ಕಾಮ ನರಳುವುದಿಲ್ಲ..

 

 

 

 

ಸಚಿನ್ ಕುಮಾರ ಬ ಹಿರೇಮಠ

 

 

 

ತಮವ ತಿರಿವ ಹಣತೆಗೆ ಕಿಡಿಯಾಗುವ ಬಯಕೆ..

ಇಗೋ ಸೆರಗು ಹಾಸಿದ್ದೇನೆ
ಪ್ರೇಮವೇ ಇರದ
ನಿನ್ನ ಕಾಮದ ಬೆರಗು
ಇನ್ನಾರನೂ ಬಾಧಿಸದಿರಲೆಂದು
ನಿನ್ನಂಥವರಿಗೂ ಸಹ..

ಹೆಣ್ಣೆಂದರೆ ತುಟಿ,ತುರುಬು
ನಿತಂಬ ಭಗ ಭೋಗವೆಂದುಲಿವ
ನಿಮ್ಮಂಥವರ
ಕಾಳ ಸುಖಕೆ ನಿರಾಳ
ಸಮಾಧಿಯೇ ಈ ಸೆರಗು

ತೊಡೆಗಳ ನಡುವೆ
ಕನಸು ಕಟ್ಟುವ
ಹೀನ ಮನಸುಗಳ ಒಳಗೆ
ತಮವ ತಿರಿವ ಹಣತೆಗೆ
ಕಿಡಿಯಾಗುವ ಬಯಕೆ
ನೀವೆಲ್ಲ ಬತ್ತಿಯಾಗಿ
ನಿಮ್ಮ ಪ್ರೇಮವ ಸುರಿದರೆ

ಧನದ ಮೋಹಕೆ
ಕಾಮ ನರಳುವುದಿಲ್ಲ..
ಪ್ರೇಮ ಅರಳುವುದಿಲ್ಲ.
ಒಂದೆರೆಡು ಚಣಗಳ
ವಿನಿಮಯ ಸವಿನಯ
ತರಬಹುದಿತ್ತು..
ಪ್ರೇಮದ ಸ್ಫುರಣೆಗೆ
ಅದು ಸಾಕಾಗಿತ್ತು..

ನೀವೆಲ್ಲ ಕನಿಕರ ಪಟ್ಟು
ಕಟ್ಟಿದಿರಿ ಈ ಪಟ್ಟ
ನಾ ಬಲ್ಲೆ
ನಿಮ್ಮ ಈ ಸಲ್ಲದ ನಾತ
ನಿಮಗೆ ಸಹ್ಯವಾಗುವುದಿಲ್ಲ..
ಅದಕ್ಕೆ ಕೈಗೆ ಸುತ್ತಿ
ಅರಳು ಮಲ್ಲಿಗೆಯ

ಒಳಬರುತ್ತೀರಿ
ಹೊರ ಹೋಗಲಾರಿರಿ.
ಕಾಮದ ಉರಿಯೊಳಗೆ
ಬೆಂದಿದ್ದು ನೀವು
ಶೀಲ ಕಳೆದುಕೊಂಡಿದ್ದೂ ನೀವು

3 Responses

 1. Shama Nandibetta says:

  ಕಾಮದ ಉರಿಯೊಳಗೆ
  ಬೆಂದಿದ್ದು ನೀವು
  ಶೀಲ ಕಳೆದುಕೊಂಡಿದ್ದೂ ನೀವು

  Excellent !!

 2. Rajakumar.sumbad says:

  Super sir

Leave a Reply

%d bloggers like this: