ಅಯ್ಯಯ್ಯೋ.. ‘ಬುಷ್ ಮೀಟ್’

ಬುಷ್ ಮೀಟ್: ಮತ್ತೊಂದು ಕರಾಳ ಮುಖ

ಅಲ್ರೀ, ಅದೇನ್ ಕೊಟ್ರೂ ತಿಂತೀರಲ್ರೀ?’, ಎಂದು ಹೇಳುತ್ತಿದ್ದ ಗೆಳೆಯನೊಬ್ಬ ಅಂದು ಹಟಾತ್ತನೆ ನೆನಪಾದ.

ಸಸ್ಯಾಹಾರಿಗಳು ಮತ್ತು ಮಾಂಸಾಹಾರಿಗಳು ಮುಖಾಮುಖಿಯಾದರೆ ಇಂಥಾ ಮಾತುಗಳು ಕೇಳಿಬರುವುದು ಸಹಜ. ಕೆಲವರ್ಷಗಳ ಹಿಂದೆ ನಾನು ಒಂದೆರಡು ದಿನಗಳ ಮಟ್ಟಿಗೆ ನಾಗಾಲ್ಯಾಂಡಿಗೆ ಹೋದಾಗ ಅಲ್ಲಿ ನಾಯಿಗಳನ್ನು ತಿನ್ನುತ್ತಾರೆಂಬ ಸಂಗತಿಯು ನನಗೆ ತಿಳಿದುಬಂದಿತ್ತು. ನಾಯಿಮಾಂಸ ಉಳಿದವುಗಳಿಗಿಂತ ಹೆಚ್ಚು ರುಚಿಕರವೂ, ಹೆಚ್ಚು ದುಬಾರಿಯೂ ಕೂಡ ಎಂದು ನನ್ನ ಜೊತೆಗಿದ್ದ ಕಾರು ಚಾಲಕನೊಬ್ಬ ಅಂದು ಹೇಳಿದ್ದ. ಅಲ್ಲದೆ ಒಂದು ಕಾಲದಲ್ಲಿ ಕ್ಷಯರೋಗಕ್ಕೆ ಮದ್ದಾಗಿಯೂ ಇದನ್ನು ಬಳಸುತ್ತಿದ್ದರು ಎಂಬ ಇತಿಹಾಸವನ್ನೂ ಹೇಳಿದ್ದ.

ಈ ಖಾಯಿಲೆ-ಚಿಕಿತ್ಸೆಗಳ ಹಿನ್ನೆಲೆಯಲ್ಲೆಷ್ಟು ಸತ್ಯವಿದೆ ಎಂಬುದು ನನಗೆ ತಿಳಿದಿಲ್ಲ. ಆದರೆ ಆಗ ಇದನ್ನು ಕೇಳಿ ನನಗೆ ಅಚ್ಚರಿಯಾಗಿದ್ದಂತೂ ಹೌದು. ಏಕೆಂದರೆ ಅಂದಿನವರೆಗೆ ಭಾರತದಲ್ಲಿ ಇಂಥದ್ದೆಲ್ಲಾ ಇಲ್ಲವೇ ಇಲ್ಲ ಎಂದು ನಾನು ತಿಳಿದುಕೊಂಡಿದ್ದೆ. ಇವುಗಳೇನಿದ್ದರೂ ಚೀನಾ, ಥಾಯ್ಲೆಂಡ್ ನಂತಹ ದೇಶಗಳಿಗೇ ಮೀಸಲು ಎಂದು ಭಾವಿಸಿದ್ದೆ. ಆದರೆ ನಾಗಾಲ್ಯಾಂಡ್ ಪ್ರವಾಸವು ಭಾರತದ ಆಹಾರ ವೈವಿಧ್ಯತೆಯ ಹೊಸದೊಂದು ಮುಖವನ್ನು ನನಗಂದು ತೋರಿಸಿತ್ತು.

ಇಂದು ಅಂಗೋಲಾದ ಆಹಾರಪದ್ಧತಿಯ ಬಗ್ಗೆಯಂತೂ ನಾನು ಹೇಳಲು ಹೋಗುತ್ತಿಲ್ಲ. ಇದಕ್ಕೆ ಪ್ರಮುಖ ಕಾರಣವೆಂದರೆ ಕಳೆದೆರಡು ವಾರಗಳಿಂದ ನಾನು ಬರೆಯುತ್ತಿರುವ ಅಂಗೋಲಾದ ಬುಷ್ ಮೀಟ್ ಟ್ರೇಡ್ ಕಥೆಯು ಇನ್ನೂ ಮುಗಿದಿಲ್ಲ. ಈವರೆಗೆ ಇದರ ವಾಣಿಜ್ಯ ಮುಖವನ್ನಷ್ಟೇ ನಾವು ನೋಡಿದ್ದೆವು. ಆದರೆ ಆಹಾರವಾಗಿ ಇವುಗಳ ಬಳಕೆಯನ್ನು ನೋಡಿದರೆ ಅದರದ್ದೇ ಒಂದು ಪ್ರತ್ಯೇಕ ಕಥೆಯಾಗಿಬಿಡುತ್ತದೆ. ನಾನೂ ಕೂಡ ಇಂಥದ್ದೇ ಕಥೆಗಳ ಬೆನ್ನಟ್ಟಿ ಹೋಗಿದ್ದೆ.

ನಾನು ಸದ್ಯಕ್ಕಿರುವ ಅಂಗೋಲಾದಲ್ಲಿ ಬುಷ್ ಮೀಟ್ ಗಳು ಯಥೇಚ್ಛವಾಗಿ ಲಭ್ಯವಿದೆ ಎಂದರೆ ಇದರಲ್ಲಿ ಹೌಹಾರುವ ಸಂಗತಿಯೇನಲ್ಲ. ಅಷ್ಟಕ್ಕೂ `ಬುಷ್ ಮೀಟ್’ ಎಂದರೇನು? ಕಾಡುಪ್ರಾಣಿಗಳ ಮಾಂಸವಷ್ಟೇ. ವೀಜ್ ನಿಂದ ಲುವಾಂಡಾಕ್ಕಿರುವ ಮುನ್ನೂರು ಚಿಲ್ಲರೆ ಕಿಲೋಮೀಟರುಗಳ ದಾರಿಯಲ್ಲಿ ಎಪ್ಪತ್ತು ಪ್ರತಿಶತ ಕಾಡೇ ಕಾಡು ಎಂದು ಈಗಾಗಲೇ ಹೇಳಿದ್ದೇನೆ. ಹೀಗಾಗಿ ಈ ಭಾಗದ ಜನರು ಕಾಡಿನಲ್ಲಿರುವ ಪ್ರಾಣಿಗಳನ್ನು ಬೇಟೆಯಾಡಿ ತಿನ್ನುವುದು ಸಾಮಾನ್ಯ. ಆದರೆ ಪ್ರಸ್ತುತ ಮತ್ತು ಭವಿಷ್ಯದಲ್ಲಿ ಇದಕ್ಕೆ ಇಲ್ಲಿಯ ಸ್ಥಳೀಯರು ತೆರಬೇಕಾದ ಬೆಲೆಯ ಬಗ್ಗೆ ಇವರಿಗೇನಾದರೂ ತಿಳಿದಿದೆಯೇ ಎಂಬುದು ಮಹತ್ತರವಾದ ಪ್ರಶ್ನೆ.

ನಾನಿರುವ ವೀಜ್ ಪ್ರದೇಶದ ಮುಖ್ಯ ಮಾರುಕಟ್ಟೆಗೆ ನಾನು ಮೊದಲ ಬಾರಿಗೆ ಹೋದಾಗ ಕೊಂಚ ವಿಚಲಿತನಾಗಿದ್ದಂತೂ ಹೌದು. ಇದು ನಮ್ಮೂರಿನ ವಾರದ ಸಂತೆಯಂತಿದ್ದರೂ ಇತರ ಮಾರುಕಟ್ಟೆಯೊಂದಿಗೆ ಮಾಂಸದ ವಿಭಾಗವೂ ಜೊತೆಯಲ್ಲೇ ಇದೆ. ಮಾಂಸದ ಮಾರುಕಟ್ಟೆಯು ಕೊಂಚ ದೊಡ್ಡದಾಗಿಯೇ ಇದೆ ಎನ್ನಲೂಬಹುದು. ಮೀನು, ಕೋಳಿ, ದನ, ಹಂದಿ, ಜಿಂಕೆಗಳಿಂದ ಹಿಡಿದು ಇನ್ನೂ ಹಲವು ಬಗೆಯ ಆಹಾರಗಳನ್ನು ಅಲ್ಲಿ ಮಾರಾಟಕ್ಕಿಡಲಾಗಿತ್ತು. ಇನ್ನು ಕೆಲವು ಪ್ರಾಣಿಗಳ ತಲೆ, ಕಾಲುಗಳನ್ನು ತುಂಡರಿಸಿ ಮೇಜಿನ ಮೇಲಿಟ್ಟಿದ್ದರೆ ಇನ್ನು ಕೆಲವು ಚಿಕ್ಕ ಗಾತ್ರದ ಪ್ರಾಣಿಗಳ ಮೃತದೇಹವನ್ನು ಹಾಗೆಯೇ ಇರಿಸಲಾಗಿತ್ತು.

ಅಸಲಿಗೆ ವೀಜ್-ಲುವಾಂಡಾ ಮಾರ್ಗದುದ್ದಕ್ಕೂ ಅಲ್ಲಲ್ಲಿ ಕಾಣುತ್ತಿದ್ದ ನೇತುಹಾಕಿದ್ದ ಪ್ರಾಣಿಗಳೇ (ಬುಷ್ ಬಕ್, ಬುಷ್ ಹೈರಾಕ್ಸ್, ಬ್ಲೂ ಮಂಕಿ, ಬ್ಲೂ ಡ್ಯೂಕರ್ಸ್, ಆಫ್ರಿಕನ್ ಜೈಂಟ್ ಸ್ಕ್ವಿರಿಲ್ ಇತ್ಯಾದಿಗಳು) ಇವುಗಳಾಗಿದ್ದವು. ಅಂದರೆ ಕಾಡಿನ ಭಾಗದಿಂದ ಈ ಬಗೆಯ ಮಾಂಸಗಳನ್ನು ನಾಡಿನವರೆಗೂ ತಂದು ಸಾಗಾಟದ ವೆಚ್ಚವನ್ನು ಸೇರಿಸಿ ಅವುಗಳನ್ನು ಹೆಚ್ಚಿನ ಬೆಲೆಯಲ್ಲಿ ಮಾರಲಾಗುತ್ತಿತ್ತು.

ಈ ಮಾಂಸಗಳು ಸಾಮಾನ್ಯವಾಗಿ ಎಲ್ಲೆಡೆ ತಿನ್ನಲಾಗುವ ಚಿಕನ್, ಮೀನು, ಪೋರ್ಕ್, ಬೀಫ್ ಗಳಿಗಿಂತ ರುಚಿಯ ಮಟ್ಟಿನಲ್ಲಿ ಹೇಗೆ ಭಿನ್ನ ಎಂದು ನಾನು ಹಲವು ಅಂಗೋಲನ್ನರಲ್ಲಿ ಕೇಳಿದ್ದೇನೆ. ಇಲ್ಲಿ ನನಗೆ ಕಂಡುಬಂದ ಸೋಜಿಗದ ಸಂಗತಿಯೆಂದರೆ ವೀಜ್ ನಲ್ಲಿ ನೆಲೆಸಿದ್ದ ಬಹಳಷ್ಟು ಮಂದಿ ಸ್ಥಳೀಯರು ಇವುಗಳನ್ನು ತಿನ್ನುತ್ತಿರಲಿಲ್ಲ. ಹಾಗೆ ತಿನ್ನುವವರಿದ್ದರೂ ಹತ್ತು ಮಂದಿಯಲ್ಲಿ ಮೂವರಷ್ಟೇ ಎನ್ನುವಂತೆ. ಈ ಬುಷ್ ಮೀಟ್ ಗಳು ಕೊಂಚ ದುಬಾರಿಯಾಗಿರುವುದರಿಂದ ಮೊಟ್ಟೆ, ಚಿಕನ್, ಮೀನು, ಪೋರ್ಕ್, ಬೀಫ್ ಗಳಲ್ಲೇ ಇವರುಗಳು ಹಾಯಾಗಿದ್ದರು.

ಕಾಡನ್ನು ತೊರೆದು ನಗರದತ್ತ ಬಂದು ಸೇರಿದ ಜನಸಮೂಹವು ಇವುಗಳನ್ನು ಸಂಪೂರ್ಣವಾಗಿ ತ್ಯಜಿಸಿಲ್ಲವಾದರೂ ತಕ್ಕಮಟ್ಟಿಗೆ ಈ ಮಾಂಸಗಳ ಬಳಕೆಯನ್ನು ಕಮ್ಮಿ ಮಾಡಿವೆಯಂತೂ ಹೌದು. ಹಾಗೆಂದು ಈ ಮಾಂಸಗಳ ಮಾರುಕಟ್ಟೆಯು ಕುಸಿದು ಬೀಳುವಷ್ಟು ಕೂಡ ವ್ಯಾಪಾರವು ಕುಸಿದಿಲ್ಲ. ಅಂಗೋಲಾದಲ್ಲಿ ತುಂಬಿಹೋಗಿರುವ ಚೀನೀಯರು, ಚೀನೀಯರಿಗಿಂತ ಕೊಂಚ ಕಮ್ಮಿ ಸಂಖ್ಯೆಯಲ್ಲಿರುವ ಬಿಳಿಯ ಪೋರ್ಚುಗೀಸರು ಮತ್ತು ಇತರೆ ಸ್ಥಳೀಯರು ಈ ಮಾಂಸಗಳನ್ನು ತಿನ್ನುವವರೇ.

ನೀವು ಯಾವ ದೇಶಕ್ಕೆ ಹೋದರೂ ಅಲ್ಲಿಯ ವಿಶೇಷ ಖಾದ್ಯಗಳನ್ನು ಸವಿಯದೆ ಮರಳಿದರೆ ನಿಮ್ಮ ಪ್ರವಾಸಕ್ಕೊಂದು ಅರ್ಥವೇ ಇರುವುದಿಲ್ಲ ಎಂಬುದು ನನ್ನ ಭಾವನೆ. ಇಟಲಿಗೆ ಹೋದರೂ ಇಡ್ಲಿ-ಸಾಂಬಾರ್ ಹುಡುಕಿಕೊಂಡು ಹೋಗುವುದು, ಚಿಲಿಯಲ್ಲೂ ಚಿತ್ರಾನ್ನ ತಿನ್ನುವುದು ಇವುಗಳೆಲ್ಲಾ ಮೂರ್ಖತನದ ಪರಮಾವಧಿಗಳು. ಆದರೆ ಕೆಲವು ಖಾದ್ಯಗಳನ್ನು ತಿನ್ನಲು ಸಾಧ್ಯವೇ ಇಲ್ಲವೆಂಬ ಪರಿಸ್ಥಿತಿಯೂ ಉಂಟಾಗುತ್ತದೆ. ಉದಾಹರಣೆಗೆ ಸಸ್ಯಾಹಾರಿಗಳಿಗೆ ಹೊರದೇಶಗಳಿಗೆ ಹೋಗಿ ಮಾಂಸಾಹಾರವನ್ನು ತಿನ್ನಿ ಎಂದರೆ ಕಷ್ಟ. ಇನ್ನು ಮಾಂಸಾಹಾರಿ ಭಾರತೀಯರಿಗಾದರೂ ಹುಳುಗಳನ್ನೋ, ಹಾವನ್ನೋ ಬೇಯಿಸಿ ತಟ್ಟೆಯಲ್ಲಿ ಹಾಕಿಕೊಟ್ಟರೆ ತಿನ್ನುವುದು ಕಷ್ಟ.

ನನ್ನ ವಿಚಾರದಲ್ಲೂ ಇಂಥವುಗಳೇ ನಡೆದುಹೋದವು. ನಾನು ಮಾಂಸಾಹಾರಿಯಾಗಿದ್ದರೂ ಅಂಗೋಲಾದ ತರಹೇವಾರಿ ಮಾಂಸಾಹಾರಿ ಖಾದ್ಯಗಳನ್ನು, ಅದರಲ್ಲೂ ಬುಷ್ ಮೀಟ್ ಗಳನ್ನು ಸವಿಯದೆ ಇರುವ ಮುಖ್ಯ ಕಾರಣವೆಂದರೆ ಶುಚಿತ್ವ. ಇನ್ನು ಒಳ್ಳೆಯ ಆಸ್ಪತ್ರೆಗಳಿಲ್ಲದ ಅಂಗೋಲಾದಲ್ಲೇನಾದರೂ ಖಾಯಿಲೆ ಬಿದ್ದರೆ ಆ ಭಗವಂತನೇ ಕಾಪಾಡಬೇಕಷ್ಟೇ!

ಅಂದಹಾಗೆ ಬುಷ್ ಮೀಟ್ ಗಳು ಅಂಗೋಲಾ ದೇಶಕ್ಕಷ್ಟೇ ಸೀಮಿತವಾದುದಲ್ಲ. ಲೈಬೀರಿಯಾ, ಘಾನಾ, ಡೆಮಾಕ್ರಟಿಕ್ ರಿಪಬ್ಲಿಕ್ ಆಫ್ ಕಾಂಗೋ (ಡಿ.ಆರ್.ಸಿ) ಹೀಗೆ ಬೇರೆ ಆಫ್ರಿಕನ್ ದೇಶಗಳಲ್ಲೂ ಇವುಗಳು ಅಸ್ತಿತ್ವದಲ್ಲಿವೆ. ಹೀಗಾಗಿಯೇ ದೇಶಗಳ ಸರಹದ್ದುಗಳಾಚೆಗೂ ಕೆಲ ಮಾಂಸಗಳು ಆಹಾರ ಮತ್ತು ವಾಣಿಜ್ಯ ದೃಷ್ಟಿಯಿಂದ ಅಕ್ರಮವಾಗಿ ಸಾಗಿಸಲ್ಪಡುವುದುಂಟು. ಭೌಗೋಳಿಕವಾಗಿ ಅಕ್ಕಪಕ್ಕದಲ್ಲಿರುವ ಅಂಗೋಲಾ ಮತ್ತು ಡಿ.ಆರ್.ಸಿ ಇದಕ್ಕೊಂದು ಉತ್ತಮ ಉದಾಹರಣೆ. ಅಂದಹಾಗೆ ಘಾನಾದಲ್ಲಿ ಪ್ರತೀವರ್ಷವೂ ಸುಮಾರು ಒಂದು ಲಕ್ಷ ಬಾವಲಿಗಳನ್ನು ತಿನ್ನಲಾಗುತ್ತದಂತೆ.

ಇರಲಿ. ಮತ್ತೆ ಶುಚಿತ್ವದತ್ತ ಬರೋಣ. ಒಮ್ಮೆ ಲುವಾಂಡಾ-ವೀಜ್ ಮಾರ್ಗಮಧ್ಯದಲ್ಲಿ ಬರುವ ಕಕ್ವಾಕು ಎಂಬ ಪುಟ್ಟ ಹಳ್ಳಿಯ ಕ್ಯಾಂಟೀನ್ ಒಂದಕ್ಕೆ ನುಗ್ಗಿದ್ದ ನಾನು ಅಲ್ಲಿಯ ವ್ಯವಸ್ಥೆಯನ್ನು ಕಂಡು ಬೆಚ್ಚಿಬಿದ್ದಿದ್ದೆ. ಆ ದಿನವು ನನಗಿನ್ನೂ ನೆನಪಿದೆ. ಅಂದು ಆರೇಳು ಗ್ರಾಹಕರಷ್ಟೇ ಆ ಕ್ಯಾಂಟೀನಿನಲ್ಲಿದ್ದರು. ದೀರ್ಘ ರಸ್ತೆ ಪ್ರಯಾಣಗಳಲ್ಲಿ ನಾನು ಸಾಮಾನ್ಯವಾಗಿ ಹಣ್ಣುಗಳನ್ನು ಬಿಟ್ಟರೆ ಇನ್ನೇನೂ ತಿನ್ನುವುದಿಲ್ಲವಾದ್ದರಿಂದ ಅಂದು ಏನನ್ನೂ ತಿನ್ನದೆ ಸುಮ್ಮನೆ ಕುಳಿತಿದ್ದರೆ ನನ್ನ ದುಭಾಷಿ ಮತ್ತು ಕಾರು ಚಾಲಕ ಜೊತೆಯಲ್ಲಿ ಕುಳಿತು ಪೋರ್ಕ್ ಮೆಲ್ಲುತ್ತಿದ್ದರು.

ಕೊನೆಗೂ ಮಧ್ಯಾಹ್ನದೂಟದ ಗೌಜುಗದ್ದಲವು ಮುಗಿದು ಹೊರಡಲು ಅಣಿಯಾದಾಗ ಕ್ಯಾಂಟೀನಿನಲ್ಲಿದ್ದ ಹೆಂಗಸೊಬ್ಬಳು ಬಂದು ನೀರು ತುಂಬಿದ್ದ ಪುಟ್ಟ ಬಕೆಟ್ಟೊಂದನ್ನು ಇಟ್ಟು ಮರೆಯಾದಳು ನೋಡಿ. ಅದು ಗ್ರಾಹಕರಿಗೆ ಭೋಜನದ ನಂತರ ಕೈತೊಳೆಯಲು ಕೊಟ್ಟ ನೀರಿನ ಬಕೆಟ್ಟು ಎಂದು ನನಗೆ ಕೆಲನಿಮಿಷಗಳಲ್ಲೇ ತಿಳಿಯಿತು. ಸೋಜಿಗದ ಸಂಗತಿಯೆಂದರೆ ನನ್ನೆದುರಿಗಿದ್ದ ಭೂಪನೊಬ್ಬ ಬಂದು ತನ್ನ ಎಂಜಲಿನ ಕೈಯನ್ನೇ ಪೂರ್ತಿಯಾಗಿ ಆ ಬಕೆಟ್ಟಿಗೆ ಮುಳುಗಿಸಿ ತನ್ನ ಕೈಗಳನ್ನು ತೊಳೆದುಕೊಂಡ. ಇದರ ಬೆನ್ನಿಗೇ ಆತನ ಹಿಂದಿದ್ದ ಮತ್ತೊಬ್ಬ ಗ್ರಾಹಕ ಬಂದು ತನ್ನ ಕೈಯನ್ನೂ ಕೂಡ ಅದರಲ್ಲೇ ಮುಳುಗಿಸಿ ತೊಳೆದುಕೊಂಡು(?) ಹೋದ. ಇನ್ನಿಬ್ಬರು ತಮ್ಮ ತಮ್ಮ ಕೈಗಳನ್ನು ಆ ಬಕೆಟ್ಟಿನಲ್ಲಿ ಮುಳುಗಿಸಿ ಕೈ ತೊಳೆದುಕೊಳ್ಳಲು ಸಾಲಾಗಿ ನಿಂತಿದ್ದರು. ನನ್ನ ಆ ದಿನದ ಪ್ರಯಾಣವು ಆ ದೃಶ್ಯಮಾತ್ರದಿಂದಲೇ ಭಯಂಕರ ಹೇವರಿಕೆಯಿಂದಾಗಿ ಪ್ರಯಾಸದಿಂದ ಕಳೆದುಹೋಯಿತು. ಇಂದಿಗೂ ಆ ಭಾಗದ ಮಾರ್ಗವಾಗಿ ರಾಜಧಾನಿಯತ್ತ ಹೋದಾಗಲೆಲ್ಲಾ ಹೊಟ್ಟೆ ತೊಳೆಸಿ ಬರುವಂತಾಗುತ್ತದೆ.

ಈ ಮೇಲಿನ ಘಟನೆಯನ್ನು `ಶುಚಿತ್ವದ ಕೊರತೆ’ ಎನ್ನುವುದಕ್ಕಿಂತಲೂ `ಸಾಮಾನ್ಯಜ್ಞಾನದ ಕೊರತೆ’ ಎಂದರೆ ಸರಿಯಾಗಬಹುದೇನೋ! ಬುಷ್ ಮೀಟ್ ಗಳ ಸಂಗತಿಯಲ್ಲೂ ಇಂಥಾ ಹಲವು ಆಘಾತಕಾರಿ ಅಂಶಗಳು ನಮ್ಮೆದುರಿಗೆ ಬಂದು ನಿಲ್ಲುತ್ತವೆ. ಇವುಗಳಲ್ಲಿ ಮುಖ್ಯವಾದುದೆಂದರೆ ಬುಷ್ ಮೀಟ್ ನಿಂದ ಬರುವ ಖಾಯಿಲೆಗಳು. ಇದನ್ನು ಬುಷ್ ಮೀಟ್ ವ್ಯಾಪಾರಿಗಳು ಅಲ್ಲಗಳೆದರೂ ತಜ್ಞರು ಇದನ್ನು ಒಪ್ಪಿಕೊಳ್ಳುತ್ತಾರೆ. ಸ್ಮಾಲ್ ಪಾಕ್ಸ್, ಚಿಕನ್ ಪಾಕ್ಸ್, ಕ್ಷಯ, ದಡಾರ, ರೇಬಿಸ್, ಹಳದಿ ಜ್ವರ ಮತ್ತು ರುಬೆಲ್ಲಾಗಳು ಇವುಗಳಲ್ಲಿ ಸಾಮಾನ್ಯವಾದವುಗಳು. ಆಫ್ರಿಕನ್ ಜೈಂಟ್ ಸ್ಕ್ವಿರಿಲ್ (ಅಳಿಲು)ಗಳ ಸೇವನೆಯಿಂದ ಮಂಕಿ ಪಾಕ್ಸ್ ಅನ್ನುವ ಖಾಯಿಲೆಯೊಂದು ಡಿ.ಆರ್.ಸಿ ಯಲ್ಲಿ ಪತ್ತೆಯಾಗಿತ್ತು. ಇನ್ನು ನೋಡಲು ಮುಂಗುಸಿಯಂತಿರುವ ಪ್ರೈರಿ ನಾಯಿಗಳ ಸೇವನೆಯಿಂದ ಬ್ಯುಬೋನಿಕ್ ಪ್ಲೇಗ್ ನಂಥಾ ಖಾಯಿಲೆಗಳು ಬರುವುದೂ ಇದೆ.

ಸಾಮಾನ್ಯವಾಗಿ ಆಗುವುದೇನೆಂದರೆ ಖಾಯಿಲೆಯ ವೈರಸ್ ಗಳನ್ನು ಹೊತ್ತ ಪ್ರಾಣಿಗಳನ್ನು ಆಹಾರವಾಗಿ ಸೇವಿಸುವುದರಿಂದ ಮನುಷ್ಯನಿಗೂ ಈ ಖಾಯಿಲೆಗಳು ಕೆಲವೊಮ್ಮೆ ಬಂದುಬಿಡುತ್ತವೆ. ಎಬೋಲಾ ಖಾಯಿಲೆಯ ಸಂಬಂಧ ಸಾವಿರಾರು ಪುಟ್ಟ ಕಶೇರುಕ (ಬೆನ್ನುಮೂಳೆಯಿರುವ ಜಂತು) ಗಳಲ್ಲಿ ಪ್ರಯೋಗಗಳನ್ನು ನಡೆಸಿದಾಗ ಎರಡು ಪ್ರಭೇದಗಳ ಬಾವಲಿಗಳು ಈ ವೈರಸ್ ಅನ್ನು ತಮ್ಮಲ್ಲಿ ಹೊಂದಿರುವುದು ಕಂಡುಬಂದಿತ್ತು. ಎಬೋಲಾ ವೈರಸ್ ಗಳನ್ನು ತನ್ನಲ್ಲಿ ಹೊಂದಿದ್ದ ಈ ಫ್ರೂಟ್ ಬ್ಯಾಟ್ (ಬಾವಲಿ)ಗಳು ಅರ್ಧ ಕಚ್ಚಿ ತಿಂದ ಹಣ್ಣುಗಳನ್ನು ತಿಂದು ಗೊರಿಲ್ಲಾ, ಚಿಂಪಾಂಜಿಗಳು ಪ್ರಾಣಬಿಟ್ಟಿದ್ದವು. ಇತ್ತೀಚೆಗೆ ಸುದ್ದಿಯಾದ ಎಬೋಲಾ ಖಾಯಿಲೆಯು ಜನರಲ್ಲಿ ಮೂಡಿಸಿದ್ದ ಭಯವು ಅಷ್ಟಿಷ್ಟಲ್ಲ. ಗಿನಿಯ ದೇಶದಲ್ಲಿ ಎಬೋಲಾ ವೈರಸ್ಸಿಗೆ ಬಲಿಯಾದ ಮೊದಲ ರೋಗಿಯೆಂದರೆ ಎರಡು ವರ್ಷ ಪ್ರಾಯದ ಹಸುಳೆ ಎಮಿಲ್ ಓಅಮೌನು.

ಡಿಸೆಂಬರ್ 06, 2013 ರಲ್ಲಿ ಬಲಿಯಾದ ಈ ಮಗುವನ್ನು `ಪೇಷಂಟ್ ಝೀರೋ’ ಎಂದು ಮಾಧ್ಯಮಗಳು ಕರೆದವು. ಇದಾದ ಒಂದು ತಿಂಗಳಲ್ಲೇ ಎಮಿಲ್ ನ ಸಹೋದರಿ, ತಾಯಿ ಮತ್ತು ಅಜ್ಜಿ ಎಬೋಲಾಗೆ ತುತ್ತಾಗಿ ಅಸುನೀಗಿದರು. ಎಮಿಲ್ ವಾಸವಾಗಿದ್ದ ಆಗ್ನೇಯ ಗಿನಿಯಾದ ಈ ಭಾಗದಲ್ಲಿ ಬಾವಲಿಗಳನ್ನು ಬೇಟೆಯಾಡಿ ತಿನ್ನುವುದು ಸಾಮಾನ್ಯವಾಗಿತ್ತು ಎಂಬುದು ಇಲ್ಲಿ ಗಮನಿಸಬೇಕಾದ ಅಂಶ. ಎಮಿಲ್ ನ ಸಾವಿನ ನಂತರ ಗಿನಿಯಾ, ಲೈಬೀರಿಯಾ ಮತ್ತು ಸಿಯೇರಾ ಲಿಯೋನೆ ದೇಶಗಳು ಒಂದು ವರ್ಷದ ಅವಧಿಯಲ್ಲಿ 10000 ಕ್ಕೂ ಹೆಚ್ಚಿನ ಎಬೋಲಾ ಪ್ರಕರಣಗಳನ್ನು ಕಂಡಿದ್ದು ಬರೋಬ್ಬರಿ 4900 ದಷ್ಟು ಜನರು ಅಸುನೀಗಿದ್ದಾರೆ ಎಂದು ವಿಶ್ವ ಆರೋಗ್ಯ ಸಂಸ್ಥೆ ಹೇಳಿದೆ.

ಚೆನ್ನಾಗಿ ಬೇಯಿಸದೆ ತಿನ್ನುವ ಮಾಂಸಗಳೂ ಕೂಡ ಖಾಯಿಲೆಗಳನ್ನು ತರಬಹುದಾದ ಪ್ರಮುಖ ಕಾರಣಗಳಲ್ಲೊಂದು. ಇನ್ನು ಸುಟ್ಟ ಬಾವಲಿಗಳನ್ನು ತಿಂದವರಿಗಿಂತಲೂ ಈ ಬಾವಲಿಗಳನ್ನು ಬೇಟೆಯಾಡಿ ಆಹಾರವಾಗಿ ಸಿದ್ಧಪಡಿಸುವವರು ರೋಗಗಳಿಗೆ ತುತ್ತಾಗುವ ಸಾಧ್ಯತೆಗಳು ಹೆಚ್ಚು. ಏಕೆಂದರೆ ಕೆಲ ಸ್ಥಳೀಯರು ನನಗೆ ಖುದ್ದಾಗಿ ಹೇಳಿರುವಂತೆ ಬೇಟೆಯಾಡುವ ಪ್ರಕ್ರಿಯೆಯಲ್ಲಿ ಜೀವಂತವಾಗಿ ಹಿಡಿಯುವ ಬಾವಲಿಗಳ ಉಗುರುಗಳು, ಹಲ್ಲುಗಳಿಂದಾಗಿ ಇಂಥವರಿಗೆ ಚಿಕ್ಕಪುಟ್ಟ ಗಾಯ/ಗೀರುಗಳಾಗುವುದು ಸಾಮಾನ್ಯ. ಇನ್ನು ಇವುಗಳನ್ನು ಕತ್ತರಿಸುವಾಗ ಬಾವಲಿಯ ರಕ್ತ ಮತ್ತು ದೇಹದ ಇತರ ದ್ರವಗಳು ಇವರುಗಳ ಸಂಪರ್ಕಕ್ಕೆ ಬಂದು ವೈರಸ್ ಹರಡುವ ಸಾಧ್ಯತೆಗಳು ಮತ್ತಷ್ಟು ಹೆಚ್ಚಾಗುವುದು ಸತ್ಯ.

ಅರಣ್ಯನಾಶ, ವನ್ಯಜೀವಿಗಳ ಸಂರಕ್ಷಣೆ ಇತ್ಯಾದಿಗಳ ಬಗ್ಗೆ ಅದೆಷ್ಟು ಮಾತನಾಡಿದರೂ ಬಡತನ, ಹಸಿವಿನಂತಹ ಸಂಗತಿಗಳು ಸಹಜವಾಗಿಯೇ ಮೊದಲ ಆದ್ಯತೆಯಾಗಿ ನಿಂತುಬಿಡುತ್ತವೆ. ಆದರೆ ಹಾಗೆಂದು ವಿಷವನ್ನೇ ತಿನ್ನಲಾದೀತೇ? “ಅಯ್ಯೋ… ಇಷ್ಟೆಲ್ಲಾ ಕಷ್ಟಪಟ್ಟು ತಿನ್ನಬೇಕೇ?”, ಎಂದು ನಾನು ಒಬ್ಬರಲ್ಲಿ ಕೇಳಿದೆ. “ಇದರಲ್ಲೇನೂ ವಿಶೇಷವಿಲ್ಲ. ಯೂರೋಪಿಯನ್ನರು ಹೇಗೆ ಮೊಲಗಳನ್ನು ತಿನ್ನುತ್ತಾರೋ, ನಾವು ಇವುಗಳನ್ನು ತಿನ್ನುತ್ತೇವೆಯಷ್ಟೇ. ಅಷ್ಟಕ್ಕೂ ಮಾಂಸಾಹಾರವಿಲ್ಲದ ಊಟವೂ ಕೂಡ ಒಂದು ಊಟವೇ?”, ಎಂದು ನಕ್ಕುಬಿಟ್ಟ ಆತ. ಆಯ್ತಪ್ಪಾ ಮಾರಾಯ, ಗಡದ್ದಾಗಿ ತಿನ್ನು ನೀನು ಎಂದು ನಾನು ಆತನಿಗೆ ಕೈಮುಗಿದೆ. ಅಂಗೋಲಾದ ನೆಲದಲ್ಲಿ ಎಬೋಲಾ ಖಾಯಿಲೆಯು ಕಾಲಿಡಲೇ ಇಲ್ಲ ಎಂಬುದು ಇವರುಗಳ ಧೈರ್ಯಕ್ಕೆ ಕಾರಣವಿರಬಹುದು. ಎಬೋಲಾ ಅಂತಲ್ಲ, ಶುಚಿತ್ವವಿಲ್ಲದ ಯಾವ ಆಹಾರವನ್ನೂ ತಿನ್ನುವುದು ಆರೋಗ್ಯದ ದೃಷ್ಟಿಯಿಂದ ಒಳ್ಳೆಯದಲ್ಲ ಎಂದು ನಾನು ನನ್ನ ಕೈಲಾದಮಟ್ಟಿಗೆ ತಿಳಿಹೇಳಲು ಪ್ರಯತ್ನಿಸಿದೆ.

“ಹೌದ್ಹೌದು, ಮೊದಲೇ ಇಲ್ಲಿ ಸರಿಯಾದ ವೈದ್ಯರುಗಳಿಲ್ಲ. ಇನ್ನಾದರೂ ಸ್ವಲ್ಪ ನೋಡಿ ತಿನ್ನಬೇಕು”, ಎಂದು ಒಪ್ಪಿಕೊಂಡ ಆತ.

Leave a Reply