ಮಕ್ಕಳ ದಿನದಂದೇ ಕಂಡ ಮುಖ..

ರೇಣುಕಾ ರಮಾನಂದ್ 

ಜಾತ್ರೆಗಳಲ್ಲಿ
ಮಾರಲ್ಪಡುತ್ತವೆ
ಎಳೆಮಕ್ಕಳ
ಕನಸುಗಳು

ಉಪವಾಸವಿದ್ದವರೊಂದಿಗೆ
ಹೊಟ್ಟೆತುಂಬಿದವರು ಮಾತ್ರ
ತಮಾಷೆ ಮಾಡುತ್ತ
ತಾಸುಗಟ್ಟಲೆ ನಿಂತು ಚೌಕಾಸಿ
ಮಾಡಬಲ್ಲರು

ಹಿಂದೆಮುಂದೆ ಎಲ್ಲ ಕೇಳಿ
ಕೊನೆಗೂ ಬಿಟ್ಟು ಹೋಗಲು
ಕಾರಣ ಸಿಗುತ್ತದೆ
ಕ್ವಾಲಿಟಿ ಸರಿ ಇಲ್ಲ

ಹತ್ತು ರೂಪಾಯಿಯ
ಆಟಿಕೆಯಲ್ಲಿ
ಬರೀ ಹಸಿವೆ
ಇರುತ್ತದೆ ಸ್ವಾಮಿ…
ನೀವು ಕ್ವಾಲಿಟಿ ಹುಡುಕುತ್ತಿದ್ದೀರಿ..

ಕಾರಣವೇನೇ ಇರಲಿ
ಕೊಲೆ ,ಸುಲಿಗೆ,ಕಳ್ಳತನ
ಗೊತ್ತಿಲ್ಲದ ಬಾಲ್ಯ
ದುಡಿಮೆಗೆ ಇದೀಗ ತಾನೇ
ಹೆಜ್ಜೆಯಿಟ್ಟಿದೆ

“ಶಾಲೆಗೆ ಹೋಗದೇ ವ್ಯಾಪಾರ
ಮಾಡ್ತಿದ್ದೀಯೇನು?”
ದಬಾಯಿಸಬೇಡಿ….
ಉತ್ತರ ಕೇಳಿದರೆ ಪೆಚ್ಚಾದೀರಿ
‘ಇಂದು ರವಿವಾರ ಅಣ್ಣಾ…’

‘ಖರೀದಿ ಮಾಡಿದ್ರೆ ತಾನೆ
ಊಟ,ಶಾಲೆ ಎಲ್ಲಾ….’
ಎಂದೇನೂ ನಿಮ್ಮ ಕಾರು ಜೋರು
ನೋಡಿ ಹೆದರಿಕೊಂಡ ಅವ
ಉಸುರಲಾರ
ಮೌನ ಮತ್ತು ಕಣ್ಣೀರು
ಹಸಿವಿನ
ಎರಡು ಮಕ್ಕಳು

‘ಮನೆಯಲ್ಲಿ ಚಿಕ್ಕವರ್ಯಾರಿಲ್ಲ ‘
ಸಬೂಬು ಹುಡುಕುತ್ತಿದ್ದೀರೇನು…?
ಬೀದಿಯಲ್ಲಿ ಹೋಗೋ
ಒಬ್ಬೊಂಟಿ ಮಗುವಿನ
ಕಣ್ಣ ಬೆಳಕಿಗಾದೀತು
ಹೆಚ್ಚೇನೂ ಚೌಕಾಸಿ ಮಾಡದೇ
ಕೊಳ್ಳಿ ಸ್ವಾಮಿ..

2 Responses

 1. kaligananath Gudadur says:

  Lingering lines

  ಹತ್ತು ರೂಪಾಯಿಯ
  ಆಟಿಕೆಯಲ್ಲಿ
  ಬರೀ ಹಸಿವೆ
  ಇರುತ್ತದೆ ಸ್ವಾಮಿ…
  ನೀವು ಕ್ವಾಲಿಟಿ ಹುಡುಕುತ್ತಿದ್ದೀರಿ..

Leave a Reply

%d bloggers like this: