ಸುಟ್ಟುಬಿಡಿ ಇತಿಹಾಸವನ್ನು..

ಶಿವಕುಮಾರ್ ಮಾವಲಿ

ಸುಟ್ಟುಬಿಡಿ ಇತಿಹಾಸವನ್ನು ಅದು
ವರ್ತಮಾನವನನ್ನು ಸುಡುವ ಮೊದಲು..

ಹುಡುಕಿರಿ ಎಲ್ಲ ಇತಿಹಾಸದ ಪುಸ್ತಕಗಳನ್ನು
ತಂದೆಸೆಯಿರಿ ಒಂದೆಡೆ ಯಾವುದೇ ಭೇದವಿಲ್ಲದೆ,
ಸುಟ್ಟುಬಿಡಿ ಎಲ್ಲ ಹಿರಿ ಕಿರಿ ಗ್ರಂಥಗಳನ್ನು
‘ಹೀಗಿತ್ತು’ ಎಂಬ ಯಾವೊಂದು ಪುರಾವೆಗಳು ಉಳಿಯದಿರಲಿ ..

‘ಹಿಂದಣ ಹೆಜ್ಜೆಯನರಿಯದೆ ಮುಂದಡಿಯಿಡಲಾಗದು ‘ ಎಂಬ
ಕವಿವಾಣಿ ಇಂದಿಲ್ಲಿ ಅರಿತವರಿಲ್ಲ.
ಬುದ್ಧ, ಬಸವ,ಗಾಂಧಿ,ವಿವೇಕ,
ಬಾಬರ್,ಅಕ್ಬರ್,ಟಿಪ್ಪು, ಷಹಜಾನ್
ಇವರೆಲ್ಲ ಹುಟ್ಟಿಸಿದ ಗೊಂದಲಗಳಿಗೆಲ್ಲ
ಇತಿ ಹಾಡಲು ಇತಿಹಾಸ ಸುಡುವುದೇ ಸೂಕ್ತ..

ಒಂದೊಂದೇ ಪಾತ್ರಗಳು ಎದ್ದು
ನುಂಗುತ್ತಿವೆ ದ್ವೇಷದ ಕೆನ್ನಾಲಿಗೆಯಲ್ಲಿ
ಈಗಾಗಲೇ ನಲುಗಿದ ಜನರನ್ನು.

ಜಯಂತಿ,ಪುಣ್ಯ ತಿಥಿಗಳ ಹೆಸರಲ್ಲಿ
ಜನನ,ಮರಣ ದಿನಗಳ ಗೊಂದಲಗಳಲ್ಲಿ
ದೇವಾಲಯ-ಮಹಲುಗಳ ಅನಿರ್ದಿಷ್ಟತೆಯಲ್ಲಿ,
ರಾಜ ರಾಣಿಯರ ವೈಭವದಲ್ಲಿ
ಹುದುಗಿರುವ ಈ ಇತಿಹಾಸ ನಮಗಿಂದು ಅಪತ್ಯವೇ ..

ಭೂತ ಕಾಲ ತಿಳಿಯದೆ ಭವಿತವ್ಯ ಹೇಗೆ?  ಎಂದೆನುವಿರಾ??
ಇಲ್ಲ ಭವಿತವ್ಯಕ್ಕೆ ಭೂತದ ಹಂಗಿಲ್ಲ
ಅದರಲ್ಲೂ ತಪ್ಪು ಭೂತ ತಪ್ಪು ಭವಿತವ್ಯಕ್ಕೆ ನಾಂದಿಯಾಗುತಿಹುದಿಂದು.

ಹಾಗಾಗಿ ಸುಡುವುದೊಳಿತು ಇತಿಹಾಸವನ್ನು ..
ಕಟ್ಟಲು ಹೊಸ ನಾಡೊಂದನು..

1 Response

  1. kusuma patel says:

    Very nice.

Leave a Reply

%d bloggers like this: