ಕೊಲ್ಲಿರಿ ಆಕೆಯನ್ನು ಮತ್ತೆ ಮತ್ತೆ ..

 

 

 

 

 

 

 

 

 

 

~ ತ್ರಿಶಾ ಧರ್ ಮಲ್ಲಿಕ್
ಕನ್ನಡಾನುವಾದ: ಸಂವರ್ತ ‘ಸಾಹಿಲ್’

 

ತನ್ನ ಮೊದಲ ಇಂಜೆಕ್ಷನ್
ತೆಗೆದುಕೊಳ್ಳಲಿಕ್ಕೆ ಹೋಗುತ್ತಿದ್ದ ತಂಗಿ ಕೇಳಿದಳು:
“ಅಕ್ಕ, ನೋವು ಅಂದ್ರೆ ಏನು? ಹೇಗಿರುತ್ತದೆ?”

ಕೇಳಿ ಒಂದು ನಿಮಿಷ
ನಾನು ಸುಮ್ಮನಾದೆ.

ನಂದಿ ಹೋಗುತ್ತಿದ್ದ ಬೆಂಕಿಯ ಮಧ್ಯೆ
ಇನ್ನೂ ಸುಡುತ್ತಲೇ ಇದ್ದ ಕೆಂಡಗಳ ಮೇಲೆ
ನಾನು ನೆಡೆದದ್ದನ್ನು ನೆನಪಿಸಿಕೊಂಡು
ಹೇಳಲೇ ಅದರ ಬಗ್ಗೆ?
ಅಥವಾ
ಚೂಪಾದ ಚೂರಿ ನನ್ನನ್ನು ಕತ್ತರಿಸಿ
ತುಂಡುತುಂಡು ಮಾಡಿ
ಚೂರಿಯ ಚೂಪಿರದ ಬದಿಯಿಂದ
ರಕ್ತ ಸೋರಿದ ನನ್ನ ಭಾಗಗಳನ್ನು
ಮತ್ತೆ ಮತ್ತೆ ಹಿಸುಕಿ
ಕೆಂಪು ಅಂಟಿನಂತೆ ನನ್ನನ್ನು ಮಾಡಿದ
ನನ್ನ ಜೀವವನ್ನು ಕಸವಾಗಿಸಿದ
ಬಗ್ಗೆ ಹೇಳಲೇ?

ನನ್ನನ್ನು ಕೊಂದ ದಿನದ ಕತೆ ಹೇಳಲೇ?
ಕೊಲ್ಲುತ್ತಿದ್ದಾರೆ ನನ್ನನ್ನು ಪ್ರತಿದಿನವೂ
ಹೇಗೆ ಹೇಳಲಿ ಅವಳಿಗೆ

ನಿನ್ನೆಯ ಸಾವಿನ ನೆನಪು ಬಿಟ್ಟರೆ
ನನಗೆ ನೆನಪಿರುವುದು
ಮೊದಲ ಮಳೆಗೆ ಮೇಲೆದ್ದ ನೆಲದ ಕಂಪು
ಕಾಡುವ ತಣ್ಣನೆ ಗಾಳಿ
ಮತ್ತು
ಮೆಲುದನಿಯಲ್ಲಿ ನೋಡುಗರು ದಾರಿಹೋಕರು
ಹೇಳಿದ ಮಾತುಗಳು ಮಾತ್ರ:
“ಇಷ್ಟೇ ಸಾಲದು
ಸಾಕಾಗದು
ನಿಲ್ಲಿಸಬೇಡಿ
ಮತ್ತೆ ಕೊಲ್ಲಿರಿ ಆಕೆಯನ್ನು
ಮತ್ತೆ ಮತ್ತೆ ಕೊಲ್ಲಿರಿ.”

ನೋವು ಅಂದರೆ ಏನೂ ಅಲ್ಲ
ಏನೇನೂ ಅಲ್ಲ
ಇರುವೆ ಕಚ್ಚಿದಾಗ
ಆಗುವ ಅನುಭವದಂತೆ
ಅಷ್ಟೇ
ಎಂದು ತಂಗಿಯನ್ನು ಎಳೆದಪ್ಪಿಕೊಂಡು
ಸುಳ್ಳು ಹೇಳಿದೆ.

 

Leave a Reply