ಕಾಣದ ಲೋಕದೆಡೆಗೆ ಮುಖ ಮಾಡಿ..

ಡಾ. ಲಕ್ಷ್ಮಣ ವಿ ಎ

 

ಮಡಿಕೆ ಮುರಿಯದ ಹಾಸಿಗೆಯ ನರಳಿಕೆ
ಒಂದಿನಿತೂ ಮುಗುಳು ಮಾಸದ
ವಿನಾಕಾರಣ  ಹೂವ ಬಳಲಿಕೆ

ಪ್ರತಿದಿನದ ಬೆಳಗಿನಲ್ಲಿ
ಒಂದು ಹನಿಯೂ ನೆತ್ತರು ಕಾಣದೆ
ನೇಣಿಗೇರಿದ ಜೀವಾವಧಿ ಕೈದಿಗಳಂತೆ
ಹೂವು ಹಾಸಿಗೆಯ  ಮೇಲೆ ಎರಡು ದಿಂಬುಗಳು
ಗೋಣು ಚೆಲ್ಲಿದಂತೆ

ಒಂದು ಬಲದಿಕ್ಕಿಗೆ
ಇನ್ನೊಂದು ಎಡದಿಕ್ಕಿಗೆ
ನಡುವೆ ದಿಕ್ಕೇ ತೋಚದ ಎಳೆಯ ಕೂಸು ನಿದ್ದೆಯಲ್ಲೇ
ಹೂ ಮುಗುಳು ನಕ್ಕಿದೆ

ದಿನಗಳು ಕಳೆಯುತ್ತವೆ
ರಾತ್ರಿಗಳು ಸವೆಯುತ್ತವೆ
ಎಂದೂ ಒಂದಾಗದ  ಜೋಡಿ ರೈಲು ಹಳಿಗಳೆರಡು
ಯುಗ ಯುಗಾಂತರಗಳಿಂದ
ಎಷ್ಟೊಂದು ಭಾರ ಹೊತ್ತು  ಮಲಗಿವೆ.

ಕತ್ತಲೆಯ ಈ ರಾತ್ರಿ ಚಲಿಸುವ ರೈಲು
ತುಸು ದೂರದಿ ನಿಂತು ನೋಡುವ
ಜಗಕೆ
ದೀಪಾವಳಿಯ ಸಾಲುದೀಪಗಳು ಪ್ರತಿ ನಿತ್ಯ ಕಾಣದ ಲೋಕದೆಡೆಗೆ ಮುಖ ಮಾಡಿ
ಮೆರವಣಿಗೆ ಹೊರಟಂತೆ
ಕಾಣಿಸುತಿವೆ.

Leave a Reply