ಇದು ವಿರಾಟ್ ಕೊಹ್ಲಿಯ ಹೃದಯ ಗೀತೆ..

 

 

 

 

 

 

 

 

 

 

ಸನತ್ ರೈ

ಬರಹಗಾರರು ಖ್ಯಾತ ಕ್ರೀಡಾ ವರದಿಗಾರರು

ಪಕ್ಕಾ ಒರಟ.. ಯಾರು ಏನೇ ಹೇಳಿದ್ರೂ ಕೊಂಚವೂ ಬದಲಾಗಲ್ಲ ಅವ್ರ ಪರಿಪಾಠ. ಕ್ರಿಕೆಟ್ ಮೈದಾನದಲ್ಲಿರುವಷ್ಟು ಹೊತ್ತು ನಡೆಯುತ್ತೆ ಅವ್ರದ್ದೇ ಆರ್ಭಟ. ಎದುರಾಳಿ ಬೌಲರ್ ಗಳು ಮತ್ತು  ಫೀಲ್ಡರ್ ಗಳಿಗೆ ಕಲಿಸ್ತಾರೆ 360 ಡಿಗ್ರಿಯ ಬೊಂಬಾಟ್ ಆಟ. ಸ್ಪಿನ್ ಮತ್ತು ವೇಗದ ಎಸೆತಗಳನ್ನು ಲೆಕ್ಕಕ್ಕಿಲ್ಲದಂತೆ ಮಾಡಿಸುತ್ತೆ ಇವ್ರ ತೀಕ್ಷ್ಣವಾದ ಕಣ್ಣೋಟ. ತನ್ನ ವರ್ತನೆಯಿಂದ ಎಷ್ಟೇ ಬೈಸಿಕೊಂಡ್ರೂ ಆಟದ ಖದರ್ ನಿಂದಲೇ ಕ್ರಿಕೆಟ್ ಅಭಿಮಾನಿಗಳ ಮನ ಗೆಲ್ಲುತ್ತಾರೆ ಈ ತುಂಟ.

ಏಟಿಗೆ ಎದುರೇಟು ಅನ್ನೋ ಹಾಗೇ ಅಣಕಿಸಿದ್ರೆ ಕೊಡ್ತಾರೆ ಇನ್ನಿಲ್ಲದ ಕಾಟ. ಪ್ರತಿಭೆಯ ಮದದಿಂದ ಅಡ್ಡದಾರಿ ಹಿಡಿದ್ರೂ ಮತ್ತೆ ರಾಜಪಥದಲ್ಲಿ ಸಾಗುತ್ತಿದ್ದಾರೆ ಬೆಂಗಳೂರಿನ ನೆಂಟ. ಸೋಲನ್ನು ಒಪ್ಪಿಕೊಳ್ಳಲು ಸಿದ್ದರಿಲ್ಲದೆ ಗೆಲುವಿಗಾಗಿ ಕೊನೆ ತನಕ ಹೋರಾಟ ನಡೆಸುವ ಬಂಟ. ಕ್ರಿಕೆಟ್ ಲೋಕದಲ್ಲಿ ಈಗ ಎಲ್ಲ ಕಡೆ ರಾರಾಜಿಸುತ್ತಿದೆ ಇವ್ರ ಪಟ.

ಹೀಗೆ ಈ ಕ್ರಿಕೆಟ್ ಮಾಯಾವಿಯ ಬ್ಯಾಟಿಂಗ್ ವೈಭವ ಇನ್ನಷ್ಟು ಕಾಲ ಮುಂದುವರಿದ್ರೆ ಸಾರ್ವಕಾಲಿಕ ಕ್ರಿಕೆಟ್ ದಾಖಲೆಗಳು ಅಳಿಸಿ ಹೋಗುವುದು ದಿಟ. ಸದ್ಯ ಕ್ರಿಕೆಟ್ ಜಗದಗಲದಲ್ಲಿ ಪ್ರತಿಧ್ವನಿಸುತ್ತಿರುವ ಒಂದೇ ಹೆಸರು ವಿರಾಟ… ವಿರಾಟ.. ವಿರಾಟ…

ಹೌದು, ಈಗ ಕ್ರಿಕೆಟ್ ದುನಿಯಾದಲ್ಲಿ ಏನಿದ್ರೂ ವಿರಾಟನ ಪರ್ವ. ಟೀಮ್ ಇಂಡಿಯಾದ ನಾಯಕನಾಗಿ ತಂಡವನ್ನು ಮುನ್ನಡೆಸುತ್ತಿರುವ ಕೊಹ್ಲಿ ಮುಟ್ಟಿದ್ದೆಲ್ಲವೂ ಚಿನ್ನವಾಗುತ್ತಿದೆ. ಸೋಲಿಗಿಂತ ಗೆಲುವಿನ ನಾಗಾಲೋಟದಲ್ಲಿರುವ ಟೀಮ್ ಇಂಡಿಯಾದ ಪಾಲಿಗೆ ವಿರಾಟ್ ಕೊಹ್ಲಿಯೇ ರನ್ ಮೆಷಿನ್. ಟೆಸ್ಟ್, ಏಕದಿನ ಮತ್ತು ಟಿ-ಟ್ವೆಂಟಿ ಸೇರಿದಂತೆ ಮೂರು ಮಾದರಿಯ ಕ್ರಿಕೆಟ್ನಲ್ಲೂ ಅಬ್ಬರಿಸಿ, ಬೊಬ್ಬರಿಸುತ್ತಿದ್ದಾರೆ ದೆಹಲಿಯ ಚೀಕೂ. ಕಠಿಣ ಅಭ್ಯಾಸದ ಜೊತೆಗೆ ಫಿಟ್ನೆಸ್ಗೂ ಹೆಚ್ಚಿನ ಆದ್ಯತೆಯನ್ನು ನೀಡುತ್ತಿರುವ ಕೊಹ್ಲಿ ಪರಿಪೂರ್ಣ ಕ್ರಿಕೆಟಿಗನಾಗಿ ಹೊರಹೊಮ್ಮುತ್ತಿದ್ದಾರೆ.

ಪ್ರತಿ ಪಂದ್ಯ, ಪ್ರತಿ ಸರಣಿಗೆ ಮುನ್ನ ಪೂರ್ವ ಸಿದ್ದತೆ ನಡೆಸುವ ವಿರಾಟ್, ಎದುರಾಳಿ ತಂಡಕ್ಕೆ ಸಿಂಹ ಸ್ವಪ್ನವೇ ಸರಿ. ಅದ್ರಲ್ಲೂ ಒತ್ತಡದಲ್ಲಿ ಆಡುವ ಕಲೆಯನ್ನು ಕರಗತ ಮಾಡಿಕೊಂಡಿರುವ ಕೊಹ್ಲಿ, ಸವಾಲನ್ನು ಬೆನ್ನಟ್ಟುವಾಗ ಮಾತ್ರ ಮೈದಾನದಲ್ಲಿ ದೈತ್ಯ ರೂಪಿಯಾಗ್ತಾರೆ, ಪರಿಸ್ಥಿತಿಯನ್ನು ಅರಿತುಕೊಂಡು ತಾಳ್ಮೆಯ ಜೊತೆಗೆ ಆಕ್ರಮಣಕಾರಿಯಾಗಿ ಬ್ಯಾಟ್ ಬೀಸುವ ದೆಹಲಿಯ ತರುಣನನ್ನು ‘ಚೇಸಿಂಗ್ ಗಾಡ್’ ಅಂತನೇ ಕರೀತಾರೆ. ವಿಶ್ವ ಕ್ರಿಕೆಟ್ ಫೀಲ್ಡ್ನಲ್ಲಿ ರನ್ ಎಂಬ ದಾರದಲ್ಲಿ ದಾಖಲೆಗಳನ್ನು ಮಲ್ಲಿಗೆಯಂತೆ ಪೋಣಿಸಿಕೊಂಡು ಕ್ರಿಕೆಟ್ ಜಗತ್ತಿನಲ್ಲಿ ಕಂಪನ್ನು ಪಸರಿಸುತ್ತಿರುವ ವಿರಾಟ್ ಕೊಹ್ಲಿಗೆ ವಿರಾಟ್ ಕೊಹ್ಲಿಯೇ ಸಾಟಿ.

ಕಳೆದ 9 ವರ್ಷಗಳಲ್ಲಿ ವಿರಾಟ್ ಕೊಹ್ಲಿ ನಡೆದು ಬಂದ ಹಾದಿ ಹೂವಿನ ಹಾದಿಯಲ್ಲ. ಅದು ಕಲ್ಲು ಮುಳ್ಳಿನ ಹಾದಿ. ಆರಂಭದಲ್ಲಿ ಟೀಮ್ ಇಂಡಿಯಾಗೆ ಬಂದು ಹೋಗುವ ಆತಿಥಿಯಾಗಿದ್ದರು ಕೊಹ್ಲಿ. ಹಿರಿಯ ಆಟಗಾರರ ಅನುಪಸ್ಥಿತಿಯಲ್ಲಿ ಹನ್ನೊಂದರ ಬಳಗದಲ್ಲಿ ಕಾಣಿಸಿಕೊಳ್ಳುತ್ತಿದ್ದ ಚೀಕೂ, ಸಿಕ್ಕ ಅವಕಾಶವನ್ನು ಸರಿಯಾಗಿಯೇ ಬಳಸಿಕೊಂಡ್ರು. ಇದೇ ವೇಳೆ ಐಪಿಎಲ್ ಆಮಲು ವಿರಾಟ್ ಕೊಹ್ಲಿಯ ಕ್ರಿಕೆಟ್ ಬದುಕಿಗೆ ಮಾರಕವಾಗಿ ಪರಿಣಮಿಸಿತ್ತು. ಆದ್ರೆ ಹಿರಿಯ ಕ್ರಿಕೆಟಿಗರ ಎಚ್ಚರಿಕೆಯಿಂದ ತಕ್ಷಣವೇ ಎಚ್ಚೆತ್ತುಕೊಂಡ ವಿರಾಟ್ ತನ್ನ ಕ್ರಿಕೆಟ್ ಬದುಕನ್ನು ತಾವೇ ರೂಪಿಸಿಕೊಂಡ್ರು, ಆಟದಲ್ಲಿ ಪಕ್ವತೆಯನ್ನು ಸಾಧಿಸಿಕೊಂಡು, ಈಗ ಯಾರು ಊಹಿಸದ ರೀತಿಯಲ್ಲಿ ಬೆಳೆದು ನಿಂತಿದ್ದಾರೆ.

ಕಳೆದ ಐದು ವರ್ಷಗಳಲ್ಲಿ ವಿರಾಟ್ ಕೊಹ್ಲಿಯ ದರ್ಬಾರಿಗೆ ವಿಶ್ವ ಕ್ರಿಕೆಟ್ ಬೆರಗಿನಿಂದಲೇ ನೋಡುತ್ತಿದೆ. ಮೈದಾನ ಯಾವುದೇ ಇರಲಿ, ಎದುರಾಳಿ ಯಾರೇ ಇರಲಿ, ವಿರಾಟ್ ಗೆ ಎಲ್ಲವೂ ಒಂದೇ. ಕ್ರೀಸ್ ನಲ್ಲಿದ್ದಷ್ಟು ಕಾಲ, ಬ್ಯಾಟ್ ಅನ್ನು ಗದೆಯಂತೆ ತಿರುಗಿಸಿಕೊಂಡು ಆಡುವ ಪರಿಗೆ ಬೌಲರ್ ಗಳು ಮೂಕವಿಸ್ಮಿತರಾಗುತ್ತಾರೆ.

ಕ್ರಿಕೆಟ್ ವೀಕ್ಷಕ ವಿವರಣೆಕಾರರು ಕೊಹ್ಲಿ ಆಟದ ಸೊಬಗಿಗೆ ಪದ ಹುಡುಕಲು ಒದ್ದಾಡುತ್ತಿರುತ್ತಾರೆ. ಕ್ರಿಕೆಟ್ ಪಂಡಿತರು ದೆಹಲಿ ತರುಣನ ಆಟಕ್ಕೆ ಮನಸೋತು ಸಲಾಂ ಅನ್ನುತ್ತಿದ್ದಾರೆ. ಹಿರಿಯ ಕ್ರಿಕೆಟಿಗರಂತೂ ಚೀಕೂ ಪ್ರತಿಭೆಯನ್ನು ಕೊಂಡಾಡುತ್ತಿದ್ದಾರೆ. ಇನ್ನು ಕ್ರಿಕೆಟ್ ಅಭಿಮಾನಿಗಳ ನಾಲಗೆಯ ಮೇಲೆ ವಿರಾಟ್ ಹೆಸರು ನಲಿದಾಡುತ್ತಿರುತ್ತೆ. ಅಷ್ಟರ ಮಟ್ಟಿಗೆ ವಿರಾಟ್ ಕೊಹ್ಲಿ ವಿಶ್ವ ಕ್ರಿಕೆಟ್ ನಲ್ಲಿ ಒಡ್ಡೋಲಗ ನಡೆಸುತ್ತಿದ್ದಾರೆ.

ಅಷ್ಟಕ್ಕೂ ವಿರಾಟ್ ಕೊಹ್ಲಿಯ ಯಶಸ್ಸಿನ ಹಿಂದೆ ದೊಡ್ಡ ಕಥೆನೇ ಇದೆ. ಮೈದಾನದೊಳಗಡೆ ಮತ್ತು ಮೈದಾನ ಹೊರಗಡೆ ಕೊಹ್ಲಿ ಹೇಗಿರುತ್ತಾರೆ ಎಂಬುದು ಗುಟ್ಟಾಗಿ ಉಳಿದಿರುವ ವಿಷಯವೇನೂ ಅಲ್ಲ. ಆದ್ರೂ ಕ್ರಿಕೆಟ್ ಫೀಲ್ಡ್ ನಲ್ಲಿ ಕೊಹ್ಲಿ ತುಂಬಾನೇ ಗಂಭೀರವಾಗಿರುತ್ತಾರೆ.

ಹೆಚ್ಚಾಗಿ ನೆಟ್ ಅಭ್ಯಾಸ ಮತ್ತು ಜಿಮ್ ನಲ್ಲಿ ಕಾಲ ಕಳೆಯುತ್ತಿರುವ ವಿರಾಟ್ ಕೊಹ್ಲಿ, ಬಿಡುವಿನ ವೇಳೆಯಲ್ಲಿ ಸಹ ಆಟಗಾರರ ಜೊತೆ ತಮಾಷೆ ಮಾಡುತ್ತಿರುತ್ತಾರೆ. ಹಾಗೇ ಸರಣಿ ಹಾಗೂ ಪಂದ್ಯದ ಬಗ್ಗೆಯೂ ಚರ್ಚೆ ಮಾಡ್ತಾ ಪ್ಲಾನ್ ಮಾಡ್ತಾ ಇರುತ್ತಾರೆ. ಹಿಂದಿನ ಪಂದ್ಯಗಳಲ್ಲಿ ಮಾಡಿರುವ ಪ್ರಮಾದಗಳನ್ನು ಸರಿಪಡಿಸುವತ್ತ ಕೂಡ ಚಿತ್ತ ನೆಟ್ಟಿರುತ್ತಾರೆ.

ಇನ್ನು ಮೈದಾನದಿಂದ ಹೊರಗಡೆ ಬಂದ್ರೆ ಕೊಹ್ಲಿ ಲವರ್ ಬಾಯ್ ಆಗಿರುತ್ತಾರೆ. ಪ್ರಿಯತಮೆ ಅನುಷ್ಕಾ ಶರ್ಮಾ ಜೊತೆಗಿನ ಸರಸ, ವಿರಸದಿಂದ ಕೊಹ್ಲಿ ಸದಾ ಸುದ್ದಿಯಲ್ಲಿರುತ್ತಾರೆ. ಅಲ್ಲದೆ ಮೋಜು, ಮಸ್ತಿಯಲ್ಲೂ ಕೊಹ್ಲಿ ಯಾವತ್ತೂ ಹಿಂದೆ ಬಿದ್ದಿಲ್ಲ. ಆದ್ರೂ ವಿರಾಟ್ ಕೊಹ್ಲಿ ವೃತ್ತಿ ಧರ್ಮವನ್ನು ಮರೆತಿಲ್ಲ. ತನಗೆ ಎಲ್ಲವನ್ನೂ ಕೊಟ್ಟಿರುವ ಕ್ರಿಕೆಟ್ ಆಟವನ್ನು ಉಸಿರು ಎಂಬಂತೆ ನಂಬಿಕೊಂಡಿದ್ದಾರೆ. ವೃತ್ತಿ ಬದುಕು ಮತ್ತು ವೈಯಕ್ತಿಕ ಬದುಕನ್ನು ಸರಿದೂಗಿಸಿಕೊಂಡು ಮುನ್ನೆಡೆಯುತ್ತಿರುವ ಕೊಹ್ಲಿ ಕಿಲಾಡಿಯಲ್ಲಿ ಕಿಲಾಡಿ ಎಂಬುದರಲ್ಲಿ ಸಂದೇಹವೇ ಇಲ್ಲ.

ನಿಜ, ವಿರಾಟ್ ಕೊಹ್ಲಿಯ ಕೈಗೆ ಬ್ಯಾಟ್ ಸಿಕ್ಕಿದ್ರೆ ಸಾಕು ಅಲ್ಲಿ ದಯೆ, ಕರುಣೆ ಯಾವುದು ಇರಲ್ಲ. ಬೌಲರ್ ಗಳನ್ನು ಶತ್ರುಗಳಂತೆ ಕಾಣುವ ಕೊಹ್ಲಿ, ಮುಂಗೋಪಿಯಂತೆ ಕಾಣುತ್ತಾರೆ. ಹಾವ ಭಾವದಲ್ಲಿ ಅಹಂಕಾರ – ದರ್ಪ ಪ್ರದರ್ಶಿಸುತ್ತಾರೆ. ಬೌಂಡರಿ, ಸಿಕ್ಸರ್, ಶತಕ ಸಿಡಿಸಿದ್ರೂ ಅದನ್ನು ವೀರಾವೇಶದಿಂದ ಸಂಭ್ರಮಿಸುತ್ತಾರೆ.

ಸೋತಾಗ ಸೋಲನ್ನು ಒಪ್ಪಿಕೊಂಡು ತಲೆಬಾಗುತ್ತಾ ನಡೆದ್ರೂ ಸಿಟ್ಟಿನ ಛಾಯೆ ಅವ್ರ ಮುಖದಲ್ಲಿರುತ್ತೆ. ಹಾಗೇ ಗೆಲುವಿನಲ್ಲೂ ಕೂಡ ಅವ್ರ ಮುಖದಲ್ಲಿ ಗೆಲುವಿನ ಖುಷಿಯನ್ನು ಕಾಣಲು ಸಾಧ್ಯವಿಲ್ಲ. ಬದಲಾಗಿ ಗೆಲುವಿನ ಹಸಿವು ಇನ್ನೂ ನೀಗಿಲ್ಲ ಎಂಬುದು ವಿರಾಟ್ ಮುಖದಲ್ಲಿ ಎದ್ದು ಕಾಣುತ್ತಿರುತ್ತೆ. ಎಷ್ಟೇ ಸಾಧನೆ ಮಾಡಿದ್ರೂ ಇಷ್ಟೇನಾ ಎಂಬ ಅತೃಪ್ತಿಯ ಭಾವನೆಯೇ ವಿರಾಟ್ ಸಾಧನೆಗೆ ಪ್ರೇರಣೆಯಾಗಿದೆ.

ಅಷ್ಟೇ ಅಲ್ಲ, ವಿರಾಟ್ ಕೊಹ್ಲಿಯಲ್ಲಿರುವ ಹಠಮಾರಿ ಧೋರಣೆಯೇ ಅವ್ರ ಕನಸನ್ನು ಸಾಕಾರಗೊಳಿಸಲು ಸಾಧ್ಯವಾಗುತ್ತಿದೆ, ಅಸಾಧ್ಯವಾದದ್ದು ಯಾವುದು ಇಲ್ಲ. ಎಲ್ಲವೂ ಸಾಧ್ಯ ಎಂಬುದನ್ನು ಮಾಡಿ ತೋರಿಸಬೇಕು ಎಂದು ಛಲದಂಕ ಮಲ್ಲನಂತೆ ಕಣಕ್ಕಿಳಿಯುವ ವಿರಾಟ್ ಕೊಹ್ಲಿಯ ಆಟದ ಎದುರು ವಿಶ್ವ ದಾಖಲೆಗಳೇ ಮಂಕಾಗಿ ಹೋಗುತ್ತಿವೆ. ಈ ಹಿಂದಿನ ಸಾರ್ವಕಾಲೀಕ ಶ್ರೇಷ್ಠ ದಾಖಲೆಗಳು ಇದೀಗ ಒಂದೊಂದಾಗಿ ಕೊಹ್ಲಿ ಹೆಸರಿನಲ್ಲಿ ರಾರಾಜಿಸುತ್ತಿವೆ.

ಇಷ್ಟೆಲ್ಲಾ ಇದ್ರೂ ಕೂಡ ವಿರಾಟ್ ಕೊಹ್ಲಿಯ ಅಂತರಂಗ ಮಾತ್ರ ತಪ್ತ ಮನಸ್ಸಿನಂತಿರುತ್ತೆ. ಯಾಕಂದ್ರೆ ಇದು ಚೀಕೂವಿನ ಹೃದಯ ಮತ್ತು ಮನಸ್ಸಿನ ಸಮ್ಮಿಲನದ ವಿಚಾರ. ಅಲ್ಲಿ ಸಂಗೀತದ ಸುಧೆ ಹರಿಯುತ್ತಿರುತ್ತದೆ. ಜಲಧಾರೆಯಂತೆ ರನ್ ಗಳ ಸುರಿಮಳೆಯಾಗುತ್ತಿದೆ. ಹೌದು, ಮೈದಾನದಲ್ಲಿ ಕೊಹ್ಲಿ, ತನ್ನ ಹೃದಯದಲ್ಲಿ ಪ್ರೇಯಸಿಯನ್ನು ನೆನೆಸಿಕೊಂಡು ತನಗಿಷ್ಟವಾದ ಹಾಡುಗಳನ್ನು ಹಾಡುತ್ತಿರುತ್ತಾರೆ. ಆದ್ರೆ ಆ ಹಾಡುಗಳ ಧ್ವನಿ ಯಾರಿಗೂ ಕೇಳುವುದಿಲ್ಲ. ಕೊಹ್ಲಿಯ ಹೃದಯದ ಹಾಡು ಕೊಹ್ಲಿಯ ಮನಸ್ಸಿಗೆ ಮಾತ್ರ ಕೇಳಿಸುತ್ತಿರುತ್ತದೆಯಂತೆ. ಇದ್ರಿಂದ ಕೊಹ್ಲಿಯ ಮನಸ್ಸಿನಲ್ಲಿರುವ ಎಲ್ಲಾ ಒತ್ತಡಗಳು ಕೂಡ ನಿವಾರಣೆಯಾಗುತ್ತದೆಯಂತೆ. ಏಕಾಗ್ರತೆ ಕಾಯ್ದುಕೊಂಡು ಆಡಲು ಸಾಧ್ಯವಾಗುತ್ತಂತೆ. ಸಂಯಮದಿಂದಲೇ ಎದುರಾಳಿ ತಂಡದ ಲೆಕ್ಕಚಾರಗಳನ್ನು ಬುಡಮೇಲು ಮಾಡಲು ಆಗುತ್ತಂತೆ. ಹೀಗೆ ಕೊಹ್ಲಿಯ ಹೃದಯ ಗೀತೆಗೆ ಲಯಬದ್ಧವಾಗಿ ಮನಸ್ಸು ತಾಳ ಹಾಕಿದಾಗ ಅಲ್ಲಿ ಅನಾವರಣಗೊಳ್ಳುತ್ತೆ ವಿರಾಟನ ಬ್ಯಾಟಿಂಗ್ ವೈಭವ.

ಇದೀಗ ಲಂಕಾ ವಿರುದ್ಧದ ಎರಡನೇ ಟೆಸ್ಟ್ ಪಂದ್ಯದಲ್ಲಿ ವಿರಾಟ್ ಕೊಹ್ಲಿ ದ್ವಿಶತಕ ಸಿಡಿಸಿದ್ದಾರೆ. ಕೊಹ್ಲಿಯ ಮನಮೋಹಕ ಬ್ಯಾಟಿಂಗ್ ವೈಖರಿಗೆ ದಾಖಲೆಗಳೆಲ್ಲಾ ಅಳಿಸಿ ಹೋಗಿವೆ. ಅದು ಎಷ್ಟರ ಮಟ್ಟಿಗೆ ಅಂದ್ರೆ ಕೊಹ್ಲಿ ಗಳಿಸುವ ಪ್ರತಿ ರನ್ ಕೂಡ ದಾಖಲೆ ಪುಟಗಳಲ್ಲಿ ಸೇರಿಕೊಂಡು ಹೊಸ ಅಧ್ಯಾಯವಾಗಿ ದಾಖಲಾಗಿವೆ. ಈಗಾಗಲೇ ಏಕದಿನ ಕ್ರಿಕೆಟ್ ನಲ್ಲಿ ದಾಖಲೆಗಳ ಮೇಲೆ ದಾಖಲೆ ಬರೆದಿರುವ ವಿರಾಟ್, ಟೆಸ್ಟ್ ಕ್ರಿಕೆಟ್ ನಲ್ಲೂ ಹೊಸ ದಾಖಲೆಗಳಿಗೆ ಮುನ್ನುಡಿ ಬರೆಯುತ್ತಿದ್ದಾರೆ.

ಲಂಕಾ ವಿರುದ್ಧ ಆಕರ್ಷಕ 213 ರನ್ ಸಿಡಿಸಿದ ಕೊಹ್ಲಿ ತನ್ನ ಟೆಸ್ಟ್ ಶತಕಗಳ ಸಂಖ್ಯೆಯನ್ನು 19ಕ್ಕೇರಿಸಿಕೊಂಡ್ರು. ಹಾಗೇ ದ್ವಿಶತಕಗಳ ಸಂಖ್ಯೆಯನ್ನು ಐದಕ್ಕೇರಿಸಿಕೊಂಡು ದ್ರಾವಿಡ್ ಸಾಲಿಗೆ ಸೇರಿಕೊಂಡ್ರು. ಈ ಮೂಲಕ ಸಚಿನ್ ಮತ್ತು ಸೆಹ್ವಾಗ್ ಸಾಲಿಗೆ ಸೇರ್ಪಡೆಯಾಗಲು ಇನ್ನೊಂದು ಹೆಜ್ಜೆ ಮಾತ್ರ ಬಾಕಿ ಇದೆ. ಸದ್ಯ ವೆಸ್ಟ್ ಇಂಡೀಸ್, ಇಂಗ್ಲೆಂಡ್, ಬಾಂಗ್ಲಾದೇಶ, ನ್ಯೂಜಿಲೆಂಡ್, ಶ್ರೀಲಂಕಾ ವಿರುದ್ಧ ದ್ವಿಶತಕ ದಾಖಲಿಸಿದ್ದ ಗೌರವಕ್ಕೆ ಪಾತ್ರರಾಗಿದ್ದಾರೆ.

ಇನ್ನೊಂದೆಡೆ ನಾಯಕನಾಗಿ 12 ಟೆಸ್ಟ್ ಶತಕಗಳನ್ನು ದಾಖಲಿಸಿರುವ ವಿರಾಟ್, ಸುನೀಲ್ ಗವಾಸ್ಕರ್ ದಾಖಲೆಯನ್ನು ತನ್ನ ಹೆಸರಿಗೆ ವರ್ಗಾಯಿಸಿಕೊಂಡ್ರು. ಈ ಹಿಂದೆ ಗವಾಸ್ಕರ್ ಟೆಸ್ಟ್ ತಂಡದ ನಾಯಕನಾಗಿ 11 ಶತಕಗಳನ್ನು ಸಿಡಿಸಿದ್ರು. ಮತ್ತೊಂದೆಡೆ, ವಿರಾಟ್ ಕೊಹ್ಲಿ ಈ ವರ್ಷ ಟೆಸ್ಟ್ ನಲ್ಲಿ ನಾಲ್ಕು ಹಾಗೂ ಏಕದಿನ ಕ್ರಿಕೆಟ್ ನಲ್ಲಿ ಆರು ಶತಕ ಸಿಡಿಸಿ ಒಟ್ಟು ಹತ್ತು ಶತಕ ದಾಖಲಿಸಿದ ಹಿರಿಮೆಗೂ ಪಾತ್ರರಾದ್ರು. ಅಷ್ಟೇ ಅಲ್ಲ 2005 ಮತ್ತು 2006ರಲ್ಲಿ 9 ಶತಕ ಸಿಡಿಸಿದ್ದ ಆಸ್ಟ್ರೇಲಿಯಾದ ರಿಕಿ ಪಾಟಿಂಗ್ ಮತ್ತು ದಕ್ಷಿಣ ಆಫ್ರಿಕಾದ ಗ್ರೇಮ್ ಸ್ಮಿತ್ ದಾಖಲೆಯನ್ನು ಅಳಿಸಿ ಹಾಕಿದ್ರು.

29ರ ಹರೆಯದ ವಿರಾಟ್ ಕೊಹ್ಲಿ ವಿಶ್ವ ಕ್ರಿಕೆಟ್ನ ನೂತನ ಸಾರ್ವಭೌಮ. ಕ್ರಿಕೆಟ್ ದೇವ್ರ ಹಾದಿಗಿಂತಲೂ ಪ್ರಖರವಾಗಿ ಪ್ರಜ್ವಲಿಸುತ್ತಿರುವ ಕೊಹ್ಲಿ, ಕ್ರಿಕೆಟ್ ಜಗತ್ತಿನ ಮತ್ತೊಬ್ಬ ಕ್ರಿಕೆಟ್ ಬ್ರಹ್ಮ. ನೂರಾರು ವರ್ಷಗಳ ಇತಿಹಾಸ ಹೊಂದಿರುವ ಕ್ರಿಕೆಟ್ ಲೋಕದ ಎರಡನೇ ಕ್ರಿಕೆಟ್ ದೇವರ ಅವತಾರವೂ ಭಾರತಾಂಬೆಯ ಮಡಿಲಿನಿಂದಲೇ ಹೊರಹೊಮ್ಮುತ್ತಿದೆ.

Leave a Reply