಅಂತ ಶಿಳ್ಳೆ ಹಾಕಿದರು. ಗೊಮ್ಮಟನ ಸುತ್ತ ಪ್ರದಕ್ಷಿಣೆ ಹಾಕಿದ ಹೆಲಿಕಾಪ್ಟರ್ ಕನಕವೃಷ್ಟಿ ಮಾಡಿ ಬಳಿಕ ಲ್ಯಾಂಡ್ ಆಯಿತು. ಮೊದಲ ಬಾರಿಗೆ ಇಂದಿರಾ ಅವರ ಭಾಷಣ ಕೇಳುವ ಸೌಭಾಗ್ಯ. ಇಂದಿರಾಗಾಂಧಿ ನೋಡಿದ ಜನ ನಮ್ಮಮ್ಮ, ನಮ್ಮವ್ವ ಅನ್ನೋ ಭಾವದಲ್ಲಿ ಮಿಂದೆದ್ದರು. ಜಯಘೋಷ ಮುಗಿಲು ಮುಟ್ಟಿತ್ತು.
ನಿಜ ಹೇಳಬೇಕೆಂದರೆ, ಇದೆಲ್ಲ ನನಗೆ ಹೊಸ ಅನುಭವ.

1993-94 ರಲ್ಲಿ ವೀರಪ್ಪ ಮೊಯಿಲಿ ಸಿ ಎಂ ಆಗಿದ್ದಾಗ ನಡೆದ ಮಹಾಮಸ್ತಕಾಭಿಷೇಕಕ್ಕೆ ಹಾಸನದ ‘ಜನಮಿತ್ರ’ ಪತ್ರಿಕೆ ವರದಿಗಾರನಾಗಿ ಹೋಗಿದ್ದೆ. ಎಚ್.ಡಿ.ಕುಮಾರ ಸ್ವಾಮಿ ಸಿಎಂ ಆಗಿದ್ದಾಗ ‘ವಿಜಯ ಕರ್ನಾಟಕ’ ವರದಿಗಾರನಾಗಿ ವರದಿ ಮಾಡಿದ್ದೆ. ಈಗ ‘ವಿಜಯವಾಣಿ’ ಪತ್ರಿಕೆ ಪ್ರತಿನಿಧಿಸುವ ಸಂದರ್ಭದಲ್ಲಿ ನಾಲ್ಕನೇ ಮಹಾಮಸ್ತಕಾಭಿಷೇಕ ಸಮೀಪಿಸುತ್ತಿದೆ.

ಆಗಿನ ಮಹಾಮಸ್ತಕಾಭಿಷೇಕಕ್ಕೆ ಎತ್ತಿನ ಬಂಡಿಯಲ್ಲಿ ಜನ ದಂಡು ದಂಡಾಗಿ ಬಂದು ನಮ್ಮೂರಿನ ಜಾತ್ರೆ ಎಂದು ಸಂಭ್ರಮಿಸಿ ಹೋಗುತ್ತಿದ್ದರು. ಸಾರ್ವೆ ಹಾಕಿದ ಅಟ್ಟಣಿಗೆ ಏರಿ ಮಸ್ತಕಾಭಿಷೇಕ ಮಾಡಲಾಗುತ್ತಿತ್ತು. ಎತ್ತಿನ ಗಾಡಿ ಬದಲಿಗೆ ಈಗ ಕಾರುಗಳದ್ದೆ ಕಾರುಬಾರು. ಸಾರ್ವೆ ಜಾಗದಲ್ಲಿ ಕಬ್ಬಿಣದ ಅಟ್ಟಣಿಗೆ ಬಂದಿದೆ. ಮೆಟ್ಟಿಲುಗಳು ವಿಸ್ತಾರಗೊಂಡಿವೆ. ಆಗ ಲಕ್ಷ ರೂ ವೆಚ್ಚದಲ್ಲಿ ಮುಗಿಯುತ್ತಿದ್ದ ಮಹಾಮಸ್ತಕಾಭಿಷೇಕ ಈಗ ಕೋಟಿ ಕೋಟಿ ದಾಟಿದೆ. ಸರ್ಕಾರಿ ವ್ಯವಸ್ಥೆಗೂ ಇದೊಂದು ರೀತಿಯಲ್ಲಿ ‘ಮಹಾ’ ಜಾತ್ರೆಯಾಗಿ ಹೋಗಿದೆ.

ನಾಲ್ಕು ದಶಕದಲ್ಲಿ ನಡೆದ ಮಹಾಮಸ್ತಕಾಭಿಷೇಕದಲ್ಲಿ ನಾ ಗಮನಿಸಿದಂತೆ ಸ್ವಸ್ತಿಶ್ರೀ ಚಾರುಕೀರ್ತಿ ಭಟ್ಟಾರಕ ಸ್ವಾಮೀಜಿ ಅವರ ಭಾವದಲ್ಲಿ, ಭಕ್ತಿ ಬದ್ದತೆಯಲ್ಲಿ ಒಂದಿಷ್ಟು ವ್ಯತ್ಯಾಸಗಳಾಗಿಲ್ಲ. ಅದೆಷ್ಟು ತನ್ಮಯತೆಯಿಂದ ಸ್ವಾಮೀಜಿ ಕಟ್ಟುನಿಟ್ಟಾಗಿ ಈ ಮಸ್ತಕಾಭಿಷೇಕದಲ್ಲಿ ತೊಡಗಿಸಿಕೊಳ್ತಾರೆ ಅಂದರೆ ಅದನ್ನು ಶಬ್ದದಲ್ಲಿ ಕಟ್ಟಿಕೊಡಲಾಗದು.

ಆರೇಳು ದಶಕಗಳ ಕಾಲಘಟ್ಟದಲ್ಲಿ ಶ್ರೀ ಚಾರುಕೀರ್ತಿ ಸ್ವಾಮೀಜಿ ಅವರೊಬ್ಬರು ಸಂತನಾಗಿ ನಿತ್ಯ ಗೊಮ್ಮಟನನ್ನೆ ಧ್ಯಾನಿಸಿ, ಮೈಮನ ತುಂಬ ಜೀರ್ಣಿಸಿಕೊಂಡಿರುವಷ್ಟು ಬಹುಶಃ ಬೇರೊಬ್ಬರನ್ನ ಕಾಣಲಾಗದು. ಗೊಮ್ಮಟನಗರಿ ಅಭಿವೃದ್ಧಿಯತ್ತ ದಾಪುಗಾಲು ಹಾಕಿ, ಜಗತ್ತಿನ ಗಮನ ಸೆಳೆಯುವಂತೆ ಮಾಡಿದ ಕೀರ್ತಿ, ಶ್ರೇಯಸ್ಸು ನಿಜಕ್ಕೂ ಶ್ರೀ ಚಾರುಕೀರ್ತಿ ಸ್ವಾಮೀಜಿಗೆ ಸಲ್ಲಬೇಕು.

ಹನ್ನೆರಡು ವರ್ಷಗಳ ಬಳಿಕ ವರದಿಗಾಗಿ ಹೋಗಿದ್ದ ಬೆಂಗಳೂರು ಪತ್ರಕರ್ತ ಸ್ನೇಹಿತರ ಜೊತೆಗೆ ಬೆಟ್ಟವನ್ನು ಹತ್ತುವಾಗ ಎಲ್ಲವೂ ನೆನಪಾದವು.

ಸಿದ್ದತೆ ಬಗ್ಗೆ ಸ್ವಾಮೀಜಿ ಪ್ರೆಸ್ ಮೀಟ್ ಮುಗಿಸಿದ ಬಳಿಕ ಆರ್ಶೀವದಿಸಿದರು. ಅಲ್ಲಿಗೆ ಬಂದಿದ್ದ ಎಲ್ಲಾ ಸ್ನೇಹಿತರನ್ನು ಸ್ವಾಮೀಜಿಗೆ ಪರಿಚಯಿಸಿದೆ. ನೋಡಿ, ಈ ಶಿವಾನಂದ ತಗಡೂರು ಅವರು ನಮ್ಮೂರಿನವರು. ಇಲ್ಲೇ ಇದ್ರು. ಈಗ ಬೆಂಗಳೂರು ಸೇರ್ಕೊಂಡಿದ್ದಾರೆ. ಬಾಹುಬಲಿ ಸ್ವಾಮಿ ಬಗ್ಗೆ ಇವರಿಗೆ ವಿಶೇಷ ಪ್ರೀತಿ ಎಂದು ಅಭಿಮಾನದಿಂದ ಪಕ್ಕದಲ್ಲಿ ಕುಳಿತಿದ್ದ ಮಾಜಿ ಸಿ ಎಂ ವೀರಪ್ಪ ಮೊಯಿಲಿ ಅವರಿಗೆ ಪರಿಚಯಿಸಿದರು. ನನ್ನಲ್ಲೂ ಆಗ ಅಭಿಮಾನ ಎದೆತುಂಬಿ ಬಂತು. ಸ್ವಾಮೀಜಿ ಆರ್ಶೀವಾದ ಮಾಡುವಾಗ ಭಾವ ತುಂಬಿದ ಅಭಿಮಾನ ಮಾತು ದಾರಿಯಲ್ಲಿ ಮತ್ತೆ ಮತ್ತೆ ನೆನಪಾಗುತ್ತಿತ್ತು.

Leave a Reply