ಅಂಗೋಲಾದಲ್ಲೊಬ್ಬ ಮುಸಾಫಿರ್..

ನಾನೊಬ್ಬ ಮುಸಾಫಿರ್… ಪಯಣವೇ ನನ್ನ ಬದುಕು

 

ಯೂ ಹೀ ಚಲಾ, ಚಲ್ ರಾಹೀ

ಯೂ ಹೀ ಚಲಾ, ಚಲ್ ರಾಹೀ

ಕಿತ್ನೀ ಹಸೀನ್ ಹೈ ಯೇ ದುನಿಯಾ…

ಭೂಲ್ ಸಾರೇ ಝಮೇಲೇ

ದೇಖ್ ಫೂಲೋಂಕೆ ಮೇಲೇ

ಬಡೀ ರಂಗೀನ್ ಹೈ ಯೇ ದುನಿಯಾ…

(ಹೀಗೆಯೇ ಸಾಗುತ್ತಿರು ಓ ಪಯಣಿಗ, ಹೀಗೆಯೇ ಸಾಗುತ್ತಿರು… ಅದೆಷ್ಟು ಸುಂದರವಾಗಿದೆ ಈ ಜಗತ್ತು… ಎಲ್ಲಾ ಜಂಜಾಟಗಳನ್ನು ಮರೆತು, ಹೂವಿನ ಜಾತ್ರೆಗಳನ್ನು ಕಂಡು… ನೋಡು ಅದೆಷ್ಟು ವರ್ಣಮಯವಾಗಿದೆ ಈ ಜಗತ್ತು…)

ಅಶುತೋಷ್ ಗೋವಾರಿಕರ್ ನಿರ್ದೇಶನದ ಶಾರೂಖ್ ಖಾನ್, ಗಾಯತ್ರಿ ಜೋಷಿ ಮುಖ್ಯಭೂಮಿಕೆಯಲ್ಲಿರುವ `ಸ್ವದೇಸ್’ ಚಿತ್ರದ ಮಧುರ ಹಾಡಿದು.

ಲುವಾಂಡಾ-ವೀಜ್ ರಸ್ತೆ ಪುರಾಣದ ಬಗ್ಗೆ ಮಾತಾಡಿದಾಗಲೆಲ್ಲಾ ನೀವು ಮಾರ್ಗದುದ್ದಕ್ಕೂ ಹೀಗೆ ಶಾರೂಖ್ ನಂತೆ ಹಾಡು ಹೇಳುತ್ತಲೇ ಸಾಗಿದ್ದಿರಬಹುದಲ್ಲಾ ಎಂದು ಬಹಳಷ್ಟು ಜನ ಕೇಳಿದ್ದಾರೆ. ಅಕ್ಕಪಕ್ಕ ಕೇಳುವವರು ಯಾರೂ ಇಲ್ಲದಿದ್ದರಿಂದ ಹಾಡಬಹುದಿತ್ತೋ ಏನೋ! ಈ ನನ್ನ ಪ್ರಯಾಣಗಳಲ್ಲಿ ಪರಿಸ್ಥಿತಿಗಳು ಕೊಂಚ ಭಿನ್ನವಾಗಿದ್ದರೂ road trip ನ ಅನುಭವಗಳಂತೂ ಖಂಡಿತ ಆಗಿವೆ. ಆಗಿಲ್ಲವೆಂದರೂ ಆಗಿಸಿಕೊಳ್ಳುವ ಹುರುಪು ನನ್ನದು. ಇಲ್ಲದಿದ್ದರೆ ಪ್ರಯಾಣವೆಂಬುದು ಪ್ರಯಾಸದ ಮಾತಾಗುತ್ತದೆ. ಆರೇಳು ತಾಸುಗಳ ಪ್ರಯಾಣವೆಂಬ ಯೋಚನೆಯ ಮಾತ್ರದಿಂದಲೇ ಸುಸ್ತಾಗುತ್ತದೆ. ಕೆಲವೊಮ್ಮೆ ತೀರಾ ತುರ್ತಿನ ಸಂದರ್ಭಗಳಲ್ಲಿ ವಾರಕ್ಕೆ ಮೂರು ಬಾರಿ ನಾನು ಈ ಮಾರ್ಗವಾಗಿ ಹೋಗಿಬಂದಿರುವ ದೃಷ್ಟಾಂತಗಳೂ ಇವೆ. ಅಂದರೆ ನಲವತ್ತೆರಡು ತಾಸುಗಳು ಕೇವಲ ರಸ್ತೆಯಲ್ಲೇ. ಹೀಗಿರುವಾಗ ಪ್ರಯಾಣವನ್ನು ಆಸ್ವಾದಿಸದೆ ಪ್ರಯಾಸವನ್ನಾಗಿಸಿಕೊಂಡರೆ ಆ ಅನುಭವವೇ ಕೈತಪ್ಪಿಹೋಗುವುದು ಸಹಜ.

ವಾರಕ್ಕೊಮ್ಮೆ ಉಪವಾಸ ಮಾಡುವ ರೂಢಿಯು ಕೆಲವರಲ್ಲಿರುತ್ತದೆ. ದಿನಕ್ಕೊಂದಿಷ್ಟು ನಿಮಿಷವಾದರೂ ಮೌನವಾಗಿ ಕಳೆಯಿರಿ ಎಂದು ಜ್ಞಾನಿಗಳು ಹೇಳುತ್ತಾರೆ. ಈ ರಸ್ತೆಪುರಾಣವೂ ಕೂಡ ವೈಯಕ್ತಿಕ ನೆಲೆಯಲ್ಲಿ ಇಂಥದ್ದೇ ಅನುಭವ ನನಗೆ. ವೈಫೈ, ಟೆಲಿಫೋನ್ ನೆಟ್ವರ್ಕ್‍ಗಳಿಲ್ಲದ ದಾರಿಯಲ್ಲಿ, ದಟ್ಟ ಕಾಡನ್ನು ಸೀಳುತ್ತಾ ಸಾಗುವ ಹೆದ್ದಾರಿಯಲ್ಲಿ, ನೂರಕ್ಕಿಂತಲೂ ಹೆಚ್ಚಿನ ವೇಗದಲ್ಲಿ ತಾಸುಗಟ್ಟಲೆ ಪ್ರಯಾಣಿಸುವುದೆಂದರೆ ಹೊರಗಿನ ದುನಿಯಾದ ಜಂಜಾಟಗಳಿಂದ ಒಂದು ತಾತ್ಕಾಲಿಕ, ಸಂಕ್ಷಿಪ್ತ ಆದರೆ ಸಂಪೂರ್ಣ ಮುಕ್ತಿ. ಈ ಅವಧಿಯೇನಿದ್ದರೂ ನನ್ನ ಮತ್ತು ಕಾಡಿನ ಏಕಾಂತ ಮಾತ್ರ. ಸ್ವಲ್ಪ ಓದು, ಸ್ವಲ್ಪ ನಿದ್ದೆ, ಸ್ವಲ್ಪ ಸಂಗೀತ. ಮನಸ್ಸಾದರೆ ನನ್ನ ಕಳಪೆ ಪೋರ್ಚುಗೀಸ್ ಭಾಷೆಯಲ್ಲಿ ಜತೆಗಾರರೊಂದಿಗೆ ಒಂದಿಷ್ಟು ಮಾತು. ಪ್ರಕೃತಿಯಿಂದ ನಾವು ಅದೆಷ್ಟು ದೂರ ಬಂದುಬಿಟ್ಟಿದ್ದೇವೆ ಎಂದು ಅರಿವಾಗುವುದು ಇಂಥಾ ಮಧುರ ಕ್ಷಣಗಳಲ್ಲೇ.

ಅಂಗೋಲಾದಲ್ಲಿ ವರ್ಷಕ್ಕೆ ಸುಮಾರು ಏಳರಿಂದ ಎಂಟು ತಿಂಗಳುಗಳ ಕಾಲ ಧಾರಾಕಾರ ಮಳೆಯಾಗುತ್ತದೆ. ಮಳೆಯೆಂದರೆ ಅಂತಿಂಥಾ ಮಳೆಯಲ್ಲ ಅದು. ಧೋ ಎಂದು ಒಂದೇ ಸಮನೆ ಸುರಿಯುವ ಮಳೆ. ಉಕ್ಕುಕ್ಕಿ ಬರುತ್ತಿದ್ದರೂ ಅದೆಷ್ಟೋ ದಿನ ತಡೆದಿಟ್ಟು ಕೊನೆಗೊಂದು ದಿನ ಏಕಾಏಕಿ ಅತ್ತು ಕರಗಿಹೋಗುವ ಕಣ್ಣೀರಿನಂತೆ ಬರುವ ಮಳೆ. ಈ ಜಡಿಮಳೆಯ ನಂತರ ಸುತ್ತಲೂ ನಳನಳಿಸುವ ಹಸಿರನ್ನೊಮ್ಮೆ ನೋಡಬೇಕು. ಅದು ಕಣ್ಣಿಗೆ ಹಬ್ಬ. ಬೆರಳೆಣಿಕೆಯ ಸಂದರ್ಭಗಳಲ್ಲಿ ಇಂಥಾ ಮಳೆಯು ಮದವೇರಿದ ಆನೆಯಂತೆ ಏರಿಹೋಗುವುದೂ ಉಂಟು. ಆಗ ಆ ಮಳೆಯು ತನ್ನಷ್ಟಕ್ಕೆ ಶಾಂತವಾಗಿದ್ದ ವೀಜ್ ಪರಿಸರವನ್ನು ಏಕಾಏಕಿ ಚೆಲ್ಲಾಪಿಲ್ಲಿ ಮಾಡಿ ಜನರನ್ನು ಒಂದು ಕ್ಷಣ ಕಂಗೆಡಿಸುತ್ತದೆ. ಡ್ರೈವ್ ಮಾಡುತ್ತಿರುವವರು ವೈಪರ್ ಗಳು ಜೋರಾಗಿ ಅತ್ತಿತ್ತ ಸರಿದಾಡುತ್ತಿದ್ದರೂ ಕಣ್ಣಿಗೆ ಏನೆಂದರೆ ಏನೂ ಕಾಣದೆ ಅಸಹಾಯಕರಾಗಿ ಎಲ್ಲಾದರೊಂದು ಮೂಲೆಯಲ್ಲಿ ವಾಹನವನ್ನು ನಿಲ್ಲಿಸಿಬಿಡುತ್ತಾರೆ. ರಸ್ತೆ ಬದಿಯಲ್ಲಿ ಬಾಳೆಹಣ್ಣು, ಗೆಣಸು, ಸಾಬೂನು ಇತ್ಯಾದಿಗಳನ್ನು ತಲೆಯ ಮೇಲೆ ಹೊತ್ತು ಮಾರುತ್ತಿದ್ದ, ಜೊತೆಗೇ ಬೆನ್ನ ಹಿಂದೆ ತನ್ನ ಹಸುಳೆಯನ್ನು ಬಟ್ಟೆಯೊಂದರಿಂದ ಸುತ್ತಿ ಕಟ್ಟಿದ್ದ ಸ್ಥಳೀಯ ಝುಂಗೇರಾ ಮಹಿಳೆಯರು ಆಸರೆಗಾಗಿ ಅತ್ತಿತ್ತ ಗೊಂದಲದಿಂದ ಓಡತೊಡಗುತ್ತಾರೆ. ಗೂಡಂಗಡಿಗಳು ಬೆಚ್ಚಿಬೀಳುತ್ತವೆ. ಇನ್ನು ಮನೆಯೊಳಗೆ ಬೆಚ್ಚಗಿರುವ ನನ್ನಂಥವರು ರಭಸವಾಗಿ ಬೀಳುತ್ತಿರುವ ಮಳೆಯನ್ನೇ ಸುಮ್ಮನೆ ನೋಡುತ್ತಾ ನೆನಪುಗಳ ಹಾಯಿದೋಣಿಯಲ್ಲಿ ಮೆಲ್ಲನೆ ಸಾಗತೊಡಗುತ್ತಾರೆ, ಕಾಫಿ-ಪುಸ್ತಕದ ಜನಪ್ರಿಯ ಕಾಂಬೋಗೆ ಶರಣಾಗುತ್ತಾರೆ, ಗಝಲ್ ನ ಗುಂಗಿನಲ್ಲಿ ಕಳೆದುಹೋಗುತ್ತಾರೆ.

ಹೀಗಾಗಿಯೇ ಅಂಗೋಲಾ ದಿನಗಳ ಅದೆಷ್ಟೋ ತರಹೇವಾರಿ ಅನುಭವಗಳಿದ್ದರೂ ಈ ರಸ್ತೆ ಪುರಾಣದ ತೂಕವೇ ಬೇರೆ. ಕಡುನೀಲಿ ಬಣ್ಣದ ಸಮವಸ್ತ್ರಧಾರಿ ಲಂಚಬಾಕ ಪೋಲೀಸರು ನನ್ನನ್ನು ಅದೆಷ್ಟು ಗೋಳುಹೊಯ್ದುಕೊಂಡಿದ್ದಾರೋ, ಅಂಥಾ ಕಾಡಗರ್ಭದಲ್ಲೂ ಹಾಯಾಗಿರುವ ಸ್ಥಳೀಯರು ನನ್ನನ್ನು ಅಷ್ಟೇ ಕಾಡಿದ್ದಾರೆ. ಬಹಳಷ್ಟು ಅಂಗೋಲನ್ನರು ಕ್ಯಾಮೆರಾಗಳಿಗೆ ಸೆರೆಯಾಗಲು ಸಂಕೋಚಪಡುತ್ತಿದ್ದುದರಿಂದ ಈ ನೆನಪುಗಳು ಚಿತ್ರಗಳಾಗದೆ ಉಳಿದುಹೋದವು. ಹಾಗೆಂದು ಅಂಗೋಲನ್ನರು ನಾಚಿಕೆಯ ಸ್ವಭಾವದವರೇನೂ ಅಲ್ಲ. ಮನೆಯಲ್ಲಿದ್ದಾಗ ನಾವು ಹೇಗ್ಹೇಗೋ ಬಟ್ಟೆಗಳನ್ನು ಧರಿಸಿ ವಿಚಿತ್ರವಾಗಿರುತ್ತೇವಲ್ಲವೇ, ಹೀಗಾಗಿ ಫೋಟೋ ತೆಗೆಯಬೇಡಿ ಎಂಬ ಕೋರಿಕೆ ಅವರದ್ದು. ಇನ್ನು ಏನಿಲ್ಲವೆಂದರೂ ನನ್ನಂತಹ ವಿದೇಶೀ ಹೈದನೊಬ್ಬ ಹೀಗೆ ಸ್ಥಳೀಯರೊಂದಿಗೆ ಬೆರೆತಾಗ ಖುಷಿಖುಷಿಯಾಗಿ ದೊಡ್ಡ ಗುಂಪಿನಲ್ಲಿ ಬರುವವರು ಮಾತ್ರ ಮಕ್ಕಳು. ಯಾರು ತಮ್ಮಂತೆ ಕಾಣುತ್ತಿಲ್ಲವೋ ಅವರೆಲ್ಲರೂ ಈ ಮಕ್ಕಳಿಗೆ `ಬ್ರಾಂಕು’ (ಬಿಳಿ) ಮತ್ತು `ಶಿನೇಷ್’ (ಚೈನೀಸ್). ಕಿಂದರಿಜೋಗಿಯ ಹಿಂದೆ ಹೇಗೆ ಇಲಿಗಳು ದಂಡಿಯಾಗಿ ಹೋದವೋ ಅಂತೆಯೇ ನನ್ನ ಹಿಂದೆ ಈ ಪುಟ್ಟ ಮಕ್ಕಳ ಕುರಿಮಂದೆಯಂತಿರುವ ಗುಂಪು.

ಅಂದಹಾಗೆ ಕನ್ನಡ ಸಿನೆಮಾಗಳಲ್ಲಷ್ಟೇ ನೋಡಿದ್ದ ಲಾಂಗು-ಮಚ್ಚುಗಳನ್ನು ಮತ್ತೊಮ್ಮೆ ನಿತ್ಯವೂ ಕಾಣುವ ಭಾಗ್ಯ ನನಗೊದಗಿಬಂದಿದ್ದು ಅಂಗೋಲಾದಲ್ಲಿ. ಅಂಗೋಲಾದ ಗ್ರಾಮೀಣ ಭಾಗಗಳಲ್ಲಿ ಓಡಾಡಿದರೆ ರಸ್ತೆಯುದ್ದಕ್ಕೂ ಮಚ್ಚುಗಳನ್ನು ಹಿಡಿದುಕೊಂಡು ತಮ್ಮ ಪಾಡಿಗೆ ತಾವು ಸಾಗುತ್ತಿರುವ ಪುರುಷರನ್ನು ನಾವು ಕಾಣಬಹುದು. ಸ್ಥಳೀಯ ಭಾಷೆಯಲ್ಲಿ ಇದರ ಹೆಸರು `ಕತಾನಾ’. ಒಂದು ರೀತಿಯಲ್ಲಿ ಕತಾನಾ ಅವರಿಗೊಂದು ultimate ಆಯುಧ. ಅದು ಸೌದೆಗೂ, ಚಿಕ್ಕಪುಟ್ಟ ಬೇಟೆಗೂ, ಎದೆಯೆತ್ತರ ಬೆಳೆದುನಿಂತ ಹುಲ್ಲುಗಳನ್ನು ಕತ್ತರಿಸಿ ದಾರಿ ಮಾಡಿಕೊಂಡು ಹೋಗಲು… ಹೀಗೆ ಎಲ್ಲದಕ್ಕೂ ಒಂದು handy ಸಾಧನ. ಕತಾನಾ ಅಂಗೋಲನ್ನರಿಗೆ ಒಂದು ಯಕಶ್ಚಿತ್ ಮಚ್ಚಷ್ಟೇ ಅಲ್ಲ. ಅದು ಒಂದು ಕಾಲದಲ್ಲಿ ಅವರ ಒಡಲ ರೋಷಕ್ಕೆ ದನಿಯಾದ ದಾರಿಯೂ ಹೌದು. ಪೋರ್ಚುಗೀಸ್ ಆಧಿಪತ್ಯದ ವಿರುದ್ಧ ತಿರುಗಿಬಿದ್ದ ಅಂಗೋಲನ್ನರು ಒಂದು ಹಂತದಲ್ಲಿ ಮಚ್ಚು, ಚೂರಿ, ಕೊಡಲಿಗಳಂತಹ ಆಯುಧಗಳನ್ನು ಹಿಡಿದುಕೊಂಡು ಬಂದೂಕು ಹಿಡಿದಿದ್ದ ಬಿಳಿಯ ಪೋರ್ಚುಗೀಸರ ವಿರುದ್ಧ ದಂಗೆಯೆದ್ದಿದ್ದರು ಎಂಬುದನ್ನು ನೀವು ನಂಬಲೇಬೇಕು.

ಇನ್ನು ತಮಾಷೆಯ ಕೆಲ ಸಂಗತಿಗಳೂ ಕೂಡ ಕೆಲವೊಮ್ಮೆ ರಸ್ತೆ ಪ್ರಯಾಣಗಳ ಆಯಾಸವನ್ನು ಮರೆಸಿಬಿಡುತ್ತವೆ. ಮುನ್ನೂರು ಚಿಲ್ಲರೆ ಕಿಲೋಮೀಟರುಗಳ ಇಂಥದ್ದೇ ಪ್ರಯಾಣವೊಂದರಲ್ಲಿ ಮಹಿಳಾ ಪೋಲೀಸ್ ಅಧಿಕಾರಿಯೊಬ್ಬರು ಕೊಂಚ ಹೆಚ್ಚೇ ಎನ್ನುವಷ್ಟು ನನ್ನ ಕಾಲೆಳೆದಿದ್ದರು. ನಾನಿನ್ನೂ ಯಾಕೆ ಮದುವೆಯಾಗಿಲ್ಲ ಎಂಬುದು ಅವರ ಮಿಲಿಯನ್ ಡಾಲರ್ ಪ್ರಶ್ನೆ. ಈ ವಯಸ್ಸಿಗೆ ಮನೆ ತುಂಬಾ ಮಕ್ಕಳಿರಬೇಕಿತ್ತು ಗೊತ್ತಾ ಎಂಬ ಕಳಕಳಿ ಬೇರೆ (ಅಂಗೋಲಾದಲ್ಲಿ ತರುಣ-ತರುಣಿಯರು ಬೇಗನೇ ಮದುವೆಯಾಗಿ ಸಂಸಾರಸ್ಥರಾಗುವುದು ಸಾಮಾನ್ಯ. ಇತ್ತೀಚೆಗೆ ತನ್ನ ಮೂವತ್ತೆರಡನೇ ವಯಸ್ಸಿನಲ್ಲಿ ಸಾವಿಗೀಡಾದ ಪರಿಚಿತ ಕಾರ್ಮಿಕನೊಬ್ಬ ಇಬ್ಬರು ಪತ್ನಿಯರಿಂದ ಬರೋಬ್ಬರಿ ಒಂಭತ್ತು ಮಕ್ಕಳನ್ನು ಪಡೆದಿದ್ದ). ಮದುವೆಯಾದರೆ ಅಂಗೋಲನ್ ಹುಡುಗಿಯನ್ನು ಆಗುತ್ತೀರಾ, ಅಥವಾ ಭಾರತೀಯ ಹುಡುಗಿಯನ್ನೋ ಎಂಬುದು ಮುಂದುವರಿದ ಪ್ರಶ್ನೆ. ಭಾರತೀಯ ಮಹಿಳೆಯರು ಅಷ್ಟು ಸ್ಫುರದ್ರೂಪಿಗಳಾಗಿರುತ್ತಾರಲ್ಲ, ಏನಿದರ ರಹಸ್ಯ? ಆದರೂ ಅಂಗೋಲನ್ ಸುಂದರಿಯರೂ ಏನು ಕಮ್ಮಿಯೇ? ನೀವು ಅಂಗೋಲನ್ ಹುಡುಗಿಯನ್ನು ವಿವಾಹವಾದರೆ ನಿಮ್ಮ ಮಕ್ಕಳಿಗೆ ಎಲ್ಲಿಯ ಪೌರತ್ವ ಸಿಗುತ್ತದೆ? ನಾನು ನಿಮಗೆ ಅಂಗೋಲನ್ ವಧು ಹುಡುಕಿ ಕೊಡಲಾ?… ಹೀಗೆ ಒಂದೇ ಎರಡೇ… ನಮ್ಮ ಪಾಡಿಗೆ ನಾವು ಲುವಾಂಡಾದತ್ತ ತೆರಳುತ್ತಿದ್ದರೆ ಆ ಕಾಡಿನ ಮಧ್ಯೆ ವಾಹನವನ್ನು ಮೂಲೆಯಲ್ಲಿ ಪಾರ್ಕ್ ಮಾಡಿಸಿ ಪ್ರಶ್ನೆಗಳನ್ನು ಪುಂಖಾನುಪುಂಖವಾಗಿ ಬಾಣದಂತೆ ಬಿಡುತ್ತಲೇ ಇದ್ದರು ಈಯಮ್ಮ. “ಅರೆ! ಇಷ್ಟೆಲ್ಲಾ ನಾನು ಯೋಚಿಸಿಯೇ ಇಲ್ವಲ್ಲಾ… ಸಂಸಾರಸ್ಥನಾಗಬೇಕು ಎಂದೇನಾದರೂ ಯೋಜನೆ ಹಾಕಿದರೆ ಎಲ್ಲವನ್ನೂ ಬಿಟ್ಟು ಉಟ್ಟಬಟ್ಟೆಯಲ್ಲೇ ನಿಮ್ಮೆದುರು ಬಂದು ನಿಲ್ಲುತ್ತೇನೆ. ಸರೀನಾ?”, ಎಂದು ದುಭಾಷಿಯ ಮೂಲಕವಾಗಿ ಹೇಳಿಸಿದೆ ನಾನು. ನನ್ನ ಮಾತಿಗೆ ದೊಡ್ಡದಾಗಿ ನಗುತ್ತಾ ಅಸ್ತು ಎಂದರು ಆಕೆ. ಅವರಿಗೂ ಪಾಪ, ಮುಂಜಾನೆಯಿಂದ ಆ ನಿರ್ಜನ ಪ್ರದೇಶದಲ್ಲಿ ಕರ್ತವ್ಯ ನಿರ್ವಹಿಸುತ್ತಾ ಬೋರಾಗಿತ್ತೋ ಏನೋ! ಸಿಕ್ಕ ಅವಕಾಶವನ್ನು ಚೆನ್ನಾಗಿಯೇ ಬಳಸಿಕೊಂಡಿದ್ದರು ಆಕೆ. ಆಗಲಿ, ಹತ್ತು ನಿಮಿಷಗಳ ಕಾಲ ಮನರಂಜನೆಯನ್ನು ಕೊಟ್ಟ ಪುಣ್ಯವಾದರೂ ನನಗೆ ಸಿಗಬಹುದು ಎಂದು ಅಂದುಕೊಂಡ ನಾವು ಮುನ್ನಡೆದಿದ್ದೆವು. ಆ ಮಹಿಳಾ ಅಧಿಕಾರಿಯನ್ನು ಅಲ್ಲೇ ಬಿಟ್ಟು ನಾವು ಮುನ್ನಡೆದರೂ ಆಕೆಯ ಪರಿಶುಭ್ರ ನಗೆಯು ಪ್ರಯಾಣದುದ್ದಕ್ಕೂ ನಮಗೆ ಸಾಥ್ ನೀಡಿತ್ತು.

ವಿಚಿತ್ರವೆಂದರೆ ವೀಜ್ ನ ಸನಿಹದಲ್ಲಿರುವ ಏಕೈಕ ಪಟ್ಟಣವೆಂದರೆ ಲುವಾಂಡಾ ಅಷ್ಟೇ. ಮುನ್ನೂರು ಚಿಲ್ಲರೆ ಕಿಲೋಮೀಟರುಗಳ `ಸನಿಹ’ವಿದು. ಹೀಗಾಗಿ ವೀಜ್ ನಿಂದ ಲುವಾಂಡಾದತ್ತ ಹೋಗುವವರು ತಮ್ಮ ಆಪ್ತರಿಗಾಗಿ ಒಳ್ಳೆಯ ಗುಣಮಟ್ಟದ ಬಾಳೆಹಣ್ಣು, ಗೆಣಸು ಇತ್ಯಾದಿ ಕೃಷಿ ಉತ್ಪನ್ನಗಳನ್ನು ಹಳ್ಳಿಯಿಂದ ತೆಗೆದುಕೊಂಡು ಹೋದರೆ, ಲುವಾಂಡಾದಿಂದ ವೀಜ್ ಕಡೆಗೆ ಬರುವ ಜನರು ವೀಜ್ ನಲ್ಲಿರುವ ಆಪ್ತರಿಗಾಗಿ ಸೂಪರ್ ಮಾರ್ಕೆಟ್ಟುಗಳ ಅಗತ್ಯ ವಸ್ತುಗಳನ್ನು, ಔಷಧಿಗಳನ್ನು ತರುತ್ತಾರೆ. ಪ್ರತೀಬಾರಿ ರಾಜಧಾನಿಗೆ ಹೋಗುವ ನಾನೇ ವೀಜ್ ಗೆ ಮರಳಿ ಬರುವಾಗ ನನ್ನ ಮಜ್ದಾ ಕಾರಿನ ತುಂಬಾ ಬಗೆಬಗೆಯ ತಿಂಡಿತಿನಿಸುಗಳನ್ನು ಮತ್ತು ಇತರೆ ವಸ್ತುಗಳನ್ನು ರಾಶಿಹಾಕಿ ತರುತ್ತೇನೆ. ಹೀಗಾಗಿಯೇ “ಲುವಾಂಡಾ ನಗರವು ನಮ್ಮ ತವರುಮನೆ” ಎಂದು ನಾವೆಲ್ಲರೂ ಇಲ್ಲಿ ನಗೆಯಾಡುವುದೂ ಉಂಟು.

ಹಾಗೆ ನೋಡಿದರೆ ಮಂಗಳೂರು-ಬೆಂಗಳೂರುಗಳ ನಡುವೆ ಪ್ರಯಾಣಿಸಲು ವಿಮಾನಗಳ ಸೌಲಭ್ಯವಿರುವಂತೆಯೇ ವೀಜ್-ಲುವಾಂಡಾದ ಮಧ್ಯೆಯೂ ವಾಯುಮಾರ್ಗದ ಸೌಲಭ್ಯವಿದೆ. ಸೌಲಭ್ಯವೇನೋ ಇದೆ, ಆದರೆ ವಿಮಾನಗಳಿಲ್ಲ ಅಷ್ಟೇ. ಹಾಗಿದ್ದರೆ ಇದು `ಸೌಲಭ್ಯ’ ಹೇಗಾಯಿತು ಎಂದು ಮಾತ್ರ ಕೇಳಬೇಡಿ! ಕುತೂಹಲಕ್ಕಾದರೂ ಒಮ್ಮೆ ವೀಜ್-ಲುವಾಂಡಾ ಅಥವಾ ಲುವಾಂಡಾ-ವೀಜ್ ಮಾರ್ಗವಾಗಿ ನಲವತ್ತು ನಿಮಿಷ ಹಾರಾಡಬೇಕು ಎಂದು ಲೆಕ್ಕಹಾಕಿದ್ದ ನನಗೆ ಸಿಕ್ಕಿದ್ದು ನಿರಾಶೆಯೇ. ಅಷ್ಟಕ್ಕೂ ಈ ವೀಜ್ ವಿಮಾನನಿಲ್ದಾಣದಲ್ಲಿ ಏನಿದೆಯೆಂದು ಒಮ್ಮೆ ನೋಡಲು ಹೋದರೆ ಅಲ್ಲಿದ್ದ ನಾಲ್ಕೈದು ಸಿಬ್ಬಂದಿಗಳು ನೊಣ ಹೊಡೆಯುತ್ತಿದ್ದರು. ಇನ್ನು ವಿಮಾನಗಳ ವೇಳಾಪಟ್ಟಿಯನ್ನು ವಿಚಾರಿಸಿದರೆ “ಅಯ್ಯೋ… ಬಸ್ಸೆಲ್ಲಾ ಇರೋವಾಗ ದುಬಾರಿ ವಿಮಾನದಲ್ಲಿ ಯಾರು ಹೋಗೋರು? ಶುಕ್ರವಾರ ಒಂದು ವಿಮಾನ ಬಿಡ್ತೇವೆ, ಅದೂ ಕೂಡ ಜನ ಇದ್ರೆ ಮಾತ್ರ”, ಎಂದರು ಒಬ್ಬರು. ಆ ಶುಭಶುಕ್ರವಾರ ಅದ್ಯಾವಾಗ ಬಂದುಹೋಯಿತೋ ನನಗಂತೂ ಗೊತ್ತಿಲ್ಲ. ಇತ್ತೀಚೆಗಷ್ಟೇ ದೇಶದ ರಾಷ್ಟ್ರಪತಿ ಹುದ್ದೆಗೆ ನಡೆದ ಚುನಾವಣಾ ಸಂದರ್ಭದಲ್ಲಿ ಪ್ರಚಾರಕ್ಕೆಂದು ಇಲ್ಲಿಯ ಆಡಳಿತ ಪಕ್ಷದ ರಾಷ್ಟ್ರಪತಿ ಅಭ್ಯರ್ಥಿಗಳು ವೀಜ್ ಗೆ ಬಂದಿಳಿದಿದ್ದರು. ವೀಜ್ ನ ವಿಮಾನ ನಿಲ್ದಾಣವು ಪಾವನವಾಗಿದ್ದು ಬಹುಷಃ ಆವಾಗಲೇ!

ಲುವಾಂಡಾ-ವೀಜ್ ರಸ್ತೆ ಪುರಾಣವು ಇಲ್ಲಿಗೆ ಸಮಾಪ್ತಿಯಾಗಿರಬಹುದು. ಆದರೆ ಈ ಅಂಗೋಲಾ ಪಯಣವಂತೂ ಅಲ್ಲ. ಸಾಗಬೇಕಾದ ದೂರವು ಮತ್ತಷ್ಟಿದೆ. ಸ್ವಾರಸ್ಯಕರ ಪಯಣದ ಈ ಮೆಹಫಿಲ್ ನಲ್ಲೇ ಗುಲ್ಝಾರ್ ಸಾಬ್ ಬರೆದ ಕಿಶೋರ್ ಕುಮಾರ್ ಹಾಡಿರುವ ಈ ಹಾಡೊಂದು ನನಗೆ ನೆನಪಾಗುತ್ತಿದೆ. ಮುಸಾಫಿರ್ ಹೂಂ ಯಾರೋಂ… ನ ಘರ್ ಹೇ ನಾ ಠಿಕಾನಾ… ಮುಝೇ ಚಲ್ತೇ ಜಾನಾ ಹೈ… ಬಸ್ ಚಲ್ತೇ ಜಾನಾ… (ನಾನೊಬ್ಬ ಪಯಣಿಗ ಓ ಗೆಳೆಯರೇ… ಮನೆಯಿಲ್ಲದ, ಠಿಕಾಣಿಯಿಲ್ಲದ ಪಯಣಿಗ… ನನಗಂತೂ ಹೀಗೆಯೇ ಸಾಗುತ್ತಿರಬೇಕು… ಹೀಗೆಯೇ ಸುಮ್ಮನೆ ಸಾಗುತ್ತಿರಬೇಕು…)

Leave a Reply