ನಿನ್ನೆ ರಾತ್ರಿ ಕನಸುಗಳ ಕೊಲೆಯಾಗಿದೆಯಂತೆ.

– ಗುಲ್ಜಾರ್ ಕನ್ನಡಕ್ಕೆ: ಸಂವರ್ತ ‘ಸಾಹಿಲ್’

ಬೆಳಬೆಳಗ್ಗೆ ಕನಸಿನ ಬಾಗಿಲು ತೆರೆದು ನೋಡಿದರೆ
ಸರಹದ್ದಿನ ಆ ಕಡೆಯಿಂದ ಕೆಲವು ನೆಂಟರು ಬಂದಿದ್ದರು
ಪಟ್ಟ್ ಎಂದು ಗುರುತು ಹಿಡಿದ ಮುಖಗಳೆಲ್ಲಾ
ಚಿರಪರಿಚಿತವೇ ನನಗೆ
ಕೈಕಾಲು ಮುಖ ತೊಳೆದು
ಅಂಗಳದಲ್ಲಿ ಕೂತು
ಜೋಳದ ರೊಟ್ಟಿ ತಟ್ಟಿ ಒಲೆಯಲ್ಲಿ ಕಾಯಿಸಿದೆವು
ಬರುವಾಗ ನೆಂಟರು ಜೊತೆಯಲ್ಲಿ
ಹಿಂದಿನ ವರ್ಷದ ಬೆಳೆಯಿಂದ ಮಾಡಿದ
ಬೆಲ್ಲ ಕಟ್ಟಿಕೊಂಡು ತಂದಿದ್ದರು.

ಕಣ್ತೆರೆದು ನೋಡಿದರೆ
ಮನೆಯಲ್ಲಿ ಯಾರೂ ಇರಲಿಲ್ಲ.
ಬೆರಳು ತಾಕಿಸಿ ನೋಡಿದರೆ ಒಲೆ ಇನ್ನೂ ಸುಡುತ್ತಿತ್ತು
ತುಟಿಗೆ ಹತ್ತಿದ್ದ ಬೆಲ್ಲದ ರುಚಿ ಇನ್ನೂ ಹಾಗೇ ಇತ್ತು.

ಎಲ್ಲೋ ಕನಸಾಗಿರಬೇಕು
ಎಲ್ಲಾ ಕನಸೇ ಆಗಿರಬೇಕು
ಸರಹದ್ದಿನಲ್ಲಿ ನಿನ್ನೆ ರಾತ್ರಿ
ಗುಂಡಿನ ಚಕಮಕಿ ನೆಡೆದಿತ್ತು
ಎಂಬ ಸುದ್ದಿ ಇದೆ
ಸರಹದ್ದಿನಲ್ಲಿ ನಿನ್ನೆ ರಾತ್ರಿ
ಒಂದಿಷ್ಟು ಕನಸುಗಳ
ಕೊಲೆಯಾಗಿದೆಯಂತೆ.

 

Leave a Reply