ಮಳೆ ಕೆಂಡ!

 

 

 

 

 

ಎನ್ ರವಿಕುಮಾರ್ / ಶಿವಮೊಗ್ಗ

 

 

 

 

ದುಸ್ಸು ದುಸ್ಸು ದಮ್ಮು ಕಟ್ಟಿ ಕೆಮ್ಮುತ್ತಿದ್ದಾಳೆ

ಸೂರು ನೀರು  ತಟ ತಟ ತೊಟ್ಟಿಕ್ಕುತ್ತಲೆ ನೆಂದು

ನೀರು ಕುಡಿದ ಒಲೆಯ ತುಂಡು ಕೆಂಡವನ್ನು ಉರಿಸಲೇಬೇಕಿದೆ ಅವಳಿಗೆ

ಊದಿ ಊದಿ ಎದೆ ಗೂಡು ಬಸಿದು ಬರಿದಾಗಿದೆ.

ಈ ರಾತ್ರಿಗೆ ತುಂಡು ರೊಟ್ಟಿ ಬೆಂದರೆ ಸಾಕು

ಬೆಳಗಾನವರೆಗೆ ಗುಟುಕು  ಜೀವಗಳ ಕಾವು ಕಾಯಬೇಕು

ಬೆಳಗ್ಗೆ  ಸೂರ್ಯನುರಿಗೆ ಅವನ  ಬೆನ್ನವೊಡ್ಡಿ ರೊಟ್ಟಿ ತಟ್ಟಲು

ಮುಷ್ಟಿಯಷ್ಟು ಹಿಟ್ಟು ಮಿದಿಯುತ್ತಲೆ ಇದ್ದಾಳೆ.

 

ಆ ರಾತ್ರಿ ಕಳೆಯುತ್ತಲೇ ಇಲ್ಲ… ಸೇಡಿಗೆ ಬಿದ್ದಂತೆ ಕವಿಯುತ್ತಲೆ ಇದೆ

ಸೋರುವ ಜಾಗಗಳಿಗೆಲ್ಲಾ ಮಣ್ಣಮುಚ್ಚಳ, ಮುರುಕು ತಟ್ಟೆಗಳನ್ನು ಒಡ್ಡುತ್ತಾ

ಮಳೆಗೆ ಮತ್ತದೆ ಹಿಡಿಶಾಪವಿಟ್ಟು ಕಣ್ಣೀರು  ಕುಡಿದು

ಕೂಸಿಗೆ ಮೊಲೆಯೊಡ್ಡುತ್ತಿದ್ದಾಳೆ. ಕೊರಳ ಸೆರೆ ಉಬ್ಬಿ ಜೋಗುಳ ನರಳುತ್ತಿದೆ.

 

ಸೋತ ಕೈ-ಕಾಲು ಚಕ್ಕಳ ಬಿದ್ದ ಜೀವವೊಂದು ಮೂಲೆಯಲ್ಲಿ

ಮಿಸುಕಾಡುತಿದೆ. ಮೋಟು ಬೀಡಿಗೆ ತಡಕಾಡುತ್ತಿದೆ

ಬೆಳಗಿನವರೆಗೂ ಕಾವು ಆರದಂತೆ ಕಾಯ್ದುಕೊಳ್ಳುವ ಜರೂರು  ಅವನಿಗೆ

ಒಬ್ಬರ ಮುಖ ಒಬ್ಬರಿಗೂ ಕಾಣದು ದುಃಖಳಿಸುವ ಸದ್ದು ಮಾತ್ರವೇ ಸನ್ನೆ .

 

ದೇವರು ಇನ್ನೂ ಎದ್ದಿದ್ದಾನೆ. ಅವನಿಗೇಕೋ ನಿದ್ದೆ ಬಂದಿಲ್ಲ

ದೇವಕನ್ಯೆಯರ ಲಾಲಿ ಹಾಡು, ರಂಗ ನೃತ್ಯ ,ಸಂಗಕೇಳಿ

ಈ ಸೊಗಸು ಸಂಭ್ರಮದಲ್ಲಿ  ಅವಳ ಕೆಮ್ಮಿನ ಆರ್ತ ಸದ್ದು ದೇವಲೋಕ ತಲುಪುತ್ತಿಲ್ಲ

ಎಷ್ಟೇ ಆಗಲಿ ಅವನು ದೇವರು.

 

ಸೂರ್ಯನೇನೂ ಹುಟ್ಟಿದ. ಅದೇ ನಿಗಿ ನಿಗಿ ಉರಿಕೆಂಡ ಹೊತ್ತು

ಅವಶೇಷಗಳಡಿಯಲ್ಲಿ ಜೋಗುಳ ಹೂತು ಹೋಗಿತ್ತು

ಮಿದ್ದ ಮುಷ್ಟಿ ಹಿಟ್ಟು ಕರಗಿ ನೀರಾಗಿ ಹರಿದ ಕಾಲುವೆಯ ಗುರುತಿತ್ತು

ಗಳ-ಗೂಟ, ಕುಸಿದ ನೆರಿಕೆಯ ತಬ್ಬಿ ಅಳುತ್ತಿದ್ದಾಳೆ

ಮಳೆಯಂತ ಮಳೆಯೇ ಪಶ್ಚಾತಾಪದ ಮಡುವಿಗೆ ಬಿದ್ದು ಕಾಲವಾಗುವಂತೆ.

 

ಅವಳೀಗ ಅವಳೇ…..

ನೋವು , ಸಂಕಟ ,ಶಾಪಗಳಿಂದ ದೇವರ ಶೃಂಗರಿಸುತ್ತಿದ್ದಾಳೆ

ಮಳೆ ನೀರಲ್ಲಿ ಕಣ್ಣೀರುಗಳ ಆಯುತ್ತಾ.

 

 

Leave a Reply