ಇಂದು ಕವಿತೆಗಳ ಬಿಡುಗಡೆ ಸಮಾರಂಭ..

 

 

 

 

 

 

 

 

 

ಲಕ್ಷ್ಮಣ್ ವಿ ಎ 

 

ಇಂದು ಕವಿತೆಗಳ ಬಿಡುಗಡೆ ಸಮಾರಂಭ ;
ಹೀಗೊಂದು ಸುದ್ದಿ ಈ ದಿನದ ಪತ್ರಿಕೆಯಲ್ಲಿ
ಖುಷಿಯ ವಿಚಾರವೆ ;
ನಿಜ ಒಂದು ದಿನ ಕೈದಿಯೂ ಬಿಡುಗಡೆಯಾವನು ತನ್ನ ಹತ್ತಡಿಯ ಸೆಲ್ಲಿನಿಂದ
ಇಂದು ಸೋಮವಾರವೆ !?
ಇದ್ದರೂ ಇರಬಹುದು ಸೋಮವಾರ ಮಂಗಳವಾರ
ತಾರೀಖು ಮರೆತು ಹೋಗಿದೆ
ಸೂರ್ಯೋದಯ, ಚಂದ್ರೋದಯವ
ಸರಳುಗಳ ಸಂದಿಯಿಂದ ಬೀಳುವ
ಬೆಳಕಿನಿಂದ ಊಹಿಸಿದ್ದಿದೆ
ಮೋಡಗಳ ಸರಿಯುವಿಕೆ ಕೂಡ.
ಮಳೆಗಾಲ ಚಳಿಗಾಲ ವಸಂತ ಗ್ರೀಷ್ಮ
ಸರ್ವ ಋತುಗಳ ಸುಂದರ ಚಿತ್ರ
ಜೈಲಿನ ಗೋಡೆಯ ಮೇಲೆ ಚಿತ್ತಾರವಾಗಿ
ಕೆತ್ತಿದ್ದರಲ್ಲ
ಯಾವ ತಪ್ಪಿಗೆ ಈ ಶಿಕ್ಷೆ ಅದೂ ಮರೆತು ಹೋಗಿದೆ
ಕಳ್ಳತನ ಕೊಲೆ ಸುಲಿಗೆ ಅತ್ಯಾಚಾರ
ಎಷ್ಟು ದಿನದಿಂದ ಈ ಶಿಕ್ಷೆ
ಒಂದು ವರ್ಷ ಎರಡು ವರ್ಷ ಇದ್ದರೂ ಇರಬಹುದು
ಉಹುಂ ಯಾವುದೂ ಸ್ಪಷ್ಟವಾಗಿ ನೆನಪಾಗುತ್ತಿಲ್ಲ.
ಮನೆಯ ಬಾಗಿಲು ಬಡಿದರೆ
ಯಾರು ಮೊದಲು ಕದ ತೆರೆಯುವವರು
ಅಥವ ಕಿಟಕಿಯಿಂದ ದಿಟ್ಟಿಸಿ
ಯಾರೊ ಅಪರಿಚಿತರೆಂದು ಕದ ಮುಚ್ಚುವರೆ
ಕವಿತೆ ಯಾರು ಓದುತ್ತಾರೆ ?
ನಿಜ ಕವಿತೆಗೆ ಕಷ್ಟ ಕಾಲ ಸ್ವಾಮಿ
ಬಸ್ಸಿನಲಿ ಪಕ್ಕದ ಸೀಟಿನವ ಓದಲು
ಪೇಪರು ಕೇಳಿ ,ಕೊಲೆ ಸುಲಿಗೆ ,ಅತ್ಯಾಚಾರ ಇತ್ಯಾದಿ ಇತ್ಯಾದಿ
ಸನ್ನಿ ಲಿಯೋನ್ ಬೆಂಗಳೂರಿಗೆ ಬರುವ ಸುದ್ದಿಗೆ ಕೈ ಕಂಪಿಸಿ ಒಳಗೊಳಗೆ ಬೆವೆತ ಸುದ್ದಿಗಳ ಒಮ್ಮೆ ಅರೆ ನಿಮೀಲಿತ
ಬುದ್ಧ ನೋಟವ ಬೀರಿ
ಮೂಲೆಯಲಿ ಅಚ್ಚಾಗಿದ್ದ ಕವಿತೆಯ ಮೇಲೆ
ಕಣ್ಣಾಡಿಸಿಯೂ ನೋಡದೆ ಪತ್ರಿಕೆ ವಾಪಸು ಪಕ್ಕದ ಖಾಲೀ ಸೀಟಿನಲ್ಲಿಟ್ಟು
ಯಾವುದೋ ನಿಲ್ದಾಣದ ಲ್ಲಿಳಿದು ಹೋಗಿರುವನು ನನಗಿನ್ನೂ ಅರೆಮಂಪರು
ಅರೆ! ನಾನಿಳಿಯುವ ನಿಲ್ದಾಣ ದಾಟಿ ಹೋಯಿತೆ?
ಮಧ್ಯಂತರ ಜಾಮೀನಿನ
ಮೇಲೆ ಯಾವ ನತದೃಷ್ಟ ಕವಿತೆಯೂ
ಬಿಡುಗಡೆಯಾಗುವುದಿಲ್ಲ
ಪಂಜರವ ತೆರೆದಿಟ್ಟು
ಹಕ್ಕಿಯ ಬಂಧಿಸುವುದಾದರೆ
ಬಂಧಿಸಿಬಿಡಿ, ಇಳಿಸಂಜೆಯ ಅರೆ ಮಂಪರಿನ
ಗಳಿಗೆಯಲ್ಲಿ ಕವಿತೆ ನಿಮ್ಮ ಭುಜದ
ಮೇಲೆ ಕುಳಿತು ಹಾಡುವ ಹಾಡಿಗೆ ದಂಗಾಗಬೇಡಿ

Leave a Reply