‘ಬೆಳ್ಳಕ್ಕಿ ಬೆಳ್ಳಕ್ಕಿ ಉಂಗ್ರ ಕೊಡೆ’ ಎಂದು ಕೇಳುವ ಸುಧಾ ಶರ್ಮ ಚವತ್ತಿ ಕವಿತೆಗಳು ಇಲ್ಲಿವೆ..

‘ಅವಧಿ’ಯ ಮತ್ತೊಂದು ಹೊಸ ಪ್ರಯತ್ನ. ಒಂದೇ ಗುಕ್ಕಿಗೆ ಎಲ್ಲಾ ಕವಿತೆಗಳನ್ನು ಓದಿದರೆ ಕವಿಯ ಬನಿ ಗೊತ್ತಾಗುತ್ತದೆ ಎನ್ನುವುದು ನಮ್ಮ ನಂಬಿಕೆ. ನಾವು ಓದಿದ ಓದು ಇದನ್ನು ಅರ್ಥ ಮಾಡಿಸಿದೆ. ಹಾಗಾಗಿ ವಾರಕ್ಕೊಮ್ಮೆ ಹೀಗೆ ಒಬ್ಬ ಕವಿಯ ಹಲವಾರು ಕವಿತೆಗಳು ನಿಮ್ಮ ಮುಂದೆ ಕಾಣಿಸಿಕೊಳ್ಳಲಿದೆ. ಅವಸರ ಬೇಡ. ನಿಧಾನವಾಗಿ ಓದಿ ಕವಿಯ ಅಂತರಂಗ ಹೊಕ್ಕುಬಿಡಿ.

ಈ ಕವಿತೆಗಳ ಬಗ್ಗೆ ಅಭಿಪ್ರಾಯ ಬರೆದು ತಿಳಿಸಿ ಕವಿಗೂ ಖುಷಿಯಾದೀತು ಇನ್ನಷ್ಟು ಬರೆಯಲು ದಾರಿಯಾದೀತು.

ಅಷ್ಟೇ ಅಲ್ಲ, ಹೀಗೆ ‘ಪೊಯೆಟ್ ಆ ದಿ ವೀಕ್’ ಆದವರ ಕವಿತೆಗಳನ್ನು ಇನ್ನೊಬ್ಬ ಸಮರ್ಥ ಓದುಗರು ಓದಿ ಅದರ ಬಗ್ಗೆ ತಮ್ಮ ಟಿಪ್ಪಣಿ ಕೊಡುತ್ತಾರೆ.

ಅದು ನಂತರದ ದಿನಗಳಲ್ಲಿ ಅವಧಿಯಲ್ಲಿ ಪ್ರಕಟವಾಗುತ್ತದೆ.

ಈಗ ಪ್ರಕಟವಾಗಿರುವ ಸುಧಾ ಶರ್ಮ ಚವತ್ತಿ ಅವರ ಕವಿತೆಗಳ ಬಗ್ಗೆ

ಟಿಪ್ಪಣಿ ಬರೆಯಲಿರುವವರು ಗಿರಿಧರ ಕಾರ್ಕಳ. ಕಾದು ಓದಿ

‘ಬೆಳ್ಳಕ್ಕಿ ಬೆಳ್ಳಕ್ಕಿ ಉಂಗ್ರ ಕೊಡೆ’ ಎಂದು ಬೆಳ್ಳಕ್ಕಿಯನ್ನು ಮಾತನಾಡಿಸುವಷ್ಟೇ ಸಲೀಸಾಗಿ ಸುಧಾ ಶರ್ಮ ಕವಿತೆಯನ್ನೂ ನಿಲೆ ಹಾಕಿಕೊಂಡು ಮಾತನಾಡಿಸಬಲ್ಲರು. ಅದಕ್ಕೆ ಸಾಕ್ಷಿ ಇಲ್ಲಿರುವ ಈ ಕವನಗಳು. ಚವತ್ತಿಯ ಸುಧಾ ಕ್ರೈಸ್ಟ್ ಕಾಲೇಜಿನ ಕನ್ನಡ ಸಂಘದ ಮೂಲಕ ಕನ್ನಡ ಸಾಹಿತ್ಯ ಲೋಕದಲ್ಲಿ ತಮ್ಮದೇ ಛಾಪು ಮೂಡಿಸಿದವರು.

ನಿರ್ದೇಶನ ಇವರ ಪ್ರಿಯ ಹವ್ಯಾಸ. ಸಾಕಷ್ಟು ಸಾಕ್ಷ್ಯಚಿತ್ರಗಳನ್ನು ನಿರ್ದೇಶಿಸಿರುವ ಸುಧಾ ಶರ್ಮ ಇಲ್ಲಿ ತಮ್ಮೊಳಗಿನ ಭಾವದೊಂದಿಗೆ ಮುಖಾಮುಖಿಯಾಗಿದ್ದಾರೆ-

ಬೆಳ್ಳಕ್ಕಿ ಬೆಳ್ಳಕ್ಕಿ ಉಂಗ್ರಕೊಡೆ.

                           

ಇಷ್ಟಿಷ್ಟೆ ಬೆರಳಂಚಿನ,

ಉಗುರೆಂಬ ಆಕಾರದಲ್ಲಿ.

ಅಂಕೆ ಕಲಿತಾಗಿಂದ

ಬೆಳ್ಳಕ್ಕಿ ಉಂಗುರವ ಎಣಿಸಿದ್ದೇ ಎಣಿಸಿದ್ದು.

 

ಆಟವಾಡುವಾಗ,

ಗುಬ್ಬಚ್ಚಿ ಗೂಡು ಕಟ್ಟುವಾಗ,

ಜತನದಿಂದ ಉಳಿಸಿಕೊಂಡರೂ,

ರಾತ್ರಿ ಕನಸಿನಲ್ಲಿ ಉಂಗುರ ಮಾಯವಾದಂತಾಗಿ ಹಾಸಿಗೆಯಲ್ಲೇ ಅತ್ತಿದ್ದು.

ಮಾಸಲಾದ ಉಂಗುರದ ಕೈಯ್ಯ

ಕೆನ್ನೆಗೆ ಹಚ್ಚಿ ಚಿಂತಿಸಿದ್ದು,

ಸಂಜೆಗೆ ಹಾರಿದ ಬೆಳ್ಳಕ್ಕಿ ಹಿಂಡಿನ ಹಿಂದೆ ಓಡಿ

ಎರಡೂ ಕೈ ಎತ್ತಿ ಕೂಗಿದ್ದು

“ಬೆಳ್ಳಕ್ಕಿ ಬೆಳ್ಳಕ್ಕಿ ಉಂಗ್ರ ಕೊಡೆ.”

 

ಉದ್ದ ಲಂಗದ ನಡಿಗೆ,

ಒಂದು ಕೈಯ್ಯಲ್ಲಿ ನಿರಿಗೆ,

ಗುಲಾಬಿ ದಳದ ಅಂಗೈತುಂಬ

ಮದರಂಗಿಯದೇ ಕನಸು.

ಕನ್ನಡಿಗೂ ರಂಗು ರಂಗಿನ ಬಣ್ಣ

ಹಾರುವ ಬೆಳ್ಳಕ್ಕಿ ಹಿಂಡಲ್ಲಿ

ಹುಡುಗನ ನಗೆ ಒತ್ತೊತ್ತಿ ಬರುತ್ತಿದೆ.

ಈಗ ಮರೆತು ಹೋಗಿದೆ

ಅಂದು ಕೂಗಿದ್ದು

“ಬೆಳ್ಳಕ್ಕಿ ಬೆಳ್ಳಕ್ಕಿ ಉಂಗ್ರ ಕೊಡೆ.”

 

ಎಲ್ಲಾ ಅದೇ ಅದೇ

ಸೀರೆ , ಮನೆ, ಮದುವೆ,ಮಕ್ಕಳು

ಸಂಸಾರ ಬಂಗಾರದ ಗೌಜೋ ಗೌಜು.

ಹವಳ ಹರಳಿನುಂಗುರದ ಹೊಳಪು ಕಣ್ಣಲ್ಲಿಲ್ಲ.

 

ಹಚ್ಚಿದ ನೇಲ್ ಪಾಲೀಷ್ ಉಜ್ಜಿ,

ಉಗುರನ್ನು ಶೇಪ್ ಮಾಡುವಾಗ;

ಅರೆರೇ ಬೆಳ್ಳಕ್ಕಿ ಉಂಗುರ.

ಅಪರೂಪಕ್ಕೆ ಸಿಕ್ಕ ಗೆಳತಿ

ಡುಬ್ಬನೆ ಬೆನ್ನಿಗೆ ಗುದ್ದಿ

ಅಂಗೈಯಲ್ಲಿ ಕಣ್ಣು ಮುಚ್ಚಿದ ಸುಖ.

ಹಾಡೇ ಹಗಲಾದರೂ

ನಿಂತಲ್ಲೇ ಕೈಯೆತ್ತಿ ಕೂಗಬೇಕೆನ್ನಿಸಿದೆ.

“ಬೆಳ್ಳಕ್ಕಿ ಬೆಳ್ಳಕ್ಕಿ ನನ್ನ ಉಂಗ್ರ ತಗಂಡು ನಿನ್ನ ಉಂಗ್ರ ಕೊಡೆ.”

 

ದ್ರೌಪದಿಗೆ ನೀರಾಯಿತು

ಆಕಾಶದಲ್ಲಿ ಉಕ್ಕಿ ಉಕ್ಕಿ ನೆಗೆವ
ಜಲಪಾತವೆಲ್ಲ ಭೂಮಿಗೆ ಧುಮುಕಿ;
ಇಡೀ ಹಸ್ತಿನಾವತಿಯ ಪಾಪವನೆಲ್ಲ ತೊಳೆತೊಳೆದು ಹಾಕಿದರೂ,
ರಕ್ತದ ಕಲೆಗಳು ಹಾಗ್ಹಾಗೆ ಉಳಿದಿವೆ.

ಇದು ಕುಂಭದ್ರೋಣ ಮಳೆ.
ಸುರಿಸುರಿದು ಹರಿದ್ಹರಿದು ಹೋಗುವುದಷ್ಟೇ
ಇದಕ್ಕೆ ಗೊತ್ತು.
ಒಣಗಿ, ಚಿರಟಿ ಕರಕಲಾಗಿಬಿಟ್ಟಿದ್ದ ನೆಲ ಹೊಲಗಳನ್ನು ತೋಯಿಸಿ,
ಇಳೆಯ ಒಡಲಲ್ಲಿ ಆಸೆ ಚಿಗುರಿಸಿ;
ಹೊಸ ಬೆಳಗಿನ ಬಾಗಿಲಿಗೆ ಈ ಮಳೆ ಹರಿದು ಬಂತು.

ಕೊಚ್ಚಿ ಹೋಗುವ ನೀರಲ್ಲಿ
ಮೂಳೆ ಚಕ್ಳಳಗಳು ಕಾಲಿಗಡರುತ್ತಿದೆ.
ಮಣ್ಣ ವಾಸನೆಯಲ್ಲಿ ಹೆಣದ ನಾತ.
ಎಷ್ಟೇ ಮಳೆ ಬಂದರೂ ಮನೆ ಮನದಲಡಗಿದ
ಸೂತಕ ಕರಗುತ್ತಲೇ ಇಲ್ಲ.
ನೆಲದ ಮೇಲಿನ ರಕ್ತದ ಕಲೆ ತಿಕ್ಕಿತಿಕ್ಕಿ ತೆಗೆಯುತ್ತಿದ್ದಾರೆ.
ಊರಿಗೆ ಊರೇ ನಿಂತು ಗುಡಿಸಿಗುಡಿಸಿ ಹಾಕುತ್ತಿದೆ.

ಮಳೆ ನೀರು ಹೊಳೆವ ಬಿಸಿಲಲ್ಲಿ;
ಹುಲ್ಲ ಮೇಲಿನ ಹನಿಯಾಗಿ ತನ್ನಷ್ಟಕ್ಕೆ ತಾನೇ ಫಳಫಳಿಸುತ್ತಿದೆ.

ಒದ್ದೆ ಕೂದಲು ಹರಡಿ ಎಳೆ ಬಿಸಿಲಿಗೆ
ಮೈಯೊಡ್ಡಿ ಕೂತವಳ ಬೆನ್ನಹಿಂದೆ;
ಸಾವು ಬೋಳಿಸಿ ಹೋದ ಆಕ್ರಂದನದ ಅವಶೇಷವಿದೆ.
ಕಣ್ಣೆದುರು;
ಬಿದ್ದ ಮಳೆಗೆ ಒದ್ದೆ ನೆಲದಲ್ಲಿ
ಮೊಳಕೆಯೊಡೆದ ಬೀಜ;
ಎರಡೆಲೆಬಿಚ್ಚಿ ನಗುತ್ತಿದೆ.
ರೆಕ್ಕೆ ಅಗಲಿಸಿ ಹನಿ ಉದುರಿಸಿ ನೆಂದ ಗೂಡಲ್ಲಿ
ಮರಿ ಹುಡುಕುವ ಹಕ್ಕಿಗಳು;
ಹೊಸ ಗೂಡು ಕಟ್ಟುತ್ತಿವೆ.

ಎಳೆಸೂರ್ಯನ ಹೊನ್ನ ಕಿರಣವೇ
ಜಗದ ತೊಟ್ಟಿಲ ಹಗ್ಗವಾಗಿ
ಎಲ್ಲರನ್ನೂ ತೂಗುತ್ತಿದೆ.

( ನವಪಲ್ಲವದ ನೆಪ ಮಾತ್ರದ ಕನಸೂ ಬದುಕನ್ನು ಸಹ್ಯವಾಗಿಸುತ್ತದೆ. ಸಮಸ್ತವೂ ಸರ್ವನಾಶವಾದ ಮಹಾಭಾರತ ಯುದ್ಧದಲ್ಲಿ ಮುಂದಿನ ಪೀಳಿಗೆಯೇ ನಿರ್ನಾಮವಾದಾಗ ದ್ರೌಪದಿ ಮುಟ್ಟಾಗುವುದು ಹೊಸ ಭರವಸೆ. ಎಲ್ಲ ದುರಂತ, ವಿನಾಶಗಳ ಅಂಚಿಗೂ ಉಳಿಯುವ ಸೃಷ್ಟಿ ಕ್ರಿಯೆಯೇ ಮಹಾ ಚೈತನ್ಯ. )

ಕಳಲೆ ಕೊಳಲು

 

ಉಗುರಮೊನೆ ತಾಗಿದರೂ ;
ರಕ್ತ ಜಿನುಗಿಸಿ.
ಹಸಿರೆಲೆಗಳ ಅಡಿಯಲ್ಲಿ;
ಹಣಹಣಕಿ, ಮುಗಿಲೆಡೆಗೆ
ನೋಡುತ್ತಿರುವ,
ಪಡುಗೆಂಪಿನ ಕಳಲೆ ನಾನು.

ಬಿಟ್ಟು ಬಿಡು ಈಗ.

ನನ್ನ ಸುತ್ತಿರುವ
ಪೊರೆಗಳೆಲ್ಲ ಹರಿದು,
ಹಸಿರ ತುದಿಯಲಿ
ನಾನು ಬಿದಿರಾದಾಗ,
ನನ್ನನ್ನು ಕೊಳಲು ಮಾಡಿ
ಉಸಿರಿಟ್ಟರೂ;
ನಾನಾಗುವೆ.
ನೂರಾರು ಹೊನ್ನರಾಗ.

ಸೀರೆ

ಇಲ್ಲಿಯ ತನಕ ಬದುಕು
ಸ್ವಸ್ಥ, ನಿಶ್ಚಿಂತ, ಟ್ರಂಕಿನೊಳಗೆ
ಡಾಂಬರಿ ಗುಳಿಗೆ ಹಾಕಿ
ಮಡಚಿಟ್ಟ ಸೀರೆಯಂತೆ.

ಒಲೆ ಮುಂದೆ ಕೂತು
ಅಮ್ಮನೊಂದಿಗೆ ಗುಸುಗುಸು ಮಾಡುವಾಗ
ಮೈತುಂಬ ಸೀರೆಮೇಲಿನ ಹೂವು
ಅರಳಿಕೊಳ್ಳುವ ಪುಳಕ.

ಸೀರೆ ಚಂದದ ನಿರಿಗೆಯಾಗಿ
ಮೈತುಂಬ ಸುತ್ತಿಕೊಂಡು
ಟ್ರೇ ಹಿಡಿದು ಹೊರಟಾಗ
ನಿರಿಗೆ ನಿರಿಗೆಯೊಳಗೂ
ಅವಿತುಕೊಂಡ ನಿರೀಕ್ಷೆ.

ಆಮೇಲೆ ಸೀರೆಬಿಚ್ಚಿ
ಮತ್ತೆ ಮಡಚಿಡುವಾಗ
ಸೀರೆಯ ಮೈಯ್ಯ ಅಂಗುಲಂಗುಲದಲ್ಲೂ
ಹುಡುಗನ ಕನಸುಕಣ್ಣು.
ಕನ್ನಡಿಗೆ ಮುತ್ತಿಟ್ಟ ಶಬ್ಧಕ್ಕೆ
ತಟ್ಟನೇ ಎಚ್ಚೆತ್ತರೆ
ಮುಖವೆಲ್ಲಾ ಸೀರೆಯಕೆಂಪು.

ಅಲ್ಲಲ್ಲಿ ಪಿಸಿದು ಜುಬರೆತ್ತಿ
ಮುದ್ದೆಯಾಗುವ ಸೀರೆ
ನಡುವಯಸ್ಸಿನಲ್ಲೂ
ಚುಡಾಯಿಸುವ ಪೋಲಿಯಂತೆ.
ಅಂಗಳದಂಚಿಗೆ ಕೂತು
ಹರಿದ ಸೀರೆಯ ಹೊಲಿಯುವಾಗ
ಕಚಗುಳಿ ಇಡುವ ನೆನಪು.

ಮಗನ ಉಚ್ಚೆಯಲ್ಲಿ ಒದ್ದೆಯಾದ
ಸೀರೆಯ ತುಂಡಿನಲ್ಲಿ
ನೆಲ ಒರೆಸುತ್ತ
ಅವಳು ಹಾಡುತ್ತಾಳೆ
ಅಮ್ಮ ಕಲಿಸಿದ ಅದೇ ಹಾಡುಗಳನ್ನು

ಕಾಯುವ ಕವಿತೆಗಳು

ಒಳಗೆ;

ದಡಬಡ ಓಡಾಟ;
ಸರಬರ ಶಬ್ದ.
ಯಾರಲ್ಲೂ ಮಾತಿಲ್ಲ ಕಥೆ ಇಲ್ಲ.

ಹೊರಗೆ:

ಬೆಂಚಿನ ಮೇಲೆ
ಬಾಗಿಲಿಗೆ ಕಣ್ಣು ನೆಟ್ಟು,
ಗೋಡೆಗೆ ಕಿವಿಯಿಟ್ಟು,
ಎಳೆ ಅಳುವಿಗಾಗಿ;
ಕ್ಷಣ ಯುಗವಾಗಿದೆಯೇನೋ
ಎನ್ನುವ ಹಾಗೆ,
ಯುಗ ಯುಗಗಳಿಂದಲೂ
ಕಾಯುತ್ತಿದ್ದಾರೆ ಹೀಗೆ.

2

ನಿನ್ನೆಯಿಂದ ಇಬ್ಬರೂ
ತುಟಿ ಹೊಲಿದುಕೊಂಡಿದ್ದಾರೆ.
ನಿರಭ್ರ ಆಕಾಶದಲ್ಲಿ ಮೋಡ ಕಟ್ಟಿದ್ದಾದರೂ ಹೇಗೋ?

ಗುಡುಗು ಸಿಡಿಲಿಲ್ಲ.
ಮಿಂಚು ಮಳೆ ಇಲ್ಲ.
ಬೆಳಕು ಹರಿದು ಬಾರದ
ಹನಿ ಹರಿಸದ ಮೋಡ
“ಕರಗಬೇಕೆಂದು” ಇಬ್ಬರೂ
ಕಾಯುತ್ತಿದ್ದಾರೆ.
ಮಳೆ ನಿಂತ ಆಕಾಶದಲ್ಲಿ
“ಕಾಮನಬಿಲ್ಲು” ಹುಡುಕಲು
ತುದಿಗಾಲಲ್ಲಿ ನಿಂತಿದ್ದಾರೆ.

ಬೆಕ್ಕಿಗೆ ಗಂಟೆ
ಕಟ್ಟುವವರು ಯಾರು.?

3

ಪುರ್ರೆಂದು ಹಕ್ಕಿಗಳು
ಹಾರಿ ಬಂದು ಕೂತಂತೆ,
ಮಕ್ಕಳು.
ಓಡೋಡಿ ಓಡೋಡಿ ಬರುತ್ತಿವೆ.
ಅವನ ಕಣ್ಣಲ್ಲಿ
ನೀರು ಇನ್ನೇನು ಇಳಿಯಬೇಕು.
ಗೇಟಿನಾಚೆ ನಿಂತ ಅಮ್ಮನ
ಬೈಗುಳದಿಂದ ಪಾರಾಗುವುದಾದರೂ ಹೇಗೆ?
ಕಡಿಮೆ ಮಾಕ್ರ್ಸ ಬೇಡಿ ಬಯಸಿದ್ದೇ?
ನಿತ್ಯ ಬಯ್ಯುವ ಇವಳು,
ಹೇಗಾದರೂ ಒಳ್ಳೆಯವಳಾಗಲಿ.
ನನಗಿನ್ನು ಬೈಯ್ಯದಿರಲಿ.

4

ಬಾಯಲ್ಲಿ ತುತ್ತಿಟ್ಟು;
ಅತ್ತ ಇತ್ತ ಸುತ್ತ ಮುತ್ತ
ಬೆಟ್ಟಿಟ್ಟು ತೋರಿಸುತ್ತ,
ಎಲ್ಲ ಕಸರತ್ತೂ ಖರ್ಚಾಯಿತು.

ಅವನು ನುಂಗಿದರೆ ಸಾಕು,
ಇನ್ನೊಂದು ತುತ್ತಿಟ್ಟು
ಹೊಟ್ಟೆ ತುಂಬುವವರೆಗೆ ತಿನ್ನಿಸಬೇಕು.

ಇವಳು ತುತ್ತಿಡುವಾಗ
ಚೆಲ್ಲಿದ ಅಗುಳು ಆರಿಸಿ
ಹಕ್ಕಿ ಹೆಕ್ಕಿಕೊಂಡು
ಹಾರುತ್ತಿದೆ.
ಗೂಡಲ್ಲಿ ಮರಿ
ಬಾಯಿ ತೆರೆದು
ಕಾಯುತ್ತಿದೆ.

ತುತ್ತಿಕ್ಕುವುದನ್ನು ತಾಯಿಗೆ
ಕಲಿಸಿದವರ್ಯಾರೋ

5

ಸಮಸ್ತ ಸಂಕಷ್ಟಗಳನ್ನೂ
ಹೆಗಲಮೇಲೆ ಹೊತ್ತು
ದೇವರೆದುರು ಹರಡಿ
ಕಾಡಿಕಾಡಿ ಬೇಡಿಬೇಡಿ
ಕೊಡು ಕೊಡು ಎನ್ನುವ
ಅನುದಿನವೂ ಬೇಡುವ
ನಮ್ಮಂತ ಭಕ್ತರೆದುರು
ಸಕಲ ಅಷ್ಟೈಶ್ವರ್ಯವನ್ನೂ
ರಾಜ್ಯ ಸಾಮ್ರಾಜ್ಯವನ್ನೂ
ಕಿರು ಗಣ್ಣಲ್ಲಿ ನೋಡಿ;
ಕಡೆಗಾಲಲ್ಲಿ ದೂಡಿ;
ದಟ್ಟ ಕಾನನಕ್ಕೆ ನಡೆದುಹೋದ ಭಗವಂತ
ಕಲ್ಲಾಗಿದ್ದಾನೆ.

ಅವನೂ ಕಾಯುತ್ತಿದ್ದಾನೆ.
ಅವನೊಳಗೆ ಅವನಂತೆ;
ಅವನಿಲ್ಲದಂತೆ,
ಇವನಾಗುವ.
ಭಕ್ತನಿಗಾಗಿ.

Leave a Reply