ಇಲ್ಲಿ ಊಟಕ್ಕೆ ಹುಳುಗಳೂ ಉಂಟು..!!

ಇತ್ತೀಚೆಗಷ್ಟೇ ಪರಿಚಿತರೊಬ್ಬರೊಂದಿಗೆ ಮಾತಾಡುತ್ತಿದ್ದೆ. ಇಂತಿಂಥಾ ದಿನದಂದು ಪಾರ್ಟಿ ಮಾಡೋಣ ಅಂದರು. ಆಯ್ತು, ಆ ದಿನ ನಾನು ಖಾಲಿ ಹೊಟ್ಟೇಲಿ ಬರುತ್ತೇನಂತೆ ಅಂದೆ ತಮಾಷೆಗೆ. ಅಯ್ಯೋ ಇದೊಳ್ಳೆ ಕಥೆಯಾಯ್ತು. ಪಾರ್ಟಿ ಅಂದ್ರೆ ತಿನ್ನೋದೊಂದನ್ನು ಬಿಟ್ಟು ಬೇರೇನೂ ಇಲ್ಲವಾ? ಎಂದು ಕೇಳಿದರು ಅವರು. ಅರೇ ಹೌದಲ್ವಾ ಎಂದೆನಿಸಿತು. ”ಭಾರತದಲ್ಲಿದ್ದಾಗ ನರಪೇತಲ ನಾರಾಯಣನಂತಿದ್ದೆ, ಆಫ್ರಿಕಾಗೆ ಹೋದ ಮೇಲೆ ಊದ್ಕೊಂಡು ಬಿಟ್ಟಿದ್ದೀಯಾ… ತಲೆಯಲ್ಲಿ ತಿನ್ನೋದು ಬಿಟ್ಟು ಬೇರೇನೂ ಇಲ್ಲದಂತೆ ಕಾಣುತ್ತದೆ”, ಎಂದು ಕಿಚಾಯಿಸಿದರು ಅವರು.

 

ಇದು ಒಂದು ರೀತಿಯಲ್ಲಿ ಸತ್ಯವೂ ಹೌದು. ಜಗತ್ತಿನ ತೊಂಭತ್ತೈದು ಪ್ರತಿಶತ ಜನರು ತೂಕ ಇಳಿಸಿಕೊಳ್ಳಲು ಒದ್ದಾಡುತ್ತಿದ್ದರೆ ನಾನು ಬರೋಬ್ಬರಿ ಎರಡು ದಶಕಗಳ ಕಾಲ ತೂಕವನ್ನು ಹೆಚ್ಚಿಸಲು ಹರಸಾಹಸ ಪಡುತ್ತಿದ್ದೆ. ಕೊನೆಗೂ ಅದರ ಕ್ರೆಡಿಟ್ ಪಡೆಯುವ ಭಾಗ್ಯವಿದ್ದದ್ದು ಅಂಗೋಲಾಕ್ಕೆ ಅನ್ನಿಸುತ್ತದೆ.

ಆರಡಿ ಮೀರಿದರೂ ಮತ್ತಷ್ಟು ಉದ್ದಕ್ಕೆ ಅಡಿಕೆಮರದಂತೆ ಬೆಳೆಯುತ್ತಿದ್ದ ನನ್ನನ್ನು ದಪ್ಪಗಾಗಿಸಿದ್ದು ಅಂಗೋಲಾದ ದಿನಗಳು. ”ಅಂತೂ ದಪ್ಪಗಾಗಲು ದೇಶ ಬಿಟ್ಟು ಬರಬೇಕಾಯಿತು”, ಎಂದು ಈಗಲೂ ನಾನು ನಗೆಯಾಡುತ್ತಿರುತ್ತೇನೆ.

ತೊಂಭತ್ತರ ದಶಕದಲ್ಲಿ ಹುಟ್ಟಿದ ಮಕ್ಕಳು ಹೇಗೆ ಮೊಬೈಲುಗಳಿಲ್ಲದ ಜೀವನವನ್ನು ಕಂಡ ಕೊನೆಯ ಪೀಳಿಗೆಯಾಗಿದ್ದಾರೋ ಹಾಗೆಯೇ ನಾನೂ ಕೂಡ ತೂಕ ಹೆಚ್ಚಿಸುವ ಮತ್ತು ತೂಕ ಇಳಿಸುವ ಎರಡೂ ಹಂತಗಳನ್ನು ಹತ್ತಿರದಿಂದ ಕಂಡು ಅನುಭವಿಸಿದ್ದೇನೆ. ಇರಲಿ. ಲೋಕಾನುಭವದ ಕಿರೀಟಕ್ಕೆ ಮತ್ತೊಂದು ಗರಿ ಎಂದಿಟ್ಟುಕೊಳ್ಳೋಣ.

ಅಂಗೋಲಾದ ಬುಷ್ ಮೀಟ್ ಆಹಾರದ ಬಗ್ಗೆ ಬಹಳಷ್ಟು ಭಾರತೀಯ ಮಿತ್ರರೊಂದಿಗೆ ನಾನು ಚರ್ಚಿಸಿದ್ದಿದೆ. ಈ ಬಗ್ಗೆ ಸಸ್ಯಾಹಾರಿಗಳು ಅಚ್ಚರಿಪಟ್ಟರೆ ಬಹಳಷ್ಟು ಮಾಂಸಾಹಾರಿಗಳು ಭಲೇ ಎನ್ನುವಂತೆ ಉಬ್ಬಿಹೋಗಿದ್ದಾರೆ. ಅಬ್ಬಬ್ಬಾ, ಅಂಗೋಲಾದಲ್ಲಿ ಮಾಂಸಾಹಾರಿಗಳಿಗೆ ತಿನ್ನಲು ಅದೆಷ್ಟು ವೆರೈಟಿ ಎಂಬ ಖುಷಿ ಅವರದ್ದು. ಅದು ಸತ್ಯವೂ ಹೌದೆನ್ನಿ. ಅಂಗೋಲಾಕ್ಕೆ ಬಂದ ಹೊಸದರಲ್ಲಿ ಹಲವರು ನನ್ನಲ್ಲಿ ಅಂಗೋಲನ್ನರು ನರಭಕ್ಷಕರೇ ಎಂದೆಲ್ಲಾ ಕೇಳುತ್ತಿದ್ದರು. ಆಫ್ರಿಕನ್ನರ ಬಗ್ಗೆ ಜಗತ್ತಿನ ಉಳಿದ ಭಾಗಗಳಿಗೆ ಇಂಥಾ ಕಲ್ಪನೆಗಳು ಎಲ್ಲಿಂದ ಬಂದಿವೆ ಎಂಬುದು ನಿಜಕ್ಕೂ ಸೋಜಿಗ ನನಗೆ.

ಅಂಗೋಲಾದಲ್ಲಿ ಆಂತರಿಕ ಯುದ್ಧ ನಡೆಯುತ್ತಿದ್ದ ಕಾಲದಲ್ಲಿ ತಿನ್ನಲು ಏನೆಂದರೆ ಏನೂ ಸಿಗದಿರುತ್ತಿದ್ದ ಸಂಕಷ್ಟದ ಕಾಲದಲ್ಲಿ ಅಂಗೋಲನ್ನರು ಸತ್ತ ಸೈನಿಕರ ಮಾಂಸವನ್ನೇ ಅಲ್ಪಸ್ವಲ್ಪ ತಿನ್ನುತ್ತಿದ್ದ ಬಗ್ಗೆ ದಾಖಲಾಗಿದ್ದುಂಟು. ಏಕೆಂದರೆ ಆ ದಿನಗಳಲ್ಲಿ ದೇಶದ ದೂರದೂರದ ಸ್ಥಳಗಳನ್ನು ರಾಜಧಾನಿಯೊಂದಿಗೆ ಬೆಸೆಯುತ್ತಿದ್ದ ಹೆದ್ದಾರಿಯನ್ನು ಮುಚ್ಚುತ್ತಿದ್ದು ಗ್ರಾಮೀಣ ಭಾಗದ ಜನರು ದಿನಗಟ್ಟಲೆ ಉಪವಾಸ ಇರಬೇಕಾಗಿ ಬರುತ್ತಿತ್ತು. ಅದೊಂದು ತೀರಾ survival ಆಯ್ಕೆಯಾಗಿತ್ತಷ್ಟೇ ಹೊರತು ಇನ್ನೇನೂ ಅಲ್ಲ. ಇಂಥಾ ಅದೆಷ್ಟೋ ಉದಾಹರಣೆಗಳನ್ನು ಜಗತ್ತಿನ ಇತರ ಭಾಗಗಳಲ್ಲೂ ಇತಿಹಾಸವು ನಮಗೆ ತೋರಿಸಿದೆ. ಹೀಗಾಗಿ ಅಂಗೋಲನ್ನರಿಗೆ ವಿಶೇಷ ಹಣೆಪಟ್ಟಿಯನ್ನು ಕೊಡುವುದೇನೂ ಬೇಡ ಎಂಬುದು ನನ್ನ ಅಭಿಪ್ರಾಯ.

 

ಇದನ್ನೆಲ್ಲಾ ಏಕೆ ಹೇಳಬೇಕಾಯಿತೆಂದರೆ ಬೇರೇನೂ ಇರಲಿ, ಇಲ್ಲದಿರಲಿ. ವಿದೇಶಗಳಲ್ಲಿ ನೆಲೆಸಿರುವ ಪರಿಚಿತರೊಂದಿಗೆ ಮಾತಾಡುವ ಸಂದರ್ಭಗಳಲ್ಲಿ ಸಾಮಾನ್ಯವಾಗಿ ಬರುವ ಪ್ರಶ್ನೆಗಳು ಎರಡೇ: 1. ನಿಮ್ಮಲ್ಲಿ ಈಗ ಟೈಮೆಷ್ಟು? 2. ಊಟಕ್ಕೇನು ವ್ಯವಸ್ಥೆಯಿದೆ ನಿಮ್ಮಲ್ಲಿ? ”ತುಂಬಾ ಸೆಖೆ ಮಾರಾಯ್ರೆ”, ಎಂಬ ಓಬೀರಾಯನ ಕಾಲದ ಕ್ಲೀಷೆಯನ್ನು ಬಳಸುತ್ತಾ ಅಕ್ಕಪಕ್ಕದವರೊಂದಿಗೆ ಸಂಭಾಷಣೆಯನ್ನು ಹೇಗೆ ಆರಂಭಿಸುತ್ತೇವೋ, ಈ ಎರಡು ಪ್ರಶ್ನೆಗಳಿಗೂ ಕೂಡ ಅದೇ ಸ್ಥಾನಮಾನ ಕೊಡಬೇಕು. ಇವುಗಳಿದ್ದರೇನೇ ವಿದೇಶೀ ಗೆಳೆಯರೊಂದಿಗೆ ಮಾತಾಡಿದೆವು ಎಂಬ ಭಾವವು ಮೂಡಿದಷ್ಟು.

“ಮದುವೆ ಹೇಗಿದ್ರೂ ಸರಿಯೇ. ಆದ್ರೆ ಊಟ ಒಂದು ಚೆನ್ನಾಗಿರ್ಬೇಕಪ್ಪಾ, ಆಗಲೇ ಸಮಾಧಾನ”, ಎಂದು ನನ್ನ ಸಂಬಂಧಿಗಳೊಬ್ಬರು ಹೇಳುತ್ತಿದ್ದರು. ಹೀಗಾಗಿ ಅದೇನೇ ಆದರೂ ಭೋಜನವನ್ನು ನಾವು ಕಡೆಗಣಿಸುವ ಪ್ರಶ್ನೆಯೇ ಇಲ್ಲ. ಪೇಟ್ ಖುಷ್ ತೋ ಸಬ್ ಖುಷ್!

ವಿಶ್ವದ ಇತರ ಭಾಗಗಳಿಗೆ ಹೋಗುವಾಗ ಕೆಲವರಿಗೆ ಆಹಾರದ ವಿಚಾರದಲ್ಲಿ ಕೊಂಚ ತೊಂದರೆಯಾಗುವುದಂತೂ ಹೌದು. ಆಫ್ರಿಕಾದ ಮಲಾವಿ ಎಂಬ ದೇಶಕ್ಕೆ ಉದ್ಯೋಗ ನಿಮಿತ್ತ ಹೋಗಿದ್ದ ನನ್ನ ಅವಿವಾಹಿತ ಶುದ್ಧ ಸಸ್ಯಾಹಾರಿ ಮಿತ್ರನೊಬ್ಬ ಈ ದೇಶದ ಸಹವಾಸವೇ ಬೇಡಪ್ಪಾ ಎಂದು ಒಂದು ತಿಂಗಳಿನಲ್ಲೇ ಮರಳಿಬಂದಿದ್ದ. ಅಲ್ಲಿಯ ಆಹಾರ ಅವನಿಗೆ ಹಿಡಿಸಿರಲಿಲ್ಲವಂತೆ.

ಇನ್ನು ಮಾಂಸಾಹಾರಕ್ಕೆ ಹೋಲಿಸಿದರೆ ಸಸ್ಯಾಹಾರಿಗಳಿಗೆ ಆಯ್ಕೆಗಳು ಅಂಗೋಲಾದಲ್ಲಿ ಕಮ್ಮಿಯಿವೆ ಎಂಬುದು ಸತ್ಯ. ಅಂಗೋಲಾದಲ್ಲಿ ನನ್ನ ಜೊತೆಗಿರುವ ಹಿರಿಯ ಸಹೋದ್ಯೋಗಿಯೊಬ್ಬರು ಸಸ್ಯಾಹಾರಿಗಳಾಗಿರುವುದರಿಂದ ಬಂದ ಹೊಸತರಲ್ಲಿ ಅವರಿಗೆ ಕೊಂಚ ಕಷ್ಟವಾಗಿತ್ತು. ಆದರೆ ಅವರು ಸ್ವತಃ ಪಾಕ ಪ್ರವೀಣರಾಗಿರುವುದರಿಂದ ಮತ್ತು ಒಂದು ಸುಸಜ್ಜಿತ ಅಡುಗೆಕೋಣೆಯನ್ನು ನಾವು ಹೊಂದಿರುವವರಾದ್ದರಿಂದ ತನಗೆ ಬೇಕಾದ್ದನ್ನು ಸಿದ್ಧಪಡಿಸಿ ಅವರು ತಿನ್ನಬಲ್ಲವರಾಗಿದ್ದರು.

ಹಾಗೆಂದು ಸಸ್ಯಾಹಾರಿಗಳು ಅಂಗೋಲಾದಲ್ಲಿ ಉಪವಾಸ ಬೀಳಬೇಕೆಂದೇನಿಲ್ಲ. ನಮ್ಮಲ್ಲಿ ಸಿಗುವ ಬೆಂಡೆ, ಕ್ಯಾರೆಟ್, ಬದನೆ, ಹೂಕೋಸು, ಬೀಟ್ರೂಟ್, ಕ್ಯಾಪ್ಸಿಕಮ್, ಸೋರೇಕಾಯಿ… ಇತ್ಯಾದಿ ತರಕಾರಿಗಳು ಮತ್ತು ಬೆರಳೆಣಿಕೆಯ ಬೇಳೆಗಳು ಇಲ್ಲೂ ಸಿಗುತ್ತವೆ. ಅದರಲ್ಲೂ ನೀವು ರಾಜಧಾನಿಯಾದ ಲುವಾಂಡಾದಲ್ಲಿ ಅಥವಾ ಬೆಂಗೇಲಾ, ವಾಂಬುಗಳಂತಹ ಪಟ್ಟಣಗಳಲ್ಲಿರುವವರಾದರೆ ಸೂಪರ್ ಮಾರ್ಕೆಟ್ ಗಳೂ ಇರುವುದರಿಂದಾಗಿ ಆಮದಾದ ಎಲ್ಲಾ ಬಗೆಯ ಆಹಾರಗಳೂ ಕೂಡ ಸಿಗುವುದು ಸಾಮಾನ್ಯ.

 

ಹೀಗಿದ್ದಾಗಲೂ ಕೆಲವಂತೂ ತಪ್ಪಿಹೋಗುವುದು ಸಹಜವೇ. ದೆಹಲಿಯಲ್ಲಿದ್ದಾಗ ಸವಿಯುತ್ತಿದ್ದ ಬಗೆಬಗೆಯ ಬೇಳೆಗಳು ಇಲ್ಲಿ ಮಾಯವಾಗಿದ್ದವು. ಹಸಿರುಸೊಪ್ಪುಗಳಡಿಯಲ್ಲಿ ಬರುವ ಬಸಳೆ, ಪಾಲಕ್, ಮೆಂತ್ಯಗಳು ಕಾಣದಾದವು. ಉಪ್ಪಿನಕಾಯಿ ಗಗನಕುಸುಮವಾಯಿತು. ನಾನು ಉತ್ತರಭಾರತಕ್ಕೆ ಹೋದ ಹೊಸದರಲ್ಲಿ ಮನೆಯಿಂದ ಕರೆ ಬಂದಾಗಲೆಲ್ಲಾ ಆಲೂ-ಪಾಲಕ್, ಆಲೂ-ಗೋಬಿ, ಮಟರ್-ಆಲೂ ಎಂದೆಲ್ಲಾ ಹೇಳುವುದನ್ನು ಕೇಳಿ ”ಏನಿದು, ಎಲ್ಲದಕ್ಕೂ ಬಟಾಟೆ ಹಾಕೋದು? ಹೊಟ್ಟೇಲಿ ಗ್ಯಾಸ್ ಆಗಲ್ವಾ ಮಾರಾಯ?”, ಎಂದು ಮನೆಯವರು ಕೇಳುತ್ತಿದ್ದ ದಿನವೊಂದಿತ್ತು.

”ದಕ್ಷಿಣಭಾರತದವರಿಗೆ ತುರಿದ ತೆಂಗಿನಕಾಯಿಯಿಲ್ಲದೆ ಹೇಗೆ ಪಲ್ಯ-ಸಾಂಬಾರು ಮಾಡುವುದು ಕನಸಿನ ಮಾತೋ, ಉತ್ತರಭಾರತದಲ್ಲಿ ಆ ಸ್ಥಾನ ಆಲೂಗಡ್ಡೆಗೆ ಸಲ್ಲುತ್ತದೆ”, ಎಂದು ಹೇಳುತ್ತಿದ್ದೆ ನಾನು. ಆದರೆ ಅಂಗೋಲಾದ ಅಚ್ಚರಿಗಳು ಬೇರೆಯೇ ಇರುತ್ತವೆ ಎಂದು ನನಗಾದರೂ ಏನು ಗೊತ್ತಿತ್ತು?

ಅಂಗೋಲಾದಲ್ಲಿ ಹೇಗೋ ಅಡುಗೆ ಮಾಡಿಕೊಂಡು ತಿಂದರಾಯಿತು, ಹೀಗಾದರೂ ಪಾಕಶಾಸ್ತ್ರದ ಮೇಲೆ ಕೊಂಚ ಹಿಡಿತ ಸಿಗಲಿ ಎಂದೆಲ್ಲಾ ನಾನು ಲೆಕ್ಕಹಾಕುತ್ತಿದ್ದರೆ ಇಲ್ಲಿ ನನಗೆ ಬೇರೆಯದೇ ಕಾದಿತ್ತು. ಎಲ್ಲದಕ್ಕಿಂತಲೂ ಮುಖ್ಯವಾಗಿ ಭಾರತದಲ್ಲಿ ಸಿಗುವ ತರಹೇವಾರಿ ಮಸಾಲೆಗಳೇ ಇಲ್ಲಿ ಲಭ್ಯವಿರಲಿಲ್ಲ. ಮಸಾಲೆಗಳೇ ಇಲ್ಲವೆಂದ ನಂತರ ಭಾರತೀಯರಿಗೆ ಇನ್ಯಾವ ಅಡುಗೆ ರುಚಿಸುತ್ತದೆ?

ಮಸಾಲೆಗಳು ವೀಜ್ ನಲ್ಲಿ ಸಿಗದ ಪರಿಣಾಮ ಮುಂದೆ ರಾಜಧಾನಿಯಾದ ಲುವಾಂಡಾದಲ್ಲೂ ಪ್ರಯತ್ನಿಸಿದ್ದಿದೆ. ಈ ನಿಟ್ಟಿನಲ್ಲಿ ಇರುವ ಬೆರಳೆಣಿಕೆಯ ಭಾರತೀಯ ಹೋಟೇಲುಗಳ ಕದ ತಟ್ಟಿದ್ದೂ ಇದೆ. ಎಲ್ಲವೂ ಒಂದಿಷ್ಟು ಮಸಾಲೆಗಾಗಿ! ಕೊನೆಗೂ ಮಸಾಲೆಗಳು ಮಾತ್ರ ನಮಗಿಲ್ಲಿ ಸಿಗಲೇ ಇಲ್ಲ. ಸಿಕ್ಕರೂ ಒಂದಿದ್ದರೆ ಮತ್ತೊಂದು ಇಲ್ಲ ಅನ್ನೋ ಪರಿಸ್ಥಿತಿ. ಇಂದಿಗೂ ನನ್ನ ಅಡುಗೆ ಮನೆಯಲ್ಲಿರುವ ಬಹುಪಾಲು ಮಸಾಲೆಗಳು ಭಾರತದಿಂದ ತರಿಸಿಕೊಂಡವುಗಳೇ. `ಉಪ್ಪಿನಕಾಯಿ’ ಅಂದ್ರೇನು ಎಂಬುದನ್ನು ನಾನು ನಮ್ಮ ಅಂಗೋಲನ್ ಮಿತ್ರರಿಗೆ ಇಂದಿನವರೆಗೂ ನನಗೆ ಅರ್ಥಪಡಿಸಲಾಗಲಿಲ್ಲ.

 

ಭಾರತೀಯ ಮಸಾಲೆಗಳಷ್ಟೇ ವೇಗದಲ್ಲಿ ಕಣ್ಮರೆಯಾದ ಮತ್ತೊಂದು ಸಂಗತಿಯೆಂದರೆ ಸಿಹಿತಿಂಡಿಗಳು. ಸಿಹಿ ಎಂದರೆ ಅಂಗೋಲಾದಲ್ಲಿ ಬಹುಷಃ ಚಾಕ್ಲೇಟು/ಬಿಸ್ಕತ್ತುಗಳಷ್ಟೇ. ಭಾರತದಲ್ಲಿ ಸಿಗುವ ಬಗೆಬಗೆಯ ಸಿಹಿತಿಂಡಿಗಳನ್ನು ಕಂಡು ಇಲ್ಲಿಯ ಸ್ಥಳೀಯರು ಅಚ್ಚರಿಪಟ್ಟಿದ್ದೂ ಕೂಡ ಇದೆ. ಒಮ್ಮೆ ಪೋರ್ಚುಗೀಸ್ ಸಹೋದ್ಯೋಗಿಯೊಬ್ಬರ ಬೀಳ್ಕೊಡುಗೆ ಸಮಾರಂಭವನ್ನು ಆಯೋಜಿಸಿದ್ದ ನಾನು ಭಾರತೀಯ ಖಾದ್ಯಗಳನ್ನೂ ಕೂಡ ಊಟದ ಮೆನುವಿನಲ್ಲಿ ವಿಶೇಷ ಆಕರ್ಷಣೆಯಾಗಿ ಇರಿಸಿದ್ದೆ.

ಆ ದಿನ ನಾವು ನಮ್ಮ ಅಂಗೋಲನ್ ಸಹೋದ್ಯೋಗಿಗಳಿಗೆ ಊಟದ ಕೊನೆಯಲ್ಲಿ ಕೊಡುವ ಸಿಹಿಯ ಖಾದ್ಯವಾಗಿ ರಸಗುಲ್ಲವನ್ನು ಉಣಬಡಿಸಿದ್ದೆವು. ಈ ರಸಗುಲ್ಲದ ರುಚಿಯನ್ನು ನೋಡಿದ ಹಿರಿಯ ಅಂಗೋಲನ್ ಅಧಿಕಾರಿಯೊಬ್ಬರು ಇದೇನಪ್ಪಾ ಇಷ್ಟೊಂದು ಸಕ್ಕರೆ ಎಂದು ತಲೆ ಕೆರೆದುಕೊಂಡಿದ್ದರು. ನಂತರ ಆ ರಸಗುಲ್ಲವನ್ನು ನೀರಿನಲ್ಲಿ ಮುಳುಗಿಸಿ, ಸಕ್ಕರೆಯ ಅಂಶವನ್ನು ಸ್ವಲ್ಪ ಕರಗಿಸಿ ನೀಡಿದ ನಂತರವೇ ಆಕೆ ಅದನ್ನು ನಿರಾಳವಾಗಿ ತಿಂದಿದ್ದರು.

ಇಂಥದ್ದೇ ಮತ್ತೊಂದು ಸನ್ನಿವೇಶವೊಂದರಲ್ಲಿ ಸಿಬ್ಬಂದಿಯೊಬ್ಬರಿಗೆ ಹಲ್ವಾ ಸಿದ್ಧಪಡಿಸಿ ತಿನ್ನಿಸಿದಾಗ ಆತ ಹಾಗಲಕಾಯಿ ತಿಂದಂತೆ ಮುಖವನ್ನು ಕಿವುಚಿದಾಗ ನಗಬೇಕೋ ಅಳಬೇಕೋ ಎಂಬ ಗೊಂದಲ ನಮಗೆ. ಸಿಹಿಯ ಅಂಶವನ್ನು ಹೊಂದಿರುವ ಬೆರಳೆಣಿಕೆಯ ಖಾದ್ಯಗಳು ಇಲ್ಲಿವೆಯೇ ಹೊರತು ಸಿಹಿಯನ್ನೇ ಕೇಂದ್ರಬಿಂದುವನ್ನಾಗಿಸಿದ ಖಾದ್ಯಗಳು ಅಂಗೋಲಾದಲ್ಲಿಲ್ಲ.

ಸಿಹಿಯ ಈ ವಿಚಾರವು ಐಸ್ ಕ್ರೀಂಗಳಲ್ಲೂ ಕೂಡ ಸತ್ಯ. ನೀವು ಐಸ್ ಕ್ರೀಂ ಪ್ರಿಯರಾಗಿದ್ದರೆ ಅಂಗೋಲಾ ನೀವು ಭೇಟಿಕೊಡಬೇಕಾದ ದೇಶವಲ್ಲ. ಅಂಗೋಲಾದ ಫ್ರೂಟ್ ಸಲಾಡ್ ಗಳು ದೇವರಿಗೇ ಪ್ರೀತಿ! ಕಬ್ಬನ್ನು ಎಲ್ಲರೂ ಜಗಿಯುತ್ತಿದ್ದರೂ ಬೆಲ್ಲ ಮಾತ್ರ ಸಿಗುವುದೇ ಇಲ್ಲ. ಹೀಗಾಗಿ ನೀವು ಸಿಹಿತಿಂಡಿಗಳ, ಐಸ್ ಕ್ರೀಂಗಳ ಅಭಿಮಾನಿಗಳಾಗಿದ್ದರೆ ವಿದೇಶೀ ಬ್ರಾಂಡ್ ಗಳು ನೆಲೆಯೂರಿರುವ ಪಟ್ಟಣಗಳ ಶಾಪಿಂಗ್ ಸೆಂಟರ್ ಗಳಷ್ಟೇ ನಿಮ್ಮ ಆಸೆಯನ್ನು ಪೂರೈಸಬಲ್ಲದು.

ಅಷ್ಟಾಗಿಯೂ ಲಘು ಆಹಾರಗಳ ವಿಭಾಗಕ್ಕೆ ಬರುವ ಕೆಲ ಸ್ವಾರಸ್ಯಕರ ಆಹಾರಗಳ ಬಗ್ಗೆ ಹೇಳಲೇಬೇಕು. ವೀಜ್ ನಂತಹ ಗ್ರಾಮೀಣ ಪ್ರದೇಶಗಳಿಂದ ಹಿಡಿದು ಲುವಾಂಡಾದಂತಹ ನಗರದವರೆಗೂ ಸಿಗುವ ಸಾಮಾನ್ಯ ತಿಂಡಿಯೆಂದರೆ `ಪಿರಿಯ’. ಇದು ನೋಡಲು ನಮ್ಮ ಕರಾವಳಿಯಲ್ಲಿ ಸಿಗುವ ಗೋಳಿ ಬಜೆಯಂತಿದ್ದರೆ ತಿನ್ನಲು ಮಾತ್ರ ಕರಾವಳಿಯದ್ದೇ ಮತ್ತೊಂದು ಜನಪ್ರಿಯ ಖಾದ್ಯವಾದ `ಬನ್ಸ್’ ನಂತಿರುತ್ತದೆ. ಪಿರಿಯವನ್ನು ಇದಕ್ಕಿಂತ ಚಂದ ಇನ್ನೊಂದು ಬಗೆಯಲ್ಲಿ ನಾನು ವರ್ಣಿಸಲಾರೆ.

ಅಂತೆಯೇ ಬನಾನಾ-ಜಿಂಗೂಬಾ ಎಂಬ ಹೆಸರಿನಲ್ಲಿ ಕರೆಯಲಾಗುವ ಹುರಿದ ಬಾಳೆಹಣ್ಣು ಮತ್ತು ನೆಲಗಡಲೆ ಇಲ್ಲಿಯ ಮತ್ತೊಂದು ಜನಪ್ರಿಯ ಲಘು ಆಹಾರ. ಎಣ್ಣೆ ಎಂದರೆ ಅಂಗೋಲನ್ನರಿಗೆ ಭಾರೀ ಪ್ರಿಯ. ತಮ್ಮ ಖಾದ್ಯಗಳನ್ನು ಸಿದ್ಧಪಡಿಸಲು ಇವರುಗಳು ಎಣ್ಣೆಯನ್ನು ಸಾಕಷ್ಟು ಪ್ರಮಾಣದಲ್ಲಿ ಬಳಸುವುದಲ್ಲದೆ ಆಹಾರ ಸಿದ್ಧವಾದ ನಂತರವೂ ತುಪ್ಪ ಸುರಿದಂತೆ ಎಣ್ಣೆಯನ್ನು ಸುರಿಸುರಿದು ಮೆಲ್ಲುತ್ತಾರೆ. ಹೀಗೆ ನಾನು ದಪ್ಪಗಾಗಿದ್ದುದರ ಹಿಂದೆ ನಮ್ಮ ಅಂಗೋಲನ್ ಅಡುಗೆಯಾಕೆಯ ಪಾತ್ರವೂ ಇದೆ ಎಂದರೆ ತಪ್ಪಾಗಲಿಕ್ಕಿಲ್ಲ.

ಅಂಗೋಲಾ ಸೇರಿದಂತೆ ಆಫ್ರಿಕಾದ ಬಹಳಷ್ಟು ಭಾಗಗಳಲ್ಲಿ `ಕಸಾವಾ’ ಮಹುಮುಖ್ಯವಾದ ಆಹಾರ. ನಮ್ಮಲ್ಲಿ ಭತ್ತ, ಗೋಧಿಗಳಿರುವಂತೆ ಕಸಾವಾ ಇಲ್ಲಿಯವರ ಆಹಾರದ ಬಹುಮುಖ್ಯ ಭಾಗ. ನೋಡಲು ಗೆಣಸಿನಂತೆ ಕಾಣುವ ಕಸಾವಾದ ಬೇರಿನಿಂದ ಹಿಡಿದು ಕಸಾವಾದ ಎಲೆಗಳನ್ನೂ ಕೂಡ ಆಹಾರವಾಗಿ ಬಳಸಲಾಗುತ್ತದೆ. ಆಫ್ರಿಕಾದುದ್ದಕ್ಕೂ ಯಥೇಚ್ಛವಾಗಿ ಆಹಾರವಾಗಿ ಬಳಸಲಾಗುವ ಕಸಾವಾವನ್ನು ಅತೀ ದೊಡ್ಡ ಪ್ರಮಾಣದಲ್ಲಿ ಉತ್ಪಾದಿಸುವ ದೇಶವೆಂದರೆ ನೈಜೀರಿಯಾ. ಇನ್ನು ಕಸಾವಾದ ಎಲೆಗಳನ್ನು, ಹಿಟ್ಟಿನಂತೆ ಸಿದ್ಧಪಡಿಸಿದ ನೆಲಗಡಲೆಯೊಂದಿಗೆ ಬೆರೆಸಿ `ಕಿಝಾಕಾ’ ಎಂಬ ಖಾದ್ಯವನ್ನೂ ಸಿದ್ಧಪಡಿಸಲಾಗುತ್ತದೆ.

ಕಸಾವಾದಷ್ಟೇ ನಿಯಮಿತವಾಗಿ ಅಂಗೋಲಾದಲ್ಲಿ ಬಳಸಲ್ಪಡುವ ಮತ್ತೊಂದು ಆಹಾರವೆಂದರೆ `ಫೂಂಜ್’. ಕಸಾವಾದ ಹಿಟ್ಟನ್ನು ನೀರಲ್ಲಿ ಕುದಿಸಿ ನಂತರ ಸಿಗುವ ದಪ್ಪನೆಯ ಪೇಸ್ಟ್ ಅನ್ನು ಉದ್ದನೆಯ ಕೋಲೊಂದರಿಂದ ಸುಮಾರು ಅರ್ಧ ತಾಸು ಜೋರಾಗಿ ಅಲ್ಲಾಡಿಸಿ ಮತ್ತಷ್ಟು ಚೆನ್ನಾಗಿ ಬೆರೆಸಲಾಗುತ್ತದೆ. ಸ್ಥಳೀಯ ಭಾಷೆಯಲ್ಲಿ `ಮಶಾರಿಕು’ ಎಂಬ ಹೆಸರಿನಿಂದ ಕರೆಯಲ್ಪಡುವ ಸುಮಾರು ಒಂದು ಮೀಟರ್ ಉದ್ದದ ಸೌಟಿನಂತಹ ಈ ಕೋಲು ಇದಕ್ಕಾಗಿಯೇ ಮೀಸಲು. ಕುದಿಸಿದ ನಂತರ ಉಂಟಾಗುವ ಪೇಸ್ಟ್ ಬಹಳ ಅಂಟುಅಂಟಾಗಿರುವುದರಿಂದ ಕೋಲಿನಿಂದ ಬೆರೆಸುವ ಈ ಕೆಲಸಕ್ಕೆ ಸಾಕಷ್ಟು ದೈಹಿಕ ಶ್ರಮ ಬೇಕಾಗುತ್ತದೆ.

ಕೊನೆಗೆ ತಿನ್ನಲು ಸಿಗುವುದು ಬಿಳಿಯ ಬಣ್ಣದ, ಅಂಟಂಟಾದ, ನೋಡಲು ಗೋಂದಿನಂತೆ ಕಾಣುವ ಫೂಂಜ್. ಇನ್ನು ಫೂಂಜ್ ರುಚಿಯಿಲ್ಲದೆ ಸಪ್ಪೆಯಾಗಿರುವುದರಿಂದ ಸಾಮಾನ್ಯವಾಗಿ ಯಾವುದಾದರೊಂದು ಸಾಂಬಾರಿನ ಜೊತೆಗೆ ಫೂಂಜ್ ಅನ್ನು ತಿನ್ನಲಾಗುತ್ತದೆ. ಉತ್ತರ ಭಾರತದ ಜನಪ್ರಿಯ ಖಾದ್ಯವಾದ `ರಾಜ್ಮಾ-ಚಾವಲ್’ ಕಾಂಬೋದಂತೆ ಅಂಗೋಲಾದಲ್ಲೂ ಅನ್ನ (ಅರೋಶ್) ಮತ್ತು ಬೀನ್ಸ್ (ಫೆಝಾಂವ್) ಗಳು ಬಲು ಸಾಮಾನ್ಯ.

ಇನ್ನು ಉಳಿದಂತೆ ಕಟಾಟುಸ್ ಎಂಬ ಹೆಸರಿನಲ್ಲಿ ಕರೆಯಲ್ಪಡುವ ಹುರಿದ ಕಂಬಳಿಹುಳುಗಳು, ನೋಡಲು ರೇಷ್ಮೆಹುಳುಗಳಂತಿದ್ದು ಬರೋಬ್ಬರಿ ಮೂರಿಂಚಿನಷ್ಟು ದೊಡ್ಡದಾಗಿ ದಪ್ಪಗಿರುವ `ಸೋಂಬೆ’ ಹುಳುಗಳು, ಸುಟ್ಟ ಮಿಡತೆಗಳು, ಒಣಮೀನುಗಳು, ಬುಷ್ ಮೀಟ್ ಗಳು ಇದ್ದೇ ಇರುತ್ತವೆ.

ಕಂಬಳಿಹುಳುಗಳನ್ನು ಬೆಳ್ಳುಳ್ಳಿಯೊಂದಿಗೆ ಹುರಿದು ಅನ್ನದೊಂದಿಗೆ ನೀಡಲಾಗುವ `ಕಟಾಟುಸ್’ ವೀಜ್ ನ ಜನಪ್ರಿಯ ಖಾದ್ಯ. ಸಾಮಾನ್ಯವಾಗಿ ಪ್ಲಾಸ್ಟಿಕ್ ಬಕೆಟ್ಟುಗಳಲ್ಲಿ ಒಂದಿಷ್ಟು ಮಣ್ಣನ್ನು ತುಂಬಿಸಿ ನಂತರ ಅವುಗಳಲ್ಲಿ ನೂರಿನ್ನೂರು ಸೋಂಬೆ ಹುಳುಗಳನ್ನು ಜೀವಂತವಾಗಿಯೇ ಮಾರಾಟಕ್ಕಿಡಲಾಗುತ್ತದೆ. ಮೂರಿಂಚಿನ ಒಂದು ಸೋಂಬೆ ಹುಳು ಸುಮಾರು 200 ಕ್ವಾಂಝಾದಷ್ಟಿನ (1 ಡಾಲರ್ / 65 ರೂಪಾಯಿ) ದರದಲ್ಲಿ ಬಿಕರಿಯಾಗುತ್ತದೆ.

ಆಹಾರವಾಗಿ ಮಾರಾಟಕ್ಕಿಡಲಾಗುವ ಹುಳುಗಳನ್ನು, ಅದರಲ್ಲೂ ಜೀವಂತವಾಗಿರುವ ದೊಡ್ಡ ಗಾತ್ರದ ಸೋಂಬೆ ಹುಳುಗಳನ್ನು ಕಂಡು ಕಂಗಾಲಾದ ನಾನು ಮತ್ತೆ ಅತ್ತ ನನ್ನನ್ನು ಕರೆದುಕೊಂಡು ಹೋಗದಂತೆ ಗೊಣಗುತ್ತಿದ್ದರೆ ಇಲ್ಲಿಯ ಸ್ಥಳೀಯರು ನಾನೇನು ಜೋಕ್ ಹೇಳಿದೆನೋ ಎಂಬಂತೆ ನಗುತ್ತಿದ್ದರು.

ಪ್ರೋಟೀನ್ ಅಂಶವಿದೆಯೆಂದು ಹೇಳಲಾಗುವ ಹುಳುಗಳನ್ನು ಆಹಾರವಾಗಿ ಬಳಸುವುದು ಆಫ್ರಿಕಾದಲ್ಲಿ ಹೊಸತೇನಲ್ಲ. 500 ಕ್ಕೂ ಹೆಚ್ಚು ಬಗೆಯ ಹುಳುಗಳನ್ನು ಆಫ್ರಿಕಾದಾದ್ಯಂತ ಆಹಾರವಾಗಿ ಬಳಸಲಾಗುತ್ತದೆಯಂತೆ. ಆಫ್ರಿಕಾದ ದಕ್ಷಿಣ ಭಾಗದಲ್ಲಿ ಮೊಪೇನ್ ಹುಳುಗಳ ಮಾರಾಟದ ವಾರ್ಷಿಕ ವ್ಯವಹಾರದ ಮೌಲ್ಯವೇ ಸುಮಾರು 85 ಮಿಲಿಯನ್ ಡಾಲರ್ ಗಳಷ್ಟಾಗುತ್ತೆ. ಈ ಮೊತ್ತ ಕೇವಲ ಒಂದೇ ಹುಳುವಿನ ವಹಿವಾಟಿದ್ದು ಎಂಬುದು ನೆನಪಿರಲಿ. ಇನ್ನು ವಿವಿಧ ಬಗೆಯ ಇತರ ಕೀಟಸಂತತಿಗಳನ್ನು ಪರಿಗಣಿಸಿದರೆ ಇವುಗಳ ಒಟ್ಟಾರೆ ಮೌಲ್ಯವು ಮತ್ತಷ್ಟು ಹೆಚ್ಚಾಗುವುದು ಖಚಿತ.

ಡೆಮಾಕ್ರಟಿಕ್ ರಿಪಬ್ಲಿಕ್ ಆಫ್ ಕಾಂಗೋ (ಡಿ.ಆರ್.ಸಿ), ನಮೀಬಿಯಾ, ಜಿಂಬಾವ್ವೆ, ಝಾಂಬಿಯಾ, ಉಗಾಂಡಾ, ದಕ್ಷಿಣ ಆಫ್ರಿಕಾ, ಕ್ಯಾಮೆರೂನ್ ಗಳಲ್ಲಿ ಈ ಬಗೆಯ ಆಹಾರಪದ್ಧತಿಯನ್ನು ಹೆಚ್ಚಿನ ಪ್ರಮಾಣದಲ್ಲಿ ಅನುಸರಿಸುತ್ತಿದ್ದರೆ ಯೂರೋಪ್, ಅಮೇರಿಕಾ ಮತ್ತು ಕೆನಡಾಗಳಲ್ಲೂ ಇದರ ಬಗೆಗಿನ ಮಡಿಮೈಲಿಗೆಗಳು ಇತ್ತೀಚೆಗೆ ಕಮ್ಮಿಯಾಗುತ್ತಿರುವುದು ತಿನ್ನಲು ಯೋಗ್ಯವಾದ ಕೀಟಗಳ ಬೇಡಿಕೆಗಳನ್ನು ಹೆಚ್ಚುವಂತೆ ಮಾಡಿವೆ.

ಅಂಗೋಲಾವು ಪೋರ್ಚುಗೀಸರ ಅಧೀನದಲ್ಲಿದ್ದ ದೇಶವಾಗಿದ್ದರಿಂದ ಇವರ ಅಡುಗೆ ಮತ್ತು ಆಹಾರಪದ್ಧತಿಗಳ ಮೇಲೆ ಪೋರ್ಚುಗೀಸರ ದಟ್ಟ ಪ್ರಭಾವವಿದೆ. ”ನಮ್ಮ ಆಹಾರವನ್ನೇ ನೀನು ಹೆಚ್ಚು ತಿಂದರೆ ಕ್ರಮೇಣ ನಮ್ಮ ಭಾಷೆಯನ್ನೇ ನೀನು ಚೆನ್ನಾಗಿ ಮಾತನಾಡಬಲ್ಲೆ”, ಎಂದು ಆಹಾರದ ಬಗ್ಗೆ ಆಫ್ರಿಕನ್ ಗಾದೆಯೊಂದಿದೆಯಂತೆ. ಅಂಗೋಲಾದ ಆಹಾರವೈವಿಧ್ಯವು ಶ್ರೀಮಂತವಾಗಿದೆ ಎಂಬುದರಲ್ಲಿ ಎರಡು ಮಾತಿಲ್ಲ. ಆದರೆ ಎಲ್ಲವೂ ಕೂಡ ಎಲ್ಲರಿಗೂ ಆಗಿಬರುವಂಥದ್ದಲ್ಲ ಎನ್ನುವುದೂ ಕೂಡ ಅಷ್ಟೇ ಸತ್ಯ.

Leave a Reply