ಸಿಂಪ್ಲಿ ಸೂಪರ್ಬ್..

 

 

 

 

 

 

ಮ ಶ್ರೀ ಮುರಳಿ ಕೃಷ್ಣ

 

 

 

‘ಲೈಫ್ ಈಸ್ ಸಿಂಪಲ್, ಸಿಂಪಲ್ ಈಸ್ ಕಾಂಪ್ಲಿಕೇಟೆಡ್’….

ಮೇಲಿನ ಟ್ಯಾಗ್‍ಲೈನ್ ಇರುವ ಒಂದು Anthology ಚಲನಚಿತ್ರ.  ‘ಆವೃತ್ತ’, ‘ಅಸ್ತಿತ್ವ’, ‘ಭ್ರಮೆ’ ಮತ್ತು ‘ನಿರ್ಣಯ’ ಎಂಬ ನಾಲ್ಕು ಭಿನ್ನ ಅಧ್ಯಾಯಗಳನ್ನು ಪೋಣಿಸಿ ಒಂದು ಮಾಲೆಯನ್ನು ಮಾಡಲಾಗಿದೆ. ಮಾನವನ ಸಹಜ ಗುಣಗಳಲ್ಲಿ ಒಂದಾಗಿರುವ ಹುಡುಕಾಟದ ಅರ್ಥ, ಚಲನೆಯ ವ್ಯಾಪ್ತಿ ವಿಶಾಲವಾದದ್ದು. ಈ ಚಲನಚಿತ್ರದಲ್ಲಿ ಇದೇ ಮೂಲ ದ್ರವ್ಯವೆನ್ನಬಹುದು.

ಚಲನಚಿತ್ರದ ಪ್ರಾರಂಭದಲ್ಲೇ ಒಂದು ಪಯಣದ ಅಂತ್ಯವನ್ನು ಒಂದು ಟ್ರೈನ್ ಪ್ಲಾಟ್‍ಫಾರಂಗೆ ಬರುವುದರ ಮೂಲಕ ಸೂಚಿಸಲಾಗಿದೆ. ಹಾಗೆಯೇ ಕೊನೆಯ ದೃಶ್ಯದಲ್ಲಿ ಒಂದು ಪಯಣ ಶುರುವಾಗುವುದನ್ನು ತೋರಿಸಲಾಗಿದೆ. ‘ಇದು ಜೀವನ, ಇದುವೇ ಜೀವನ’ ಎಂಬುದನ್ನು ‘ದಯವಿಟ್ಟು ಗಮನಿಸಿ’ ಎಂಬ ಶೀರ್ಷಿಕೆ ಅನಾವರಣಗೊಳಿಸುತ್ತದೆ.

‘ಆವೃತ್ತ’ ಎಂಬ ಮೊದಲನೆಯ ಅಧ್ಯಾಯದಲ್ಲಿ ನಡುವಯಸ್ಕನೊಬ್ಬ ಬೆಂಗಳೂರನ್ನೇ ಮದುವೆಯಾಗಿರುತ್ತಾನೆ. ಆ ಒಂದು ವಿವಾಹದ ಪ್ರೊಪೋಸಲ್ ಬಂದಾಗ, ಆತನಲ್ಲಿ ಉಂಟಾಗುವ ತೊಳಲಾಟಗಳ ಸುತ್ತ ಕಥೆಯನ್ನು ಕಟ್ಟಲಾಗಿದೆ. ಒಬ್ಬ ನಿವೃತ್ತ ತಂದೆ ತನ್ನ ಮಗಳ ಮೊದಲನೆಯ ವಿವಾಹದ ಬಗೆಗೆ ಪ್ರಾಮಾಣಿಕವಾಗಿ ತಿಳಿಸುತ್ತ “ ಬ್ಯಾಕ್ ಟು ಪೆವಿಲಿಯನ್” ಎಂಬ ಕ್ರಿಕೆಟ್ ಪರಿಭಾಷೆಯ ನುಡಿಗಟ್ಟನ್ನು ಬಳಸಿರುವುದು ವೀಕ್ಷಕರಿಗೆ ರಂಜನೆ ನೀಡಿದರೂ, ಸಂಜೆ ಕಾಲದಲ್ಲಿರುವ ಒಬ್ಬ ವ್ಯಕ್ತಿಯ ತಲ್ಲಣಗಳಿಗೆ ಕನ್ನಡಿಯಾಗುವುದಿಲ್ಲ.  ಹಾಗೆಯೇ ತನ್ನ ಮಗಳ ವರ್ಜಿನಿಟಿ ಸರ್ಟಿಫಿಕೇಟ್ ತೋರಿಸುವುದು ತೀರಾ ಕೃತಕವೆನಿಸುತ್ತದೆ; ಅಸೂಕ್ಷ್ಮ ಕೂಡ.

ಎರಡನೇ ಅಧ್ಯಾಯವಾದ ‘ಅಸ್ತಿತ್ವ’ದಲ್ಲಿ ‘ಪ್ರಾಕ್ಸಿ’ ಎಂಬ ಅಡ್ಡ ಹೆಸರಿರುವ ಯುವಕನ ಪ್ರೇಮದ ಹುಡುಕಾಟವಿದೆ. ಈತನ ಚಂದದ ಮನದನ್ನೆಗೆ ಅರೇಂಜ್ಡ್ ಮ್ಯಾರೇಜ್ ಬಗೆಗೆ ಅಂಜಿಕೆಯಿರುತ್ತದೆ. ಆಕೆ “ ಲವ್ ಮ್ಯಾರೇಜ್ ಎಂದರೆ ನಮ್ಮ ಗುಂಡಿಯನ್ನು ನಾವೇ ತೋಡಿಕೊಂಡಂತೆ…ಆದರೆ ಇದರ ಆಳವಾದರೂ ಗೊತ್ತಿರುತ್ತೆ…” ಎಂದು ಹೇಳುವ ಮಾತುಗಳು ‘ಮದುವೆ’ ಎಂಬ ವ್ಯವಸ್ಥೆಯ ಅಸ್ತತ್ವವಾದಿ ಆಯಾಮವನ್ನು ಎತ್ತಿ ತೋರಿಸುತ್ತದೆ.

‘ಭ್ರಮೆ’ ಎಂಬ ಮೂರನೆಯ ಅಧ್ಯಾಯದಲ್ಲಿ ಜಾತಿಯ ಕಾರಣದಿಂದ ವಿವಾಹ ಜರುಗದೆ, ಅದರಿಂದ ಬೇಸರಗೊಂಡ ಒಬ್ಬ ತರುಣ ಅಲೆಮಾರಿಯಾಗಿ, ಧರ್ಮಗಳಲ್ಲಿ ಅಸ್ತಿತ್ವವನ್ನು ಕಂಡುಕೊಳ್ಳುವ ಪ್ರಯತ್ನಗಳಲ್ಲಿ ಸೋಲುಂಡು, ಕೊನೆಗೆ ಸ್ವಾಮೀಜಿಯಾಗುತ್ತಾನೆ.  ತನ್ನ ಉದರ ಪೋಷಣೆ ಮತ್ತು ಉತ್ತಮ ಬದುಕಿಗಾಗಿ ಇಂತಹ ಸ್ವಾಮೀಜಿಯನ್ನು ಬೆಳೆಸಲು ಆತನ ಸಹಾಯಕನ ಪಾತ್ರ ಇಂದು ನಮ್ಮ ದೇಶದಲ್ಲಿ ಹೆಚ್ಚುತ್ತಿರುವ ದೇವಮಾನವರನ್ನು ಕುರಿತು ಟಾರ್ಚ್‍ಲೈಟ್ ಬೀರುತ್ತದೆ.  ಆದರೆ ತನ್ನ ಮನೆಯ ಬಳಿ ವಾಸಿಸುವ ವೇಶ್ಯೆಗೆ ಸಂಬಂಧಿಸಿದಂತೆ ಸ್ವಾಮೀಜಿಗೆ ಕಾಮನೆಗಳಿದ್ದರೂ ಆತನ ನಡವಳಿಕೆ ಸಂಕುಚಿತದ್ದಾಗಿರುತ್ತದೆ. ಇಲ್ಲಿ ವೇಶ್ಯೆಯನ್ನು ಸಮಾಜ ಸೃಷ್ಟಿಸುತ್ತದೆ ಎಂಬ ಅಂಶ ಮೂಡಿ ಬಂದಿಲ್ಲ.

ನಾಲ್ಕನೇ ಅಧ್ಯಾಯವಾದ ‘ನಿರ್ಣಯ’ದಲ್ಲಿ ಐಟಿ ಜಗತ್ತಿನಲ್ಲಿ ಮುಳುಗೇಳುವ ಒಬ್ಬ ಯುವಕನ ವೈವಾಹಿಕ ಜೀವನದ ಏರುಪೇರುಗಳನ್ನು, ಕೊನೆಗೆ ಅದು ಭಗ್ನವಾಗುವುದನ್ನು ಬಿಂಬಿಸಲಾಗಿದೆ. ಗಂಡು-ಹೆಣ್ಣೆನ ಆಕರ್ಷಣೆಯ ಸಂಕೀರ್ಣ ಎಳೆಯ ಝಲಕ್ ಕೂಡ ಇಲ್ಲಿದೆ.

ಹಸಿ ಹಸಿ ಡೈಲಾಗುಗಳು ಯುವ ವೀಕ್ಷಕರಿಗೆ ಹಿಡಿಸುವಂತಿವೆ.  ಅನೂಪ್ ಸೀಳಿನ್‍ರ ಸಂಗೀತ ಮತ್ತು ಅರವಿಂದ್ ಕಶ್ಯಪ್‍ರ ಛಾಯಾಗ್ರಹಣ ಈ ಚಲನಚಿತ್ರದ ಹೈಲೈಟುಗಳು. ವಿಜಯಪ್ರಕಾಶ್ ಕಂಠದಿಂದ ಮೂಡಿರುವ “ಸಂಚಾರಿ…” ಹಾಡಂತೂ ಆರ್ದ್ರ ಭಾವಗಳನ್ನು ಹುಟ್ಟಿಸುತ್ತದೆ. ಸಿಂಪ್ಲಿ ಸೂಪರ್ಬ್, ನಟನೆಯೂ ಚಲಚಿತ್ರದ ಓಘಕ್ಕೆ ಪೂರಕವಾಗಿದೆ.

ನಾಲ್ಕು ಬೇರೆ ಬೇರೆ ಕಥೆಗಳನ್ನು ಬೆಸೆದು, ವೀಕ್ಷಕರನ್ನು ಹಿಡಿದಿಟ್ಟುಕೊಳ್ಳುವುದು ಸುಲಭದ ಕಸರತ್ತಲ್ಲ.  ಕೆಲವು ಕೊರತೆಗಳಿದ್ದರೂ, ನಿರ್ದೇಶಕ ರೋಹಿತ್ ಪದಕಿ ತಮ್ಮ ಮೊದಲನೆಯ ಚಲನಚಿತ್ರದ ಮೂಲಕ ಕನ್ನಡ ಸಿನಿಮಾ ವಿಶ್ವದ ಭರವಸೆಯ ಹಾದಿಯ ಪಯಣಿಗನಾಗುವ ಸೂಚನೆಗಳನ್ನು ನೀಡಿದ್ದಾರೆ. ಇಂತಹ ಪ್ರಯತ್ನಗಳು ಸ್ಯಾಂಡಲ್‍ವುಡ್‍ಗೆ ಅವಶ್ಯವಾಗಿವೆ. ಇದಕ್ಕಾಗಿ ನಿರ್ಮಾಪಕ ಕೃಷ್ಣ ಸಾರ್ಥಕ್ ಕೂಡ ಅಭಿನಂದನಾರ್ಹರು.

Leave a Reply