ಋತುಮಾನಗಳ ಸೇತುವೆ

 

 

 

ವಿನತೆ ಶರ್ಮ

 

 

 

ಬಂತೊಮ್ಮೆ ಮತ್ತದು ಈ ಕಾಲ

ನೆನೆಗುದಿಗೆ ಬೀಳದೆ ಬೇಸರಿಸದೆ

ನನ್ನದಲ್ಲ ಈ ಕೆಲಸ ಎಂದನದೇ

ಉದಾಸೀನ ತೋರದೆ

ಜಡಭರತನಾಗದೇ

ಕಳ್ಳ ಹೆಜ್ಜೆಯಿಡುತ

ಆವರಿಸಲು ಬಂತದು ಈ ಕಾಲ

ಜೀವಜಾಲದ ನಿಜವ ಸಾರಿತು.

 

ಬಣ್ಣದ ಶಾಯಿಯ ಆಯ್ಕೆಗಳ

ಮೇರೆ ಮೀರಿ ಕಲೆಗಾರನ

ಕಲ್ಪನೆಯ ಕುಂಚಕ್ಕೆ ಹೊಸ

ಸವಾಲೆಸಗಿ ಎಲ್ಲೆ ದಾಟಿ ಮತ್ತೊಮ್ಮೆ

ಬಣ್ಣದೋಕುಳಿಯ ಸೃಷ್ಟಿಗೆ

ಸಜ್ಜಾಗಿ, ಸಂಭ್ರಮಿಸಿ ವರಿಸಲು

ವಧುವರರು ಒಂದಾದ ಮೇಳದಂತೆ

ಬಂದಿತು ಇಗೋ ಆ ಕಾಲ.

ಕನಕಾಂಬರದ ಕೋಮಲತೆ

ದಾಸವಾಳ ವೈವಿಧ್ಯತೆಯ

ವಿಜೃಂಭಿಸುವ ಆ ಹೂ

ಪಕಳೆಗಳಂತೆ ಬಿಚ್ಚಿದೆ

ಈ ಶರತ್ಕಾಲದ ಅಂದಚೆಂದ

ಕೆಂಪು ಕೇಸರಿ ಕಂದುಗಳ ಎಲೆ ಚೆಲ್ಲಾಟ

ಹಸಿರು ಹಳದಿಗಳ ಮರ ಮೈಮಾಟ

ಏನಿದು ಬೆರಗು ಏನಿದು ಅಚ್ಚರಿ.

 

ಪುಟ ತಿರುವಿದಷ್ಟೂ ಕೊನೆಯಿಲ್ಲ

ಅದರ ವಿಸ್ಮಯಕೆ ಎಣೆಯಿಲ್ಲ

ಕೊಂಬೆಯಿಂದ ಜಾರಿದ ಎಲೆ

ಬಿಡಿಸಿದ ಹತ್ತಿಯಂತೆ ಹಗುರ

ಕಳಚಿ ಕೆಳಬಿದ್ದ ಎಲೆಗಳ ಹಾಸು

ನೆಟ್ಟನಿಂತ ಬರಿಮೈ ಮರ

ಋತುಮಾನಗಳ ಸೇತುವೆ

ಈ ಶರತ್ಕಾಲ ನಿಸರ್ಗದ ಮಹತ್ಕಾಲ

2 Responses

  1. giri2013 says:

    ಬಣ್ಣದೋಕುಳಿಯ ಈ ಶರತ್ಕಾಲ ನಿಸರ್ಗದ ಮಹತ್ಕಾಲ, Very nicely worded Vinate.

  2. Vasudeva Sharma N.V says:

    ಸೊಗಸಾಗಿದೆ, ಕಳ್ಳ ಹೆಜ್ಜೆಯಿಟ್ಟು ಬಂದ ಆಪ್ಯಾಯಮಾನ

Leave a Reply

%d bloggers like this: