fbpx

ಇಲ್ಲಿ ವಿನಯ್ ಸಾಯ ಕವಿತೆಗಳಿವೆ.. ಅವು ನಿಮ್ಮನ್ನು ಕದಡಿ ಹಾಕುವುದು ನಿಶ್ಚಯ.. ಹುಷಾರು!

‘ಅವಧಿ’ಯ ಮತ್ತೊಂದು ಹೊಸ ಪ್ರಯತ್ನ. ಒಂದೇ ಗುಕ್ಕಿಗೆ ಎಲ್ಲಾ ಕವಿತೆಗಳನ್ನು ಓದಿದರೆ ಕವಿಯ ಬನಿ ಗೊತ್ತಾಗುತ್ತದೆ ಎನ್ನುವುದು ನಮ್ಮ ನಂಬಿಕೆ. ನಾವು ಓದಿದ ಓದು ಇದನ್ನು ಅರ್ಥ ಮಾಡಿಸಿದೆ. ಹಾಗಾಗಿ ವಾರಕ್ಕೊಮ್ಮೆ ಹೀಗೆ ಒಬ್ಬ ಕವಿಯ ಹಲವಾರು ಕವಿತೆಗಳು ನಿಮ್ಮ ಮುಂದೆ ಕಾಣಿಸಿಕೊಳ್ಳಲಿದೆ. ಅವಸರ ಬೇಡ. ನಿಧಾನವಾಗಿ ಓದಿ ಕವಿಯ ಅಂತರಂಗ ಹೊಕ್ಕುಬಿಡಿ.

ಈ ಕವಿತೆಗಳ ಬಗ್ಗೆ ಅಭಿಪ್ರಾಯ ಬರೆದು ತಿಳಿಸಿ ಕವಿಗೂ ಖುಷಿಯಾದೀತು ಇನ್ನಷ್ಟು ಬರೆಯಲು ದಾರಿಯಾದೀತು.

ಅಷ್ಟೇ ಅಲ್ಲ, ಹೀಗೆ ‘ಪೊಯೆಟ್ ಆ ದಿ ವೀಕ್’ ಆದವರ ಕವಿತೆಗಳನ್ನು ಇನ್ನೊಬ್ಬ ಸಮರ್ಥ ಓದುಗರು ಓದಿ ಅದರ ಬಗ್ಗೆ ತಮ್ಮ ಟಿಪ್ಪಣಿ ಕೊಡುತ್ತಾರೆ.

ಅದು ನಂತರದ ದಿನಗಳಲ್ಲಿ ಅವಧಿಯಲ್ಲಿ ಪ್ರಕಟವಾಗುತ್ತದೆ.

ಈಗ ಪ್ರಕಟವಾಗಿರುವ ವಿನಯ್ ಸಾಯ ಅವರ ಕವಿತೆಗಳ ಬಗ್ಗೆ

ಟಿಪ್ಪಣಿ ಬರೆಯಲಿರುವವರು ಎಚ್ ಎನ್ ಆರತಿ. ಕಾದು ಓದಿ 

ಮೂಲತಃ ಊರು ಬಂಟ್ವಾಳ ತಾಲೂಕಿನ ಕನ್ಯಾನ ಹತ್ತಿರ ಸಾಯ ಎಂಬ ಹಳ್ಳಿ. ಓದಿದ್ದು ದಾವಣಗೆರೆ ಫೈನ್ ಆರ್ಟ್ ಕಾಲೇಜಿನಲ್ಲಿ. ಈವಾಗ ಡಿಡಿಬಿ ಮುದ್ರಾ ಕಂಪನಿಯಲ್ಲಿ ಗ್ರೂಪ್ ಹೆಡ್ ಆರ್ಟ್.

ನಾನು ಶಾಲಾ ದಿನಗಳಲ್ಲಿ ವಿಲಿಯಮ್ ವರ್ಡ್ಸ್ ವರ್ತ್ ನ ಕವನಗಳಿಗೆ ಮರುಳಾಗಿದ್ದೆ.
ಆನಂತರ ಬ್ರೆಕ್ಟ್, ರೂಮಿ, ಖಲೀಲ್ ಗಿಬ್ರಾನ್ ಮುಂತಾದವರ ಕಾವ್ಯದಿಂದ ಸಾಕಷ್ಟು ಪ್ರಭಾವಕ್ಕೊಳಗಾದೆ.

ನಮ್ಮ ಕಾವ್ಯದಲ್ಲಿ ಎಷ್ಟರ ಮಟ್ಟಿಗೆ ತೀವ್ರತೆ ಇರುತ್ತದೋ, ಉಪ್ಪು- ಹುಳಿ – ಖಾರ ಇರುತ್ತದೋ ಅಷ್ಟೇ ಒಲವು, ಮಾನವೀಯತೆ ಇರಬೇಕಾದುದು ತುಂಬ ಮುಖ್ಯ ಅಂತ ನನ್ನ ಅನಿಸಿಕೆ.

 

ಸಾಗರದ ಹಾಗೆ ಇರುವ ಒಂದು ಕನ್ನಡಿಯಲ್ಲಿ

 

ಸಾಗರದ ಹಾಗೆ ಇರುವ ಒಂದು ಕನ್ನಡಿಯಲ್ಲಿ

ಮತ್ತು ಪುಟ್ಟಿಯ ರಾತ್ರಿ ಊಟದಲ್ಲಿ

ಅಕ್ಷರಶಃ ಒಬ್ಬ ಚಂದಿರ ಇದ್ದಾನೆ

 

ಆಕಾಶದಿಂದ ಬೆಳದಿಂಗಳ ಹಾಳೆಗಳು ಉದುರುತ್ತವೆ ಅಥವ

ಪುಟ್ಟಿ ಕೇಳುತ್ತಾಳೆ ಚಂದಿರ ಯಾಕೆ

ನಮ್ಮ ಜೊತೆ ಬರುತ್ತಾನೆ

 

ಬಾಡಿಗೆ ತೊಡೆಗಳಿಂದ ಹಿಡಿದ್ದು

ನೈಟ್ ಕ್ಲಬ್ಬುಗಳು ಬೆಳಗುತ್ತವೆ

ಹುಟ್ಟುವ ಮಕ್ಕಳಿಗೆ ಸಾಕ್ಷಿಬೇಕು

 

ಅಮ್ಮ ಹೇಳುತ್ತಾಳೆ ಒಂದು ವೇಳೆ

ಎಲ್ಲರಿಗೂ ಹೂ ಹಣ್ಣು ಸಿಗುವುದಿಲ್ಲ

ಆದರೆ ಎಲ್ಲರ ಮನೆಗೂ ಚಂದಿರ ಬರುತ್ತಾನೆ

ತೆರೆಬಿದ್ದ ಕಿಟಕಿಗಳ ಸಂದಿಯಿಂದ

 

ಈಗ ತಾನೇ ಇನ್ನೊಂದು ಆಶ್ಚರ್ಯ ನಡೆದಂತೆ

ಈಗ ತಾನೇ ಇನ್ನೊಂದು ಆಶ್ಚರ್ಯ ನಡೆದಂತೆ
ಆಕಾಶದಲ್ಲಿ ತೇಲುವ ಬೆಟ್ಟವೊಂದು
ತನ್ನ ಅದೃಶ್ಯ ರೆಕ್ಕೆ ಬಿಚ್ಚಿ ಹಾರುತ್ತದೆ

ಜಿಪ್ಸಿ ಹುಡುಗಿಯರು ಕನಸಿನ ಬೆಟ್ಟ
ಹತ್ತುತ್ತಾರೆ ಇಳಿಯುತ್ತಾರೆ
ಸಂಶಯದ ಮೋಡ ಎಳೆದುಕೊಂಡು ಓಡಾಡುತ್ತಾರೆ

ಮೋಡ ಮಳೆಯೊಂದಿಗೆ ನೀರಲ್ಲಿ ಬರುತ್ತದೆ
ಅವರ ಹೇರ್‍ಪಿನ್ನುಗಳು
ಹಾಸಿಗೆಯ ಸುತ್ತ ಬೀಳುತ್ತವೆ

ಚಿತ್ರಪುಟದ ಹೂಗಳು ಒದ್ದೆಯಾಗುತ್ತವೆ ಮತ್ತು
ಗರಿಕೆ ಹುಲ್ಲುಗಳು ಮೈಮುರಿದು ಎದ್ದು ನಿಲ್ಲುತ್ತವೆ

ಮನುಷ್ಯರು ನೀರಲ್ಲಿ
ತಮ್ಮ ಪಾಲು ಎಣಿಸುತ್ತಾರೆ
ಸಪಾಟು ಜಾಗ ಅಗೆದು ಗೋಡೆ ಕಟ್ಟುತ್ತಾರೆ
ಮೋಡಕ್ಕೊಂದು ಬದುಕಿದೆ ಎಂದೆ
ಅವರಿಗೆ ತಿಳಿಯುವುದಿಲ್ಲ

ಮೋಡಕ್ಕೂ ಹೃದಯವಿದೆ
ಏಕೆಂದರೆ ಮೋಡ ಮನುಷ್ಯ ಅಲ್ಲ

 

ಶಬ್ದಗಳಿಲ್ಲದ ಒಂದು ಹಾಡು

ಬೆಟ್ಟದ ಕೋಗಿಲೆ ಹಾಡುತ್ತಿದೆ

ಶತಮಾನಗಳ ಮಧುರ ಸ್ವರದಲ್ಲಿ

ಅದು ಶಬ್ದಗಳಿಲ್ಲದ ಒಂದು ಹಾಡು

ಜಗತ್ತಿನಲ್ಲಿ ಅತ್ಯಂತ ಪವಿತ್ರವಾದುದು.

 

ಇನ್ನೂ ಮಲಗಿರುವ

ಜೀನ್ಸ್ ಎದೆಗಳ ಮೇಲೆ

ಚಲಿಸುವುದು ಅದು ಬೆರಳುಗಳ ಹಾಗೆ.

 

ಅದರ ಹಾಡು ಕೇಳಿ

ಹಾಸಿಗೆಯಿಂದ ಏಳುತ್ತಿರುವ ಕಟ್ಟಡಗಳ ನಡುವೆ

ಉಳಿದೆ ಇಷ್ಟೇ ಇಷ್ಟು ಮರಗಳಂತೆ

ಕೊಂಚ ಬದಲಾದ ಫಾರ್ಮೇಟ್ ಮತ್ತು

 

ನಾವು ಮಾಡಬಹುದಾದ ಕಮೆಂಟ್‍ಗಳಂತೆ

ಅದಕ್ಕೆ ಹಾಡಲು ಒಂದು ವೇದಿಕೆ ಇಲ್ಲ

ಒಬ್ಬ ಗುರು ಇಲ್ಲ ಆದರೂ

 

ಎಲ್ಲ ಕಿವಿಗಳಿಗೆ ಕೇಳುತ್ತದೆ

ಅದೊಂದು ಹಾಡು

ಚಕ್ರವರ್ತಿಗೂ ಅದೇ ಹಾಡು

ಬೇವರ್ಸಿಗೂ ಅದೇ ಹಾಡು.

 

ನಾನು ನೋಡುವುದಕ್ಕಾಗಿ ಕಣ್ಣು ಮುಚ್ಚುತ್ತೇನೆ

 

ನಾನು ನೋಡುವುದಕ್ಕಾಗಿ

ಕಣ್ಣು ಮುಚ್ಚುತ್ತೇನೆ

 

ಮಳೆ ಬಂದಾಗ

ನಾನು ಕಿವಿಯಲ್ಲಿ ನೋಡುತ್ತೇನೆ

 

ಯಾವುದೋ ಫಾರ್ಮಾಲಿಟಿಯನಲ್ಲಿ ಚಲಿಸುವ

ಇರುವೆಗಳ ಮತ್ತು ಹೋಂಟಗಳ

ಖಬರ್ ಕೂಡ ಇಲ್ಲದೆ ನಾನು ನೋಡುತ್ತೇನೆ

ಏಕೆಂದರೆ ಗೋಡೆಯಲ್ಲಿ ನೇತುಹಾಕಿದ

ಕೆಲವು ಚಿತ್ರಗಳು

ಗೊತ್ತಾಗದ ಹಾಗೆ ಚಲಿಸುತ್ತಿರುತ್ತವೆ

 

ಬಾಲ್ಕನಿ ಟಿಕೆಟ್

ಈ ಮಹಾನಗರದಲ್ಲಿ ಎಲ್ಲಿ ನೋಡಿದರೂ ಅಡ್ವಟೈಸ್ ಹೋರ್ಡಿಂಗ್‍ಗಳು
ಹದಿನೈದು ಜನರ ಸಲ್ಲಾಪದ ಸಭೆಯಲ್ಲಿ ಅರ್ಧಕ್ಕರ್ಧ ಬರೀ ಆಬ್ಸೆಂಟ್ ಮೈಂಡ್‍ಗಳು
ವಿಷಾದವೆಂದರೆ ನನಗೂ ಮುಗಿಲೆತ್ತರಕ್ಕೆ ಬೆಳೆಯುವಾಸೆ
ಈಗೀಗ ಎಲ್ಲರಿಗೂ ಒಂದು ಬಾಲ್ಕನಿ ಟಿಕೆಟ್ ಬೇಕು

ಹೇಳಿ ಹೇಳಿ ನಾನೂ ಒಬ್ಬ ಜಾಹಿರಾತು ನಿರ್ದೇಶಕ
ನೋಡಿದಲ್ಲೆಲ್ಲ ಜಾಹೀರಾತುಗಳು ಕಣ್ಣು ಕುಕ್ಕುತ್ತಿವೆ
ಇರುವೆಗಳಿಗೂ ಬಸ್ಸುಗಳಿಗೂ ವ್ಯತ್ಯಾಸವೇ ಗೊತ್ತಾಗುವುದಿಲ್ಲ
ಮಾರ್ಕೆಟಿಂಗ್ ಸೈಕಾಲಜಿ ಸತ್ತು ಮಣ್ಣು ತಿಂದು ಹೋಗಿದೆ

ಅದೇ ನಾಲ್ಕು ಗೋಡೆ ಆಫೀಸ್ ಕೀಬೋರ್ಡ್ ಲ್ಯಾಪ್‍ಟಾಪ್
ಬಣ್ಣದ ಮಸ್ತಕ ಬಾಗಿಲು ಮೂರು ಕೆ.ಜಿ. ಮಾಂಸದ ಹುಡುಗಿ
ಹತ್ತು ರುಪಾಯಿ ಜೋಳ, ಸಿಂಗಲ್ ಬನ್ ಹಾರ್ಲಿಕ್ಸ್
ಬದುಕು ಎಲ್ಲರೂ ನೋಡಬಹುದಾದ ಒಂದು ಸಾರ್ವಜನಿಕ ಚಿತ್ರ
ಈಗ ಎಲ್ಲರಿಗೂ ಒಂದು ಬಾಲ್ಕನಿ ಟಿಕೆಟ್ ಬೇಕು

10 Responses

 1. ನಮಗೂ ಅವಕಾಶ ಕೊಡಿ.

 2. Bhanukiran says:

  dhanyavadagalu vinay ji..
  Bye, chi na halli kirana

 3. Murthy says:

  ಈಗ ಎಲ್ಲರಿಗೂ ಒಂದು ಬಾಲ್ಕನಿ ಟಿಕೆಟ್ ಬೇಕು

 4. Basavanneppa.K says:

  sundara padyagalu

 5. Basavanneppa.K says:

  ಪೊಯೆಟ್ ಆಫ್ ದಿ ವೀಕ್ ನಲ್ಲಿ ನಮ್ಮ್ ಪದ್ಯಗಳಿಗೂ ಅವಕಾಶ ಇದೆಯೆ…?

 6. Sarojini Padasalgi says:

  ತುಂಬಾ ಒಳ್ಳೆಯ ಕವನಗಳ ಗೊಂಚಲು.ನನ್ನದೂ ಅದೇ ಪ್ರಶ್ನೆ.ಈ ಮಾಲಿಕೆಯಲ್ಲಿ ನನ್ನ ಕವನಗಳಿಗೆ ಅವಕಾಶ ಇದೆಯಾ??

 7. Kusumapatel says:

  ನನ್ನ ದೂ ಅದೇ ಪ್ರಶ್ನೆ, ನನ್ನ ಕವನ ಗಳಿಗೂ ಅವಕಾಶ ದ ಸಾಧ್ಯ ತೆ ಇದೆ ಯಾ?

 8. Girijashastry says:

  ಚಿತ್ರಕ ಶಕ್ತಿ ಇರುವ ಸಶಕ್ತ ಕವಿತೆಗಳು ಇಂದಿನ ಕಾಲದಲ್ಲಿ ಹೊಸ ಭರವಸೆ ಮೂಡಿಸುತ್ತವೆ. ಶುಭವಾಗಲಿ ನಿಮಗೆ.

 9. ಮಾಹಿ says:

  ನಮ್ಮದೂ ಅದೇ ಪ್ರಶ್ನೆ ನಮಗೂ ಅವಕಾಶ ಇದೆಯಾ.,.

 1. December 26, 2017

  […] ಅವರ ಕವಿತೆಗಳು ಇಲ್ಲಿವೆ. […]

Leave a Reply

%d bloggers like this: