ಬೋಂದಿಯಾ.. ಬೋಂದಿಯಾಸಿ

ಅಂಗೋಲಾಕ್ಕೆ ಬಂದಿಳಿದ ಹೊಸತು..

ಅಂಗೋಲನ್ ಸರಕಾರಿ ಮಂತ್ರಾಲಯದ ಕಾರ್ಯಾಲಯವೊಂದಕ್ಕೆ ಕೆಲಸದ ನಿಮಿತ್ತ ಹೋಗಿದ್ದೆ. ಸಂಬಂಧಿ ಅಧಿಕಾರಿಗಳು ಬರುವುದು ತಡವಾಗುತ್ತದೆ, ನೀವಿಲ್ಲೇ ಕಾದಿರಿ ಎಂದು ಹೇಳಿ ಅಲ್ಲಿಯ ಸಿಬ್ಬಂದಿಯೊಬ್ಬರು ನಮ್ಮನ್ನು ಲಾಬಿಯಲ್ಲಿ ಕುಳ್ಳಿರಿಸಿದರು. ಆಯ್ತಪ್ಪಾ ಎಂದು ದುಭಾಷಿಯೊಂದಿಗೆ ಕುಳಿತುಕೊಂಡೆ. ಎಲ್ಲಿ ಹೋದರೂ ಕಾಯುವುದೊಂದು ತಪ್ಪುವುದಿಲ್ಲ ಎಂದು ಒಳಗೊಳಗೇ ಅಂದುಕೊಂಡೆ ಕೂಡ.

ಹೀಗಿರುವಾಗ ಮುಖ್ಯ ಪ್ರವೇಶದ್ವಾರದಿಂದ ಒಬ್ಬ ಲಾಬಿಯೊಳಗೆ ಬಂದ. ನಮ್ಮನ್ನು ನೋಡಿ ನಗುಮುಖದಿಂದ ”ಬೋಂದಿಯಾ” ಅಂದ. ನಾವು ಉತ್ತರವಾಗಿ ”ಬೋಂದಿಯಾಸಿ” ಅಂದ್ವಿ. ಒಂದೆರಡು ನಿಮಿಷಗಳ ನಂತರ ಮತ್ತೊಬ್ಬರು ಒಳಬಂದರು. ಅವರೂ ನಮ್ಮನ್ನು ನೋಡಿ ಬೋಂದಿಯಾ ಅಂದರು. ನಾವೂ ಕೂಡ ಬೋಂದಿಯಾಸಿ ಎಂದು ಸೌಜನ್ಯದಿಂದ ಪ್ರತಿಕ್ರಯಿಸಿದೆವು.

ಆತನ ಬೆನ್ನಿಗೇ ಮತ್ತೆ ನಾಲ್ಕೈದು ಜನ ಒಳಬಂದರು. ಅವರೊಂದಿಗೆ ಮತ್ತೆ ನಾಲ್ಕೈದು ಬೋಂದಿಯಾ-ಬೋಂದಿಯಾಸಿಗಳು ವಿನಿಮಯಗೊಂಡವು. ಹೀಗೆ ನಾನು ನೋಡುತ್ತಿರುವಂತೆಯೇ ಇದು ಮುಂದುವರಿಯುತ್ತಲೇ ಹೋಯಿತು. ಯಾರದ್ದೂ ಗುರುತು ಪರಿಚಯವೇ ಇಲ್ಲ. ಆದರೂ ಒಂದು ಸೌಜನ್ಯದ ನಗು, ಬೋಂದಿಯಾ-ಬೋಂದಿಯಾಸಿಗಳ ವಿನಿಮಯ, ಮತ್ತದೇ ಪುನರಾವರ್ತನೆ. ಉತ್ತರ ಕೊಟ್ಟು ಕೊಟ್ಟು ಬೇಜಾರಾದ ನಾನು ನನ್ನ ದುಭಾಷಿಯ ಜೊತೆ ”ಇದೊಳ್ಳೆ ಕಥೆಯಾಯಿತಲ್ಲ ಮಾರಾಯ. ಎಷ್ಟು ಸಲ ಇದನ್ನೇ ಗಿಣಿಯಂತೆ ಹೇಳುವುದು?” ಎಂದೆ. ಆದರೆ ಅವನೋ ನನ್ನನ್ನು ನೋಡಿ ಮುಗುಳ್ನಕ್ಕ. ಕ್ರಮೇಣ ಇವೆಲ್ಲವೂ ನಿಮಗೆ ಅಭ್ಯಾಸವಾಗಲಿದೆ ಎಂಬ ಅಭಯವು ಅವನ ಮುಖಭಾವದಲ್ಲಿತ್ತು.

ಪೋರ್ಚುಗೀಸ್ ಭಾಷೆಯಲ್ಲಿ ‘ಬೋಂದಿಯಾ’ ಅಂದರೆ ‘ಶುಭ ದಿನ’ ಎಂದರ್ಥ. ‘ಬೋಂ’ ಅಂದರೆ ‘ಶುಭ’, ‘ದಿಯಾ’ ಅಂದರೆ ‘ದಿನ’. ಸಾಮಾನ್ಯವಾಗಿ ನಾವು ‘ಗುಡ್ ಮಾರ್ನಿಂಗ್’ ಅಂತ ನಾವು ಹೇಗೆ ಹೇಳುತ್ತೇವೆಯೋ ಹಾಗೆ ‘ಬೋಂದಿಯಾ’ ಇಲ್ಲಿ. ನಂತರ ಇದಕ್ಕೆ ಉತ್ತರವಾಗಿ ನೀವು ‘ಬೋಂದಿಯಾಸಿ’ ಅನ್ನುತ್ತೀರಿ. ‘ನಿಮಗೂ ಶುಭದಿನ’ ಎಂಬುದು ಇದರ ಅರ್ಥ. ಹಾಗೆ ನೋಡಿದರೆ ‘ಸಿ’ ಯನ್ನು ‘ಹೌದು/yes’ ಎಂಬರ್ಥದಲ್ಲಿ ಹೆಚ್ಚಾಗಿ ಬಳಸಲಾಗುತ್ತದೆ. ಆದರೆ ಅದ್ಯಾಕೋ ಇಲ್ಲಿ ಬೋಂದಿಯಾದ ಹಿಂದೆ ‘ಸಿ’ ಬಂದು ಕೂತಿದೆ. ಇರಲಿ. ಹೀಗೆ ಇಲ್ಲಿ ಎಲ್ಲರೂ ಎಲ್ಲರಿಗೂ ಬೋಂದಿಯಾ ಅನ್ನುತ್ತಿದ್ದರು. ನಿಮ್ಮನ್ನು ಅಂಗೋಲನ್ ಒಬ್ಬ ತನ್ನ ಜೀವನದಲ್ಲಿ ಮೊಟ್ಟಮೊದಲಬಾರಿಗೆ ನೋಡಿದರೂ ಅವನಿಂದ ನಿಮಗೊಂದು ನಗುಮುಖ ಸಹಿತ ‘ಬೋಂದಿಯಾ’ ಸಿಗುವುದು ಖಚಿತ. ಹಾಗೆಯೇ ‘ಬೋಅತಾರ್ದ್’ (ಶುಭಮಧ್ಯಾಹ್ನ / ಶುಭಸಂಜೆ) ಮತ್ತು ‘ಬೋಅನೈತ್’ (ಶುಭರಾತ್ರಿ) ಗಳೂ ಕೂಡ.

ಆಗಂತುಕರನ್ನು, ಅದರಲ್ಲೂ ವಿರುದ್ಧಲಿಂಗಿ ಆಗಂತುಕರನ್ನು ಮಹಾಸಂಶಯದ ದೃಷ್ಟಿಯಿಂದ ನೋಡುವ ಭಾರತೀಯರಿಗೆ ಇದು ಕನಸಿನಲ್ಲೂ ಸಾಧ್ಯವಿಲ್ಲವೇನೋ. ತುಂಬಾ social ಆಗಿರುವವರನ್ನು ಮತ್ತು ಮಹಾವಾಚಾಳಿಗಳನ್ನು ಬಿಟ್ಟರೆ ನಮ್ಮಲ್ಲಿ ಯಾರೂ ಆಗಂತುಕರನ್ನು ತಾವಾಗಿ ಮಾತಾಡಿಸುವುದಿಲ್ಲ. ಹಾಗೇನಾದರೂ ಮಾತಾಡಿಸಿದರೂ ಕೂಡ ಅಂಥಾ ಆಶಾದಾಯಕ ಪ್ರತಿಕ್ರಿಯೆಗಳು ಸಿಗುವುದು ಕಡಿಮೆ. ಆದರೆ ಅಂಗೋಲಾದ ಕಥೆಯೇ ಬೇರೆ. ಮೊದಮೊದಲಿಗೆ ಇದು ಕಿರಿಕಿರಿ ಅನ್ನಿಸಬಹುದು. ಆದರೆ ಕ್ರಮೇಣ ಇದು ನಮ್ಮ ನಿತ್ಯದ ದಿನಚರಿಯಾಗಿಬಿಡುವುದು ಸತ್ಯ.

ಹೀಗೆ ಪ್ರತಿಯೊಬ್ಬರಿಗೂ ಭೇಟಿಯ (ಅಥವಾ ಸುಮ್ಮನೆ ಎದುರಿಗೆ ಕಾಣಸಿಕ್ಕರೂ) ಮೊಟ್ಟಮೊದಲ ಭಾಗವಾಗಿ ಪುಟ್ಟದಾಗಿ, ಸೌಜನ್ಯದಿಂದ ಬೋಂದಿಯಾ-ಬೋಅತಾರ್ದ್-ಬೋಅನೈತ್ ಹೇಳುವುದು ಅಂಗೋಲನ್ನರ ಸಂಸ್ಕೃತಿಯೆ ಆಗಿಬಿಟ್ಟಿದೆ. ನಾನೂ ಕ್ರಮೇಣ ಇವರಲ್ಲೊಬ್ಬನಾದಾಗ ನನಗೂ ಇದು ಬಂದುಬಿಟ್ಟಿತು. ಈಗ ದಿನವೊಂದಕ್ಕೆ ಹೀಗೆ ಅದೆಷ್ಟು ಬಾರಿ ಹೇಳುತ್ತೇನೋ ನನಗೇ ಗೊತ್ತಿಲ್ಲ.

ಒಂದು ರೀತಿಯಲ್ಲಿ ಇದು ಲಾಭದಾಯಕವೂ ಕೂಡ. ಇಂಥಾ ಒಂದು ಪುಟ್ಟ ಶುಭಹಾರೈಕೆಯು ಆಗಂತುಕನೊಬ್ಬನನ್ನು ಬಹುಬೇಗ ‘Comfort Zone’ ಗೆ ತಂದುಬಿಡಬಲ್ಲದು. ಸಂಭಾಷಣೆಯನ್ನು ಶುರುಮಾಡಲು ಇದೊಂದು ಉತ್ತಮ ‘Ice breaker’. ಇಂಗ್ಲಿಷ್ ನಲ್ಲಿ Rapport ಸೃಷ್ಟಿಸುವುದು ಅನ್ನೋ ಮಾತಿದೆ. ಅಂದರೆ ವೈಯಕ್ತಿಕ ನೆಲೆಯಲ್ಲಿ ಒಂದೊಳ್ಳೆಯ ಸಂಭಾಷಣೆಗಾಗಿ ಅವಶ್ಯಕವಾದ ಉತ್ತಮ ವಾತಾವರಣವನ್ನು ರೂಪಿಸುವುದು. Rapport ಅನ್ನು ಸೃಷ್ಟಿಸಲು ಇದೊಂದು ರಾಮಬಾಣ. ಇನ್ನು ತೀರಾ ನಾಚಿಕೆಯ ಸ್ವಭಾವದವರು ಹೊಸದಾಗಿ ತಮ್ಮ ಸಂವಹನ ಕೌಶಲವನ್ನು ಉತ್ತಮಪಡಿಸಲು ಪ್ರಯತ್ನಿಸುವುದಾದರೆ ದಿನಕ್ಕೆ ಹತ್ತು ಬಾರಿ ಹತ್ತು ಆಗಂತುಕರ ಬಳಿಗೆ ಹೋಗಿ ಬೋಂದಿಯಾ-ಬೋಅತಾರ್ದ್-ಬೋಅನೈತ್ ಎಂದು ಸಮಯಕ್ಕನುಗುಣವಾಗಿ ಹೇಳಿಬಿಟ್ಟರೆ ಸಾಕು. ಮೈಚಳಿ ಬಿಟ್ಟುಹೋಗುತ್ತದೆ.

ನಾನು ಶಾಲಾದಿನಗಳಲ್ಲಿದ್ದಾಗ ಹಿಂದಿ ಸಿನೆಮಾ ಹಾಡುಗಳನ್ನು ಬಹಳ ಗುನುಗುನಿಸುತ್ತಿದ್ದೆ. ”ಇದರ ಬದಲು ರಾಮನಾಮ ಹೇಳಿದರೆ ಪುಣ್ಯವಾದರೂ ಬರೋದು”, ಎಂದು ಮನೆಯ ಹಿರಿಯರು ನನಗೆ ಆಗಾಗ ಕುಟುಕುವ ಸಂದರ್ಭಗಳಿರುತ್ತಿದ್ದವು. ಈ ಪ್ರಕಾರ ಕಳೆದೆರಡು ವರ್ಷಗಳಲ್ಲಿ ನಾನೇನಾದರೂ ಬೋಂದಿಯಾ-ಬೋಅತಾರ್ದ್-ಬೋಅನೈತ್ ಹೇಳಿರುವ ಮಟ್ಟಿಗೆ ರಾಮನಾಮ ಹೇಳಿದ್ದರೆ ಪುಣ್ಯದ ಖಾತೆಯಲ್ಲಿ ಪುಣ್ಯವು ಬೇಕಾಬಿಟ್ಟಿ ಜಮೆಯಾಗುವುದೇನು, ಮುಂದಿನ ಜನ್ಮಗಳಿಗೂ (ಅಂಥದ್ದೇನಾದರೂ ಇದ್ದರೆ) ಪುಣ್ಯಗಳನ್ನು ಹೂಡಿಕೆ ಮಾಡಿದಂತಾಗುತ್ತಿತ್ತು.

 

ಅಂಗೋಲನ್ನರ ಬಗ್ಗೆ ನನಗೆ ಅದೆಷ್ಟೇ ದೂರು-ದುಮ್ಮಾನ, ಟೀಕೆಗಳಿರಬಹುದು. ಆದರೆ ಒಂದಂತೂ ಸತ್ಯ. ಅಂಗೋಲನ್ನರು ಬಹಳ ಸ್ನೇಹಜೀವಿಗಳು. ಅವರ ಈ ಒಂದು ಗುಣಕ್ಕೆ ಮನಸೋಲದಿರುವುದು ಕಷ್ಟ. ಗಂಡಾಗಿರಲಿ, ಹೆಣ್ಣಾಗಿರಲಿ, ಅಪರಿಚಿತ ಅಂಗೋಲನ್ ಒಬ್ಬರನ್ನು ಮಾತನಾಡಿಸಲು ತಲೆಕೆಡಿಸಿಕೊಳ್ಳಬೇಕಾದ ಅವಶ್ಯಕತೆಯೇ ಇಲ್ಲ. ಅಷ್ಟು ಆರಾಮಾಗಿ ಇವರುಗಳು ನಿಮ್ಮ ಸಂಭಾಷಣೆಯಲ್ಲಿ ಒಂದಾಗಬಲ್ಲರು.

ನಾನು ಅಂಗೋಲಾಕ್ಕೆ ಬಂದ ಹೊಸತರಲ್ಲಿ ನನ್ನನ್ನು ಅದೆಷ್ಟೋ ಜನ ಸ್ಥಳೀಯರು ಖುದ್ದಾಗಿ ಮಾತನಾಡಿಸುತ್ತಿದ್ದ ದಿನಗಳೂ ಇವೆ. ಆದರೆ ಆ ಆರಂಭದ ದಿನಗಳಲ್ಲಿ ಭಾಷೆಯ ಸಮಸ್ಯೆಯಿದ್ದುದರಿಂದ ನನಗೆ ಹೆಚ್ಚೇನನ್ನೂ ಮಾತನಾಡಲಾಗುತ್ತಿರಲಿಲ್ಲ. ಕ್ರಮೇಣ ನಾನು ಭಾಷೆಯನ್ನು ಕಲಿಯಲಾರಂಭಿಸಿದ ನಂತರ ಹೀಗೆ ಮಾತನಾಡಿಸುವವರಿಗೆ ಅದೆಂಥದ್ದೋ ಖುಷಿ. ನಾನು ನನ್ನ ಭಾರತೀಯ ಉಚ್ಚಾರಣೆಯಲ್ಲಿ ಪೋರ್ಚುಗೀಸ್ ಭಾಷೆಯ ಪದವನ್ನೇನಾದರೂ ಹೇಳಿದರೆ ಎಲ್ಲರಿಗೂ ಅಚ್ಚರಿಯೇ ಅಚ್ಚರಿ. ಇನ್ನೇನು ನನ್ನ ಕೆನ್ನೆ ಚಿವುಟಿ `ನನ್ನ ಮುದ್ದು ಬಂಗಾರ’ ಅಂತೆಲ್ಲಾ ಹೇಳಿಬಿಡುತ್ತಾರೋ ಎಂಬಂತೆ. ಇದು ಒಂದು ರೀತಿಯಲ್ಲಿ ಸಹಜವೂ ಕೂಡ. ನಮ್ಮಲ್ಲೂ ಕೂಡ ವಿದೇಶೀಯರು ಸ್ಥಳೀಯ ಭಾಷೆಯಲ್ಲಿ ಒಂದೆರಡು ಪದಗಳನ್ನು ಉಲಿದರೆ ನಾವೂ ಕೂಡ `ಹೀಗೂ ಉಂಟೇ?’ ಎಂಬಂತೆ ಕಣ್ಣರಳಿಸುತ್ತೇವಲ್ಲವೇ?

ಸಂಭಾಷಣೆಯ ವಿಚಾರಕ್ಕೆ ಬಂದರೆ ಅಂಗೋಲನ್ನರ Comfort Zone ಅದ್ಯಾವ ಮಟ್ಟಿಗಿದೆಯೆಂದರೆ ಮೊದಲ ಭೇಟಿಯ ಕೆಲನಿಮಿಷಗಳಲ್ಲೇ ತಮ್ಮ ಖಾಸಗಿ ಟೆಲಿಫೋನ್ ನಂಬರ್ ಅನ್ನೂ ಕೂಡ ಅವರು ಯಾವುದೇ ಅಳುಕಿಲ್ಲದೆ ವಿನಿಮಯ ಮಾಡಿಕೊಳ್ಳಬಲ್ಲರು. ಒಮ್ಮೆ ಹೀಗಾಯಿತು. ಒಮ್ಮೆ ನಾನು ಮತ್ತು ಆಲ್ಬರ್ಟೊ ಎಂಬ ನನ್ನ ಸ್ಪ್ಯಾನಿಷ್ ಸಹೋದ್ಯೋಗಿಯೊಬ್ಬ ಸುತ್ತಾಟಕ್ಕೆಂದು ಹೊರಟೆವು. ಆಲ್ಬರ್ಟೊ ಬಿಳಿಯನಾಗಿದ್ದರೂ ಕೂಡ ಸಾಮಾನ್ಯವಾಗಿ ನಮಗೆ ಕಾಣಸಿಗುವ ಐರೋಪ್ಯರಂತೆ ದೈಹಿಕವಾಗಿ fit ಆಗಿದ್ದವನಲ್ಲ. ಆತ ಇನ್ನೂ ಯುವಕನಾಗಿದ್ದರೂ ಕೂಡ ತನ್ನ ಅಸಲಿ ವಯಸ್ಸಿನ ಎರಡರಷ್ಟು ಹೆಚ್ಚಿಗೆ ವಯಸ್ಸಾದವನಂತೆ ಕಾಣುತ್ತಿದ್ದ. ಆದರೆ ಆತನ ಹಾಸ್ಯಪ್ರಜ್ಞೆ ಮತ್ತು ಹಸನ್ಮುಖಿ ವ್ಯಕ್ತಿತ್ವಗಳು ಎಲ್ಲರನ್ನೂ ಕೂಡ ಆತನೆಡೆಗೆ ಅನಾಯಾಸವಾಗಿ ಆಕರ್ಷಿಸುತ್ತಿದ್ದವು. ಇವುಗಳ ಕೃಪೆಯಿಂದಾಗಿ ಗಲ್ಲಿಗೊಂದರಂತೆ ಗರ್ಲ್‍ಫ್ರೆಂಡ್ ಗಳನ್ನೂ ಕೂಡ ಇಟ್ಟುಕೊಂಡಿದ್ದ ನಮ್ಮ ಆಲ್ಬರ್ಟೋ.

ಇಂತಿಪ್ಪ ಆಲ್ಬರ್ಟೋನೊಂದಿಗೆ ಅಂದು ಹೊರಟ ನಾನು ಕಿರಾಣಿ ಅಂಗಡಿಯೊಂದನ್ನು ಹೊಕ್ಕಿದ್ದೆ. ಮೊದಲೇ ಸ್ನೇಹಮಯಿಗಳಾದ ಅಂಗೋಲನ್ನರಿಗೆ ಆಲ್ಬರ್ಟೊನಂಥವರು ಸಿಕ್ಕರೆ ಹೇಳಬೇಕೇ? ನಗುಮುಖದೊಂದಿಗೆ ಸುಲಲಿತ ಪೋರ್ಚುಗೀಸ್ ಭಾಷೆಯಲ್ಲಿ ಮಾತನಾಡುತ್ತಿದ್ದ ಆಲ್ಬರ್ಟೋ ಎರಡೇ ಎರಡು ನಿಮಿಷಗಳೊಳಗಾಗಿ ಅಂಗಡಿಯನ್ನು ನೋಡಿಕೊಳ್ಳುತ್ತಿದ್ದ ಬಾಲೆಯೊಬ್ಬಳ ಮೊಬೈಲ್ ನಂಬರನ್ನು ಪಡೆದುಕೊಂಡಿದ್ದ. ಅವರಿಬ್ಬರೂ ಮರುದಿನವೇ dinner ಗಾಗಿ ಭೇಟಿಯಾಗುವುದೆಂದು ಅಲ್ಲಿಯೇ, ನಿಂತ ನಿಲುವಲ್ಲೇ ನಿಶ್ಚಯವಾಯಿತು.

ಪೂರ್ವನಿಯೋಜಿತ ಕಾರ್ಯಕ್ರಮದಂತೆ ಮುಂದಿನ ದಿನ ಇವರಿಬ್ಬರ romantic date ಸಾಂಗವಾಗಿ ನೆರವೇರಿತು ಎಂಬ ವರ್ತಮಾನವು ನನಗೆ ಸಿಕ್ಕಿತು. ”ಬಹಳ ಫಾಸ್ಟ್ ಮಾರಾಯ್ರೇ ನೀವು”, ಎಂದೆ ನಾನು. ನನ್ನ ಕೀಟಲೆಯ ಮಾತಿಗೆ ಕಣ್ಣುಮಿಟುಕಿಸಿ ನಕ್ಕುಬಿಟ್ಟಿದ್ದ ಆಲ್ಬರ್ಟೋ. ಮುಂದೆ ಇಂಥಾ ಘಟನೆಗಳು ಆಲ್ಬರ್ಟೋನೊಂದಿಗಿದ್ದಾಗ ನಡೆಯುವುದು ತೀರಾ ಸಾಮಾನ್ಯವೆಂಬಷ್ಟರ ಮಟ್ಟಿಗೆ ನಿತ್ಯದ ಮಾತಾಯಿತು. ಆಲ್ಬರ್ಟೋ ನಮ್ಮೊಂದಿಗೆ ವೀಜ್ ಹಳ್ಳಿಯಲ್ಲಿದ್ದಷ್ಟು ದಿನ ಜೀವನೋತ್ಸಾಹದ ನಗುವಿಗೇನೂ ಕಮ್ಮಿಯಿರಲಿಲ್ಲ. ಮುಂದೆ ಆತನಿಗೆ ಅಂಗೋಲಾದಲ್ಲೇ ಇರುವ ವಾಂಬೋ ಎಂಬ ದೂರದ ಪ್ರದೇಶವೊಂದಕ್ಕೆ ವರ್ಗಾವಣೆಯಾಯಿತು. ಅಂದಹಾಗೆ chain smoker ಆಗಿದ್ದ ಈತ ದಿನಕ್ಕೆ ನಲವತ್ತರಿಂದ ಐವತ್ತು ಸಿಗರೇಟನ್ನಾದರೂ ಸೇದುತ್ತಿದ್ದ. ಒಮ್ಮೆ ಅಂಗಡಿಯೊಳಕ್ಕೆ ನುಗ್ಗಿದರೆ ಬಾಳೆಹಣ್ಣಿನಂತೆ ಡಜನ್ನಿನ ಲೆಕ್ಕದಲ್ಲಿ ಸಿಗರೇಟು ಪ್ಯಾಕೇಟುಗಳನ್ನು ಖರೀದಿಸುತ್ತಿದ್ದ ಮಹಾಪುರುಷ ಈ ಆಲ್ಬರ್ಟೋ.

ಇನ್ನು ಭಾರತೀಯರಲ್ಲಿರುವಂತೆಯೇ ಅಂಗೋಲನ್ನರಲ್ಲೂ ಕೂಡ ವಿದೇಶೀಯರು ಎಂದರೆ ಅದೆಂಥದ್ದೋ ಒಂದು ಆಕರ್ಷಣೆ. ತಮ್ಮ ಕಪ್ಪು ತೊಗಲಿನ ಬಗ್ಗೆ ಅವರಿಗೆ ಕೀಳರಿಮೆಯಿಲ್ಲದಿದ್ದರೂ ಬಿಳಿ ಚರ್ಮದ ಬಗ್ಗೆ ಅವರಿಗೊಂದು ಸೆಳೆತವಂತೂ ಇದ್ದೇ ಇದೆ. ಹೀಗಾಗಿಯೇ `ಮುಲಾಟೋ’ ಹೆಣ್ಣುಮಕ್ಕಳು ಇಲ್ಲಿಯ ಇತರ ಹೆಣ್ಣುಮಕ್ಕಳಿಗಿಂತ ಹೆಚ್ಚು ಆಕರ್ಷಣೀಯ ಅನ್ನಿಸಿಕೊಳ್ಳುತ್ತಾರೆ. ಉದ್ಯೋಗಾವಕಾಶಗಳು ಇತರ ಕಪ್ಪುವರ್ಣೀಯರಿಗಿಂತ ಅವರಿಗೆ ಕೊಂಚ ವಾಸಿ ಎಂಬಂತಿವೆ.

ಅಂದಹಾಗೆ ಈ `ಮುಲಾಟೋ’ ಎಂದರೇನು ಎಂದು ಕೇಳುತ್ತೀರಾ? ಕರಿಯ ಮತ್ತು ಬಿಳಿಯ ದಂಪತಿಗಳಿಗೆ ಹುಟ್ಟಿದ ಸಂತಾನವು ಅತ್ತ ತೀರಾ ಬಿಳಿಯರೂ ಆಗದೆ, ಇತ್ತ ತೀರಾ ಕರಿಯರೂ ಆಗದೆ ಕಂದು ಅಥವಾ ಗೋಧಿವರ್ಣದ ಚರ್ಮವನ್ನು ಹೊಂದಿ ಆಫ್ರಿಕನ್ನರ ಮಧ್ಯದಲ್ಲಿ ವಿಭಿನ್ನವಾಗಿ ಕಾಣುತ್ತಾರೆ. ಇವರನ್ನೇ `ಮುಲಾಟೋ’ ಎಂದು ಕರೆಯುವುದು. ಬಾಯಿಬಿಟ್ಟು ಹೇಳದಿದ್ದರೂ ಮುಲಾಟೋಗಳು ಕಪ್ಪುವರ್ಣೀಯರ ಉದ್ಯೋಗಾವಕಾಶಗಳನ್ನು ನುಂಗುತ್ತಿದ್ದಾರೆಂಬ ಅಸಮಾಧಾನವು ಸ್ಥಳೀಯ ಕರಿಯರಲ್ಲಿ ಒಳಗೊಳಗೆ ಇದ್ದೇ ಇದೆ.

ಅಂಗೋಲಾ ರಾಜಧಾನಿಯಾದ ಲುವಾಂಡಾದಲ್ಲಿ ಸಾಕಷ್ಟು ಭಾರತೀಯರು ಇರಬಹುದಾದ ಸಾಧ್ಯತೆಗಳಿದ್ದರೂ ನಾವಿರುವ ವೀಜ್ ನಲ್ಲಂತೂ ಬೆರಳೆಣಿಕೆಯ ಭಾರತೀಯರಷ್ಟೇ ಇದ್ದರು. ವೀಜ್ ಗೆ ಬಂದು ಒಂದು ವರ್ಷ ಕಳೆದರೂ ನಾನು ಮತ್ತು ನನ್ನೊಂದಿಗಿರುವ ಹಿರಿಯ ಸಹೋದ್ಯೋಗಿ ಪರಸ್ಪರರ ಮುಖ ನೋಡುತ್ತಿದ್ದುದನ್ನು ಬಿಟ್ಟರೆ ಒಬ್ಬನೇ ಒಬ್ಬ ಭಾರತೀಯನೂ ನನಗೆ ವೀಜ್ ನಲ್ಲಿ ಕಂಡಿರಲಿಲ್ಲ.

ನಂತರ ದಿನಸಿ ಅಂಗಡಿಯನ್ನು ನಡೆಸುತ್ತಿದ್ದ ಗುಜರಾತ್ ಮೂಲದ ಒಂದಿಬ್ಬರು ಸಿಕ್ಕರೂ ಮುಂದೆ ಆ ಅಂಗಡಿಗಳು ಏಕಾಏಕಿ ಮುಚ್ಚಿಹೋದವು. ಇನ್ನು ಭಾರತೀಯನಾದ ನನ್ನ ಬಗ್ಗೆ ಇಲ್ಲಿಯ ಸ್ಥಳೀಯರಿಗೆ ಹೆಚ್ಚು ಆಸಕ್ತಿಯಿದ್ದಿದ್ದು ನನ್ನ ಕೇಶಶೈಲಿಯ ಬಗ್ಗೆ. ಕೇಶಶೈಲಿಯ ಬಗ್ಗೆ ಅನ್ನುವುದಕ್ಕಿಂತಲೂ ಕೇಶದ ಬಗ್ಗೆ ಅಂದರೆ ಸರಿಯಾಗಬಹುದೇನೋ. ವೀಜ್ ಗೆ ಬಂದ ಹೊಸದರಲ್ಲಿ ಕೆಲವರು ವಿನಾಕಾರಣ ಬಳಿ ಬಂದು ಸುಮ್ಮನೆ ನನ್ನ ತಲೆ ಸವರಿ ಹೋಗುತ್ತಿದ್ದ ತಮಾಷೆಯ ಸನ್ನಿವೇಶಗಳೂ ನಡೆಯುತ್ತಿದ್ದವು. ಎಲ್ಲರದ್ದೂ ಒಂದೇ ಗೊಣಗಾಟ: ”ನಮಗೂ ಇಂಥಾ ಕೂದಲು ಇದ್ದಿದ್ದರೆ!” ಎಂದು.

ಹೀಗೆ ಅಂಗೋಲನ್ನರು ಮುಕ್ತ ಮನಸ್ಸಿನವರು. ಟೀಕೆಗಳನ್ನು, ಪ್ರಶಂಸೆಯನ್ನು ಯಾವುದೇ ಹಿಂಜರಿಕೆಯಿಲ್ಲದೆ ಆ ಕ್ಷಣವೇ ಹೇಳಿಬಿಡುವವರು. ನೀವು ಪೋರ್ಚುಗೀಸ್ ಭಾಷೆಯನ್ನು ಮಾತಾಡಬಲ್ಲವರಾಗಿದ್ದರೆ ಅಥವಾ ಸಂವಹನದ ನೆಲೆಯಲ್ಲಿ ಇಬ್ಬರನ್ನೂ ಬೆಸೆಯುವ ಸಾಮಾನ್ಯ ಭಾಷೆಯೊಂದಿದ್ದರೆ ಅಂಗೋಲನ್ನರ ಗೆಳೆತನವನ್ನು ಸಂಪಾದಿಸುವುದು ಚಿಟಿಕೆ ಹೊಡೆದಷ್ಟೇ ಸುಲಭ.

ಎಲ್ಲರನ್ನೂ ನಂಬಬಹುದೇ ಇಲ್ಲವೇ ಎಂಬುದು ನಂತರದ ಪ್ರಶ್ನೆ. ಆದರೆ ಗುರುತು ಪರಿಚಯವಿಲ್ಲವೆಂಬ ನೆಪಗಳನ್ನು ಹೇಳಿ ಅಂಗೋಲನ್ನರು ಸುಮ್ಮನೆ ಮುಖ ತಿರುಗಿಸಿ ನಡೆಯಲಾರರು. ನಾನು ಅಂಗೋಲಾಕ್ಕೆ ಬರುವ ಮುನ್ನವೇ ದೆಹಲಿಯಲ್ಲಿರುವ ಅಂಗೋಲಾ ರಾಯಭಾರ ಕಛೇರಿಯಲ್ಲಿ ನನಗೆ ಅಂಗೋಲನ್ ವಿದ್ಯಾರ್ಥಿನಿಯೊಬ್ಬಳ ಪರಿಚಯವಾಗಿತ್ತು. ಆಕೆ ನನಗೆ ರಾಯಭಾರ ಕಚೇರಿಯಲ್ಲಿ ನೆರವಾಗಿದ್ದಲ್ಲದೆ ವೀಜ್ ನಲ್ಲಿರುವ ತನ್ನ ಸಂಬಂಧಿಯೊಬ್ಬರ ವಿಳಾಸವನ್ನೂ ಕೂಡ ನೀಡಿದ್ದಳು. ಅದು ನಮ್ಮಿಬ್ಬರ ಮೊದಲ ಭೇಟಿಯಾಗಿತ್ತು ಎಂಬುದನ್ನು ಹೇಳಲೇಬೇಕು. ಅಂಗೋಲನ್ನರ ಸ್ನೇಹಪರತೆಯ ಮೊದಲ ಝಲಕ್ ನನಗೆ ಸಿಕ್ಕಿದ್ದೇ ಅಲ್ಲಿ!

ಮುಂದಿನ ಬಾರಿ ಅಂಗೋಲಾ ಮೂಲದವರ್ಯಾರಾದರೂ ನಿಮಗೆ ಅಚಾನಕ್ಕಾಗಿ ಕಾಣಸಿಕ್ಕರೆ ತಕ್ಷಣ ”ಹಾಯ್” ಎನ್ನಿ. ಸಂಭಾಷಣೆಯ ನಂತರದ ಭಾಗಗಳನ್ನು ಅವರೇ ನೋಡಿಕೊಳ್ಳುತ್ತಾರೆ.

 

 

 

 

 

 

 

 

Leave a Reply