ಸೈಡ್ ವಿಂಗ್- ಸಿರಿಯಂಗಳ ಆಲ್ಬಂ

ನಿಜಕ್ಕೂ ಅದೊಂದು ಹಬ್ಬದ ವಾತಾವರಣ.

ಪುಟ್ಟ ಅಂಗಳವು ಕಲಾಭರಣ ತೊಟ್ಟು ಸಿಂಗಾರಗೊಂಡಿತ್ತು. ಎಲ್ಲರ ಮನದಲ್ಲೂ ಸಂತಸ, ಕಾರಣ ನಮ್ಮ ಬಹುದಿನಗಳ ಮಹತ್ತರವಾದ ಆಸೆಯೊಂದು ಈಡೇರುವ ದಿನ ಅದಾಗಿತ್ತು!

ಹೌದು. ನಿನ್ನೆ ನಡೆದ ನಮ್ಮ ’ಸೈಡ್ ವಿಂಗ್’ ತಂಡದ ಅಧಿಕೃತ ಉದ್ಘಾಟನೆ ಹಾಗೂ ಶೈಲೇಶ್ ಕುಮಾರ್ ಎಂ.ಎಂ. ಅವರ ಯಶಸ್ವಿ ನಾಟಕವಾದ ’ಇಲ್ಲ.. ಅಂದ್ರೆ ಇದೆ!’ ಕೃತಿ ಬಿಡುಗಡೆ ಸಮಾರಂಭವು ರಂಗಕಾರ್ಯದಲ್ಲಿ ತೊಡಗಿದ್ದ ಹೊಸಮನಸ್ಸುಗಳಿಗೆ ಚೇತನ ನೀಡಿದವು.

ಅತಿಥಿಗಳಾಗಿ ಆಗಮಿಸಿದ ಮೂರೂ ಮಹನೀಯರೂ ಆಪ್ತವಾಗಿ ಕಾರ್ಯಕ್ರಮವನ್ನು ನಡೆಸಿಕೊಟ್ಟು ಹತ್ತಿರವಾದರು.

ತಂಡವನ್ನು ಉದ್ಘಾಟಿಸಿದ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ನಿರ್ದೇಶಕರಾದ ಶ್ರೀ ಎನ್.ಆರ್.ವಿಶುಕುಮಾರ್ ಅವರು ” ಮೊನ್ನೆ ’ಅಮ್ಮ ಪ್ರಶಸ್ತಿ ೨೦೧೭’ರ ಪ್ರಶಸ್ತಿ ಪ್ರದಾನ ಸಮಾರಂಭ ನನ್ನ ಮನಸ್ಸಿಗೆ ಹತ್ತಿರವಾಗಿತ್ತು ಅಂತೆಯೇ ಈ ಸಮಾರಂಭವೂ ಬಹಳ ದಿನಗಳ ಕಾಲ ನನ್ನ ಮನದಲ್ಲಿ ಉಳಿಯಲಿದೆ” ಎಂದು ಹೇಳಿ ರಂಗಭೂಮಿಯೊಡನೆ ತಮ್ಮ ನಂಟನ್ನು ಎಳೆ ಎಳೆಯಾಗಿ ತೆರೆದಿಡುತ್ತಾ ಹೋದರು.

’ಇಲ್ಲ.. ಅಂದ್ರೆ ಇದೆ !’ ಪುಸ್ತಕವನ್ನು ಲೋಕಾರ್ಪಣೆ ಮಾಡಿ ಮಾತನಾಡಿದ ಶ್ರೀಮತಿ ಎಚ್.ಆರ್.ಸುಜಾತಾ ಅವರು ” ಈ ಸಿರಿಯಂಗಳ ನಮ್ಮ ಮನೆಯ ರಂಗದಂಗಳವನ್ನು ನೆನಪಿಸಿತು. ಆಪ್ತ ರಂಗಮಂದಿರಗಳಲ್ಲಿ ಹುಟ್ಟುವ ಆತ್ಮೀಯತೆಯನ್ನು ಬೇರೆಡೆ ನಿರೀಕ್ಷಿಸಲು ಸಾಧ್ಯವಿಲ್ಲ ಅಂತೆಯೇ ಇಂದು ನಡೆದ ಉದ್ಘಾಟನೆಯಾಗಲಿ, ಪುಸ್ತಕ ಬಿಡುಗಡೆಯಾಗಲಿ ಬಹಳಾ ಕ್ರಿಯಾಶೀಲವಾಗಿತ್ತು, ಇಂತಹಾ ಕ್ರಿಯಾಶೀಲತೆಯನ್ನು ಎಲ್ಲರಲ್ಲಿ ತುಂಬುವುದು ರಂಗಭೂಮಿ ಮಾತ್ರ” ಎಂದರು. ” ರಂಗಭೂಮಿಯನ್ನು ನಾವು ಈಗಿನ ಜನಾಂಗಕ್ಕೆ ಪರಿಚಯಿಸುವುದು ಬಹಳಾ ಅವಶ್ಯಕವಾಗಿದೆ, ಈ ನಿಟ್ಟಿನಲ್ಲಿ ಆರಂಭವಾಗಿರುವ ಸೈಡ್ ವಿಂಗ್ ತಂಡಕ್ಕೆ ಶುಭವಾಗಲಿ” ಎಂದು ಮನಃತುಂಬಿ ಹಾರೈಸಿದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಮಾಧ್ಯಮ ತಜ್ಞರಾದ ಶ್ರೀ ಜಿ.ಎನ್.ಮೋಹನ್ ಅವರ ಮಾತುಗಳಿಗಾಗಿ ಎಂದಿನಂತೆಯೇ ಕಾಯುತ್ತಿದ್ದ ನಮಗೆ ಮತ್ತೊಂದು ಹೊಸ ಬುತ್ತಿ ಕಾದಿತ್ತು. ಸಿರಿಯಂಗಳವು ‘ಬಿಗ್ ಬಾಸ್’ ನ Confession Room ಇದ್ದ ಹಾಗೆ, ಇಲ್ಲಿ ಬಂದೊಡನೆ ಮನಗಳು ತೆರೆದುಕೊಳ್ಳುತ್ತವೆ. ಹಾಗೇ ಕಾಲಿಟ್ಟ ಕೂಡಲೇ ಎದುರಾಗುವ ಕನ್ನಡಿ ಮತ್ತು ಅದರ ಕೆಳಗೆ ಇರುವ ’ಇಲ್ಲಿ ಯಾರೂ ಮುಖ್ಯರಲ್ಲ, ಯಾರೂ ಅಮುಖ್ಯರಲ್ಲ!’ ಎಂಬ ಕುವೆಂಪುರವರ ಸಾಲುಗಳು ಮತ್ತಷ್ಟು ಈ ಅಂಗಳವನ್ನು ನನ್ನ ಮನಸ್ಸಿಗೆ ಹತ್ತಿರವಾಗಿಸಿದೆ. ಕನ್ನಡಿಯಲ್ಲಿ ಮೊದಲು ನಾವು ನಮ್ಮನ್ನು ನೊಡಿಕೊಳ್ಳಬೇಕು, ನಮ್ಮ ವಿಕೃತಿಯನ್ನು ನೋಡಿಕೊಂಡು ಅದನ್ನು ತಿದ್ದಿಕೊಂಡರೆ ಸಮಾಜದ ವಿಕೃತಿ ತನ್ನಷ್ಟಕ್ಕೇ ಅಡಗಿಹೋಗುತ್ತದೆ” ಎಂದರು.

ಕಾರ್ಯಕ್ರಮದಲ್ಲಿ ಹಿರಿಯ ರಂಗಕರ್ಮಿಗಳಾದ ಶ್ರೀ ಅಂಕಲ್ ಶ್ಯಾಂ , ಮಹೇಶ್, ಲೇಖಕರಾದ ಶಿವಕುಮಾರ್ ಮಾವಲಿ ಚಿತ್ರ ರಂಗದ ಮಂಡ್ಯ ನವೀನ ಕುಮಾರ್ ಹಾಗು ಹಲವಾರು ಗಣ್ಯರು ಉಪಸ್ಥಿತರಿದ್ದರು. ಒಟ್ಟಾರೆ ಒಂದು ಸುಂದರ ರಂಗಸಂಜೆ- ಅಕ್ಷರ ಸಂಜೆ ಅದಾಗಿತ್ತು, ಎಲ್ಲರ ಮನಕ್ಕೂ ಮುದ ನೀಡಿತ್ತು !

2 Responses

  1. Mala Shylesh says:

    Thank you GNM Sir and Avadhi Team….

  2. Mahipalreddy Munnur says:

    ಸೈಡ್ ವಿಂಗ್ ಕಾರ್ಯಕ್ರಮದಲ್ಲಿ ಶ್ರೀ ವಿಶುಕುಮಾರ ಆಡಿರುವ ಮಾತುಗಳಲ್ಲಿ ಸೇಡಂನ ಅಮ್ಮ ಪ್ರಶಸ್ತಿ..ನೆನಪಿಸಿದ್ದಕ್ಕೆ ಧನ್ಯವಾದಗಳು..
    ಅವಧಿಗೆ ವಂದನೆಗಳು.

Leave a Reply

%d bloggers like this: