ಹೆಣದ ಮೇಲಿನ ಹೂ..               

 

 

 

 

 

 

 

  –ಚಲಪತಿ ವಿ ಪಣಸಚೌಡನಹಳ್ಳಿ                   

 

ಪ್ರತಿಯೊಂದು ಹೂವಿಗೂ ಒಂದೊಂದು

ಬಯಕೆ

ಯಾರಿಗೆ ತಾನೇ ಗೊತ್ತು

ಪಾದ ಸ್ಪರ್ಶವಾಗಬೇಕಾದ

ಹಾರವಾಗಬೇಕಾದ

ಮುಡಿಯಬೇಕಾದ

ಸುಗಂಧವಾಗಬೇಕಾದ

ಮತ್ತೇನೋ ಆಗಬೇಕಾದ ಹೂ

ಹೆಣದ ಮೇಲೆಯೇ ಮಲಗುತ್ತೆಂದು

 

ಎಲ್ಲರೂ ಕಣ್ಣೀರಿಗೆ ಕಾರಣ

ಹುಡುಕುವಾಗ

ಪರಿಮಳ ಬೀರುವ ನಿನ್ನ

ನಗುವಲ್ಲೇನೋ ವ್ಯತ್ಯಾಸ

ಸಂಶಯವಿಲ್ಲಾ ತಾನೇ ನನ್ನ

ಊಹಾಗೋಪುರಗಳಲ್ಲಿ

 

ದೂರದೂರಿನ ನಕ್ಷತ್ರಗಳ ಲೆಕ್ಕಾಚಾರದ

ವಿಚಾರದಲಿ ಮುಳುಗಿಹ ನಾವು

ಅಣಕಿಸಿದಂತಿದೆ ಹೆಣದ ಮೇಲೆ

ಬಾಡಿದ ಅಪರಿಮಿತ

ಹೂರಾಶಿಯ ಹತ್ಯಾಕಾಂಡವನು

 

ಅನಾಥ ಹೆಣವು ಒಮ್ಮೊಮ್ಮೆ

ಮೇಲೆದ್ದು ಹೂವನ್ನು

ಎದೆಗಪ್ಪಿ ಅತ್ತದ್ದು ಇದೆ

ಬೂದಿಯೋ ಮಣ್ಣಾಗುವ ಮುನ್ನ

ಹೂ ಚೆಲ್ಲುವವರು ಇರಲಿಲ್ಲವೆಂದು

ಪಾಪ ಮರೆತಂತಿದೆ

ಪಟ್ಟ ಪಾಡೆಲ್ಲವೂ ಹಾಡಾಗುವ

ಮುನ್ನವೇ ಬದುಕು

ಕಾಲಧರ್ಮಕ್ಕೆ ಮಂಡಿಯೂರಿರುವುದನು

 

ಎಲ್ಲರ ಹೆಣಕ್ಕೂ ಹೂರಾಶಿಯ

ಅಲಂಕಾರ ಖಚಿತ

ನಿನ್ನದು ಬರುವ ಮುನ್ನ

ನಿನ್ನವರ  ಕಣ್ಣಹನಿ ಕಾಡಬೇಕಾಗುವಷ್ಟು

ಲೋಕ ಗುಲಗಂಜಿಯಷ್ಟಾದರೂ ಕಣ್ಣು

ತೆರೆಯುವಂತೆ ಏನಾದರೂ ಮಾಡಿ ತೋರಿಸು

ನಿನ್ನ ಹೆಣದ ಮೇಲಿನ ಹೂವಿನ

ಮಾನ ಸ್ವಲ್ಪವಾದರೂ ಉಳಿಸು

 

 

1 Response

  1. Sangeeta srikantha says:

    ನಿನ್ನ ಹೆಣದ ಮೇಲಿನ ಹೂವಿನ ಮಾನ ಉಳಿಸು…
    ತುಂಬಾ ಅರ್ಥ ಪೂರ್ಣವಾದ ಸಾಲು…

Leave a Reply

%d bloggers like this: