ಪುಳಿಯೋಗರೆ ಮಾಡಿ ಹೋಗಿದ್ದಾಳೆ !

 

 

ಸತ್ಯಕಾಮ ಶರ್ಮ ಕಾಸರಗೋಡು

 

 

 

ಬಾಳನ್ನು ಪುಳಿಯೋಗರೆ ಮಾಡಿ

ಹೋಗಿದ್ದಾಳೆ ತವರು ಮನೆಗೆ

ಆಕೆ ಎಷ್ಟಾದರೂ ಮನೆಯಾಕೆ

‘ಅಕ್ಕನಂತೆ, ಕೆಲವೊಮ್ಮೆ ಅಮ್ಮನಂತೆ

ತರುವಳವಳು ತಣ್ಣನೆಯ ಭಾವ

ಕಾಣುವುದು ಹೇಗೆ ಹೆಣ್ಣಂತೆ?

 

ಇರುವವಳ ಬಗ್ಗೆ ಮನೆಯೊಳಗೇ

ಮೋಹಗೊಳ್ಳುವುದು ಹೇಗೆ?

ಈ ಸತಿ ಸಾವಿತ್ರಿಯರಿಗೆ ಏನು ಗೊತ್ತು

ರಾವಣರ ಜಗತ್ತು?’

ಅನ್ನುವವನಿಗೆ ಕಲಿಸಿದ್ದಾಳೆ ಇನ್ನು

ಮರೆಯಲಾಗದ ಪಾಠ

 

ಇಲ್ಲದಿರುವಾಗ ಅರಿವಾಗುವುದು

ಇರುವುದರ ಮಹತ್ವ

 

ಅರೆಪಾವು ಸಮಯ ಸಿಕ್ಕರೆ ಸಾಕು

ಅವರೆಕಾಯಿ ಸುಲಿಯುತ್ತಾ ಕುಳಿತುಕೊಳ್ಳುವವಳಿಗೆ

ಹಿಡಿಗಾತ್ರದ ಪ್ರಸಾದ ಸಿಕ್ಕರೆ ಸಾಕು

ದೇವರ ಕಂಡಂತೆ ನಲಿವವಳಿಗೆ

“ಎಲ್ಲಿದ್ದಾನೆ ದೇವರು?” ಅಂದರೆ

“ಇಲ್ಲಿದ್ದಾನೆ ನನ್ನೆದುರು!” ಅನ್ನುವವಳಿಗೆ

ನನ್ನ ಕಾವ್ಯ, ಬರಹ, ಓದು

ಈ ಜಗದ ಸಕಲ ಸಮಸ್ಯೆಗಳನೂ

ಆವಾಹಿಸಿದ ದಾರ್ಶನಿಕನ ಸೋಗು

ಈ ವಯಸ್ಸಿನಲ್ಲೂ ಕಾಡುವ

ಮಹತ್ವಾಕಾಂಕ್ಷೆಗಳ ಜಂಜಡ

ಇದಾವುದೂ ಬೇಡ

 

ಮನಸ್ಸು ಮಾಡಿದರೂ

ದೇಹ ಮಾಡದ ಹಾದರ

ದಾಂಪತ್ಯವೆಂದರೆ ಇದೇನೋ?

ದುರಂತ ಕಾವ್ಯವಿದು ಹಲವರ

 

ಹರಹರಾ…

ಯಾರದೋ ಒಂದು ಕಿರುನಗೆ, ಕುಡಿನೋಟ

ಮಾಡುವುದಿದೆ ಮನವನು ಈಗಲೂ ಹಳಹಳ

ಉಸುರಬೇಕೆನಿಸುತ್ತದೆ ಕಿವಿಗಳಲಿ ಅವರ

“ಆದರೂ ಬಿಟ್ಟಿರಲಾರೆ ನಾನು ನನ್ನವಳ”

ಮಧುಮೇಹ ಕಾಡುವ ತನಕ

ಬಾಳು ರಸಮಯ

 

“ನಾಳೆ ಬರುತ್ತೇನೆ” ಎಂಬ ಸಂದೇಶ

ಇಂದೇ ಬಂದಿದೆ

ಗೊತ್ತಿಲ್ಲವೇನು ನನಗೆ

ಅರ್ಥ ಏನೆಂದು ಅದರ?

ನನಗೀಗ ಮನ ಮನೆ

ಸ್ವಚ್ಛ ಮಾಡುವ ಸಡಗರ

 

ಗುಡಿಸಿ ಸಾರಿಸಿರುವೆ

ಅವಳು ಹೊರಟು ಹೋದ

ಮೇಲೆ ಇದೇ ಮೊದಲ ಸಲ

ಅಡುಗೆ ಮನೆ ಡಬ್ಬಗಳೆಲ್ಲಾ ಹಾಗೇ ಇವೆ

ಎಲ್ಲಿರಬೇಕೋ ಅಲ್ಲಿ

ಸಕ್ಕರೆ ಎಂದಿನಂತೆ ಇದೆ

ಹೃದಯ ಭಾಗದಲ್ಲಿ

 

ನಿನ್ನ ಹಾಗೆ ಹೇಳಿದಂತೆ ಕೇಳದ

ಅಡುಗೆ ಮನೆ ನಲ್ಲಿ

ಈಗ ಸರಿಯಾಗಿದೆ

 

ಸರದಿ ಇನ್ನು ನಿನ್ನದು ಮಲ್ಲಿ

 

ಅಕ್ಕಿ, ಗೋಧಿ, ಶುಂಠಿ, ತೊಗರಿ…

ಯಾವುದೂ ಖಾಲಿಯಾಗಿಲ್ಲ

ನೀನು ಬಂದು ತುಂಬುವ ತನಕ

ಇದನು ಮನೆ ಅನ್ನುವಂತಿಲ್ಲ

 

ಅಂತಃಪುರದೊಳಗೆ ಯಾರೂ ಬಂದಿಲ್ಲ

ಕಂಗೆಡದಿರು, ನಿಲ್ಲಿಸಿ ಅಳು

ಸುಪ್ಪತ್ತಿಗೆಯ ನೆರಿಗೆಗಳು

ಬರಿ ಕಲ್ಪನೆಯ ಸವತಿ

ಸೆರಗು ಬಿಚ್ಚಿದವುಗಳು

8 Responses

 1. Neeta Rao says:

  ತುಂಬಾ ಚೆನ್ನಾಗಿದೆ.

 2. ಸುವರ್ಣ says:

  Fine

 3. Niranjan Sharma says:

  Very good

 4. Sathyakama Sharma K says:

  ಧನ್ಯವಾದಗಳು

 5. .ಮಹೇಶ್ವರಿ.ಯು says:

  ಚೆನ್ನಾಗಿದೆ.ಕೆ ಎಸ್.ನ ಒಮ್ಮೆ ನೆನಪಿನಲ್ಲಿ ಸುಳಿದುಹೋದರು.ಆದರೆ ಇದು ಹೊಸಕವಿತೆ ಎನ್ನುವುದೂ ನಿಜ.ನಿಮಗೆ ಅಭಿನಂದನೆಗಳು

  • Sathyakama Sharma K says:

   ಧನ್ಯವಾದಗಳು. ಕೆ ಎಸ್ ನ ಅವರ ಪ್ರಭಾವದಿಂದ ಹೊರಬರುವುದು ನನ್ನಂತವರಿಗೆ ಸುಲಭವಲ್ಲ. ಕಾವ್ಯ ಅಂದರೆ ಅಷ್ಟು ಮಾತ್ರ ಅಲ್ಲ ಎಂಬ ಅರಿವು ಕೂಡಾ ನನಗಿದೆ. ಹಲವೊಮ್ಮೆ ಅವರ ಪ್ರಭಾವವನ್ನು ಮೀರಿ ಬರೆಯಲು ಹೊರಟು ನನಗೆ ಅರಿವಿಲ್ಲದೆ ಪುನಃ ಅಲ್ಲಿಗೆ ಮರಳಿದ ಅನುಭವವಾಗಿದೆ.

Leave a Reply

%d bloggers like this: