ಒಂದೂವರೆ ದಿನದ ನಂತರ ನಾವು ಮನುಷ್ಯರ ಮುಖವನ್ನು ನೋಡಲಿದ್ದೆವು..

ಆಕಾಶದಿಂದ ಸುರಿಯುವ ಬೆಳದಿಂಗಳು, ದಡಗಳಿಗೆ ನೀರ ಅಲೆಗಳು ಬಡಿವ ಕ್ಷೀಣ ಸದ್ದು, ನಡುಗುಡ್ಡೆಯ ದಟ್ಟಮರಗಳ ನಡುವೆ ಹೆಪ್ಪಾದ ಕತ್ತಲು, ಎದುರಲ್ಲಿ ಧಗಧಗಿಸುವ ಬೆಂಕಿ. . . . ಕಣ್ಣುಮುಚ್ಚಿ ಮನಸ್ಸಿನಲ್ಲೂ ಶೂನ್ಯವನ್ನು ತುಂಬಿಕೊಂಡು ಮೌನವಾಗಿ ನಿಂತೆವು.

ಆ ಕ್ಷಣ ಎಂಥ ಅವರ್ಚನೀಯ ಏಕಾಂತವನ್ನು ಸೃಷ್ಟಿಸಿತೆಂದರೆ ಜೀವಮಾನದಲ್ಲಿ ಎಂದೂ ಅಂಥ ಮೌನವನ್ನು ಅನುಭವಿಸಿರಲೇ ಇಲ್ಲ. ಮುಳುಗಡೆಯಾದ ನೆಲದ ಗುಡ್ಡದ ನೆತ್ತಿಯೊಂದರಲ್ಲಿ ನಿಂತು ಆ ನೆಲವನ್ನು ತೊರೆದುಹೋದವರ ನೆನಪನ್ನು ಮಾಡಿಕೊಳ್ಳುವ ಅವಕಾಶ ದೊರಕಿದ್ದಕ್ಕೆ ಒಂದು ಕೃತಾರ್ಥ ಭಾವ ನಮ್ಮೆಲ್ಲರೊಳಗಿತ್ತು.

ನಾನು ಆ ಗುಂಪಿನಿಂದ ಎದ್ದು ನೀರ ಅಂಚಿಗೆ ನಡೆಯುತ್ತ ದಡದಲ್ಲಿ ಸುಮಾರು ದೂರ ಹೋಗಿನಿಂತೆ. ಅಲ್ಲಿನ ಸ್ಥಬ್ಧತೆ ಎಂಥವರನ್ನೂ ಅಂತರ್ಮುಖಿಯಾಗಿಸುತ್ತಿತ್ತು. ನನಗೆ ಈ ಜಗತ್ತಿನಲ್ಲಿ ಇದ್ದೆನೆಯೋ, ಬೇರೆಲ್ಲೋ ಎಂದು ಅನುಮಾನವಾಗತೊಡಗಿತು. ಜೀವನದಲ್ಲಿ ಮೊದಲ ಬಾರಿಗೆ ಮನುಷ್ಯರ ಹೆಜ್ಜೆ ಗುರುತಿರದ, ಅವರ ಮಾತು, ಸದ್ದು, ಗದ್ದಲಗಳಿರದ, ನಾನು ಬದುಕಿಬಂದ ಪ್ರದೇಶಕ್ಕೆ ಸಂಪೂರ್ಣ ವ್ಯತಿರಿಕ್ತವಾದ ನಿರ್ಮಾನುಷ್ಯ ಪರಿಸರದಲ್ಲಿ ನಿಂತಿದ್ದೆ. ಬೆಳದಿಂಗಳು ನೀರ ಮೇಲೆ ಕುಣಿಯುತ್ತಿತ್ತು. ಹಾಗೇ ಸ್ವಲ್ಪ ಹೊತ್ತು ನಿಂತಿದ್ದು ಒಂಟಿಯಾಗಿರಬಾರದು ಎನ್ನುವ ಸ್ವಾಮಿಯವರ ಆಜ್ಞೆ ನೆನಪಾಗಿ ವಾಪಸ್ಸು ಬಂದೆ.

ಹಾಗೇ ಬರುವಾಗ ಗಜಾನನ ಶರ್ಮ ಅಲ್ಲಿ ನಿಂತು ಏನೋ ಗಮನಿಸುತ್ತಿದ್ದರು. ಹತ್ತಿರ ಬಂದಾಗ “ ನೋಡಿ, ಇಲ್ಲೊಂದು ವಿಸ್ಮಯ ಕಾಣ್ತಿದೆ” ಎಂದು ದಡದಿಂದ ಸ್ವಲ್ಪ ದೂರದಲ್ಲಿದ್ದ ಪೊದೆ ತೋರಿಸಿದರು. ಅಲ್ಲಿ ವೈಚಿತ್ರವೊಂದು ಮೂಡಿತ್ತು. ನೀರಿನ ಮೇಲಿನ ಬೆಳದಿಂಗಳು ಆ ಪೊದೆಯ ಎಲೆಗಳ ಮೇಲೆ ಪ್ರತಿಫಲಿಸುತ್ತಿತ್ತು. ಅಲೆಗಳು ಅಲುಗಾಡಿದಂತೆ ಆ ಪ್ರತಿಫಲನವೂ ಅಲುಗಾಡುತ್ತ ನಮ್ಮನ್ನು ಆಕರ್ಷಿಸಿತ್ತು.

ರಾತ್ರಿ ಬಿಸಿಬಿಸಿ ಅನ್ನ, ಸಾರು ಊಟ ಮಾಡಿ ಕೆಲವರು ಕಾಡಿನ ಮರಗಳ ಬುಡದಲ್ಲಿ ಅಡ್ಡಾದರೆ, ಇನ್ನೂ ಹುರುಪಿನಲ್ಲಿದ್ದ ಕೆಲವರು ಬೆಂಕಿ ಬಳಿ ಕುಳಿತು ಮಾತನಾಡುತ್ತಿದ್ದರು. ಮಾತು ಮುಗಿದಾಗ ಹಾಡತೊಡಗಿದರು.

ನನಗಂತೂ ಅದ್ಯಾವುದರ ಲಕ್ಷವೇ ಇರಲಿಲ್ಲ. ಕಾಡು ಎನ್ನುವ ಭಯವಿಲ್ಲದೇ ಯಾವುದೋ ಮರದ ಅಡಿಯಲ್ಲಿ ಕೆಳಗೊಂದು ಪುಟ್ಟ ಟಾರ್ಪಾಲು ಹಾಸಿ, ರಗ್ಗು ಹೊದ್ದು ಮಲಗಿಬಿಟ್ಟಿದ್ದೆ. ಚಳಿಗಾಲದ ಜೊತೆಗೆ ಹಿನ್ನೀರು ಪ್ರದೇಶದಲ್ಲಿ ಇರುವ ಮೈ ಕೊರೆಯುವ ಥಂಡಿ ಬೇರೆ. ಹಾವು, ಹುಳ, ಕಾಡು ಪ್ರಾಣಿ ಯಾವುದರ ಭಯವೂ ಹತ್ತಿರ ಸುಳಿದಿರಲಿಲ್ಲ. ಅಸಾಧ್ಯ ಗೊರಕೆ ಹೊಡೆಯುವ ಲಕ್ಷ್ಮಿನಾರಾಯಣ ತನ್ನ ಗೊರಕೆಯಿಂದ ಉಳಿದವರಿಗೆ ತೊಂದರೆಯಾದೀತೆಂದು, ಅವರಿಂದ ಉಗಿಸಿಕೊಳ್ಳುವ ಸಾಧ್ಯತೆಯನ್ನು ಮುಂದಾಗಿಯೇ ಗ್ರಹಿಸಿ, ಕಾಡಿನೊಳಗೆಲ್ಲೋ ಚಾಪೆ ಹಾಸಿಕೊಂಡು ಮಲಗಿದ್ದರು.

ಹಗಲೆಲ್ಲ ಬಂದ ಕೊರೆಕಲ್‍ನ ತೂಗಾಟ ಮಲಗಿದಾಗಲೂ ಆಗುತ್ತಿತ್ತು. ಒಂದು ವಿಶೇಷವಾದ ಅನುಭವದ ಜೊತೆಜೊತೆಗೆ ನಿದ್ರೆ ಆವರಿಸಿಕೊಂಡು ಬಂದಿತ್ತು.
ಬೆಳಿಗ್ಗೆ ಸೂರ್ಯ ಮೂಡುವ ಮೊದಲೇ ಎಚ್ಚರವಾಗಿತ್ತು. ಇಬ್ಬನಿ ನೀರ ಮೇಲಿನಿಂದ ಆಕಾಶದವರೆಗೂ ತೆರೆ ಹಾಸಿತ್ತು. ಎದ್ದು ದಡದಲ್ಲಿ ನಡೆಯುತ್ತ ನಡುಗುಡ್ಡೆಯನ್ನು ಸುತ್ತಾಡುವಾ ಅಂತ ಹೋದೆ.

ನನಗೆ ಅಚ್ಚರಿಯೆನ್ನಿಸುತ್ತಿತ್ತು. ನಮ್ಮ ಮನೆಗಳಲ್ಲಿ ನಮಗೆ ಸಾಕಷ್ಟು ಸೌಕರ್ಯಗಳಿದ್ದರೂ ಕೆಲವೊಮ್ಮೆ ನಿದ್ದೆಯೇ ಹತ್ತದೇ ಪರಿಪಾಟಲು ಪಡುತ್ತೇವೆ. ಸಣ್ಣದೊಂದು ಸೊಳ್ಳೆ ಗುಂಯ್‍ಗುಡುತ್ತ ಕಿವಿ ಬಳಿ ಸುಳಿದರೂ ಸಾಕು, ಮರುದಿನ ಬೆಳಿಗ್ಗೆ ಎದ್ದವರು ನಿನ್ನೆ ರಾತ್ರಿ ಸೊಳ್ಳೆ ಕಾಟಕ್ಕೆ ನಿದ್ದೆಯೇ ಬರ್ಲಿಲ್ಲ ಎಂದು ಗೋಳಾಡುತ್ತೇವೆ. ರಕ್ಷಣೆಯ, ಅಗತ್ಯಕ್ಕಿಂತ ಹೆಚ್ಚು ಅನುಕೂಲವಿರುವ ಮನೆಯ ಬದಲು ಅಪರಿಚಿತ ಕಾಡಿನಲ್ಲಿ, ನಾವಿಷ್ಟು ಮನುಷ್ಯಜೀವಿಗಳು ಮಾತ್ರ ಇರುವ ಅಪಾಯಕಾರಿ ಸ್ಥಳದಲ್ಲಿ ಯಾತರ ಭಯ, ಭೀತಿ ಇರದೇ ಸಂತೃಪ್ತವಾದ ನಿದ್ದೆ ಬಂದಿತ್ತು.

ನಾವಿದ್ದದ್ದು ಸಾಕಷ್ಟು ವಿಸ್ತಾರವಾದ ನಡುಗುಡ್ಡೆಯಾಗಿತ್ತು. ಅದು ಬಹುಪಾಲು ದಟ್ಟವಾದ ಕಾಡೇ ಆಗಿತ್ತು. ಎಲ್ಲ ನಡುಗುಡ್ಡೆಗಳಲ್ಲಿರುವಂತೇ ಕುನ್ನೇರಲು ಸಸ್ಯ ಹೆಚ್ಚಾಗಿದ್ದರೂ ಉಳಿದ ಹಲವು ಜಾತಿಯ ಗಿಡಮರಗಳು ಕಂಡವು. ಜೀಡುಜೀಡಾಗಿದ್ದ ಕಾಡಿನೊಳಗೆ ಮರಗಳನ್ನು ಹೆಣೆದುಕೊಂಡಿದ್ದ ಅನೇಕ ಬಳ್ಳಿಗಳೂ ಗೋಚರಿಸಿದವು.

ನಾವು ಠಿಕಾಣಿ ಹೂಡಿದ್ದ ಜಾಗದ ಅನತಿ ದೂರದಲ್ಲೇ ನೀರಿನ ಅಂಚಿನ ದಡದಲ್ಲಿ ಯಾವುದೋ ಪ್ರಾಣಿಯ ಹಲವು ಹೆಜ್ಜೆಗುರುತುಗಳು ಕಂಡವು. ಒಂದು ಕ್ಷಣ ಭಯವಾಯಿತು. ಆ ಗುರುತುಗಳು ನಮ್ಮಲ್ಲಿನ ಸಾಕು ಎಮ್ಮೆಗಳ ಹೆಜ್ಜೆಯನ್ನು ಹೋಲುತ್ತಿದ್ದವು. ನಾನು ಅದನ್ನೇ ಗಮನಿಸುತ್ತ ನಿಂತಿದ್ದಾಗ ಅಲ್ಲಿಗೆ ಬಂದ ಲಕ್ಷ್ಮಿನಾರಾಯಣ ‘ಅವು ಕಾಡೆಮ್ಮೆಗಳ ಹೆಜ್ಜೆಗಳೆಂದೂ, ರಾತ್ರಿ ನೀರು ಕುಡಿಯಲು ಬಂದಿರಬಹುದೆಂದೂ’ ಹೇಳಿದರು. ರಾತ್ರಿ ನಾವಿದ್ದ ಜಾಗದ ಸಮೀಫವೇ ಅವು ಅಡ್ಡಾಡಿ ಹೋಗಿದ್ದಕ್ಕೆ ತುಸು ಹೆದರಿಕೆಯೂ ಆಯಿತು. ಅಲ್ಲಿಂದ ತುಸು ದೂರದಲ್ಲಿ ಸಣ್ಣ, ಸಣ್ಣದಾದ ಬೇರೊಂದು ಥರದ ಹೆಜ್ಜೆಗಳು ಕಂಡವು. ಲಕ್ಷ್ಮಿನಾರಾಯಣರಿಗೂ ಆ ಪುಟ್ಟ ಹೆಜ್ಜೆಗಳನ್ನು ಗುರುತಿಸಲಾಗದೇ ನರಿಯೋ, ಮತ್ಯಾತರದ್ದೋ ಹೆಜ್ಜೆಗಳಿರಬೇಕೆಂದು ಹೇಳಿ ನನ್ನ ಕುತೂಹಲಕ್ಕೆ ಬ್ರೇಕ್ ಹಾಕಿದರು.

ನಾನು ಗಮನಿಸಿದಂತೆ ಅಲ್ಲೆಲ್ಲ ವಿಶಿಷ್ಠವಾದ ಸುಗಂಧ ವ್ಯಾಪಿಸಿಕೊಂಡಿತ್ತು. ಅದು ಅಲ್ಲಿನ ಸಸ್ಯಗಳ ಎಲೆಗಳದ್ದಾಗಿತ್ತು. ಅಲ್ಲಿನ ನಡುಗುಡ್ಡೆಗಳಲ್ಲಿ ಕಾಡು ದಟ್ಟವಾಗಿ, ಹೆಣೆದುಕೊಂಡಂತೆ ಇರುವುದನ್ನು ಕಂಡಿದ್ದೆವು. ಅಲ್ಲಿನ ಮರಗಳ ಎಲೆಗಳು ಕಡು ಹಸಿರಾಗಿದ್ದವು. ಯಾವುದೇ ಮಾಲಿನ್ಯವಿಲ್ಲದ ಹವೆ ಅಲ್ಲಿತ್ತು. ಲಕ್ಷ್ಮಿನಾರಾಯಣ ಬಳಿ ಇದನ್ನು ಹೇಳಿದಾಗ ಇಲ್ಲಿನ ಹವೆಯಲ್ಲಿ ಆಮ್ಲಜನಕದ ಪ್ರಮಾಣ ಹೆಚ್ಚಿರುವ ಕಾರಣ ಈ ರೀತಿ ಪರಿಮಳ ಇರುತ್ತದೆಂದು ವಿವರಿಸಿ ತಮ್ಮ ವೈಜ್ಞಾನಿಕ ಪಾಂಡಿತ್ಯ ಪ್ರದರ್ಶಿಸಿದರು.

ಮತ್ತೆ ಎರಡನೇ ದಿನದ ಯಾನ ಆರಂಭಗೊಂಡಿತ್ತು. ಮೊದಲನೇ ದಿನ ಕೊರೆಕಲ್‍ನಲ್ಲಿ ಜೊತೆಗಿದ್ದವರು ಬೇರೊಬ್ಬರ ಬಳಿ ನಮ್ಮಿಬ್ಬರ ಬಗ್ಗೆ ತರಲೆ ತೆಗೆಯುತ್ತಿದ್ದುದು ನನ್ನ ಗಮನಕ್ಕೆ ಬಂತು. ಕೊರೆಕಲ್‍ನ ಹುಟ್ಟು ಹಾಕಲು ನನಗೆ, ಲಕ್ಷ್ಮೀನಾರಾಯಣಗೆ ಬರುವದಿಲ್ಲವೆಂತಲೂ, ಅದರಿಂದ ತಾವೇ ಬಹುಪಾಲು ಹುಟ್ಟು ಹಾಕಬೇಕಾಗಿದೆಯೆಂದೂ, ತಾವಿಬ್ಬರೂ ತಮ್ಮ ಸ್ನೇಹಿತರ ಜೊತೆ ಹೋಗುತ್ತೇವೆಂದೂ ಸ್ವಾಮಿ ಬಳಿ ಹೇಳುತ್ತಿದ್ದರು.

ಅದನ್ನು ಕೇಳಿಸಿಕೊಂಡ ನನಗೆ ಬೇಸರವಾದರೂ ಸುಮ್ಮನಾದೆ. ಯಾಕೆಂದರೆ ಅವರು ಹೇಳುತ್ತಿದ್ದುದರಲ್ಲಿ ಸತ್ಯಾಂಶವೂ ಇತ್ತು. ಪುಣ್ಯಕ್ಕೆ ನಮ್ಮ ಕೊರೆಕಲ್‍ಗೆ ತರಬೇತುದಾರ ಲಂಬೋದರನೇ ಬಂದದ್ದು ನಮಗಿಬ್ಬರಿಗೂ ನಿರಾಳವೆನ್ನಿಸಿತು. ಯಾವುದೇ ಶ್ರಮವಹಿಸದೇ, ನಿರಾಯಾಸವಾಗಿ ಹುಟ್ಟುಹಾಕುವ ಕೌಶಲ್ಯ ಲಂಬೋದರಗೆ ಇತ್ತು. ಕಮಿಟ್‍ಮೆಂಟ್‍ಗೆ ಬದ್ದರಾಗಿದ್ದು ಸುಮ್ಮಸುಮ್ಮನೆ ರಿಯಾಯತಿ ತೋರದ ಸ್ವಾಮಿ ಅಷ್ಟರ ಮಟ್ಟಿಗೆ ನಮ್ಮ ಮೇಲೆ ಕರುಣೆ ತೋರಿದ್ದರು.

ನಾನು ಗಮನಿಸುತ್ತ ಬಂದಂತೆ ಆವರೆಗೂ ನಾವು ಕೊರೆಕಲ್‍ನಲ್ಲಿ ಬರುವಾಗ ಒಂದು ಸಾಕಷ್ಟು ದೊಡ್ಡದಾದ ಪತಂಗ ಹಾಗೂ ಒಂದು ಉದ್ದದ ಕೊಕ್ಕಿನ ಹಕ್ಕಿ ಕೆಲವು ದೂರ ನಮ್ಮನ್ನೇ ಹಿಂಬಾಲಿಸಿಕೊಂಡು ಬಂದಿದ್ದು ಬಿಟ್ಟರೆ ಮತ್ಯಾವುದೇ ಹಕ್ಕಿಗಳಾಗಲೀ ಕಂಡಿರಲೇ ಇಲ್ಲ. ನಡುಗುಡ್ಡೆಗಳಲ್ಲೂ ಹಕ್ಕಿ, ಪಕ್ಷಿಗಳು ಕಾಣಿಸಿರಲಿಲ್ಲ. ನರಮನುಷ್ಯರಂತೂ ಕಣ್ಣಿಗೆ ಬಿದ್ದಿರಲೇ ಇಲ್ಲ. ಎಲ್ಲಾದರೂ ನಡುಗುಡ್ಡೆಯಲ್ಲಿ ಯಾವುದಾದರೂ ಕಾಡು ಪ್ರಾಣಿಗಳು ಕಂಡಾವೇನೋ ಎಂದು ಅತ್ತಿತ್ತ ನಿರುಕಿಸುತ್ತಿದ್ದೆವು.

ನೀರು ಇಳಿದಿರುತ್ತಿದ್ದ ಮಾರ್ಚ- ಏಪ್ರಿಲ್ ತಿಂಗಳಲ್ಲಿ ಲಂಬೋದರ ಒಂದೆರಡು ಬಾರಿ ಇಲ್ಲೆಲ್ಲ ಬಂದಿದ್ದನಂತೆ. ಅವನು ಹೊನ್ನೆಮರಡು ಊರಿನವನಾದ್ದರಿಂದ ದಿನನಿತ್ಯ ಹಿನ್ನೀರನ್ನೇ ನೋಡುತ್ತ ಬೆಳೆದವನು. ಅಲ್ಲದೇ ಸ್ವಾಮಿಯವರ ಬಳಿ ಸಮರ್ಪಕವಾದ ತರಬೇತಿ ಪಡೆದ ಕಾರಣ ಅವನಿಗೆ ಜಲಯಾನದ ಬಗ್ಗೆ ಸಾಕಷ್ಟು ತಿಳುವಳಿಕೆಯಿತ್ತು. ಅವನಿಂದ ನಮಗೆ ಹಿನ್ನೀರಿನ ಸಾಕಷ್ಟು ವಿವರಗಳು ಲಭ್ಯವಾದವು. ಲಕ್ಷ್ಮೀನಾರಾಯಣಗಂತೂ ಪಟ್ಟಾಂಗ ಹೊಡೆಯುತ್ತ, ತಲೆ ತಿನ್ನಲು ಓರ್ವ ವ್ಯಕ್ತಿ ಸಿಕ್ಕಂತಾಗಿತ್ತು.

ಲಂಬೋದರ, ಲಕ್ಷ್ಮಿನಾರಾಯಣ ನಡುವಿನ ಸಂಭಾಷಣೆಯನ್ನು ಕೇಳುತ್ತ ಅತ್ತಿತ್ತ ನೋಡುತ್ತಿದ್ದ ನನಗೆ ಮಸುಕಾಗಿ ತೋರುವಷ್ಟು ದೂರದ ನಡುಗುಡ್ಡೆಯ ಅಂಚಿನಲ್ಲಿ ನಾಲ್ಕಾರು ಎಮ್ಮೆಯಂಥ ಪ್ರಾಣಿಗಳು ಕತ್ತುಬಗ್ಗಿಸಿ ನೀರು ಕುಡಿಯುತ್ತಿರುವದು ಕಾಣಿಸಿತು. ಇಲ್ಲೆಲ್ಲೋ ಊರು ಹತ್ತಿರ ಇರಬೇಕು. ಅಲ್ಲಿಂದ ಬಂದಿರಬಹುದು ಎಂದುಕೊಂಡು ಲಂಬೋದರನನ್ನು ಕೇಳಿದೆ. ಆ ಕಡೆ ನೋಡಿದ ಲಂಬೋದರ “ ಓ, ಅದು ಎಮ್ಮೆಗಳಲ್ಲಾರೀ, ಕಾಡೆಮ್ಮೆ ಹಿಂಡು” ಅಂದ. ನನಗೆ ಸಾಕಷ್ಟು ಸಾರಿ ಕಾಡೆಮ್ಮೆಗಳನ್ನು ಎದುರಾಬದರಾಗಿ ನೋಡಿದ್ದರಿಂದ ಅಷ್ಟೇನೂ ಕುತೂಹಲವಾಗಲಿಲ್ಲ. ಉಳಿದ ಕೊರೆಕಲ್‍ನಲ್ಲಿದ್ದವರಿಗೆ ಕೂಗಿ ಹೇಳಿದಾಗ ಅವರು ಕುತೂಹಲ, ಸಂಭ್ರಮದಿಂದ ಗಡಿಬಿಡಿಯಲ್ಲಿ ತಮ್ಮ ಕೊರೆಕಲ್‍ಗಳನ್ನು ಅತ್ತ ಹಾಯಿಸಿಕೊಂಡುಹೋದರೂ ಅಷ್ಟರಲ್ಲೇ ಆ ಹಿಂಡು ನೀರು ಕುಡಿದು ಕಾಡಿನ ನಡುವೆ ನುಸುಳಿದ್ದವು.

“ನಮ್ಮ ಕೆಳಗೆ ಮಡೆನೂರು ಡ್ಯಾಮ್ ಇದೆ” ಎಂದು ಮಾಮೂಲಿಯಾಗಿ ಲಂಬೋದರ ಹೇಳಿದ. ನಮಗೆ ಒಂದು ಕ್ಷಣ ರೋಮಾಂಚನವಾಯಿತು. ಶರಾವತಿ ಜಲವಿದ್ಯುತ್ ಯೋಜನೆಯ ಮೊಟ್ಟಮೊದಲ ಚರಿತಾರ್ಹ ಸ್ಥಳದ ಮೇಲೆ ನಮ್ಮ ಕೊರೆಕಲ್ ಸಾಗುತ್ತಿತ್ತು.

ಲಿಂಗನಮಕ್ಕಿ ಡ್ಯಾಮ್ ಕಟ್ಟುವ ಮೊದಲೇ ನಿರ್ಮಾಣವಾದದ್ದು ಮಡೇನೂರು ಡ್ಯಾಮ್. ಅದಕ್ಕೆ ಹಿರೇ ಭಾಸ್ಕರ ಡ್ಯಾಮ್ ಅಂತಲೂ ಕರೆಯುತ್ತಿದ್ದರೆಂದೂ, ಅದು 3870 ಅಡಿಗಳಷ್ಟು ಉದ್ದವಿತ್ತೆಂದೂ ಓದಿದ್ದೆ. ವಿಶೇಷವಾದ ವ್ಯವಸ್ಥೆಯ ಮೂಲಕ ಅಲ್ಲೇ ವಿದ್ಯುತ್ ಉತ್ಪಾದಿಸಲಾಗುತ್ತಿತ್ತಲ್ಲದೇ, ಆ ಕಾಲದಲ್ಲಿ ವಿಶೇಷವೆನ್ನಿಸಿದ ತಂತ್ರಜ್ಞಾನದ ಮೂಲಕ ಹೆಚ್ಚಾದ ನೀರನ್ನು ಸೈಪನ್‍ಗಳ ಮೂಲಕ ಬಿಡುವ ವ್ಯವಸ್ಥೆ ಅಳವಡಿಸಲಾಗಿತ್ತೆಂದೂ ತಿಳಿದುಕೊಂಡಿದ್ದೆ.

ನಂತರ ಇನ್ನಷ್ಟು ವಿದ್ಯುತ್ ಉತ್ಪಾದನೆಯ ದೃಷ್ಟಿಯಿಂದ ಲಿಂಗನಮಕ್ಕಿ ಡ್ಯಾಮ್ ಕಟ್ಟಿದಾಗ ಇದು ನೀರಿನಲ್ಲಿ ಮುಳುಗಿತು. ಹಿನ್ನೀರು ಕಡಿಮೆಯಾದಾಗ ಅದು ಕಾಣುತ್ತದೆಯೆಂದೂ, ಡ್ಯಾಮ್ ಮೇಲೆ, ಅದರ ಒಳಗೆ ಓಡಾಡಬಹುದೆಂತಲೂ ಹೇಳಿದ ಲಂಬೋದರ ಒಂದು ಪಕ್ಕದ ದಂಡೆಯ ಮೇಲೆ ಡ್ಯಾಮಿನ ತುದಿಯನ್ನು ತೋರಿಸಿದ. ಹಿನ್ನೀರು ಇಳಿದಿರುವಾಗ ಬಂದಿದ್ದರೆ ತಂತ್ರಜ್ಞಾನ ಇಷ್ಟೊಂದು ಅಭಿವೃದ್ಧಿಗೊಂಡಿರದ ಸಮಯದಲ್ಲೇ ಒಂದು ಸಾಹಸದ, ಆಧುನಿಕತೆಯ ಪ್ರತೀಕವಾಗಿದ್ದ ಡ್ಯಾಮ್‍ನ್ನು ನೋಡಬಹುದಿತ್ತು ಅನ್ನಿಸಿ, ಅದು ತಪ್ಪಿದ್ದಕ್ಕೆ ನಿರಾಸೆಯೆನ್ನಿಸಿತು.

ಒಂದೂವರೆ ದಿನದ ನಂತರ ನಾವು ಮನುಷ್ಯರ ಮುಖವನ್ನು ನೋಡಲಿದ್ದೆವು. ನಾವು ತೇಲುತ್ತ ಹೋಗುತ್ತಿದ್ದಂತೇ ದೂರದಲ್ಲಿ ಪುಟ್ಟ ಕಾಗದದ ದೋಣಿಯಂತೆ ಲಾಂಚೊಂದು ಕಾಣಿಸಿತು. ಅಷ್ಟೊಂದು ದೂರದಲ್ಲಿದ್ದರೂ ಅದರ ಕರ್ಕಶ ಸಪ್ಪಳ ಮಾತ್ರ ನಾವಿದ್ದಲ್ಲಿಗೂ ಅಪ್ಪಳಿಸುತ್ತಿತ್ತು. ‘ ಅರ್ರರ್ರೇ, ಇದೆಲ್ಲಿಂದ ಬಂತು?’ ಎಂದು ಆಶ್ಚರ್ಯ ಚಕಿತ ಉದ್ಗಾರ ತೆಗೆಯುತ್ತಿದ್ದಂತೇ ಲಂಬೋದರ ಹೇಳಿದ. “ ಅದು ಹೊಳೆಬಾಗಿಲ ಬಾರ್ಜ. ಅದು ಈ ಕಡೆಯಿಂದ ತುಮರಿ ಕಡೆಯ ದಡಕ್ಕೆ ಹೋಗ್ತಿದೆ” ಎಂದ.

ನಾನು ಸಾಕಷ್ಟು ಬಾರಿ ಹೊಳೆಬಾಗಿಲ ಬಾರ್ಜ ಮೇಲೆ ಅತ್ತಿಂದಿತ್ತ ಹಾಯ್ದಾಡಿದ್ದೆ. ಆಗೆಲ್ಲ ಸುತ್ತಲಿನ ಹಿನ್ನೀರನ್ನು ಕಂಡು ಖುಷಿಪಟ್ಟಿದ್ದೆ. ಅದರಲ್ಲಿಳಿದು ತೇಲಾಡುವ ಆಸೆಯನ್ನೂ ಪಟ್ಟಿದ್ದೆ. ಈಗ ಬಾರ್ಜ ಮೇಲೆ ನಿಂತು ನೋಡಿದ ನೀರಲ್ಲಿದ್ದು ಅಲ್ಲಿಂದ ಬಾರ್ಜನ್ನು ನೋಡುವ ಅಪೂರ್ವ ಅವಕಾಶ ದೊರಕಿತ್ತು.

ನಾವು ಹತ್ತಿರವಾಗುತ್ತಿದ್ದಂತೇ ಕಿವಿಗಡಚಿಕ್ಕುವ ಸಪ್ಪಳ ಮಾಡುತ್ತ ನೀರನ್ನು ಸೀಳಿಕೊಂಡು ಹೋಗುತ್ತಿದ್ದ ಬಾರ್ಜ್ ನಿಂತುಬಿಟ್ಟಿತ್ತು. ಈ ಬೆಳಗಿನ ಒಂಬತ್ತು ಗಂಟೆಯ ಹೊತ್ತಿಗೇ ಹಳದಿ ಅಂಗಿ ತೊಟ್ಟ ಜನ ಪುಟ್ಟ ಪುಟ್ಟ ಕೊರೆಕಲ್‍ಗಳಲ್ಲಿ ತೇಲಿ ಬರುತ್ತಿರುವದನ್ನು ಕಂಡು ಬಾರ್ಜ ಡ್ರೈವರ್ ಕಂಗಾಲಾಗಿರಬೇಕು. ಇವರ್ಯಾರು? ಎಲ್ಲಿಂದ ಬಂದರು? ಇವರೇನು ಉಗ್ರಗಾಮಿಗಳೋ? ನಕ್ಸಲೈಟರೋ? ಎಂದು ಗಾಬರಿಯಾಗಿರಬೇಕು. ಅವರಿಗಾಗಿರಬಹುದಾದ ಕಂಗಾಲು ಸ್ಥಿತಿಯನ್ನು ಊಹಿಸಿಕೊಂಡೇ ನಮಗೆಲ್ಲ ನಗುಬಂತು ; ಎಷ್ಟೆಂದರೂ ಬೇರೆಯವರು ಗಾಬರಿ ಬಿದ್ದಾಗಲೋ, ಕಷ್ಟದಲ್ಲಿದ್ದಾಗಲೋ ಅವರನ್ನು ನೋಡಿ, ಗೇಲಿ ಮಾಡುವದು, ನಗುವುದು ನಮ್ಮ ಆಜನ್ಮ ಸಿದ್ಧ ನಡವಳಿಕೆ ತಾನೇ.

ಹಿಂದೊಮ್ಮೆ ನಾನು ಈ ಬಾರ್ಜಿನಲ್ಲಿ ಪಜೀತಿಪಟ್ಟ ಘಟನೆ ನೆನಪಾಯಿತು. ಒಮ್ಮೆ ಯಾವುದೋ ಕೆಲಸಕ್ಕೆಂದು ಆಚೆ ದಡದ ತುಮರಿ ಕಡೆ ಹೊರಟಿದ್ದೆ. ಬೆಳಗಿನ ಮೊದಲ ಟ್ರಿಪ್‍ಗೇ ಜನವೋ ಜನ. ಆ ಬೆಳಿಗ್ಗೆ ಅದೆಲ್ಲಿಂದ ಅಷ್ಟೊಂದು ಮಂದಿ ಜಮಾಯಿಸಿದ್ದರೋ ಏನೋ? ಎಲ್ಲೆಲ್ಲೋ ಹೋಗುವ ಜನಸಮುದ್ರ. ಎಲ್ಲರೂ ಅವಸರಿಸಿ ಬಾರ್ಜ ಹತ್ತುತ್ತಲೇ ಇದ್ದರು. ಮಿಸುಕಾಡಲು ಜಾಗವಿಲ್ಲದಂತೇ ಜನ ತುಂಬಿಕೊಂಡಿದ್ದ ಆ ಭಾರಕ್ಕೆ ಬಾರ್ಜನೊಳಕ್ಕೆ ನೀರು ತುಂಬತೊಡಗಿತು.

ಜೀವಮಾನದಲ್ಲಿ ಮೊದಲ ಸರ್ತಿ ಬಾರ್ಜ ಹತ್ತಿದ್ದರೇನೋ? ಆ ಜನಗಳಿಗೆ ಸುತ್ತಲಿನ ಆಗುಹೋಗನ್ನು ಗಮನಿಸುವ ಸಹನೆಯೂ ಇರಲಿಲ್ಲ. ಜನರ ಮಧ್ಯೆ ನಿಂತಿದ್ದ ನನಗೆ ಕಾಲಡಿಗೆ ನೀರು ತಗುಲತೊಡಗಿದಾಗ ಗಾಬರಿಯಾಯ್ತು. ನನ್ನ ಅನಿಸಿಕೆ ಉತ್ಪ್ರೇಕ್ಷೆಯಾಗಿರಬಹುದೇನೋ, ಬಾರ್ಜ ನಿಧಾನಕ್ಕೆ ಮುಳುಗತೊಡಗಿದೆ ಅನ್ನಿಸತೊಡಗಿತು. ಅದನ್ನು ಅಲ್ಲಿದ್ದವರಿಗೆ ಹೇಳುವ ಪರಿಸ್ಥಿತಿ ಅಲ್ಲಿರಲಿಲ್ಲ. ಸುತ್ತಲಿದ್ದ ಜನರನ್ನು ಅಕ್ಕಪಕ್ಕ ಸರಿಸಿಕೊಂಡು ನಾನು ಬಾರ್ಜನಿಂದ ಹೊರಗೆ ಬರಲು ಗಡಿಬಡಿಸಿದೆ.

ಇನ್ನೂ ಬಾರ್ಜೊಳಗೆ ನುಗ್ಗುತ್ತಿದ್ದ ಜನರಿಗೆ ನಾನು ವಿರುದ್ಧ ದಿಕ್ಕಿನಲ್ಲಿ ಹೊರಗೆ ಬರಲು ಯತ್ನಿಸುತ್ತಿದ್ದುದು ವಿಚಿತ್ರವಾಗಿ ಕಂಡಿರಬೇಕು. ಅಂತೂ,ಇಂತೂ ದಡಕ್ಕೆ ಜಿಗಿದು ನಿಟ್ಟುಸಿರುಬಿಟ್ಟಿದ್ದೆ. ಅಷ್ಟರಲ್ಲಿ ಬಾರ್ಜ ಸಿಬ್ಬಂದಿಗಳಿಗೂ ಪರಿಸ್ಥಿತಿಯ ಗಂಭೀರತೆ ಅರಿವಿಗೆ ಬಂದಿರಬೇಕು. ಗಟ್ಟಿಧ್ವನಿಯಲ್ಲಿ ಕೂಗುತ್ತ ಬಾರ್ಜನಲ್ಲಿದ್ದವರನ್ನು ಕೆಳಕ್ಕಿಳಿಸಿದ್ದರು. ಪುಣ್ಯಕ್ಕೆ ಬಾರ್ಜ ದಡಕ್ಕೆ ತಾಗಿ ನಿಂತಿದ್ದರಿಂದ ಯಾವ ಅನಾಹುತವೂ ಸಂಭವಿಸಲಿಲ್ಲ. ನೀರಿನ ಮಧ್ಯೆ ಹೀಗಾಗಿದ್ದರೆ ಕಥೆ ಹೇಳಲೂ ಯಾರು ಇರುತ್ತಿದ್ದರೋ, ಇಲ್ಲವೋ? ಅದು ನೆನಪಾಗಿ ಒಂದು ಕ್ಷಣ ಮೈ ಜುಂ ಅನ್ನಿಸಿತು.

ನೀರಲ್ಲಿ ನಿಂತ ಬಾರ್ಜ ಬಳಿ ತಂಡದ ಒಂದು ಕೊರೆಕಲ್‍ನವರು ಹೋಗಿ ಅಲ್ಲಿದ್ದವರನ್ನು ಮಾತನಾಡಿಸಿ, ವಿಷಯ ತಿಳಿಸಿ ಬಂದ ನಂತರ ಆ ಬಾರ್ಜ ಮುಂದಕ್ಕೆ ಸಾಗಿತು.

Leave a Reply