ನೀರಿನಲ್ಲಿ ನಮ್ಮ ಕೊನೆಯ ದಿನದ ಯಾನ ಸಾಗತೊಡಗಿತು..

ಹೊಳೆಬಾಗಿಲ ಈ ಕಡೆ ದಂಡೆಯಲ್ಲಿ ಜನಜಾತ್ರೆಯೇ ಸೇರಿತ್ತು. ಅವರೆಲ್ಲ ಆಚೆ ದಡಕ್ಕೆ ಹೋಗಿ ಸಿಂಗಂದೂರಿಗೆ, ಮುಂದೆ ಕೊಲ್ಲೂರು, ಮುರಡೇಶ್ವರ, ಉಡುಪಿ ಹೀಗೇ ಎತ್ತೆತ್ತಲೋ ಹೋಗುವವರು. ಅವರ ಮಧ್ಯೆ ಒಂದಿಷ್ಟು ಮಂದಿ ತುಮರಿ ಕಡೆಯ ಸ್ಥಳೀಯರು. ಮಕ್ಕಳು, ಹೆಂಗಸರು, ಮುದುಕರು.. ಎಲ್ಲ ವಯೋಮಾನದವರೂ ಅಲ್ಲಿದ್ದರು.

ಅವರಲ್ಲದೇ ನೂರಾರು ವಾಹನಗಳು ಬೇರೆ. ಜನರ ಕಿರುಚಾಟ, ವಾಹನಗಳ ಸಪ್ಪಳ, ಇವೆಲ್ಲವುಗಳಿದಾಗಿ ಅದೊಂದು ದೊಡ್ಡ ಸಂತೆ ಪೇಟೆಯೇ ಆಗಿಬಿಟ್ಟಿತ್ತು.

ಅವರೆಲ್ಲ ದಡದಲ್ಲಿ ನಿಂತು ಎಲ್ಲಿಂದಲೋ ಅಚಾನಕ್ಕಾಗಿ ಬಂದ ನಮ್ಮನ್ನು ಆಶ್ಚರ್ಯಚಕಿತರಾಗಿ ವೀಕ್ಷಿಸುತ್ತಿದ್ದರು. ಅಲ್ಲಿ ಗಜಾನನ ಶರ್ಮ ಹಾಗೂ ಶಿವಮೊಗ್ಗದ ನಾಲ್ಕಾರು ಸಹಯಾತ್ರಿಗಳು ತಮ್ಮ ಯಾನವನ್ನು ಮೊಟಕುಗೊಳಿಸಿ ಹಿಂತಿರುಗಲಿದ್ದರು. ಸ್ವಾಮಿ ಸ್ವಲ್ಪಹೊತ್ತು ಇಲ್ಲಿ ತಂಗುವ ಆದೇಶ ನೀಡಿದಾಗ ನಮ್ಮ ಕೊರೆಕಲ್‍ಗಳಿಗೆ ಲಂಗರು ಹಾಕಿ ಹೊಳೆಬಾಗಿಲ ಮೇಲಿಳಿದೆವು.

ನೀರಿನಿಂದ ನೆಲಕ್ಕೆ ಕಾಲಿಡಲಾಗದಷ್ಟು ಕಸ ತುಂಬಿಕೊಂಡಿತ್ತು. ವಾಕರಿಕೆಯಾಗುವಷ್ಟು ಅಸಹ್ಯ ಅಲ್ಲಿತ್ತು. ದಡದ ಅಂಚಿನಲ್ಲಿ, ಅಂಚಿನ ನೀರಿನಲ್ಲಿ ಕಸ ದಪ್ಪನೆಯ ಚದ್ದರದಂತೆ ಹಾಸಿಬಿದ್ದಿತ್ತು. ಅದನ್ನು ಕಂಡು ಮೈ ನಡುಗುವಷ್ಟು ಹೇಸಿಗೆಯಾಯ್ತು.

ನನಗೆ ಮೈಲುದೂರಕ್ಕೂ ಕೇಳುವ ಕರ್ಕಶ ಹಾಡುಗಳನ್ನು ಸ್ಟಿರೀಯೋಗಳಲ್ಲಿ ಅರಚಿಸುತ್ತ, ಶರವೇಗದಲ್ಲಿ ಸಾಗುವ ವಾಹನಗಳಲ್ಲಿ ಪ್ರವಾಸ ಮಾಡುವ ಜನರನ್ನು ಕಂಡಾಗ ಆಶ್ಚರ್ಯವೆನ್ನಿಸುತ್ತದೆ. ಯಾವುದೇ ಘನವಾದ ಕಾರಣವಿಲ್ಲದೇ ಮಜಾ ತೆಗೆದುಕೊಳ್ಳುವದಷ್ಟೇ ಉದ್ದೇಶವಾದ ಇವರೆಲ್ಲ ಎಲ್ಲಿಂದ ಬರುತ್ತಾರೋ? ಎಲ್ಲಿಗೆ ಹೋಗುತ್ತಾರೋ? ಬಂದ ಜಾಗವನ್ನು ಒಂದು ಕ್ಷಣವಾದರೂ ಗಮನಿಸುವ ವ್ಯವದಾನವಿಲ್ಲದೇ, ಗಡಬಿಡಿಯಲ್ಲೇ ಇರುವ ಇವರು ಬರುವದಾದರೂ ಯಾತಕ್ಕೆ?

ಕಂಡ ಕಂಡಲ್ಲಿ ತಿನ್ನುವ, ಹೆಚ್ಚಾದದ್ದನ್ನು ಅಲ್ಲೇ ಎಸೆಯುವ, ಕಂಡಲ್ಲೆಲ್ಲ ಕಕ್ಕುವ, ಎಲ್ಲೆಂದರಲ್ಲಿ ಕಸ ಬಿಸಾಕುವ ಈ ಪ್ರವಾಸಿಗರ ವರ್ತನೆಯಿಂದ ಹೊಳೆಬಾಗಿಲು ಮಾತ್ರವಲ್ಲ ಇಡೀ ದೇಶವೇ ಕಸದ ಕೊಂಪೆಯಾಗಿದೆ. ನಾಗರಿಕತೆಯ ಗಂಧಗಾಳಿಯಿಲ್ಲದಂತೆ, ಅಲೆದಾಡುವದೇ ಪ್ರವಾಸವೆಂದುಕೊಂಡಿರುವ ಈ ಸಂಸ್ಕøತಿ ಇತ್ತೀಚಿನ ಜಾಗತೀಕರಣದ ಫಲ ಎಂದು ಅನೇಕ ಬಾರಿ ಅನ್ನಿಸಿದ್ದಿದೆ.

ಹೊಳೆಬಾಗಿಲಿನ ಆ ತಿಪ್ಪೆಯ ಕೊಂಪೆಯಲ್ಲಿ ಜನರನ್ನು ನೋಡಿ ಒಂದೂವರೆ ದಿನವಲ್ಲ, ಆಯುಷ್ಯವಿಡೀ ಜನರನ್ನ ನೋಡದೇ ಬದುಕುವದು ಉತ್ತಮ ಅನ್ನಿಸಿಬಿಟ್ಟಿತು.

ನಮ್ಮ ಜೊತೆಗಿದ್ದ ಗಜಾನನ ಶರ್ಮಾ, ಶಿವಮೊಗ್ಗದ ನಾಲ್ಕಾರು ಮಾಧ್ಯಮ ಸ್ನೇಹಿತರು ಹೊಳೆ ಬಾಗಿಲಲ್ಲಿ ಇಳಿದು, ನಮಗೆ ಗುಡ್‍ಬೈ ಹೇಳಿ ಬಸ್ ಹತ್ತಿದ ನಂತರ ನಮ್ಮ ಪ್ರಯಾಣ ಮುಂದುವರೆಯಿತು.

ಯಾಕೋ, ಏನೋ ಅವರೆಲ್ಲ ಕಳಚಿಕೊಂಡ ನಂತರ ನನಗೆ ಮನೆಯ ನೆನಪು ಎಳೆಯತೊಡಗಿತು. ಮನೆ, ಮಠ ಯಾವುದು ಇಲ್ಲದೇ, ಅಲೆಮಾರಿಗಳ ಥರ ನಾವು ಸಾಗುತ್ತಿದ್ದೆವೆಯೇ ಎನ್ನುವ ಮನಸ್ಥಿತಿ ಮೂಡತೊಡಗಿತು.

ದೇಹದ ಸಂದು, ಸಂದುಗಳಲ್ಲಿ ನೋವು ಪುಟಿದೇಳುತ್ತಿತ್ತು. ಕಾಲಿನ ಮೀನಖಂಡ ಸಿಡಿಯುತ್ತಿತ್ತು. ಕೈಗಳಂತೂ ಸೋತು ಹೋಗಿದ್ದವು. ಆದರೂ ಅನಿವಾರ್ಯವಾಗಿ ಸರದಿ ಬಂದಾಗ ಹುಟ್ಟು ಹಾಕಲೇಬೇಕಿತ್ತು. ನಿನ್ನೆ ದಿನ ಅಷ್ಟಾಗಿ ಕಂಡಿರದ ಬಿಸಿಲಿನ ಝಳ ಎರಡನೆ ದಿನ ಬೆಳಗಿನಿಂದಲೇ ಸುಡತೊಡಗಿತ್ತು. ಅಗಸದಲ್ಲಿ ಸೂರ್ಯ ಬೆಂಕಿಯಂತೆ ಉರಿಯುತ್ತಿದ್ದ. ಹೊತ್ತೇರಿದಂತೆಲ್ಲ ಬಿಸಿಲಿನ ತಾಪಕ್ಕೆ ಹಿನ್ನೀರೂ ಕಾದು ಬಿಸಿಯಾಗತೊಡಗಿತ್ತು.

ಮುಖದ ಉರಿಯನ್ನು ತಣಿಸಲು ಆಗಾಗ್ಗೆ ಮುಖಕ್ಕೆ ನೀರು ಎರಚಿಕೊಂಡರೆ ಬಿಸಿನೀರು ಸೋಕಿದಂತಾಗುತ್ತಿತ್ತು. ನಮಗೆ ಯಾವುದೇ ನೆರಳಿರಲಿಲ್ಲ. ಕಣ್ಣು ಮಾತ್ರ ಬಿಟ್ಟು ಉಳಿದಂತೆ ಸ್ಕಾರ್ಫ್ ಸುತ್ತಿಕೊಳ್ಳುವದು ಅನಿವಾರ್ಯವಾಯಿತು. ಮೇಲಿನಿಂದ ಬಿಸಿಲು, ಕೆಳಗೆ ನೀರಿನ ಕಾವು ಬಟಾಬಯಲಿನಂತ ಹಿನ್ನೀರಿನಲ್ಲಿ ಆ ಕಡುತಾಪಕ್ಕೇ ಕಂಗಾಲೆದ್ದು ಹೋದೆವು.

ಲಕ್ಷ್ಮಿನಾರಾಯಣ ಬಿಸಿಲಿನ ಹೊಡೆತಕ್ಕೆ ಕಂಗೆಟ್ಟು ಶರ್ಟ್ ಕಳಚಿ ಬರಿಮೈಯಲ್ಲಿ ವಿಗ್ರಹದಂತೆ ಕೂತಿದ್ದರು. ಅವರಿಗೆ ಗಡ್ಡವಿದ್ದುದರಿಂದ ಮುಖಕ್ಕೇನೂ ಬಾಧೆಯಿರಲಿಲ್ಲ. ಬೋಳು ತಲೆಗೆ ಟವೆಲ್ ಸುತ್ತಿದ್ದರು. “ ಅಲ್ರೀ, ಲಕ್ಷ್ಮಿನಾರಾಯಣ, ನಾವೂ ಶರ್ಮರ ಹಾಗೇ ಹೊಳೆಬಾಗ್ಲಲ್ಲಿ ಇಳಿದುಹೋಗಿದ್ರೆ ಒಳ್ಳೇದಿತ್ತೇನೋ?” ಅಂದೆ. ಅವರಿಗೂ ಅದು ಸರಿ ಅನ್ನಿಸಿರಬೇಕು. ಅಲ್ಲದೇ ಗುಟ್ಕಾ ತಿನ್ನದೇ ಎರಡು ದಿನ ಬೇರೆ ಆಗುತ್ತ ಬಂದಿತ್ತು. ಛೇ, ಎಂಥ ಎಡಬಟ್ಟು ಕೆಲಸ ಮಾಡ್ಕೊಂಡೆ ಅಂತಾ ಅವರು ಮನಸ್ಸಿನಲ್ಲಿ ಪರಿತಪಿಸುತ್ತಿರಲಿಕ್ಕೂ ಸಾಕು ಅನ್ನಿಸಿತು.

ನನ್ನ ಪ್ರಶ್ನೆಗೆ ‘ಏ, ಹಾಂಗಲ್ರೀ’ ಎಂದಷ್ಟೇ ಉತ್ತರಿಸಿ ಲಂಬೋದರನ ಬಳಿ ತನಗೆ ಹುಟ್ಟು ಹಾಕಲು ಯಾಕೆ ತೊಂದರೆಯಾಗುತ್ತಿದೆ ಎನ್ನುವದರ ಬಗ್ಗೆ ಅದ್ಯಾವುದೋ ಹಳೆಯ ಪುರಾಣ ಎತ್ತಿಕೊಂಡು ಕೂತರು. ಹೊಳೆಬಾಗಿಲು ದಾಟಿದ ನಂತರ ಹರಿವ ನೀರಿಗೆ ಎದುರಾಗಿ ಸಾಗುತ್ತಿದ್ದೇವೆ ಎಂದನ್ನಿಸತೊಡಗಿತು. ಮೊದಲಿಗಿಂತ ಪ್ರಯಾಸಪಟ್ಟು ಈಗ ಹುಟ್ಟು ಹಾಕಬೇಕಿತ್ತು. ಮೊದಮೊದಲು ನಮ್ಮ ಕೈಗಳು ಸೋತಿದ್ದಕ್ಕೆ ಹಾಗನ್ನಿಸುತ್ತಿದೆ ಎಂದುಕೊಂಡೆವು.

ಒಂದು ವಿಸ್ತಾರವಾದ ನೀರಿನ ಬಯಲನ್ನು ದಾಟಿ ನಡುಗುಡ್ಡೆಯೊಂದರಲ್ಲಿ ನಿಂತಾಗ ಸ್ವಾಮಿ ಹೇಳಿದರು. “ಇನ್ನು ಮುಂದೆ ಪ್ರವಾಹಕ್ಕೆ ಎದುರಾಗಿ ಸಾಗುವುದು ಅಂತಾರಲ್ಲ, ಹಾಗೇ ಹೋಗಬೇಕಿದೆ. ಇಲ್ಲಿ ಗಮನಕ್ಕೆ ಬಾರದಂತೆ ನೀರು ಪ್ರವಹಿಸುತ್ತಲೇ ಇರುತ್ತದೆ. ಮತ್ತು ನಾವು ಇಂಚು ಇಂಚಾಗಿ ಮೇಲಕ್ಕೆ ಸಾಗುತ್ತಿದ್ದೇವೆ ಎಂದಾಗ ನಮ್ಮ ಅನುಭವಕ್ಕೆ ಬಂದದ್ದು ಸುಳ್ಳಲ್ಲ ಅನ್ನಿಸಿತು.

ಹಿನ್ನೀರಿನಲ್ಲಿ ತೇಲುತ್ತಿದ್ದ ಹಾಗೇ ದೂರದಲ್ಲಿ ಮಸುಕಾಗಿ ಬೃಹತ್ ಗಿರಿಶ್ರೇಣಿಯೊಂದು ಕಾಣತೊಡಗಿತು. ‘ಇದ್ಯಾವದು, ಇಷ್ಟು ದೊಡ್ಡ ಪರ್ವತ’ ಆಶ್ಚರ್ಯಪಟ್ಟೆ. “ಅದು ಕೊಡಚಾದ್ರಿ” ಎಂದು ಲಕ್ಷ್ಮಿನಾರಾಯಣ ಹೇಳಿದಾಗ ಒಂದು ಕ್ಷಣ ಬೆರಗಾಯಿತು.

ಎದುರಲ್ಲಿ ಹಿನ್ನೀರು ಎರಡು ಕೋವುಗಳಾಗಿ ವಿಭಾಗಗೊಂಡಿತ್ತು. ಯಾವುದರಲ್ಲಿ ಹೋಗಬೇಕು ಎಂದು ತಂಡದಲ್ಲಿ ಒಂದಷ್ಟು ಹೊತ್ತು ವಿಚಾರ, ವಿಮರ್ಶೆ ನಡೆಯಿತು. ಅಲ್ಲಿ ಸಾಕಷ್ಟು ಬಾರಿ ಸಂಚರಿಸಿರಬಹುದಾದ ಸ್ವಾಮಿ ಮತ್ತು ನೊಮಿಟೊ ಕೂಡ ಯಾವ ದಿಕ್ಕಿನಲ್ಲಿ ಹೋಗಬೇಕು ಎಂದು ತಲೆ ಬಿಸಿ ಮಾಡಿಕೊಳ್ಳುತ್ತಿದ್ದರು. ವಾಸ್ತವಿಕವಾಗಿ ಆ ಕುರಿತು ನಮ್ಮ ಚರ್ಚೆ ನಡೆಯಬೇಕು, ಹಾಗಾಗಿಯಾದರೂ ನಾವೆಲ್ಲ ಮತ್ತಷ್ಟು ಪರಿಣಿತಿ ಪಡೆಯಲಿ ಎನ್ನುವದು ಅವರ ಉದ್ದೇಶವಿತ್ತು. ಅದು ನಂತರದಲ್ಲಿ ನನಗೆ ಅರ್ಥವಾಯಿತು.

ಕೊನೆಗೆ ಕೊಡಚಾದ್ರಿ ಪರ್ವತ ಕಾಣುವ ದಿಕ್ಕಿನಲ್ಲಿ ಹೋದರೆ ನಿಟ್ಟೂರು ಕಡೆಗೆ ಹೋಗಬೇಕಾಗಬಹುದು, ಹೊಸನಗರದ ಕಡೆಗೆ ಅದರ ಎದುರು ಕೋವಿನಲ್ಲಿ ಹೋಗಬೇಕು ಎನ್ನುವ ತೀರ್ಮಾನವಾಯಿತು.

ಹೊಳೆಬಾಗಿಲು ದಾಟಿ ಸುಮಾರು ದೂರ ಸಾಗಿದನಂತರ ಅಲ್ಲಲ್ಲಿ ದಡದ ಅಂಚಿನಲ್ಲಿ ಒಬ್ಬಿಬ್ಬರು ಜನ ಕಾಣತೊಡಗಿದರು. ಇಲ್ಲಿ ಇವರೇನು ಮಾಡ್ತಾರೆ? ಎಂದು ಪ್ರಶ್ನಿಸಿದ್ದಕ್ಕೆ ಅವರು ನೀರಿನುದ್ದಕ್ಕೂ ಬಲೆ ಹಾಕಿ ಮೀನು ಹಿಡಿಯುತ್ತಾರೆಂದೂ ಲಂಬೋದರ ಹೇಳಿದ. ಸಂಜೆ ಬಲೆ ಹಾಕಿ ಹೋಗಿ ಮರುದಿನ ಬೆಳಿಗ್ಗೆ ಬಲೆ ಎತ್ತುತ್ತಾರೆಂದೂ, ಅವರು ಬಿದಿರನ್ನು ನೇಯ್ದು, ಅದರ ಮೇಲೆ ಚರ್ಮ ಹೊದಿಸಿ, ಆ ಚರ್ಮಕ್ಕೆಲ್ಲ ಡಾಂಬರ್ರೋ, ಕಾಡುಗೇರು ಹಯನವನ್ನೋ ಬಳಿದುಕೊಂಡ ದೇಸಿ ಕೊರೆಕಲ್‍ನ್ನು ಉಪಯೋಗಿಸುತ್ತಾರೆಂದೂ, ಹೆಚ್ಚೆಂದರೆ ಇಬ್ಬರು ಮಾತ್ರ ಅದರಲ್ಲಿ ಕೂರಬಹುದೆಂದು ಹೇಳಿದ.

ನಮ್ಮ ಕೊರಾಕಲ್ ಥರಾ ಅದಕ್ಕೆ ಕೂರುವದಕ್ಕೆ ಎರಡೂ ಪಕ್ಕ ಎರಡು ಅಡಿಯಷ್ಟು ಉದ್ದ ಬೆಂಚ್‍ನಂತ ಆಸನವಿರದೇ, ಅದರೊಳಗೇ ಕಾಲು ಮಡಚಿ ಕುಳಿತು ಹುಟ್ಟು ಹಾಕಬೇಕಿತ್ತು. ಆ ನಿರ್ಮಾನುಷ್ಯ ಪರಿಸರದಲ್ಲಿ ಒಂಟಿಯಾಗಿ ಮೀನು ಹಿಡಿಯುವ ಅವರನ್ನು ಕಂಡು ಅಚ್ಚರಿಯಾಯಿತು. ಬಿಸಿಲಿಳಿಯುತ್ತ ಬಂದಂತೆ ಮುಖದ ಉರಿ ಕಡಿಮೆಯಾಯಿತಾದರೂ ಚಳಿ ಶುರುವಾಗತೊಡಗಿತು. ಹಿಂದಿನ ದಿನಕ್ಕಿಂತ ಜಾಸ್ತಿ ಚಳಿ ಇದೆ ಎಂದು ಲಕ್ಷ್ಮಿನಾರಾಯಣ ಮತ್ತಷ್ಟು ಹೆದರಿಸಿದರು.

ಅವರು ಕಂಡದ್ದನ್ನೆಲ್ಲ ಫೋಟೊ ತೆಗೆದು ಕ್ಯಾಮರಾ ಛಾರ್ಜ ಕಡಿಮೆಯಾಗಿ ಪಜೀತಿಪಡತೊಡಗಿದ್ದರು. ಪಶ್ಚಿಮ ದಿಕ್ಕಿನ ಹೊಂಬಣ್ಣ ನೀರಿನ ಮೇಲೆ ಥಳಥಳಿಸುತ್ತಿತ್ತು. ಸಣ್ಣನೆ ಗಾಳಿ ಆರಂಭಗೊಂಡು ನಿಶ್ಚಲವಾಗಿದ್ದ ಅಲೆಗಳು ಹೊಯ್ದಾಡಲು ತೊಡಗಿದವು. ನಮಗೆ ಭಯವೆನ್ನಿಸತೊಡಗಿತು. ಮತ್ತೆಲ್ಲಿ ನಿನ್ನೆಯಂತೆ ಒದ್ದಾಡಬೇಕಾಗುತ್ತದೋ ಎಂದು ಅಳುಕಿದೆವು.

ಸೂರ್ಯ ಮುಳುಗಿದ ನಂತರ ಕೊಡಚಾದ್ರಿ ಹೆಚ್ಚು ಸ್ಪುಟವಾಗಿ ಗೋಚರಿಸತೊಡಗಿತು. ಆಕಾಶದೆತ್ತರಕ್ಕೆ ಎದ್ದುನಿಂತ ಆ ಗಿರಿ ಅಬೇಧ್ಯ ಅನ್ನಿಸಿತು. ನಾನು ದೂರದ ಎಲ್ಲೆಲ್ಲೋ ಇಂಥ ಸ್ಥಳಗಳನ್ನು ಹುಡುಕಿಕೊಂಡು ಹೋಗಿದ್ದೆ. ಆದರೆ ಹತ್ತಿರದಲ್ಲೇ ಇರುವ ಕೊಡಚಾದ್ರಿಯನ್ನು ಈವರೆಗೂ ನೋಡಿಲ್ಲ ; ಆ ಪರ್ವತವನ್ನು ಹತ್ತಿಲ್ಲ. ಹಾಗಂತ ಕೊಲ್ಲೂರಿಗೆ ಎರಡು ಮೂರು ಬಾರಿ ಹೋಗಿದ್ದೆ. ಹತ್ತಿರದ ಕೊಡಚಾದ್ರಿಗೆ ಹೋಗದಿದ್ದುದಕ್ಕೆ ತುಂಬಾ ಬೇಸರ ಆಯಿತು.

ಕತ್ತಲಾಗಿ ಸುಮಾರು ಹೊತ್ತಿನ ತನಕವೂ ಕೊರೆಕಲ್‍ನಲ್ಲಿ ಸಾಗುತ್ತಿದ್ದವರು ನಂತರ ಒಂದು ನಡುಗುಡ್ಡೆಯಲ್ಲಿ ಠಿಕಾಣಿ ಹೂಡಿದೆವು. ಅದು ಹಿಂದಿನ ದಿನದ ಥರಾ ಆಳವಾದ ನೀರಿನಲ್ಲಿ ಮುಳುಗಿದ ಗುಡ್ಡವಾಗಿರಲಿಲ್ಲ. ಅಲ್ಲಿ ನೀರಿನ ಶೇಖರಣೆಯೂ ಕಡಿಮೆಯಿತ್ತು. ಪ್ರಾಯಶ: ಹಿನ್ನೀರು ಮುಗಿದು ನದಿಯ ಪಾತ್ರ ಅಲ್ಲಿಂದಲೇ ಆರಂಭಗೊಳ್ಳುತ್ತಿದೆಯೇನೋ ಎಂದು ಅಂದುಕೊಂಡೆ. ಕಳೆದ ದಿನದಂತೆ ಒಣ ಕಟ್ಟಿಗೆ ಹುಡುಕಿ, ಬೆಂಕಿ ಹಾಕಿ ಅಡುಗೆ ಸಿದ್ಧತೆ ನಡೆಸಲಾಯಿತು. ಮೊದಲ ದಿನವಿದ್ದ ಉತ್ಸಾಹ ಎಲ್ಲರಲ್ಲೂ ಕಡಿಮೆಯಾಗಿತ್ತು.

ಮೊದಲ ದಿನಕ್ಕಿಂತ ಹೆಚ್ಚು ದೂರದ ಯಾನ, ಬಿಸಿಲಿನ ಘಾಸಿ ಸುಸ್ತಾಗಿಸಿಬಿಟ್ಟಿತ್ತು. ಅಲ್ಲದೇ ಕೊರೆಯುವ ಚಳಿ ಬೇರೆ. ಕಣ್ಣು ಕೋರೈಸುವ ಬೆಳಕಿನ, ಒಂದು ಕ್ಷಣವೂ ಸುಮ್ಮನಿರಲು ಆಸ್ಪದ ನೀಡದ ಮೊಬೈಲು, ಕಂಪ್ಯೂಟರ್, ಟಿವಿಗಳ, ಕರ್ಕಶ ಸದ್ದು, ಗದ್ದಲದ ಜಗತ್ತಿನಿಂದ ಬೇರೆಯದೇ ಆದ ಜಗತ್ತಿನಲ್ಲಿ ನಾವಿದ್ದೆವು. ಅಲ್ಲಿ ಸಮಯ ನಿಧಾನಕ್ಕೆ ಸರಿಯುತ್ತಿದೆ ಅನ್ನಿಸಲು ಕಾರಣ ನಮಗೆ ಯಾವುದೇ ಧಾವಂತವಿಲ್ಲದಿರುವದು. ಅಲ್ಲಿ ನಮ್ಮ ಎಲ್ಲ ವೈಯುಕ್ತಿಕ ಸಾಮರ್ಥ್ಯವನ್ನು ಕಳೆದುಕೊಂಡು ಕೂತಿದ್ದೆವು.

ಈ ಕ್ಷಣದಲ್ಲಿ ನನಗನ್ನಿಸಿದ್ದನ್ನು ಮಾಡುವ, ನೋಡುವ ಯಾವ ಅವಕಾಶವೂ ಅಲ್ಲಿರಲಿಲ್ಲ. ಆ ನಸುಗತ್ತಲಿನಲ್ಲಿ ಒಂಟಿಯಾಗಿ ಕೂತು ಈ ಹೊತ್ತಿಗೆ ಊರಲ್ಲಿ ಇದ್ದಿದ್ದರೆ ಏನು ಮಾಡುತ್ತಿರುತ್ತಿದ್ದೆ ಎಂದು ಊಹಿಸಿಕೊಳ್ಳತೊಡಗಿದೆ. ಬೀದಿದೀಪ, ಮನೆ, ಅಂಗಡಿಗಳ ದೀಪ, ವಾಹನಗಳ ರಾಚುವ ದೀಪಗಳ ನಡುವೆ ಕಳೆದುಹೋಗಿರುತ್ತಿದ್ದೆ ಅನ್ನಿಸಿತು. ಹೊರಗೆ ಪ್ರಖರ ಬೆಳಕಿದ್ದಷ್ಟೂ ನಮ್ಮೊಳಗೆ ಕತ್ತಲು ದಟ್ಟವಾಗುತ್ತದೆ ಎನ್ನಿಸಿತು.

ಸಾಕಷ್ಟು ವಿಶಾಲವಾಗಿದ್ದ ಬಯಲಿನಲ್ಲಿ ಸಾರು, ಅನ್ನ ಉಂಡು ಕಾಡಿನಲ್ಲಿ ಮಲಗಲು ತಯ್ಯಾರಿ ನಡೆಸಿದೆವು. ಆಕಾಶದಲ್ಲಿ ಎದ್ದುಬಂದ ಚಂದ್ರ ಬೆಳಕನ್ನು ಸುರಿಸುತ್ತಿದ್ದ. ತಿಂಗಳು ಬೆಳಕಿನ ತಂಪು, ಚಳಿ, ತೆಳ್ಳಗೆ ಬೀಳುತ್ತಿದ್ದ ಇಬ್ಬನಿಗಳ ನಡುವೆ ಆ ದಟ್ಟ ಕಾಡಿನ ಮರದ ಬುಡವೊಂದರಲ್ಲಿ ಮಲಗಿದ್ದೊಂದೇ ಗೊತ್ತು.

ಎರಡು ಹಗಲು, ಎರಡು ರಾತ್ರಿ ಹಿನ್ನೀರಿನಲ್ಲಿ ಕಳೆದ ನಾವು ಮೂರನೆಯ ದಿನ ನಮ್ಮ ಯಾನದ ಮುಂದುವರಿಕೆಗೆ ಸಿದ್ಧರಾದೆವು. ಅದು ನಮ್ಮ ಯಾನದ ಕೊನೆಯ ದಿನ. ಸುತ್ತಲಿನ ಪರಿಸರವೂ ಕಳೆದ ಎರಡು ದಿನಗಳು ಸಾಗಿಬಂದ ರೀತಿ ಇರಲಿಲ್ಲ. ಅಥವಾ ಕೊನೆ ತಲುಪಲಿದ್ದೇವೆ ಎನ್ನುವ ಅನಿಸಿಕೆ ಆ ರೀತಿ ನೋಟವನ್ನು ಉಂಟುಮಾಡಿತ್ತೋ?

ಹಿಂದಿನ ದಿನದಂತೆ ರಾತ್ರಿ ಬೆಂಕಿ ಹಾಕಿದಲ್ಲಿದ್ದ ಕೆಂಡ, ಬೂದಿಗಳನ್ನೆಲ್ಲ ಒಟ್ಟು ಮಾಡಿ ನೀರಿಗೆ ಹಾಕಿ, ಆ ಜಾಗದಲ್ಲಿ ಮಣ್ಣು ಬೀರಿ, ತರಗೆಲೆ ಹಾಕಿದೆವು. ಮೊದಲಿನ ದಿನದಿಂದ ಸ್ವಾಮಿಯವರ ಈ ಎಲ್ಲ ಚರ್ಯೆಗಳನ್ನು ಗಮನಿಸುತ್ತ ಬಂದಿದ್ದೆ. ಅವರು ಮೊದಲೇ ಕಟ್ಟುನಿಟ್ಟಾಗಿ ಹೇಳಿದ್ದರು. ಊಟದ ಬಟ್ಟಲನ್ನು ನೀರಿನಲ್ಲಿ ತೊಳೆಯಬಾರದು. ಅನ್ನದ ಅಗುಳನ್ನು ನೀರಿಗೆ ಹಾಕಬಾರದು. ಸೋಪು ಹಚ್ಚಿ ಸ್ನಾನ ಮಾಡಬಾರದು ಎನ್ನುವ ಸೂಚನೆಗಳ ಜೊತೆಗೆ ಕ್ಯಾಂಪ್ ಫೈರ್ ಮಾಡಿದ ಜಾಗವನ್ನು ಶುಚಿಗೊಳಿಸುವ ಹೊಸ ವಿಧಾನವನ್ನು ಕಲಿಸಿಕೊಟ್ಟಿದ್ದರು.

ನಾವು ನಿಸರ್ಗದ ಜೊತೆಗೆ ಅದರಂತೆ ಬದುಕುವುದು ಉತ್ತಮ. ನಮ್ಮ ಅನುಕೂಲದ ಕಾರಣದಿಂದ ಅದರ ನಿಯಮವನ್ನು ಮುರಿಯುವದು ಸರಿಯಲ್ಲ. ಮನುಷ್ಯಸಂಕುಲದ ನಡುವಿನ ನಡವಳಿಕೆಗಳನ್ನು ನಿಸರ್ಗದ ಮೇಲೆ ಹೇರುವುದು ಎಷ್ಟು ಸರಿ? ಎನ್ನುವದು ಅವರ ಯೋಚನಾ ಕ್ರಮದ ತಾತ್ಪರ್ಯವಾಗಿರಬಹುದು ಎಂದು ನಾನಂದುಕೊಂಡಿದ್ದೆ.

ಸಣ್ಣಗೆ ಉಗಿಯೇಳುತ್ತಿದ್ದ ನೀರಿನಲ್ಲಿ ನಮ್ಮ ಕೊನೆಯ ದಿನದ ಯಾನ ಸಾಗತೊಡಗಿತು. ನೀರಲ್ಲಿ ಸಾಗತೊಡಗಿದಂತೆ ಹಿನ್ನೀರಿನ ಎರಡೂ ದಡಗಳು ಹತ್ತಿರವಾಗತೊಡಗಿದವು. ನಡುಗುಡ್ಡೆಗಳೂ ಕಣ್ಮರೆಯಾಗಿದ್ದವು. ಹಿನ್ನೀರೆನ್ನುವದು ಈಗ ವಿಶಾಲವಾದ ನದಿಯಂತೆ ಭಾಸವಾಗತೊಡಗಿತು. ಎರಡು ದಿನ ಕಾಣದಿದ್ದ ಹಕ್ಕಿಗಳು ಅಲ್ಲಲ್ಲಿ ಹಾರಾಟ ನಡೆಸಿದ್ದವು. ಹಿಂದಿನ ದಿನಕ್ಕಿಂತ ಹೆಚ್ಚು ಕಸುವಿನಿಂದ ಹುಟ್ಟು ಹಾಕುವದು ಅನಿವಾರ್ಯವಾಗತೊಡಗಿತು. ನಾವು ಈಗ ಕೆಳಮುಖವಾಗಿ ಹರಿಯುತ್ತಿರುವ ನದಿಪಾತ್ರದಲ್ಲಿರುವದು ಸ್ಪಷ್ಟವಾಗಿತ್ತು.

ದೂರದಲ್ಲಿ ಯಾವುದೋ ಕಲ್ಲಿನ ಕ್ರಷರ್ ಸದ್ದು ಕೇಳಿದಾಗ “ ಹಸಿರುಮಕ್ಕಿ ಬಂತು” ಎಂದು ಲಂಬೋದರ ಹೇಳಿದ. ನನಗೆ ತಲೆಬುಡ ಅರ್ಥವಾಗಲಿಲ್ಲ.

। ಇನ್ನು ಉಳಿದದ್ದು ನಾಳೆಗೆ ।

2 Responses

  1. ರಘುನಾಥ says:

    ಚಂದದ ಕಥನ

Leave a Reply

%d bloggers like this: