ಅವಳು ಸಾವಿಲ್ಲದ ಮಹಾಕಾವ್ಯ..

ಅವ್ವ ಮಹಾಕಾವ್ಯ

ಜಯರಾಮಾಚಾರಿ 

ಅವ್ವಳ,
ದೈನಿಕ ಜೈವಿಕ ಚಕ್ರದಲ್ಲಿ
ಐದಕ್ಕೆ ಅಲಾರಂ ಗಂಟೆಯಿಲ್ಲ
ಆದರೂ ಅವಳೆಂದು
ಐದರ ಮೇಲೆ ಮಲಗಿದ್ದು ನೆನಪಿಲ್ಲ
ಹುಷಾರಿಲ್ಲಾದಾಗ್ಯೂ
ಶರೀರವಷ್ಟೇ ಹಾಸಿಗೆ ಮೇಲೆ
ಮನಸ್ಸು ಐದಕ್ಕೆಚ್ಚರ

ಗಾಂಧಿಯಂತೆ ಬಿರುಸು ನಡೆದು
ಹಾದೀಲಿ ದಕ್ಕಿದ ಕಡ್ಡಿ ಪಿಳ್ಳೆಗಳಿಡಿದು
ಕುಕ್ಕರುಗಾಲಲ್ಲಿ ಕೂತು
ಹಚ್ಚುತಾ ಒಲೆಯ
ಬೆಳಗಿದಳು ಮನೆಯ

ಗಂಡ ತೀರಿ ಮೂರು ದಶಕಗಳಾದರೂ
ಮಕ್ಕಳಿಗೆ ದಿನವೂ ಅಪ್ಪನ ನೆನಪಿಲ್ಲ
ಹಾರೈಕಯಲ್ಲಿ ತೆರೇಸಾಳು ಕಮ್ಮೀ
ಐದು ಮಕ್ಕಳು ಎರಡು ಕಣ್ಣು
ಭೇದಭಾವದ ಕಂದರವಿಲ್ಲ

ಅರವತ್ತಾದರೂ ಇಪ್ಪತ್ತರ ಚುರುಕು
ಸೊಸೆಯೊಂದರಿಗೆ ಆಗಾಗ ಜಗಳವಾದರೂ
ಮೊಮ್ಮಕ್ಕಳು ಅಜ್ಜಿಯ ಬಿಡುವುದಿಲ್ಲ
ಮಕ್ಕಳು ಎದೆಮಟ್ಟ ಬೆಳೆದು ನಿಂತರೂ
ಅವಳ ಮಡಿಲೆಂದೂ ದೂರ ತಳ್ಳಿಲ್ಲ

ನಡುಮಗನು ಜಾತಿಬಿಟ್ಟು ಓಡಿ ಮದುವೆಯಾಗಿ
ಮೈಲುಗಲಾಚೆ ಇದ್ದರೂ
ತಾಯಿಗರುಳು ಜಾತಿಯ ಎಡಗಾಲಲೊದ್ದು
ನಗುವ ಮಗುವ ಹಾರೈಕೆ ಮಾಡಿದ
ಮಹಾ ಮಾನವತವಾದಿ

ಹಂಗಿಸಿದರೂ
ಇಂಗಿಸಿದರೂ
ಬಡತನದ ಹಾರ ಹೊದೆಸಿದರೂ
ಹಲುಬಲಿಲ್ಲ
ಅಳಲಿಲ್ಲ
ಎದೆಗೆ ಜೀವನಪ್ರೀತಿಯ ಮಾಲೆ ತೊಡಸಿದಳಲ್ಲ

ಎದೆನೋವು ಬಂದು
ಆಸ್ಪತ್ರೆ ಹಾಸಿಗೆ ಹಿಡಿದರೂ
ಹಾಲಿನ ಬಿಲ್ಲೆಷ್ಟು ?ಎರಡು ದಿನ ಹಾಕಿಲ್ಲ
ಮೂಲೆಯಲ್ಲಿನ ಕಸವೆಸೆದೆಯಾ?
ಎಂಬ ಪ್ರಶ್ನೆಯ ಕೇಳುವಳು

ಎದೆನೋವ ಮರೆತು
ಎದುರ ಖಾಲಿ ಗೋಡೆ ನೋಡುವಳು
ಅನಾಮತ್ತು ಹಾಸಿಗೆ ಹಿಡಿದು
ಮಕ್ಕಳು ತಬ್ಬಲಿಯಾದವಲ್ಲ
ಎಂದು ನೆನೆಸಿ ಕಣ್ಣೀರು ಹಾಕುವಳು

ಅವಳು
ಸಾವಿಲ್ಲದ ಮಹಾಕಾವ್ಯ
ಆಲದಮರ,
ತಬ್ಬಿದಷ್ಟು ಪ್ರೀತಿ ಜೀವಕಳೆ
ಮೂರೂ ತಲೆಮಾರಿಗೂ
ಬದುಕಿನ ಪ್ರೀತಿಯ ಸಾರುವ ಜೀವದ್ರವ್ಯ

4 Responses

 1. Sangeeta srikantha says:

  ಸೊಗಸಾದ ಕವನ
  ಅಮ್ಮಂದಿರ ಜೀವನ ಪ್ರೀತಿ ಅನುಕ್ಷಣವು ಸ್ಮರಣಿಯಾ

 2. SUVARNA says:

  ತಾಯಿ ಪ್ರೀತಿ ತಾಯಿ ಪ್ರೀತಿಯೇ ಅದಕೆ ಸಮನಾದುದು ಯಾವುದೂ ಇಲ್ಲ

 3. TIRUPATI BHANGI says:

  mana kalkitu kavite

 4. chalapathi v says:

  ತಾಯಿ ಬಗ್ಗೆ ಏನೇ ಬರೆದರೂ ಅದು ಚೆನ್ನಾಗಿಯೇ ಇರುತ್ತದೆ

Leave a Reply

%d bloggers like this: