ರಾಜಾರಾಂ ಅಂಕಣಕ್ಕೆ ವೈದ್ಯರ ಉತ್ತರ..

ರಾಜಾರಾಮ್ ತಲ್ಲೂರು ಅವರ ನುಣ್ಣನ್ನ ಬೆಟ್ಟ ಅಂಕಣ ಈ ಬಾರಿ  ಕೆಪಿಎಂಇ ಕಾಯ್ದೆ ಬಗ್ಗೆ ಅದು ಇಲ್ಲಿದೆ. 

ಇದಕ್ಕೆ ಡಾ ಶಶಿಕಿರಣ್ ಉಮಾಕಾಂತ ವಿವರವಾಗಿ ಪ್ರತಿಕ್ರಿಯಿಸಿದ್ದಾರೆ-

ಡಾ ಶಶಿಕಿರಣ್ ಉಮಾಕಾಂತ

ಮೊದಲನೆಯದಾಗಿ, ಸಮತೋಲನವಾದ ನಿಮ್ಮ ಈ ಲೇಖನಕ್ಕೆ ಅಭಿನಂದನೆಗಳು. ವೈದ್ಯರನ್ನು ನಿರರ್ಗಳವಾಗಿ ದೂಷಿಸುವುದೇ ಒಂದು ಸ್ಟೈಲ್ ಆಗಿರುವ ಈ ದಿನಗಳಲ್ಲಿ, ವೈದ್ಯರಲ್ಲದಿರುವ ಲೇಖಕರಿಂದ ಇಂತಹ ಸಮತೋಲನ ಅಪರೂಪ. ಎಲ್ಲಾ ವೈದ್ಯರೂ ಒಂದೇ ರೀತಿ ಇರುವುದಿಲ್ಲ, ಅವರಲ್ಲೂ ಸಹಾ ಬೇರೆ ವೃತ್ತಿಯಲ್ಲಿರುವ ಹಾಗೆ  ಬೇವು-ಬೆಲ್ಲದ ಮಿಶ್ರಣ ಉಂಟೆಂದು ಮಂಡಿಸಿದಿರಲ್ಲಾ, ಧನ್ಯವಾದಗಳು!

ನಾನು ಕೆಪಿಎಂಇ ಕಾಯ್ದೆಯ ಕರಾಳ ತಿದ್ದುಪಡಿಯನ್ನು ವಿರೋಧಿಸಲು ಹಾಗೂ ಉಪವಾಸ ಸತ್ಯಾಗ್ರಹದಲ್ಲಿ ಭಾಗಿಯಾಗಲು ಬೆಳಗಾವಿಯ ಸುವರ್ಣ ವಿಧಾನಸೌಧದ ಬಳಿ ಇದ್ದ IMA ಸಭಾಮಂಟಪಕ್ಕೆ ಹೋಗಿದ್ದರಿಂದ ಇಲ್ಲಿ ಬರೆಯುವುದು ತಡವಾಯಿತು.

ಕೆಲವು ವಿಷಯಗಳ ಬಗ್ಗೆ ನನ್ನ ಸ್ಪಷ್ಟೀಕರಣ ಇಲ್ಲಿದೆ…

1. ವೈದ್ಯರು ಮಾತ್ರ ಮನುಷ್ಯರ ಜೀವನದೊಂದಿಗೆ ವ್ಯವಹರಿಸುವುದು ಅಲ್ಲ. ಆಟೋ, ಬಸ್, ಲಾರಿ ಚಾಲಕರು, ವಿಮಾನದ ಪೈಲಟ್, ಅಂತಹ ವಾಹನಗಳ ಮತ್ತು ಇತರ ಯಂತ್ರಗಳನ್ನು ವಿನ್ಯಾಸ ಮಾಡುವ, ನಿರ್ವಹಣೆ ಮಾಡುವ ಎಂಜಿನಿಯರ್, ತಂತ್ರಜ್ಞರು, ಕಟ್ಟಡ ಕಟ್ಟಲು ಸಹಾಯ ಮಾಡುವ ಆರ್ಕಿಟೆಕ್ಟ್, ಇಂಜಿನಿಯರ್ ಗಳು ಹಾಗೂ ಮತ್ತಿತರ ವೃತ್ತಿಯವರು ಸಹಾ ಮನುಷ್ಯರ ಜೀವನದೊಂದಿಗೆ ವ್ಯವಹರಿಸುತ್ತಾರೆ. ಪತ್ರಕರ್ತರು ಹಾಗೂ ರಾಜಕಾರಣಿಗಳು ಸಹಾ! ಆದರೆ ವ್ಯತ್ಯಾಸ ಗೊತ್ತೇ? ವೈದ್ಯರು ಒಂದು ಸಮಯದಲ್ಲಿ ಒಬ್ಬರ ಅಥವಾ ಕೆಲವರ ಜೀವಕ್ಕೆ ಮಾತ್ರ ಜವಾಬ್ದಾರರು, ಅದೂ ಸಹಾ ಅಂತಹ ವ್ಯಕ್ತಿಗೆ ರೋಗ ರುಜಿನಗಳು ಬಂದಾಗ ಮಾತ್ರ. ರೋಗ ರುಜಿನಗಳೂ ಕೊಲ್ಲುತ್ತವೆ ಸ್ವಾಮಿ. ಆದರೆ ಮೇಲೆ ನಾನು ಉಲ್ಲೇಖಿಸಿದ ಕೆಲವು ವೃತ್ತಿಯವರು ಒಂದೇ ಸಲಕ್ಕೆ, ಹಲವಾರು (ಹಲವೊಮ್ಮೆ ಸಾವಿರಾರು) ವ್ಯಕ್ತಿಗಳ ಜೀವನದ ಜೊತೆ ವ್ಯವಹರಿಸುತ್ತಾರೆ! ಅದೂ ಸಹಾ, ಯಾವುದೇ ರೋಗ ಇರಬೇಕಿಲ್ಲದ ಆರೋಗ್ಯಕರ ವ್ಯಕ್ತಿಗಳ ಜೀವದ ಜೊತೆ! ನೀವೇ ನಿಮ್ಮ ಮುಂದಿನ ಲೇಖನದಲ್ಲಿ ಹೇಳಿ, ಯಾರ ತಪ್ಪು ಅಥವಾ ಅಲಕ್ಷ್ಯತೆ ಹೆಚ್ಚು ಅಪಾಯಕಾರಿ?

2. ಬದುಕಿಸುವ ಅಥವಾ ಕೊಲ್ಲುವ ಶಕ್ತಿ, ಹಕ್ಕು ಅಥವಾ ಪರವಾನಗಿ ವೈದ್ಯರಿಗೆ ಇಲ್ಲ. “ಕರ್ಮಣ್ಯೇವಾಧಿಕಾರಸ್ತೇ ಮಾ ಫಲೇಶು ಕದಾಚನ” ಎಂದು ಕೃಷ್ಣ ಭಗವದ್ಗೀತೆಯಲ್ಲಿ ತಿಳಿಹೇಳಿದ ಹಾಗೆ, ವೈದ್ಯರು ಮಾಡುವುದು ಕೆಲಸ ಮಾತ್ರ, ಕೆಲಸದ ಫಲಿತಾಂಶ ನಮ್ಮ ವಶದಲ್ಲಿಲ್ಲ. ಇದೆ ಎಂದು ಯಾರಾದರೂ ಭಾವಿಸಿದರೆ ಅದು ದೊಡ್ಡ ಪ್ರಮಾದ. ಆದ್ದರಿಂದ ವೈದ್ಯರಿಗೆ ಎತ್ತರದ ತೊಟ್ಟಿಲೂ ಬೇಡ, ಅಲ್ಲಿಂದ ಕಾರಣವಿಲ್ಲದೆ ಎತ್ತು ಬೀಳಿಸಿದಾಗ ಆಗುವ ನೋವು ಸಹಾ ಖಂಡಿತಾ ಬೇಡ.

3. ನೀವು ಬರೆದಿದ್ದೀರಾ, “ಈವತ್ತು ಕೆಪಿಎಂಇ ಕಾಯಿದೆಯ ತಿದ್ದುಪಡಿ ಆಗತ್ತೋ ಬಿಡತ್ತೋ ಎಂಬುದು ಮಹತ್ವದ ಸಂಗತಿಯೇ ಅಲ್ಲ. ಅದು ಬಂದರೂ ರೋಗಿಯ ದೃಷ್ಟಿಕೋನದಿಂದ ದೊಡ್ಡ ಬದಲಾವಣೆ ಏನೂ ಆಗುವುದಿಲ್ಲ” ಎಂದು. ಇದನ್ನು ನಾನು ಒಪ್ಪದಿದ್ದರೂ ಇದು ನಿಮ್ಮ ಅಭಿಪ್ರಾಯವೆಂದು ಗೌರವಿಸುತ್ತೇನೆ. ಆದರೆ, ನಿಜವಾಗಲೂ ಈ ತಿದ್ದುಪಡಿ ಸರಕಾರ ಪ್ರಸ್ತಾವಿಸಿದ ರೀತಿ ಆಗಿದ್ದರೆ ಎಲ್ಲಾ ಕಲಸುಮೇಲೋಗರ ಆಗುತ್ತಿತ್ತು. ಹಳ್ಳಿಗಳಲ್ಲಿ ಹಾಗೂ ಸಣ್ಣ ಪಟ್ಟಣಗಳಲ್ಲಿ ಇರುವ ಸಣ್ಣ ಆಸ್ಪತ್ರೆಗಳು ಮುಚ್ಚಿ ಹೋಗುತ್ತಿದ್ದವು. ಏಕೆಂದರೆ ಸಮಾಜವಿರೋಧಿಗಳು ಈ ವೈದ್ಯರಿಗೆ ಸುಮ್ಮನೆ ಹಣದಾಸೆಗೆ ಕಿರುಕುಳ ಹಾಗೂ ಬೆದರಿಕೆ ನೀಡಿ ಅವರ ಜೀವನ ಹಾಳು ಮಾಡುತ್ತಿದ್ದವು. ಜಿಲ್ಲೆಯಲ್ಲಿ  ಪ್ರಸ್ತಾವಿಸಿದ ಈ ದೂರು ಸಮಿತಿ ಹೊಸ ಹಫ್ತಾ ರಾಜ್ಯವನ್ನು ಆರಂಭ ಮಾಡುತ್ತಿದ್ದವು. ಕೊನೆಗೆ, ಇದರಿಂದ ಯಾರಿಗೆ ಕಷ್ಟ? ಅಲ್ಲಿಯ ಜನಸಾಮಾನ್ಯರಿಗೆ ತಾನೇ? “ವೈದ್ಯರ ಅನುಪಾತ ಹಳ್ಳಿಗಳಲ್ಲಿ ಇನ್ನೂ ಕರುಣಾಜನಕವಾಗಿದೆ. ಅಲ್ಲಿ 3000-4000ಕ್ಕೆ ಒಬ್ಬ ವೈದ್ಯರಿರುವುದೂ ಇದೆ” ಎಂದೂ ನೀವು ಬರೆದಿದ್ದೀರಾ. ಇದರ ಗತಿ ಏನಾಗುತ್ತಿತ್ತು? ನೀವು ಇದರ ತೀವ್ರತೆಯನ್ನು ಕರಾರುವಕ್ಕಾಗಿ ಚಿತ್ರಿಸಲಿಲ್ಲ ಎಂಬುದು ನನ್ನ ಅಭಿಪ್ರಾಯ.

4. ಸರಿಯಾದ ಹಾಗೂ ಸಮಗ್ರ Documentation ಅಥವಾ ದಾಖಲೀಕರಣ ಅತಿ ಮುಖ್ಯ, ಹಾಗೂ ಆವಶ್ಯಕ. ಆದರೆ ಇದು ಇಂದಿನ ಪರಿಸ್ಥಿತಿಯಲ್ಲಿ ಸಾಧ್ಯವೇ? ವೈದ್ಯರಿಗೆ ಅದನ್ನು ಮಾಡಲು ಪುರುಸೊತ್ತು ಇದೆಯೇ? ಪಾಶ್ಚಾತ್ಯ ದೇಶಗಳಲ್ಲಿ ಜನಸಂಖ್ಯೆ ಕಡಿಮೆ, ಹೊರರೋಗಿಗಳ ಸಂಖ್ಯೆ ಇಲ್ಲಿಯ ಆಸ್ಪತ್ರೆಗಳಿಗೆ ಹೋಲಿಸಿದರೆ ಬಹು ಕಡಿಮೆ. ನಮ್ಮ ದೇಶದ ಹಳ್ಳಿಗಳಲ್ಲಿ ರೋಗಿಯನ್ನು ನೋಡಲು 2 ನಿಮಿಷ ಸಿಕ್ಕಿದರೆ ಹೆಚ್ಚು. ಹಲವು ಬಾರಿ ಅದಕ್ಕಿಂತ ಕಡಿಮೆ. ಹೀಗಿರುವಾಗ ದಾಖಲೀಕರಣ ಸಹಾ ಪೂರ್ಣ ಇರಬೇಕೆಂದರೆ ದಿನದಲ್ಲಿ 24ಕ್ಕಿಂತ ಹೆಚ್ಚು ಗಂಟೆಗಳು ಬೇಕು. ಪಟ್ಟಣಗಳ ಆಸ್ಪತ್ರೆಗಳಲ್ಲಿ ಹಾಗೂ ವೈದ್ಯಕೀಯ ಕಾಲೇಜುಗಳಲ್ಲಿ ಮಾತ್ರ ಆಗುತ್ತಿರಬಹುದು.

5. ರೋಗಿ ಅಥವಾ ಅವರ ಕುಟುಂಬದವರು ಕಳಕಳಿಯಿಂದ ಗೂಗಲ್ ಸರ್ಚ್ ಮಾಡಿ ಹಾಗೂ ವೈದ್ಯಕೀಯ ಅಥವಾ ಅರೆವೈದ್ಯ ಲೇಖನಗಳನ್ನು ಓದಿ ವೈದ್ಯರಿಗೆ ಪ್ರಶ್ನೆ ಕೇಳುವುದು ಖಂಡಿತಾ ನನ್ನ ಅನಿಸಿಕೆಯಲ್ಲಿ ಸ್ವಾಗತಾರ್ಹ. ಅವರಿಗೆ ನಿಖರ ಮಾಹಿತಿ ನೀಡುವುದು ನಮ್ಮ ಕರ್ತವ್ಯ. ಆದರೆ ನಿಮಗೆ ಚೆನ್ನಾಗಿ ಗೊತ್ತಿರುವಂತೆ ಗೂಗಲ್ ಸರ್ಚ್ ನಿಂದ ಸಿಗುವ ಮಾಹಿತಿಗಳೆಲ್ಲವೂ ನಿಖರವಲ್ಲ. ಅಂತಹ ಸರ್ಚ್ ನಿಂದ ನಾವು ಯಾವ ಅಂತರ್ಜಾಲ ಪುಟಕ್ಕೆ ಹೋಗಿ ತಲುಪುತ್ತೇವೆ, ಹಾಗೂ ಅದರ ಖಚಿತತೆ ಹೇಗೆಂದು ತಿಳಿಯುವುದು ಸುಲಭವಲ್ಲ. ಖಂಡಿತವಾಗಿಯೂ ಈ ಕೆಲಸ ಹುಲ್ಲಿನ ಮಧ್ಯೆ ಸೂಜಿ ಹುಡುಕಿದ ಹಾಗೆ. ಹಲವು ವೈದ್ಯರು ಇದನ್ನು ಮೆದುವಾಗಿ ವಿರೋಧಿಸುವ ಕಾರಣ ಇದೇ. ಇದಕ್ಕಾಗಿಯೇ ನಿಮ್ಮ ಸಂಪಾದಕೀಯದ ಹಾಗೂ ಅನುವಾದದ ಸಹಾಯದಿಂದ ಆರೋಗ್ಯವಾಣಿ ಶುರುವಾದದ್ದು, ಅಲ್ಲವೇ? ಅದರಲ್ಲಿ ಜನಸಾಮಾನ್ಯರಿಗಾಗಿ ಲೇಖನ ಬರೆದವರು ವೈದ್ಯರೇ ಅಲ್ಲವೇ? ವಾಟ್ಸಪ್ ನಲ್ಲಿ ಫಾರ್ವರ್ಡ್ ಆಗಿ ಬರುವ ವಿಷಯಗಳ ಬಗ್ಗೆ ನಿಜವಾಗಲೂ ನಾವು ಇಲ್ಲಿ ಚರ್ಚೆ ಮಾಡಬೇಕೆ? ಅವುಗಳ ಮೇಲೆ ಯಾರದ್ದೂ ಹಿಡಿತ ಇಲ್ಲ ಸ್ವಾಮಿ.

6. ನಿಮ್ಮ ಲೇಖನದ ಕೊನೆಯ ಪ್ಯಾರಾಗ್ರಾಫ್ ನೂರಕ್ಕೆ ನೂರು ಸತ್ಯ.  ಅದನ್ನು ಅರಿತು, ಅಷ್ಟು ನಿಚ್ಚಳವಾಗಿ ಬರೆದಿದ್ದಕ್ಕೆ ನನ್ನ ಅಭಿನಂದನೆಗಳು.

1 Response

  1. Wilfred Dsouza says:

    “ಕರ್ಮಣ್ಯೇವಾಧಿಕಾರಸ್ತೇ ಮಾ ಫಲೇಶು ಕದಾಚನ” ಎನ್ನುವ ಭಗವದ್ಗೀತೆಯ ಮಾತಿನ ಮೂಲಕ ತಮ್ಮ ಮಾತನ್ನು ಸಮರ್ಥಿಸಿಕೊಳ್ಳುವ ಮನಸ್ಥಿತಿಯೇ ಒಂದು ವಂಚನೆಯಾಗಿದೆ. ಲಕ್ಷಾಂತರ ರೂ ವೆಚ್ಚ ಮಾಡಿ ವೈದ್ಯಕೀಯ ಜ್ಜಾನ, ಕೌಶಲ್ಯಗಳನ್ನು ಕಲಿತ ವೈದ್ಯರ ಮೇಲೆ ಭರವಸೆ ಇಟ್ಟು ತಮ್ಮ ಬದುಕಿನ ಗಳಿಕೆ, ಸಾಲ ಪಡೆದು ಕೂಡಿಸಿದ ಹಣವನ್ನು ವೈದ್ಯರಿಗೆ ನೀಡುವ ಜನರಿಗೆ ಇಂತಹ ಮಾತುಗಳಿಂದ ನೀಡುವ ಸಂದೇಶವಾದರೂ ಏನು..!?

Leave a Reply

%d bloggers like this: