ರಾಜಕೀಯದ ಕೆಂಡ ಬ್ರಾಂಡ್ ಮತ್ತು ಥಂಡಾ ಬ್ರಾಂಡ್!

 

ಇದೊಂಥರಾ ‘ರಿಟರ್ನ್ ಆಫ್ ದ ಡ್ರಾಗನ್’ ಇದ್ದಂತೆ. ಭಾರತದಲ್ಲಿ ಅಯೋಧ್ಯೆಯ ವಿವಾದ ಭುಗಿಲೆದ್ದ ಕಾಲದಲ್ಲಿ ಮೊದಲ ಭಾರಿಗೆ ರಾಜಕೀಯದಲ್ಲಿ ಫೈರ್ ಬ್ರಾಂಡ್ ಎಂಬ, ಆ ತನಕ ಇರದಿದ್ದ ಪ್ರಿಮಿಯಂ ಬ್ರಾಂಡೊಂದು ಮಾರುಕಟ್ಟೆಗೆ ಲಾಂಚ್ ಆಯಿತು. ಭಾರತೀಯ ಜನತಾ ಪಕ್ಷಕ್ಕೆ ಅಧಿಕಾರದ ಮೆಟ್ಟಿಲೇರಿಸಿದ ಈ “ಫೈರ್ ಬ್ರಾಂಡ್” ಈಗ ಮೂರು ವರ್ಷಗಳಿಂದೀಚೆಗೆ ಅಲ್ಲಲ್ಲಿ ಚದುರಿದಂತೆ ಮತ್ತೆ ಕೇಳಲಾರಂಭಿಸಿದೆ; ಚುನಾವಣೆಗೆ ಮುಖಾಮುಖಿ ಆಗುತ್ತಿರುವ ಕರ್ನಾಟಕದೊಳಗೂ ಈ ಪದ ಕಳೆದ ತಿಂಗಳೊಪ್ಪತ್ತಿನಿಂದೀಚೆಗೆ ಕೇಳಲಾರಂಭಿಸಿದೆ.

ಹೌದು – ಕಳೆದ ಕೇಂದ್ರ ಸಂಪುಟ ವಿಸ್ತರಣೆಯ ವೇಳೆಗೆ ಕರ್ನಾಟಕದಿಂದ ಔಟ್ ಆಫ್ ಬ್ಲೂ ಎಂಬಂತೆ ಕೆನರಾ ಸಂಸದ ಅನಂತ ಕುಮಾರ ಹೆಗಡೆ ಅವರು ಕೇಂದ್ರ ಸಂಪುಟ ಸೇರಿಕೊಂಡಿದ್ದಾರೆ. ಅದರೊಂದಿಗೆ ಕರ್ನಾಟಕದಲ್ಲಿ ಕೂಡ “ರಿಟರ್ನ್ ಆಫ್ ದಿ ಫೈರ್ ಬ್ರಾಂಡ್” ಸಂಭವಿಸಿದೆ. ಮೇಲುನೋಟಕ್ಕೆ ಆಕಸ್ಮಿಕ ಅನ್ನಿಸುವ ಈ ಬೆಳವಣಿಗೆಯನ್ನು ಕೇವಲ ಆಕಸ್ಮಿಕ ಎಂದು ನಿರ್ಲಕ್ಷಿಸಿದರೆ, ಅಲ್ಲಿಗೆ ಅಮಿತ್ ಷಾ ಅವರ ‘ಚಾಣಕ್ಯ ಬ್ರಾಂಡಿನ’ ತಂತ್ರಗಾರಿಕೆ ಇನ್ನೂ ಅರ್ಥ ಆಗಿಲ್ಲ ಎಂದೇ ಅರ್ಥ!

ಅಟಲ್ ಬಿಹಾರಿ ವಾಜಪೇಯಿ ಅವರು ಪ್ರಧಾನಿ ಆಗಿದ್ದಾಗ ಅಂದಿನ ಫೈರ್ ಬ್ರಾಂಡ್ ಬ್ರಿಗೇಡಿನ ನಿಗಿನಿಗಿಸುವ ಮುಖ್ಯಸ್ಥರಾಗಿದ್ದ ಲಾಲ್ ಕ್ರಷ್ಣ ಆಡ್ವಾಣಿ ಇವತ್ತು ಕೆಂಡ ತಣಿದು ಥಂಡಾ ಹೊಡೆದು ಕುಳಿತಿದ್ದಾರೆ. ಆಗ ವಾಜಪೇಯಿ ಅವರನ್ನು ಸಂಘಪರಿವಾರದ ರಾಜಕೀಯ ‘ಮುಖೋಟಾ’ ಎಂದೂ, ಆಡ್ವಾಣಿ ಅವರನ್ನು  ‘ನಿಜಮುಖ’ ಎಂದೂ ಪರಿಗಣಿಸಲಾಗುತ್ತಿತ್ತು. ಆದರೆ, ನಾಗಪುರದ ತಂತ್ರರಾಜಕೀಯ ಈಗ ಆ ಪರೆಗಳನ್ನೆಲ್ಲ ಹರಿದುಕೊಂಡು ತನ್ನ ನಿಜರೂಪದಲ್ಲೇ ದರ್ಶನ ನೀಡುತ್ತಿದೆ.

90ರ ದಶಕದ ಶುರುವಿನಲ್ಲಿ  ಬಿಜೆಪಿಯ ರಾಜಕೀಯ ವೇಗೋತ್ಕರ್ಷ ಶುರುವಾದದ್ದು ಬೇರು ಗಟ್ಟಿ ಇರುವ “ಆಕ್ಸೆಪ್ಟಬಲ್” ಮುಖಗಳ ನಾಯಕರೊಂದಿಗೆ. ಶಾಂತಾ ಕುಮಾರ್ (ಹಿಮಾಚಲ), ಮದನ್ ಲಾಲ್ ಖುರಾನಾ (ದಿಲ್ಲಿ), ಸುಂದರ್ ಲಾಲ್ ಪಟ್ವಾ (ಮಧ್ಯಪ್ರದೇಶ), ಭೈರವ್ ಸಿಂಗ್ ಶೇಖಾವತ್ (ರಾಜಸ್ಥಾನ್) ಮತ್ತು ಕಲ್ಯಾಣ್ ಸಿಂಗ್ (ಉತ್ತರ ಪ್ರದೇಶ) – ಇವರೆಲ್ಲರೂ ತಳಮಟ್ಟದ ನಾಯಕರೇ ಆಗಿದ್ದರು. ಕರ್ನಾಟಕದಲ್ಲೂ ಬಿ ಎಸ್ ಯಡಿಯೂರಪ್ಪ, ಈಶ್ವರಪ್ಪ, ಬಿಬಿ ಶಿವಪ್ಪ ಮತ್ತು ಡಾ. ವಿ ಎಸ್ ಆಚಾರ್ಯ ಅವರ ಸುಸಂಘಟಿತ- ಒಗ್ಗಟ್ಟಿನ ದಂಡು ಚಾಲ್ತಿಯಲ್ಲಿತ್ತು. ಆಡ್ವಾಣಿಯವರ ರಥಯಾತ್ರೆಯ ‘ಕೆಂಡ ಬ್ರಾಂಡ್’ ರಾಜಕೀಯ90 ನೇ ಇಸವಿಯಲ್ಲಿ ಆರಂಭಗೊಂಡು, 92ರಲ್ಲಿ ತನ್ನ ಗುರಿ ಸಾಧಿಸಿತಲ್ಲದೇ 96ರ ವೇಳೆಗೆ ಕೇಂದ್ರದಲ್ಲಿ ಅಧಿಕಾರದ ರುಚಿಯನ್ನೂ ಕಂಡಿತು. ಇಲ್ಲಿ ಗಮನಿಸಬೇಕಾದ ಸಂಗತಿ ಎಂದರೆ ಪ್ರಧಾನಿ ಪಟ್ಟಕ್ಕೇರಿದ್ದು ‘ಮುಖೋಟಾ’ವೇ ಹೊರತು ನಿಜಮುಖ ಅಲ್ಲ. ಮುಂದೆ 98-2004 ಬಿಜೆಪಿಯ ಆಡಳಿತ ಪರ್ವದ ಮೊದಲ ಅವಧಿ ಅನ್ನಿಸಿಕೊಂಡಿತು.

ನಾಗಪುರ ತನ್ನ ಮೊದಲ ಪರೆ ಕಳಚಿದ್ದು, 2001ರಲ್ಲಿ. ಗುಜರಾತಿಗೆ ನರೇಂದ್ರ ದಾಮೋದರದಾಸ್ ಮೋದಿ ಎಂಬ ಸಂಘಪರಿವಾರದ ‘ಫೈರ್ ಬ್ರಾಂಡ್’ ಪ್ರಚಾರಕರು ಮುಖ್ಯಮಂತ್ರಿಯಾಗಿ ಬಂದರು. ಅಲ್ಲಿಂದೀಚೆಗೆ ಹಂತಹಂತವಾಗಿ ಬಿಜೆಪಿ ಆಡಳಿತದ ರಾಜ್ಯಗಳಲ್ಲಿ ಇಂತಹದೊಂದು ಪರೆ ಕಳಚಿಕೊಳ್ಳುವ ವಿಫಲ-ಸಫಲ ಪ್ರಯತ್ನಗಳು ಸತತವಾಗಿ ನಡೆಯುತ್ತಾ ಬಂದವು. (ಉದಾ:2003ರಲ್ಲಿ ಮಧ್ಯಪ್ರದೇಶಕ್ಕೆ ಉಮಾಭಾರತಿ ಮುಖ್ಯಮಂತ್ರಿಯಾದದ್ದು). 2002 ರಲ್ಲಿ ಗೋಧ್ರಾ ಹಿಂಸೆಯ ಬಳಿಕ ಯಾವತ್ತಿಗೆ ನರೇಂದ್ರ ಮೊದಿಯವರು ಬಿಜೆಪಿ ಮಹತ್ವಾಕಾಂಕ್ಷೆಗಳಿಗೆ ನೀರೆರೆಯಬಲ್ಲ ರಾಷ್ಟ್ರೀಯ ನಾಯಕರೆನ್ನಿಸಿಕೊಂಡರೋ, ಅಲ್ಲಿಂದೀಚೆಗೆ ನಾಗಪುರದ ಪರೆಕಳಚಿಕೊಳ್ಳುವ ಕ್ರಿಯೆಯೂ ವೇಗ ಪಡೆದುಕೊಂಡಿತು.

ಅರಮನೆ ಕ್ರಾಂತಿಯೊಂದರಲ್ಲಿ ಲಾಲ್ ಕ್ರಷ್ಣ ಆಡ್ವಾಣಿಯವರಂತಹ ಫೈರ್ ಬ್ರಾಂಡ್ ಒಂದು ಥಂಡಾ ಬ್ರಾಂಡ್ ಆಗಿ ಕುಳಿತು, ಹೊಸ ಫೈರ್ ಬ್ರಾಂಡ್ ನರೇಂದ್ರ ಮೋದಿ2014 ರಲ್ಲಿ ಪ್ರಧಾನಿ ಆದದ್ದು ಮತ್ತು ಅವರ ಬಲಗೈ ಬಂಟ ಅಮಿತ್ ಷಾ ಬಿಜೆಪಿಯ ರಾಷ್ಟ್ರಾಧ್ಯಕ್ಷರಾದದ್ದು, ಆಡ್ವಾಣಿ ಸಮಕಾಲೀನರಾದ ಹಲವು ನಾಯಕರು ಹಿನ್ನೆಲೆಗೆ ಸರಿಯತೊಡಗಿದ್ದು ಆಕಸ್ಮಿಕಗಳೇನಲ್ಲ.

ರಾಜ್ಯಗಳಲ್ಲೂ ಈ ಪ್ರಕ್ರಿಯೆ ನಡೆಯತೊಡಗಿದ್ದು ಗುಜರಾತ್ ಮಾದರಿಯ ಯಶಸ್ಸು ಕಣ್ತುಂಬಿಕೊಂಡ ಬಳಿಕವೇ. ಚತ್ತೀಸ್ಗಢದ ರಮಣ್ ಸಿಂಗ್ (2003), ಮಧ್ಯಪ್ರದೇಶದ ಶಿವರಾಜ್ ಸಿಂಗ್ (2005) ಮತ್ತು ಉತ್ತರಾಖಂಡ್ ನ ತ್ರಿವೇಂದ್ರ ಸಿಂಗ್ ರಾವತ್ (2009) ಹೀಗೆ ಹಠಾತ್ತಾಗಿ, ಪಕ್ಷದ ಬೇರುಗಳನ್ನು ದಾಟಿ ರಂಗ ಪ್ರವೇಶ ಮಾಡಿದ ಮುಖ್ಯಮಂತ್ರಿಗಳು; ಎಲ್ಲರೂ ಸಂಘಪರಿವಾರದ ಖಚಿತ ಹಿನ್ನೆಲೆ ಇರುವವರು.

2014ರಿಂದೀಚೆಗೆಗಂತೂ, ರಾಜ್ಯಗಳ ಮಟ್ಟದಲ್ಲಿ ಸಂಘಪರಿವಾರವು ಮುಖ್ಯಮಂತ್ರಿಗಳನ್ನು ಯಾವ ರೀತಿ ಬದಲಿಸತೊಡಗಿದೆ ಎಂದರೆ, ತಳಮಟ್ಟದಲ್ಲಿ ಪಕ್ಷ ಸಂಘಟಿಸಿಕೊಂಡು ಬಂದಿದ್ದ ನಾಯಕರೆಲ್ಲ ಥಂಡಾ ಬ್ರಾಂಡ್ ಅನ್ನಿಸಿಕೊಂಡಿದ್ದಾರೆ. ಅಸ್ಸಾಂ ನ ಸರ್ವಾನಂದ ಸೋನೊವಾಲ್(2016), ಗುಜರಾತಿನ ವಿಜಯ್ ರೂಪಾನಿ(2016), ಜಾರ್ಖಂಡ್ ನ ರಘುವರದಾಸ್ (2014), ಮಹಾರಾಷ್ಟ್ರದ ದೇವೇಂದ್ರ ಫಡ್ನವೀಸ್ (2014) ಮತ್ತು ಮೊನ್ನೆಮೊನ್ನೆ ಉತ್ತರ ಪ್ರದೇಶದ ಯೋಗಿ ಆದಿತ್ಯನಾಥ್ (2017) – ಹೀಗೆ ಸಂಘಪರಿವಾರದ ಸ್ಪಷ್ಟ ಹಿನ್ನೆಲೆಯುಳ್ಳ ಫಯರ್ ಬ್ರಾಂಡ್ ನಾಯಕತ್ವ ಕಮಲರಾಜ್ಯಗಳಲ್ಲೆಲ್ಲ ನಳನಳಿಸತೊಡಗಿದೆ.

ಕರ್ನಾಟಕದ್ದೇನು ಕಥೆ?

ಈಗ ಪ್ಯಾಟರ್ನ್ ನಿಮ್ಮ ಮನಸ್ಸಿನೊಳಗೆ ಸುಳಿಯತೊಡಗಿದ್ದರೆ, ಕರ್ನಾಟಕದಲ್ಲೂ ಇಂತಹದೇ ಒಂದು ಮಗ್ಗುಲು ಬದಲಿಸುವ ಪ್ರಕ್ರಿಯೆ ಆರಂಭಗೊಂಡಿದೆ ಎಂಬುದನ್ನು ಸುಲಭವಾಗಿ ಅರ್ಥ ಮಾಡಿಕೊಳ್ಳಬಹುದು.  ಕರ್ನಾಟಕದ ಬಿಜೆಪಿಯೊಳಗಿನ ಒಳಸುಳಿಗಳು ಮತ್ತು ಬೇರುಮಟ್ಟದ ಆಕಾಂಕ್ಷೆಗಳನ್ನು ಸ್ಪಷ್ಟವಾಗಿ ಅರ್ಥ ಮಾಡಿಕೊಂಡಿರುವಂತೆ ಕಾಣಿಸುತ್ತಿರುವ ನಾಗಪುರ ಮತ್ತು ಬಿಜೆಪಿಯ ರಾಷ್ಟ್ರ ನಾಯಕತ್ವಗಳು, ಅವರು ಬಿಟ್ಟು ಅವರು ಬಿಟ್ಟು ಅವರ್ಯಾರು ಅನ್ನುವ ಬದಲು ತಣ್ನಗೆ ಪರ್ಯಾಯ ನಾಯಕತ್ವವೊಂದನ್ನು ಶೋಧಿಸಿ, ಅದನ್ನು ಪ್ರಯೋಗಕ್ಕೂ ಬಿಟ್ಟಾಗಿದೆ.

ಫಯರ್ ಬ್ರಾಂಡ್ ನಾಯಕರೆಂದೇ ಹೆಸರು ಮಾಡಿರುವ ಅನಂತಕುಮಾರ ಹೆಗಡೆ ಅವರು ಕೇಂದ್ರ ಸಚಿವರಾಗಿ, ಲೈಮ್ ಲೈಟಿಗೆ ಬರಲಾರಂಭಿಸಿದ್ದಾರೆ ಎಂಬುದಕ್ಕೆ ಟಿಪ್ಪೂ ಜಯಂತಿ  ವೇಳೆ ಅವರ ಹೇಳಿಕೆ ಈಗಾಗಲೇ ಸಾಕಷ್ಟು ಸಾಕ್ಶ್ಯ ಒದಗಿಸಿದೆ. ಆಡಳಿತದಿಂದ ಒಂದು ಅವಧಿಗೆ ಹೊರಗಿದ್ದರೂ, ತನ್ನ ಕಪಾಟಿನಲ್ಲಿರುವ ಹಳೆಯ ಅಸ್ಥಿಪಂಜರಗಳು ಮತ್ತು ಒಳಜಗಳ-ಗುಂಪುಗಾರಿಕೆಗಳ ಕಾರಣದಿಂದಾಗಿ  ಇನ್ನೂ ಯುದ್ಧದ ಮೂಡಿಗೆ ತಿರುಗಿರದ ಬಿಜೆಪಿಗೆ ನಿರ್ಣಾಯಕ ತಿರುವೊಂದನ್ನು ಕೇಂದ್ರ ನಾಯಕತ್ವ ನೀಡಿದರೆ ಅಚ್ಚರಿ ಇಲ್ಲ.

ಆದರೆ, ಇಲ್ಲಿ ಗಮನಿಸಬೇಕಾದ ಸಂಗತಿಯೊಂದಿದೆ. ಬಿಜೆಪಿಯ ತಳಮಟ್ಟದ ಅಳತೆಗೇಜು ಕರ್ನಾಟಕದ ಮಟ್ಟಿಗೆ ಎಷ್ಟು ಪರಿಣಾಮಕಾರಿ ಎಂಬುದು ಇನ್ನೂ ಸಾಬೀತಾಗಿಲ್ಲ.  ಸ್ವತಃ ಯಡಿಯೂರಪ್ಪ ಅವರಿಗೂ ತಮ್ಮ ಬೇರು ನಿಲುಕಿನ ಆಳ – ಅಗಲಗಳನ್ನು ಕೇಂದ್ರ ನಾಯಕತ್ವಕ್ಕೂ ನಾಗಪುರಕ್ಕೂ ತೋರಿಸುವುದಕ್ಕೆ ಮತ್ತು ತಾನಿನ್ನೂ ಥಂಡಾ ಬ್ರಾಂಡ್ ಆಗಲು ಸಿದ್ಧನಿಲ್ಲ ಎಂದು ಹೇಳುವುದಕ್ಕಿದು ಮಾಡು-ಮಡಿ ಅವಕಾಶ. ಒಟ್ಟಿನಲ್ಲಿ ಈ ಬಾರಿಯ ಚುನಾವಣೆ ಬಿಜೆಪಿಗೆ ಕರ್ನಾಟಕದಲ್ಲಿ ಮಗ್ಗುಲು ಬದಲಿಸುವ ಚುನಾವಣೆ ಆಗಲಿದೆಯೇ ಎಂಬುದು ಕೌತುಕದ ವಿಚಾರ.

Leave a Reply