ಒಂದು ನಿಮಿಷದ ಮೌನ ಗೌರವ ಸಲ್ಲಿಸೋಣ ಎನ್ನುವ ತೀರ್ಮಾನಕ್ಕೆ ಬಂದರು..

4

ತಲೆ ಮೇಲೆ ಪ್ರಜ್ವಲಿಸುತ್ತಿದ್ದ ಸೂರ್ಯ ನಿಧಾನಕ್ಕೆ ಪಶ್ಚಿಮಕ್ಕೆ ಜರುಗತೊಡಗಿದ. ಬಿಸಿಲಿಳಿಯುತ್ತ ಬಂದ ಹಾಗೇ ನೀರು ಬಣ್ಣ ಬದಲಿಸಿಕೊಂಡು ಕಡುನೀಲಿಯಾಗತೊಡಗಿತ್ತು.

ನಮ್ಮ ಕೊರೆಕಲ್ ಸಾಗುತ್ತಿದ್ದ ನೀರಿನಡಿ ಅದೆಷ್ಟು ಮನೆ ಮಠಗಳಿದ್ದವೋ, ಕಷ್ಟವೋ, ಸುಖವೋ ಬದುಕು ನಡೆಸುತ್ತಿದ್ದ ಅದೆಷ್ಟು ಸಂಸಾರಗಳಿದ್ದವೋ, ಫಲವತ್ತಾದ ತೋಟ ಗದ್ದೆಗಳಿದ್ದವೋ? ಸಾವಿರಾರು ವರ್ಷಗಳಿಂದ ಕಟ್ಟಿಕೊಂಡಿದ್ದ ಜೀವನ ಕ್ರಮವೊಂದು ಈ ಜಲರಾಶಿಯ ತಳದಲ್ಲಿ ಅವಸಾನಗೊಂಡಿದೆ.

ಆ ಅವಶೇಷಗಳ ಮೇಲ್ಗಡೆ ನಾವು ಈ ಕಾಲಘಟ್ಟದಲ್ಲಿ ಸಾಗುತ್ತಿದ್ದೇವೆ. ಎಲ್ಲೋ ಆಗುವ ಅಭಿವೃದ್ಧಿಗೆ ಇಲ್ಲಿನ ಒಂದು ಜೀವ ಸಂಸ್ಕøತಿಯೇ ಬಲಿಯಾಯಿತಲ್ಲ. ಪರಂಪರಾಗತವಾಗಿ ಒಂದೆಡೆ ಬದುಕುತ್ತಿದ್ದವರು ಪುರ್ನವಸತಿ ಕಲ್ಪಿಸಲೆಂದು ಸರಕಾರ ಕೊಟ್ಟ ನೋಡದ, ಕೇಳದ ಊರುಗಳಿಗೆ ಗುಳೆ ಹೋಗಬೇಕಾಯಿತಲ್ಲ. ಸರಕಾರದಿಂದ ಪರಿಹಾರ ಪಡೆದವರಿಗಿಂತ ಅದು ದೊರೆಯದೇ ಈಗಲೂ ಪರಿತಪಿಸುತ್ತಿರುವ ಅದೆಷ್ಟು ಮಂದಿ ಇದ್ದಾರೋ ಎನ್ನುವ ಎನ್ನುವ ಖೇದ ಬೇಡವೆಂದರೂ ಮನಸ್ಸಿಗೆ ನುಗ್ಗತೊಡಗಿತ್ತು.

ಅಲ್ಲಿನ ನೀರವತೆಯೋ, ಹೆಪ್ಪುಗಟ್ಟಿದಂತಿರುವ ಮೌನವೋ, ನಾನೂ ಮೌನಿಯಾಗಿಬಿಟ್ಟಿದ್ದೆ. ಸುಮ್ಮನೆ ಒಂದಷ್ಟು ಹೊತ್ತು ಒಂಟಿಯಾಗಿದ್ದೆನೆಂದರೆ ನನಗೆ ತಗುಲುವ ರೋಗ ಇದು; ಬೇಡ ಬೇಡವೆಂದರೂ ನನ್ನೊಳಗೆ ನಾನು ಇಳಿದುಬಿಟ್ಟಿರುತ್ತೇನೆ. ನನಗೆ ನೆನಪು ಅಂತ ಬಂದ ಕಾಲದಿಂದ ಹಿಡಿದು ಈವರೆಗಿನ ಘಟನೆ, ಕೇಳಿದ ಮಾತು, ಅನುಭವ, ಓದು ಎಲ್ಲವನ್ನೂ ಮತ್ತೆ ಮತ್ತೆ ಜ್ಞಾಪಿಸಿಕೊಂಡು ಒದ್ದಾಡುತ್ತಿರುತ್ತೇನೆ.

ಕೊರೆಕಲ್‍ನಲ್ಲಿ ಕೂತು ಹೋಗುವಾಗ ಯಾಕೋ, ಏನೋ ಭಾವುಕನಾಗಿಬಿಟ್ಟಿದ್ದೆ.

ಇದ್ದಕ್ಕಿದ್ದಂತೇ ಗಾಳಿ ಬಲವಾಗಿ ಬೀಸತೊಡಗಿತ್ತು. ಆವರೆಗೂ ನಿಶ್ಚಲವಾಗಿದ್ದ ನೀರಿನಲ್ಲಿ ದೊಡ್ಡ ದೊಡ್ಡ ತೆರೆಗಳು ಏಳತೊಡಗಿ, ಅದರಿಂದ ಕೊರೆಕಲ್‍ಗಳು ತುಯ್ದಾಡತೊಡಗಿದವು. ಮಡುಗಟ್ಟಿದ ಆ ಶರಧಿ ನಿಧಾನಕ್ಕೆ ಉದ್ರೇಕಗೊಳ್ಳತೊಡಗಿತು. ನೀರ ಏರಿಳಿತಕ್ಕೆ ಅದರಲ್ಲಿ ಕುಳಿತವರು ಓಲಾಡತೊಡಗಿದೆವು. ನೋಡ ನೋಡುತ್ತಿದ್ದಂತೇ ನೇರವಾಗಿ, ಒಂದು ಅಂತರದಲ್ಲಿ ಸಾಗುತ್ತಿದ್ದ ನಮ್ಮ ತಂಡದ ಎಂಟು ಕೊರೆಕಲ್‍ಗಳೂ ಗಾಳಿಯ ಬಿರುಸಿಗೆ ದೂರ ದೂರವಾಗತೊಡಗಿದವು. ಶ್ರಮಪಟ್ಟು ಹುಟ್ಟು ಹಾಕಿ ಹೋಗಬೇಕಾದ ದಿಕ್ಕಿನತ್ತ ಸಾಗಲು ಪ್ರಯತ್ನಿಸಿದರೂ ಸಾಧ್ಯವಾಗದೇ ದಿಕ್ಕುಪಾಲಾಗಿ ಚದುರತೊಡಗಿದೆವು.

ನಿಜಕ್ಕೂ ನನಗೆ ಭಯವೆನ್ನಿಸತೊಡಗಿತು. ಅಲೆಯ ರಭಸಕ್ಕೆ ಮಾರಗಲದ ಕೊರೆಕಲ್ ಮೊಗಚಿಕೊಂಡರೆ ಏನೂ ಆಶ್ಚರ್ಯವಿಲ್ಲ! ಕೆಳಗೆ ಕನಿಷ್ಠ ಎರಡು ನೂರು ಅಡಿ ಆಳ, ಲೈಪ್ ಜಾಕೆಟ್ ತೊಟ್ಟಿದ್ದಕ್ಕೆ ಮುಳುಗದಿದ್ದರೂ ಯಾವ ಕಡೆ ಅಂತ ಈಜುವದು? ನೀರು ಕುಡಿದು, ಕುಡಿದೇ ಸಾಯುವದು ಖಾತ್ರಿ ಅನ್ನಿಸಿಬಿಟ್ಟಿತು. ಚೂರು ಸರಿದಾಡಿದರೂ ಎಲ್ಲಿ ಕೊರೆಕಲ್ ಮಗುಚಿಕೊಳ್ಳುತ್ತೋ ಎನ್ನುವ ಆತಂಕ. ಅದೇ ಹೊತ್ತಿಗೆ ಲಕ್ಷ್ಮಿನಾರಾಯಣ ಹಾಗೇ ಹಾಕಿ ಹುಟ್ಟು, ಹೀಗೇ ಹಾಕಿ ಎಂದು ಸೂಚನೆ ಕೊಡುತ್ತ ಅತ್ತಿತ್ತ ಸರಿದಾಡತೊಡಗಿದ್ದರು. ಅವರಿಗೂ ಭಯವಾಗಿರಬೇಕು. ಮೊದಲೇ ಧಡೂತಿ ಬೇರೆ, ಯಾವ ಬದಿಗಾದ್ರೂ ಜರುಗಿದರೂ ಅಂದ್ರೆ ಎಲ್ಲರೂ ನೀರುಪಾಲು ಗ್ಯಾರಂಟಿ ಅನ್ನಿಸಿ ಉಳಿದ ಮೂವರು ಅವರಿಗೆ ಅಲುಗಾಡದೇ ಕೂರಿ ಎಂದು ಗದರಿದೆವು.

ಸಮುದ್ರದಲ್ಲಿ ಎದುರಾಗುವ ಇಂಥ ವಿಪತ್ತುಗಳ ಬಗ್ಗೆ ಕೇವಲ ಓದಿದ್ದು ಮಾತ್ರವೇ ಹೊರತು ನನಗೆಲ್ಲಿಂದ ಇಂಥ ಅನುಭವ ಬರಬೇಕು? ಅದು ಸಮುದ್ರವಾಗಿರದಿದ್ದರೂ ಅದಕ್ಕೆ ಯಾವುದೇ ರೀತಿಯಲ್ಲೂ ಕಡಿಮೆ ಇರಲಿಲ್ಲ! ಬಿರುಸಾದ ಗಾಳಿ, ಮುಖಕ್ಕೇ ರಾಚುವಂತೆ ಏಳುತ್ತಿದ್ದ ಅಲೆಗಳು, ಕುಣಿದಾಡುವ ಕೊರೆಕಲ್ ಇವುಗಳ ನಡುವೆ ಮುಕ್ಕಾಲು ಗಂಟೆಗೂ ಹೆಚ್ಚು ಕಾಲ ನಾವು ಸಾವು-ಬದುಕಿನ ನಡುವೆ ತುಯ್ದಾಡಿದ್ದೆವು. ಮಾಮೂಲಿಯಾಗಿ ಕೊರೆಕಲ್‍ನಲ್ಲಿ ಕುಳಿತಾದ ಅದರ ಮೇಲ್ಭಾಗದ ಅಂಚಿನವರೆಗೂ ಅದು ನೀರಿನಲ್ಲಿ ಮುಳುಗಿರುತ್ತದೆ. ತುಸು ಅಡ್ಡಲಾದರೂ ನೀರು ಒಳಗೆ ಬರುವಂತಿರುತ್ತದೆ. ಅಂಥದ್ದರಲ್ಲಿ ಅಬ್ಬರದ ತೆರೆಗಳು ಬಂದಾಗ ನೀರು ನುಗ್ಗದಿರುತ್ತದೆಯೇ? ಇಬ್ಬರು ಹುಟ್ಟು ಹಾಕಿದರೆ ಮತ್ತಿಬ್ಬರು ಒಳಬಂದ ನೀರನ್ನು ಹೊರ ಚೆಲ್ಲಬೇಕಿತ್ತು.

ನಾನಂತೂ ಮೊದಲಬಾರಿಗೆ ಇಂಥ ಯಾನದಲ್ಲಿ ಪಾಲ್ಗೊಂಡಿದ್ದೆ. ಲಕ್ಷ್ಮಿನಾರಾಯಣ ಏನೇ ಪೊಕಳೆ ಹೊಡೆದಿದ್ದರೂ ಅವರಿಗೂ ಈ ಅನುಭವ ಹೊಸತೇ! ಹುಟ್ಟು ಹಾಕುವದಿರಲಿ, ನೆಟ್ಟಗೆ ಕೊರೆಕಲ್‍ನಲ್ಲಿ ಕೂರಲಿಕ್ಕೆ ಬರದ ಅವರು, ಏನೂ ಗೊತ್ತಿಲ್ಲದ ನಾನು, ನಮ್ಮ ಕೊರೆಕಲ್‍ನಲ್ಲಿದ್ದ ಉಳಿದಿಬ್ಬರೂ ನಮ್ಮಂಥವರೇ ಆಗಿದ್ದರೆ ಖಂಡಿತಕ್ಕೂ ನಾವು ಆ ವಿಪತ್ತಿನಲ್ಲಿ ನೀರಿನಲ್ಲಿ ಮುಳುಗುವದು ಗ್ಯಾರಂಟಿಯಾಗಿತ್ತು. ಆದರೆ ಸಾಕಷ್ಟು ಬಾರಿ ದೋಣಿ, ಕೊರೆಕಲ್‍ಗಳಲ್ಲಿ ಸಂಚಾರ ಮಾಡಿದ್ದ, ಇಂಥ ಸಂದರ್ಭವನ್ನು ನಿಭಾಯಿಸಬಲ್ಲ ಅನುಭವವಿದ್ದ ನಿಟ್ಟೂರು ಸಮೀಪದ ಯಾವುದೋ ಊರಿನ ಯೋಗೀಶ್ ಹಾಗೂ ಪರಮೇಶ್ವರ ನಮ್ಮ ಜೊತೆಗಿದ್ದ ಕಾರಣ ಅವತ್ತು ನಾವು ಬಚಾವಾಗಿದ್ದೆವು.

ನಿಧಾನಕ್ಕೆ ಗಾಳಿಯ ಅಬ್ಬರ ಕಡಿಮೆಯಾಗುತ್ತ ಬಂದ ಕಾರಣ ಅಲೆಗಳ ಹೊಯ್ದಾಟವೂ ತಹಬಂದಿಗೆ ಬರತೊಡಗಿತು. ಸುತ್ತ ನೋಡಿದರೆ ಉಳಿದ ಕೊರೆಕಲ್‍ಗಳು ದೂರದಲ್ಲಿ ನೀರ ಮೇಲೆ ತೇಲುವ ಪುಟ್ಟ ಪಾತ್ರೆಯಂತೆ ಕಾಣುತ್ತಿದ್ದವು. ಒಂದೊಂದು ಕೊರೆಕಲ್‍ಗಳಿಗೂ ಮೈಲಿಗಟ್ಟಲೆ ಅಂತರವಿತ್ತು. ಮುಂದೆ ಇದ್ದವರು ಅಲ್ಲಿಂದಲೇ ಉಳಿದವರನ್ನು ತಮ್ಮ ಕಡೆ ಬರುವಂತೆ ಕೈ ಬೀಸುತ್ತಿದ್ದರು. ಅಂತೂ, ಇಂತೂ ಪ್ರಯಾಸಪಟ್ಟು ಉಳಿದ ಕೊರೆಕಲ್‍ಗಳು ಹೋದ ಕಡೆ ನಮ್ಮ ಕೊರೆಕಲ್‍ಗಳನ್ನೂ ಒಯ್ದೆವು. ಮುಂದೆ ಹೋದವರು ಎದುರಲ್ಲಿ ಸಿಕ್ಕಿದ ನಡುಗುಡ್ಡೆಯೊಂದರಲ್ಲಿ ನಿಂತು ಆತಂಕದಿಂದ ಕಾಯುತ್ತಿದ್ದರು. ಎಲ್ಲ ಕೊರೆಕಲ್‍ಗಳೂ ಅಲ್ಲಿಗೆ ಹೋಗಿ ನಿಂತಾಗ ಒಂದು ಸಮರವನ್ನೇ ಜಯಿಸಿಬಂದ ಅನುಭವ ನಮ್ಮದಾಗಿತ್ತು.

ಅಂತೂ ಇಂತೂ ಬದುಕಿ ಬಂದ ಸಂತೋಷದಲ್ಲಿ ಕೊರೆಕಲ್‍ನಿಂದ ಇಳಿಯೋಣ ಅಂದರೆ ಕಾಲುಗಳು ಬಗ್ಗುತ್ತಲೇ ಇಲ್ಲ. ಮೈಮೇಲಿನ ಬಟ್ಟೆಯೆಲ್ಲ ಒದ್ದೆಯಾಗಿತ್ತು. ಬಗ್ಗಿ ಕೂತದ್ದಕ್ಕೆ ಸೊಂಟ ಬೇರೆ ಹಿಡಿದುಕೊಂಡು ಬಿಟ್ಟಿತ್ತು. ಕೊಕ್ಕೆ ಕಾಲು, ನೆಟ್ಟಗೆ ಮಾಡಲಾಗದ ಬೆನ್ನು ಈ ಸ್ಥಿತಿಯಲ್ಲೇ ಅಂತೂ, ಇಂತೂ ಮಾರಗಲದ ಆ ಪುಟ್ಟ ದಿನ್ನೆಯ ಮೇಲೆ ಕುಕ್ಕರಿಸಿದರೆ ಸ್ವಾಮಿಯವರಿಂದ “ನೋಡಿದ್ರಾ, ನೆಲದ ಮೇಲಿನ ಅನುಭವವೇ ಬೇರೆ, ನೀರ ನಡುವಿನದ್ದೇ ಬೇರೆ” ಎನ್ನುವ ಮಾತಿನ ಛಾಟಿ ಬೇರೆ.

ಆಗಲೇ ಸಂಜೆಯಾಗತೊಡಗಿತ್ತು. “ ಆದಷ್ಟು ಬೇಗ ಸೂಕ್ತವಾದ ನಡುಗುಡ್ಡೆಯನ್ನ ಸೇರ್ಕೋಬೇಕು. ಬೆಳಗಿನವರೆಗೆ ಬೆಂಕಿ ಹಾಕೋಕೇ ಕಟ್ಟಿಗೆ ಒಟ್ಟು ಮಾಡ್ಬೇಕು. ಆದ್ದರಿಂದ ತಡ ಮಾಡೋದು ಬೇಡ. ಹೊರಡೋಣ” ಎಂದು ಸ್ವಾಮಿ ಸೂಚನೆ ಕೊಟ್ಟದ್ದೇ ಎಲ್ಲರೂ ಗಡಿಬಿಡಿಯಲ್ಲಿ ತಮ್ಮ ಕೊರೆಕಲ್ ಹತ್ತಿಕೊಳ್ಳತೊಡಗಿದರು. ಎಲ್ಲರಿಗೂ ಆದಷ್ಟು ಬೇಗ ಅಂದಿನ ಠಿಕಾಣಿ ಹೂಡುವ ನೆಲ ಸೇರಿದರೆ ಸಾಕಿತ್ತೇನೋ?

ನಾನು ಎಷ್ಟೇ ಒತ್ತಡದಲ್ಲಿದ್ದರೂ ಆರಾಮವಾಗಿರುವ ಮನುಷ್ಯ ; ಅದಕ್ಕಿಂತ ಹೆಚ್ಚಾಗಿ ಆಲಸಿ. ನನ್ನ ಆಲಸಿತನಕ್ಕೆ ಮಡದಿ, ಅಕ್ಕಂದಿರು, ಹತ್ತಿರದ ಸ್ನೇಹಿತರು ಯಾವಾಗಲೂ ಬೈಯುತ್ತಿರುತ್ತಾರೆ. ಯಾಕೋ, ಏನೋ ನನಗೆ ಆ ಥರದ ಸುಖಾನ್ವೇಷಣೆ ಇತ್ತೀಚಿನ ವರ್ಷಗಳಲ್ಲಿ ಗಂಟು ಬಿದ್ದಿದೆ. ದಿನದ ಇಪ್ಪತ್ನಾಲ್ಕು ಗಂಟೆ ಬೇಕಾದರೂ ದುಡಿಬಲ್ಲೆ. ಆದರೆ ಮಧ್ಯಾಹ್ನದ ಒಂದು ತಾಸು ನಿದ್ದೆ ಮಾತ್ರ ನನಗೆ ಸ್ವರ್ಗಸಮಾನ. ಅದೊಂದು ಸರಿಯಾಗಿ ಆಯ್ತೋ, ನಾಳೆ ಮಧ್ಯಾಹ್ನದವರೆಗೆ ನಾನು ಕಂಯ್‍ಕುಂಯ್ ಅನ್ನೋದಿಲ್ಲ. ಆಗಾಗ ಚಹಾ ಕುಡಿಯುತ್ತಿದ್ದರಂತೂ ಊಟ,ತಿಂಡಿ ಏನೂ ಬೇಡವೇ ಬೇಡ. ಆದರೆ ಇಲ್ಲಿ ಚಹಾವೂ ಇಲ್ಲ. ಮಧ್ಯಾಹ್ನದ ಸುಖ ನಿದ್ರೆಯೂ ಇಲ್ಲ. ಮಧ್ಯಾಹ್ನ ತಿಂದ ಫಲಾವ್ ಯಾವಾಗಲೋ ಕರಗಿಹೋಗಿತ್ತು. ಕಿಬ್ಬೊಟ್ಟೆಯಲ್ಲಿ ಹಸಿವು ಕೆರಳಿಕೊಂಡಿತ್ತು. ಎಲ್ಲಾದರೂ ಸರಿ, ಹೋಗಿ ನೆಲಕ್ಕೆ ಬಿದ್ದರೆ ಸಾಕು ಎನ್ನಿಸಿಬಿಟ್ಟಿತ್ತು.

ಆ ದಿನದ ಕೊನೆಯ ಪಯಣಕ್ಕೆ ಸಿದ್ಧರಾಗಿ ಹೊರಟು ಕೆಲವು ದೂರ ಸಾಗಿದ್ದೀವೋ ಇಲ್ಲವೋ, ಲಕ್ಷ್ಮೀನಾರಾಯಣ ಏಕದಂ ಕೂಗಿದರು. “ ಅಲ್ಲ್ನೋಡ್ರಿ, ಅಲ್ಲಿ ಸೂರ್ಯ ಮುಳುಗ್ತಿದಾನೆ. ಇಲ್ಲಿ ಚಂದ್ರ ಏಳ್ತಿದಾನೆ”.

ಅದೊಂದು ಮರೆಯಲಾಗದ ಸಂದರ್ಭ. ಪಶ್ಚಿಮದಲ್ಲಿ ಕೆಂಡದುಂಡೆಯಂತಿದ್ದ ಸೂರ್ಯ ಕಂತುತ್ತಿದ್ದ. ನಾವು ಕೂಡ ರಾತ್ರಿ ತಂಗಲು ಪ್ರಶಸ್ತ ನಡುಗುಡ್ಡೆ ಅರಸುತ್ತ ಪಶ್ಚಿಮದ ಕಡೆಗೇ ತೇಲುತ್ತಿದ್ದೆವು. ಎದುರಿನ ಕೆಂಪನೆಯ ಗೋಳವನ್ನು, ನೀರಿನಲ್ಲಿ ಅದರ ಪ್ರತಿಫಲನವನ್ನೂ ಬಿಟ್ಟ ಕಣ್ಣು ಬಿಡದಂತೆ ನೋಡುತ್ತ ಹೋಗುತ್ತಿದ್ದವರಿಗೆ ಬೆನ್ನ ಹಿಂದೆ ಹೊಳೆಯುತ್ತ ಎದ್ದು ಬರುತ್ತಿರುವ ಚಂದ್ರ ಕಂಡೇ ಇರಲಿಲ್ಲ. ಹಿಂದಕ್ಕೆ ತಿರುಗಿ ನೋಡಿದರೆ ಪೂರ್ವದ ದಿಗಂತದ ಅಂಚಲ್ಲಿ ಹಾಲು ಬಣ್ಣದ ಚಂದ್ರನ ಪೂರ್ತಿ ಬಿಂಬ!

ಏಕಕಾಲದಲ್ಲಿ ಒಂದೇ ಅಗಸದ ವಿರುದ್ಧ ದಿಕ್ಕುಗಳಲ್ಲಿ ಸೂರ್ಯ, ಚಂದ್ರರಿಬ್ಬರೂ ಕಂಗೊಳಿಸುತ್ತಿದ್ದರು. ಒಂದು ಅಪರೂಪದ, ಜೀವನದಲ್ಲಿ ಮತ್ತೆ ಬೇಕೆಂದರೂ ಕಾಣಲಾಗದ ದೃಶ್ಯವೊಂದು ನಮ್ಮೆದುರಿನಲ್ಲಿತ್ತು.

“ ಏ, ಕ್ಯಾಮರಾ ತೆಗೀರಿ, ಫೋಟೊ ಹೊಡೀರಿ” ಎಂದು ಲಕ್ಷ್ಮಿನಾರಾಯಣ ಕುಣಿದಾಡತೊಡಗಿದ್ದರು. ಸೂರ್ಯ, ಚಂದ್ರ ಇಬ್ಬರೂ ಒಂದೇ ಕಾಂಬಿನೇಷನ್‍ಲ್ಲಿ ಬರುವಂತೆ ಫೋಟೊ ತೆಗಿಯುವ ಕ್ಯಾಮರಾ ನನ್ನ ಬಳಿಯಂತೂ ಇರಲಿಲ್ಲ. ಇದ್ದದ್ದು ಮಾಮೂಲಿ ಡಿಜಿಟಲ್ ಕ್ಯಾಮರಾ. ಮಂಜಪ್ಪ ಇದ್ದಿದ್ದರೆ ಏನಾದ್ರೂ ಕಸರತ್ತು ಮಾಡ್ತಿದ್ರೇನೋ? ಹಾಗಾಗಿ ನಾನು ಆ ಉಸಾಬರಿಗೆ ಹೋಗದೇ ನನ್ನ ಮನಸ್ಸಿನಲ್ಲಿ ಅಚ್ಚಳಿಯದೇ ದಾಖಲಾಗುವಂತೆ ಆ ದೃಶ್ಯವನ್ನು ಕಣ್ತುಂಬಿಕೊಳ್ಳತೊಡಗಿದೆ.
ಎಲ್ಲರೂ ಈ ಸಂಭ್ರಮದಲ್ಲಿದ್ದ ಕಾರಣ ನೀರಲ್ಲಿದ್ದಂತೇ ಕತ್ತಲಾಗಿಬಿಟ್ಟಿತು. ಆಕಾಶದಲ್ಲಿ ಚಂದ್ರ ನಿಧಾನಕ್ಕೆ ಮೇಲೆರುತ್ತಿದ್ದ. ನಿಧಾನಕ್ಕೆ ಚಳಿ ಹೆಚ್ಚಾಗತೊಡಗಿತ್ತು. ನೀರಲ್ಲಿ ನೆನೆದಿದ್ದಲ್ಲದೇ ನಿಂತ ನೀರಿನ ಅಂಚಿನಲಿದ್ದ ಕಾರಣ ಹಲ್ಲು ಕಟಕಟಿಸುವಷ್ಟು ಥಂಡಿಯಾಗತೊಡಗಿತ್ತು. ಬೇಗ ಬೇಗ ನೆಲೆ ಹುಡುಕಿ ಬಟ್ಟೆ ಬದಲಿಸಿ, ಬೆಂಕಿ ಕಾಸಿದರೆ ಸಾಕಿತ್ತು ಎಂದನ್ನಿಸತೊಡಗಿತು.

ಚಂದ್ರನ ಬೆಳಕಿನಲ್ಲೇ ಹೇಗೋ ಏನೋ ಒಂದು ವಿಸ್ತಾರವಾದ ನಡುಗುಡ್ಡೆ ಹುಡುಕಿ ಅಲ್ಲಿ ಆ ದಿನದ ಪಯಣಕ್ಕೆ ವಿರಾಮ ಘೋಷಿಸಲಾಯಿತು.
“ ರಾತ್ರಿಯಿಡಿ ಬೆಂಕಿ ಉರಿಯಬೇಕು. ಎಲ್ಲಾರೂ ಕಾಡಿಗೆ ನುಗ್ಗಿ ಒಣ ಕಟ್ಟಿಗೆ ಸೇರಿಸಬೇಕು” ಎಂದು ಸ್ವಾಮಿ ಆಜ್ಞಾಪಿಸಿದರು. ಜೊತೆಯಲ್ಲಿದ್ದವರು ಅಂಥ ಸುಸ್ತಿನಲ್ಲೂ, ಆ ಕತ್ತಲೆಯಲ್ಲಿ ಇದ್ದ ಒಂದೆರಡು ಬ್ಯಾಟರಿ ಬೆಳಕಲ್ಲಿ ರಾಶಿ, ರಾಶಿ ಕಟ್ಟಿಗೆ ಸೇರಿಸಿಬಿಟ್ಟರು. ಅಲ್ಲಿ ಜನರು ಬಾರದೇ ಇರುವ ಕಾರಣ ಎಲ್ಲೆಂದರಲ್ಲಿ ಒಣ ಸೌದೆಗಳದ್ದೇ ಸಾಮ್ರಾಜ್ಯ.

ಕಟ್ಟಿಗೆ ಉಪಯೋಗಿಸುವದು ಮನುಷ್ಯನೇ ಹೊರತು ಅಲ್ಲಿರುವ ಪ್ರಾಣಿಗಳಲ್ಲವಲ್ಲ. ಎಷ್ಟೊಂದು ಮರಗಳು, ಅವುಗಳ ಕಾಂಡ,ಕೊಂಬೆಗಳು ಅಲ್ಲಿ ಮಣ್ಣಾಗಿದ್ದವೇನೋ? ಮಾರಗಲದ ವ್ಯಾಪ್ತಿಯಲ್ಲಿ ಬಾಚಿ ತಂದ ಒಣ ಸೌದೆ ಒಟ್ಟಿ ಬೆಂಕಿ ಹಾಕಿ ಪಕ್ಕದಲ್ಲೇ ಒಲೆ ಹೂಡಿ, ಚಹಾ ತಯ್ಯಾರಿ ನಡೆಯಿತು. ಒದ್ದೆಯಾದ ಬಟ್ಟೆ ಬದಲಿಸಿ, ಬೆಂಕಿ ಸುತ್ತ ಮೈ ಬಿಸಿಮಾಡಿಕೊಳ್ಳುತ್ತ ಚಹಾ ಕುಡಿಯುತ್ತ ಕೂತಾಗ ಗಜಾನನ ಶರ್ಮಾ ಶರಾವತಿ ಜಲ ವಿದ್ಯುತ್ ಯೋಜನೆಯ ಆರಂಭದ ಹಂತದ ಕತೆಯ ಸಂಚಿ ಬಿಚ್ಚಿದರು.

ಗಜಾನನ ಶರ್ಮಾ ಕರ್ನಾಟಕ ರಾಜ್ಯದ ಇಂಧನ ಇಲಾಖೆಯಲ್ಲಿ ಪ್ರಮುಖ ಹುದ್ದೆಯಲ್ಲಿದ್ದವರು. ಅವರ ಮೂಲ ಊರು ಇದೇ ಹಿನ್ನೀರಿನಲ್ಲಿ ಮುಳುಗಿಹೋದ ಕೊಳಚಗಾರು. ಕರ್ನಾಟಕದ ವಿದ್ಯುತ್ ಸ್ಥಾವರಗಳ ಬಗ್ಗೆ, ಅವುಗಳ ನಿರ್ಮಾಣದ ಬಗ್ಗೆ ವಿಸ್ತøತವಾದ ವಿವರಗಳನ್ನು ನೀಡುವ “ ಬೆಳಕಾಯಿತು ಕರ್ನಾಟಕ” ಎನ್ನುವ ಪುಸ್ತಕವನ್ನು ಬರೆದಿದ್ದಾರೆ. ಸರಳರೂ, ಸಜ್ಜನರೂ ಆದ ಗಜಾನನ ಶರ್ಮಾ ಯಾವ ಬಿಂಕ, ಬಿಗುಮಾನವಿಲ್ಲದೇ ಎಲ್ಲರ ಜೊತೆ ಬೆರೆಯುವ ವ್ಯಕ್ತಿ. ಅತಿ ಬಿಜಿಯಾಗಿದ್ದರೂ ನೀರಯಾನಕ್ಕಾಗಿ ಬಿಡುವು ಮಾಡಿಕೊಂಡು ಬೆಳ್ಳಂಬೆಳಗ್ಗೆ ತಾಳಗುಪ್ಪಕ್ಕೆ ಬಂದಿಳಿದಿದ್ದರು.

1948ರಲ್ಲಿ ಬ್ರಿಟಿಷರು ಕಟ್ಟಿದ ಹಿರೇಭಾಸ್ಕರ ಆಣೆಕಟ್ಟಿನಿಂದ ಆರಂಭಿಸಿ ಇಡೀ ಶರಾವತಿ ಜಲವಿದ್ಯುತ್ ಯೋಜನೆಯ ಪ್ರತಿ ಹಂತಗಳ ಬಗ್ಗೆ ಹೇಳಿದರು. ಹಿನ್ನೀರು 200 ಅಡಿಗಳ ಆಳವಿರುವದಾಗಿಯೂ, 891 ಮೆಗಾವ್ಯಾಟ್ ವಿದ್ಯುತ್ ಉತ್ಪಾದಿಸುವ ಲಿಂಗನಮಕ್ಕಿ ಜಲಾಶಯದಲ್ಲಿ ಪೂರ್ತಿ ತುಂಬಿದಾಗ 1819 ಅಡಿಗಳಷ್ಟು ನೀರು ಇರುವುದೆಂತಲೂ ಅವರು ಹೇಳಿದರು. 15 ಸಾವಿರ ಎಕರೆ ಕೃಷಿ ಭೂಮಿ ಹಾಗೂ 79 ಸಾವಿರ ಎಕರೆ ಅರಣ್ಯ ಪ್ರದೇಶ ನೀರಿನಲ್ಲಿ ಮುಳುಗಿದ್ದು 2500 ಕುಟುಂಬಗಳು, 15 ಸಾವಿರ ಜನರು ಮುಳುಗಡೆಯಿಂದ ಸಂತ್ರಸ್ತರಾಗಿದ್ದಾಗಿ ವಿವರಿಸಿದರು.

ಗಜಾನನ ಶರ್ಮಾ ಹೇಳುವದನ್ನು ಕೇಳುತ್ತಿದ್ದಾಗ ತುಂಬ ವ್ಯಥೆಯೆನ್ನಿಸಿತು.

ಯಾರದೋ ಉದ್ಧಾರಕ್ಕಾಗಿ, ಎಲ್ಲಿಯದೋ ಅಭಿವೃದ್ಧಿಗಾಗಿ ತಲೆತಲಾಂತರದಿಂದ ಬದುಕಿ ಬಂದ ಮನೆ, ಆಸ್ತಿ, ನೆಲವನ್ನು ಬಿಟ್ಟು ಚಲ್ಲಾಪಿಲ್ಲಿಯಾಗಿ, ಕಂಡುಕೇಳರಿಯದ ಜಾಗಕ್ಕೆ ಅದೆಷ್ಟು ಸಾವಿರ ಜನ ಅಪ್ಪಟ ಸಂತ್ರಸ್ತರಾಗಿ ಹೋದರೋ? ಇಲ್ಲಿದ್ದ ಜಾನುವಾರುಗಳೆಲ್ಲ ಹೇಳಿ ಕೇಳುವವರಿಲ್ಲದೇ ಏನಾದವೋ? ಅತ್ಯಂತ ಅಮೂಲ್ಯವಾದ ಅದೆಷ್ಟು ಸಸ್ಯಗಳು, ಮರಗಳು, ಜೀವವೈವಿಧ್ಯಗಳು, ಪ್ರಾಣಿಗಳು ನೀರಿನಡಿ ಮುಳುಗಿದವೋ? ಯಾರದೋ ಬದುಕಿನ ಉತ್ಕರ್ಷಕ್ಕೆ ಇಲ್ಲಿದ್ದವರ ಜೀವದ ಬೆಳಕೇ ಆರಿಹೋಯ್ತಲ್ಲ ಅನ್ನಿಸಿತು.

ಬೆಂಕಿ ಸುತ್ತ ಕೂತವರೆಲ್ಲ ಆ ವಿಷಾದದ ಸಂಗತಿಯನ್ನು ಕೇಳಿ ಮುಳುಗಡೆಯಿಂದ ನೆಲೆ ಕಳೆದುಕೊಂಡು ಸಂತ್ರಸ್ತರಾದವರ, ಇಲ್ಲಿದ್ದ ಜೀವವೈವಿಧ್ಯದ, ಜಲವಿದ್ಯುತ್ ಯೋಜನೆಯಿಂದ ಘಾಸಿಗೊಳಗಾದ ಪ್ರಕೃತಿ, ವನ್ಯಜೀವಿಗಳು… ಎಲ್ಲದರ ಕುರಿತಾಗಿ ಒಂದು ನಿಮಿಷದ ಮೌನ ಗೌರವ ಸಲ್ಲಿಸೋಣ ಎನ್ನುವ ತೀರ್ಮಾನಕ್ಕೆ ಬಂದರು.

| ಉಳಿದದ್ದು ನಾಳೆಗೆ ।

1 Response

  1. ರಘುನಾಥ says:

    ವಿಕಾಸದ ಬಲಿಪಶುಗಳು

Leave a Reply

%d bloggers like this: