ಪೂರ್ವಾಗ್ರಹ ಪೀಡಿತ ಭಾವನೆಗಳನ್ನಿಟ್ಟುಕೊಂಡೇ ಹೋದರೆ ಏನೂ ಮಾಡಲು ಸಾಧ್ಯವಿಲ್ಲ..

ಖಾಸಗಿ ವೈದ್ಯರ ಕುರಿತ ಚರ್ಚೆ ಮುಂದುವರಿದಿದೆ.

ಆಟೋ ಚಾಲಕ ವೈದ್ಯನಿಗೆ ಪಾಠ ಕಳಿಸಿದ ಬರಹ ಅವಧಿಯಲ್ಲಿ ಪ್ರಕಟವಾಗಿತ್ತು. ಅದು ಇಲ್ಲಿದೆ.

ಅದಕ್ಕೆ ಸರೋಜಿನಿ ಪಡಸಲಗಿ ಅವರು ಪ್ರತಿಕ್ರಿಯಿಸಿದ್ದರು. ಅವರ ಅಭಿಪ್ರಾಯ ವಿರೋಧಿಸಿ ಬಂದ ಪ್ರತಿಕ್ರಿಯೆಗಳಿಗೆ ಇಲ್ಲಿ ಅವರು ಉತ್ತರಿಸಿದ್ದಾರೆ-

ನಿಮ್ಮ ಅಭಿಪ್ರಾಯಗಳಿಗೂ ಸ್ವಾಗತ

ಓದುಗರ ಅನಿಸಿಕೆ ಗಳಿಗೆ ಉತ್ತರ

ಸರೋಜಿನಿ ಪಡಸಲಗಿ

ಮೊದಲು ‘ಅವಧಿ’ಗೆ ನನ್ನ ಧನ್ಯವಾದಗಳು..
ನನ್ನ ಪುಟ್ಟ ಅನಿಸಿಕೆ ಗೆ ಬಂದ ಪ್ರತಿಕ್ರಿಯೆಗಳನ್ನ ನೋಡಿ ತುಂಬಾ ಖುಷಿ ಆಯ್ತು.
ಇದು ವಾಸ್ತವಿಕತೆಯ ಒಂದು ಸಂಕ್ಷಿಪ್ತ ಚಿತ್ರಣ ಅಷ್ಟೇ. ಅದು ಸಂಕುಚಿತ ಮನೋಭಾವ ಅನಿಸಿದ್ದರೆ ಉಪಾಯವಿಲ್ಲ.

ಡಾಕ್ಟರ್ರು ದೇವರೇ ಅಂತ ಹೇಳ್ತಾ ಇಲ್ಲ. ಆದರೆ ಸಮಯಕ್ಕೆ ಸರಿಯಾಗಿ ಸೇವೆ ನೀಡೋ, ಜೀವ ಉಳಿಸುವ ವೈದ್ಯರು ದೇವರ ಸಮಾನನೇ. ಯಾವ ವೈದ್ಯರೂ ತನ್ನನ್ನು ದೇವರು ಅಂತ ಹೇಳಿ ಕೊಳ್ಳೋದಿಲ್ಲ. ಆ ಬಡಾಯಿಗೆ ಪುರಸೊತ್ತೂ ಇರೋದಿಲ್ಲ ಅವರಿಗೆ. ಇದು ಬಲ್ಲವರ ಎಣಿಕೆ ಹೇಳಿಕೆ. ವೈದ್ಯವೃತ್ತಿಯೂ ಒಂದು ವೃತ್ತಿಯೇ. ನಿಜ. ಆದರೆ ಉಳಿದ ವೃತ್ತಿಗಳಿಗೂ ವೈದ್ಯಕೀಯ ವೃತ್ತಿಗೂ ವ್ಯತ್ಯಾಸವೇ ಇಲ್ಲವೇ? ನಿಮ್ಮ ಮನಸ್ಸಾಕ್ಷಿಯನ್ನು ಕೇಳಿ. ಇಲ್ಲಿ ಅದರ ಹೆಚ್ಚಿನ ವಿವರಣೆ ಬೇಕಿಲ್ಲ ಅನಕೋತೀನಿ..

ಡಾಕ್ಟರ್ ಅಂದರೆ ಹಣ ಸುಲಿಯುವ ಬೇಜವಾಬ್ದಾರಿ ವ್ಯಕ್ತಿ ಅನ್ನೋ ಪೂರ್ವಾಗ್ರಹ ಪೀಡಿತ ಭಾವನೆಗಳನ್ನಿಟ್ಟುಕೊಂಡೇ ಹೋದರೆ ಏನೂ ಮಾಡಲು ಸಾಧ್ಯವಿಲ್ಲ.
ವೈದ್ಯರ ತಲೆ ಮೇಲೆ ಕೊಂಬು ಇಟ್ಟುಕೊಂಡಿರ್ತಾರೆ ಅನ್ನೋದು ಸರೀನಾ? ಏನೂ ಅರಿಯದ ಗೊತ್ತಿಲ್ಲದ ಒಬ್ಬ ಸಾಮಾನ್ಯ ವ್ಯಕ್ತಿ ಯೇ ವೈದ್ಯರಿಗೆ ಬಾಯಿಗೆ ಬಂದ ಹಾಗೆ ಅನ್ನಬೇಕಾದರೆ ಅವರಿಗೇ ಅಷ್ಟು ಕೊಂಬಿರಬೇಕಾದರೆ, ವೈದ್ಯರಿಗೆ ಯಾಕೆ ಬೇಡ???

ಅವರೇನು ಯಾರನ್ನೂ ನಮ್ಮ ಹತ್ರಾನೇ ಟ್ರೀಟ್ಮೆಂಟ್ ಗೆ ಬನ್ನಿ ಅಂತ ಕರೀತಿಲ್ಲವಲ್ಲ!! ಹೋಗಬೇಡಿ ಕೊಂಬಿರುವ ವೈದ್ಯರ ಬಳಿ. ಆದರೆ ಈ ಥರದ ಯೋಚನೆ, ಮಾತುಗಳು ಬೇಡ. ಒಂದು ನಾಲ್ಕು ದಿನ ಎಲ್ಲಾ ಆಸ್ಪತ್ರೆಗಳನ್ನ ಬಂದ್ ಮಾಡಿದ್ರೆ ಏನಾಗುತ್ತದೆ ಎಂಬುದನ್ನು ಯೋಚಿಸಿ ನೋಡಿ.

ಲಕ್ಷಾಂತರ ರೂಪಾಯಿ ಖರ್ಚಾದರೂ ಪೇಷಂಟ್ ಉಳೀಲಿಲ್ಲ ಅನ್ನೋ ಜನ ಇರ್ತಾರೆ. ಇಷ್ಟು ಖರ್ಚು ಮಾಡಿದ್ರೇನೇ ಈ ರೋಗಿ ಉಳೀಯೋದು ಅಂತ ಅವರೇನೂ ಹೇಳೋದಿಲ್ಲ. ನಿಮ್ಮ ಇಷ್ಟ ಅದು. ಅವರ ಪ್ರಾಮಾಣಿಕ ಪ್ರಯತ್ನ, ಕಾಳಜಿ ಇದ್ದೇ ಇರುತ್ತದೆ. ಅವರೇನೂ ದೇವರಲ್ಲ ಅಂತಾನೂ ನೀವೇ ಹೇಳ್ತೀರಲ್ಲ?? ಸರ್ಕಾರದ ನಿಯಂತ್ರಣದಿಂದ ನಿಮ್ಮ ಪೇಷಂಟ್ ಉಳೀಬಹುದಿತ್ತಾ ಹೇಳಿ.

ಪ್ರೈವೇಟ್ ಸ್ಕೂಲ್ ಗಳಿಗೆ ಲಕ್ಷಾಂತರ ರೂಪಾಯಿ ಸುರಿದು ಸೇರಿಸೋ ಬದಲು ಪುಕ್ಕಟೆ ಬಿಸಿಯೂಟ ಕೊಟ್ಟು ಕಲಿಸುವ ಸರ್ಕಾರೀ ಶಾಲೆಗೇ ಮಕ್ಕಳನ್ನು ಸೇರಿಸಬಹುದಲ್ಲ? ಯಾಕಿಲ್ಲ? ರಸ್ತೆ ಬದಿಯಲ್ಲಿ ನಿಂತು ದೋಸೆನ ಹತ್ತು ರೂಪಾಯಿಗೇ ತಿನ್ನಬಹುದು. ದುಬಾರಿ ಹಣ ಕೊಟ್ಟು ಸ್ಟಾರ್ ಹೋಟೆಲ್ ನಲ್ಲಿ ತಿನ್ನೋದ್ಯಾಕೆ? ಅದೇ ಉತ್ತರ ಇಲ್ಲಿ ಖಾಸಗಿ ವೈದ್ಯ ವೃತ್ತಿಯ ಬಗೆಗೂ.

ನಿಯಮಾವಳಿಗಳಿರಲಿ, ಆದರೆ ನಿರಾತಂಕವಾಗಿ, ನಿರ್ಬಾಧಿತವಾಗಿ ರೋಗಿಗಳ ಉಪಚಾರ, ಹಾಗನ್ನಲ್ಲ ಮಹಾ ಜನತೆ ಹಣ ಕೊಟ್ಟಿರುತ್ತದೆ, ರೋಗಿಗಳ ಸೇವೆಗೆ, ಉಪಚಾರಕ್ಕೆ ತಕ್ಕಮುಕ್ತ ವಾತಾವರಣ ಇರಲಿ. ಹೆಚ್ಚಿನ ಒತ್ತಡ ಬೇಡ. ವೈದ್ಯರಲ್ಲಿರುವ ಮಾನವೀಯ ಮೌಲ್ಯಗಳೊಂದಿಗೆ ಚೆಲ್ಲಾಟ ಬೇಡ.ತನ್ನ ಹಣದಿಂದ ಕಲಿತು, ಸ್ವಂತ ಪರಿಶ್ರಮದಿಂದ ಮುಂದೆ ಬಂದು, ತನ್ನ ಸ್ವಂತಿಕೆಯನ್ನು, ಜಾಣತನ ಉಪಯೋಗಿಸಿ ನಿಮ್ಮ ಜೀವ ಕಾಪಾಡಲು ಹೆಣಗುವ ವೈದ್ಯರ ವಿರುದ್ಧ ತಿರುಗಿ ಬೀಳುವ ಪರಿಗೆ ಏನು ಹೇಳಲಿ ತಿಳೀತಿಲ್ಲ. ನಿಮ್ಮನ್ನ ಹಗಲುದರೋಡೆ ಮಾಡುವವರನ್ನು ಬೆಂಬಲಿಸಿ ವೈದ್ಯರನ್ನು ಬಲಿಪಶು ಮಾಡುವುದು ಯಾಕೆ?

ಒಬ್ಬ ರಾಜಕಾರಣಿ ಬರಬೇಕಾದರೆ ಸೆಕ್ಯೂರಿಟಿ ಗಾರ್ಡ್ ಗಳ ಸಾಲೇ ಇರ್ತದೆ. ಆದರೆ ವೈದ್ಯರ ಸುರಕ್ಷತೆಯ ಬಗ್ಗೆ ಯಾರಾದರೂ ಯೋಚಿಸಿದ್ದೀರಾ?? ರೋಗಿಯ ಉಸಿರು ನಿಂತು ಹೋಗುವ ಹಾಗಿರುವಾಗ ಅಥವಾ ದಾರಿಯಲ್ಲಿ ನಿಂತೇ ಹೋಗಿರುವ ಪರಿಸ್ಥಿತಿಯಲ್ಲಿ ಆಸ್ಪತ್ರೆಗೆ ತಂದು ಅದಕ್ಕೆ ಆ ಡಾಕ್ಟರ್ ನೇ ಹೊಣೆ ಎಂದು ಹಿಗ್ಗಾಮುಗ್ಗಾ ಥಳಿಸಿ ನಿಂದಿಸಲೂ ಜನತೆ ಹಿಂದೆ ಮುಂದೆ ನೋಡುವುದಿಲ್ಲ.

ಸಮಾಜವನ್ನು ಅತೀ ಹತ್ತಿರದಿಂದ ನೋಡುವವ ವೈದ್ಯ.ರಾತ್ರಿ೧೨ಕ್ಕೆ ಬರಲಿ, ಮುಂಜಾನೆ ೩ ಗಂಟೆಗೆ ಬರಲಿ ಎದ್ದೋಡಿ ಬಂದು ನೋಡುವವ ವೈದ್ಯ. ಹಬ್ಬ-ಹರಿದಿನ ಇರಲಿ, ಮನೇಲಿ ಹುಟ್ಟು ಹಬ್ಬದ ಸಂಭ್ರಮ ಸಡಗರ ಇರಲಿ, ಸಾವಿನ ದುಃಖ ಇರಲಿ ಬಿಟ್ಟು ಬರುವುದೊಬ್ಬನೇ ನಿಮ್ಮ ಕಾಳಜಿಗೆ, ಆತ ವೈದ್ಯ. ಅವರನ್ನು ಬೆಂಬಲಿಸದಿರಲಾದೀತೆ? ಇದು ಸಂಕುಚಿತತೆಯೋ, ಪೂರ್ವಾಗ್ರಹ ಪೀಡಿತವೋ ನಾನರಿಯೆ.

ನೀವೇ ಡಾಕ್ಟರ್ ಆಗಿದ್ರೆ ಹೇಗೆ ಇರತಿದ್ರಿ ಹೇಳಿ. ಅತೀ ನಿಯಂತ್ರಣ ಹೇರುತ್ತಾ ಹೋದ್ರೆ ಯಾರೂ ರಿಸ್ಕ್ ತೆಗೆದುಕೊಳ್ಳುವ ತೊಂದರೆಗೆ ಹೋಗೋದಿಲ್ಲ.ಡಾಕ್ಟರನ್ನ ಕ್ರಿಮಿನಲ್ ಅಪರಾಧಿಗಳ ಥರಾ ನೋಡಿದರೆ ಹೇಗಾದೀತು? ಇದರಿಂದ ತೊಂದರೆಯಾಗೋದು ಜನತೆಗೆ ಎಂಬ ಅರಿವಿರಲಿ.

ನಾನು ಒಬ್ಬ ನಿವೃತ್ತ ವೈದ್ಯರ ಪತ್ನಿ. ಹೀಗಾಗಿ ಒಬ್ಬ ವೈದ್ಯನ ಜೀವನದ ಒಳಹೊರಗನ್ನರಿತವಳು. ಅದೂ ತುಂಬಾ ಹತ್ತಿರದಿಂದ, ಆ ಅನುಭವಗಳ ಬಿಸಿಯುಂಡವಳು. ಅವರ ,೨೪ ಗಂಟೆಗಳ ಅವಿಶ್ರಾಂತ ದುಡಿಮೆ, ಯಾತನೆ ನೋಡಿ ರೋಸಿ ಹೋದ ನನ್ನ ಮನಸ್ಸು ನನ್ನ ಮಕ್ಕಳನ್ನು ವೈದ್ಯಕೀಯ ಶಿಕ್ಷಣಕ್ಕೆ ಸೇರಿಸಲೊಪ್ಪಲಿಲ್ಲ.

ಇಂಥ ಎಷ್ಟು ಜನ ಪಾಲಕರಿರ್ತಾರೋ ಯಾರು ಬಲ್ಲರು? ಇಂದಿನ ವಾತಾವರಣ ನೋಡಿದರೆ ಯಾವ ತಂದೆ ತಾಯಿಯೂ ತಮ್ಮ ಮಕ್ಕಳು ಡಾಕ್ಟರ್ ಆಗಲಿ ಎಂದು ಬಯಸಲಿಕ್ಕಿಲ್ಲ. ಡಾಕ್ಟರನ್ನ ಆಮದು ಮಾಡಿಕೊಳ್ಳುವ ಪ್ರಸಂಗ ಬಂದರೆ ಅಚ್ಚರಿಯಿಲ್ಲ. ಇನ್ನೂ ಒಂದು ವಿಷಯ-ಈ ಅತೀ ನಿಯಂತ್ರಣ, ನಿರ್ಬಂಧ.. corruptionಗೆ ದಾರಿಯಾಗಲೂಬಹುದು. ಯಾಕೆಂದ್ರೆ ಅವರೂ ಜೀವಿಸಬೇಕಲ್ಲ !!!!! ವೈದ್ಯರೇನೂ ದೇವರಲ್ಲವಲ್ಲ !!!!!

4 Responses

 1. ಬರಹಗಾರ್ತಿಗೆ ಉತ್ತರಿಸಲು ಅವಕಾಶ ಮಾಡಿಕೊಟ್ಟ ಅವಧಿಗೆ ಭಲೇ ಅನ್ನ ಬೇಕು. ಡಾಕ್ಟರಿಕೆಯೂ ಒಂದು ವೃತ್ತಿಯೇ ಎನ್ನುವವರು ಅವರ ಮುಷ್ಕರದಿಂದ ಜನ ಸಾಯುತ್ತಿದ್ದಾರೆ. ಸಂಪು ಹೂಡುವ ಹಕ್ಕು ಇಲ್ಲ ಅನ್ನುವವರಿದ್ದಾರೆ. You can’t have both ways. “ನೀವೇ ಡಾಕ್ಟರ್ ಆಗಿದ್ರೆ ಹೇಗೆ ಇರತಿದ್ರಿ ಹೇಳಿ?“ ಎನ್ನುವ ನಿವೃತ್ತ ವೈದ್ಯರ ಪತ್ನಿಯ ಪ್ರಶ್ನೆ, ತನ್ನ ಮಕ್ಕಳನ್ನು ಡಾಕ್ಟರ್ ಆಗಲು ಬಿಡದ ನಿರ್ಧಾರ ಎರಡೂ ಮನಸ್ಸನ್ನು ತಟ್ಟಿತು.

 2. .ಮಹೇಶ್ವರಿ.ಯು says:

  ತಮ್ಮ ಹಸಿವನ್ನೂ ದಣಿವನ್ನೂ ಲೆಕ್ಕಿಸದೆ ಮಾನವೀಯ ಕಾಳಜಿಯಿಂದ ದುಡಿಯುವ ವೈದ್ಯರನ್ನು ನಾನೂ ಕಂಡಿದ್ದೇನೆ. ಅವರ ಕೈಮೀರಿ ರೋಗಿ ಮಡಿದ ಕಾರಣಕ್ಕೆ ರೋಗಿಯ ಬಂಧುಗಳಿಂದ ಬೆದರಿಕೆಯನ್ನು,ವೃಥಾ ಹಿಂಸೆಯನ್ನು ಸಂಕಟವನ್ನು ಅನುಭವಿಸಿದ ವೈದ್ಯರ ಬಗ್ಗೆ ಕೇಳಿಬಲ್ಲೆ. ಹೀಗಿರುವಾಗ ಸಾರಾಸಗಟಾಗಿ ವೈದ್ಯರನ್ನು ಕೇವಲ ಹಣಮಾಡುವವರು, ಮಾನವೀಯ ಕಾಳಜಿಯಿಲ್ಲದವರು ಎನ್ನುವುದು ವಾ.ಸ್ತವ ಕಂಡಿತ ಅಲ್ಲ.

 3. kvtirumalesh says:

  ಈ ವಿಧೇಯಕದಲ್ಲಿ ಏನಿದೆಯೋ ನನಗೆ ಗೊತ್ತಿಲ್ಲ. ಅದರೆ ಕೆಲವು ‘ತ್ರೆಟನಿಂಗ್’ ವಾಕ್ಯಗಳಿವೆ ಎಂದು ಕೇಳಿದ್ದೇನೆ. ಅದಲ್ಲದಿದ್ದರೆ ವೈದ್ಯರು ಮುಷ್ಕರಕ್ಕೆ ಇಳಿಯುತ್ತಿರಲಿಲ್ಲ ಎನಿಸುತ್ತದೆ. ಇಡೀ ವಿಧೇಯಕದ ಕರಡನ್ನು ಸಾರ್ವಜನಿಕರ ಮುಂದೆ ಇರಿಸಬೇಕಿತ್ತು. ಸರಕಾರ ಹಾಗೆ ಈಗಲಾದರೂ ಮಾಡಬಹುದಾಗಿದೆ.
  ಖಾಸಗಿ ವೈದ್ಯರ ನೆರವಿನಿಂದ ನಾನು ಹಲವು ಬಾರಿ ಪ್ರಾಣಾಂತಿಕ ಕಾಯಿಲೆಗಳಿಂದ ಪಾರಾಗಿದ್ದೇನೆ. (ಒಂದು ಸಲ ಹಾವು ಕಡಿತದಿಂದ ಸರಕಾರಿ ಆಸ್ಪತ್ರೆಯ ವೈದ್ಯರೂ ನನ್ನನ್ನು ಬಚಾವು ಮಾಡಿದ್ದಾರೆ.) ಅವರೆಲ್ಲರೂ ‘ಆದರ್ಶ’ ವೈದ್ಯರರೆಂದು ನಾನು ಹೇಳುವುದಿಲ್ಲ. ಆದರೆ ತಮ್ಮ ಕೈಲಾದುದನ್ನು ಅವರು ಮಾಡಿದ್ದಾರೆ. ಇದು ವರೆಗಿನ್ಇ ಡೀ ಜೀವಮಾನದಲ್ಲಿ ಅದೆಷ್ಟೋ ಬಾರಿ ವೈದ್ಯಕೀಯ ನೆರವನ್ನು ಪಡೆದಿದ್ದೇನೆ. ಮೊನ್ನೆ ಮೊನ್ನೆಯಷ್ಟೇ ನನ್ನ ಪತ್ನಿ ಹೈಪೋಗ್ಲಿಸೆಮಿಯಾದಿಂದ ಪಾರಾಗಲು ವೈದ್ಯರು ಸಹಾಯ ಮಾಡಿದರು.
  ನಾವು ವೈದ್ಯರನ್ನು ಕೇವಲ ದುಡ್ಡು ಕೊಟ್ಟು ಪಡೆಯುವ ಸೇವೆಯೆಂದು ನೋಡಬಾರದು. ಅವರ ಕಾರಣದಿಂದ ಈವತ್ತು ಹೆಚ್ಚೆಚ್ಚು ಜನರು ೯ಗರ್ಭಿಣಿಯರು, ವೃದ್ಡರು, ತೀವ್ರ ಕಾಯಿಲೆಯವರು) ಬದುಕಿ ಉಳಿದಿದ್ದಾರೆ. ರೋಗದಿಂದ ಸಾಯುವವರ ಸಂಖ್ಯೆ ಅಗಾಧ ಪ್ರಮಾಣದಲ್ಲಿ ಕಡಿಮೆಯಾಗಿದೆ. ಸಮಾಜ ಮತ್ತು ವೈದ್ಯರು ಪರಸ್ಪರ ಸೌಹಾರ್ದದಿಂದ ಇರಬೇಕು–ಈ ಮಾತು ಎಲ್ಲಾ ಕ್ಷೇತ್ರಗಳಿಗೂ (ಉದಾ: ಶಿಕ್ಷಣ) ಅನ್ವಯಿಸುತ್ತದೆ.
  ಸರಕಾರ ತನ್ನ ವೈಫಲ್ಯವನ್ನು ಖಾಸಗಿ ವೈದ್ಯರ ತಲೆ ಮೇಲೆ ಹೇರುವುದು ಸರಿಯಲ್ಲ. ಅದು ಬಡವರಿಗೆ ಆರೋಗ್ಯ ವಿಮೆ ಮಾಡಿಸುವ ನಿಟ್ಟಿನಲ್ಲಿ ಯೋಚಿಸಬೇಕು, ಹಾಗೂ ಸರಕಾರಿ ಆಸ್ಪತ್ರೆಗಳನ್ನು ಸ್ಪರ್ಧಾತ್ಮಕ ರೀತಿಯಲ್ಲಿ ನಡೆಸಬೇಕು.
  ***
  ವೈದ್ಯರನ್ನು ಲೆಕ್ಕ ಬರೆಯುವವರನ್ನಾಗಿ ಮಾಡದಿರಿ. ಅಂತೆಯೇ ಅವರ ಮೇಲೆ ಫಿರ್ಯಾದಿನ ತೂಗುಗತ್ತಿ ಇರಿಸಬೇಡಿ. ಆರೋಗ್ಯ ವಿಜ್ಞಾನ ಎಷ್ಟೇ ಮುಂದುವರಿದರೂ ಪ್ರತಿಯೊಂದು ಕೇಸು ಕೂಡ ವಿಶಿಷ್ಟವಾಗಿರುತ್ತದೆ. ಹಾಗಿರುತ್ತ, ಅಲ್ಲಿ ವೈದ್ಯಕೀಯ ನೂರಕ್ಕೆ ನೂರರಷ್ಟು ಗೆಲ್ಲುತ್ತದೆ ಎನ್ನುವ ಹಾಗಿಕಿಲ್ಲ. ಇದನ್ನು ನಾವು ತಿಳಿದಿರಬೇಕು. ವೈದ್ಯರಿಗೆ ಕೆಲಸಮಾಡಲು, ಯೋಚಿಸಲು ಸ್ವಲ್ಪ ಮುಕ್ತ ವಾತಾವರಣ ಮತ್ತು ಕಾಲಾವಕಾಶ ಅಗತ್ಯವಿದೆ.
  ಮಗುವನ್ನು ಮೀಯಿಸಿದ ನೀರಿನೊಂದಿಗೆ ಮಗುವನ್ನೂ ಚೆಲ್ಲದಿರಿ!

  ಕೆ.ವಿ.ತಿರುಮಲೇಶ್

 4. Shama, Nandibetta says:

  Wah what a sensible article. I second every word of it.

Leave a Reply

%d bloggers like this: