ಅವರು ಚಿರಸ್ಮರಣೆಯ ಪುಟಗಳಲ್ಲಿ ಅಡ್ಡಾಡಿದರು..

 

ಶ್ರೀಜಾ ವಿ ಎನ್

ಜಿ ಎನ್ ಮೋಹನ್

‘ಅರೆ, ಇದೇನಿದು..!’ ಎಂದು ನಾನು ಬೆಕ್ಕಸಬೆರಗಾಗಿ ಹೋದೆ. ನನ್ನ ಕೈನಲ್ಲಿದ್ದದ್ದು ನಿರಂಜನರ ‘ಚಿರಸ್ಮರಣೆ’. ಕಾದಂಬರಿ ತೆರೆದುಕೊಳ್ಳುವ ಮುನ್ನ ನಿರಂಜನರು ತಾವೇ ನಿರೂಪಕನಾಗಿ ‘ಬನ್ನಿ ರೈಲುಗಾಡಿ ಹೊರಡುವುದು ಇನ್ನೂ ತಡ’ ಎಂದು ಕರೆಯುತ್ತಾ ಓದುಗನನ್ನು ಕಯ್ಯೂರಿನ ಒಳಗೆ ಕರೆದುಕೊಂಡು ಹೋಗುತ್ತಾರೆ. ಆ ಅಧ್ಯಾಯದ ಉದ್ದಕ್ಕೂ ಇದ್ದದ್ದು ಮತ್ತೆ ಘಟಿಸಿ ಹೋಯ್ತೆನೋ ಎನ್ನುವಂತಾದದ್ದು ನನ್ನ ಕಣ್ಣೆದುರಿಗಿದ್ದ ಫೇಸ್ ಬುಕ್ ಪುಟಗಳನ್ನು ನೋಡಿದಾಗ. ಹಾಗಾಗಿ ನಾನು ಇಲ್ಲಿ ‘ಚಿರಸ್ಮರಣೆ’ಯ ಪುಟಗಳಲ್ಲಿ ನಿರಂಜನರು ಬರೆದದ್ದನ್ನೂ ಮತ್ತು ಚಿರಸ್ಮರಣೆ ಓದಿ ಕಯ್ಯೂರಿನತ್ತ ಹೆಜ್ಜೆ ಹಾಕಿದವರ ಕಥಾನಕವನ್ನೂ ಬಿಚ್ಚಿಟ್ಟಿದ್ದೇನೆ. ಆ ‘ಚಿರಸ್ಮರಣೆ’ ಹಾಗೂ ಈ ‘ಚಿರಸ್ಮರಣೀಯ’ ಅನುಭವ ಪಡೆದವರ ನಡುವೆ ಹೆಜ್ಜೆ ಹಾಕೋಣ ಬನ್ನಿ.

***

ಬೆಂಗಳೂರಿನಿಂದ ಮಂಗಳೂರಿಗೆ ಮಂಗಳೂರಿನಿಂದ ಚರ್ವತ್ತೂರಿಗೆ…
ಬನ್ನಿ, ರೈಲುಗಾಡಿ ಇಲ್ಲಿಂದ ಹೊರಡುವುದು ಇನ್ನೂ ತಡ, ಊರು ಇರುವುದು ಆ ಭಾಗದಲ್ಲಿ, ಹಿಂದಕ್ಕೆ ಸಾಗಿ, ರೈಲು ಕಂಬಿಯನ್ನು ದಾಟಿ ಹೊರಟುಹೋಗೋಣ. ಇಷ್ಟು ಜನ ಯಾಕೆ ಬರಬೇಕಿತ್ತು ಎಂದಿರಾ? ಒಳ್ಳೆ ಪ್ರಶ್ನೆ! ಈ ದಿನದ ಮಹೋತ್ಸವಕ್ಕೆ ಇಷ್ಟೊಂದು ದೂರದಿಂದ ಬಂದ ಪ್ರೇಕ್ಷಕರನ್ನು ಸರಿಯಾಗಿ ನೋಡಿಕೊಳ್ಳದೇ ಇದ್ದರೆ ಊರವರು ಏನೆಂದಾರು?
ಯಾಕೆ ಅತ್ತ ನೋಡ್ತಿದ್ದೀರಿ? ಟಿಕೆಟ್ ಕಲೆಕ್ಟರು ಕರೆಯಬಹುದೆಂದೆ? ಇಲ್ಲಿ ಕೊಡಿ ಟಿಕೆಟ್, ಆತನಿಗೆ ಕಳುಹಿಸಿಕೊಡ್ತೇವೆ, ಅವನಾಗಿ ನಮ್ಮನ್ನೆಂದೂ ಕರೆಯಲಾರ. ಇಲ್ಲಿ ಇಳಿದು ನಮ್ಮ ಹಳ್ಳಿಗೆ ಹೋಗುವವರಲ್ಲಿ ಮೋಸಗಾರರು ಯಾರೂ ಇಲ್ಲ ಎಂಬುದು ಆತನಿಗೆ ಗೊತ್ತಿದೆ.
***

‘ಸರಿ ಬೆಂಗಳೂರಿನಿಂದ, ಬೇರೆ ಕಡೆಯಿಂದ ಬರುವವರು ಎಲ್ಲರೂ ಮಂಗಳೂರಿಗೆ ಬನ್ನಿ. ಅಲ್ಲಿ ಬೆಳ್ಳಂಬೆಳಗ್ಗೆ ಟ್ರೇನ್ ಇದೆ.ಅದನ್ನು ಹತ್ತಿದರೆ ನೇರ ನಾವು ಇಳಿಯುವುದು ನೀಲೇಶ್ವರದಲ್ಲಿ. ಅಲ್ಲಿ ನಮ್ಮನ್ನು ಸ್ವಾಗತಿಸಲು ಸಾಕಷ್ಟು ಸಂಗಾತಿಗಳಿರುತ್ತಾರೆ. ಅವರ ಜೊತೆ ಕೈ ಕುಲುಕಿ, ಸಾಧ್ಯವಾದರೆ ಚಹಾ ಕುಡಿದು ನಮಗಾಗಿಯೇ ಸಿದ್ಧವಾಗಿರುವ ಬಸ್ ಏರೋಣ. ಅಲ್ಲಿಂದ ಅಬ್ಬಬ್ಬಾ ಎಂದರೆ ೩೦ ನಿಮಿಷ. ನೀವು ಕಣ್ಣು ಮುಚ್ಚಿ ತೆಗೆಯುವುದರೊಳಗೆ ತೇಜಸ್ವಿನಿ ನದಿ ನಿಮ್ಮೆದುರು ಬಿಚ್ಚಿಕೊಂಡಿರುತ್ತದೆ. ಆಮೇಲೆ ಆಮೇಲೆ ಏನು.. ನಾವು ಮತ್ತು ಚಿರಸ್ಮರಣೆ ಎರಡೇ..

ಹಾಗಂತ ಹೊರಟುಬಿಟ್ಟ ದಂಡು ಇತ್ತಲ್ಲ ಅದು ಒಂದೇ ರೆಕ್ಕೆಯ ಹಕ್ಕಿಗಳೆಲ್ಲಾ ಒಟ್ಟಿಗೆ ಸೇರಿದಂತೆ ಸೇರಿಬಿಟ್ಟಿದ್ದರು. ಬಹುತೇಕ ಮಂದಿಗೆ ಪರಸ್ಪರ ಪರಿಚಯವಿರಲಿಲ್ಲ. ಇನ್ನು ಕೆಲವರಿಗೆ ಪರಿಚಯ ಇದ್ದರೂ ಕೈ ಕುಲುಕಿ ಮಾತನಾಡಿರಲಿಲ್ಲ, ಫೇಸ್ ಬುಕ್ ಅವರನ್ನು ಬೆಸುಗೆ ಹಾಕಿತ್ತಾದರೂ ಅವರ ಬದುಕು, ಕಥೆ, ಹಾಡು ಅವರ ಬಾಯಿಂದಲೇ ಕೇಳಿರಲಿಲ್ಲ. ಹಾಗೆ ಸೇರಿದವರು ಗದಗ, ಚಿಕ್ಕಮಗಳೂರು, ಬೆಂಗಳೂರು, ಬಳ್ಳಾರಿ ಹೀಗೆ ಎಲ್ಲೆಲ್ಲಿಂದಲೋ ಬಂದಿದ್ದರು. ಎಲ್ಲರೂ ಮಂಗಳೂರಿನ ರೈಲು ನಿಲ್ದಾಣದಲ್ಲಿ ಉತ್ಸಾಹದಿಂದ ಸೇರಿದ್ದರು. ೬೦ ಕ್ಕೂ ಹೆಚ್ಚು ಜನರಿದ್ದ ಹಕ್ಕಿಗಳ ಕಲರವ ಕೇಳಿ ಅಲ್ಲಿದ್ದವರು ಯಾರೋ ಎಲ್ಲಿಗೆ ಹೊರಟಿದ್ದೀರಿ ಎಂದು ಕೇಳಿದರು- ಅಷ್ಟೇ ಎಲ್ಲರೂ ಒಕ್ಕೊರಲಿನಿಂದ ಕಯ್ಯೂರು ಎಂದರು. ಹೌದು ಅವರೆಲ್ಲರನ್ನೂ ಅಲ್ಲಿಗೆ ಕರೆದು ತಂದಿದ್ದು ಒಂದು ಪುಸ್ತಕ ಎಂದರೆ ನೀವು ನಂಬಲೇಬೇಕು. ತಿಂಗಳ ಕಾಲ ನಿರಂಜನರ ‘ಚಿರಸ್ಮರಣೆ ಓದಿದ ದಂಡು ಆ ಕಾದಂಬರಿ ನಡೆದು ಹೋದ ಕಯ್ಯೂರನ್ನು ನೋಡಲೇಬೇಕು ಎನ್ನುವ ಹುಮ್ಮಸ್ಸಿನಿಂದ ಕೇರಳದ ರೈಲು ಹತ್ತಿದ್ದರು.

***

ಎಚ್ಚರದಿಂದ ದಾಟಿ, ಕೈಕಂಬದ ಸಾಲು ತಂತಿ ಕೆಳಗಿದೆ, ಎಡವಿ ಬಿದ್ದೀರಿ.
ಬನ್ನಿ ಹೀಗೆ, ನಿಂತು ರೈಲುಗಾಡಿಯತ್ತ ಯಾಕೆ ದಿಟ್ಟಿಸಿದಿರಿ? ಅದೊಂದು ವಿಚಿತ್ರ ಅನುಭವ, ಅಲ್ಲ? ಸಹಸ್ರ ಸಹಸ್ರ ಜನರನ್ನು ಹೊತ್ತು, ನಿಮ್ಮೊಬ್ಬರನ್ನೇ ಇಳಿಯಬಿಟ್ಟು, ಮುಂದೆ ಸಾಗುವ ಉಗಿ ಶಕಟ, ಸಮುದ್ರದಂಡೆಯುದ್ದಕ್ಕೂ ದಕ್ಷಿಣಾಭಿಮುಖವಾಗಿ, ಮುಂದಕ್ಕೆ.

ಹೊಲಗಳ ನಡುವೆ ನಡೆದೇ ನಿಮಗೆ ಅಭ್ಯಾಸವಿದೆಯೊ ಇಲ್ಲವೊ. ಏನಂದಿರಿ? ನೀವೂ ಹಳ್ಳಿಯಲ್ಲೆ ಹುಟ್ಟಿದವರೆಂದ? ಮಣ್ಣಿನ ಮಗುವೆಂದೆ? ಸಂತೋಷ. ನಾನೂ ಹಾಗೆಯೇ ಊಹಿಸಿದ್ದೆ.

ಈ ಹೊಲದ ಅಂಚುಗಳ ಮೇಲೆ ಒಬ್ಬೊಬ್ಬರೇ ನಡೆಯಬೇಕು. ಒಬ್ಬರ ಹಿಂದೊಬ್ಬರು, ಸಾಲುಸಾಲಾಗಿ ಮುಂದಿನವರು ನಿಂತರೆ ಹಿಂದಿನವರೂ ನಿಲ್ಲಬೇಕು. ನಗರದಲ್ಲಿ ಮೋಟಾರು ವಾಹನಗಳು ಒಂದರ ಹಿಂದೊಂದು ಹೋಗುವುದಿಲ್ಲವೇ? ಹಾಗೆ.

***

‘ಬನ್ನಿ’ ಎಂದು ಅವರು ಕೈ ಕುಲುಕಿದಾಗ ನಿಜಕ್ಕೂ ಸೂರ್ಯ ತನ್ನ ಪ್ರಭಾವ ತೋರಿಸಲು ಅಣಿಯಾಗುತ್ತಿದ್ದ. ಅಲ್ಲಿದ್ದವರಿಗೆ ನಾಯಕರೂ ಇಲ್ಲ ಹಿಂಬಾಲಕರೂ ಇಲ್ಲ ಅವರಲ್ಲಿ ಇದ್ದವರು ಪುಸ್ತಕ ಓದಲು ಹುರಿದುಂಬಿಸಿದವರು ಹಾಗೂ ಓದಿದವರು ಅಷ್ಟೇ. ಕಯ್ಯೂರಿನಲ್ಲಿ ಬದಲಾವಣೆಯ ಸೂರ್ಯ ಉದಿಸಿದಾಗ ಆಗಿದ್ದೂ ಅದೇ ಅಲ್ಲವೇ. ಚಿರಕುಂಡ ಅಪ್ಪುವನ್ನು ಮಾಸ್ಟರ್ ಓದು ಎಂದರು, ಸಮಾಜ ನೋಡು ಎಂದರು, ಹೋರಾಡು ಎಂದರು. ಅಷ್ಟೇ ಶತಮಾನಗಳ ಕತ್ತಲು ಅನುಭವಿಸಿದ್ದ ಕಯ್ಯೂರಿನಲ್ಲಿ ಹೊಸ ಸೂರ್ಯ ಉದಿಸಿದ್ದ. ಅಷ್ಟೂ ಜನರನ್ನು ಹೊತ್ತ ವಾಹನ ನೇರ ಭೇಟಿ ಕೊಟ್ಟದ್ದೇ ಕಯ್ಯೂರಿನ ವೀರರ ಹುತಾತ್ಮ ಸ್ಮಾರಕದ ಬಳಿಗೆ. ಅಲ್ಲಿಯವರೆಗೆ ಎಲ್ಲಿತ್ತೋ ಆ ಹುಡುಗರ ಎದೆಯೊಳಗೆ ಚಿರಸ್ಮರಣೆ ಓದಿ ಹುಟ್ಟಿದ್ದ ಬದಲಾವಣೆಯ ಕನಸುಗಳು. ಹುತಾತ್ಮ ಸ್ಮಾರಕ ನೋಡುತ್ತಿದ್ದಂತೆಯೇ ಅರಿವೇ ಇಲ್ಲದೆ ಅನೇಕ ಕಂಠಗಳಿಂದ ಘೋಷಣೆಗಳು ಮೊಳಗಿದವು-  “ಅಂದು ಹರಿದ ನಿಮ್ಮಯ ರಕ್ತ.. ನಮ್ಮ ರಕ್ತ, ನಮ್ಮ ರಕ್ತ”. ಎಲ್ಲರೂ ಭಾವುಕರಾಗಿದ್ದರು. ತಾವು ಪುಸ್ತಕದ ಪುಟಗಳಲ್ಲಿ ಅಕ್ಷರಗಳಾಗಿ ಕಂಡ ನೆಲದ ಮೇಲೆ ನಿಂತಿದ್ದರು. ಕಥೆಯಾಗಿ ಕಂಡವರು ಕಣ್ಣೆದುರಿನ ಫೋಟೋಗಳಲ್ಲಿದ್ದರು. ಎಲ್ಲಕ್ಕಿಂತ ಹೆಚ್ಚಾಗಿ ಅಂದಿನ  ಕಯ್ಯೂರು ವೀರರನ್ನು ನೋಡಿದ ಅದೇ ತೇಜಸ್ವಿನಿ ನದಿ ಈಗ ಜಾಗತೀಕರಣ ಕಾಲದ ಮಧ್ಯೆ ನಿಂತಿದ್ದ ಈ ತಂಡವನ್ನೂ ನೋಡುತ್ತಿತ್ತು. ಆ ದಿನವೂ ಅದು ಜುಳು ಜುಳು ಸದ್ದು ಮಾಡಿತ್ತು. ಮತ್ತು ಈ ದಿನವೂ..

***

ಬಿಸಲು ರಣಗುಡುತ್ತಿದ್ದರೂ ವಿಶಾಲವಾದ ಭೂಮಿ ಹಸುರಾಗಿದೆ, ನೋಡಿದಿರಾ? ಇದಕ್ಕೆ ಕಾರಣ ನದಿ. ಅದೋ ದೂರದಲ್ಲಿ ಹರಿಯುತ್ತಿದೆಯಲ್ಲ, ಕಂಡೂ ಕಾಣಿಸದ ಹಾಗೆ? ತೇಜಸ್ವಿನಿ. ಹೆಸರು ಚೆನ್ನಾಗಿದೆ, ಎಂದಿರಾ? ಇಲ್ಲದೆ! ನಾಮಕರಣ ಮಾಡಿದವರು ನಮ್ಮ ಜನ.

ಈ ಕಾಲು ಹಾದಿ ಕಂಡಿರಾ? ಅದರಾಚೆಗಿರುವುದೇ ನಮ್ಮ ಗ್ರಾಮ. ಅದೇ ಕಯ್ಯೂರು.ಕಯ್ಯೂರಿನ ಗಡಿ ಮೊದಲಾಗುವಲ್ಲೇ ಮಾವಿನತಳಿರಿನ ಕಮಾನು ಕಟ್ಟಿ ಸುಸ್ವಾಗತ ಎಂದು ಬರೆದಿದ್ದಾರೆ. ಇದು ಮಲೆಯಾಳ ಭಾಷೆ. ನಿಮಗೆ ತಿಳಿಯದು ಅಲ್ಲವೆ? ಆ ಕಮಾನಿನ ಮೇಲೆ ಅಲಂಕಾರವಾಗಿ ನಿಂತಿರುವ ದೊಡ್ಡ ಕುಡುಗೋಲು; ಅದಕ್ಕೆ ಅಡ್ಡವಾಗಿ ಭತ್ತದ ತೆನೆಯ ತುಂಬಿದ ಗೊಂಚಲು. ಇನ್ನು ಇಲ್ಲಿಂದ ಮೊದಲಾಗಿ ನೀವು ನೋಡುವುದೆಲ್ಲ, ಕಯ್ಯೂರಿನ ಕಲಾವಿದರ ಕೃತಿ ಕೌಶಲ, ಆ ಚೀಲ ಕೊಡಿ. ಕೈ ಬೀಸಿ ನಡೆಯುವಿರಂತೆ…
***

“ಕಯ್ಯೂರಿಗೆ ಪ್ರವೇಶ ಪಡೆದಾಗ ಒಂದು ರೀತಿ ಕಯ್ಯೂರೇ ನಮ್ಮನ್ನು ಕೈಹಿಡಿದು ನಡೆಸಿದ ಅನುಭವವಾಯಿತು. 1943 ರ ಹಿಂದೆ ಮಡತ್ತಿಲ್ ಅಪ್ಪು, ಚಿರಕಂಡ, ಅಬೂಬಕ್ಕರ್, ಪೊಡವರ ಕುಂಞಂಬುರವರು ಕೈಯ್ಯೂರಿನಲ್ಲಿ ನಡೆಸಿದ ರೈತ ಚಳುವಳಿ ಆಮೂಲಕ ಅವರು ಮೈಗೂಡಿಸಿಕೊಂಡಿದ್ದ ಸಾಮ್ರಾಜ್ಯಶಾಹಿ ವಿರೋಧಿ ಚಿಂತನೆಗಳು ಇಂದಿಗೂ ಇಲ್ಲಿ ಜೀವಂತವಾಗಿವೆ. ಅವರು ಬಿತ್ತಿದ್ದ ವಿಚಾರಗಳು 80 ವರ್ಷಗಳ ನಂತರವೂ ಇಲ್ಲಿ ಅಚ್ಚ ಹಸಿರಾಗಿ ನಳನಳಿಸುತ್ತಿದೆ. ಮಾತ್ರವಲ್ಲ ಇನ್ನಷ್ಟು ಗಟ್ಟಿಯಾಗಿ ಮುನ್ನಡೆಸಿಕೊಂಡು ಹೋಗಲಾಗುತ್ತಿದೆ. ಅದಕ್ಕೆ ಸಾಕ್ಷಿ ಎಂಬಂತೆ ಕಯ್ಯೂರಿನಲ್ಲಿ ಹೆಜ್ಜೆ ಹೆಜ್ಜೆಗೂ ಕೆಂಬಾವುಟಗಳು ರಾರಾಜಿಸುತ್ತಿದ್ದವು. ಚಿರಸ್ಮರಣೆಯ ಮೂಲಕ ಕಯ್ಯೂರನ್ನ ಪ್ರವೇಶಿಸಿದವರಿಗೆ ಹೋರಾಟ ನಾಡಿನ ಜೀವಂತ ಅನುಭವವಾಯಿತು” ಎಂದು ಹಾಸನದಿಂದ ಮಂಗಳೂರಿಗೆ, ಮಂಗಳೂರಿನಿಂದ ನೀಲೇಶ್ವರಕ್ಕೆ, ನೀಲೇಶ್ವರದಿಂದ ಕಯ್ಯೂರಿಗೆ ತಲುಪಿಕೊಂಡಿದ್ದ ನವೀನ ಕುಮಾರ್ ಹುಮ್ಮಸ್ಸಿನಿಂದ ಬಣ್ಣಿಸಿದರು.

ನಾನು ಅವರಿಗೆ ‘ಅದು ಸರಿ, ಆ ಜುಳು ಜುಳು ಹರಿವ ತೇಜಸ್ವಿನಿ ನೋಡಿದ ತಕ್ಷಣ ನಿಮಗೆ ಏನನ್ನಿಸಿತು?’ ಕೇಳಿದೆ. ಅಷ್ಟೇ, ಅವರ ಎದೆಯ ಒಳಗೂ ನೆನಪುಗಳ ನದಿಯೊಂದು ಜುಳು ಜುಳು ಹರಿಯಿತೇನೋ. ‘ಆ ತೂತು ಬಿದ್ದ ದೋಣಿ..’ ಎಂದರು. ‘ಅದರಲ್ಲೇ ಅಲ್ಲವೇ ಆ ಅಪ್ಪು, ಚಿರಕುಂಡ ನದಿ ದಾಟಿ ತಮ್ಮ ಮಾಸ್ತರ್ ರನ್ನು ಭೇಟಿಯಾಗಿದ್ದು’ ಎಂದರು.

ಚಿರಸ್ಮರಣೆ ೩೦೦ ಕ್ಕೆ ಒಂದಿಪ್ಪತ್ತು ಕಡಿಮೆ ಪುಟ ಇರುವ ಪುಸ್ತಕ. ಆದರೆ ಪ್ರತಿಯೊಂದು ಪುಟವೂ ಅಲ್ಲಿಗೆ ಹೋಗಿದ್ದ ತಂಡದವರ ಒಳಗೆ ಮನೆ ಮಾಡಿ ಕೂತಿತ್ತು.

***

…ಅಳತೆಗೋಲಿನ ಅಂದಾಜಿನಂತೆ ಈ ದೂರ ಮೂರು ಮೈಲಿ. ಆದರೆ, ದೂರವೆನ್ನುವ ಆನುಭವವಾಗದೆಯೇ ನಾವು ನಡೆದು ಬರುತ್ತಿದ್ದೇವಲ್ಲವೇ? ಸಿಂಗರಿಸಿದ ಆ ಹೊಲ ನೋಡಿದಿರಾ? ಅದು ಸಂಘದ್ದು. ಅರ್ಥವಾಯ್ತೆ? ಅದು ಸಂಘದ ಅಸ್ತಿ. ಹಳ್ಳಿಯ ರೈತರೆಲ್ಲ ಅಲ್ಲಿ ಉಚಿತವಾಗಿ ದುಡಿಯುತ್ತಾರೆ. ಆ ಹೊಲದ ಉತ್ಪತ್ತಿ ಸಂಘದ ಸಂಪತ್ತು.

ಯಾವುದು ಈ ಸದ್ದು ಎಂದಿರಾ? ಹೊಲದಿಂದ ಹೊಲಕ್ಕೆ ಹರಿಯುವ ನೀರಿನ ಜುಳು ಜುಳು ನಿನಾದ…ಅದಲ್ಲವೆಂದಿರಾ? ಓ, ತಿಳಿಯಿತು!

ನಿಮ್ಮ ಊಹೆ ನಿಜ. ಇವರೆಲ್ಲ ಉತ್ಸವಕ್ಕಾಗಿ ಸುತ್ತಮುತ್ತಲಿನ ಹತ್ತಾರು ಹಳ್ಳಿಗಳಿಂದ ಬಂದಿರುವ ರೈತಬಾಂಧವರು. ನಮ್ಮ ಅತಿಥಿಗಳು.

***

ಚಿರಸ್ಮರಣೆ ಎಷ್ಟು ಜನ ಓದಿದ್ದೀರಿ ಎಂದು ಪ್ರತೀ ಸಭೆಯಲ್ಲೂ ಕೇಳುವುದು ಹಲವರಿಗೆ ರೂಡಿ. ಹಾಗೆಯೇ ಅದೊಂದು ಸಭೆಯಲ್ಲಿ ನೋಡೋಣ ಓದಿದವರು ಕೈ ಎತ್ತಿ ಎಂದರು. ಓದದವರು ಎಷ್ಟು ಜನ ಇದ್ದರೋ ಓದದವರೂ ಅಷ್ಟೇ ಜನ. ಆಗಲೇ ಮುನೀರ್ ಕಾಟಿಪಳ್ಳ ‘ಚಿರಸ್ಮರಣೆ ಓದಿ ಯಾಕೆ ಕಯ್ಯೂರಿಗೆ ಹೋಗಿ ಬರಬಾರದು’ ಎನ್ನುವ ಪ್ರಸ್ತಾಪ ಮುಂದಿಟ್ಟದ್ದು. ಅದು ಫೇಸ್ ಬುಕ್ ಹೊಕ್ಕು ನೋಡನೋಡುತ್ತಿದ್ದಂತೆಯೇ ಚಿರಸ್ಮರಣೆ ಕೊಂಡ, ಅದನ್ನು ಓದುತ್ತಿರುವ ಸೆಲ್ಫಿಗಳು ರಾರಾಜಿಸತೊಡಗಿದವು.  “ಚಿರಸ್ಮರಣೆ ಓದೋಣ ಕಯ್ಯೂರಿಗೆ ಹೋಗೋಣ” ಅಭಿಯಾನ ತನಗೆ ಗೊತ್ತಿಲ್ಲದಂತೆ ರೆಕ್ಕೆ ಪಡೆದುಕೊಂಡೇಬಿಟ್ಟಿತು. ೧೧ ನವೆಂಬರ್ ಬೆಳ್ಳಂಬೆಳಗ್ಗೆ ಅಷ್ಟೂ ಜನ ಸೇರಿ ತಮ್ಮೊಳಗೆ ಒಂದು ಚಿರಸ್ಮರಣೆಯನ್ನು ದಾಖಲು ಮಾಡಿಕೊಳ್ಳಲು ರೈಲು ಹತ್ತಿಯೇಬಿಟ್ಟಿದ್ದರು.

***

ಈ ಹೆಸರುಗಳನ್ನೆಲ್ಲ ನೀವು ಬಲ್ಲಿರಿ, ಅಲ್ಲವ? ಮಠದ ಅಪ್ಪು, ಕೋಯಿ ತಟ್ಟಿನ ಚಿರಕಂಡ, ಪೊಡವರ ಕುಂಇಂಬು, ಅಬೂಬಕರ್…. ಹಿಂದೆ ಹಸುಗೂಸುಗಳಿಗೆ ತಾಯಿ ತಂದೆಯರು ಹಾಗೆ ಹೆಸರಿಟ್ಟಾಗ, ಮುಂದೆಯೊಂದು ದಿನ ಹೀಗಾಗಬಹುದೆಂದು ಯಾರಾದರೂ ಭಾವಿಸಿದ್ದರೆ? ಆ ನಾಲ್ಕು ಹೆಸರುಗಳು ಲೋಕದ ನಾಲ್ಕು ಮೂಲೆಗಳಿಗೆ ಸಂಚಾರ ಮಾಡುವುದೆಂದು, ಯಾವುದೋ ಆಸೆ ಆಕಾಂಕ್ಷೆಗಳಿಗೆ ಸಂಕೇತವಾಗುವುದೆಂದು ಯಾರಾದರೂ ಊಹಿಸಿದ್ದರೆ?

ಅಪ್ಪು-ಚಿರುಕಂಡ-ಕುಂಇಂಬು ಮತ್ತು ಅಬೂಬಕರ್…
ಆ ನೆನಪು ಒಡಮೂಡಿಸುವ ಭಾವನೆ ಯಾವುದು?- ಸಂತೋಷವೇ? ದು:ಖವೆ? ನಾವು ತೋರುವ ಪ್ರತಕ್ರಿಯೆ ಯಾವುದು?-ಬಾಹುಸ್ಫುರಣವೆ? ಕಂಬನಿ ತುಂಬಿದ ಕಣ್ಣೆ?

***

‘ನಮ್ಮಲ್ಲಿರುವುದು ಮಾನವ ರಕ್ತ’ ಎಂದು ಘೋಷಿಸಿದಾಗ ಅಲ್ಲಿದ್ದ ಎಲ್ಲರ ಕಣ್ಣಲ್ಲಿ ಒಂದೇ ಕಾಲಕ್ಕೆ ರೋಷವೂ ಇತ್ತು, ಕಣ್ಣ ಅಂಚೂ ಒದ್ದೆಯಾಗಿತ್ತು. ಬೆಂಕಿ ಮತ್ತು ನೀರು ಎರಡೂ ಒಂದೇ ಕಡೆ ಸೇರಿದ್ದ ಸಂದರ್ಭ ಅದು. ಬೆಂಕಿಯಾಗಿದ್ದ ಅಂದಿನ ಕಯ್ಯೂರು ಹಾಗೂ ತಣ್ಣನೆ ಹರಿಯುತ್ತಲೇ ಇದ್ದ ತೇಜಸ್ವಿನಿಯಂತೆ.. ಆಗಲೇ ನಾದಾ ಮಣಿನಾಲ್ಕೂರು ತಮ್ಮ ಟ್ರೇಡ್ ಮಾರ್ಕ್ ತಂಬೂರಿಯನ್ನು ಕೈಗೆತ್ತಿಕೊಂಡದ್ದು. ಅನತಿ ದೂರದಲ್ಲಿ ನೀರ ಮಧ್ಯೆ ಇದ್ದ ಬಂಡೆ ಏರಿದವರೇ ತಂತಿ ಮೀಟತೊಡಗಿದರು. ಜುಳು ಜುಳು ಸದ್ದು ಶ್ರುತಿಯ ಸಾಥ್ ಕೊಟ್ಟಿತ್ತು. ಈ ಪಯಣಕ್ಕೆಂದೇ ‘ಪಡುವಣ ಕಡಲು ಭೋರ್ಗರೆಯಿತು / ತೆಂಕಣ ಗಾಳಿ ಸುತ್ತಿ ಸುಳಿಯಿತು / ಮೀನ ಮಾಸದ ಉರಿವ ಬಿಸಿಲಿಗೆ/ ಸಿಡಿಯಿತು ನೋಡಿ ಕಯ್ಯೂರು
ಬನ್ನಿ ಗೆಳೆಯರೆ ಸ್ಮರಣೆ ಮಾಡುವ / ಚಿರಸ್ಮರಣೆಯ ಕಯ್ಯೂರ / ಹಸಿರು ಕ್ರಾಂತಿಗೆ ಉಸಿರ ನೀಡಿದ / ರೈತ ಮಕ್ಕಳ ಕಯ್ಯೂರ..’ ಎನ್ನುವ ಹಾಡಿಗೆ ದನಿ ನೀಡಿದರು.

****

ನೀವು ಮೌನವಾಗಿದ್ದೀರಿ. ಮೌನಕ್ಕೂ ಅರ್ಥವಿದೆ, ನಾನು ಬಲ್ಲೆ, ಭಾವನೆಗಳು ಒತ್ತರಿಸಿದಾಗ ಎಷ್ಟೋ ಸಾರೆ ನಾವು ಮೌನ ತಳೆಯುತ್ತೇವೆ ಕಯ್ಯೂರಿನ ನಮಗೆಲ್ಲ ಈ ಅನುಭವ ಹೊಸದಲ್ಲ, ಈ ಹಲವು ವರ್ಷಗಳ ಕಾಲ ಆಡಬೇಕೆನಿಸಿದ್ದನ್ನೆಲ್ಲ ನಾವು ಆಡಿದ್ದರೆ, ಆ ಮಾತುಗಳು ಬೆಟ್ಟದಷ್ಟು ಎತ್ತರವಾಗುತ್ತಿದ್ದುವು. ಅಳಬೇಕು ಎನಿಸಿದಾಗಲೆಲ್ಲ ನಾವು ಅತ್ತಿದ್ದರೆ, ತೇಜಸ್ವಿನಿ ಹೊಳೆಯಲ್ಲಿ ಎಂದಿಗೂ ಬತ್ತದ ಮಹಾಪೂರ ಬರುತ್ತಿತ್ತು. ಆದರೆ, ಮನಸ್ಸಿನಲ್ಲಿದ್ದುದನ್ನೆಲ್ಲ ಯಾವಾಗಲೂ ನಾವು ಮಾಡುವುದಿಲ್ಲ. ತೋಚಿದ್ದನ್ನೆಲ್ಲ ಎಂದೂ ಆಡುವುದಿಲ್ಲ.

***
ಹೌದು ಎಲ್ಲರೂ ಮೌನವಾಗಿದ್ದರು. ‘ಚಿರಸ್ಮರಣೆ’ಯ ಪುಟಗಳಲ್ಲಿ ಅಡ್ಡಾಡಿದ ಆ ಇಡೀ ತಂಡ ಮೌನವಾಗಿತ್ತು. ಆದರೆ ಅವು ವಿಚಾರದ ಕಿಡಿಗಳಾಗಿ ಸಿಡಿಯುವ ಮೊದಲಿನ ಮೌನ. ಇದಕ್ಕೆ ಅರ್ಥ ಕೊಡಬೇಕು ಎನ್ನುವಂತೆ ತಂಡದಲ್ಲಿದ್ದ ಪುನೀತ್ ರಾಜ್ ತಮ್ಮ ಹೆಸರಿನ ಜೊತೆ ಇದ್ದ ರಾಜ್ ತೆಗೆದು ಅಪ್ಪುವಿನ ನೆನಪಿಗಾಗಿ ಆ ಹೆಸರನ್ನು ಸೇರಿಸಿಕೊಂಡು ‘ಪುನೀತ್ ಅಪ್ಪು’ ಆದರು. ಆ ಅಪ್ಪು, ಆ ಚಿರಕುಂಡ, ಆ ಕುಂಇಂಬು ಸಹಾ ಇವರ ಜೊತೆಗೆ ಅವರವರ ಊರುಗಳಿಗೆ ಹೆಜ್ಜೆ ಹಾಕಿದರು ಅವರ ಎದೆಗಳಲ್ಲಿ.

1 comment

Leave a Reply