ನಿದ್ದೆಯಿಂದ ಎದ್ದು ನಡೆದಿದೆ ಕವಿತೆ

ರಶ್ಮಿ ಕಾಸರಗೋಡು

ಮೊಬೈಲ್ ಅಲರಾಂ ಬಡಿದುಕೊಂಡಾಗ ದಡಬಡಿಸಿ ಎದ್ದು
ಕರಾಗ್ರೇ …ಎಂದು ಹೇಳಿ ಕಣಿ ನೋಡಿ
ಸ್ನಾನ ಮುಗಿಸಿ ಊದು ಕಡ್ಡಿ ಹಚ್ಚಿ ಕಾಪಾಡಪ್ಪಾ ಎಂದು
ಬೇಡುವಾಗ
ಹೊಳೆಯುತ್ತದೆ ಕವಿತೆಯ ಸಾಲೊಂದು

ಗಡಿಬಿಡಿಯಲ್ಲಿ ಹೊರಟರೂ ಒಪ್ಪವಾಗಿರಬೇಕು
ಉಡುಗೆ ತೊಡುಗೆ
ಮ್ಯಾಚಿಂಗ್ ಕಿವಿಯೋಲೆ ಬಟ್ಟೆಯ ರಂಗಿನದ್ದೇ ಬೊಟ್ಟು
ಗಾಢ ಕಣ್ಕಪ್ಪು ಹಚ್ಚಿ ಕೂದಲು ಸರಿಸಿ
ಕನ್ನಡಿ ನೋಡಿ ನಕ್ಕು ಚಪ್ಪಲಿ ಮೆಟ್ಟಿ ಹೊರಡುವ ಹೊತ್ತಿಗೆ
ಇನ್ನೊಂದು ಸಾಲು
ಆಮೇಲೆ ಬರೆದರಾಯ್ತು ಬಿಡು

ಸಮಯದೊಂದಿಗೆ ಹೆಜ್ಜೆ ಹಾಕಿ ಮೆಟ್ರೋ ಬೋಗಿಯೊಂದರೊಳಗೆ ನುಸುಳಿ
ನೆಟ್ವರ್ಕ್ ಸಿಗುವವರೆಗೆ ಫೇಸ್ ಬುಕ್, ವಾಟ್ಸಾಪ್ …
ನ್ಯೂಸ್ ಫೀಡ್ ಗಳ ಮೇಲೆ ಬೆರಳುಗಳ ಓಡಾಟ
ಅದ್ಭುತ ವಿಷಯವೊಂದು ಸಿಕ್ಕಿತು ಇದನ್ನು ಬರೆಯಲೇಬೇಕು..
ಒಂದಷ್ಟು ಹೊತ್ತು ಅದರದ್ದೇ ಗುಂಗು

ಸುದ್ದಿ ಮನೆಯಲ್ಲಿ ಕೂತು ಕೀಬೋರ್ಡ್ ಕುಟ್ಟುವಾಗ
ಕವಿತೆಯ ಸಾಲುಗಳು ನನ್ನನ್ನಪ್ಪಿಕೋ ಎಂದು ಕೂಗುತ್ತಿದ್ದರೂ
ಇರು ಸ್ವಲ್ಪ, ಎಂದು ಹೇಳಿ ಬ್ರೇಕಿಂಗ್ ಸುದ್ದಿಯತ್ತ ಹೊರಳುತ್ತೇನೆ

ಅಲ್ಲೊಂದು ಕೊಲೆ, ಇಲ್ಲೊಂದು ಸಾವು, ರಾಜಕಾರಣದ ಜಟಾಪಟಿ
ವೈರಲ್ ಸುದ್ದಿ, ಹ್ಯಾಶ್ ಟ್ಯಾಗ್ ರಂಪಾಟಗಳ ನಡುವೆ
ನಾನು ಕಳೆದು ಹೋಗಿರುತ್ತೇನೆ

ಎಲ್ಲ ಮುಗಿಸಿ ಹೊರಡುವ ಹೊತ್ತಲ್ಲಿ ತಲೆಯಲ್ಲಿ
ಸುದ್ದಿಯದ್ದೇ ಅರಚಾಟ, ಕಿರುಚಾಟ

ಮನೆ ಸೇರುವ ಧಾವಂತದಲಿ
ನನಗಾಗಿ ಕಾದು ಹೈರಾಣಾಗಿದ್ದ ಕವಿತೆಯ ಸಾಲುಗಳನ್ನು
ಹೆಕ್ಕಿ ವೇಗವಾಗಿ ನಡೆಯುತ್ತೇನೆ

ದಿನ ಮುಗಿದರೆ ನನಗೆ ನಿದ್ದೆ ಮಂಪರು
ಬರೆಯಬೇಕೆಂದಿದ್ದ ಸಾಲುಗಳನ್ನು ಮಲಗಿಸಿ
ಹೊದಿಕೆ ಹೊದ್ದುಕೊಳ್ಳುತ್ತೇನೆ

ಕವಿತೆಯೊಂದು ನಿದ್ದೆಯಿಂದ ಎದ್ದು ನಡೆದದ್ದು
ಗೊತ್ತಾಗಲೇ ಇಲ್ಲ !

Leave a Reply